ಜೀವನದಂತೆ ಹುಟ್ಟು ಕೂಡ ಕೃತಕ ಆಗಬೇಕೇ ?
ವೈದ್ಯಕೀಯ
ಡಾ.ದಯಾನಂದ ಲಿಂಗೇಗೌಡ
ಸಿಸೇರಿಯನ್ ಸೆಕ್ಷನ್ ಎಂಬ ಪದದ ಮೂಲ ಯಾವುದು ಎಂದು ಸರಿಯಾಗಿ ಊಹಿಸುವುದು ಕಷ್ಟ. ಹಲವರು ಇದು ಜೂಲಿಯಸ್ ಸೀಸರ್‌ನನ್ನು,ಸಾಯುತ್ತಿರುವ ಅವರ ತಾಯಿಯ ಹೊಟ್ಟೆಯಿಂದ ಹೊರ ತೆಗೆದ ಕಾರಣ ಈ ಪದ ಹುಟ್ಟಿಕೊಂಡಿದೆ ಎಂದು ವಾದಿಸುತ್ತಾರೆ.
ಆದರೆ ಇದು ಸತ್ಯವಾಗಿಲಿಕ್ಕಿಲ್ಲ. ಏಕೆಂದರೆ ಜೂಲಿಯಸ್ ಸೀಸರ್ ದೊಡ್ಡವನಾದ ಮೇಲೆ ಬ್ರಿಟನ್ ಮೇಲೆ ಆಕ್ರಮಣ ಮಾಡುತ್ತಾನೆ. ಆ ಸಮಯದಲ್ಲಿ  ಅವನ ತಾಯಿ ಜೀವಂತ ವಾಗಿದ್ದರು. ಬಹುಶಃ ಸಿಸೇರಿಯನ್ ಎಂಬ ಪದ ಪದ ಲ್ಯಾಟಿನ್‌ನ ‘ಸಿಡರ್’ () ಅಂದರೆ ಕತ್ತರಿಸು ಎಂಬ ಪಾದದ ಮೂಲದಿಂದ ಉತ್ಪತ್ತಿ ಆಗಿರಬಹುದು ಎಂಬ ವಾದ ಸರಿ ಇರಬಹುದು. ಸಿಸೇರಿಯನ್‌ನ ಮೂಲ ಉದ್ದೇಶ ಕಾಲಕಾಲಕ್ಕೆ ಬದಲಾಗುತ್ತಿದೆ. ಐತಿಹಾಸಿಕವಾಗಿ ಇದನ್ನು ಮೃತ್ಯುವಿನ ದವಡೆಯಲ್ಲಿರುವ ಅಥವಾ ಆಗತಾನೆ ಮರಣ ಹೊಂದಿರುವ ಗರ್ಭಿಣಿಯಿಂದ ಮಗುವನ್ನು ಉಳಿಸಿಕೊಳ್ಳಲು ಇದನ್ನುಬಳಸಲಾಗುತ್ತಿತ್ತು.
ವಿಜ್ಞಾನ ಮುಂದುವರಿದಂತೆ ಸಿಸೇರಿಯನ್ ಸೆಕ್ಷನ್ ಮಾಡುವುದರ ಮೂಲಕ ಮಗುವಿನ ಜತೆ ತಾಯಿಯನ್ನು ಬದುಕಿಸಬಹುದು ಎಂಬ ಅಂಶ ಅರಿವಾಯಿತು. ನಂತರದ ದಿನಗಳಲ್ಲಿ ಅತಿ ಕಷ್ಟದ ಹೆರಿಗೆಯಿಂದ ತಾಯಿ ಮತ್ತು ಮಗುವನ್ನು ಉಳಿಸಿಕೊಳ್ಳಲು ಇದನ್ನು ಬಳಸಲಾಗುತ್ತಿತ್ತು.ಎಲ್ಲಿಯವರೆಗೆ ಇದನ್ನು ಸಂಪೂರ್ಣ ವೈದ್ಯಕೀಯ ಕಾರಣಗಳಿಂದ ಬಳಸುತ್ತಿದ್ದರೋ ಅಲ್ಲಿಯವರೆಗೆ , ಸಿಜರಿನ್ ಸೆಕ್ಷನ್ ಮೂಲಕ ಜನಿಸುವ ಮಕ್ಕಳ ಸಂಖ್ಯೆ, ಸಹಜವಾಗಿ ಜನಿಸುವವವರ ಸಂಖ್ಯೆಗಿಂತ ಕಡಿಮೆಯಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ, ಇದನ್ನು ವೈದ್ಯಕೀಯೇತರ ಕಾರಣಗಳಿಗೆ ಬಳಕೆಮುಂದುವರಿದಂತೆ ಇದರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಯಾವುದೇ ದೇಶಗಳಲ್ಲಿ ಸಿಸೇರಿಯನ್ ಪ್ರಮಾಣ ಒಟ್ಟಾರೆ ಶೇಕಡಾ೧೦-೧೫ಕ್ಕಿಂತ ಹೆಚ್ಚಿರಬಾರದು. ದೊಡ್ಡಮಟ್ಟ ದಲ್ಲಿ ಹೇಳುವುದಾದರೆ ಸಿಸೇರಿಯನ್ ಪ್ರಮಾಣ೧೫ಕ್ಕಿಂತ ಹೆಚ್ಚಿದ್ದರೆ ಅದರಿಂದ ಯಾವುದೇ ಪ್ರಯೋಜನ ಇರುವ ಸಾಧ್ಯತೆ ಇಲ್ಲ. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಸಿಸೇರಿಯನ್ ಪ್ರಮಾಣ ಗಾಬರಿಗೊಳಿಸುವ ಮಟ್ಟದಲ್ಲಿ ಹೆಚ್ಚಾಗುತ್ತಿದೆ.೨೦೧೭-೧೮ಗಣತಿಯ ಪ್ರಕಾರ ಭಾರತದಲ್ಲಿ ಒಟ್ಟಾರೆಸಿಸೇರಿಯನ್ ಸೆಕ್ಷನ್ ಶೇ.೨೮ರಷ್ಟಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ಹುಟ್ಟುವ ಅರ್ಧಕ್ಕಿಂತ ಹೆಚ್ಚು ಮಕ್ಕಳು ಸಿಸೇರಿಯನ್ ಮೂಲಕ ಜನಿಸಿದ್ದಾರೆ.ಈ ಅಂಕಿ ಅಂಶಗಳ ಒಳ ಹೊಕ್ಕಿ ನೋಡಿದರೆ, ನಗರ ಪ್ರದೇಶದ ಖಾಸಗಿ ಆಸ್ಪತ್ರೆಗಳ ಶೇ.೭೫ರಷ್ಟು ಜನರು ಸಿಸೇರಿಯನ್ ಮೂಲಕವೇ ಜನಿಸಿದ್ದಾರೆ.
ವಿಪರ್ಯಾಸವೆಂದರೆ ಒಂದು ಕಡೆ ಗ್ರಾಮೀಣ ಪ್ರದೇಶಗಳಲ್ಲಿ ಸಿಸೇಸೆರಿಯನ್ ಮಾಡಲು ಅನುಕೂಲವಿಲ್ಲ, ಇನ್ನೊಂದೆಡೆ ನಗರ ಪ್ರದೇಶಗಳಲ್ಲಿ ಸಹಜ ಹೆರಿಗೆಯಾಗುತ್ತಿಲ್ಲ. ಬಂಜೆತನಕ್ಕೆ ಚಿಕಿತ್ಸೆ ನೀಡುವ ಕೇಂದ್ರಗಳಲ್ಲಿ ಶೇಕಡ ನೂರಕ್ಕೆ ನೂರು ಸಿಸೇರಿಯನ್ ಸೆಕ್ಷನ್ ಪ್ರಮಾಣವಿದ್ದರೆ ಅದಕ್ಕೊಂದುಸಕಾರಣವಿರುತ್ತದೆ. ಇಂಥ ಕೇಂದ್ರಗಳಲ್ಲಿ ಬರುವ ಬಹುತೇಕ ಕೇಸುಗಳು ‘ಹೈ ರಿಸ್ಕ್’ ಆಗಿರುವುದರಿಂದ ಶೇಕಡ ನೂರಕ್ಕೆ ನೂರು ಸಿಸೇರಿಯನ್ ಮಾಡಿದರೂ ಸಮರ್ಥನೀಯ. ಆದರೆ ಸಾಮಾನ್ಯ ಹೆರಿಗೆಗಳನ್ನು ಮಾಡಿಸುವ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಮಾಣದ ಸಿಸೇರಿಯನ್ ಸೆಕ್ಷನ್ ಪ್ರಮಾಣ ಹೆಚ್ಚಾಗಿದ್ದರೆ, ಅದಕ್ಕೆ ಖಂಡಿತ ವೈದ್ಯಕೀಯೇತರ ಕಾರಣಗಳು ಇರಲೇಬೇಕು.
