ಗೀತೆ ಕಲಿಯಿರಿ, ಕಲಿಸಿರಿ, ಜೀವನದಿ ಅಳವಡಿಸಿಕೊಳ್ಳಿರಿ
ತಿಳಿರುತೋರಣ
ಶ್ರೀವತ್ಸ ಜೋಶಿ
ಅರ್ಜುನ ಉವಾಚಃ ಏವಂ ಸತತಯುಕ್ತಾ ಯೇ|ಭಕ್ತಾಸ್ತ್ವಾಂ ಪರ್ಯುಪಾಸತೇ| ಯೇಚಾಪ್ಯಕ್ಷರಮವ್ಯಕ್ತಂ| ತೇಷಾಂ ಕೇ ಯೋಗವಿತ್ತಮಾಃ||
ಇದು ಭಗವದ್ಗೀತೆಯಲ್ಲಿ ೧೨ನೆಯ ಅಧ್ಯಾಯದ ಮೊದಲ ಶ್ಲೋಕ. ಇದರ ಒಂದೊಂದೇ ಪದವನ್ನು, ಪ್ರತಿಯೊಂದು ಅಕ್ಷರದಉಚ್ಚಾರವನ್ನು, ಒಟ್ಟು ಶ್ಲೋಕವನ್ನು ಹೇಳುವಾಗ ಬರಬೇಕಾದ ಧಾಟಿಯನ್ನು, ಅತ್ಯಂತ ಸಾವಧಾನದಿಂದ ಸರಳಗನ್ನಡದಲ್ಲಿಕಲಿಸತೊಡಗುತ್ತಾರೆ ಡಾ.ಸುರೇಶ ಕುಂಬಾರ.
ಝೂಮ್ ಮೂಲಕ ಆನ್‌ಲೈನ್‌ನಲ್ಲಿ ಕನ್ನಡ ಮಾಧ್ಯಮದಲ್ಲಿ ಭಗವದ್ಗೀತೆ ಕಲಿಕೆಯ ಪ್ರವೇಶ ಹಂತದ (ಲೆವೆಲ್-೧) ತರಗತಿ ಅದು. ಡಾ.ಸುರೇಶ ಕುಂಬಾರ ಆ ತರಗತಿಗೆ ಪ್ರಶಿಕ್ಷಕ. ಅವರು ಹೇಳಿಕೊಟ್ಟ ಶ್ಲೋಕವನ್ನು ಆಮೇಲೆ ನಾವು ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಪಠಿಸಬೇಕು. ಅದೇ ಧಾಟಿ ಮತ್ತು ಸ್ಪಷ್ಟ ಉಚ್ಚಾರದಲ್ಲಿ ಪಠಣವಾಗಬೇಕು.
ಝೂಮ್‌ನಲ್ಲಿ ಸರದಿಪ್ರಕಾರ ನಮ್ಮಲ್ಲಿ ಒಬ್ಬೊಬ್ಬರನ್ನೇ ಅನ್‌ಮ್ಯೂಟ್ ಮಾಡುತ್ತ ವರ್ಚ್ಯುವಲ್ ಕ್ಲಾಸ್ ರೂಮ್‌ನ ಸುಲಲಿತ ನಿರ್ವಹಣೆ ಮಾಡಲಿಕ್ಕೊಬ್ಬ ಟೆಕ್ನಿಕಲ್ ಕೊಆರ್ಡಿನೇಟರ್. ಅವರ ಹೆಸರು ಕಿರಣ್ ನಾಡಿಗ್. ಒಂದು ಶ್ಲೋಕವನ್ನು ಮೂರ್ನಾಲ್ಕು ವಿದ್ಯಾರ್ಥಿಗಳು ಪಠಿಸಿದ ಬಳಿಕ ಡಾ.ಸುರೇಶ ಮುಂದಿನ ಶ್ಲೋಕ ಹೇಳಿಕೊಡುವರು. ಅದನ್ನು ಅನಂತರದ ಮೂರ್ನಾಲ್ಕು ವಿದ್ಯಾರ್ಥಿಗಳು ಸರದಿಯಲ್ಲಿ ಪಠಿಸುವರು. ತಪ್ಪಿದಲ್ಲೆಲ್ಲ ಡಾ.ಸುರೇಶ ತಿದ್ದುವರು.
ಉಳಿದವರೆಲ್ಲ ಗಮನವಿಟ್ಟು ಕೇಳಿ ಕಲಿಯುವರು. ಹೀಗೆ ಮೂರು ಶ್ಲೋಕಗಳ ಕಲಿಕೆ ಆಗುವ ಹೊತ್ತಿಗೆ ೪೦ ನಿಮಿಷಗಳ ಝೂಮ್ ಅವಧಿ ಮುಗಿಯುತ್ತ ಬರುತ್ತದೆ. ‘ಯೋಗೇಶಂ ಸಚ್ಚಿದಾನಂದಂ ವಾಸುದೇವಂ ವ್ರಜಪ್ರಿಯಮ್| ಧರ್ಮಸಂಸ್ಥಾಪಕಂ ವೀರಂಕೃಷ್ಣಂ ವಂದೇ ಜಗದ್ಗುರುಮ್|’ ಪ್ರಾರ್ಥನಾಶ್ಲೋಕ ಎಲ್ಲರೂ ಒಟ್ಟಿಗೆ ಹೇಳುವರು. ಏನಾದರೂ ಸೂಚನೆ, ಪ್ರಕಟಣೆ ಇದ್ದರೆಗ್ರೂಪ್ ಕೊಆರ್ಡಿನೇಟರ್ ರಾಧಾ ಅವರು ಉದ್ಘೋಷಣೆ ಮಾಡುವರು. ಅಲ್ಲಿಗೆ ಆ ದಿನದ ತರಗತಿ ಮುಕ್ತಾಯ.
