ಮುರಿದ ಮನಸ್ಸುಗಳನ್ನು ಬೆಸೆದ ಶ್ರೀರಾಮ
ಅಭಿವ್ಯಕ್ತಿ
ಮಣ್ಣೆಮೋಹನ್‌
ಅದೊಂದು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ. ಇತರ ಎಲ್ಲಾ ಬಡಾವಣೆಗಳಂತೆ ಅಲ್ಲಿಯೂ ರಾಜಕೀಯವೇ ಪ್ರಧಾನ. ರಾಜಕೀಯ ಬಣಗಳ ವೈಷಮ್ಯಗಳು, ಪರಸ್ಪರ ಆರೋಪ – ಪ್ರತ್ಯಾರೋಪಗಳು ಮಾಮೂಲಿ.
ಬಡಾವಣೆಯ ಕಾರ್ಪೊರೇಟರ್ ಒಂದು ಪಕ್ಷದವರಾದರೆ, ಶಾಸಕರು ಇನ್ನೊಂದು ಪಕ್ಷದವರು. ಹೀಗಾಗಿ ಅವರ ಮೇಲೆ ಇವರ,ಇವರ ಮೇಲೆ ಅವರ ಆರೋಪಗಳು ತುಸು ಹೆಚ್ಚೇ ಎನ್ನಬೇಕು. ಚುನಾವಣಾ ಸಮಯದಲ್ಲಿ, ಪ್ರಚಾರದ ಭರಾಟೆ ಯಲ್ಲಿ ಪರಸ್ಪರ ಘರ್ಷಣೆಗಳು ನಡೆದು, ಮನಸ್ತಾಪ ಹಾಗೆಯೇ ಉಳಿದು, ನಾವೆ ಒಂದೇ ಬಡಾವಣೆಯ ನಿವಾಸಿಗಳು, ಪ್ರತಿನಿತ್ಯ ಒಬ್ಬರ ಮುಖಒಬ್ಬರು ನೋಡಬೇಕಾದವರು, ಹಾಗಾಗಿ ನಾವೆಲ್ಲ ಒಂದಾಗಿರಬೇಕೆಂಬ ಭಾವನೆಯೇ ಮಾಯವಾಗಿ, ಚುನಾವಣಾ ಜಿದ್ದನ್ನು ವರ್ಷದ ಪ್ರತಿದಿನದ ಜಿದ್ದನ್ನಾಗಿಸಿಕೊಂಡವರು.
ಇಂಥ ಸಂದರ್ಭದಲ್ಲಿ ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಆರಂಭವಾಯಿತು. ಇದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಯೂ ಆರಂಭಿಸ ಲಾಯಿತು. ಸಂಘದ ಕಾರ್ಯಕರ್ತರು ಪಕ್ಷಬೇಧ ಮರೆತು ಎಲ್ಲಾ ಪಕ್ಷಗಳ ಮುಖಂಡರ ಮನೆಗಳಿಗೆ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ರಾಮ ನಮ್ಮೆಲ್ಲರಆಸ್ಮಿತೆ, ಶ್ರೀರಾಮಮಂದಿರ ನಮ್ಮೆಲ್ಲರ ಅಗತ್ಯತೆ’.
