ಪ್ಲವ ಸಂವತ್ಸರದ ಸ್ವಾಗತಕ್ಕೆ ಸದ್ವಿಚಾರ ತೋರಣ
ತಿಳಿರುತೋರಣ
ಶ್ರೀವತ್ಸಜೋಶಿ
ಅಳಿಲು ಸೇವೆಯ ಕಥೆ ವಾಲ್ಮೀಕಿ ಮಹರ್ಷಿ ಬರೆದ ರಾಮಾಯಣದಲ್ಲಿ ಇಲ್ಲ. ಆ ಕಥೆಯನ್ನು ಆ ಮೇಲಿನ ಯಾರೋ ರಾಮಾಯಣ ಕೃತಿಕಾರರು ಸೇರಿಸಿದ್ದಿರಬೇಕು. ಅದು ಭಾರತೀಯ ಭಾಷೆಗಳಲ್ಲೆಲ್ಲ ಒಂದು ಜನಪ್ರಿಯ ನುಡಿಗಟ್ಟೇ ಆಗಿಹೋಯ್ತು. ಕ್ರಿ.ಶ ಹದಿನಾಲ್ಕನೆಯ ಶತಮಾನದ ಆರಂಭದಲ್ಲಿ ರಂಗನಾಥ ಎಂಬ ತೆಲುಗು ಕವಿಯು ಬರೆದ ‘ರಂಗನಾಥ ರಾಮಾಯಣ’ದಲ್ಲಿ ಮೊದಲ ಬಾರಿಗೆ ಅಳಿಲು ಸೇವೆಯ ಉಲ್ಲೇಖ ಬಂದಿರುವುದೆಂದು ವಿದ್ವಾಂಸರ ಅಭಿಪ್ರಾಯ.
ತೆಲುಗಿನಲ್ಲಿ ಅಳಿಲಿಗೆ ‘ಉಡುತ’ ಎನ್ನುವುದಾದ್ದರಿಂದ ರಂಗನಾಥ ರಾಮಾಯಣದ ಯುದ್ಧಕಾಂಡದಲ್ಲಿ ‘ಉಡುತ ಭಕ್ತಿ’ಯ ಮನೋಜ್ಞ ವಿವರಣೆಯಿದೆಯಂತೆ. ಯಾರದೇ ಕಲ್ಪನೆಯಿರಲಿ ಬಹಳ ಸತ್ತ್ವಪೂರ್ಣ ಮತ್ತು ಮೌಲ್ಯಯುತ ಕಥೆ ಅದು.ನುಡಿಗಟ್ಟಿನಿಂದಾಗಿ ಚಿರಪರಿಚಿತ ಮತ್ತು ಅತಿ ಜನಪ್ರಿಯ ಕೂಡ. ವಾನರಸೇನೆಯು ಲಂಕೆಗೆ ಸೇತುವೆಯನ್ನು ಕಟ್ಟುತ್ತಿರುವಾಗಪುಟ್ಟದೊಂದು ಅಳಿಲು ತಾನೂ ಆ ಮಹಾಕಾರ್ಯದಲ್ಲಿ ಭಾಗಿಯಾಗಬೇಕೆಂದು ಬಯಸುತ್ತದೆ; ಸಮುದ್ರದ ನೀರಲ್ಲಿ ಮುಳುಗಿ ಮೈ ಒದ್ದೆ ಮಾಡಿಕೊಂಡು ಬಂದು ಸಮುದ್ರತೀರದ ಮರಳಿನ ಮೇಲೆ ಹೊರಳಾಡಿ ಮೈಗೆಲ್ಲ ಮರಳು ಅಂಟಿಸಿಕೊಳ್ಳುತ್ತದೆ; ನಿರ್ಮಾಣವಾಗುತ್ತಿರುವ ಸೇತುವೆಯ ಮೇಲೆ ಹೋಗಿ ಮೈಕೊಡವಿಕೊಂಡು ಕಲ್ಲುಗಳ ನಡುವೆ ಮರಳನ್ನು ಉದುರಿಸುತ್ತದೆ; ಕಲ್ಲುಗಳು ಒತ್ತಟ್ಟಾಗಿ ಬೆಸೆದು ಸೇತುವೆ ಭದ್ರವಾಗಲಿ ಎಂದು ಅದರ ಆಶಯ.
ಈ ಪರಿಕ್ರಮವನ್ನು ಅಳಿಲು ದಿನವಿಡೀ ದಣಿವಿಲ್ಲದೆ ಮಾಡುತ್ತದೆ. ಸೇತುವೆಯನ್ನು ಕಟ್ಟುತ್ತಿದ್ದ ಕಪಿಗಳು ಇದರದೊಂದು ಉಪದ್ರವ ಎಂದು ಅಳಿಲಿಗೆ ಛೀಮಾರಿ ಹಾಕುವುದೂ ಇದೆ. ಆದರೆ ಅಳಿಲು ಏಕಾಗ್ರತೆಯಿಂದ ತನ್ನ ಪಾಡಿಗೆ ತಾನು ಆ ರೀತಿ ಮರಳುತುಂಬುವ ಕೆಲಸ ಮುಂದುವರಿಸುತ್ತದೆ. ಅದರ ಕಾರ್ಯತತ್ಪರತೆಯನ್ನು ಅಲ್ಲೇ ವಿರಮಿಸುತ್ತಿದ್ದ ಶ್ರೀರಾಮ ಗಮನಿಸುತ್ತಾನೆ. ಅದನ್ನೆತ್ತಿಕೊಂಡು ಮೈದಡವಿ ಮುದ್ದಿಸುತ್ತಾನೆ. ಹಾಗೆ ಬೆನ್ನಮೇಲೆ ಶ್ರೀರಾಮನು ಕೈಯಿಂದ ನೇವರಿಸಿದ್ದರಿಂದಲೇ ಅಳಿಲಿಗೆ ಈಗಲೂ ಬೆನ್ನಮೇಲೆ ಮೂರು ಗೆರೆಗಳಿರುವುದು – ಅಂತ ನಂಬಿಕೆ.