ಮಾರನೆಯ ದಿನ ಅದೇ ವೇಳೆಗೆ ಮತ್ತೆ ಝೂಮ್ ಸೆಷನ್. ಅಧ್ಯಾಯದಲ್ಲಿ ಆಮೇಲಿನ ಮೂರು ಶ್ಲೋಕಗಳು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ, ನಾಲ್ಕು ವಾರಗಳಲ್ಲಿ ಒಟ್ಟು 20 ಅವಧಿಗಳಲ್ಲಿ ಕಲಿಕೆ. ಭಗವದ್ಗೀತೆಯ 12ನೆಯ ಮತ್ತು 15ನೆಯ ಅಧ್ಯಾಯಗಳ ಒಟ್ಟು 40ಶ್ಲೋಕಗಳನ್ನು, ಸ್ಪಷ್ಟ ಉಚ್ಚಾರದೊಂದಿಗೆ ಸುಶ್ರಾವ್ಯವಾಗಿ ಪಠಿಸುವುದನ್ನು ಕಲಿಯುವುದಷ್ಟೇ ಪ್ರವೇಶ ಹಂತದ (ಲೆವೆಲ್-1) ಗುರಿ.
ಶ್ಲೋಕಗಳು ಕಂಠಪಾಠ ಬರಬೇಕೆಂದಿಲ್ಲ. ಅಧ್ಯಾಯ ಮುಗಿದ ಮೇಲೆ ಅದರ ಅಷ್ಟೂ ಶ್ಲೋಕಗಳನ್ನು ವಿದ್ಯಾರ್ಥಿಯುಪಠಿಸು ತ್ತಿರುವುದರ ವಿಡಿಯೊ ಮಾಡಿ ವಾಟ್ಸಪ್ ಗ್ರೂಪಿಗೆ ಹಾಕಬೇಕು. ವಿಡಿಯೊಗಳ ಮೌಲ್ಯಮಾಪನ ಆದಮೇಲೆ ಲೆವೆಲ್-1ನಲ್ಲಿ ತೇರ್ಗಡೆಯಾಗಿದ್ದಕ್ಕೆ ‘ಗೀತಾಗುಂಜನ್’ ಎಂಬ ಇ-ಪ್ರಮಾಣಪತ್ರ ವಿತರಣೆ. ಲೆವೆಲ್-1ತರಗತಿಯ  ಸಮಾರೋಪ ದ್ದೊಂದು ಝೂಮ್ ಸೆಷನ್; ಅನುಭವ -ಅನಿಸಿಕೆಗಳ ವಿನಿಮಯ; ಪ್ರಶಿಕ್ಷಕರಿಗೆ ಮತ್ತು ಸಹಾಯಕರಿಗೆ ಧನ್ಯವಾದ ಸಮರ್ಪಣೆ.
ಕೋವಿಡಾಯಣ ಕಾಲದಲ್ಲಿ ಈಗ ಎಲ್ಲವೂ – ಶಾಲಾ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳಿಂದ ಹಿಡಿದು, ಸಾಧ್ಯವಿರುವಲ್ಲೆಲ್ಲ ಆಫೀಸ್ ಕೆಲಸಗಳೂ, ಯಕ್ಷಗಾನ ತಾಳಮದ್ದಳೆ, ಪುಸ್ತಕ ಬಿಡುಗಡೆ, ಭರತನಾಟ್ಯ ಪ್ರದರ್ಶನ, ಅಗಲಿದ ಕವಿಗೆ ನುಡಿನಮನ ಮುಂತಾದ ಸಭೆ – ಸಮಾರಂಭಗಳೂ, ವೈದ್ಯರೊಂದಿಗೆ ಭೇಟಿಯೂ, ಕೋರ್ಟ್ ವಿಚಾರಣೆಗಳೂ – ‘ಸರ್ವಂ ಝೂಮ್‌ಮಯಂ ಜಗತ್’ ಆಗಿರುವಾಗ, ಆನ್‌ಲೈನ್‌ನಲ್ಲಿ ಭಗವದ್ಗೀತೆ ಕಲಿಕೆಯದು ಅಂಥದ್ದೇನಿದೆ ವಿಶೇಷ ಎಂದು ನೀವಂದುಕೊಳ್ಳುವಿರಿ.
ಆನ್‌ಲೈನ್ ಅಂತಲ್ಲ, ಒಟ್ಟಾರೆಯಾಗಿಯೂ ಭಗವದ್ಗೀತೆಯೋ, ಮತ್ತ್ಯಾವುದೋ ಧಾರ್ಮಿಕ ಅಥವಾ ಆಧ್ಯಾತ್ಮಿಕ ವಿಷಯದ್ದೋ,ವ್ಯಕ್ತಿತ್ವ ವಿಕಸನದ್ದೋ ತರಗತಿಗಳು, ತರಬೇತಿ ಕಾರ್ಯಾಗಾರಗಳು ಅಲ್ಲಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಅದೇನೂ ಹೊಸ ಸಂಗತಿಯಲ್ಲ. ಆದರೆ ಈಗ ನಾನು ಹೇಳಹೊರಟಿರುವ ‘ಗೀತಾ ಪರಿವಾರ’ದ ಆನ್‌ಲೈನ್ ಭಗವದ್ಗೀತೆ ತರಗತಿಗಳ ಬಗ್ಗೆ ತಿಳಿದು ನೀವು ಆಶ್ಚರ್ಯಪಡುತ್ತೀರಿ. ಈ ಒಂದು ರಚನಾತ್ಮಕ ಯೋಜನೆಯ ಅಗಾಧತೆ, ವ್ಯಾಪ್ತಿ – ವಿಸ್ತಾರಗಳನ್ನು ಕಂಡು ದಂಗಾಗುತ್ತೀರಿ.ಅಷ್ಟೇ ಅಲ್ಲ, ಭಗವದ್ಗೀತೆಯ ಬಗ್ಗೆ ಹೊಸ ಹುರುಪು ಉಕ್ಕಿ ಬಂದು ನೀವೂ ಇದರಲ್ಲಿ ಭಾಗಿಯಾಗಲು ಮುಂದಾಗುತ್ತೀರಿ.