ಹಾಗಾಗಿ ಈ ಅಭಿಯಾನಕ್ಕೆ ಎಲ್ಲರೂ ಜೋಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಬಡಾವಣೆಯಾದ್ಯಂತ ಇದರ ಕುರಿತು ಪಿಸುಪಿಸು ಗುಸುಗುಸು ಆರಂಭವಾಯಿತು. ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡಲು ಯಾವ ಪಕ್ಷದವರ ತಕರಾರು ಇರಲಿಲ್ಲ.ಆದರೆ ಆರೆಸ್ಸೆಸ್ ಎಂದರೆ ಬಿಜೆಪಿಯ ಮುಖವಾಡ. ನಾವು ಇವರಿಗೆ ದೇಣಿಗೆ ನೀಡಿದರೆ ಬಿಜೆಪಿಯನ್ನು ಬೆಂಬಲಿಸಿದಂತಾಗುವು ದಿಲ್ಲವೇ? ಎಂಬುದು ಇತರ ಪಕ್ಷಗಳ ಮುಖಂಡರ ಚಿಂತೆ. ಈ ಬಗ್ಗೆ ಆಯಾ ಪಕ್ಷಗಳ ಮುಖಂಡರ ನಡುವೆ ವಾದ – ವಿವಾದಗಳು ನಡೆದು, ನಾವೀಗ ಈ ಅಭಿಯಾನದಿಂದ ದೂರ ಉಳಿದರೆ ಜನರು ನಮ್ಮನ್ನು ಮಂದಿರ ವಿರೋಧಿಗಳೆಂದು ಭಾವಿಸಿ, ನಮ್ಮಮತಬ್ಯಾಂಕಿಗೆ ದಕ್ಕೆಯಾಗಬಹುದೆಂಬ ಭಯದಿಂದ, ನಾವೇ ದೇಣಿಗೆ ಸಂಗ್ರಹಿಸಿ, ಯಾರಾದರೊಬ್ಬರು ಸ್ವಾಮೀಜಿಗಳಿಗೆ ಅರ್ಪಿಸಿದರೆ ಹೇಗೆ? ಎಂಬ ಆಲೋಚನೆಯನ್ನು ಆರಂಭಿಸಿದರು.
ಹೀಗೆ ಮಾಡುವುದರಿಂದ ತಮ್ಮ ತಮ್ಮ ಪಕ್ಷಗಳ ಕಾರ್ಯಕರ್ತರುಗಳು ಬಿಜೆಪಿ ಪಕ್ಷದವರ ಸಂಪರ್ಕಕ್ಕೆ ಬಾರದಂತೆ ತಡೆಯಬಹು ದೆಂಬುದು ಅವರ ದೂರಾಲೋಚನೆ. ಹಾಗೆಯೇ ಅವರ ಮುಖ ನೋಡದೆ ನಮ್ಮ ಜಿದ್ದನ್ನು ಮುಂದುವರಿಸಬಹುದೆಂಬ ಜಿಜ್ಞಾಸೆ.ಇತ್ತ ಸಂಘದ ಕಾರ್ಯಕರ್ತರು ಇದ್ಯಾವುದರ ಗೊಡವೆಯೇ ಇಲ್ಲದೆ ದೇಣಿಗೆ ಸಂಗ್ರಹ ಕಾರ್ಯ ವನ್ನು ಆರಂಭಿಸಿಯೇಬಿಟ್ಟರು. ಪ್ರತಿ ಮನೆಗಳಿಗೆ ಭೇಟಿ ನೀಡಿ, ಕರಪತ್ರ ನೀಡಿ, ಅವರು ಕೊಟ್ಟಷ್ಟು ಹಣಕ್ಕೆ ಕೂಪನ್‌ಗಳನ್ನು ನೀಡುತ್ತಾ, ದೇಣಿಗೆ ಸಂಗ್ರಹದಲ್ಲಿ ತೊಡಗಿದರು.
ನೋಡ ನೋಡುತ್ತಿದ್ದಂತೆಯೇ ಆ ಪಕ್ಷ, ಈ ಪಕ್ಷ ಎನ್ನದೆ ಎಲ್ಲಾ ಪಕ್ಷದವರು ಉದಾರವಾಗಿ ದೇಣಿಗೆ ನೀಡತೊಡಗಿದರು. ಇದು ಇತರ ಪಕ್ಷದವರ ಚಿಂತೆಗೆ ಕಾರಣವಾಯಿತು. ಪಕ್ಷದ ಧುರೀಣರು ಇನ್ನೂ ತಮ್ಮತಮ್ಮ ಏನು ಮಾಡಬೇಕೆಂದು ಚಿಂತನೆಯಲ್ಲಿ ತೊಡಗಿರುವಾಗಲೇ, ಆಯಾ ಪಕ್ಷದ ಕಾರ್ಯಕರ್ತರುಗಳು ತಮ್ಮಷ್ಟಕ್ಕೆ ದೇಣಿಗೆ ನೀಡಿಯಾಗಿತ್ತು. ಇದು ಮುಖಂಡರ ಗಮನಕ್ಕೂ ಬಂದು ಅವರ ತಾಳ್ಮೆಗೆಟ್ಟಿತು. ಅವರು ಕೇವಲ ಸಂಘದ ಕಾರ್ಯಕರ್ತರು, ನಾವು ಪಕ್ಷಗಳ ಮುಖಂಡರು.
