ವಿಚಾರವಾದಿ ಸಿದ್ದರಾಮಯ್ಯ ಆಸ್ತಿಕರೂ ಹೌದು
ಬೇಟೆ
ಜಯವೀರ ವಿಕ್ರಮ ಸಂಪತ್ ಗೌಡ, ಅಂಕಣಕಾರರು
ಮೊನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಪೂರ್ಣಪ್ರಜ್ಞ ಲೇಔಟ್ ನಲ್ಲಿರುವ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗುತ್ತಾರಂತೆ ಎಂಬ ಸುದ್ದಿ ನಮ್ಮ ಸಂಪಾದಕರಾದ ವಿಶ್ವೇಶ್ವರ ಭಟ್‌ರಿಂದ ಗೊತ್ತಾಯಿತು. ಏನೇ ಆಗಲಿ, ಈ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳಬಾರದು ಎಂದು ನಿರ್ಧರಿಸಿದೆ. ಇದಕ್ಕೆ ಕಾರಣವೂ ಇತ್ತು. ನನ್ನಲ್ಲಿ ಒಂದಷ್ಟು ಕುತೂಹಲವಿತ್ತು, ಪ್ರಶ್ನೆಗಳೂ ಇದ್ದವು.
ಸಿದ್ದರಾಮಯ್ಯನವರು ಮಠ – ಮಾನ್ಯಗಳಿಗೆ, ದೇವಸ್ಥಾನಗಳಿಗೆ ಮುಗಿಬಿದ್ದು ಹೋಗುವವರಲ್ಲ ಎಂದು ಕೇಳಿದ್ದೆ. ಅವರು ಪೀಠಾಧಿಪತಿಗಳಿಗೆ, ಜಗದ್ಗುರುಗಳಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡುವವರಲ್ಲ. ಸ್ವಾಮೀಜಿಗಳ ಪಾದಕ್ಕೆರಗಿದ ಫೋಟೋಗಳು ಇರಲಿಕ್ಕಿಲ್ಲ. ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ, ಮಠ – ಮಾನ್ಯಗಳಿಗೆ ಹೋಗಿದ್ದು ಬಹಳ ಕಡಿಮೆ. ಆಗಲೋ, ಈಗಲೋ ಸುತ್ತೂರು ಮಠಕ್ಕೆ ಹೋಗಿದ್ದುಂಟು. ಅವರ ಮೂಲಮೈಸೂರು ಜಿಯಾಗಿದ್ದರಿಂದ ಆ ಮಠಕ್ಕೆ ಹೋಗುತ್ತಿದ್ದಿರ ಬಹುದು. ಅದನ್ನು ಬಿಟ್ಟರೆ, ಅವರು ಸಿದ್ದಗಂಗಾಮಠಕ್ಕೆ ಹೋಗಿದ್ದನ್ನು ನಾನು ನೋಡಿದ್ದೇನೆ. ಆ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದಾಗ, ಅವರು ಅಲ್ಲಿಗೆ ಹೋಗಿದ್ದರು.
ಚಿತ್ರದುರ್ಗದ ಮುರುಘಾ ಮಠಕ್ಕೆ ಹೋಗಿದ್ದು ಬಲ್ಲೆ. ಅಷ್ಟೇ.  ಅದನ್ನು ಬಿಟ್ಟರೆ, ಅವರು ಮಠ-ಮಾನ್ಯಗಳಿಗೆ ‘ಡಿಕ್ಕಿ’ ಹೊಡೆದಿದ್ದು ಇಲ್ಲವೇ ಇಲ್ಲ ಎನ್ನಬೇಕು. ಮುಖ್ಯಮಂತ್ರಿಯಾಗಿದ್ದಾಗ ಧರ್ಮಸ್ಥಳಕ್ಕೆಹೋಗಿದ್ದರು. ಅದೂ ವಿವಾದಕ್ಕೆ ಕಾರಣವಾಗಿತ್ತು. ಅವರು ಅಲ್ಲಿಗೆ ಹೋಗುವ ಮುನ್ನ ಮೀನಿನಊಟ ಮಾಡಿ ಹೋಗಿದ್ದರು. ಸಿದ್ದರಾಮಯ್ಯ ಮೀನು ತಿಂದು ದೇವಸ್ಥಾನ ಮೈಲಿಗೆ ಮಾಡಿದರು ಎಂದು ದೊಡ್ಡ ರಾದ್ಧಾಂತವೇ ಆಯಿತು. ಅವರು ಮೀನು ತಿಂದಿದ್ದನ್ನು ಹೇಳಬೇಕಿರಲಿಲ್ಲ. ಹೇಳದಿದ್ದರೂ ನಡೆದು ಹೋಗುತ್ತಿತ್ತು.