ಯಾವುದಕ್ಕೂ ಮೊದಲಿಗೆ ಈ ವಿವರಗಳನ್ನು ಓದಿಕೊಳ್ಳಿ. ‘ಗೀತಾ ಪರಿವಾರ’ 1986ರಲ್ಲಿ ಶ್ರೀಗೋವಿಂದದೇವ ಗಿರಿಜೀಮಹಾರಾಜ್ ಅವರು, ಭಗವದ್ಗೀತೆಯ ಪ್ರಚಾರಕ್ಕೆಂದೇ ಆರಂಭಿಸಿದ ಅಭಿಯಾನ. ‘ವೇದೋಪನಿಷತ್ತುಗಳ ಸಾರವೆಲ್ಲಭಗವದ್ಗೀತೆಯಲ್ಲಿ ಇದೆ. ಯೋಗೇಶ್ವರನೆನಿಸಿದ ಶ್ರೀಕೃಷ್ಣನೇ ಗೀತೆಯ ವಕ್ತಾರನಾಗಿ ಅದೊಂದು ಯೋಗ ವಿಜ್ಞಾನ ದೀಪಿಕೆಆಗಿದೆ. ಗೀತೆಯನ್ನು ಅರಿತರೆ ಸನಾತನ ಭಾರತೀಯ ಸಂಸ್ಕೃತಿಯನ್ನು ಅರಿತಂತೆ’ ಎಂದು ಅವರ ದೃಢನಂಬಿಕೆ.
ಪ್ರಪಂಚದ ಎಷ್ಟೋ ಭಾಷೆಗಳಿಗೆ ಗೀತೆಯ ತರ್ಜುಮೆಯಾಗಿದೆ. ಗಾಂಽಜಿ, ತಿಲಕ್, ಅರಬಿಂದೊ, ಸಾವರ್ಕರ್ ಮತ್ತು ಅನೇಕಸ್ವಾತಂತ್ರ್ಯಯೋಧರು, ನಾಯಕರು ಗೀತೆಯನ್ನು ಪ್ರೇರಣಾಸ್ರೋತವಾಗಿ ಮಾರ್ಗದರ್ಶಿಯಾಗಿ ಅಪ್ಪಿಕೊಂಡಿದ್ದಾರೆ. ಈಗಲೂ ಅನೇಕರಿಗೆ ಗೀತೆಯನ್ನು ಕಲಿಯಬೇಕೆಂಬ ಇಚ್ಛೆಯಿರುತ್ತದೆ, ಆದರೆ ಸೂಕ್ತ ಸಂಪನ್ಮೂಲಗಳಿಲ್ಲದೆ ಅದನ್ನು ಅಲ್ಲಿಗೇ ಬಿಟ್ಟುಬಿಡುತ್ತಾರೆ. ಲಿಂಗ – ವಯೋಭೇದವಿಲ್ಲದೆ ಎಲ್ಲರೂ ಭಗವದ್ಗೀತೆಯನ್ನು ಕಲಿಯಬೇಕು.
ವಿಶೇಷವಾಗಿ ಮಕ್ಕಳಿಗೆ ಎಳೆ ಪ್ರಾಯದಲ್ಲೇ ಕಲಿಸಬೇಕು ಎಂಬ ನಿಟ್ಟಿನಲ್ಲಿ ಗೀತಾಪ್ರಚಾರ ಕಾರ್ಯವನ್ನು ಭಾರತದಲ್ಲಿರುವ ಬೇರೆಹಲವಾರು ಧಾರ್ಮಿಕ – ಆಧ್ಯಾತ್ಮಿಕ ಸಂಸ್ಥೆಗಳಂತೆ ಗೀತಾ ಪರಿವಾರವೂ ನಡೆಸಿಕೊಂಡು ಬಂದಿದೆ. ಕಳೆದ ವರ್ಷ ಕೋವಿಡ್ಕರಾಳಛಾಯೆಯಿಂದ ಪ್ರಪಂಚದಲ್ಲಿ ಜನಜೀವನದ ಇಡೀ ಚಿತ್ರಣವೇ ಬದಲಾದಾಗ, ಲಾಕ್‌ಡೌನ್‌ನಿಂದಾಗಿ ಜನರನ್ನುಮನೆಯಲ್ಲೇ ಕಟ್ಟಿಹಾಕಿದಂತಾದಾಗ, ಗೀತಾ ಪರಿವಾರದ ಒಂದಿಷ್ಟು ಸ್ವಯಂಸೇವಕರು ಸಕಾರಾತ್ಮಕವಾಗಿ ಯೋಚಿಸಿದರು:ಭಗವದ್ಗೀತೆ ಕಲಿಕೆಯ ಆನ್‌ಲೈನ್ ತರಗತಿಗಳನ್ನು, ಯಾವುದೇ ಶುಲ್ಕ ಸಂಗ್ರಹವಿಲ್ಲದೆ ಉಚಿತವಾಗಿ, ಏಕೆ ಆರಂಭಿಸಬಾರದುಎಂದು. ಒಂದು ಜಾಲತಾಣ ಕಟ್ಟಿ ಜೂನ್ ತಿಂಗಳಲ್ಲಿ ಗೀತಾ ಕ್ಲಾಸಸ್ ಆರಂಭ ಎಂದು ಪ್ರಕಟಣೆ ಹೊರಡಿಸಿದ್ದೇ ತಡ ದಬದಬನೆನೋಂದಣಿಗಳು ಬರಲಾರಂಭಿಸಿದವು.
ಗಂಟೆಗಳೊಳಗೆ೧೦೦೦ಜನರು ರಿಜಿಸ್ಟರ್ ಮಾಡಿ ಆಗಿತ್ತು. ಸುದ್ದಿ ಹರಡಿ, ನೋಡನೋಡುತ್ತಿದ್ದಂತೆ ಮತ್ತೂ೧೦೦೦ಜನ ಸೇರಿಕೊಂಡರು. ಇಷ್ಟೊಂದು ಧನಾತ್ಮಕ ಪ್ರತಿಕ್ರಿಯೆ ಬರುವುದೆಂದು ನಿರೀಕ್ಷಿಸಿರಲಿಲ್ಲ. ನೋಂದಣಿಯನ್ನು ಸದ್ಯಕ್ಕೆ ನಿಲ್ಲಿಸಿ ದ್ದೇವೆಂದು ಹೇಳಿ೨೦೦೦ವಿದ್ಯಾರ್ಥಿಗಳಿಗೆ ಜೂನ್‌ನಲ್ಲಿ ಮೊದಲ ಬ್ಯಾಚ್ ಆರಂಭವಾಯಿತು. ಮೆಸೇಜುಗಳ ಮೂಲಕ, ದೂರವಾಣಿ ಕರೆಗಳ ಮೂಲಕ ಕೋರಿಕೆಗಳು ಬರುತ್ತಲೇ ಇದ್ದುದರಿಂದ ಮತ್ತೂ೫೦೦ವಿದ್ಯಾರ್ಥಿಗಳನ್ನು ಸೇರಿಸಿಕೊಂಡರಂತೆ. ಗೀತಾ ಪರಿವಾರದ ಸ್ವಯಂಸೇವಕರು, ಮತ್ತು ಸೇವಾಮನೋಭಾವದ ಒಂದಿಷ್ಟು ಸಂಸ್ಕೃತ ಶಿಕ್ಷಕರನ್ನು ವಿಶೇಷವಾಗಿ ವಿನಂತಿ ಮಾಡಿಕೊಂಡು, ಸೀಮಿತ ಸಂಪನ್ಮೂಲದಲ್ಲಿ ತರಗತಿಗಳು ಆರಂಭವಾದವು.