ಎಲ್ಲರಿಗೂ ಗೊತ್ತಿರುವ ಕಥೆಯೇ ಇದು. ನಾನೇನೂ ಹೊಸದಾಗಿ ಹೇಳುತ್ತಿರುವುದಲ್ಲ. ಆದರೆ ಅಳಿಲು ಸೇವೆಯ ಕಥೆಯಲ್ಲಿ ನಾವು ಹೆಕ್ಕಿಕೊಳ್ಳಬೇಕಾದ ಕೆಲವು ಅಂಶಗಳಿವೆ. ಅಳಿಲು ಹೇಳಿಕೇಳಿ ಬಲು ಚಿಕ್ಕ ಪ್ರಾಣಿ. ಸಮುದ್ರದ ಮೇಲೆ ಸೇತುವೆ ನಿರ್ಮಾಣದಂಥ ಅತಿ ಕಷ್ಟಕರ ಬೃಹತ್ ಯೋಜನೆಯಲ್ಲಿ ಪುಟಗೋಸಿ ಅಳಿಲು ಏನು ತಾನೆ ನೆರವು ನೀಡೀತು? ಆದರೂ ಅದು ಸುಮ್ಮನೆ ಕುಳಿತು ಕೊಳ್ಳಲಿಲ್ಲ.
ತನ್ನ ಮನಸ್ಸನ್ನೂ ಹೃದಯವನ್ನೂ ಸಮರ್ಪಿಸಿ ಆ ಬೃಹತ್ ಯೋಜನೆಯ ಸಂಕಲ್ಪದಲ್ಲಿ ತೊಡಗಿಸಿಕೊಂಡಿತು; ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿತು. ಸೇತುವೆಯ ಅಗಾಧತೆಯ ಮುಂದೆ ಆ ಅಳಿಲು ಉದುರಿಸಿದ ಮರಳಿನ ಕಣಗಳು ಏನೇನೂ ಅಲ್ಲ. ಆದರೇನಂತೆ, ಅದರ ಸೇವಾ ಮನೋಭಾವ, ಒಂದು ಸದುದ್ದೇಶಕ್ಕಾಗಿ ದೈಹಿಕ ಶ್ರಮದ ಸಮರ್ಪಣೆ ಸಾಟಿಯಿಲ್ಲದವು.ಆದ್ದರಿಂದಲೇ ಶ್ರೀರಾಮ ಅದನ್ನು ಮೆಚ್ಚಿ ಮುದ್ದಾಡಿದನು. ಸೇವೆ ಸಲ್ಲಿಸಿದ್ದರ ಗುರುತು ತಲೆತಲಾಂತರಗಳಲ್ಲೂ ಅಳಿಲಿಗೆ ಇರುವಂತೆ ಹರಸಿದನು.
ದೇವರಿಗೆ ಸೇವೆಯಲ್ಲಿ ಚಿಕ್ಕದು ದೊಡ್ಡದು ಅಂತ ಇಲ್ಲ. ಹೃದಯಪೂರ್ವಕವಾಗಿ ಮಾಡುವ ಕಿಂಚಿತ್ ಸೇವೆ ಕೂಡ ದೇವರ ದೃಷ್ಟಿಯಲ್ಲಿ ದೊಡ್ಡದೇ. ಇನ್ನೂ ಒಂದು ವಿಚಾರವಿದೆ. ಇಲ್ಲಿ ಅಳಿಲಿನ ನಿಸ್ವಾರ್ಥ ಸೇವೆ ಎಷ್ಟು ಮುಖ್ಯವೋ ಶ್ರೀರಾಮಚಂದ್ರನು ಅದನ್ನು ಗುರುತಿಸಿ ಗೌರವಿಸಿದ್ದೂ ಅಷ್ಟೇ ಮುಖ್ಯ. ಈಗ ಕಲಿಯುಗದಲ್ಲಿ ಅನೇಕ ಸಲ ಏನಾಗುತ್ತದೆಂದರೆ, ನಿರ್ಮಲ ಮನಸ್ಸಿ ನಿಂದ ನಿಸ್ವಾರ್ಥ ಭಾವದಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ಕೆಲಸ ಮಾಡುವ ‘ಅಳಿಲು’ಗಳು ಎಲ್ಲೆಡೆಯೂ ಬೇಕಾದಷ್ಟು ಕಾಣಸಿಗುತ್ತವೆ; ಆದರೆ ಅವುಗಳ ಸೇವೆಯನ್ನು ಗುರುತಿಸಿ ಗೌರವಿಸುವ ‘ಶ್ರೀರಾಮಚಂದ್ರ’ರು ಬಲು ಅಪರೂಪ.
ನಾನೇ ಎಲ್ಲ ನನ್ನಿಂದಲೇ ಎಲ್ಲ ಎಂದು ಬೀಗುವವರ ಸಂಖ್ಯೆಯೇ ಹೆಚ್ಚು. ಬೇಕಿದ್ದರೆ ನೋಡಿ ಎರಡು-ಮೂರು ಜನರಷ್ಟೇ ಇರುವ ಚಿಕ್ಕ ಚಿಕ್ಕ ಸಂಸಾರಗಳಿಂದ ಹಿಡಿದು ಬಹುರಾಷ್ಟ್ರೀಯ ಕಾರ್ಪೊರೆಟ್ ಕಂಪನಿಗಳವರೆಗೆ, ಅಥವಾ ಲಾಭರಹಿತ ಉದ್ದೇಶದಿಂದ ಆರಂಭವಾಗಿ ಆಮೇಲೆ ರಾಜಕೀಯವನ್ನು ಮೆತ್ತಿಕೊಂಡು ಅಧ್ವಾನದ ಕೂಪಗಳಾಗುವ ಸಂಘ ಸಂಸ್ಥೆಗಳಲ್ಲೂ, ಕೂಟ – ಒಕ್ಕೂಟಗಳಲ್ಲೂ, ‘ಅಳಿಲು’ಗಳು ಒಂದೆರಡಾದರೂ ಇದ್ದೇ ಇರುತ್ತವೆ; ಅವುಗಳ ಸೇವೆಯ ಗುರುತಿಸುವಿಕೆ ಮಾತ್ರ ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ.