ಹೆಚ್ಚಿನ ಸಿಸೇರಿಯನ್ ಸೆಕ್ಷನ್ ಮಾಡಲು ವೈದ್ಯರಿಗೆ ಹಣ ಒಂದೇ ಕಾರಣವಾ? ಹಲವು ವರ್ಷಗಳ ಹಿಂದೆ ಸ್ತ್ರೀ ಪ್ರಸೂತಿ ವೈದ್ಯರುಗಳು ನಾರ್ಮಲ್ ಡೆಲಿವರಿ ಮಾಡಲು ಕಡಿಮೆ ಮತ್ತು ಸಿಸೇರಿಯನ್ ಮಾಡಲು ಹೆಚ್ಚಿನ ಫೀಸು ತೆಗೆದುಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಕೆಲವೊಂದು ಆಸ್ಪತ್ರೆಗಳಲ್ಲಿ ಸಿಸೇರಿಯನ್ ಅಥವಾ ನಾರ್ಮಲ್ ಡೆಲಿವರಿಗಳಿಗೆ ವೈದ್ಯರುಗಳು ವಿಧಿಸುವ ಹಣದ ಒಂದೇ ಆಗಿದ್ದರೂ, ಸಿಸೇರಿಯನ್ ಪ್ರಮಾಣ ಕಡಿಮೆಯಾಗುತ್ತಿಲ್ಲ !. ಅಂದರೆ ಹೆಚ್ಚು ಸಿಸೇರಿಯನ್ ಮಾಡಲು ಹಣವೊಂದೇ ಕಾರಣವಾಗಿಲ್ಲ.
ಸಹಜ ಹೆರಿಗೆ ಮಾಡಿಸಲು ವೈದ್ಯರುಗಳಿಗೆ ಸುಮಾರು೧ರಿಂದ೨ದಿನಗಳು ಬೇಕಾಗುತ್ತದೆ. ಪದೇ ಪದೆ ಪ್ರಸವದ ಪ್ರಗತಿಯನ್ನು ಪರೀಕ್ಷಿಸುತ್ತಿರಬೇಕು. ಅದೇ ಸಿಸೇರಿಯನ್ ಮಾಡಿ ಮುಗಿಸಲು ಕೇವಲ೩೦ನಿಮಿಷಗಳು ಸಾಕು. ಯಾವುದಾದರೂ ಒಬ್ಬ ವೈದ್ಯ ತಿಂಗಳಿಗೆ೧೫ರಿಂದ೨೦ನಾರ್ಮಲ್ ಡೆಲಿವರಿಗಳನ್ನು ಮಾಡಿಸುತ್ತಿದ್ದರೆ, ಅವರ ಖಾಸಗಿ ಜೀವನ ಸಂಪೂರ್ಣವಾಗಿ ಹಾಳಾಗುತ್ತದೆ. ಕೆಲವೊಮ್ಮೆ ಊಟ ಉಪಹಾರಗಳನ್ನು ಕೂಡ ಸಮಾಧಾನದಿಂದ ಮಾಡಲುಸಾಧ್ಯವಾಗದಂಥ ಪರಿಸ್ಥಿತಿ ಬರುತ್ತದೆ. ವೈದ್ಯರುಗಳು ದಿನವೂ ಹೊರರೋಗಿಗಳ ವಿಭಾಗವನ್ನು ನಡೆಸಿಕೊಂಡು ಹೋಗಬೇಕಾಗುವುದರಿಂದ, ನಡುವೆ ಪ್ರಸವದಲ್ಲಿರುವ ರೋಗಿಯನ್ನು ನೋಡಿಕೊಳ್ಳುವುದು ಹೆಚ್ಚು ಕಿರಿಕಿರಿ.