ಪ್ರತಿಯೊಂದರಲ್ಲೂ ಅಚ್ಚುಕಟ್ಟುತನ, ಸರಳ ಮತ್ತು ವಿನೂತನ ವಿಧಾನದಲ್ಲಿ ಕಲಿಕೆ, ಗೀತೆಯನ್ನು ಕಲಿಯತೊಡಗಿದ್ದೇನೆ ಎಂದುಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಮೂಡುವ ವಿಶೇಷ ಅಭಿಮಾನ – ಇವೆಲ್ಲದರಿಂದ ಗೀತಾ ಪರಿವಾರದ ತರಗತಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬಂತು. ಮೊದಲು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಆರಂಭಿಸಿದ್ದನ್ನು ಇತರ ಭಾರತೀಯ ಭಾಷೆಗಳಿಗೂ ವಿಸ್ತರಿಸಲಾಯಿತು. ಆನ್‌ಲೈನ್ ಕಲಿಕೆ ಆದ್ದರಿಂದ ವಿದೇಶಗಳಲ್ಲಿದ್ದವರೂ ಆಸಕ್ತಿ ತೋರಿದರು.
ಜುಲೈ ಬ್ಯಾಚ್‌ಗೆ೪೦೦೦ಜನ ನೋಂದಾಯಿಸಿದರು. ಆಗಸ್ಟ್‌ನದಕ್ಕೆ೫೦೦೦, ಸಪ್ಟೆಂಬರ್‌ನಲ್ಲಿ೧೦೦೦೦, ಆಮೇಲಿನ ಬ್ಯಾಚ್‌ ಗಳಲ್ಲೂ ಅನುಕ್ರಮವಾಗಿ ಸುಮಾರು೧೩೦೦೦, ೧೫೦೦೦, ಮತ್ತು೨೦೦೦೦ದಷ್ಟು ಜನರು ಗೀತಾಭ್ಯಾಸ ದೀಕ್ಷೆ ಸ್ವೀಕರಿಸಿದರು. ಮೊನ್ನೆ ಮಾರ್ಚ್‌ನಲ್ಲಿ ನಾನು ಸೇರಿಕೊಂಡ ಲೆವೆಲ್-೧ಬ್ಯಾಚ್‌ನಲ್ಲಿ ಬೇರೆಬೇರೆ ಭಾಷೆಗಳ, ದಿನದ ವಿವಿಧ ಸಮಯದಲ್ಲಿನ ಸುಮಾರು೫೦೦ತರಗತಿಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ೨೧೫೦೦ದಾಟಿತ್ತಂತೆ.
೫೮ವಿವಿಧ ದೇಶಗಳಲ್ಲಿ ನೆಲೆಸಿರುವವರು ತಮ್ಮತಮ್ಮ ಸ್ಥಳೀಯ ಕಾಲಮಾನಕ್ಕೆ ಅನುಕೂಲವಾಗುವ ತರಗತಿಗಳನ್ನುಆಯ್ದುಕೊಂಡಿದ್ದರು. ಕನ್ನಡ ಮಾಧ್ಯಮದ ನಮ್ಮ ಕ್ಲಾಸ್‌ನಲ್ಲಿ ಹೆಚ್ಚೂಕಡಿಮೆ೫೦ಜನರಿದ್ದೆವು. ಹತ್ತು ವರ್ಷ ವಯಸ್ಸಿನ ಮಕ್ಕಳೂ ಇದ್ದರು, ಅರವತ್ತು ದಾಟಿದವರೂ ಇದ್ದರು! ಭಾರತೀಯ ಸಮಯ ಬೆಳಗ್ಗೆ೭ರಿಂದ೭:೪೦ನಮಗೆ ಕ್ಲಾಸ್. ಅಂದರೆ ನನಗಿಲ್ಲಿ ಅಮೆರಿಕದ ಪೂರ್ವಕರಾವಳಿ ಸಮಯದ ಪ್ರಕಾರ ಹಿಂದಿನ ದಿನ ರಾತ್ರಿ ಊಟವಾದ ಮೇಲೆ ಮಲಗುವ ಮೊದಲು ಭಗವದ್ಗೀತೆ ಕಲಿಕೆ.
ವಿದ್ಯಾರ್ಥಿಗಳ ಸಂಖ್ಯೆಯಿಂದ ಅಗಾಧತೆಯ ಅಂದಾಜಾಯ್ತಲ್ಲವೇ? ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳಿಗೆ ಶಿಕ್ಷಕರು ಮತ್ತು ಸಹಾಯಕರು ಎಲ್ಲಿಂದ?೮೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ನೆಲೆಸಿರುವ, ಸುಮಾರು೨೦೦೦ಕ್ಕೂ ಅಧಿಕ ಸಂಖ್ಯೆಯಸ್ವಯಂಸೇವಕರು ಈ ಮಹಾನ್ ಕಾರ್ಯದಲ್ಲಿ ಕೈಜೋಡಿಸಿದರು. ಈಗಾಗಲೇ ಲೆವೆಲ್-೧,ಲೆವೆಲ್-೨ಕಲಿಕೆ ಮುಗಿಸಿದವರುಪ್ರಶಿಕ್ಷಕರಾಗಿ, ತಾಂತ್ರಿಕ ಸಹಾಯಕರಾಗಿ, ಗ್ರೂಪ್ ಕೊಆರ್ಡಿನೇಟರ್ ಆಗಿ ನಿಸ್ವಾರ್ಥ ಸೇವೆಗೆ ದಿನದ ಒಂದಿಷ್ಟುಸಮಯ ವನ್ನು ಮುಡಿಪಾಗಿಟ್ಟರು.