ಅವರಿಗಿಂತಲೂ ಹೆಚ್ಚು ದೇಣಿಗೆ ಸಂಗ್ರಹಿಸಿ ಈ ಬಡಾವಣೆಯಲ್ಲಿ ನಮ್ಮ ಹಿಡಿತ ವೇನೆಂದು ತೋರಿಸಬೇಕೆಂಬ ಮಹದಾಸೆಯಿಂದ. ನಿಧಿ ಸಂಗ್ರಹಿಸಲು ಆರಂಭಿಸಿದರೆ, ಎಲ್ಲರೂ ಈಗಾಗಲೇ ನಾವು ನೀಡಿಯಾಗಿದೆ ಎನ್ನಬೇಕೇ? ಇದೇ ಅವರ ತಾಳ್ಮೆ ಮುರಿಯಲು ಕಾರಣ. ಇದೀಗ ಇನ್ನೊಂದು ಬಗೆಯ ಕೆಸರೆರಚಾಟ ಆರಂಭ ವಾಯಿತು. ಅಪರಿಚಿತರೆಲ್ಲ ನಮ್ಮ ಬಡಾವಣೆಗೆ ಬಂದು ಹಣ ಸಂಗ್ರಹಿಸುತ್ತಿದ್ದಾರೆ.
ಸಂಗ್ರಹಿಸಿದ ಹಣಕ್ಕೆ ಕೂಪನ್ ಸಹ ನೀಡುತ್ತಿಲ್ಲ’ವೆಂದು ನಿರಾಧಾರ ಆರೋಪವನ್ನು ಹಬ್ಬಿಸಲಾಯಿತು. ‘ನಿಮ್ಮ ಮನೆಗಳಿಗೆ ಅಂತಹವರು ಬಂದರೆ ಹಿಡಿದು ಪ್ರಶ್ನಿಸಿ, ನಮ್ಮ ಬಳಿ ಕರೆ ತನ್ನಿ’ ಎಂಬ ಆದೇಶವು ಹೊರಟಿತು. ಆದರೆ ಆ ರೀತಿಯೇನೂ ನಡೆಯಲಿಲ್ಲ. ಶ್ರೀರಾಮನಟಿ-ಶರ್ಟ್ ತೊಟ್ಟು, ಹಣೆಗೆ ತಿಲಕವನ್ನಿಟ್ಟು, ಕೇಸರಿ ಶಲ್ಯ, ಕೇಸರಿ ಮಾಸ್ಕ್‌ಗಳಲ್ಲಿ ಮನೆ ಬಾಗಿಲಿಗೆ ಬರುವ ಶ್ರೀರಾಮ ಭಕ್ತರನ್ನು, ಜನರೆಲ್ಲ ಆದರದಿಂದ ಬರಮಾಡಿಕೊಂಡು, ಪ್ರೀತಿಯಿಂದಲೇ ದೇಣಿಗೆ ಸಮರ್ಪಿಸಿ, ಭಕ್ತಿಭಾವದಿಂದಕೂಪನ್‌ಗಳನ್ನೇ ಕಣ್ಣಿಗೊತ್ತಿಕೊಂಡು ಪುನೀತ ಭಾವನೆ ಹೊಂದುತ್ತಾ, ತಾವುಗಳೇ ಮುಂದೆ ನಿಂತು ಅಕ್ಕಪಕ್ಕದವರಿಂದಲೂ ದೇಣಿಗೆ ಕೊಡಿಸಿದ್ದು ಕಾರ್ಯಕ್ರಮದ ಯಶಸ್ಸಿನ ದ್ಯೋತಕವಾಯಿತು.