ಅದೇ ತಿಂಗಳಿಗೆ೩೦ಸಿಸೇರಿಯನ್ ಸೆಕ್ಷನ್ ಮಾಡುವ ವೈದ್ಯರುಗಳಿಗೆ ತಮ್ಮ ಖಾಸಗಿ ಜೀವನವನ್ನು ಸಾಮಾನ್ಯವಾಗಿ ಜೀವಿಸಲು ಸಾಧ್ಯ. ಅಷ್ಟೇ ಅಲ್ಲದೆ ಸಿಸೇರಿಯನ್ ಆಪರೇಷನ್‌ಗಳನ್ನು ತಮ್ಮ ಅನುಕೂಲ ಸಂದರ್ಭಗಳಲ್ಲಿ ಮಾಡುವುದರಿಂದ, ಹೊರ ರೋಗಿ ವಿಭಾಗವನ್ನು ನಡೆಸುವುದಕ್ಕೂ, ಖಾಸಗಿ ಜೀವನವನ್ನು ತೂಗಿಸಿಕೊಂಡು ಹೋಗುವುದಕ್ಕೂ ಸುಲಭ. ವೈದ್ಯರುಗಳು ಮಿತಿಮೀರಿ ಸಿಸೇರಿನ್ ಸೆಕ್ಷನ್ ಮಾಡಿಸುತ್ತಿದ್ದರೂ, ಬಹುತೇಕ ಆಡಳಿತ ಮಂಡಳಿಯವರು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅವರಿಗೆ ಸಿಸೇರಿಯನ್ ಗಳಿಂದ ಶೇಕಡ೩೦ರಿಂದ೫೦ಹೆಚ್ಚು ಲಾಭವಿದೆ.
ಅದು ಅಲ್ಲದೆ ಬಹುತೇಕ ಸಿಸೇರಿಯನ್ ಸೆಕ್ಷನ್ ಗಳಿಂದ ತಕ್ಷಣಕ್ಕೆ, ಮಗುವಿನ ಜೀವಕ್ಕೆ ಯಾವುದೇ ಅಪಾಯವಿಲ್ಲದ ಕಾರಣ ಸಾಮಾಜಿಕ ತಲೆನೋವು ಕಡಿಮೆ. ದಾದಿಯರ ಸಂಖ್ಯೆ ಯಥೇಚ್ಛವಾಗಿದ್ದರೂ, ಇಂದಿಗೂ ಅನುಭವವಿರುವ ಗುಣ ಮಟ್ಟದ ದಾದಿಯರ ಸಂಖ್ಯೆ ಇಂದಿಗೂ ವಿರಳ. ಸಹಜ ಹೆರಿಗೆ ಮಾಡಿಸಲು ಒಂದರಿಂದ ಎರಡು ದಿನ ಬೇಕಾಗುವುದರಿಂದ, ಪದೇ ಪದೆ ಪ್ರಗತಿಯನ್ನು ಪರೀಕ್ಷಿಸುತ್ತಾ ಇರಲು ಗುಣಮಟ್ಟದ ದಾದಿಯರಿದ್ದರೆವೈದ್ಯರಿಗೆ ನಿರಾಳ. ಹೆರಿಗೆ ಆಗುವವರೆಗೂ ಮಗುವಿಗೆ ಯಾವುದೇ ತೊಂದರೆ ಆಗುತ್ತಿಲ್ಲ ಎಂಬುದನ್ನು ಪದೇ ಪದೆ ದಾದಿಯರು ದೃಢಪಡಿಸಿ ವೈದ್ಯರಿಗೆ ತಿಳಿಸುತ್ತಿರಬೇಕು. ಇಂಥ ನಂಬಿಕೆಗೆ ಅರ್ಹ ನರ್ಸ್ ಕಡಿಮೆಯಾಗುತ್ತಿದ್ದಾರೆ.
ಮನೆಯಲ್ಲಿ ಹೆರಿಗೆ ಮಾಡಿಸುವ ಸೂಲಗಿತ್ತಿಯರು ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಕ್ಷಮೆ ಇರುತ್ತದೆ. ಆದರೆ ಆಸ್ಪತ್ರೆಗಳಲ್ಲಿ ನಡುವೆ ನಡೆಯುವ ಹೆರಿಗೆಗಳಲ್ಲಿ ಏನಾದರೂ ಹೆಚ್ಚುಕಮ್ಮಿಯಾದರೆ ಸಾರ್ವಜನಿಕರು ಖಂಡಿತ ಕ್ಷಮಿಸುವುದಿಲ್ಲ. ಆದ್ದರಿಂದ ಪ್ರಸೂತಿ ಶಾಸಜ್ಞರು ತಲೆನೋವುಹಚ್ಚಿಕೊಳ್ಳಲು ಸಿದ್ಧವಿಲ್ಲ. ಇನ್ನು ಗರ್ಭಿಣಿಯರ ಬಗ್ಗೆ ಹೇಳಬೇಕಾದರೆ, ತಲೆಯ ಮೇಲೆ ಹೂ ಬಿದ್ದು ತಲೆಬೇನೆ ತಂದುಕೊಂಡ ಕಾಳಿದಾಸನಶಕುಂತಲೆಯ ರೀತಿ ನಾಜೂಕಾಗುತ್ತಿದ್ದಾರೆ.
