ಒಡೆದಷ್ಟೂ ಬಗೆದಷ್ಟೂ , ಮತ್ತೆ ಎದ್ದೇಳುವ ಕಾಶಿ !
ಅವಲೋಕನ
ಶರತ್‌ ಚಂದ್ರ
1983ರಲ್ಲಿ ‘ರಝಿಯಾ ಸುಲ್ತಾನ್’ ಚಲನಚಿತ್ರ ತೆರೆ ಕಂಡಿತು. ಹೇಮಾ ಮಾಲಿನಿ – ಧರ್ಮೇಂದ್ರ ಜೋಡಿ, ಖಯ್ಯಾಮ್ ಅವರ ಸಂಗೀತ ನಿರ್ದೇಶನ, ಪ್ರೇಕ್ಷಕರ ಮನಸೂರೆಗೊಂಡಿತು. ವರ್ಷದ ನಂತರ ಇದಕ್ಕೆ ಫಿಲಂ ಫೇರ್ ಪ್ರಶಸ್ತಿ ಕೂಡ ಬಂದಿತು.
13ನೇ ಶತಮಾನದಲ್ಲಿ ದೆಹಲಿಯನ್ನು ಆಳಿದ ಏಕೈಕ ಮಹಿಳೆ ಎಂದು ಇಂದಿಗೂ ರಝಿಯಾಳ ಸಾಹಸದ ಬಗ್ಗೆ ಹಲವಾರು ಲೇಖನ, ಚಿತ್ರಗಳು ಬರುತ್ತಿವೆ. ಆದರೆ, 4ವರ್ಷವಷ್ಟೇ ದೆಹಲಿಯನ್ನು ಆಳಿದ ರಝಿಯಾ (1236-40), ಕಾಶಿ ವಿಶ್ವನಾಥ ಹಾಗೂ ಬಿಂದು ಮಾಧವ ದೇವಸ್ಥಾನವನ್ನು ನೆಲಸಮ ಮಾಡಿಸಿದ್ದು ನಮಗೆ ತಿಳಿದಿಲ್ಲ.
ಇದು 70 ವರ್ಷದ ‘ಸೆಕ್ಯುಲರ್’ ಇತಿಹಾಸದ ಕೊಡುಗೆ. ರಝಿಯಾ ಸುಲ್ತಾನ್ ಬಗ್ಗೆ ಬರೆದಿರುವ ಕಾರಣ ಮೊನ್ನೆ ವಾರಣಾಸಿ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶ. ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ಸುತ್ತ ಉತ್ಖನನ ನಡೆಸಬೇಕೆಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಕೇಂದ್ರಕ್ಕೆ ಅನುಮತಿ ನೀಡಿದೆ. ಜ್ಞಾನವಾಪಿ ಮಸೀದಿ ಎಂದಾಕ್ಷಣ ನಮಗೆ ನೆನಪಾಗುವುದು ಔರಂಗಜೇಬ.