ಆದರೆ ಸಿದ್ದರಾಮಯ್ಯ ಅದನ್ನು ಮುಚ್ಚಿಡಲಿಲ್ಲ. ಮೀನನ್ನು ತಿಂದರೆ, ತಿಂದಿದ್ದೇನೆ ಎಂದು ಹೇಳಲು ಯಾಕೆ ಸಂಕೋಚಪಡಬೇಕು, ಅಷ್ಟಕ್ಕೂ ಅದೇನು ಅಪರಾಧವಾ ಎಂದು ನಿಜ ನುಡಿದರು. ‘ಹೌದು, ನಾನು ಮೀನು ತಿಂದಿದ್ದು, ಅದೇನುತಪ್ಪು?’ ಎಂದು ಕೇಳಿದ್ದನ್ನೇ ಅವರ ವಿರೋಧಿಗಳು ದೊಡ್ಡ ವಿವಾದ ಮಾಡಿದರು. ಅಷ್ಟೇ ಅಲ್ಲ, ಇದನ್ನೇ ಚುನಾವಣೆ ವಿಷಯವಾಗಿಯೂ ಮಾಡಿದರು. ಸಿದ್ದರಾಮಯ್ಯ ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಮನುಷ್ಯನ ಆಹಾರಕ್ಕೂ, ಅವನು ಮಾಡುವ ಕೆಲಸಗಳಿಗೂ ಸಂಬಂಧವಿಲ್ಲ ಎಂದರು. ಪ್ರಾಯಶಃ ಸಿದ್ದರಾಮಯ್ಯನವರ ಜಾಗದಲ್ಲಿ ಮೀನು ತಿನ್ನುವ ಬೇರೆ ರಾಜಕಾರಣಿ ಇದ್ದಿದ್ದರೆ, ಮೀನು ತಿಂದಿಲ್ಲ ಎಂದೇ ಸುಳ್ಳು ಹೇಳುತ್ತಿದ್ದರು.
ಅದೂ ಧರ್ಮಸ್ಥಳ ಶ್ರೀಮಂಜುನಾಥ ದೇವರ ಸನ್ನಿಧಿಗೆ ಹೋಗುವಾಗ, ಮೀನು ತಿಂದಿದ್ದೇನೆ ಎಂದು ಯಾರೂ ಹೇಳುತ್ತಿರಲಿಲ್ಲ. ಮೀನೂ ಬೇಕು, ಮಂಜುನಾಥನೂ ಬೇಕು ಎಂದು ಹೇಳುವ ಎದೆಗಾರಿಕೆಯನ್ನು ಯಾರೂ ಪ್ರದರ್ಶಿಸುತ್ತಿರಲಿಲ್ಲ. ಅಂದು ಮಂಜುನಾಥ ಮತ್ತು ಮೀನಿನ ಬಗ್ಗೆ ವಿವಾದ ಎದ್ದಾಗ, ನನಗೆ ಇಷ್ಟವಾಗಿದ್ದು ಸಿದ್ದರಾಮಯ್ಯನವರ ಬೂಟಾಟಿಕೆ ರಹಿತ, ನಿಷ್ಕಪಟ ನಡೆ. ಕಾರಣ ಬುದ್ಧಿವಂತ ರಾಜಕಾರಣಿ ಮೀನು ತಿಂದರೂ ತಿಂದಿದ್ದೇನೆ ಎಂದು ಹೇಳುವುದಿಲ್ಲ. ತಮ್ಮ ಮಾತು ವಿವಾದ ಸೃಷ್ಟಿಸಬಹುದು ಎಂಬುದನ್ನು ಅರಿಯದಷ್ಟು ಸಿದ್ದರಾಮಯ್ಯನವರು ಅಮಾಯಕರೇನಲ್ಲ. ಆದರೂ ಅಂದು ಅವರು ನೇರಾನೇರ ಹಾಗೆ ಹೇಳಿದ್ದರು.
