ಅಷ್ಟಕ್ಕೂ ರಾಜಕೀಯ ಅಂದ್ರೆ ಏನು ?
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್‌
ಯಾರೇ ಆಗಲಿ, ಐವತ್ತು ಜಾಗತಿಕ ನಾಯಕರ ಪಟ್ಟಿ ಮಾಡಿದರೆ, ಅದರಲ್ಲಿ ಇಸ್ರೇಲಿನ ಪ್ರಧಾನಿ (ಎರಡು ಸಲ ) ಮತ್ತು ಅಧ್ಯಕ್ಷ ರಾಗಿದ್ದ ದಿವಂಗತ ಶಿಮೋನ್ ಪೆರೇಸ್ ಸಹ ಇರುತ್ತಾರೆ. ಇಸ್ರೇಲ್ ಸ್ವತಂತ್ರ ದೇಶವಾಗಿ ರೂಪುಗೊಂಡಾಗಿನಿಂದ ಒಂದಿಂದು ಮಹತ್ವದ ಅಧಿಕಾರ ಸ್ಥಾನದಲ್ಲಿದ್ದ ಪೆರೇನ್, ಆ ದೇಶವನ್ನು ಕಟ್ಟಿದ ಧೀಮಂತರಬ್ಬರು.
ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದ ಪೆರೇಸ್, ಇಸ್ರೇಲನ್ನು ಒಂದು ಶಕ್ತಿಶಾಲಿ ದೇಶವನ್ನಾಗಿ ರೂಪಿಸುವಲ್ಲಿ ಏಳು ದಶಕಗಳ ಕಾಲ ಮಹತ್ವದ ಪಾತ್ರವಹಿಸಿದವರು. ಇಂಥ ಮಹಾನ್ ನಾಯಕನಿಗೆ ರಾಜಕೀಯ ಅಂದರೆ ಏನು’ ಎಂದು ಕೇಳಿದರೆ ಏನುಹೇಳಬಹುದು? ಇತ್ತೀಚೆಗೆ ನಾನು ಸಿಮೋನ್ ಪೆರೇಸ್ ಬರೆದ ಒಂದು ಪ್ರಬಂಧವನ್ನು ಓದುತ್ತಿದ್ದೆ. ಅದರ ಶೀರ್ಷಿಕೆಯೇ  ?  ಅಂಥ ಮಹಾನ್ ನಾಯಕನ ದೃಷ್ಟಿಯಲ್ಲಿ ರಾಜಕೀಯ ಅಂದರೆ ಏನಿದ್ದಿರಬಹುದು, ಅವರು ರಾಜಕೀಯ ವನ್ನು ಏನೆಂದು ಭಾವಿಸಿದ್ದಾರೆ ಎಂದು ಕುತೂಹಲದಿಂದ ಓದಿದೆ. ಅವರ ವಿಚಾರ ನಿಮಗೂ ಗೊತ್ತಿರಲಿ ಎಂದೆನಿಸಿತು. ಹೀಗಾಗಿ ಅದನ್ನು ಇಲ್ಲಿ ಕೊಡುತ್ತಿದ್ದೇನೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕೆ ಇನ್ನೊಂದು ಪ್ರಶ್ನೆ ಕೇಳಿಕೊಳ್ಳೋಣ.
ರಾಜಕೀಯ ರಂಗ ಸರಿಯಾಗಿ ಕೆಲಸ ಮಾಡದಿದ್ದರೆ ಏನಾಗುತ್ತದೆ? ಇತಿಹಾಸದಲ್ಲಿ ಇದಕ್ಕೆ ಬಹಳ ಸ್ಪಷ್ಟವಾದ, ಆದರೆ ಕಠಿಣ ಉತ್ತರಗಳಿವೆ. ಅಲ್ಲಿ ಜನರು ತಮ್ಮ ಗುರಿಯ ಬಗ್ಗೆ ಒಮ್ಮತಕ್ಕೆ ಬರಲಾಗದಿದ್ದಾಗಲೆಲ್ಲ ರಕ್ತಪಾತಗಳು ನಡೆದಿವೆ. ಆಗ ರಾಜಕೀಯ ಮಾತುಕತೆಗಳ ಬದಲು ಜನರು ಶಸ್ತ್ರಾಸ್ತ್ರ ಹಿಡಿದು ಹೊಡೆದಾಡಿದ್ದಾರೆ. ಅದು ಭೂಮಿಯ ವಿಚಾರಕ್ಕಿರಬಹುದು, ಹಣಕ್ಕಾಗಿರಬಹುದು, ಸಂಪನ್ಮೂಲಗಳಿಗಾಗಿರಬಹುದು ಅಥವಾ ಕೊನೆಗೆ ಇನ್ಮುಂದೆ ಯಾರ ಮಾತು ನಡೆಯಬೇಕು ಎಂಬ ಸರಳ ವಿಚಾರಕ್ಕೂ ಇರಬಹುದು.
ಕೆಲವೊಮ್ಮೆ ರಾಜಕೀಯ ವಿಫಲವಾದಾಗ ದೇಶ-ದೇಶಗಳೇ ಯುದ್ಧಕ್ಕೆ ಇಳಿಯುವುದೂ ಉಂಟು. ಇಂತಹ ಸಂದರ್ಭದಲ್ಲಿ,ಉದಾ ಹರಣೆಗೆ, ಅವುಗಳ ನಡುವೆ ಧಾರ್ಮಿಕ ನಂಬಿಕೆಗಳ ಬಗ್ಗೆ ಅಥವಾ ಜನರು ಹೇಗೆ ಬದುಕಬೇಕು ಎಂಬ ವಿಚಾರದಲ್ಲಿಭಿನ್ನಮತ ಮೂಡಿರಬಹುದು. ಆಗೆಲ್ಲಾ ಜನರು ಏನನ್ನು ಬೇಕಾದರೂ ತ್ಯಾಗ ಮಾಡಲು ಸಿದ್ಧವಾಗಿ ನಿಂತುಬಿಟ್ಟಿರುತ್ತಾರೆ.