ಅದಕ್ಕೆ ಕಾರಣ ಯಶಸ್ಸೆಲ್ಲವೂ ನನ್ನೊಬ್ಬನ ಸಾಧನೆಯ ಫಲ ಎನ್ನುವ ಅಹಂಕಾರದ ಮುದ್ದೆಗಳು. ಈ ಸಂದರ್ಭದಲ್ಲಿ ‘ಕೆರೆ ನಿರ್ಮಾಣ’ದ ಸಂಸ್ಕೃತ ಸುಭಾಷಿತ ಮತ್ತೊಮ್ಮೆ ಪ್ರಸ್ತುತವೆನಿಸುತ್ತದೆ. ಮತ್ತೊಮ್ಮೆ ಎಂದಿದ್ದೇಕೆಂದರೆ ಈ ಹಿಂದೆಯೂ ಅಂಕಣ ದಲ್ಲಿ ಒಮ್ಮೆ ಇದನ್ನು ಉಲ್ಲೇಖಿಸಿದ್ದೆ. ಇರಲಿ, ಸುಭಾಷಿತ ಎಂದಮೇಲೆ ಆಗಾಗ ಮನನ ಮಾಡಿಕೊಂಡರೆ, ಅದರ ಪಾಠವನ್ನು ಅಳವಡಿಸಿಕೊಂಡರೆ, ಒಳ್ಳೆಯದೇ.
ಇಲ್ಲಿದೆ ನೋಡಿ:‘ಲಾವಕಶ್ಚ ವರಾಹಶ್ಚ ಮಹಿಷಃ ಕುಂಜರಸ್ತಥಾ| ಕರ್ತಾ ಕಾರಯಿತಾ ಚೈವ ಷಡೇತೇ ಸಮಭಾಗಿನಃ||’ ಲಾವಕ ಅಂದರೆ ಗುಬ್ಬಿ. ಅದು ತನ್ನ ಕೊಕ್ಕಿನಿಂದ ಮಣ್ಣನ್ನು ಅಗೆಯಿತು. ಅಲ್ಲಿ ಚಿಕ್ಕದೊಂದು ಗುಳಿ ಉಂಟಾಯ್ತು. ಆ ಗುಳಿಯಲ್ಲಿ ಮಳೆ ನೀರು ತುಂಬಿತು. ಅಬ್ಬಬ್ಬಾ ಅಂದರೆ ಎಷ್ಟು, ಒಂದು ಬೊಗಸೆ ತುಂಬುವಷ್ಟು ನೀರು ಆಗಬಹುದು.
ಆದರೆ ಗುಬ್ಬಿಗೆ ಅಷ್ಟು ಸಾಕು. ಗುಬ್ಬಿ ಅದರಲ್ಲಿ ಸ್ನಾನ ಮಾಡಿತು. ಆಮೇಲೆ ಒಂದು ಹಂದಿ(ವರಾಹ) ಅಲ್ಲಿಗೆ ಬಂದು ಅದೇ ಗುಳಿ ಯನ್ನು ತನ್ನ ಮೂತಿಯಿಂದ ಕೊರೆದು ದೊಡ್ಡದಾಗಿಸಿತು. ಕೆಸರಿನಲ್ಲಿ ಹಂದಿ ಹೊರಳಾಡಿತು, ಖುಷಿಪಟ್ಟಿತು. ಅದಾದ ಮೇಲೆ ಅಲ್ಲಿಗೆ ಒಂದು ಕೋಣ(ಮಹಿಷ) ಬಂತು. ಹೊಂಡದಲ್ಲಿ ಆರಾಮಾಗಿ ಮಲಗಿ ಮುದಗೊಂಡಿತು.
ಕೊನೆಗೊಂದು ಆನೆ(ಕುಂಜರ) ಆ ಹೊಂಡಕ್ಕಿಳಿದು ಅದನ್ನು ಮತ್ತೂ ದೊಡ್ಡದಾಗಿಸಿತು. ತುಂಬಿದ ನೀರನ್ನು ಸೊಂಡಿಲಿನಿಂದ ಮೈಮೇಲೆಲ್ಲ ಸಿಂಪಡಿಸಿಕೊಂಡು ಸಂತಸಪಟ್ಟಿತು. ಇವೆಲ್ಲ ಪ್ರಾಣಿಗಳು ನೀರಿನಾಟ ಆಡುತ್ತಿರುವುದನ್ನು ಆ ರಾಜ್ಯದ ರಾಜ ಮತ್ತು ಮಂತ್ರಿ ಅಲ್ಲೇ ವಾಯುವಿಹಾರಕ್ಕೆಂದು ಬಂದಿದ್ದವರು ಗಮನಿಸಿದರು.
ರಾಜ ಯೋಚಿಸಿದನು:‘ಈ ನೀರಿನ ಹೊಂಡಕ್ಕೆ ಮೆಟ್ಟಿಲು ಮತ್ತು ಸುತ್ತಲೂ ಕಟ್ಟೆ ಕಟ್ಟಿಸಿದರೆ ತುಂಬ ಚೆನ್ನಾಗಿರುತ್ತದೆ. ಪ್ರಜೆ ಗಳಿಗೂ ಅನುಕೂಲವಾಗುತ್ತದೆ’ ಎಂದು. ಒಡನೆಯೇ ಮಂತ್ರಿಗೆ ಆದೇಶವಿತ್ತನು. ಕಟ್ಟೆ ಕಟ್ಟುವ ಕಾಮಗಾರಿಯು ಮಂತ್ರಿಯಉಸ್ತುವಾರಿಯಲ್ಲಿ ನಡೆಯಿತು. ಪ್ರಪಂಚದ ಮೊತ್ತಮೊದಲ, ಸುಂದರವಾದ ಕೆರೆಯ ನಿರ್ಮಾಣವಾಯ್ತು.