ದನದ ಮಾಂಸ ಸೇವನೆ ವಿಷಯದಲ್ಲಿಯೂ ಸಿದ್ದರಾಮಯ್ಯನವರ ನಿಲುವು ಏನೆಂಬುದು ಗೊತ್ತಿದೆ. ‘ನಾನು ಇಲ್ಲಿಯ ತನಕ ಗೋಮಾಂಸ ತಿಂದಿಲ್ಲ. ತಿನ್ನಬೇಕು ಎಂದು ಅನಿಸಿದಾಗ, ಖಂಡಿತವಾಗಿಯೂ ತಿನ್ನುತ್ತೇನೆ. ನಾನು ಏನು ತಿನ್ನಬೇಕು, ತಿನ್ನಬಾರದು ಎಂಬುದನ್ನು ನಿರ್ಧರಿಸುವ ಹಕ್ಕನ್ನು ನಾನು ಬೇರೆಯವರಿಗೆ ನೀಡಿಲ್ಲ. ಗೋಮಾಂಸ ತಿನ್ನುವುದು ಕೆಲವರ ಆಹಾರ ಪದ್ಧತಿ. ಅದನ್ನು ಬೇರೆಯವರೇಕೆ ಪ್ರಶ್ನಿಸಬೇಕು? ತಿನ್ನದವರು ತಿನ್ನದೇ ತಮ್ಮ ವ್ರತವನ್ನು ಪಾಲಿಸಲಿ, ಅದಕ್ಕೆ ನನ್ನ ವಿರೋಧವಿಲ್ಲ. ಅದೇ ರೀತಿ ತಿನ್ನುವವರ ವ್ರತಕ್ಕೆ ಭಂಗವನ್ನುಂಟು ಮಾಡಬೇಡಿ’ ಎಂದು ಅವರು ಹಲವು ಸಲ ಹೇಳಿದ್ದನ್ನು ಕೇಳಿರಬಹುದು. ಈ ವಿಷಯದಲ್ಲೂ ಅವರದ್ದು ಬೂಟಾಟಿಕೆ ಇಲ್ಲದ, ನೇರ ಮತ್ತು ಸ್ಪಷ್ಟ ನಿಲುವು.
ಅದೇ ರೀತಿ ಅವರು ತಾನು ದೇವರ ವಿರೋಧಿ, ನಾಸ್ತಿಕ ಎಂದು ಎಲ್ಲೂ ಹೇಳಿಕೊಂಡಿಲ್ಲ. ದೇವರನ್ನು ನಂಬುವುದು, ಬಿಡುವುದು ವೈಯಕ್ತಿಕ ವಿಚಾರ ಎಂದೇ ಅವರು ಹತ್ತಾರು ಸಲ ಪ್ರತಿಪಾದಿಸಿದ್ದುಂಟು. ಹೀಗಾಗಿ ಸಿದ್ದರಾಮಯ್ಯನವರು ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗುತ್ತಾರೆ ಎಂದಾಗ, ನನ್ನ ಮನಸ್ಸಿನಲ್ಲಿ ಸಹಜವಾಗಿ ಕುತೂಹಲವುಂಟಾಯಿತು. ನಾನು ನನ್ನ ಪಾಡಿಗೆ ಸುಮ್ಮನೆ ಮಠದ ಒಂದು ಮೂಲೆಯಲ್ಲಿ ಇದ್ದೆ, ಎಲ್ಲವನ್ನೂ ಗಮನಿಸುತ್ತಿದ್ದೆ. ಸಿದ್ದರಾಮಯ್ಯನವರು ಸಾಯಂಕಾಲ ಏಳು ಗಂಟೆಯ ಹೊತ್ತಿಗೆ ತಮ್ಮ ಸ್ನೇಹಿತರೊಡಗೂಡಿ ಮಠಕ್ಕೆ ಬಂದರು.