ತಮ್ಮದೇ ಬದುಕನ್ನು ತ್ಯಾಗ ಮಾಡುವುದರಿಂದ ಹಿಡಿದು ಬೇರೆಯವರ ಜೀವ ತೆಗೆಯುವವರೆಗೆ ಏನು ಬೇಕಾದರೂ ಮಾಡುತ್ತಾರೆ. ಒಟ್ಟಿನಲ್ಲಿ ಅವರಿಗೆ ತಮ್ಮ ಮಾತು ಮೇಲಾಗಬೇಕು. ಆಗ ಮಧ್ಯದಲ್ಲೊಬ್ಬ ಸಂಧಾನಕಾರ ಇಲ್ಲದಿದ್ದರೆ ಏನು ಬೇಕಾದರೂ ಅನಾಹುತವಾಗಬಹುದು. ಹೀಗಾಗಿ ರಾಜಕೀಯದ ಉದ್ದೇಶವೇನೆಂದರೆ, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯು ವುದು. ಬಹಳ ಸಲ ಇದಕ್ಕಾಗಿ ಎರಡೂ ಕಡೆಯವರು ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಅದು ಆಗದಿದ್ದರೆ ಬಹಳ ಬೇಗ ಜೀವನ್ಮರಣದ ಪ್ರಶ್ನೆ ಅಥವಾ ಯುದ್ಧ ಅಥವಾ ಶಾಂತಿಯ ಪ್ರಶ್ನೆ ಉದ್ಭಸುತ್ತದೆ.
ಕೆಟ್ಟ ರಾಜಕಾರಣ ಬಹಳ ಬೇಗ ಅನಾಹುತಕ್ಕೆ ತಿರುಗುವುದರಿಂದ ನನಗೆ ಒಳ್ಳೆಯ ರಾಜಕೀಯ ವಾತಾವರಣ ನಿರ್ಮಿಸುವುದರ ಬಗ್ಗೆಯೇ ಹೆಚ್ಚು ಆಸಕ್ತಿ. ನನ್ನ ದೇಶ ಇಸ್ರೇಲ್ನಲ್ಲಿ ಇದು ಇನ್ನೂ ಮುಖ್ಯ. ಏಕೆಂದರೆ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ಜೋರ್ಡನ್, ಸಿರಿಯಾ, ಲೆಬನಾನ್, ಈಜಿಪ್ಟ್ ಮತ್ತು ಪ್ಯಾಲೆಸ್ತೀನ್ ದೇಶಗಳ ಜನರಿಗೆ ಈಗಲೂ ‘ಯುದ್ಧ ಮಾಡದೆ ಹೇಗೆ ರಾಜಕೀಯ ಮಾಡಬಹುದು’ ಎಂಬ ಪ್ರಶ್ನೆ ಬಹಳ ಮುಖ್ಯವಾಗಿದೆ. ಕೆಟ್ಟ ರಾಜಕಾರಣದ ಕಟ್ಟಕಡೆಯ ಪರಿಣಾಮ ಯುದ್ಧ ವಾಗಿದ್ದರೂ ನಮಗೆ ರಾಜಕಾರಣ ಏಕೆ ಮುಖ್ಯವೆಂಬುದು ಈಗಾಗಲೇ ಅರ್ಥವಾಗಿದೆ.
ಏಕೆಂದರೆ ರಾಜಕಾರಣದ ಮುಖಾಂತರ ಜನರ ನಡುವೆ ಹಾಗೂ ದೇಶಗಳ ನಡುವೆ ಸಂಬಂಧಗಳು ಬೆಳೆಯುತ್ತವೆ. ಬಿಕ್ಕಟ್ಟುಗಳುಎದುರಾದಾಗ ಆ ಸಂಬಂಧಗಳ ಮೂಲಕ ಪರಿಹಾರಗಳು ಹೊಳೆಯುತ್ತವೆ. ಮದುವೆಯಾದ ಜೋಡಿಯನ್ನೇ ನೋಡಿ.ನೆಮ್ಮದಿ ಯಿಂದ ಇರಬೇಕು ಅಂದರೆ ಇಬ್ಬರೂ ಇನ್ನೊಬ್ಬರ ಅಗತ್ಯಗಳ ಬಗ್ಗೆ ಯೋಚಿಸಬೇಕು. ಕೆಲವೊಮ್ಮೆ ಅವರು ಸಾಕಷ್ಟುಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಸಂಬಂಧ ಉಳಿಸಿಕೊಳ್ಳಲು ಅವರಲ್ಲೊಬ್ಬರು ತಮಗೆ ಅತ್ಯಂತಇಷ್ಟವಾಗಿರುವುದನ್ನು ತ್ಯಾಗ ಮಾಡಬೇಕಾಗುತ್ತದೆ.
ಇಲ್ಲದಿದ್ದರೆ ಡಿವೋರ್ಸ್ ಅಥವಾ ಹಿಂಸಾಚಾರಕ್ಕೆ ಆಸ್ಪದವಾಗಬಹುದು. ದೇಶ – ದೇಶಗಳ ನಡುವೆ ನಡೆಯುವುದೂ ಇದೇ. ಆದರೆ, ಅಲ್ಲಿ ಪರಿಣಾಮ ಇನ್ನೂ ಘೋರವಾಗಿರುತ್ತದೆ. ನಿಮಗೆ ಗೊತ್ತಿರುವ ಎಲ್ಲಾ ದೇಶಗಳನ್ನೂ ಒಮ್ಮೆ ಕಲ್ಪಿಸಿಕೊಳ್ಳಿ. ಅಲ್ಲಿ ಕೋಟ್ಯಂತರ ಜನರು ಬದುಕುತ್ತಿದ್ದಾರೆ. ಅವರೆಲ್ಲರ ಆಶೋತ್ತರಗಳನ್ನೂ ಒಂದೇ ಸೂರಿನಡಿ ಈಡೇರಿಸುವುದು ಯಾರಿಗೇ ಆದರೂ ಸುಲಭವಲ್ಲ. ಆದ್ದರಿಂದಲೇ ರಾಜಕೀಯದಲ್ಲಿ ಬೇರೆ ಬೇರೆ ಅಭಿಪ್ರಾಯಗಳಿವೆ. ಅವು ಒಂದರ ಜೊತೆಗೊಂದು ಸ್ಪರ್ಧೆಗೆ ಬೀಳುತ್ತವೆ.