ಆದರೆ, ತಾನೇ ಆ ಕೆರೆಯನ್ನು ನಿರ್ಮಿಸಿದ್ದೆಂದು ರಾಜ ಹೇಳಿಕೊಳ್ಳಬಹುದೇ? ಖಂಡಿತ ಇಲ್ಲ. ಅವನೇನಿದ್ದರೂ ಮಂತ್ರಿಯ ಮೂಲಕ, ಕೆಲಸಗಾರರ ಮೂಲಕ ಕೆರೆಯನ್ನು ಮಾಡಿಸಿದವನು(ಕಾರಯಿತಾ) ಅಷ್ಟೇ. ಮಂತ್ರಿ ಮತ್ತು ಕೆಲಸಗಾರರು ತಾವೇ ಆ ಕೆರೆಯ ನಿರ್ಮಾತೃರು ಎನ್ನಬಹುದೇ? ಇಲ್ಲ. ಅವರು ಕಟ್ಟೆ ಮತ್ತು ಮೆಟ್ಟಿಲುಗಳನ್ನು ಕಟ್ಟಿದವರು, ಆ ಮೂಲಕ ಕರ್ತಾ ಎನಿಸಿ ಕೊಂಡವರು ಹೌದಾದರೂ ಅಲ್ಲಿ ನೀರಿನ ಹೊಂಡ ಮೊದಲೇ ಇತ್ತಲ್ಲವೇ? ಹಾಗೆ ನೋಡಿದರೆ ಕೆರೆ ನಿರ್ಮಾಣದ ಶ್ರೇಯಸ್ಸಿ ನಲ್ಲಿ ರಾಜ, ಮಂತ್ರಿ ಮತ್ತು ಕೆಲಸಗಾರರದು ಮಾತ್ರವಲ್ಲ, ಆನೆ, ಕೋಣ, ಹಂದಿ, ಮತ್ತು ಗುಬ್ಬಿ – ಎಲ್ಲರದೂ ಸಮಪಾಲು ಇದೆ!
ಪ್ರಪಂಚದಲ್ಲಿ ಎಲ್ಲ ವಿಚಾರಗಳೂ ಹೀಗೆಯೇ. ನಾನೇ ಮಾಡಿದ್ದು, ನನ್ನಿಂದಲೇ ಎಲ್ಲ ಆದದ್ದು ಎಂಬ ಅಹಂಕಾರ ಸಲ್ಲದು. ಗುಬ್ಬಿಯಂಥ ಚಿಕ್ಕ ಪಕ್ಷಿಯಿಂದ ಹಿಡಿದು, ಆನೆಯಂಥ ಬೃಹದ್ಗಾತ್ರದ ಜೀವಿಗಳ ಕೊಡುಗೆ, ಸಹಕಾರ ಎಲ್ಲದರಲ್ಲೂ ಎಲ್ಲ ಕಡೆಯೂ ಇರುತ್ತದೆ. ಒಂದು ಸಾಧನೆಯಲ್ಲಿ, ಅದರ ಯಶಸ್ಸಿನಲ್ಲಿ, ಮತ್ತು ಪ್ರಯೋಜನದಲ್ಲಿ ಎಲ್ಲರೂ ಭಾಗಿಗಳಾಗುತ್ತಾರೆ. ಕೆಲವರದು ಪ್ರತ್ಯಕ್ಷ ಸಹಕಾರವಿರಬಹುದು, ಕೆಲವರದು ಪರೋಕ್ಷವಿರಬಹುದು.
ಅದೆಲ್ಲ ಗೊತ್ತಿರುತ್ತದೆ ನಮಗೆ. ಆದರೆ ಒಪ್ಪಿಕೊಳ್ಳಲಿಕ್ಕೆ ಅಹಂ ಅಡ್ಡ ಬರುತ್ತದೆ. ನನ್ನಿಂದಲೇ ಇದು ಸಾಧ್ಯವಾದದ್ದು, ನನಗೊಬ್ಬ ನಿಗೇ ಎಲ್ಲರೂ ಕೃತಜ್ಞರಾಗಿರಬೇಕು ಎಂಬ ಮದ ಮೈಮನವೆಲ್ಲ ತುಂಬಿ ಮೆರೆಯುತ್ತದೆ. ಇನ್ನೊಂದು ಪ್ರಸಂಗ ಮಹಾಭಾರತ ದಿಂದಾಯ್ದದ್ದು. ಇದೂ ಅಷ್ಟೇ, ವೇದವ್ಯಾಸರು ಬರೆದ(ಗಣೇಶನಿಂದ ಬರೆಸಿದ) ಮಹಾಭಾರತದಲ್ಲಿ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ.
ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಪ್ರಕಟವಾದದ್ದು, ವಾಟ್ಸಪ್‌ನಲ್ಲಿ ಅಪರೂಪಕ್ಕೊಂದು ಒಳ್ಳೆಯ ಫಾರ್ವರ್ಡ್ ಬಂದಿತೆಂದು ನಾನುಸಂಗ್ರಹಿಸಿಟ್ಟುಕೊಂಡದ್ದು. ಕನ್ನಡಕ್ಕೆ ಅನುವಾದಿಸಿ ಹೇಳುತ್ತೇನೆ: ಕುರುಕ್ಷೇತ್ರ ಯುದ್ಧದಲ್ಲಿ ಆವತ್ತು ಕರ್ಣಾರ್ಜುನರ ಮುಖಾ ಮುಖಿ. ಘನಘೋರ ಕಾಳಗ ಅದು. ಇಬ್ಬರೂ ಅಪ್ರತಿಮ ಯೋಧರು, ಬಿಟ್ಟ ಬಾಣಗಳಿಗೆ ಲೆಕ್ಕವೇ ಇಲ್ಲ. ಸ್ವರ್ಗದಿಂದ ದೇವತೆಗಳೂ ರಣಾಂಗಣದತ್ತ ಇಣುಕಿ ನೋಡಿ ಬೆಕ್ಕಸಬೆರಗಾಗಿದ್ದರು.