ವಾದ್ಯಗೋಷ್ಠಿ, ಪುರೋಹಿತರ ಮಂತ್ರಘೋಷ ಗಳೊಂದಿಗೆ ಅವರನ್ನು ಬರಮಾಡಿಕೊಳ್ಳಲಾಯಿತು. ನೇರವಾಗಿ ಅವರನ್ನು ಶ್ರೀರಾಘವೇಂದ್ರ ಸ್ವಾಮಿಗಳಬೃಂದಾವನದ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸಿದರು. ರಾಯರ ಪೂಜೆ ನೆರವೇರಿತು. ಸಿದ್ದರಾಮಯ್ಯನವರು ರಾಯರಿಗೆ ನಮಸ್ಕಾರ ಮಾಡಿದರು. ಅರ್ಚಕರು ತುಪ್ಪದ ದೀಪ ಹಚ್ಚಿದ ಬಟ್ಟಲನ್ನು ಅವರ ಮುಂದೆ ಹಿಡಿದರು. ಸಿದ್ದರಾಮಯ್ಯನವರು ಅದನ್ನು ರಾಯರಿಗೆ ಎತ್ತಿ ಆರತಿ ಬೆಳಗಿದರು. ಅವರ ಎರಡೂ ಕೈಗಳಿಗೆ ಚಾಮರಗಳನ್ನು ಕೊಟ್ಟರು. ಅವರು ಅದನ್ನು ಎತ್ತಿ ಬೀಸಿದರು.
ಆರತಿ ತಟ್ಟೆಗೆ ನೋಟುಗಳನ್ನು ಇಟ್ಟರು. ಹುಂಡಿಗೂ ಹಾಕಿದರು. ಚಾಮರ ಸೇವೆಯ ನಂತರ, ಅವರನ್ನು ಸುಬ್ರಮಣ್ಯ ದೇವರ ಮುಂದೆ ಕರೆದುಕೊಂಡು ಹೋದಾಗ, ಅವರ ಕೈಗಿತ್ತ ಆರತಿಯನ್ನು ಬೆಳಗಿದರು. ಆನಂತರ ಶಕ್ತಿಗಣಪತಿಯ ವಿಗ್ರಹಕ್ಕೂ ಆರತಿ ಬೆಳಗಿದರು. ಬಳಿಕ ನವಗ್ರಹಗಳ ಸುತ್ತ ಒಂದು ಪ್ರದಕ್ಷಿಣೆ ಹಾಕಿ, ಅಲ್ಲಿಯೂ ಆರತಿಎತ್ತಿ ನಮಸ್ಕರಿಸಿದರು. ಪುರೋಹಿತರು ಮೂರು ಸಲ ತೀರ್ಥ ನೀಡಿದಾಗ ಗುಳಿಹಸ್ತ ಮಾಡಿ, ಕುಡಿದರು. ಹೂವಿನ ಎಸಳನ್ನುತಲೆಗೇರಿಸಿಕೊಂಡರು. ಅನಂತರ ಅವರನ್ನು ಪಕ್ಕದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಗೆ ಕರೆದುಕೊಂಡು ಹೋಗಿಸನ್ಮಾನಿಸಲಾಯಿತು.
ಸಭೆಯನ್ನುದ್ದೇಶಿಸಿ ಸಿದ್ದರಾಮಯ್ಯ ನವರು ಮಾತಾಡಿದರು – ದೇವರಲ್ಲಿ ನಿರ್ಮಲಭಕ್ತಿಯಿರುವವರು ನಿಜವಾದ ಭಕ್ತರು. ಆಷಾಢಭೂತಿತನದ ಭಕ್ತಿಇರಬಾರದು. ಅದನ್ನು ದೇವರು ಸಹಿಸುವುದಿಲ್ಲ. ನಾನು ದೇವರಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ನನ್ನ ದೃಷ್ಟಿಯಲ್ಲಿ ದೇವರು ಇದ್ದಾನೆ. ದೇವನೊಬ್ಬ ನಾಮಹಲವು ಅಂತಲೂ ನಾನು ಅಂದುಕೊಂಡಿದ್ದೇನೆ. ದೇವರು ಎಲ್ಲಾ ಕಡೆ ಇದ್ದಾನೆ. ಎಲ್ಲರಲ್ಲೂ ಇದ್ದಾನೆ. ನಾವು ದಿನ ನಿತ್ಯ ಮಾಡುವಕೆಲಸ ಗಳನ್ನು ದೇವರು ನೋಡುತ್ತಾನೆ. ನೀವು ದೇವಸ್ಥಾನಕ್ಕೆ ಹೋಗಲೇಬೇಕೆಂದಿಲ್ಲ. ಬೇರೆಯವರಿಗೆ ಒಳ್ಳೆಯದನ್ನು ಮಾಡುವುದನ್ನು ಕಲಿತುಕೊಂಡರೆ ಅದನ್ನು ದೇವರು ಮೆಚ್ಚುತ್ತಾನೆ.