ಜಗತ್ತು ಹೇಗಿರಬೇಕೆಂಬ ಬಗ್ಗೆ ಎಲ್ಲಾ ರಾಜಕಾರಣಿಗೂ ಒಂದೊಂದು ಅಭಿಪ್ರಾಯವಿರುತ್ತದೆ. ಆ ಅಭಿಪ್ರಾಯದ ಮೇಲೆಯೇ ಅವರಿಗೆ ಜನರು ಮತ ಹಾಕಿ ಆಯ್ಕೆ ಮಾಡಿರುತ್ತಾರೆ. ಆದರೆ, ಅವರ ಸಹೋದ್ಯೋಗಿಗಳು ತಮ್ಮದೇ ಗುರಿ ಈಡೇರಿಸಿಕೊಳ್ಳಲು ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಪದೇ ಪದೆ ರಾಜಕೀಯ ಭಿನ್ನಮತಗಳು ಉದ್ಭವಿಸುತ್ತವೆ. ಜನರು ಬೇರೆ ಬೇರೆ ರೀತಿಯಲ್ಲಿ ಬದುಕುವ ಹಾಗೂ ಯೋಚಿಸುವ ದೇಶಗಳಿಂದ ರಾಜಕಾರಣಿಗಳು ಬಂದಾಗ ಈ ಭಿನ್ನಮತ ಇನ್ನೂ ಗಂಭೀರವಾಗುತ್ತದೆ. ಆದರೂ, ಅವರೂ ಕೂಡ ಒಮ್ಮತಕ್ಕೆ ಬರಲು ಪ್ರಯತ್ನಿಸಲೇಬೇಕು.
ಏನೇ ಶತಪ್ರಯತ್ನ ಮಾಡಿದ ಮೇಲೂ ರಾಜಕೀಯ ವ್ಯವಸ್ಥೆ ಕೆಲವೊಮ್ಮೆ ಕೆಲಸ ಮಾಡುವುದಿಲ್ಲ. ಅದರಲ್ಲೇನೂ ಆಶ್ಚರ್ಯ ವಲ್ಲ. ಇನ್ನು, ಪ್ರತಿಯೊಂದು ಸಂಗತಿಯೂ ತೀರಾ ಸಂಕೀರ್ಣವಾಗಿರುವ ಮಧ್ಯಪ್ರಾಚ್ಯ ದೇಶಗಳಲ್ಲಿ ರಾಜಕೀಯ ಕೆಲಸ ಮಾಡುವುದಿಲ್ಲ ಅಂದರೆ ಯಾರಿಗೂ ವಿಶೇಷ ಅನ್ನಿಸುವುದಿಲ್ಲ. ಅದೇಕೆ ಹಾಗೆ ಎಂದು ನೀವು ಕೇಳಬಹುದು. ಕಾರಣ ಮೂರು ಮುಖ್ಯ ಧರ್ಮಗಳು – ಜುಡಾಯಿಸಂ, ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ – ಇಲ್ಲೇ ಹುಟ್ಟಿವೆ. ಇವು ಇಲ್ಲಿನ ರಾಜಕಾರಣದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ.
ದುರದೃಷ್ಟವಶಾತ್ ಧರ್ಮಗಳು ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರತಿಯೊಂದು ಧರ್ಮವೂ ತನಗೆ ಮಾತ್ರ ಜನರ ಸಂತೋಷದ ಗುಟ್ಟು ಗೊತ್ತಿದೆ ಎಂದುಕೊಂಡಿರುತ್ತದೆ. ಎಲ್ಲಿ ನಂಬಿಕೆ ಶುರುವಾಗುತ್ತದೆಯೋ ಅಲ್ಲಿ ಕಾರಣ ಅಂತ್ಯವಾಗುತ್ತದೆ ಎಂಬ ಮಾತನ್ನು ನೀವು ತುಂಬಾ ನಂಬುವ ಅಗತ್ಯವಿಲ್ಲ. ಕುತೂಹಲಕರ ಸಂಗತಿಯೆಂದರೆ ಈ ಮೂರು ಧರ್ಮಗಳಲ್ಲಿ ವ್ಯತ್ಯಾಸಕ್ಕಿಂತ ಸಾಮ್ಯತೆಗಳೇ ಹೆಚ್ಚಿವೆ. ಆದರೂ ಸಣ್ಣ ಸಣ್ಣ ವ್ಯತ್ಯಾಸ ಕೂಡ ದೊಡ್ಡ ದ್ವೇಷಕ್ಕೆ ಕಾರಣವಾಗುತ್ತದೆ.
ರಾಜಕೀಯದಲ್ಲಿ ವಿವೇಕಕ್ಕಿಂತ ದೊಡ್ಡದು ಯಾವುದೂ ಇಲ್ಲವಾದ್ದರಿಂದ ನಮ್ಮ ದೇಶ ಇಸ್ರೇಲ್‌ನಲ್ಲಿ ಇದೊಂದು ವಿಶಿಷ್ಟ ಸಮಸ್ಯೆ. ಹಾಗಂತ ರಾಜಕಾರಣದ ಮೇಲೆ ಧರ್ಮದ ಪ್ರಭಾವದಿಂದ ಒಳ್ಳೆಯದೂ ಆಗುವುದಿದೆ. ಜನರು ದೇವರನ್ನು ನಂಬಿದಾಗಅವರಿಗೊಂದು ಶಕ್ತಿ ಬರುತ್ತದೆ. ಎಲ್ಲರೂ ಒಗ್ಗಟ್ಟಾಗಿ ಒಂದು ಗುರಿ ಸಾಧಿಸುವ ಶಕ್ತಿಯದು. ಆದರೆ, ತನ್ನ ಕಲ್ಪನೆಯ ದೇವರುಬೇರೆಲ್ಲರ ಕಲ್ಪನೆಯ ದೇವರಿಗಿಂತ ಹೆಚ್ಚು ಮುಖ್ಯ ಎಂದು ಯಾರೋ ಒಬ್ಬ ಯೋಚಿಸಿದಾಗ ಇದೇ ಶಕ್ತಿ ದೊಡ್ಡ ಅನಾಹುತಕ್ಕೂ ಕಾರಣವಾಗಬಹುದು. ಆದರೂ ನನಗೆ ಭವಿಷ್ಯದಲ್ಲಿ ಭರವಸೆಯಿದೆ. ಒಂದಲ್ಲಾ ಒಂದು ದಿನ ಗಡಿಗಾಗಿ ಯುದ್ಧಗಳು ನಡೆಯುವುದು ನಿಲ್ಲುತ್ತದೆ.
