ಜನ ಜನ ಸೇರಿದ್ರೆ ಜಗಳ, ಮನ ಮನ ಸೇರಿದ್ರೆ ಮಾತು
ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಇಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಅವಶ್ಯಕತೆಗಿಂತ ಹೆಚ್ಚು ಜನ ಸೇರುವುದು ಮಾಮೂಲಾಗಿ ಹೋಗಿದೆ, ‘ಯಾರೂ ಬರಲ್ಲ ಅಂದ್ಕೊಂಡಿದ್ವಿ, ಎಷ್ಟು ಜನ ಸೇರಿದ್ರು ಗೊತ್ತಾ? ಎಂಬ ನುಡಿ ಮಾಮೂಲಾಗಿದೆ.
ಎಷ್ಟು ಜನ ಬೇಕು ಹೇಳಿ ಸಾರ್, ಚಿಟಿಕೆ ಹೊಡೆಯುವಷ್ಟರಲ್ಲಿ ಸೇರಿಸ್ತಿವಿ ಎಂದು ಸಲೀಸಾಗಿ ಹೇಳುತ್ತಾರೆ. ಜನ, ಜನ, ಜನ,ಎಲ್ಲಿ ನೋಡಿದ್ರೂ ಜನ, ಅವರು ತಂದ ವಾಹನಗಳು, ಕರೆಸಿಕೊಂಡವರು, ಕುತೂಹಲಕ್ಕೆ ಬಂದವರು, ಕೆಲಸವಿಲ್ಲದೇ ಬಂದವರು, ಇದೇ ಕೆಲಸಕ್ಕೆ ಬಂದವರು, ಕರೆಯದೇ ಬಂದವರು ಅಬ್ಬಬ್ಬಾ! ಮನೆಗೆ ಹೋಗಿ ಕರೆದರೂ ಬಾರದ ಜನವಿದ್ದ ಕಾಲವೊಂದಿತ್ತು.
ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲವೆಂದು ಬಾರದವರೂ ಇರುತ್ತಿದ್ದರು. ಆದರೆ ಇಂದು ‘ನಮ್ಮ ಹೆಸರು ಏಕೆ ಹಾಕಿಲ್ಲ’ ಎಂದು ಕೇಳುವುದಕ್ಕೆಂದೇ ಬರುವವರಿದ್ದಾರೆ. ಸರ್ವರಿಗೂ ಸುಸ್ವಾಗತ ಎಂಬ ಫಲಕ ಹಾಕುವುದಕ್ಕೆ ಗಾಬರಿ ಹುಟ್ಟಿ ಈಗೀಗ ‘ಆಹ್ವಾನಿತರಿಗೆ ಮಾತ್ರ’ ಎಂದು ಹಾಕಿದರೂ ನಮಗೇಕೆ ಆಹ್ವಾನವಿಲ್ಲ ಎಂದು ಪ್ರಶ್ನಿಸದೇ ಬರುವ ಭಂಡರೂ ಇದ್ದಾರೆ ಎಂಬುದು ಅಷ್ಟೇ ನಿಜ.
ಕರೋನಾ ಸ್ವಲ್ಪ ಕಡಿಮೆಯಾಯಿತು ಎಂದು ಭಾವಿಸಿದ ಕೂಡಲೇ ಎಲ್ಲ ನಿಂತಿದ್ದ ಜಾತ್ರೆಗಳು, ಮದುವೆಗಳು, ಗೃಹ ಪ್ರವೇಶಗಳು, ನಾಟಕ, ಸಿನಿಮಾ, ನಗೆಹಬ್ಬಗಳು, ತಡೆ ಹಿಡಿದ ಜಲಾಶಯದ ನೀರಿನಂತೆ ಧುಮ್ಮಿಕ್ಕಲಾರಂಭಿಸಿ ಗಾಬರಿಯೇ ಹುಟ್ಟಿಸುತ್ತಿವೆ.ಜನಗಳ ಜಾತ್ರೆ, ಕುರಿ ಸಂತೆ, ಕೋಳಿ ಕಾಳಗ, ಇಲ್ಲೆಲ್ಲ ಆಯಾ ಪ್ರಾಣಿಗಳಿಗಿಂತ ಸೇರುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ದನ, ಕುರಿಗಳ ಸಂತೆಯಲ್ಲಿ ಜನರನ್ನು ಬದಿಗೆ ಸರಿಸಿ, ದನ ಕುರಿಗಳನ್ನು ಹುಡುಕಬೇಕಾಗಿದೆ.