ದೇವಸ್ಥಾನಕ್ಕೆ ಬಂದು ಕೈಮುಗಿದು ಕೆಟ್ಟ ಕೆಲಸ ಮಾಡುವುದನ್ನು ಯಾವ ದೇವರೂ ಒಪ್ಪುವುದಿಲ್ಲ. ಮೂಲತಃ ನಾವೆ ಮನುಷ್ಯರು. ಮನುಷ್ಯರು ಪರಸ್ಪರಒಬ್ಬರಿಗೊಬ್ಬರು ಪ್ರೀತಿ – ವಿಶ್ವಾಸದಿಂದ ಇರುವುದನ್ನೇ ದೇವರು ಬಯಸುವುದು. ಯಾರನ್ನೂ ಕೀಳಾಗಿ ನೋಡುವುದನ್ನು ದೇವರು ಒಪ್ಪುವುದಿಲ್ಲ. ಇನ್ನೊಬ್ಬರಿಗೆ ಕೆಡುಕನ್ನು ಬಯಸದಿರುವುದು, ಇನ್ನೊಬ್ಬರನ್ನು ಗೌರವಿಸುವುದು, ಅವರೂ ನಮ್ಮಂತೆಯೇ ಎಂದು ಭಾವಿಸುವುದು, ಎಲ್ಲರನ್ನೂ ಸಮಾನವಾಗಿ ಕಾಣುವುದನ್ನೇ ಧರ್ಮ ಎಂದು ನಾನು ನಂಬಿದ್ದೇನೆ. ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ನಾವು ಹುಟ್ಟುವಾಗ ವಿಶ್ವಮಾನವ ರಾಗಿರುತ್ತೇವೆ, ಬೆಳೆಯುತ್ತಾ ಬೆಳೆಯುತ್ತಾ ಅಲ್ಪ ಮಾನವರಾಗುತ್ತೇವೆ. ಹೀಗಾಗಿ ನಾವು ವಿಶ್ವ ಮಾನವರಾಗಬೇಕೇ ಹೊರತು ಅಲ್ಪ ಮಾನವರಾಗಬಾರದು.ಇದನ್ನೇ ದೇವರು ಬಯಸುವಂಥದ್ದು, ಗುರು ರಾಘವೇಂದ್ರಸ್ವಾಮಿಗಳು ಬಯಸುವಂಥದ್ದು.
ನನ್ನ ಮಗ ದೇವರನ್ನು ಪೂಜಿಸುತ್ತಾನೆ. ವಾರಕ್ಕೊಂದು ದಿನ ಉಪವಾಸ ಮಾಡುತ್ತಾನೆ. ನನ್ನ ಹೆಂಡತಿಯೂ ದೇವಭಕ್ತೆ. ಮಂತ್ರಾಲಯಕ್ಕೆ ಆಗಾಗ ಹೋಗುತ್ತಾಳೆ. ನಾನು ದೇವರಮನೆ ಕಡೆ ಹೋಗೊಲ್ಲ, ಒಂದು ದಿನವೂ ಕುಳಿತು ಪೂಜೆ ಮಾಡಿದವನಲ್ಲ. ನಾನು ದೇವರಮನೆಯತ್ತ ಸುಳಿಯುವುದೇಇಲ್ಲ. ಹಾಗಂತ ನಾನು ದೇವರ ವಿರೋಧಿ ಅಲ್ಲ. ನಾಸ್ತಿಕನೂ ಅಲ್ಲ. ದೇವರು ನನ್ನೊಳಗೇ ಇದ್ದಾನೆ ಎಂದು ತಿಳಿದುಕೊಂಡಿದ್ದೇನೆ. ಇಲ್ಲಿ ತನಕ ದೇವರು ನನಗೆ ಒಳ್ಳೆಯದನ್ನೇ ಮಾಡಿದ್ದಾನೆ. ಕೆಟ್ಟದ್ದನ್ನು ಮಾಡಿಲ್ಲ. ದೇವರನ್ನು ಧಾರ್ಮಿಕವಾಗಿ ಆರಾಧಿಸುವುದಿಲ್ಲ. ನನ್ನ ಕೆಲಸವೇ ನನ್ನಲ್ಲಿ ದೈವತ್ವ ಕರುಣಿಸುತ್ತದೆ ಎಂದು ನನ್ನ ಅರಿತುಕೊಂಡಿದ್ದೇನೆ. ಹೀಗಾಗಿ ನಾನು ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತೇನೆ.