ಪ್ರಶಂಸೆಗಲ್ಲ, ಹಾರ – ತುರಾಯಿ ಸನ್ಮಾನಕ್ಕಲ್ಲ, ಸ್ಥಾನಮಾನಕ್ಕಲ್ಲ, ಸಂಭಾವನೆಗಂತೂ ಅಲ್ಲವೇಅಲ್ಲ. ‘ನಾವು ಗೀತೆಯನ್ನು ಕಲಿಯುತ್ತಿದ್ದೇವೆ, ಇನ್ನೊಬ್ಬರ ಕಲಿಕೆಗೂ ನೆರವಾಗುತ್ತಿದ್ದೇವೆ’ ಎಂಬ ಏಕೈಕ ಉದ್ದೇಶದಿಂದ. ಗೀತಾ ಪರಿವಾರದಲ್ಲಿ ಎಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ. ಗುರು-ಶಿಷ್ಯ ಎಂಬ ಭಾವನೆಗಿಂತ ಸೋದರ-ಸೋದರಿ ಅಥವಾ ಪರಸ್ಪರ ಸ್ನೇಹಿತ ಎಂಬ ಭಾವನೆಗೆ ಒತ್ತು. ಪ್ರಶಿಕ್ಷಕರನ್ನು ಸರ್/ಮೇಡಂ ಎಂದು ಸಂಬೋಧಿಸುವುದಕ್ಕಿಂತ ಭಯ್ಯಾ/ದೀದಿ ಎಂದು ಕರೆಯುವಂತೆಉತ್ತೇಜನ. ಎಷ್ಟೆಂದರೂ ಗೀತೆ ಹುಟ್ಟಿಕೊಂಡಿದ್ದೇ ಕೃಷ್ಣ – ಅರ್ಜುನರ ‘ಸಖ್ಯ’ ಭಾವದಲ್ಲಿ ತಾನೆ? ಲೆವೆಲ್-೧ನಲ್ಲಿ೧೨ನೆಯ ಮತ್ತು೧೫ನೆಯ ಅಧ್ಯಾಯಗಳ ಅಸ್ಖಲಿತ ಓದನ್ನು ಕರಗತ ಮಾಡಿಕೊಂಡರಾಯ್ತು, ‘ಗೀತಾಗುಂಜನ’ ಪ್ರಮಾಣಪತ್ರ ಸಿಗುತ್ತದೆ. ಲೆವೆಲ್-೨ನಲ್ಲಿ ಇನ್ನೂ ಮೂರು ಅಧ್ಯಾಯಗಳ ಕಲಿಕೆ, ಮತ್ತು ಅದುವರೆಗಿನ ಐದು ಅಧ್ಯಾಯಗಳಲ್ಲಿ ಮೂರನ್ನು ಕಂಠಪಾಠ ಮಾಡಿ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ‘ಗೀತಾಜಿಜ್ಞಾಸು’ ಪ್ರಮಾಣಪತ್ರ.
ಮತ್ತಷ್ಟು ಅಧ್ಯಾಯಗಳನ್ನು ಸೇರಿಸಿಕೊಳ್ಳುತ್ತ ‘ಗೀತಾಪಾಠಕ’, ‘ಗೀತಾಪಥಿಕ’ ಸರ್ಟಿಫಿಕೇಟ್ಸ್. ಗೀತಾ ಪರಿವಾರದ ಉದ್ದೇಶ ವಿರುವುದು ಒಮ್ಮೆ ಕಲಿಕೆ ಆರಂಭಿಸಿದವರು ಎಲ್ಲ ಹಂತಗಳಲ್ಲಿ ಮುಂದುವರಿದು ಭಗವದ್ಗೀತೆಯ೧೮ಅಧ್ಯಾಯಗಳ ಎಲ್ಲ೭೦೦ಶ್ಲೋಕಗಳನ್ನೂ ಮೈಗೂಡಿಸಿಕೊಳ್ಳಬೇಕು ಎಂಬುದು. ‘ಗೀತೆಯನ್ನು ಕಲಿಯಿರಿ, ಗೀತೆಯನ್ನು ಕಲಿಸಿರಿ, ಗೀತೆಯನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿರಿ’ ಎನ್ನುವುದು ಧ್ಯೇಯವಾಕ್ಯ.
ಪ್ರತಿದಿನದ೪೦ನಿಮಿಷಗಳ ಝೂಮ್ ಸೆಷನ್‌ನಲ್ಲಿ ಶ್ಲೋಕಗಳ ಸ್ಪಷ್ಟ ಉಚ್ಚಾರದ ಪಠಣವನ್ನಷ್ಟೇ ಕಲಿಸುವುದಾದರೂ,ವಾರಾಂತ್ಯಗಳಲ್ಲಿ ಬೇರೆಬೇರೆ ಅಧ್ಯಾಯಗಳ ಬಗೆಗಿನ ಆನ್‌ಲೈನ್ ಉಪನ್ಯಾಸಗಳು ಇರುತ್ತವೆ. ಪ್ರತಿಯೊಂದು ಶ್ಲೋಕದ ಭಾವಾರ್ಥ, ಅದರಲ್ಲಿ ಅಡಕವಾಗಿರುವ ಜೀವನಮೌಲ್ಯ, ಅದರ ಪಾಲನೆಯಿಂದ ನಮಗಾಗುವ ಒಳಿತು – ಎಲ್ಲದರ ವಿವರಣೆಸಿಗುತ್ತದೆ. ಸಂಸ್ಕೃತದಲ್ಲಿ ಅನುಸ್ವಾರ ವಿಸರ್ಗ ಒತ್ತಕ್ಷರಗಳನ್ನು, ಅವುಗಳ ಹಿಂದುಮುಂದಿನ ಅಕ್ಷರಗಳನ್ನು, ಯಾವ ಸಂದರ್ಭದಲ್ಲಿ ಹೇಗೆ ಉಚ್ಚರಿಸಬೇಕು ಎಂಬುದರ ಬಗ್ಗೆ, ಸಂಸ್ಕೃತ ಭಾಷೆ – ವ್ಯಾಕರಣದ ಬಗ್ಗೆ ಪ್ರಾಥಮಿಕ ಪರಿಚಯ ಕೈಪಿಡಿ, ಅದರ ಬಗ್ಗೆಯೇ ಒಂದು ವಿಶೇಷ ಉಪನ್ಯಾಸ… ಇವೆಲ್ಲ ಸದ್ಯಕ್ಕೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ.