ದೇಣಿಗೆ ಸಂಗ್ರಹಿಸಲು ಮನೆಮನೆಗೆ ಭೇಟಿ ಕೊಟ್ಟಾಗ ಶ್ರೀರಾಮನ ಮೇಲಿನ ಭಕ್ತಿ – ಭಾವನೆಗಳ ಹೊಸ ಲೋಕವೊಂದು ಅನಾವರಣವಾಯಿತು. ಅಡ್ವಾಣಿಯವರ ರಥಯಾತ್ರೆಯ ಸಂದರ್ಭದಲ್ಲಿ ತಮ್ಮ ತಮ್ಮ ಊರುಗಳಿಗೆ, ಕೇರಿಗಳಿಗೆ ಶ್ರೀರಾಮಜ್ಯೋತಿಯನ್ನು ತಂದು ಅದ್ದೂರಿಯಾಗಿ ಮೆರವಣಿಗೆ ಮಾಡಿದವರು, ಅಂದಿನ ಆ ಭಾವನಾತ್ಮಕ ಕ್ಷಣವನ್ನು ಸ್ಮರಿಸಿಕೊಂಡು ಭಾವುಕರಾದರು.
ಸುಮಾರು 500ವರ್ಷಗಳ ಅವಿರತ ಹೋರಾಟಕ್ಕೆ, ಸುಮಾರು4ಲಕ್ಷ ಜನರ ಬಲಿದಾನಕ್ಕೆ ಸಿಕ್ಕ ಪ್ರತಿಫಲವೆಂದು ಅನೇಕರುಹೆಮ್ಮೆಯಿಂದ ಹೇಳಿಕೊಂಡರು. ನಮ್ಮ ಹಿಂದಿನ ತಲೆಮಾರು ರಾಮಮಂದಿರವನ್ನು ನೋಡುವ ಆಸೆಯಿಂದಲೇ ಕಣ್ಮುಚ್ಚಿದರು. ನಮ್ಮ ಮುಂದಿನ ತಲೆಮಾರು ರಾಮಮಂದಿರಕ್ಕೆ ದೇಣಿಗೆ ನೀಡುವ ಅವಕಾಶದಿಂದ ವಂಚಿತರಾದರು. ಆದರೆ ನಮ್ಮ ತಲೆಮಾರು ಅವೆರಡಕ್ಕೂ ಸಾಕ್ಷಿಯಾಗಿ, ಪುಣ್ಯ ಪಡೆಯುವಂತಾಯಿತು ಎಂದು ಅನೇಕರು ಅಭಿಮಾನದಿಂದ ಎದೆಯುಬ್ಬಿಸಿ ಹೇಳಿದರು.
ಅಭಿಯಾನದುದ್ದಕ್ಕೂ ಒಬ್ಬರೂ ನಾವು ದೇಣಿಗೆ ಕೊಡುವುದಿಲ್ಲವೆಂದು ಹೇಳಲಿಲ್ಲ. ಇನ್ನೊಬ್ಬರಿಗೂ ದೇಣಿಗೆ ಕೊಡಬೇಡಿರೆಂದು ಹೇಳಿಕೊಡಲಿಲ್ಲ. ವಿವಾದಿತ ಸ್ಥಳದಲ್ಲಿ ಕಟ್ಟುತ್ತಿರುವ ದೇವಾಲಯವೆಂದು ಉದ್ಧಟತನದ ಮಾತಾಡಲಿಲ್ಲ. ದೇಣಿಗೆ ನೀಡದಿದ್ದವರ ಮನೆ ಗುರುತು ಮಾಡುತ್ತಿದ್ದೀರೆಂದು ಸುಖಾಸುಮ್ಮನೆ ಆರೋಪಿಸಲಿಲ್ಲ. ಮೊದಲು ಕೊಟ್ಟ ದೇಣಿಗೆಯ ಲೆಕ್ಕವನ್ನೂ ಕೇಳಲಿಲ್ಲ.ಎಲ್ಲರೂ ಯಾರ ಒತ್ತಾಯವೂ ಇಲ್ಲದೆ ಸ್ವಇಚ್ಛೆಯಿಂದಲೇ, ಈಗ ಕಾಲ ಕೂಡಿ ಬಂತೆಂಬ ಅಭಿಮಾನದಿಂದಲೇ ಉದಾರ ದೇಣಿಗೆ ಸಮರ್ಪಿಸಿದರು.