ಅರ್ಜುನನ ಗಾಂಡೀವದಿಂದ ಹೊರಟ ಒಂದೊಂದು ಬಾಣವೂ ಕರ್ಣನ ರಥವನ್ನು ಹತ್ತಿಪ್ಪತ್ತು ಅಡಿಗಳಷ್ಟಾದರೂ ಹಿಂದಕ್ಕೆ ತಳ್ಳುತ್ತಿತ್ತು. ಅರ್ಜುನನ ಪರಾಕ್ರಮವನ್ನು ಪಾಂಡವರ ಪಕ್ಷದವರೆಲ್ಲ ಕೊಂಡಾಡುತ್ತಿದ್ದರು. ಕರ್ಣನೇನು ಕಡಿಮೆಯೇ? ಅವನು ಅರ್ಜುನನತ್ತ ಬಾಣ ಬಿಟ್ಟಾಗ ಅರ್ಜುನನ ರಥವೂ ಅಲುಗಾಡುತ್ತಿತ್ತು, ನಾಲ್ಕೈದು ಅಡಿಗಳಷ್ಟಾದರೂ ಹಿಂದೆ ಸರಿಯುತ್ತಿತ್ತು. ಕರ್ಣನ ಪರಾಕ್ರಮಕ್ಕೂ ಭೇಷ್ ಎನ್ನುವವರು ಇದ್ದರೆನ್ನಿ, ಕೌರವರ ಪಾಳೆಯ ದೊಡ್ಡದಿತ್ತಲ್ಲ!
ಆಶ್ಚರ್ಯವೆಂದರೆ ಅರ್ಜುನನ ಸಾರಥಿ ಶ್ರೀಕೃಷ್ಣನೂ ಕರ್ಣನ ಬಾಣ ಅರ್ಜುನನ ರಥವನ್ನು ಅಲುಗಾಡಿಸಿದಾಗಲೆಲ್ಲ ‘ಭಲೇ ಕರ್ಣ!’ ಎಂದು ಮನಸಾರೆ ಕೊಂಡಾಡುವನು. ಪರಂತು ಅರ್ಜುನನ ಬಾಣ ಕರ್ಣನ ರಥವನ್ನು ಹಿಮ್ಮೆಟ್ಟಿದಾಗ ಶ್ರೀಕೃಷ್ಣ ಒಮ್ಮೆಯೂ ಅರ್ಜುನನಿಗೆ ಶಭಾಷ್ ಎಂದದ್ದಿಲ್ಲ. ಸೂರ್ಯಾಸ್ತವಾದಾಗ ಆ ದಿನದ ಯುದ್ಧ ಮುಗಿಯಿತು. ರಾತ್ರಿ ಹೊತ್ತು ಬಿಡಾರದಲ್ಲಿ ಅರ್ಜುನ ಶ್ರೀಕೃಷ್ಣನನ್ನು ಕೇಳಿಯೇಬಿಟ್ಟ- ‘ದೇವಾ, ನನ್ನ ಒಂದೊಂದು ಬಾಣವೂ ಕರ್ಣನ ರಥವನ್ನು ಧೂಳಿಪಟ ಮಾಡುತ್ತಿತ್ತು, ಆದರೆ ಒಮ್ಮೆಯೂ ನೀನು ನನಗೆ ಮೆಚ್ಚುಗೆಯ ಮಾತನ್ನಾಡಲಿಲ್ಲ.
ಅದೇ, ಕರ್ಣನ ಬಾಣ ನಮ್ಮ ರಥವನ್ನು ಸ್ವಲ್ಪೇಸ್ವಲ್ಪ ಅಲುಗಾಡಿಸಿದಾಗಲೂ ನೀನವನನ್ನು ಬಾಯ್ತುಂಬ ಹೊಗಳುತ್ತಿದ್ದೆ. ಏಕೆ?’ ಶ್ರೀಕೃಷ್ಣ ನಸುನಕ್ಕು ಹೇಳುತ್ತಾನೆ: ‘ಅರ್ಜುನ, ಇದನ್ನು ನೆನಪಿಸಿಕೊಳ್ಳು. ನಿನ್ನ ರಥದ ಧ್ವಜದಲ್ಲಿ ವೀರಾಂಜನೇಯನಿದ್ದಾನೆ ರಥವನ್ನು ರಕ್ಷಿಸಲಿಕ್ಕೆ. ರಥದ ಚಕ್ರಗಳಿಗೆ ಆಧಾರವಾಗಿ ಆದಿಶೇಷನಿದ್ದಾನೆ. ನಿನಗೆ ಸಾರಥಿಯಾಗಿಸ್ವತಃ ನಾನಿದ್ದೇನೆ. ಅಷ್ಟಾಗಿಯೂ ಕರ್ಣನ ಬಾಣಗಳು ನಮ್ಮ ರಥವನ್ನು ಅಲುಗಾಡಿಸುವುದರಲ್ಲಿ ಯಶಸ್ವಿಯಾಗುತ್ತಿದ್ದವು.
ಆದರೆ ಕರ್ಣನ ರಥಕ್ಕೆಲ್ಲಿತ್ತು ಅಂಥ ರಕ್ಷಣೆ? ಅವನಿಗೆ ಸರಿಯಾದ ಸಾರಥಿಯೂ ಇಲ್ಲ. ಪಾಪ ಎಲ್ಲವನ್ನೂ ತಾನೊಬ್ಬನೇಕಷ್ಟಪಟ್ಟು ನಿಭಾಯಿಸುತ್ತಿದ್ದಾನೆ. ಆದರೂ ನೋಡು ಹೇಗೆ ವೀರಪರಾಕ್ರಮಿಯಾಗಿ ಕಾದಿದನು! ಅದಕ್ಕೇ ನಾನು ಭಲೇ ಕರ್ಣ ಎಂದು ಮನಃಪೂರ್ವಕ ಕೊಂಡಾಡಿದೆ. ‘ಕೃಷ್ಣನ ಮಾತಿಗೆ ಅರ್ಜುನ ಸುಮ್ಮನಾಗಬೇಕಾಯಿತು. ಕುರುಕ್ಷೇತ್ರ ಯುದ್ಧ ಕೊನೆ ಗೊಂಡ ಕ್ಷಣದಲ್ಲೂ ರಥದಿಂದ ಮೊದಲಿಗೆ ಕೃಷ್ಣ ಕೆಳಗಿಳಿಯಲಿಲ್ಲ. ಅರ್ಜುನ ಕೆಳಗಿಳಿದ ಮೇಲಷ್ಟೇ ಕೃಷ್ಣನೂ ಇಳಿದ. ತತ್‌ಕ್ಷಣವೇ ರಥಕ್ಕೆ ಬೆಂಕಿ ಹೊತ್ತಿಕೊಂಡು ಭಸ್ಮವಾಗಿ ಹೋಯ್ತಂತೆ.