ಆದರೆ ಪ್ರತಿ ಅಧ್ಯಾಯದ ಕಲಿಕೆಗೆ ನೆರವಾಗುವಂತೆ ವಾಟ್ಸಪ್ ಗ್ರೂಪಿನಲ್ಲಿ ಆಯಾ ಭಾಷೆಗಳ ಲಿಪಿಯಲ್ಲಿ ಪಿಡಿಎಫ್, ಉಚ್ಚಾರದಮಾರ್ಗದರ್ಶಿಯಾಗಿ ಆಡಿಯೊ, ವಿಡಿಯೊ ವಿತರಣೆ… ಎಲ್ಲವೂ ಅಚ್ಚುಕಟ್ಟು, ಕ್ರಮಬದ್ಧ. ಕಲಿಕೆಯನ್ನು೧೨ನೆಯ ಅಧ್ಯಾಯದಿಂದ ಏಕೆ ಆರಂಭಿಸುತ್ತಾರೆ? ಎಂಬ ಪ್ರಶ್ನೆ ಹಲವರಿಗೆ ಇರುತ್ತದೆ. ಇದಕ್ಕೆ ಕಾರಣಗಳಿವೆ. ಭಗವದ್ಗೀತೆಯ ಒಟ್ಟು೧೮ಅಧ್ಯಾಯಗಳ ಪೈಕಿ೧೨ನೆಯದು ಕಲಿಕೆಗೆ ಅತ್ಯಂತ ಸುಲಭ. ಕೇವಲ೨೦ಶ್ಲೋಕಗಳು.
ಎಲ್ಲವೂ ಸರಳವಾದ ಅನುಷ್ಟುಪ್ ಛಂದಸ್ಸಿನಲ್ಲಿ ಇರುವಂಥವು. ಅಲ್ಲದೇ,೧೨ನೆಯ ಅಧ್ಯಾಯವು ‘ಭಕ್ತಿಯೋಗ’ ವಿಚಾರದ್ದು.ಭಗವಂತನನ್ನು ಪ್ರೀತಿಸುತ್ತ, ಜೀವನದ ಸಕಲ ಕೆಲಸ – ಕಾರ್ಯಗಳನ್ನು ದೇವರ ಸೇವೆ ಎಂದು ಪರಿಗಣಿಸಿ ಕೊನೆಗೆ ಪ್ರೀತಿಯ ಮೂಲಕವೇ ಭಗವಂತನನ್ನು ಸೇರಲು ಇರುವ ಮಾರ್ಗವೇ ಭಕ್ತಿಯೋಗ. ಗೀತೆಯ ಕಲಿಕೆಯಲ್ಲಿ ಆಸಕ್ತಿ ಹುಟ್ಟಲಿಕ್ಕೆ ಹೇಳಿ ಮಾಡಿಸಿದಂಥ ಅಧ್ಯಾಯ. ಅನಂತರದ್ದು೧೫ನೆಯ ಅಧ್ಯಾಯ. ಇದರಲ್ಲೂ ಶ್ಲೋಕಗಳ ಸಂಖ್ಯೆ೨೦ಮಾತ್ರ.
ಹೆಚ್ಚಿನವು ಅನುಷ್ಟುಪ್ ಛಂದಸ್ಸಿನವೇ, ಐದಾರು ಮಾತ್ರ ತ್ರಿಷ್ಟುಪ್ ಛಂದಸ್ಸಿನವು. ಗೀತೆಯ ಕಲಿಕೆಯು೧೨ನೆಯ ಅಧ್ಯಾಯ ದಿಂದ ಆರಂಭವಾಗುವುದು ಅತ್ಯಂತ ಸಮಂಜಸವೇ ಇದೆಯೆಂದು ನನಗನಿಸಿತು. ಕನ್ನಡಿಗರಿಗೆ ಅದನ್ನು ಕನ್ನಡ ವರ್ಣಮಾಲೆಕಲಿಕೆಯ ಉದಾಹರಣೆಯಿಂದ ಚೆನ್ನಾಗಿ ಸಮರ್ಥಿಸಬಹುದು ಎಂದು ಕೂಡ ನನಗೆ ತೋಚಿತು. ಹೇಗೆ ಗೊತ್ತೇ? ನೀವು ‘ರಠಈಕ’ಅಕ್ಷರಕಲಿಕೆಯ ಬಗ್ಗೆ ಕೇಳಿರಬಹುದು. ಸಾಂಪ್ರದಾಯಿಕವಾಗಿ ಮಗುವಿಗೆ ಅಕ್ಷರ ಕಲಿಕೆ ಅ,ಆ,ಇ,ಈ… ಯಿಂದ ಆರಂಭವಾಗಿ,ಆಮೇಲೆ ವ್ಯಂಜನಗಳು, ಕಾಗುಣಿತ ಮುಂತಾಗಿ ಮುಂದುವರಿಯುತ್ತದಷ್ಟೆ? ಆದರೆ ಮೊದಲ ಅಕ್ಷರಗಳಾಗಿ ಅ,ಆ,ಇ,ಈ… ಕಲಿಯುವುದಕ್ಕಿಂತ ರ,ಠ,ಈ,ಕ- ಇವುಗಳನ್ನು ಕಲಿಯುವುದು ಹೆಚ್ಚು ತಾರ್ಕಿಕ. ಮಗುವಿಗೂ ಅದು ಸುಲಭ.