ಆ ಮೂಲಕ ನಿಶ್ಚಲ ಪರಿಶುದ್ಧ ನೀರನ್ನು ಕದಡಿ ಕೊಚ್ಚೆ ಸೇರಿಸುವ, ಗೊಡ್ಡು ಚಿಂತನೆಗಳ ನಾಯಕರ ಹಾಗೂ ಪ್ರಬುದ್ಧ ನಡವಳಿಕೆಯ ಜನಸಾಮಾನ್ಯರ ನಡುವಿನ ಅಜಗಜಾಂತರ ವ್ಯತ್ಯಯಕ್ಕೆ ಪ್ರತೀಕವಾದರು. ಬಡಾವಣೆಯಲ್ಲಿಯೇ ಕಾರ್ಯಾ ಲಯವು ಇದ್ದದ್ದು; ಪ್ರತಿದಿನ ಸಂಗ್ರಹವಾದ ದೇಣಿಗೆಯನ್ನು ಕಾರ್ಯಕರ್ತರುಗಳು ಅಂದಂದೇ ಕಾರ್ಯಾಲಯಕ್ಕೆ ಲೆಕ್ಕ ಸಲ್ಲಿಸು ತ್ತಿದ್ದದ್ದು; ಇಂದು ಸಂಗ್ರಹವಾದ ಹಣವನ್ನು ಮಾರನೆಯ ದಿನವೇ ಬ್ಯಾಂಕಿಗೆ ಸಂದಾಯ ಮಾಡುತ್ತಿದ್ದದ್ದು; ಜನರು ನೀಡುತ್ತಿದ್ದ101,501,1001, 5001, 10001ಹಣದಲ್ಲಿ ಬಂಧಕ್ಕೆ ಕೂಪನ್ ನೀಡಿ,ಉಳಿಕೆಯ ಒಂದೊಂದು ರು.ಗಳನ್ನು ಸಂಗ್ರಹಿಸಿ, ಹತ್ತು ನಾಣ್ಯಗಳಾದ ನಂತರ 10 ರು.ಗಳ ಮತ್ತೊಂದು ಕೂಪನ್ ಹರಿಯುತ್ತಿದ್ದದ್ದು- ಈ ರೀತಿಯ ಶಿಸ್ತುಬದ್ಧ ದೇಣಿಗೆ ಸಂಗ್ರಹ ವ್ಯವಸ್ಥೆ ಜನರ ಮನಸ್ಸಿನಲ್ಲಿ ಈ ಅಭಿಯಾನದ ಬಗ್ಗೆ ಗೌರವ ಬರುವಂತಾಗಲು ಕಾರಣವಾಯಿತು.
ಈ ನಡುವೆ ಪತ್ರಕರ್ತರೊಬ್ಬರು ಪ್ರತಿದಿನವೂ ಈ ಅಭಿಯಾನದ ವರದಿಯನ್ನು ಪತ್ರಿಕೆಗಳಲ್ಲಿ ವರದಿ ಮಾಡುತ್ತಾ, 5000 ಮೇಲ್ಪಟ್ಟು ದೇಣಿಗೆ ನೀಡಿದ ಕುಟುಂಬಗಳ ಫೋಟೋವನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದದ್ದು, ಜನರಲ್ಲಿ ಹೆಚ್ಚೆಚ್ಚು ದೇಣಿಗೆ ನೀಡಲು ಉತ್ತೇಜಿಸಿದಂತಾಯಿತು. ಹಾಗೆಯೇ ಸಂಘದ ಕಾರ್ಯಕರ್ತರಿಗೆ ಹಣ ನೀಡಿದರೆ ಕೂಪನ್ ಸಿಗುತ್ತದೆ ಮತ್ತು ಪತ್ರಿಕೆಗಳಲ್ಲಿ ಸುದ್ದಿಯೂ ಆಗುತ್ತದೆ ಎಂಬ ವಿಚಾರ ಬಾಯಿಂದ ಬಾಯಿಗೆ ಹರಡಿ ಜನರು ಸ್ವಯಿಚ್ಛೆಯಿಂದ ಕಾರ್ಯಕರ್ತರನ್ನು ಕರೆಸಿ ದೇಣಿಗೆ ನೀಡತೊಡಗಿದರು.