ನಿರ್ಜನ, ಪ್ರಶಾಂತ ಸ್ಥಳಗಳು ಎಂಬುವುದೇ ಉಳಿದಿಲ್ಲ. ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರಗಳಲ್ಲೂ ಜನರ ಜಾತ್ರೆ, ಸಂತೆ ಯಷ್ಟೇ ಗದ್ದಲ; ಮುಗಿಲ ನೋಡಲೂ ಮುಗಿಬೀಳುತ್ತಿದ್ದಾರೆ, ಆಕಾಶ ನೋಡಲೂ ನೂಕು ನುಗ್ಗಲು ಮಾಡುತ್ತಿದ್ದಾರೆ, ಕಂಡದ್ದನ್ನು ಖರೀದಿಸುತ್ತಾರೆ, ಸಿಕ್ಕದ್ದನ್ನು ತಿನ್ನುತ್ತಾರೆ, ಕಾಡಿನ ಪ್ರಾಣಿಗಳ ಜತೆಯೂ ಚೆಲ್ಲಾಟವಾಡುತ್ತಾರೆ.
ಧರ್ಮವೆಂಬುದೇ ಇಲ್ಲ, ಕೇವಲ ಅರ್ಥದ ಅಹಂಕಾರ, ಕಾಮದ ತೀವ್ರತೆ, ಮೋಕ್ಷದ ಕಲ್ಪನೆಯ ಗೆರೆ ಕೂಡಾ ಇಲ್ಲ. ಗುಂಪು ಗುಂಪಾಗಿ ಸೇರುವುದು, ತಿಂದು, ಕುಡಿದು, ಕುಣಿತ, ಮಾತಿಗೆ ಮಾತು ಬೆಳೆದು ಜಗಳ, ಪೊಲೀಸರಿಂದ ಲಾಠಿ, ಅದಕ್ಕೆ ಇಂಥವಕ್ಕೆ ಜನಸೇರಿದ್ದರು ಎನ್ನುತ್ತಾರಾಗಲಿ ಮನಗಳ ಮಿಲನ ಎನ್ನುವುದೇ ಇಲ್ಲ. ಜನ ಜನ ಸೇರಿದರೆ ಜಗಳ ಎನ್ನುವುದು ಇದಕ್ಕೆ. ಮನ ಮನಗಳ ಸೇರುವಿಕೆ ಎಂದರೆ ಒಂದೇ ಮನಸ್ಸಿನ ಒಂದೇ ನಿಷ್ಠೆಯ ಸಂತ, ಸಾಧುಗಳ, ಸಜ್ಜನರ, ಸೇರುವಿಕೆಯೇ ಮನ ಮನಗಳ ಮಿಲನ, ಇದಕ್ಕೆ ಹಿಂದಿಯಲ್ಲಿ ಕೆಲವು ಅದ್ಭುತ ಸಾಲುಗಳೇ ಇವೆ.
‘ಚಾರ್ ಮಿಲೆ ಚೌಸಠ್ ಖಿಲೆ, ಬೀಸ್ ರಹೆಕರಜೋಡ್,ಹರಿಭಕ್ತಸೆ ಹರಿಭಕ್ತ ಮಿಲೆ ವೋ ಹಸೆ ಸಾಥ್ಕರೋಡ’ಅರ್ಥ ಹೀಗೆ ಅದ್ಭುತವಾಗಿದೆ ‘ನಾಲ್ಕು ಸೇರುತ್ತವೆ ಅಂದರೆ ಇಬ್ಬರು ಸಂತರು ಸೇರಿದರೆ, ಅವರ ಎರೆಡೆರೆಡು ಕಣ್ಣು ನಾಲ್ಕಾದವು.