1669ರಲ್ಲಿ ಇಲ್ಲಿದ್ದ ಜ್ಞಾನವಾಪಿ ವಿಶ್ವನಾಥ ದೇವಸ್ಥಾನವನ್ನು ಧ್ವಂಸಗೊಳಿಸಿ ಅಲ್ಲಿ ಮಸೀದಿಯನ್ನು ಕಟ್ಟಿಸಿದನೆಂದು ಓದಿದ್ದೇವೆ. ಆದರೆ ಕಾಶಿ ವಿಶ್ವೇಶ್ವರನ ದೇವಸ್ಥಾನವನ್ನು ಇದರ ಹಿಂದೆಯೂ 2 ಬಾರಿ ಒಡೆಯಲಾಗಿತ್ತು ಎಂಬುದನ್ನು ನಾವು ಮರೆತಿದ್ದೇವೆ. ಕಾಶಿ, ಸಾವಿರಾರು ವರ್ಷಗಳಿಂದ ಹಿಂದೂ, ಬೌದ್ಧ ಹಾಗೂ ಜೈನರ ಶ್ರದ್ಧಾ ಕೇಂದ್ರ. ಈಶ್ವರನಿಂದಲೇ ನಿರ್ಮಿತ ವಾದ ಕಾಶಿ, ಮಹಾಭಾರತ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಕ್ರಿ.ಪೂ 528ರಲ್ಲಿ ಜ್ಞಾನೋದಯವಾದ ಬುದ್ಧನು ತನ್ನ ಅನುಯಾಯಿಗಳಿಗೆ ಹತ್ತಿರದ ಇದ್ದ ಸಾರನಾಥದಲ್ಲಿ ಪ್ರವಚನ ನೀಡಿದ. ಮಹಾವೀರ, ತೀರ್ಥಂಕರರು ಸಂಚರಿಸಿದ, ಉಪದೇಶ ನೀಡಿದ ಪುಣ್ಯ ನಾಡಿದು. 10ನೆಯ ಶತಮಾನದ ಹೊತ್ತಿಗೆ ಶ್ರದ್ಧಾಕೇಂದ್ರದಜತೆಗೆ, ಅಪಾರ ಧನರಾಶಿಯ, ವ್ಯಾಪಾರದ ಕೇಂದ್ರವೂ ಆಗಿದ್ದ ಕಾಶಿ, ಭಾರತದ ಹೊರಗಿದ್ದ ಆಕ್ರಮಣಕಾರಿಗಳ ಗುರಿಯಾಗಿತ್ತು.
1033ರಲ್ಲಿ ಮಹಮೂದ್ ಘಜ್ನಿಯ ಮಗ ಅಹ್ಮದ್ ನಿಯಾಳ್ತಗಿನ್ ಕೆಲವೇ ಘಂಟೆಗಳಿಗೆ ವಾರಣಾಸಿಗೆ ಮುತ್ತಿಗೆ ಹಾಕಿ ಲೂಟಿ ಮಾಡಿದನು. ದೇವಸ್ಥಾನಗಳನ್ನು ಹಾಳು ಮಾಡಲು ಯತ್ನಿಸಿ ಸಫಲವಾಗದೆ ಮರಳಿದನು. ಮುಂದಿನ ವರ್ಷ ಘಜ್ನಿಯಸೋದರಳಿಯನೂ ದಾಳಿಮಾಡಿದನು. ಘಾಡವಾಲರ ಸೈನ್ಯ ಇವರನ್ನು ನಿರ್ನಾಮ ಮಾಡಿತು. ಇಲ್ಲಿಂದ ಪ್ರಾರಂಭವಾಯಿತು, ಆಕ್ರಮಣಕಾರಿಗಳ ನಿರಂತರ ದಾಳಿ.
1194ರಲ್ಲಿ ಕುತ್ಬುದ್ದಿನ್ ಐಬಕ್, 1240ರಲ್ಲಿ ರಝಿಯಾ ಸುಲ್ತಾನ್, 1496ರಲ್ಲಿ ಸಿಕಂದರ್ ಲೋಧಿ, 1669ರಲ್ಲಿ ಔರಂಗಜೇಬ್ ಕಾಶಿ ಪಟ್ಟಣದ ದೇವಸ್ಥಾನಗಳನ್ನು, ವಿಶೇಷವಾಗಿ ವಿಶ್ವೇಶ್ವರ ದೇವಸ್ಥಾನ ವನ್ನು ನಿರ್ನಾಮ ಮಾಡಿದರು. ಇತಿಹಾಸಕಾರ ಲಂನೋಯ್ 1496ರಿಂದ ಸುಮಾರು28ವರ್ಷಗಳ ಕಾಲ ವಾರಣಾಸಿಯಲ್ಲಿ ದೇವಸ್ಥಾನಗಳೇ ಇರಲಿಲ್ಲ ಎಂದು ಹೇಳುತ್ತಾನೆ. ಜನರು ತಮ್ಮ ಮನೆಗಳ ಪೂಜೆ ಮಾಡಿಕೊಂಡು, ಭಗ್ನಗೊಂಡ ದೇವಾಲಯಕ್ಕೆ ಹೋಗಿ ನಮಸ್ಕರಿಸುತ್ತಿದ್ದರು ಎನ್ನುತ್ತಾನೆ.