ನನ್ನ ಪ್ರಕಾರ ಮುಂದಿನ ದಿನಗಳಲ್ಲಿ ರಾಜಕೀಯ ಹೀಗೆ ಕೆಲಸ ಮಾಡುತ್ತದೆ – ಅಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ನಂಬಿಕೆ ಗಳನ್ನು ಉಳಿಸಿಕೊಂಡೇ, ತಮ್ಮ ಧರ್ಮ, ಸಂಪ್ರದಾಯ, ಜೀವನಶೈಲಿಗಳನ್ನು ಕಾಪಾಡಿಕೊಂಡೇ ಅಕ್ಕಪಕ್ಕದವರ ಜತೆಗೆ ಸಹಬಾಳ್ವೆಯಿಂದ ಬದುಕುವ ವಾತಾವರಣವಿರುತ್ತದೆ. ಇಂಥ ವಾತಾವರಣ ನಿರ್ಮಾಣವಾಗಬೇಕು ಅಂದರೆ ನಮಗೆ ಒಳ್ಳೆಯರಾಜಕಾರಣಿಗಳು ಬೇಕು.
ಈಗ ನೀವು ಇನ್ನೊಂದು ಪ್ರಶ್ನೆ ಕೇಳುತ್ತೀರಿ:ಒಳ್ಳೆಯ ರಾಜಕಾರಣಿಯೆಂದರೆ ಯಾರು? ಅವನು ವಿದ್ಯಾವಂತನಾಗಿರಬೇಕು. ಆದರೆ ಅದಕ್ಕಿಂತ ಹೆಚ್ಚಾಗಿ ಕುತೂಹಲಿಯಾಗಿರಬೇಕು. ಯಾವುದಾದರೂ ಒಂದು ಕ್ಷೇತ್ರದಲ್ಲಿ ಎಕ್ಸ್‌ಪರ್ಟ್ ಆಗಿರಬೇಕು. ತನ್ನ ತಂಡಕ್ಕೆ ಜಾಣರನ್ನೂ ಪ್ರತಿಭಾವಂತರನ್ನೂ ಸೇರಿಸಿಕೊಳ್ಳುವುದು ಹೇಗೆಂಬುದು ಅವನಿಗೆ ಗೊತ್ತಿರಬೇಕು. ಯಾವತ್ತಿದ್ದರೂ ಕೊನೆಯಲ್ಲಿ ಗುರಿ ನಿಗದಿಪಡಿಸುವವನು ಹಾಗೂ ನಿರ್ಧಾರ ಕೈಗೊಳ್ಳುವವನು ನಾಯಕನೇ ಆಗಿರುತ್ತಾನೆ.
ಆದರೆ, ಅವನೊಬ್ಬನೇ ಆ ಗುರಿ ಸಾಧಿಸಲು ಸಾಧ್ಯಲ್ಲ. ಒಳ್ಳೆಯ ರಾಜಕಾರಣಿಯಾಗಲು ಇರುವ ಏಕೈಕ ದಾರಿಯೆಂದರೆ ಬುದ್ಧಿವಂತಿಕೆಯಿಂದ ಕೆಲಸ ಮಾಡುವವರ ತಂಡ ಕಟ್ಟಿಕೊಂಡು ಅವರಿಂದ ಸಲಹೆ ಪಡೆದುಕೊಳ್ಳುವುದು. ಏಕೆಂದರೆ ರಾಜಕಾರಣಿಯ ಮುಂದೆ ಬೆಟ್ಟದಷ್ಟು ಕೆಲಸಗಳಿರುತ್ತವೆ. ಎಲ್ಲವನ್ನೂ ಅವನೊಬ್ಬನೇ ಮಾಡಲು ಸಾಧ್ಯವಿಲ್ಲ. ರಾಜಕಾರಣಿಗಳು ಜನರಿಗೆ ಹಾಗೂ ದೇಶಕ್ಕೆ ಸೇವಕರು, ವಕೀಲರು, ರಾಯಭಾರಿಗಳು ಎಲ್ಲವೂ ಹೌದು. ನಮ್ಮ ಮೇಲೆ ಮನುಷ್ಯನ ಘನತೆಯನ್ನು ರಕ್ಷಿಸುವ, ಹಕ್ಕುಗಳನ್ನು ಕಾಪಾಡುವ ಹಾಗೂ ಮಾನವೀಯ ಮೌಲ್ಯಗಳನ್ನು ಉಳಿಸುವ ಜವಾಬ್ದಾರಿಯಿದೆ.
ನಾವು ಯಾವಾಗಲೂ ಸಮಾನತೆಯ ಹಕ್ಕುಗಳನ್ನು ರಕ್ಷಿಸಬೇಕು. ಜನರಿಗೆ ತಮ್ಮ ನಂಬಿಕೆಯಂತೆ ಭಿನ್ನವಾಗಿ ಬದುಕುವ ಹಕ್ಕನ್ನು ಒದಗಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಂತ ಮುಖ್ಯವಾದ ‘ಬದುಕುಳಿಯುವ’ ಹಕ್ಕನ್ನು ಖಾತ್ರಿಪಡಿಸಬೇಕು. ಈ ಜವಾಬ್ದಾರಿಗಳ ಬಗ್ಗೆ ಮಾತನಾಡುವಾಗ ನಾನೇನು ಹೇಳುತ್ತಿದ್ದೇನೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ಇಸ್ರೇಲ್‌ನ ರಾಜಕಾರಣದಲ್ಲಿ 50 ವರ್ಷಕ್ಕೂ ಹೆಚ್ಚು ಕಾಲ ನಾನು ಕೆಲಸ ಮಾಡಿದ್ದೇನೆ. ಹಿಂತಿರುಗಿ ನೋಡಿದರೆ ಇಷ್ಟು ವರ್ಷಗಳಲ್ಲಿ ರಾಜಕಾರಣ ಎಷ್ಟೆಲ್ಲಾ ಬದಲಾಗಿದೆ ಯಲ್ಲ ಅನ್ನಿಸುತ್ತದೆ.