ಚೌಸಠ್ ಖಿಲೆ ಅಂದರೆ ಅವರು ನಕ್ಕಾಗ ಬಾಯಿ ತೆರೆಯುತ್ತದೆ, ಅಂದರೆ ಪರಸ್ಪರರ ಮೂವತ್ತೆರೆಡು ಹಲ್ಲುಗಳು ತೆರೆಯುತ್ತವೆ. ಮೂವತ್ತೆರೆಡು ಪ್ಲಸ್ ಮೂವತ್ತೆರೆಡು ಅರವತ್ತನಾಲ್ಕು ಹಲ್ಲುಗಳು ನಗುವಿನಿಂದ ಕಾಣಿಸಿಕೊಳ್ಳುತ್ತವೆ. ಬೀಸ್ ರಹೆ ಕರಜೋಡ್ ಅಂದರೆ ಪರಸ್ಪರ ಕೈಮುಗಿಯುವುದರಿಂದ ಹತ್ತತ್ತು ಬೆರಳುಗಳು ಸೇರಿ ಇಪ್ಪತ್ತು ಬೆರಳುಗಳಾಗುತ್ತವೆ. ಇನ್ನು ಹರಿಭಕ್ತ ಸೆಹರಿಭಕ್ತ ಮಿಲೆ ಸೊ ವೋ ಸಾಥ್ ಕರೋಡ್ ಅಂದರೆ ಸಜ್ಜನರಾದ ಹರಿಭಕ್ತರಿಬ್ಬರೂ ಸಂತೋಷದಿಂದ ಆಲಂಗಿಸಿಕೊಂಡರೆಂದರೆ ಅವರ ಪರಸ್ಪರರ ಮೈಮೇಲಿನ ಮೂರುವರೆ ಕೋಟಿ ರೋಮಗಳು ಆನಂದದಿಂದ ನಿಮಿರಿ ನಿಂತು ಪುಳಕಿತಗೊಂಡುಮೂರೂ ವರೆ ಕೋಟಿ ಪ್ಲಸ್ ಮೂರೂವರೆ ಕೋಟಿ ಒಟ್ಟು ಏಳು ಕೋಟಿ ರೋಮಗಳು ಎದ್ದು ನಿಲ್ಲುತ್ತವೆ.
ಹೀಗಿದೆ ಇದರ ಅರ್ಥ. ಇದಲ್ಲವೆ ಸತ್ಸಂಗದ ಫಲ. ಇದನ್ನೇ, ಮನ ಮನ ಸೇರಿದಲ್ಲಿ ಮಾತು ಅನ್ನೋದು ಇತ್ತೀಚಿನ ದಿನಗಳಲ್ಲಿ ಜನ ಸೇರಿದರೆ ಅದು ಪ್ರೀತಿ, ಪ್ರೇಮ, ಅಭಿಮಾನಗಳ ಮಹಾಪೂರವೇನಲ್ಲ. ಹಣ, ಹೆಂಡ, ಖಂಡ, ತುಂಡುಗಳ ಮಹಾಪೂರ ಹರಿದಿದೆ ಎಂದು ಯಾರಾದರೂ ಊಹಿಸಬಹುದಾಗಿದೆ. ಮದುವೆ, ರಿಸೆಪ್ಷನ್‌ಗೆ ಸೇರಿದ ಜನಸ್ತೋಮ ಕಂಡರಂತೂ ದೊಡ್ಡ ಪಾರ್ಟಿಯೇಇರಬಹುದು ಎಂದು ನಾವು ಊಹಿಸುವ ಹಾಗಿಲ್ಲ, ಏಕೆಂದರೆ ನಾವು ದೊಡ್ಡ ಪಾರ್ಟಿ ಎಂದು ಜನರಿಗೆ ಬಿಂಬಿಸಲೂ ಕಂಡವ ರನ್ನು ಕರೆಯುವ ಪರಂಪರೆ ಶುರುವಾಗಿದೆ.