1777ರಲ್ಲಿ ಅಹಲ್ಯಾಬಾಯಿ ಹೋಳ್ಕರ್ ವಿಶ್ವನಾಥನ ದೇವಸ್ಥಾನ ವನ್ನು ಜೀರ್ಣೋದ್ಧಾರ ಮಾಡುವವರೆಗೆ, ಮಸೀದಿಯ ಪಕ್ಕ, ಗುಡಿಯೂ ಇಲ್ಲದೆ ಇದ್ದ ವಿಶ್ವನಾಥನ ಶಿವಲಿಂಗಕ್ಕೆ ಜನರು ರಹಸ್ಯವಾಗಿ, ಭಯದಿಂದ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದರಂತೆ. 800ವರ್ಷಗಳ ಕಾಲ ತಮ್ಮ ಶ್ರದ್ಧಾ ಕೇಂದ್ರಗಳ ಮೇಲೆ ನಿರಂತರ ದಾಳಿಯಾಗುತ್ತಿದ್ದರೂ ಜನರು ತಮ್ಮ ಭಕ್ತಿಯನ್ನು, ಶ್ರದ್ಧೆ ಯನ್ನು ತ್ಯಜಿಸಲಿಲ್ಲ. ಆಫ್ರಿಕಾ, ದಕ್ಷಿಣ ಅಮೆರಿಕಾ ದೇಶಗಳಲ್ಲಿ ಆಕ್ರಮಣಕಾರಿಗಳ ದಾಳಿಗೆ ಕೆಲವೇ ಶತಮಾನಗಳಲ್ಲಿ ತಮ್ಮತನ ವನ್ನು ಕಳೆದುಕೊಂಡ ಜನರಿಗೆ ಹೋಲಿಸಿದಲ್ಲಿ ಇದು ಆಶ್ಚರ್ಯವೆನಿಸುತ್ತದೆ.
ತಮ್ಮ ದೇವಾಲಯಗಳನ್ನು ಉಳಿಸಿಕೊಳ್ಳಲು ಸಾಮ – ದಾನ – ಭೇದ – ದಂಡವನ್ನೆಲ್ಲ ಪ್ರಯೋಗಿಸಿದರು. ಘಜ್ನಿಯ ದಾಳಿಯ ನಂತರ ಘಾಡವಾಲರು ಆಕ್ರಮಣಕಾರಿಗಳಿಂದ ಕಾಶಿಯನ್ನು ರಕ್ಷಿಸಲು ಪಟ್ಟಣದ ಹೊರಗೆ ಅಪಾರ ಸೈನ್ಯ ನಿಲ್ಲಿಸಿ, ಅದರ ವ್ಯವಸ್ಥೆಗೆ ಜನರಿಂದ ‘ತುರುಷ್ಕ ದಂಡ’ ವೆಂಬ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದರು. ಕುತ್ಬುದ್ದಿನ್ ಐಬಕ್ ದಾಳಿಯ ನಂತರವೂ ಪದ್ಮೇಶ್ವರ, ಮಣಿಕರ್ಣಿಕೇಶ್ವರ ದೇವಸ್ಥಾನವನ್ನು ಕಟ್ಟಿದರು.
ಮೊಘಲರ ಹುಮಾಯುನ್ ಸಮಯದಲ್ಲಿ ಈ ದೇವಸ್ಥಾನವನ್ನು ಒಡೆದು, ಅದರ ಕಂಬಗಳನ್ನು ಜಾವುನ್ಪುರ್ ಮಸೀದಿಯ ದ್ವಾರದ ಮೆಟ್ಟಿಲುಗಳಾಗಿ ಉಪಯೋಗಿಸಲಾಯಿತು ಎಂದು ಬಾಯಿಜಿದ್ ತನ್ನ ಆತ್ಮಕಥೆ ತಜ್ರಿಕಾ – ಹುಮಾಯುನ್ ನಲ್ಲಿ ಬರೆದಿದ್ದಾನೆ. ಕೃತ್ತಿವಸೇಶ್ವರ ದೇವಾಲಯವನ್ನು4ಬಾರಿ ನಾಶ ಮಾಡಿದರೂ ಮತ್ತೆ ಕಟ್ಟಿ ಪೂಜೆ ಮಾಡುತ್ತಿದ್ದುದನ್ನು ನೋಡಿದ ಔರಂಗಜೇಬ್,1659ರಲ್ಲಿ ಅದನ್ನು ನಿರ್ನಾಮ ಮಾಡಿ ಅದರ ಜಾಗದಲ್ಲಿ ಅಲಾಂಗಿರ್ ಮಸೀದಿಯನ್ನು ಕಟ್ಟಿಸಿದನು.