ಆಗಲೂ ಶ್ರೀಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ: ‘ಪಾರ್ಥ, ನಿಜಕ್ಕಾದರೆ ನಿನ್ನ ರಥವನ್ನು ಕರ್ಣನ ಬಾಣಗಳು ಆಗಲೇ ನಾಶ ಮಾಡಿ ಆಗಿತ್ತು. ನಾನಿದ್ದುದರಿಂದ ರಕ್ಷಿಸಿಕೊಂಡು ಮುನ್ನಡೆಸಿದೆ ಅಷ್ಟೇ. ನೀನೇ ಮಹಾಪರಾಕ್ರಮಿ ಎಂದು ಯಾವತ್ತೂ ಕೊಚ್ಚಿ ಕೊಳ್ಳಬೇಡ. ನೀನು ಏನೇ ಸಾಧನೆ ಮಾಡಿದ್ದಿಯಾದರೂ ಅದು ದೈವಬಲದಿಂದಲೇ. ಅನವರತವೂ ನಿನ್ನ ರಕ್ಷಣೆಯಾಗಿರುವುದು, ನಿನ್ನ ವಿಜಯದ ಹಾದಿಯಲ್ಲಿ ಅಡೆತಡೆಗಳು ನಿವಾರಣೆಯಾಗಿರುವುದು, ಸರಿಯಾದ ಸಮಯಕ್ಕೆ ಸರಿಯಾದ ಅವಕಾಶಗಳು ಬಂದೊದಗಿರುವುದು…ಎಲ್ಲವೂ ದೈವಸಂಕಲ್ಪದಿಂದಲೇ ಹೊರತು ಬರೀ ನಿನ್ನಿಂದಲೇ ಅಂತ ತಿಳಿದುಕೊಳ್ಳಬೇಡ.
ನಿನ್ನ ಯಶಸ್ಸಿನಲ್ಲಿ ನಿನ್ನ ಪ್ರಯತ್ನದ ಪಾಲಿದೆ ನಿಜ, ಆದರೆ ಅದೊಂದೇ ಅಲ್ಲ. ಬೇರೆ ಹಲವಾರು ಪೂರಕ ಅಂಶಗಳು ಇವೆ. ಅವುಗಳ ಬಗ್ಗೆಯೂ ಕೃತಜ್ಞತಾಭಾವ ನಿನ್ನಲ್ಲಿರಬೇಕು.’ ಅರ್ಜುನನಿಗೆ ಹೇಳಿದ ಮಾತು ನಮಗೆಲ್ಲರಿಗೂ ನಾಟಬೇಕಾದ್ದೇ ಅಲ್ಲವೇ? ಸಮಸ್ಯೆ ಎಲ್ಲಿ ಶುರುವಾಗುವುದೆಂದರೆ ನಾವು ನಮ್ಮ ಪರಾಕ್ರಮಗಳನ್ನು ಬೇಕಿದ್ದರೆ ಇದ್ದದ್ದು ಹತ್ತು ಪಟ್ಟು ಮಾಡಿ ಕೊಚ್ಚಿಕೊಳ್ಳು ತ್ತೇವೆಯೇ ವಿನಾ ಬೇರೆಯವರ ಸಾಧನೆಯನ್ನು, ಸದ್ಗುಣಗಳನ್ನು ಕೊಂಡಾಡುವುದಕ್ಕೆ ನಮಗೆ ಮನಸ್ಸು ಬರುವುದಿಲ್ಲ.
ಎಲ್ಲರೂ ನಮಗೆ ಒಳಿತನ್ನು ಮಾಡಲಿ, ಒಳಿತನ್ನು ಬಯಸಲಿ, ನಮ್ಮನ್ನು ಪುರಸ್ಕರಿಸಿ ಗೌರವಿಸಲಿ ಎಂದು ಬಯಸುತ್ತೇವೆಯೇ ಹೊರತು ನಾವು ಇನ್ನೊಬ್ಬರಿಗೆ ಚಿಕ್ಕ ಸಹಾಯ ಮಾಡಲಿಕ್ಕೂ ಮುಂದಾಗುವುದಿಲ್ಲ. ಆದರೆ ಪ್ರಕೃತಿಯು ನ  ದೇಹ – ಮನಸ್ಸು ಗಳನ್ನು ವಿನ್ಯಾಸಗೊಳಿಸಿರುವುದು ಬರೀ ನಮ್ಮ ಬಗ್ಗೆಯೇ ಹೇಳಿಕೊಂಡು ಎದೆಯುಬ್ಬಿಸಿ ಆನಂದಾನುಭವ ಪಡೆಯಲಿಕ್ಕಲ್ಲ. ಮೊನ್ನೆ ಒಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಓದಿದ ವಿಚಾರ ಚಿಂತನಯೋಗ್ಯವಾಗಿ ಇತ್ತು.