ಬಂಧು – ಬಳಗದವರಂತೂ ಎಲ್ಲೋ ಕೂತು ಇವರನ್ನು ಆಡಿಕೊಳ್ಳುವ ಕಾಯಕದಲ್ಲಿ ಬಿಜಿಯಾಗಿದ್ದರೆ, ಇನ್ನು ಕೆಲವರು ಎಷ್ಟುಖರ್ಚಾಗಿರಬಹುದು? ಇದನ್ನು ಇವನು ಹೇಗೆ ಗಳಿಸಿದ? ಎಂಬ ಜಿಜ್ಞಾಸೆಯಲ್ಲಿರುತ್ತಾರೆ. ಇಷ್ಟು ಜನರ ಬೆಂಬಲವಿದೆ, ಇವನು ಎಂ.ಎಲ್.ಎ. ಎಲೆಕ್ಷನ್‌ಗೆ ನಿಲ್ಲಬಹುದೇನೋ ಎಂದು ಊಹಿಸುತ್ತಿದ್ದರೆ, ಸಾಮಾನ್ಯ ಜನ ಮಾಡಿದ್ದನ್ನೆಲ್ಲ ಹಾಕಿಸಿಕೊಂಡುರುಚಿ ನೋಡುತ್ತಾ, ಲಗ್ನ ಯಾರದೋ, ವಧು – ವರರು ಎಲ್ಲೆಲ್ಲಿಯವರೋ ಎಂಬುದನ್ನು ನೋಡಿರದೇ ಅಸಲಿಗೆ ತಾವು ಯಾರ ಕಡೆಯಿಂದ ಔತಣಕ್ಕೆ ಬಂದಿದ್ದೆವೋ ಎಂಬುದೂ ತಿಳಿಯದೆ, ಅಂದಿಗಂದಿನ ಅನ್ನ ಸಂಧಿಸುತ್ತಿರಲಿ ಶಕ್ತಿ ಎಂದು ಬಾಯಿ ಚಪ್ಪರಿಸುತ್ತಿರುತ್ತಾರೆ.
ಸಂಸ್ಕೃತದಲ್ಲಿ ಮದುವೆಗೆ ಸೇರುವ ಗುಣಗಳ ಬಗ್ಗೆಯೇ ಸುಂದರ ಸುಭಾಷಿತವಿದೆ. ‘ಒಂದು ಮದುವೆಯಲ್ಲಿ ತಂದೆ ಅಳಿಯನ ಗಳಿಕೆನೋಡಿದರೆ, ತಾಯಿ ಅಳಿಯನ ಗುಣ ನೋಡುತ್ತಾಳೆ, ಕನ್ಯೆಯಾದವಳು ವರನ ರೂಪ ನೋಡಿ ಮೆಚ್ಚಿದ್ದರೆ, ಬಂಧು – ಬಳಗದವರು ವರ ತಮ್ಮ ಕುಲದವನಲ್ಲವೇ? ಎಂದು ನೋಡುತ್ತಾರೆ. ಆದರೆ ಊರ ಜನ ಮದುವೆ ಊಟವನ್ನು ಮಾತ್ರ ಮೆಚ್ಚುತ್ತಾರೆ’ ಅಷ್ಟೆ. ಹಾಗೆ ಜನ ಸಂದಣಿ ಜನ ಎಂದಿಗೂ ನೆರೆ ಬಂದಂತೆ ಬಂದು ಸರಿದು ಹೋಗುತ್ತಾರೆಂಬುದು ಅಷ್ಟೆ ಸತ್ಯ.
ಇನ್ನು ಸ್ಟ್ರೆ ಕ್, ಮುಷ್ಕರ, ಬಂದ್ ಮಾಡಿಸಲು ಸೇರುವ ಜನರಂತೂ ತಮಗೆ ಸೈಕಲ್ ತೆಗೆದುಕೊಳ್ಳಲು ಗತಿ ಇರದಿದ್ದರೂ, ಬೇರೆಯವರ ಮನೆಯ ಮುಂದೆ ನಿಂತ ಅವರ ಕಾರುಗಳನ್ನು, ದ್ವಿಚಕ್ರವಾಹನಗಳನ್ನು ಕುಟ್ಟಿ ಪುಡಿ ಮಾಡಲು ತುದಿಗಾಲ ಮೇಲೆ ಓಡಿ ಬರುತ್ತಾರೆ. ಜನವೆಂಬುವವರು ಈ ದೇಶದಲ್ಲಿ ಗಿಜಿಗುಟ್ಟುತ್ತಿದ್ದಾರೆ, ವಿದ್ಯೆಯ ಕೊರತೆಯೋ, ಸಂಸ್ಕಾರವಿಲ್ಲದ್ದಕ್ಕೋ, ದೇಶಾಭಿಮಾನವಿರದ್ದಕ್ಕೊ, ರಾಜಕೀಯ ನಾಯಕರ ದುಷ್ಟ ಪ್ರೇರಣೆಯಿಂದಲೋ ಕಟ್ಟುವುದಕ್ಕಿಂತ ಕೊಚ್ಚಿ ಕೊಲ್ಲಲು, ಕುಟ್ಟಿ ಪುಡಿ ಮಾಡಲು ಮಾತ್ರ ಓಡಿ ಬರುತ್ತಿದ್ದಾರೆ.