ಆದರೂ, ಅದರ ಮುಂದೆ ಪಾಳು ಬಿದ್ದ ಕಲ್ಯಾಣಿಗೆ ಮಹಾಶಿವರಾತ್ರಿಯಂದು ಜನರು ಬಂದು ಪೂಜೆ ಸಲ್ಲಿಸುತ್ತಿದ್ದರು. ರಝಿಯಾ ಸುಲ್ತಾನ್ ಒಡೆಸಿದ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿ ಸವಾಯ್ ಜೈಸಿಂಗ್, ಆದಿ ವಿಶ್ವೇಶ್ವರವೆಂಬ ಪುಟ್ಟ ದೇವಸ್ಥಾನವನ್ನುಕಟ್ಟಿಸಿದನು. ಅಹಲ್ಯಾಬಾಯಿ ಹೋಳ್ಕರ್ ಅವರಿಂದ ಹೊಸ ದೇವಸ್ಥಾನ ಜೀರ್ಣೋದ್ಧಾರವಾದರೂ ಜನರು ಹಳೆಯ ಜ್ಞಾನವಾಪಿ ಮಸೀದಿಯಲ್ಲಿದ್ದ ಬಾವಿಯಿಂದ ತೀರ್ಥ ಪಡೆಯಲು ಹೋಗುತ್ತಿದ್ದರು.
ಪರಶಿವನೇ ಮಾಡಿದ ಈ ಬಾವಿಯ ತೀರ್ಥ ತತ್ತ್ವಜ್ಞಾನಕ್ಕೆ ಸಮಾನ ಎಂಬುದು ಜನರ ನಂಬಿಕೆ. ಹೀಗೆ, ರಾಜರೂ, ಜನರೂ ಸೇರಿ ಅರ್ಧ ಶತಮಾನಗಳ ಕಾಲ ಆಕ್ರಮಣಕಾರಿಗಳು ದೇವಾಲಯವನ್ನು ಒಡೆದಷ್ಟೂ ಮತ್ತೆ ಮತ್ತೆ ಕಟ್ಟುತ್ತಿದ್ದರು. ಹಲವು ಬಾರಿ ದೇವಸ್ಥಾನವನ್ನು ರಕ್ಷಿಸಲು ಹೊರಗಿನಿಂದ ಇಟ್ಟಿಗೆ ಗೋಡೆ ಹಾಕಿ  ಮುಚ್ಚುತ್ತಿದ್ದರು. ಮಸೀದಿ – ದರ್ಗಾ ರೀತಿ ಕಾಣುವಹಾಗೆಯೂ ದೇವಾಲಯಗಳನ್ನು ಕಟ್ಟುತ್ತಿದ್ದರು.