ನಮ್ಮ ಮನಸ್ಸನ್ನು ಸಂತೋಷಪಡಿಸುವ ನಾಲ್ಕು ತೆರನಾದ ಹಾರ್ಮೊನ್‌ಗಳು ಉತ್ಪಾದನೆಯಾಗುತ್ತಿರುತ್ತವೆ ನಮ್ಮ ದೇಹದಲ್ಲಿ.ಅವುಗಳ ಪೈಕಿ ಎಂಡೋರ್ಫಿನ್ ಎನ್ನುವುದು ನಾವು ಮಾಡುವ ವ್ಯಾಯಾಮದಿಂದ, ನಗುವುದರಿಂದ, ಲಘು ವಿನೋದಗಳಿಂದ,ಹರಟೆ-ಹಾಸ್ಯದ ಸರಕಿನಿಂದ ಉಂಟಾಗುವುದು. ಡೋಪಮಿನ್ ಎಂಬ ಎರಡನೆಯ ಹಾರ್ಮೊನ್ ಉತ್ಪಾದನೆಯಾಗುವುದುಯಾರಾದರೂ ನಮ್ಮನ್ನು ಹೊಗಳಿದಾಗ, ನಮ್ಮ ಕೆಲಸಗಳನ್ನು ಮೆಚ್ಚಿ ಮಾತಾಡಿದಾಗ. ಅಂದರೆ ನಮ್ಮನ್ನು ಪೂರಿಯಂತೆಉಬ್ಬಿಸಿದಾಗ ಎನ್ನಿ. ಹಿತಮಿತ ಪ್ರಮಾಣದಲ್ಲಿ ಈ ಎರಡು ಹಾರ್ಮೊನ್‌ಗಳೂ ನಮಗೆ ಬೇಕೇಬೇಕು.
ಆದರೆ ಇವೆರಡು ಮಾತ್ರ ಸಾಲದು. ಮುಂದಿನೆರಡು ಕೂಡ ಅಷ್ಟೇ ಮುಖ್ಯವಾದುವು. ನಾವು ಬೇರೆಯವರಿಗೆ ಸಹಾಯ ಮಾಡಿ ದಾಗ, ಬೇರೆಯವರ ಮನಸ್ಸನ್ನು ಅರಳಿಸಿದಾಗ, ನಮ್ಮಲ್ಲಿ ವಿಶೇಷವಾದೊಂದು ಧನ್ಯತಾಭಾವಕ್ಕೆ ಉಂಟಾಗುತ್ತದೆ; ಅದಕ್ಕೆಸೇರೋಟಿನ್ ಎಂಬ ಹಾರ್ಮೊನ್ ಕಾರಣ. ಇದು ನಮ್ಮ ಮನಸ್ಸನ್ನೂ ಪ್ರ-ಲ್ಲಗೊಳಿಸುತ್ತದೆ, ಶರೀರದ ಅಂಗಾಂಶಗಳಿಗೆಉತ್ತೇಜನ ಕೊಡುತ್ತದೆ.
‘ನಾನು ಇಂದು ಮಾಡಿದ ಒಳ್ಳೆಯ ಕೆಲಸ’ ಎಂದು ಚಿಕ್ಕ ಮಕ್ಕಳಿಂದ ದಿನಚರಿ ಬರೆಸುತ್ತಿದ್ದುದರ ಆಶಯ ಇದೇ. ನಾಲ್ಕನೆಯದು ಆಕ್ಸಿಟೋಸಿನ್. ಇನ್ನೊಬ್ಬರಲ್ಲಿ ನಾವು ತೋರುವ ಆತ್ಮೀಯತೆ, ಸಾಂತ್ವನ-ಸಮಾಧಾನದ ಒಂದು ಮಾತು, ಹೃದಯದ ಬೆಚ್ಚಗಿನ ಭಾವವನ್ನು ವರ್ಗಾಯಿಸುವ ಹಿತವಾದೊಂದು ಅಪ್ಪುಗೆ, ಹಸ್ತಲಾಘವ, ಸ್ಪರ್ಶ- ಇವೆಲ್ಲವೂ ಆ ಇನ್ನೊಬ್ಬರಿಗೆ ಎಷ್ಟು ಹಿತಕರ ವೆನಿಸುತ್ತದೋ ಅಷ್ಟೇ ನಮ್ಮ ಮನಸ್ಸಿಗೂ. ಅದಕ್ಕೆ ಕಾರಣ ಆಕ್ಸಿಟೋಸಿನ್. ಈ ನಾಲ್ಕೂ ಹಾರ್ಮೊನ್‌ಗಳು ಒಳ್ಳೆಯದೊಂದು ಅನುಪಾತದಲ್ಲಿ ಉತ್ಪಾದನೆಯಾಗುತ್ತ ಇದ್ದರೆ ಅದೇ ನಮಗೆ ಆರೋಗ್ಯಭಾಗ್ಯ. ಬಾಳು ಬಂಗಾರ. ವಿಪರ್ಯಾಸವೆಂದರೆ ನಾವು ಸದಾ ನಮ್ಮ ಡೋಪಮಿನ್ ಹೆಚ್ಚಳಕ್ಕೆ ಹಪಹಪಿಸುತ್ತೇವೆಯೇ ಹೊರತು ನಮ್ಮಿಂದಾಗಿ ಇತರರ ಡೋಪಮಿನ್ ಹೆಚ್ಚಲಿ ಎಂದು ನಮ್ಮ ಮನಸ್ಸು ಹಾತೊರೆಯುವುದೇ ಇಲ್ಲ!