ಅದೇ, ಸಜ್ಜನರು ಜನರಂತೆ ಗುಂಪಾಗಿ ಸೇರಿದರೂ ಅವರ ಮನಗಳೆಲ್ಲ ಒಂದೇ ಆಗಿರುತ್ತವೆ. ಇಲ್ಲಿ ಮನವೆಂದರೆ ಇವರು ಹುಡುಕಿಕೊಂಡು ಬರುವವರು. ಅದೇ ಒಂದೇ ರೀತಿ ಕಾಣುವ ಜನಗಳು ಹಿಡಿದುಕೊಂಡು ಬರುವವರು. ರಾಜಕೀಯ ಸಭೆಗಳಿಗೆ, ಮುಷ್ಕರಕ್ಕೆ, ಬಂದ್‌ಗೆ ಬರುವವರನ್ನು ವಾಹನಗಳಲ್ಲಿ ಕೊಂಡು ತಂದಿರುತ್ತಾರೆ. ಆದರೆ, ಅದೇ ಮನಗಳನ್ನು? ಅವರೇ ಹುಡುಕಿ ಕೊಂಡು ಬಂದಿರುತ್ತಾರೆ. ಒಂದು ಉದ್ದೇಶಕ್ಕೆ ಸೇರಿರುತ್ತಾರೆ.
ಉಂಬಳ, ಸಂಬಳಕ್ಕಲ್ಲ. ಶ್ರೀಪ್ರಭಾಕರ ಶಾಸ್ತ್ರಿಗಳು ಬರೆದ ಪುಸ್ತಕ ಬೃಹತ್ ಸಂಸ್ಕೃತ ಸುಭಾಷಿತ ಭಂಡಾರದಲ್ಲಿ ಸಜ್ಜನ, ದುರ್ಜನರ ವರ್ಣನೆ ಸೊಗಸಾಗಿ ಮೂಡಿಬಂದಿದೆ.
೧.ಸಜ್ಜನರ ಗುಣಗಳನ್ನು, ಸ್ವಭಾವಗಳನ್ನು ದುರ್ಜನರು ಎಂದಿಗೂ ನಾಶ ಮಾಡುವುದಿಲ್ಲ. ಬೆಳದಿಂಗಳ ಬೆಳಕನ್ನು ಬಿರುಗಾಳಿಯು ಎಂದಿಗೂ ಹಾರಿಸಿಕೊಂಡು ಹೋಗಲು ಸಾಧ್ಯವಿಲ್ಲ.
೨.ಸಜ್ಜನರೆಂದರೆ ಕಾಡಿನಲ್ಲಿರೋ ಶ್ರೀಗಂಧದ ಮರಗಳ ಹಾಗೆ ಒಂದಕ್ಕೊಂದು ತಿಕ್ಕಿದರೂ, ಶ್ರೀಗಂಧದ ಸುವಾಸನೆ ಹರಡುತ್ತದೆ. ಅದೇ ದುರ್ಜನರು ಬಿದಿರು ಮರಗಳ ಹಾಗೆ, ಪರಸ್ಪರ ತಿಕ್ಕಿದರೆ ಬೆಂಕಿಯೇ ಹತ್ತಿಕೊಂಡು ಕಾಡನ್ನೆಲ್ಲ ಸುಡುತ್ತವೆ.
೩.ಸ್ವಾರ್ಥಿ ಮನುಜರು ಬಾವಿಯ ಏತವಿದ್ದಂತೆ. ಏತವು ನೀರು ತುಂಬಿಕೊಳ್ಳುವಾಗ ಬಾಗುತ್ತದೆ. ತುಂಬಿಕೊಂಡ ಮೇಲೆ ನೆಟ್ಟಗೆ ನಿಲ್ಲುತ್ತದೆ. ಸ್ವಾರ್ಥಿಗಳು ಬಾಗುವುದು ತಮ್ಮ ಸ್ವಾರ್ಥಕ್ಕೇ.
೪.ಕೆಟ್ಟ ಜನರು ಬಿರುಗಾಳಿ ಇದ್ದಂತೆ. ಮರವನ್ನು ಸಲೀಸಾಗಿ ನೆಲಕ್ಕುಳಿಸುತ್ತಾರೆ, ಅದೇ ಸಸಿಯನ್ನು ಮತ್ತೆ ಮರವನ್ನಾಗಿ ಬೆಳೆಸುವ, ಮರವನ್ನು ಎತ್ತಿ ನಿಲ್ಲಿಸುವ ತಾಕತ್ತು ಅವರಿಗಿಲ್ಲ.