ಜ್ಞಾನವಾಪಿ ದೇವಸ್ಥಾನವನ್ನು ನೆಲಸಮ ಮಾಡುವ ವೇಳೆ ಶಿವಲಿಂಗವನ್ನು ಹಿಡಿದು ಬಾವಿಗೆ ಹಾರಿದ ಅರ್ಚಕನ ಕಥೆ,ಕೇದಾರೇಶ್ವರ ದೇವಸ್ಥಾನವನ್ನು ಒಡೆಯಲು ಬಂದ ಮ್ಲೇಚ್ಛರು ನಂದಿವಿಗ್ರಹಕ್ಕೆ ಕತ್ತಿಯಿಂದ ಹೊಡೆದಾಗ ರಕ್ತ ಚಿಮ್ಮಿದ್ದನ್ನು ನೋಡಿ ಗಾಬರಿಯಿಂದ ಓಡಿ ಹೋದ ಕಥೆಗಳು ಇಂದಿಗೂ ಪ್ರಚಲಿತ. ಹೀಗೆ, ಶ್ರದ್ಧೆಯ ಜತೆ ಪೂರ್ವಜರು ಧರ್ಮದ ಉಳಿವಿಗಾಗಿ ಮಾಡಿದ ಬಲಿದಾನ, ದೇವರ ಪವಾಡ ಇವೆಲ್ಲವೂ ಜನರನ್ನು ಹೊಸ ದೇವಾಲಯಗಳನ್ನು ಕಟ್ಟಿ, ಹಳೆಯದನ್ನು ಜೀರ್ಣೋದ್ಧಾರ ಮಾಡುವುದಕ್ಕೆ ಪ್ರೇರೇಪಿಸಿತು.
ಜ್ಞಾನವಾಪಿ ಮಸೀದಿಯನ್ನು ನೋಡಿದ ಯಾರಿಗೂ ಸಹ ಇದು ಹಿಂದೂ ದೇವಾಲಯವನ್ನು ಒಡೆದು ಕಟ್ಟಿದ್ದು ಎಂದು ನಿಸ್ಸಂದೇಹದಿಂದ ಗೊತ್ತಾಗುತ್ತದೆ. ಇದಕ್ಕೆ ಉತ್ಖನನದ ಅಗತ್ಯವಿತ್ತೇ? ಎಂಬುದು ಪ್ರಶ್ನೆ. ‘ಕಾಶೀ ಸರ್ವಪ್ರಕಾಶಿಕ’ ಎಂದು ಆದಿ ಶಂಕರರ ನುಡಿಯಂತೆ, ಉತ್ಖನನದಿಂದ ಇನ್ಯಾವ ಇತಿಹಾಸದ ಅನರ್ಘ್ಯ ರತ್ನಗಳು ದೊರೆಯುತ್ತದೋ ಎಂದು ಕಾದು ನೋಡಬೇಕು.
ಕೊನೆಯ ಮಾತು:ನಿರ್ಭರ ಆಕ್ರಮಣದ ನಡುವೆಯೂ ಶ್ರದ್ಧೆಯನ್ನು ಕಾಪಾಡಿಕೊಳ್ಳುವ ಬಗ್ಗೆ16ನೇ ಶತಮಾನದ ನಾರಾಯಣ ಭಟ್ಟರ ‘ತ್ರಿಸ್ಥಳಿಸೇತು’ ಗ್ರಂಥ ಒಂದು ನಿದರ್ಶನ. ಮೀನಾಕ್ಷಿ ಜೈನ್ ತಮ್ಮ ಪುಸ್ತಕದಲ್ಲಿ ಇದರ ಉಲ್ಲೇಖ ನೀಡುತ್ತಾರೆ. ಇಂದು ನಾವು ಪೂಜಿಸುತ್ತಿರುವ ವಿಶ್ವೇಶ್ವರ ಲಿಂಗ ಮಾನವ ನಿರ್ಮಿತ ವಾಗಿರಬಹುದು, ಪೂರ್ವಜರು ಪೂಜಿಸುತ್ತಿದ್ದ ಆ ಲಿಂಗ ಇಲ್ಲದಿರ ಬಹುದು. ಆದರೆ ಈ ಪ್ರತಿಕೂಲ ಸಮಯದಲ್ಲಿ ನಮಗೆ ದೊರಕಿರುವ ಲಿಂಗಕ್ಕೆ ಪೂಜೆ ಸಲ್ಲಿಸೋಣ. ಒಂದು ಪಕ್ಷ ಈ ಲಿಂಗವೂ ಇಲ್ಲದಿದ್ದಲ್ಲಿ, ಧರ್ಮದ ದೃಷ್ಟಿಯಿಂದ ದೇವರಿದ್ದ ಸ್ಥಳಕ್ಕೇ ಪ್ರದಕ್ಷಿಣೆ, ಪೂಜೆ, ನಮನ ಸಲ್ಲಿಸೋಣ.