ಹಿಂದೆಲ್ಲಾ ಅಧಿಕಾರವೆಂಬುದು ರಾಜಕಾರಣಿಗಳ ಕೈಯಲ್ಲೇ ಇರುತ್ತಿತ್ತು. ಇಂದು ಅದು ಜನರ ಕೈಲಿದೆ. ಇನ್ನೊಂದು ರೀತಿಯಲ್ಲಿ ನೋಡಿದರೆ, ಹೆಚ್ಚಿನ ಅಧಿಕಾರವು ಸಮೂಹ ಮಾಧ್ಯಮಗಳಲ್ಲಿದೆ. ಇಂದು ರಾಜಕೀಯ ವ್ಯವಹಾರಗಳೆಲ್ಲ ಮೈಕ್‌ಗಳಲ್ಲಿ ಬಿತ್ತರವಾಗುತ್ತವೆ. ರಾಜಕಾರಣಿಗಳು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಸಭಾಂಗಣದಲ್ಲಿ ಮೈಕ್ ಹಿಡಿದು ಜೋರಾಗಿ ಮಾತನಾಡುತ್ತಾರೆ. ಅವರ ಒಂದೊಂದು ನಡೆಯನ್ನೂ, ಪ್ರತಿ ಮಾತನ್ನೂ ಟೀ ಕ್ಯಾಮೆರಾಗಳು ಇಡೀ ಜಗತ್ತಿಗೆ ತೋರಿಸುತ್ತವೆ. ಇಂದು ಮಾಧ್ಯಮಗಳು ರಾಜಕಾರಣಿಗಳ ಕಾವಲುನಾಯಿಯಂತೆ ಕೆಲಸ ಮಾಡುತ್ತವೆ. ಕೆಲವೊಮ್ಮೆ ಅವು ತಲೆಬುಡವಿಲ್ಲದ ಟೀಕೆಯನ್ನೂ ಮಾಡುತ್ತವೆ.
ಒಳ್ಳೆಯ ರಾಜಕಾರಣಿ ಯಾವತ್ತೂ ಜನಪ್ರಿಯ ಅಭಿಪ್ರಾಯಗಳಿಗೆ ಬಲಿಯಾಗಬಾರದು. ಬದಲಿಗೆ ತನ್ನ ಸಿದ್ಧಾಂತದ ಪರ ಗಟ್ಟಿಯಾಗಿ ನಿಲ್ಲಬೇಕು. ಇದು ಸುಲಭವಲ್ಲ. ರಾಜಕಾರಣವೆಂಬುದು ಸಂಧಾನದ ಕಲೆ. ನಾವು ದೂರದೂರದ ದೇಶಗಳ ಜತೆಗೆ ಸದಾ ಸಂಧಾನ ನಡೆಸುತ್ತಿರಬೇಕಾಗುತ್ತದೆ. ಯುದ್ಧ ಬೇಡ ಅಂತಾದರೆ ಇದು ಅನಿವಾರ್ಯ. ಇದನ್ನು ಮಾಡಲು ನಮಗೆ ಅನುಭವರಾಜಕಾರಣಿಗಳು ಬೇಕು. ಉದಾಹರಣೆಗೆ, ವಿಶ್ವಸಂಸ್ಥೆಯಲ್ಲಿದ್ದ ಅಮೆರಿಕದ ರಾಯಭಾರಿ ರಿಚರ್ಡ್ ಹೋಲ್‌ಬ್ರೂಕ್.
ಆತ ಬೋಸ್ನಿಯಾದ ಬಿಕ್ಕಟ್ಟನ್ನು ಯಶಸ್ವಿಯಾಗಿ ಬಗೆಹರಿಸಿದ. ಇನ್ನೊಂದು ಉದಾಹರಣೆ ಡೆನಿಸ್ ರಾಸ್. ಇವರೂ ಅಮೆರಿಕನ್.ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಬಹಳ ವರ್ಷಗಳ ಕಾಲ ಯತ್ನಿಸಿದ್ದರು. ಇವರದು ಬಹಳ ಕಷ್ಟದ ಕೆಲಸ.ಒಬ್ಬರಿಗೊಬ್ಬರು ಮಾತನಾಡಿಕೊಳ್ಳದ, ಯುದ್ಧಕ್ಕೆ ಸದಾ ತುದಿಗಾಲಿನ ಮೇಲೆ ನಿಂತಿರುವ ಶತ್ರುಗಳನ್ನೂ ಇವರು ಮಾತಿನ ಮೇಜಿಗೆ ಕರೆಸಬೇಕಾಗುತ್ತದೆ. ಪರಸ್ಪರ ಕೆಂಡ ಕಾರುವ ದೇಶಗಳ ನಡುವೆ ಸ್ನೇಹದ ಸೇತುವೆ ನಿರ್ಮಿಸಲು ಬೇಕಿರುವ ಏಕೈಕ ಸಂಗತಿಯೆಂದರೆ ತಾಳ್ಮೆ. ಹೋಲ್‌ಬ್ರೂಕ್ ಮತ್ತು ರಾಸ್ ಇಬ್ಬರನ್ನೂ ನಾನು ವೈಯಕ್ತಿಕವಾಗಿ ಬಲ್ಲೆ.
ಅವರಿಬ್ಬರಲ್ಲೂ ಬೆಟ್ಟದಷ್ಟು ತಾಳ್ಮೆಯಿದೆ. ಇನ್ನೊಬ್ಬ ರಾಜಕಾರಣಿಯನ್ನು ಅವನ ಜಾಗದಲ್ಲೇ ನಿಂತು ಅರ್ಥ ಮಾಡಿಕೊಳ್ಳುವ ಕಲೆಯಲ್ಲಿ ಬಹುಶಃ ಇವರಿಬ್ಬರನ್ನು ಯಾರೂ ರಿಸಲು ಸಾಧ್ಯವಿಲ್ಲ. ನಮ್ಮಂಥ ಕೆಲ ರಾಜಕಾರಣಿಗಳು ಕಾಲಕ್ರಮೇಣ ಒಂದಷ್ಟು ಹೊಸ ಗುಣಗಳನ್ನು ರೂಢಿಸಿಕೊಳ್ಳುತ್ತೇವೆ. ಆದರೂ ಒಂದು ಸಂಗತಿಯನ್ನು ಮಾತ್ರ ನಾವು ಮರೆಯಬಾರದು. ಅದೇನೆಂದರೆ, ರಾಜಕೀಯ ವ್ಯವಸ್ಥೆ ದಿನದಿನಕ್ಕೂ ತನ್ನ ಪ್ರಭಾವ ಕಳೆದುಕೊಳ್ಳುತ್ತಿದೆ.