ಇದಕ್ಕಿಂತ ಮಿಗಿಲಾದ ಆಸ್ತಿಕತೆ ಎಂಬುದಿಲ್ಲ. ಇಷ್ಟು ಅರಿತುಕೊಂಡರೆ ದೇವರ ಪ್ರೀತಿಗೆ ಪಾತ್ರವಾಗಬಹುದು. ನಾನು ದೈವಭಕ್ತ ಎಂದು ಹೇಳಿಕೊಂಡು ಕೆಟ್ಟ ಕೆಲಸ ಮಾಡಿದರೆ ಅದರಿಂದ ಏನೂ ಪ್ರಯೋಜನವಿಲ್ಲ. ಅಂಥವರದ್ದು ಹುಸಿ ಆಸ್ತಿಕತೆ. ಇದರಿಂದ ದೇವರು ಮೆಚ್ಚುವುದಿಲ್ಲ. ನೀವು ಆಸ್ತಿಕ ಎಂದು ಹಣೆಪಟ್ಟಿ ಅಂಟಿಸಿಕೊಳ್ಳಬೇಕಿಲ್ಲ. ನಿಮ್ಮ ಕರ್ಮವೇ ಅದನ್ನು ಹೇಳಬೇಕು. ನಾನು ನನ್ನ ಇಲ್ಲಿಯವರೆಗಿನ ಜೀವನದಲ್ಲಿ ನಂಬಿಕೊಂಡು ಬಂದ ತತ್ವ, ಸಿದ್ಧಾಂತವಿದು. ಇದರಿಂದ ನನಗೆ ಒಳ್ಳೆಯದಾಗಿದೆ. ನನ್ನನಂಬಿಕೆ ನನ್ನದು.
ಕೆಲವರು ನಾನು ನಾಸ್ತಿಕ ಎಂದು ಹುಸಿ ಪ್ರಚಾರ ಮಾಡಿದ್ದನ್ನು ಕೇಳಿರಬಹುದು. ಅಂಥವರಿಗೆ ನಾನು ಉತ್ತರಿಸಲು ಹೋಗುವುದಿಲ್ಲ. ಕಾರಣ, ನಾನು ನಂಬಿದ ದೇವರು ನನ್ನೊಳಗಿರುವಾಗ ನಾನೇಕೆ ಅದನ್ನು ಎಲ್ಲರಿಗೂ ತೋರಿಸಲಿ? ಅಂದು ಸಿದ್ದರಾಮಯ್ಯ ಮುಕ್ತವಾಗಿ ಮಾತಾಡಿದರು. ತಮ್ಮ ದೃಷ್ಟಿ ಯಲ್ಲಿ ಆಸ್ತಿಕತೆ ಅಂದರೆ ಏನು ಎಂಬುದನ್ನು ಸ್ಪಷ್ಟಪಡಿಸಿದರು. ತಾನು ಪರಮ ಆಸ್ತಿಕ, ದೇವರನ್ನು ನಂಬುತ್ತೇನೆ ಎಂಬುದನ್ನು ಪುನರುಚ್ಚರಿಸಿದರು. ಅವರ ಮಾತಿನಲ್ಲಿ ಕೃತಕತೆ, ಪ್ರದರ್ಶನಶೀಲತೆಯ ಲವಲೇಶವೂ ಇರಲಿಲ್ಲ. ದೇವರು ಇಲ್ಲ ಎಂದು ನಾನು ಎಂದೂ ಹೇಳಿಲ್ಲ ಎಂಬುದನ್ನೂ ಹೇಳಿದರು. ಆದರೆ ದೇವರು ನಮ್ಮೊಳಗಿದ್ದಾನೆ, ಎಲ್ಲರೊಳಗೂ ಇzನೆ. ಆದ್ದರಿಂದ ಬೇರೆಯವರನ್ನು ಗೌರವದಿಂದ, ಸಮಾನತೆಯಿಂದ ಕಾಣಬೇಕು, ಇದಕ್ಕಿಂತದೊಡ್ಡ ಜೀವನಧರ್ಮ ಇಲ್ಲ ಎಂಬುದನ್ನುಪ್ರತಿಪಾದಿಸಿದರು.