೫.ಸಜ್ಜನರು ಎಂದಿಗೂ ತಮ್ಮ ಗುಣ, ಸ್ವಭಾವ ಗಳನ್ನು ಬಿಡುವುದಿಲ್ಲ. ಹೇಗೆಂದರೆ, ಹಿಮಗಡ್ಡೆಯು ಸೂರ್ಯನ ತಾಪದಿಂದ ತನ್ನ ಆಕಾರ ಕಳೆದುಕೊಂಡು ನೀರಾದರೂ, ಆ ನೀರಿನಲ್ಲಿ ತನ್ನ ತಂಪನ್ನು ಉಳಿಸಿಕೊಂಡಂತೆ.
೬.ದುರ್ಜನರು ನೀರಿನ ಮೇಲಿನ ತುಪ್ಪದಂತೆ, ಇದ್ದಲ್ಲೇ ಇರುತ್ತಾರೆ. ಆದರೆ ಸಜ್ಜನರು ಎಣ್ಣೆಯಂತೆ ನೀರ ಮೇಲೆ ಬಿದ್ದರೆ ತಕ್ಷಣ ನೀರ ತುಂಬಾ ಪಸರಿಸುತ್ತಾರೆ.
೭.ಮೋಡಗಳು ಸಮುದ್ರದ ಉಪ್ಪನ್ನು ಕುಡಿದರೂ, ಮಳೆಯ ಮೂಲಕ ಸಿಹಿನೀರನ್ನೇ ಜಗತ್ತಿಗೆ ಕೊಡುತ್ತವೆ. ಹಾಗೆಯೇ ಸಜ್ಜನರು ಸಮಾಜದ ಟೀಕೆಗಳನ್ನು ಎದುರಿಸಿ ಕೇಳಿದರೂ, ಜನರಿಗೆ ಸದ್ವಿಚಾರಗಳನ್ನೇ ಹೇಳುತ್ತಾರೆ.
೮.ಕೆಟ್ಟ ಜನರ ಸ್ನೇಹ ಎಂದಿಗೂ ಕೆಟ್ಟದ್ದೇ, ಅವರು ಬೀದಿನಾಯಿಗಳು, ಬೀದಿ ನಾಯಿ ಕಚ್ಚಿದರೂ ಕಷ್ಟ, ನೆಕ್ಕಿದರೂ ಅಸಹ್ಯ, ಅಲ್ಲವೇ?
೯.ಬೊಗಳೆ ಮಾತಾಡುವ ಮನುಷ್ಯ, ಹಾಲು ಕೊಡದ ಹಸುವಿನಂತೆ, ಕೊರಳಲ್ಲಿ ದೊಡ್ಡ ಗಂಟೆ ಕಟ್ಟಿಕೊಂಡರೆ ಹಸುವಿಗೆ ಯಾರೂ ಬೆಲೆ ಕೊಡುವುದಿಲ್ಲ. ಸಮಾಜಕ್ಕೆ ಹಾಲು ಕೊಡುವ ಹಸುವಾಗಬೇಕು.
೧೦.ಕೊನೆಯದಾಗಿ, ನಾನು ತೀರಾ ಕೆಳಗಿದ್ದೇನೆ ಎಂದೂ ಕೊರಗಬಾರದು, ಶ್ರೇಷ್ಠನೆಂದೂ ಬೀಗಬಾರದು. ಸದ್ಗುಣಗಳನ್ನು ಬೆಳೆಸಿಕೊಂಡು ಸಮಾಜಮುಖಿ ಆಗಿದ್ದೇ ಆದರೆ, ನೂರಾರು ಅಡಿ ಕೆಳಗೆ ಇರುವ ಬಾವಿಯ ಸಿಹಿ ನೀರನ್ನು ಜನ ಹಗ್ಗಕ್ಕೆ ಬಿಂದಿಗೆ ಕಟ್ಟಿ ತುಂಬಿಕೊಂಡು ಕುಡಿಯುವಂತೆ ನಿಮ್ಮನ್ನು ಬಂದು ಹುಡುಕಿ ಸೇವಿಸುತ್ತಾರೆ. ಜನವಾಗುತ್ತಿರೋ? ಮನವಾಗುತ್ತಿರೋ ಆಯ್ಕೆನಿಮ್ಮದು..