ಹೀಗೆ ಕೇವಲ 15 ದಿನಗಳಲ್ಲಿ ಇಡೀ ಬಡಾವಣೆಯ ಒಂದು ಮನೆಯೂ ಉಳಿಯದಂತೆ ಎಲ್ಲರೂ ದೇಣಿಗೆ ನೀಡಿಯಾಗಿತ್ತು. ಇನ್ನು ಉಳಿದಿದ್ದು ಕೇವಲ ಇತರ ಪಕ್ಷಗಳ ಮುಖಂಡರು ಮಾತ್ರ. ಅಷ್ಟರಲ್ಲಿ ಇನ್ನೊಂದು ಸುದ್ದಿ ಈ ಮುಖಂಡರಿಗೆ ಬರ ಸಿಡಿಲಿನಂತೆ ಬಂದೆರಗಿತು. ಮುಸ್ಲಿಂ ಬಾಂಧವರು ಕೂಡ ಅಭಿಯಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ನೀಡಿದ್ದು ಪತ್ರಿಕೆಗಳಲ್ಲಿ ಸುದ್ದಿಯಾಗಿ ಜಾತ್ಯತೀತತೆಯ ಪಕ್ಷದ ಮುಖಂಡರಿಗೆ ಇರಿಸುಮುರಿಸಾದಂತಾಯಿತು.
ಕೊನೆಗೆ ಬೇರೆ ದಾರಿ ಕಾಣದೆ ಅಭಿಯಾನದ ಕೊನೆಯ ದಿನ, ಈ ಮುಖಂಡರೆಲ್ಲ ಸಂಘದ ಕಾರ್ಯಕರ್ತರಿಗೆ ದೇಣಿಗೆಯನ್ನು ನೀಡಿ ಪತ್ರಿಕೆಗಳಲ್ಲಿ ಸುದ್ದಿಯಾದರು. ಆ ಮೂಲಕ ಪಕ್ಷ, ಜಾತಿ, ಧರ್ಮಗಳ ಸಿದ್ಧಾಂತಗಳನ್ನು ಮೀರಿ, ನಿರ್ಮಾಣವಾಗುತ್ತಿರುವುದು ರಾಮಮಂದಿರವಲ್ಲ, ರಾಷ್ಟ್ರಮಂದಿರವೆಂಬ ಪರಿಕಲ್ಪನೆಗೆ ಜತೆಯಾದರು. ಈ ರೀತಿ ಮುನಿದ – ಮುರಿದ ಮನಸ್ಸುಗಳನ್ನುಶ್ರೀರಾಮನು ಬೆಸೆದನು, ಹೊಸೆದನು. ಇದು ಕೇವಲ ಒಂದು ಬಡಾವಣೆಯ ಮುರಿದ ಮನಸ್ಸುಗಳು ಬೆಸೆದ ಕಥೆಯಾಗಿರದೆ, ಇಡೀ ದೇಶದ ಎಲ್ಲಾ ಭಾಗದ ಮುರಿದ ಮನಸ್ಸುಗಳು ಬೆಸೆದ ಕಥೆಯಾಗಿದೆ.
ಹಾಗೆಯೇ ಶ್ರೀರಾಮನು ಎಂದಿಗೂ ಕೆಡವುವವನಲ್ಲ, ಕಟ್ಟುವವನು ಎಂಬುದನ್ನು ಸಾಕ್ಷೀಕರಿಸಿದೆ.