ದುರದೃಷ್ಟವಶಾತ್ ಇದು ನಿಜ. ಜಗತ್ತಿನಲ್ಲಿ ಇಂದು ಅತಿಹೆಚ್ಚು ಪ್ರಭಾವ ಬೀರುವ ಸಂಗತಿಯೆಂದರೆ ಆರ್ಥಿಕತೆ. ಅಂದರೆ ಹಣ. ಹೀಗಾಗಿ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ತಮ್ಮ ಪ್ರಭಾವ ಬಳಸಿ ಜಾಗತಿಕ ಇತಿಹಾಸ ಬರೆಯುತ್ತಿವೆ. ಜಗತ್ತಿನ ಬಹುಮುಖ್ಯ ನಿರ್ಣಯಗಳನ್ನು ಇಂದು ಕಾರ್ಪೊರೇಟ್ ಕಂಪನಿಗಳು ತೆಗೆದುಕೊಳ್ಳುತ್ತಿವೆ. ಜಗತ್ತನ್ನು ಒಂದುಗೂಡಿಸುವ ಶಕ್ತಿ ಇವತ್ತು ವಿಶ್ವಸಂಸ್ಥೆಗೂ ಇಲ್ಲ. ಕಾರ್ಪೊರೇಟ್ ಕಂಪನಿಗಳಿಗಿದೆ.
ರಾಜಕಾರಣದ ಪ್ರಭಾವ ಕಡಿಮೆಯಾಗುತ್ತಿದ್ದರೂ ರಾಜಕಾರಣವಿಲ್ಲದೆ ಜಗತ್ತು ಮುನ್ನಡೆಯಬಲ್ಲದು ಎಂದರ್ಥವಲ್ಲ. ಬಡಹಾಗೂ ಶ್ರೀಮಂತ ದೇಶಗಳ ನಡುವೆ ಸಂಧಾನ ನಡೆಸಲು ಈಗಲೂ ರಾಜಕಾರಣವೇ ಬೇಕು. ಜಗತ್ತಿನ ಸಂಪನ್ಮೂಲಗಳು ತಕ್ಕಮಟ್ಟಿಗೆ ನ್ಯಾಯಯುತವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಲು, ಒಂದು ದಿನ ಎಲ್ಲಾ ಮನುಷ್ಯರೂ ಸಮಾನವಾಗಿ ತಮ್ಮ ಬದುಕಿನ ಗುರಿಯನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವಂಥ ವಾತಾವರಣವನ್ನು ನಿರ್ಮಿಸುವುದಕ್ಕೆ ಪ್ರಯತ್ನಿಸಲು ರಾಜಕಾರಣವೇ ಬೇಕು.
ಈಗ ಮತ್ತೊಮ್ಮೆ ಬಿಸಿ ಬಿಸಿ ರಾಜಕೀಯ ಬಿಕ್ಕಟ್ಟಿನ ಕಡೆ ಹೋಗೋಣ. ರಕ್ತಪಾತಗಳನ್ನು ತಪ್ಪಿಸಲು ರಾಜಕಾರಣಿಗಳು ತಮ್ಮ ಪ್ರಯತ್ನವನ್ನು ಯಾವತ್ತೂ ಕೈಬಿಡುವಂತಿಲ್ಲ. ಶಾಂತಿಯುತ ಪರಿಹಾರ ಕಂಡುಕೊಳ್ಳುವ ಯತ್ನ ನಿರಂತರವಾಗಿ ಜಾರಿ ಯಲ್ಲಿರಬೇಕು. ಪ್ಯಾಲೆಸ್ತೀನ್ – ಇಸ್ರೇಲ್ ಬಿಕ್ಕಟ್ಟಿನ ಮೂಲಕ ನಿಮಗಿದನ್ನು ಅರ್ಥಮಾಡಿಸಲು ಯತ್ನಿಸುತ್ತೇನೆ. ಸರಳವಾಗಿ ಹೇಳುವುದಾದರೆ ಇಲ್ಲಿ ಎರಡು ದೇಶಗಳ ಜನರಿಗೆ ಒಂದೇ ರಾಷ್ಟ್ರವಿದೆ! ಇಸ್ರೇಲಿಗಳು ಮತ್ತು ಪ್ಯಾಲೆಸ್ತೀನಿಗಳು ಒಂದೇ ತುಂಡು ಭೂಮಿಗಾಗಿ ಹೋರಾಡುತ್ತಿದ್ದಾರೆ. ಇದರ ಗಾತ್ರ ಅಮೆರಿಕದ ಮೆಸಾಚುಸೆಟ್ಸ್ ರಾಜ್ಯದಷ್ಟಿರಬಹುದು.
ಇದು ಇನ್ನೂ ಸಂಕೀರ್ಣ ಸಮಸ್ಯೆಯಾಗಿರುವುದು ಏಕೆಂದರೆ ಈ ಎರಡೂ ದೇಶಗಳ ಜನರು ದೇವರನ್ನು ಭಿನ್ನವಾಗಿ ನಂಬುತ್ತಾರೆ.ಅಂದರೆ, ಒಂದು ದೇಶದ ಜನರು ಯಹೂದಿಗಳು, ಇನ್ನೊಂದು ದೇಶದ ಜನ ಮುಸ್ಲಿಮರು. ಇಬ್ಬರೂ ಬೇರೆ ಬೇರೆ ಭಾಷೆ (ಹೀಬ್ರೂ ಮತ್ತು ಅರೇಬಿಕ್) ಮಾತನಾಡುತ್ತಾರೆ. ಇಬ್ಬರಿಗೂ ಭಿನ್ನ ಇತಿಹಾಸವಿದೆ. ಆದರೆ, ಇಬ್ಬರಿಗೂ ಬೇಕಿರುವುದು ಒಂದೇ: ಸ್ವಾತಂತ್ರ್ಯ ಮತ್ತು ಭದ್ರತೆ.