ಗರ್ಭಿಣಿಯಾದ ಸಂದರ್ಭಗಳಲ್ಲಿ ಯಾವುದೇ ದೈಹಿಕ ಚಟುವಟಿಕೆಗಳನ್ನು ಮಾಡದೆ, ಒಂಬತ್ತು ತಿಂಗಳು ತುಂಬಿದರೂ ಹೆರಿಗೆಯ ನೋವು ಬರುತ್ತಿಲ್ಲ.ಹೆರಿಗೆ ನೋವು ಬಂದವರಿಗೂ, ಸರಿಯಾದ ಪ್ರಮಾಣದಲ್ಲಿ ಬರುತ್ತಿಲ್ಲ . ಸರಿಯಾದ ಪ್ರಮಾಣ ದಲ್ಲಿ ಬಂದವರಿಗೂ, ಸಹಜ ಹೆರಿಗೆ ಬೇಡ. ನೋವಿಲ್ಲದೆ ಸಹಜ ಹೆರಿಗೆ ಮಾಡಿಸುವ ವಿಧಾನಗಳು ಇದ್ದರೂ ಆಸ್ಪತ್ರೆಯವರು ತಮ್ಮದೇ ಕಾರಣಕ್ಕೆ ಅದಕ್ಕೆ ಪ್ರಚಾರ ಕೊಡುತ್ತಿಲ್ಲ ಅಥವಾ ಅಂಥ ಸೇವೆಗಳನ್ನುಒದಗಿಸಲು ಸಿದ್ಧವಿಲ್ಲ. ಪೋಷಕರಿಗೂ ತಾವು ರಜೆ ಹಾಕಿದ ದಿನದ, ಒಳ್ಳೆಯ ದಿನದಲ್ಲಿ, ಯಾವುದೇ ನೋವು ಇಲ್ಲದೆ ಜನನವಾಗಬೇಕು ಎಂಬ ನಿರೀಕ್ಷೆಗಳು ಹೆಚ್ಚಾಗುತ್ತಿವೆ.
ಆದ್ದರಿಂದ ಹಲವಾರು ತಾಯಂದಿರೇ ಸಹಜ ಹೆರಿಗೆ ನಿರಾಕರಿಸುತ್ತಿದ್ದಾರೆ. ಒಟ್ಟಿನಲ್ಲಿ ಸಹಜ ಹೆರಿಗೆ ಎಂಬುದು ಯಾರಿಗೂ ಬೇಡದ ಕೂಸು. ಇನ್ನು ಸಿಸೇರಿಯನ್ ಸೆಕ್ಷನ್‌ನಲ್ಲಿ ಯಾವುದೇ ದುಷ್ಪರಿಣಾಮಗಳಿಲ್ಲ ಎಂಬ ನಂಬಿಕೆ ತಪ್ಪು ಕಲ್ಪನೆ ಬಲವಾಗಿ ತುಂಬಿದೆ. ಸಿಸೇರಿಯನ್ ಸೆಕ್ಷನ್ ಒಂದು ಶಸಚಿಕಿತ್ಸೆಯಾಗಿರುವುದರಿಂದ, ಶಸಚಿಕಿತ್ಸೆಯ ಎಲ್ಲಾ ದುಷ್ಪರಿಣಾಮ ಗಳು ಇದರಲ್ಲಿ ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಅರಿವಳಿಕೆಯಿಂದ ತೊಂದರೆ, ರಕ್ತಸ್ರಾವ, ಗಾಯ ಮಾಯದೆ ಇರುವುದು, ದೀರ್ಘಕಾಲದ ಬೆನ್ನು ನೋವುಗಳು ಮುಂತಾದವುಗಳು.