ಏಕಿರಬಹುದು ಯೋಚಿಸಿ. ಅಕ್ಷರ ಕಲಿಯುವ ಮೊದಲೇ ಚಿತ್ರ ಬರೆಯಲಿಕ್ಕೆ ಮಗು ಕಲಿಯುತ್ತದೆ. ಅತ್ಯಂತ ಸುಲಭದ ಚಿತ್ರವೆಂದರೆ ಒಂದು ವೃತ್ತಾಕಾರ. ಸ್ಲೇಟಿನಲ್ಲಿ ಬಳಪದಿಂದಲೋ, ಕಾಗದದ ಮೇಲೆ ಪೆನ್ಸಿಲ್ ಅಥವಾ ಕ್ರೇಯಾನ್‌ನಿಂದಲೋ ವೃತ್ತಾಕಾರ ಮೂಡಿಸಲು ಕಲಿತರೆ ಮಗುವಿಗೆ ಎಲ್ಲಿಲ್ಲದ ಸಂಭ್ರಮ. ವೃತ್ತಾಕಾರವನ್ನು ಹೆಚ್ಚು ಹೋಲುವ ಕನ್ನಡ ಅಕ್ಷರ ಯಾವುದು? ರ! ಆದ್ದರಿಂದ ರ ಅಕ್ಷರವೇ ಮಗು ಬರೆಯುವ ಮೊತ್ತಮೊದಲ ಅಕ್ಷರವಾಗಲಿಕ್ಕೆ ಸೂಕ್ತ. ಅದರಲ್ಲಿ ನಡುವೆ ಒಂದು ಚುಕ್ಕಿ ಇಟ್ಟರೆ ಠಆಯ್ತು. ಚುಕ್ಕಿ ತೆಗೆದು ಅಡ್ಡಕ್ಕೆ ಹೊಟ್ಟೆ ಸೀಳುತ್ತ ಬಳ್ಳಿ ಹಬ್ಬಿಸಿದರೆ ಈ ಆಯ್ತು.
ಬಳ್ಳಿಯನ್ನು ತೆಗೆದು ತಲೆಕಟ್ಟನ್ನು ಹಿಡಿದೆಳೆದರೆ ರ ಇದ್ದದ್ದು ಕ ಆಗುತ್ತದೆ. ‘ನನ್ನ ಪಾಟಿ ಕರಿಯದು| ಸುತ್ತುಕಟ್ಟು ಬಿಳಿಯದು| ಬರೆಯಲಿಕ್ಕೆ ಬರುವುದು| ಬಹಳ ಚಂದ ಇರುವುದು| ಅಪ್ಪ ದುಡ್ಡು ಕೊಟ್ಟನು| ಬಳಪ ಒಂದು ತಂದೆನು| ರಠಈಕ ಬರೆದೆನು| ಅಮ್ಮನ ಮುಂದೆ ಹಿಡಿದೆನು| ಅಮ್ಮ ನೋಡಿ ನಕ್ಕಳು| ನನಗೆ ಉಂಡೆ ಕೊಟ್ಟಳು| ಗಬ ಗಬ ತಿಂದೆನು| ಥಕ ಥಕ ಕುಣಿದೆನು||’ ಶಿಶುಗೀತೆಯ ತತ್ತ್ವ ಇದೇ. ರಠಈಕ ಕಲಿತಾಗ ಅಕ್ಷರಗಳ ಕಲ್ಪನೆ ಮಗುವಿಗೆ ಬರುತ್ತದೆ, ಆಮೇಲೆ ಅ,ಆ,ಇ,ಈ ರುಹಚ್ಚಿದರಾಯಿತು. ಭಗವದ್ಗೀತೆ ಕಲಿಕೆಯಲ್ಲೂ ಹೀಗೆಯೇ:೧೨ನೆಯ ಮತ್ತು೧೫ನೆಯ ಅಧ್ಯಾಯಗಳನ್ನು ಮೊದಲು ಕಲಿ.
ಆಮೇಲೆ ಉಳಿದವುಗಳನ್ನೂ ಕಲಿ. ಆಗಲೇ ನೀನಾಗುವೆ ಗೀತೆಯೆಂಬ ಜೀವಸತ್ತ್ವದಿಂದ ಬಲ ವಽಸಿಕೊಂಡ ಕಲಿ! ಭಗವದ್ಗೀತೆಯ ಶ್ರೇಷ್ಠತೆಯನ್ನು, ಅಮೃತತುಲ್ಯಮೌಲ್ಯವನ್ನು, ಮಹತ್ತ್ವವನ್ನು ನಾನಿಲ್ಲಿ ನಿಮಗೆ ವಿವರಿಸಬೇಕಿಲ್ಲ. ಆದರೆ ಗೀತಾ ಪರಿವಾರವು ಕಲ್ಪಿಸಿಕೊಟ್ಟಿರುವ ಈ ಕಲಿಕೆ ಕ್ರಮವನ್ನು ನಾನು ಬಹಳವಾಗಿ ಮೆಚ್ಚಿದ್ದೇನೆ.
ಮುಖ್ಯವಾಗಿ ಉಚ್ಚಾರವಿಧಾನ ಮತ್ತು ಅದರಲ್ಲಿರುವ ಸ್ಪಷ್ಟತೆ. ಎರಡನೆಯದಾಗಿ ಪ್ರಶಿಕ್ಷಕರು ಮತ್ತು ಸಹಾಯಕರಲ್ಲಿ ತುಂಬಿತುಳುಕುವ ಸೇವಾಮನೋಭಾವ. ಸಂಸ್ಕೃತದ ಗಂಧಗಾಳಿಯೂ ಇಲ್ಲದವರಲ್ಲಿ, ಭಗವದ್ಗೀತೆಯ ಪುಸ್ತಕ ಮನೆಯಲ್ಲಿದ್ದರೂ ಇದುವರೆಗೆ ಒಮ್ಮೆಯೂ ತೆರೆದುನೋಡದವರಲ್ಲಿ, ಲೆವೆಲ್-೧ನ ನಾಲ್ಕು ವಾರಗಳಲ್ಲೇ ಕಂಡುಬರುವ ಗಮನಾರ್ಹ ಬದಲಾವಣೆ ಅಚ್ಚರಿಯದು.