ಹಾಗಾದರೆ ಇದೆಲ್ಲದರ ಮಧ್ಯೆ ನಾನೇನು ಮಾಡುತ್ತಿದ್ದೇನೆ? ನಾನು ಇದಕ್ಕೊಂದು ರಾಜಕೀಯ ಪರಿಹಾರ ಕಂಡುಹಿಡಿಯಲುಯತ್ನಿಸುತ್ತಿದ್ದೇನೆ. ನನ್ನ ಐಡಿಯಾ ಏನು ಗೊತ್ತೆ? ಪ್ಯಾಲೆಸ್ತೀನ್‌ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು, ಇಸ್ರೇಲಿಗರಿಗೆ ಸಂಪೂರ್ಣಭದ್ರತೆ ನೀಡಬೇಕು. ಇವೆರಡೂ ಸಾಧ್ಯವಾಗದ ಹೊರತು ಈ ದೇಶಗಳ ನಡುವೆ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಹಾಗಾದರೆಪ್ಯಾಲೆಸ್ತೀನ್ ಮತ್ತು ಇಸ್ರೇಲ್ ಒಂದು ದೇಶದಂತೆ ಬದುಕಲು ಏಕೆ ಸಾಧ್ಯವಿಲ್ಲವೆಂದು ನೀವು ಕೇಳಬಹುದು. ಏಕೆ ಸಾಧ್ಯವಿಲ್ಲ ವೆಂದರೆ ಅದು ಬಹಳ ಅಪಾಯಕಾರಿ. ಒಮ್ಮೆ ಕೊಸೊವೋ ದೇಶವನ್ನು ನೋಡಿ. ಅಲ್ಲಿ ಅಲ್ಬೇನಿಯನ್ನರು ಮತ್ತು ಸರ್ಬಿಯನ್ನರು ಒಂದೇ ದೇಶದವರಾಗಿ ಬದುಕುತ್ತಿದ್ದಾರೆ, ಆದರೆ ಅವರಲ್ಲಿ ಇವತ್ತಿಗೂ ತಾವು ಒಂದೆಂಬ ಕಲ್ಪನೆ ಮೂಡಿಲ್ಲ.
ಇವತ್ತಿಗೂ ಅವರು ಸಮಯ ಸಿಕ್ಕಾಗಲೆಲ್ಲ ಶಸಾಸ ಕೈಗೆತ್ತಿಕೊಂಡು ಒಬ್ಬರನ್ನೊಬ್ಬರು ಹೊಸಕಿಹಾಕಲು ನೋಡುತ್ತಾರೆ. ನನ್ನ ದೇಶದ ಕತೆಯೂ ಹೆಚ್ಚುಕಮ್ಮಿ ಹೀಗೇ ಕಾಣಿಸುತ್ತದೆ. ಹಾಗಾಗಿ ಇಸ್ರೇಲಿಗರು ಮತ್ತು ಪ್ಯಾಲೆಸ್ತೀನಿಯನ್ನರು ಸ್ಪಷ್ಟವಾದ ಗಡಿಯಆಚೆ – ಈಚೆ ಪ್ರತ್ಯೇಕವಾಗಿರುವುದೇ ಒಳ್ಳೆಯದು. ಇದನ್ನು ಮುಗಿಸುವ ಮುನ್ನ ನಾನು ಹೇಗೆ ರಾಜಕಾರಣಿಯಾದೆ ಎಂಬುದನ್ನು ಹೇಳುತ್ತೇನೆ. ನನಗಾಗ ಹದಿನಾಲ್ಕು ವರ್ಷ. ಆಗಿನ್ನೂ ಇಸ್ರೇಲ್ ಎಂಬ ದೇಶ ಹುಟ್ಟಿರಲಿಲ್ಲ. ಯಹೂದಿಗಳ ಮೇಲೆ ಆಗಸ್ಟೇ ನಡೆದಹೋಲೋಕಾಸ್ಟ್‌ನ ಭೀಕರ ನೆನಪಿನಲ್ಲಿ ಈ ಗಡಿಯಿಲ್ಲದ ಮಧ್ಯಪ್ರಾಚ್ಯದ ತುಂಡು ಭೂಮಿಯ ಮೇಲೆ ನನ್ನವರು ಭವಿಷ್ಯದ ಯಾವ ಭರವಸೆಯೂ ಇಲ್ಲದೆ ಅತಂತ್ರರಾಗಿ ಬದುಕುತ್ತಿದ್ದರು. ಪರಿಸ್ಥಿತಿ ಭಯಾನಕವಾಗಿತ್ತು.
ಸದಾ ನಾವು ಆತಂಕದಲ್ಲೇ ಇರುತ್ತಿದ್ದೆವು. ಯಾವುದೇ ಕ್ಷಣದಲ್ಲಿ ಅರಬ್ಬರು ನಮ್ಮ ಮೇಲೆ ದಾಳಿ ನಡೆಸಬಹುದಿತ್ತು. ನಮಗಿಂತ ಹಲವು ಪಟ್ಟು ದೊಡ್ಡ ದೇಶ ಅವರದು. ಯಹೂದಿಗಳಿಗೊಂದು ಪ್ರತ್ಯೇಕ ದೇಶ ನೀಡಬೇಕೋ ಬೇಡವೋ ಎಂಬ ಚರ್ಚೆ ಆಗಿನ್ನೂ ಆರಂಭಿಕ ಹಂತದಲ್ಲಿತ್ತು. ಆ ಸಮಯದಲ್ಲಿ ನಾನು ವರ್ಕಿಂಗ್ ಯೂತ್ ಮೂವ್‌ಮೆಂಟ್ ಎಂಬ ಸಂಘಟನೆ ಸೇರಿದೆ. ಅಲ್ಲೇ ನನಗೆರಾಜಕೀಯದ ಮೊದಲ ಪಾಠವಾಯಿತು. ಆ ಸಂಘಟನೆಯಲ್ಲೂ ಹಲವು ಒಡಕುಗಳಿದ್ದವು. ಕೆಲವರು ಅಖಂಡ ಇಸ್ರೇಲ್ ಬೇಕೆಂದು ವಾದಿಸುತ್ತಿದ್ದರು. ಅದಕ್ಕಾಗಿ ಇಸ್ರೇಲ್ ಎಂಬ ಅಧಿಕೃತ ದೇಶಕ್ಕೆ ಜಗತ್ತು ಮಾನ್ಯತೆ ನೀಡುವುದನ್ನು  ಮುಂದೂಡುವು ದಕ್ಕೂ ಅವರು ಸಿದ್ಧರಿದ್ದರು.