ಸಿಸೇರಿಯನ್ ಸೆಕ್ಷನ್ ಆದ ರೋಗಿಗಳಲ್ಲಿ ಸ್ತನದ ಹಾಲು ಉತ್ಪಾದನೆಗಳು ಕೂಡ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಸಿಸೇರಿಯನ್ ಮಾಡಿಸಿಕೊಂಡ ತಾಯಿ ನೋವಿನಿಂದ ಸ್ತನ್ಯಪಾನ ಮಾಡಿಸದಿದ್ದರೆ, ಅತಿವೇಗದಲ್ಲಿ ಎದೆಹಾಲು ಹಿಂಗುವ ಸಾಧ್ಯತೆಗಳು ಹೆಚ್ಚು. ಎದೆಹಾಲು ಸಿಗದಿದ್ದರೆ ದುಬಾರಿ ಕೃತಕ ಆಹಾರದ ಪುಡಿಗಳನ್ನು ಮಗುವಿಗೆ ಒಂದು ವರ್ಷದವರೆಗೂ ಕೊಡಬೇಕಾಗುತ್ತದೆ. ಸಿಸೇರಿಯನ್ ಮೂಲಕ ಹುಟ್ಟಿದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಕಡಿಮೆಯಾಗುವ, ನಿರೀಕ್ಷಿತ ತೂಕ ಬೆಳವಣಿಕೆಯಾಗದಿರುವ ಪ್ರಮಾಣ ಹೆಚ್ಚು. ಅನಾವಶ್ಯಕ ಸಿಸೇರಿಯನ್ ಸೆಕ್ಷನ್‌ಗಳಿಂದ ವೈದ್ಯಕೀಯ ವೆಚ್ಚ ಹೆಚ್ಚಾಗುತ್ತಿರುವ ಜತೆಗೆ ಸಾಕಷ್ಟು ದೀರ್ಘಕಾಲದ ದುಷ್ಪರಿಣಾಮಗಳನ್ನು ನೋಡಬೇಕಾಗುತ್ತದೆ.
ಸರಕಾರಗಳು ಇದರ ಬಗ್ಗೆ ಕಾನೂನೇತರ ದಾರಿಗಳನ್ನು ಕಂಡುಹಿಡಿಯುವ ಅಗತ್ಯತೆ ಇಂದು ಹೆಚ್ಚಾಗಿದೆ. ಹಾಗಾದರೆ ಇದಕ್ಕೆ ಪರಿಹಾರ ಏನು. ಇದರಲ್ಲಿಕಾನೂನುಗಳು ಕೆಲಸ ಮಾಡುವುದಿಲ್ಲ. ಸರಕಾರ ಇಷ್ಟೇ ಪ್ರಮಾಣದ ಸಿಸೇರಿಯನ್ ಮಾಡಬೇಕು ಎಂಬ ಕಾನೂನು ಮಾಡಿದರೆ ಅದು ಕಾರ್ಯಸಾಧುವಲ್ಲ ಅಥವಾ ಅದು ಅಲ್ಲದೆ ಮತ್ತೊಂದು ರೀತಿಯ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ. ಸರಕಾರ ಪ್ರತಿಯೊಬ್ಬ ವೈದ್ಯರು ತಮ್ಮ ಸಿಸೇರಿಯನ್ ಪ್ರಮಾಣ ವನ್ನು ಪ್ರತಿವರ್ಷವೂ ಘೋಷಿಸಿಕೊಳ್ಳಬೇಕು ಎಂಬ ನಿಯಮ ತರಬಹುದು. ಇದನ್ನು ಎಲ್ಲರಿಗೂ ತಿಳಿಯುವ ಹಾಗೆ ತಮ್ಮ ಕ್ಲಿನಿಕ್ ಇ ಗಳಲ್ಲಿ ಪ್ರದರ್ಶಿಸ ಬೇಕು.