ನಮ್ಮ ಕ್ಲಾಸ್‌ನಲ್ಲಿದ್ದ ರಚನಾ, ಲಹರಿಕಾ, ಸುಮುಖ ರಾನಡೆ, ಮೋಹಿತ್ ಮುಂತಾದ ಚಿಕ್ಕ ಮಕ್ಕಳು(ಇವರದೆಲ್ಲ ಹತ್ತರ ಆಸುಪಾಸಿನ ವಯಸ್ಸು) ಕಲಿಕೆಯಲ್ಲಿ ತೋರಿದ ಆಸಕ್ತಿ, ಉತ್ಸಾಹ, ಒಮ್ಮೆ ಹೇಳಿಕೊಟ್ಟರೆ ಸಾಕು ಶ್ಲೋಕವನ್ನು ಅಚ್ಚುಕಟ್ಟಾಗಿ ಒಪ್ಪಿಸುವ ರೀತಿಗೆ ತಲೆದೂಗಲೇಬೇಕು. ಕಟಾಕ್ಷ ಗೌಡ ಎಂಬ ಪುಟ್ಟ ಹುಡುಗಿಯಂತೂ ಮುದ್ದಾದ ಧ್ವನಿಯ ಸ್ಪಷ್ಟ ಉಚ್ಚಾರದಿಂದನಮ್ಮ ಪ್ರಶಿಕ್ಷಕರ ಅಚ್ಚುಮೆಚ್ಚಿನವಳಾದಳು.
ಯಾವ ತೆರನಾದ ವರ್ಗೀಕರಣವೂ ಇಲ್ಲದೆ ಹೀಗೆ ಎಲ್ಲರೂ ಸಹಪಾಠಿಗಳೆನಿಸುವುದು ನಿಜಕ್ಕೂ ಒಂದು ವಿಶೇಷ ಅನುಭವ. ನನಗೆ ಗೀತಾ ಪರಿವಾರದ ಆನ್‌ಲೈನ್ ತರಗತಿಗಳ ಬಗ್ಗೆ ಮೊದಲು ತಿಳಿಸಿದ, ನಾನು ಸೇರಿಕೊಳ್ಳಲು ಪ್ರೇರಣೆಯಾದ, ಮುಂಬೈಯಲ್ಲಿರುವನನ್ನಣ್ಣನಂತೂ ಇನ್ನಷ್ಟು ಅಭಿಮಾನದಿಂದ ಹೇಳುತ್ತಾರೆ. ಅವರಾಗಲೇ ಲೆವೆಲ್-೨ನಲ್ಲಿದ್ದು ‘ಗೀತಾಜಿಜ್ಞಾಸು’ ಪ್ರಮಾಣಪತ್ರ ಪಡೆದು ಗೀತಾಯಾತ್ರೆಯಲ್ಲಿ ಮುನ್ನಡೆಯುತ್ತಿದ್ದಾರೆ. ‘ಈ ಕಲಿಕೆ ಕಷ್ಟವೆಂದು ಯಾರಿಗೂ ಅನಿಸುವುದೇ ಇಲ್ಲ.
ಪ್ರಶಿಕ್ಷಕರು, ಪರೀಕ್ಷಕರು, ಎಲ್ಲರೂ ತುಂಬ ಪ್ರೀತಿಯಿಂದ ಕಲಿಸುತ್ತಾರೆ. ಅಲ್ಲದೇ, ಸಾಕ್ಷಾತ್ ಪರಮಾತ್ಮನು ಆಡಿದ ಮಾತುಗಳನ್ನೇ ನಾವು ಕಲಿಯುತ್ತಿರುವುದು ಎಂಬ ಭಾವನೆ ನಮ್ಮ ಮನಸ್ಸಿಗೆ ಬಂದುಬಿಟ್ಟರೆ ಸಾಕು, ಗೀತೆಯನ್ನು ಕಲಿಯಲು ಎಲ್ಲಿಲ್ಲದ ಉತ್ಸಾಹ ಬರುತ್ತದೆ. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ನನ್ನ ಯೋಗಶಿಕ್ಷಣದ ಗುರುಗಳು ದಿನಕ್ಕೊಂದು ಶ್ಲೋಕವನ್ನಾದರೂ ಗೀತೆ ಕಲಿತುಕೊಳ್ಳಿ ಎಂದು ಅದೆಷ್ಟು ಬಾರಿ ಹೇಳಿದ್ದಾರೆ!
ಆದರೂ ನಾನೇಕೆ ಗೀತಾಭ್ಯಾಸಕ್ಕೆ ಮನಸುಮಾಡಿರಲಿಲ್ಲ ಎಂದು ನನಗೇ ಆಶ್ಚರ್ಯವಾಗುತ್ತಿದೆ. ಬಹುಶಃ ಗೀತಾ ಪರಿವಾರದಿಂದ ಈ ರೀತಿಯ ಕಲಿಕೆಯ ಭಾಗ್ಯವೇ ನನಗೆ ಬರೆದದ್ದಿತ್ತು. ಇನ್ನು ಮುಂದೆ ಗೀತೆಯನ್ನು ಕಲಿಯುತ್ತಿರುವಾಗಲೇ ಈ ಮಹಾಕಾರ್ಯ ದಲ್ಲಿ ಸ್ವಯಂಸೇವಕನಾಗಿಯೂ ತೊಡಗಿಸಿಕೊಳ್ಳಬೇಕೆಂದಿದ್ದೇನೆ’ ಎಂಬ ಅತ್ಯುತ್ಸಾಹ ಅವರದು.
ನಮಗೆ ನಾಳೆಯಿಂದ (ಏಪ್ರಿಲ್೫) ಲೆವೆಲ್-೨ತರಗತಿಗಳ ಆರಂಭ. ಲೆವೆಲ್-೧ನ ಹೊಸ ಬ್ಯಾಚ್ ಏಪ್ರಿಲ್೧೨ರಿಂದ ಆರಂಭ ವಾಗುತ್ತಿದೆ. ಇಂಗ್ಲಿಷ್, ಹಿಂದಿ, ಮರಾಠಿ, ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿ ತರಗತಿಗಳಿಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಯಥಾಪ್ರಕಾರ ಕನ್ನಡಿಗರು ತೀರ ಹಿಂದೆ. ಹೀಗೇಕೆ? ಗೀತೆ ನಿಮಗೂ ಜೀವನದಿ ಅಮೃತವಾಹಿನಿಯಾಗಲಿ.
./ ಕೊಂಡಿ ಈಗಿಂದೀಗಲೇ ನಿಮ್ಮಿಂದಲೂ ಕ್ಲಿಕ್ ಆಗಲಿ!