ಇನ್ನು ಕೆಲವರಿಗೆ ಆ ಕ್ಷಣವೇ ಇಸ್ರೇಲ್ ದೇಶ ಅಧಿಕೃತವಾಗಿ ಸ್ಥಾಪನೆಯಾಗಬೇಕಿತ್ತು. ಯಹೂದಿಗಳು ಮತ್ತು ಅರಬ್ಬರ ನಡುವೆ ಭೂಮಿಯನ್ನು ಒಡೆದಾದರೂ ಸರಿ, ಸ್ವತಂತ್ರ ಇಸ್ರೇಲ್ ಸ್ಥಾಪನೆಯಾಗಬೇಕೆಂದು ಅವರು ವಾದಿಸುತ್ತಿದ್ದರು. ಆಗ ನಾನು ಎರಡನೇ ಹಾಗೂ ಅತ್ಯಂತ ಮುಖ್ಯ ರಾಜಕೀಯ ಪಾಠ ಕಲಿತೆ: ‘ನಿಮಗೇನು ಬೇಕೋ ಅದನ್ನು ಪಡೆಯಬೇಕೆಂದರೆ ರಾಜಿ ಮಾಡಿಕೊಳ್ಳ ಬೇಕಾಗುತ್ತದೆ.’ ಒಂದು ದಿನ ನನ್ನ ಮೊಮ್ಮಕ್ಕಳು ತಾವು ಹೇಗೆ ಶಾಂತಿದೂತ ರಾಜಕಾರಣಿಯಾಗಬೇಕೆಂದು ನನ್ನನ್ನು ಕೇಳಿದರೆ ಅವರಿಗೆ ನಾನು ಹೇಳುವುದಿಷ್ಟೆ: ‘ಯಾವತ್ತೂ ದೊಡ್ಡದಾಗಿ ಕಣ್ಣು ತೆರೆದುಕೊಂಡಿರಿ.
ಅಲ್ಲಿ ಕಾಣಿಸುವ ನೋವು ಹಾಗೂ ನರಳಾಟಗಳನ್ನು ನೋಡಿ ಎದೆಗುಂದಬೇಡಿ. ಹೆಚ್ಚಿನ ಜನರು ತಮ್ಮದೇ ನೆನಪುಗಳ ಮೇಲೆ ಮೋಹ ಹೊಂದಿರುವುದರಿಂದ ಮುಂದೆ ನೋಡುವುದಕ್ಕಿಂತ ಹೆಚ್ಚಾಗಿ ಹಿಂದೆ ನೋಡುತ್ತಿರುತ್ತಾರೆ. ಆದರೆ, ನೀವು ಮುಂದೆ ನೋಡಿದರೆ ಮಾತ್ರ ಒಳ್ಳೆಯ ಜಗತ್ತನ್ನು ಕಟ್ಟಬಲ್ಲಿರಿ. ನಿಜ, ನೀವು ಇತಿಹಾಸವನ್ನು ಮರೆಯಬಾರದು. ಆದರೆ, ಕನಸು ಕಾಣುವ ಧೈರ್ಯ ಹೊಂದಿರಬೇಕು. ಜಗತ್ತು ಹೇಗಿದ್ದರೆ ಸುಂದರವಾಗಿರುತ್ತದೆ ಎಂಬ ಬಗ್ಗೆ ನಿಮಗೆ ನಿಮ್ಮದೇ ಕಲ್ಪನೆ ಇರಬೇಕು. ಅದಕ್ಕಾಗಿ ಎಷ್ಟೇ ಕಷ್ಟಪಟ್ಟರೂ ಅದು ದುಬಾರಿಯಲ್ಲ. ನಿಮ್ಮ ಸಿದ್ಧಾಂತಕ್ಕೆ ಗಟ್ಟಿಯಾಗಿ ಆತುಕೊಂಡಿರಿ.
ಸೋಲು ಎದುರಾದಾಗ ಹಿಂದೆ ಸರಿಯಬೇಡಿ. ಆ ಕ್ಷಣದ ಅಸಹಾಯಕತೆ ಅಥವಾ ಆತಂಕಕ್ಕೆ ಬಲಿಯಾಗಬೇಡಿ. ಯಾವತ್ತೂನಿಮ್ಮ ದೇಹದಷ್ಟು ಸಣ್ಣವರಾಗಬೇಡಿ, ಬದಲಿಗೆ ನಿಮ್ಮ ಕನಸು ಹಾಗೂ ಭರವಸೆಗಳಷ್ಟು ದೊಡ್ಡವರಾಗಿ.’ ಕೊನೆಯಲ್ಲಿ ನನ್ನ ಮೊಮ್ಮಕ್ಕಳಿಗೇನು ಹೇಳುತ್ತೇನೆ ಗೊತ್ತಾ? ‘ಜನರಿಗೆ ತಿನ್ನುವುದಕ್ಕೆ, ಕುಡಿಯುವುದಕ್ಕೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಕನಸು ಕಾಣುವುದಕ್ಕೂ ಇದೆ. ನಿಮ್ಮ ಕನಸುಗಳನ್ನೂ ಕಲ್ಪನೆಗಳನ್ನೂ ಸ್ವತಂತ್ರವಾಗಿ ಹಾರಲು ಬಿಡಿ.
ಕ್ರಮೇಣ ಜನರು ನಿಮ್ಮನ್ನು ನೋಡತೊಡಗುತ್ತಾರೆ. ಇದೋ ಇಲ್ಲೊಬ್ಬನಿಗೆ ತನಗೇನು ಬೇಕೆಂಬುದು ಗೊತ್ತಿದೆ, ಇವನಿಗೆ ಭವಿಷ್ಯದ ಮೇಲೆ ಕಣ್ಣಿದೆ’ ಎಂಬುದು ಅವರಿಗೆ ಅರ್ಥವಾಗುತ್ತದೆ!’