ದೇವರನ್ನು ಅವರು ಪ್ರತಿದಿನ ಪೂಜಿಸುವುದಿಲ್ಲ. ದೇವರಿಗೆ ಕೈಮುಗಿಯುವುದಿಲ್ಲ. ಹಾಗಂತ ಅವರನ್ನು ನಾಸ್ತಿಕ ಎನ್ನಲು ಸಾಧ್ಯವೇ? ಸಿದ್ದರಾಮಯ್ಯ ಅವರ ಬಗ್ಗೆ ತಕರಾರು ಇದ್ದವರು ಕೂಡ ಅಂದು ಅವರ ನಿಲುವಿಗೆ ಕರತಾಡನ ಮೂಲಕ ಒಪ್ಪಿಗೆ ಸೂಚಿಸಿದ್ದು ವಿಶೇಷವಾಗಿತ್ತು. ಸಿದ್ದರಾಮಯ್ಯ ಸಭೆಗೆ ಆಗಮಿಸುವಾಗ, ಆಚಾರ್ಯ ರೊಬ್ಬರಿಂದ ಉಪನ್ಯಾಸ ನಡೆಯುತ್ತಿತ್ತು. ಆಗ ಅವರು ಸಿದ್ದರಾಮಯ್ಯ ಅವರ ಪುತ್ರನ ಹೆಸರು ಯತೀಂದ್ರ. ರಾಯರೂ ಸಹ ಮಹಾ ಯತಿಗಳೇ. ಸಿದ್ದರಾಮಯ್ಯನವರ ಹೆಸರಿನಲ್ಲೂ ರಾಮನಿದ್ದಾನೆ. ಅವರನ್ನು ನಾಸ್ತಿಕ ಎಂದು ಪರಿಗಣಿಸುವುದಾದರೂ ಹೇಗೆ ಸಾಧ್ಯ ಎಂದು ಹೇಳಿದ್ದನ್ನು ಸಹ ಸಿದ್ದರಾಮಯ್ಯನವರು ಪ್ರಸ್ತಾಪಿಸಿದರು.
ತಾವು ಮಠ – ಮಾನ್ಯಗಳ ವಿರೋಧಿ ಅಲ್ಲ, ನಾಸ್ತಿಕನಲ್ಲ, ನಾನೂ ದೇವಭಕ್ತ ಎಂಬುದನ್ನು ಅವರು ಖಚಿತ ಮಾತುಗಳಲ್ಲಿ ಹೇಳಿದ್ದರು. ತಾವು ದೇವರನ್ನು ನಂಬುವುದನ್ನುವೈಚಾರಿಕ ತಳಹದಿಯ ಮೇಲೆ ಪ್ರತಿಪಾದಿಸಿದರು. ಅವರ ಮಾತಿಗೆ ತಾತ್ವಿಕತೆಯ ಆಧಾರವಿತ್ತು. ತಮ್ಮನ್ನು ಯಾರಿಗೂ ಸಾಬೀತು ಪಡಿಸಿಕೊಳ್ಳುವ  ಜರೂರತ್ತು ಇರಲಿಲ್ಲ. ತಾನೇಕೆ ಸ್ವಾಮೀಜಿಗಳ ಪಾದಕ್ಕೆರಗಿ ಪ್ರದರ್ಶಿಸುವುದಿಲ್ಲ ಎಂಬುದನ್ನು ಅವರು ಸೂಚ್ಯವಾಗಿಹೇಳಿದ್ದರು.
ಸಿದ್ದರಾಮಯ್ಯನವರ ಈ ಗುಣ ಇಷ್ಟವಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಬಹುತೇಕರು ಹೇಳುವುದೊಂದು, ಮಾಡುವುದೊಂದು. ಅವರಮಾತಿಗೂ, ಕೃತಿಗೂ ಸಂಬಂಧವೇ ಇರುವುದಿಲ್ಲ. ಆದರೆ ಈ ಮಾತಿಗೆ ಸಿದ್ದರಾಮಯ್ಯ ಹೊರತು. ಈ ಕಾಲದಲ್ಲಿ ಇಂಥವರ ಅಗತ್ಯವಿದೆ.