ಇದು ಬದಲಾಗಬೇಕು. ಇನ್ನೊಬ್ಬರ ಚಿಕ್ಕ ಚಿಕ್ಕ ಸಾಧನೆಗಳ ಬಗ್ಗೆ ಮುಕ್ತ ಮನಸ್ಸಿನಿಂದ ಮೆಚ್ಚುಗೆ ಸೂಚಿಸುವುದು, ಪ್ರೋತ್ಸಾಹಮತ್ತು ಉತ್ತೇಜನಗಳಿಂದ ಅವರ ಉತ್ಸಾಹವನ್ನು ಹೆಚ್ಚಿಸುವುದು, ನಮಗೆ ಅವರಿಂದ ಅದೆಷ್ಟೇ ಸಣ್ಣ ಪ್ರಮಾಣದ್ದಿರಲಿ ಆಗಿರುವಉಪಕಾರವನ್ನು ಸದಾ ಸ್ಮರಿಸಿಕೊಳ್ಳುವುದು… ಇದೆಲ್ಲದರಿಂದ ನಮ್ಮ ಗಂಟೇನೂ ಹೋಗುವುದಿಲ್ಲ. ನಮಗೇ ಹೆಚ್ಚು ಒಳ್ಳೆಯ ದಾಗುತ್ತ ಹೋಗುತ್ತದೆ. ಬೇಕಿದ್ದರೆ ಒಂದು ಚಿಕ್ಕ ಪ್ರಯೋಗ ಮಾಡಿ ನೋಡಿ: ನೀವಿರುವ ವಾಟ್ಸಪ್ ಗ್ರೂಪಿನಲ್ಲಿ  ಯಾರಾದರೂ ಒಂದು ಒಳ್ಳೆಯ ರಚನಾತ್ಮಕ ವಿಷಯವನ್ನೋ, ತನ್ನದೇ ಪ್ರತಿಭೆಯದೊಂದು ನಿದರ್ಶನವನ್ನೋ ಪ್ರಾಮಾಣಿಕವಾಗಿ ಹಂಚಿಕೊಂಡಾಗ ಮುಗುಮ್ಮಾಗಿ ಇರುವುದಕ್ಕಿಂತ ಅಥವಾ ಅರ್ಥರಹಿತ ಇಮೋಜಿ ಹಸ್ತಮುದ್ರೆಗಳಿಂದ ಹರಕೆಸಂದಾಯಮಾಡುವುದಕ್ಕಿಂತ, ಒಂದೇಒಂದು ವಾಕ್ಯವಾದರೂ ಸರಿ ಮನಸ್ಸಲ್ಲಿ ಮೂಡಿದ್ದನ್ನು ಅಕ್ಷರರೂಪಕ್ಕೆ ಮಾರ್ಪಡಿಸಿ ಅವರಿಗೆತಲುಪಿಸಿ.
ಅವರಿಗೆಷ್ಟು ಖುಷಿಯಾಗುತ್ತದೋ ಅಷ್ಟೇ ಖುಷಿ ನಿಮ್ಮದೂ ಆಗಿರುತ್ತದೆ. ವಾಟ್ಸಪ್‌ನ ಉದಾಹರಣೆ ನಾನಿಲ್ಲಿ ಬಳಸಿದ್ದು ಈಗ ಎಲ್ಲವೂ ವರ್ಚ್ಯುವಲ್ ಜಗತ್ತು ಎಂಬ ಕಾರಣಕ್ಕೆ. ನಿಜಜೀವನದ ಎಲ್ಲ ಮಜಲುಗಳಲ್ಲೂ ಇದನ್ನು ಅಳವಡಿಸಿಕೊಂಡರೆ ‘ಅಳಿಲನ್ನು ಮುದ್ದಾಡಿದ ಶ್ರೀರಾಮನ’ ಎತ್ತರಕ್ಕೇರುತ್ತದೆ ನಮ್ಮ ವ್ಯಕ್ತಿತ್ವವೂ!
ಇನ್ನೇನು ಒಂದೆರಡು ದಿನಗಳಲ್ಲಿ ಆರಂಭವಾಗುವ ‘ಪ್ಲವ’ ಸಂವತ್ಸರದ ಯುಗಾದಿ ಹಬ್ಬ ಈ ಬದಲಾವಣೆಗೆ ಮುಹೂರ್ತವಾಗಲಿ. ಇಂದಿಗೆ ಮುಗಿಯುವ ‘ಶಾರ್ವರಿ’ ಸಂವತ್ಸರದ ಹೆಸರಿನ ಅರ್ಥ ಇರುಳು ಎಂದು. ಕೋವಿಡ್ ಕರಾಳಛಾಯೆಯಿಂದಾಗಿ ಅದು ಗಾಢಾಂಧಕಾರವೇ ಆದದ್ದು ನಮಗೆ ಗೊತ್ತಿದೆ. ‘ಪ್ಲವ’ ಎಂಬ ಪದಕ್ಕೆ ಸಂಸ್ಕೃತ ಕೋಶದಲ್ಲಿ 22ಬೇರೆಬೇರೆ ಅರ್ಥಗಳನ್ನು ಕೊಟ್ಟಿದ್ದಾರೆ. ಜನರನ್ನು ನೀರಿನ ಮೇಲೆ ದಾಟಿಸಲು ಕಟ್ಟಿರುವ ಹರಿಗೋಲು ಅಥವಾ ತೆಪ್ಪ ಎಂಬುದು ಮೊದಲ ಅರ್ಥ. ಈಗ ಕೋವಿಡ್ ಕಷ್ಟಗಳಿಂದ ಜನರನ್ನು ದಾಟಿಸಲಿಕ್ಕೆ ‘ಪ್ಲವ’ ಬಂದಿರುವುದೆಂದುಕೊಳ್ಳೋಣ.
ಬೇವಿನ ಕಹಿಯನ್ನು ಮೀರಿಸುವಷ್ಟು ಬೆಲ್ಲದ ಸಿಹಿ ಎಲ್ಲರ ಬಾಳಿನಲ್ಲಿ ಬರಲಿ ಎಂದು ಹಾರೈಸೋಣ. ಚಾಂದ್ರಮಾನ ಯುಗಾದಿ, ಸೌರಮಾನ ಯುಗಾದಿ ಒಂದರ ಬೆನ್ನಿಗೆ ಒಂದು ಬಂದಿವೆ. ಹಾಗಾಗಿ ‘ಆಚಂದ್ರಾರ್ಕ’ ಯುಗಾದಿ ಪರ್ವವು ಹೊಸದೊಂದುಸಮಷ್ಟಿಪ್ರಜ್ಞೆ ಚಿಗುರುವುದಕ್ಕೆ, ಹುಲುಸಾಗಿ ಬೆಳೆಯುವುದಕ್ಕೆ ನಾಂದಿಯಾಗಲಿ. ಎಲ್ಲರಿಗೂ ಶುಭಾಶಯ.