ಇದು ಒಂದು ರೀತಿಯ ಸ್ವ – ವಿಮರ್ಶೆಗೆ ಕಾರಣವಾಗುತ್ತದೆ ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಸಹಾಯವಾಗುತ್ತದೆ. ಅತಿ ಹೆಚ್ಚು ಸಿಸೇರಿಯನ್ ಮಾಡುತ್ತಿರುವ ಆಸ್ಪತ್ರೆಗಳನ್ನು ಸರಕಾರ ಗುರುತಿಸಿ, ಅವುಗಳಲ್ಲಿ ಪ್ರಮಾಣಗಳನ್ನು ಕಡಿಮೆ ಮಾಡಲು ಸಾಧ್ಯವೇ ಎಂಬುದರಬಗ್ಗೆ ಆಡಳಿತ ಮಂಡಳಿ ಯೊಂದಿಗೆ ಪದೇ ಪದೆ ಚರ್ಚಿಸಬೇಕು ಮತ್ತು ಅವರನ್ನು ಪ್ರೇರೇಪಿಸಬೇಕು. ಪ್ರತಿಯೊಬ್ಬ ಆಸ್ಪತ್ರೆಯವರು ಸಿಸೇರಿಯನ್ ಸೆಕ್ಷನ್‌ಗಳನ್ನು ಶೇಕಡವಾರು ರೀತಿಯಲ್ಲಿ ಎಲ್ಲರಿಗೂ ಕಾಣುವಂತೆ ಪ್ರಕಟಿಸಿದಾಗ ಅದೊಂದು ಆತ್ಮವಿಮರ್ಶೆಗೆ ದಾರಿಮಾಡಿಕೊಡುತ್ತದೆ.
ಸಹಜ ಹೆರಿಗೆಯಲ್ಲಿರುವ ತಪ್ಪುಕಲ್ಪನೆಗಳನ್ನು ಹೋಗಲಾಡಿಸಲು ತಂದೆ – ತಾಯಿಯರಿಗೆ ಗರ್ಭಿಣಿಯರಲ್ಲಿ ತರಬೇತಿಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಸಾಮಾನ್ಯ ಹೆರಿಗೆಯ ಬಗ್ಗೆ ಇರುವ ಭಯಗಳನ್ನು ಹೋಗಲಾಡಿಸಲು ಮಾನಸಿಕವಾಗಿ ಗರ್ಭಿಣಿಯರನ್ನು ಸಿದ್ಧಗೊಳಿಸಬೇಕು. ಪ್ರತಿಯೊಂದು ಆಸ್ಪತ್ರೆ ಗಳಲ್ಲಿ ಪ್ರತಿ ಪ್ರಸೂತಿ ಶಾಸ್ತ್ರದಲ್ಲಿ ಹೆಚ್ಚು ಅನುಭವವಿರುವ ದಾದಿಯರನ್ನು ತಯಾರಿಸಬೇಕಾಗುತ್ತದೆ. ಸರಕಾರಿ ಸ್ಕೀಮುಗಳಲ್ಲಿ ಸಹಜ ಹೆರಿಗೆಗೆ ಮತ್ತು ಸಿಸೇರಿಯನ್ ಇರುವ ಸಹಾಯ ಧನದ ತಾರತಮ್ಯಗಳನ್ನು ಹೋಗಲಾಡಿಸಬೇಕಾಗುತ್ತದೆ.
ಅದೇ ರೀತಿ ಪ್ರತಿಯೊಂದು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳ ಜತೆ ಜತೆಗೂಡಿ ಸಹಜ ಹೆರಿಗೆ ಮತ್ತು ಸಿಸೇರಿಯನ್ ಕ್ಷಣಗಳಲ್ಲಿ ಏನಾದರೂ ವೈದ್ಯರಿಗೆ ಕೊಡುವ ಹಣದಲ್ಲಿ ವ್ಯತ್ಯಾಸಗಳನ್ನು ಹೋಗಲಾಡಿಸಬೇಕು. ವಿಮಾ ಕಂಪನಿಗಳೂ ಕೂಡ ಸಹಜ ಹೆರಿಗೆಗಳಿಗೆ ಅನುಕೂಲವಾಗುವಂಥ ನಿಯಮಗಳನ್ನು ರೂಪಿಸಬೇಕು. ಸಹಜ ಹೆರಿಗೆಗಳಲ್ಲಿ ತೊಂದರೆಯಾದಾಗ, ಸಾರ್ವಜನಿಕರಿಂದ ಆಗುವ ಸಂಭವನೀಯ ಹಾನಿಗೆ ಸರಕಾರ ರಕ್ಷಣೆ ಕೊಡಬೇಕು.
ಕೊನೆಮಾತು:ಇಡೀ ಜೀವನವನ್ನು ನಾವು ಕೃತಕವಾಗಿ ಕಳೆಯುತ್ತಿದ್ದೇವೆ. ಕನಿಷ್ಠ ಹುಟ್ಟು ಮತ್ತು ಸಾವುಗಳಾದರೂ ಸಹಜವಾಗಿರಲಿ.