ಸುಂದರಿಯರ ಸುತ್ತ ಒಂದು ಸುತ್ತು
ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
ತೀರಾ ಇತ್ತೀಚೆಗೆ ನಡೆದ ಒಂದು ಘಟನೆ ಹೇಳಿ ಹಿಂದೆ ಹೋಗುತ್ತೇನೆ. ಕಳೆದ ವಾರ ಲಂಕಾದಲ್ಲಿ ನಡೆದ ಘಟನೆ ಅದು. ಅಂದುರಾಜಧಾನಿ ಕೊಲಂಬೊದ ನೆಲಮ್ ಪೊಕುನಾ ಮಹಿಂದಾ ರಾಜಪಕ್ಸೆ ಸಭಾಂಗಣದಲ್ಲಿ ಮಿಸೆಸ್ (ಶ್ರೀಮತಿ) ಶ್ರೀಲಂಕಾ ಸೌಂದರ್ಯ ಸ್ಪರ್ಧೆ ಏರ್ಪಟ್ಟಿತ್ತು.
ರಾಷ್ಟ್ರೀಯ ವಾಹಿನಿಯೂ ಸೇರಿದಂತೆ ದೇಶದ ಎಲ್ಲಾ ಪ್ರಮುಖ ವಾಹಿನಿಗಳೂ ಇದನ್ನು ನೇರ ಪ್ರಸಾರ ಮಾಡುತ್ತಿದ್ದವು. ಅದು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಾದರೂ, ಅದರಲ್ಲಿ ವಿಜೇತರಾದವರು ಇದೇ ವರ್ಷ ಶ್ರೀಲಂಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಿದ್ದರಾದ್ದರಿಂದ ದೇಶದಲ್ಲಿರುವ ಸೌಂದರ್ಯ ಆರಾಧಕರೆಲ್ಲ ದೇಹವನ್ನೇ ಕಣ್ಣಾಗಿಸಿಕೊಂಡು ಕುಳಿತಿದ್ದರು. ಪುಷ್ಪಿಕಾ ಡಿಸಿಲ್ವಾಳನ್ನು 2021ರ ಶ್ರೀಮತಿ ಶ್ರೀಲಂಕಾ ಎಂದುಘೋಷಿಸಲಾಯಿತು.
ಸಂಪ್ರದಾಯದಂತೆ 2020ರ ಮಿಸ್ಸೆಸ್ ಶ್ರೀಲಂಕಾ ಮತ್ತು ಮಿಸ್ಸೆಸ್ ವರ್ಲ್ಡ್ ಕ್ಯಾರೋಲಿನ್ ಜೂರಿ, ನೂತನ ಸುಂದರಿಯ ತಲೆಗೆ ಮುಕುಟವನ್ನು ತೊಡಿಸಿದಳು. ಇನ್ನೇನು ಸಂಭ್ರಮಾಚರಣೆ ಆರಂಭವಾಗಬೇಕು ಅನ್ನುವಷ್ಟರಲ್ಲಿ ಹಿಂತಿರುಗಿ ಬಂದ ಜೂರಿ,ಶ್ರೀಮತಿ ಸುಂದರಿ ಶೀರ್ಷಿಕೆಗೆ ಅರ್ಹರಾಗುವವರು ವಿವಾಹಿತರಾಗಿರಬೇಕು, ವಿಚ್ಛೇದನ ಪಡೆದವರಾಗಿರಕೂಡದು ಎಂಬ ಕಾರಣ ಹೇಳಿ ಪುಷ್ಪಿಕಾಳ ಶಿರೋಮಾಲೆಯನ್ನು ಎಳೆದು ತೆಗೆದು ಎರಡನೆಯ ಸ್ಥಾನದಲ್ಲಿದ್ದವಳ ತಲೆಗೆ ತೊಡಿಸಿದಳು.
ಅವಮಾನ ಸಹಿಸಲಾಗದ ಪುಷ್ಪಿಕಾ ಕಣ್ಣೀರು ಸುರಿಸುತ್ತಾ ವೇದಿಕೆಯಿಂದ ನಿರ್ಗಮಿಸಿದಳು. ಕಿರೀಟ ಎಳೆದು ತೆಗೆಯುವಾಗ ತಲೆಗೆ ಏಟು ಬಿತ್ತೆಂದು ಆಸ್ಪತ್ರೆಗೂ ದಾಖಲಾದಳು. ನಂತರ ಅದೇ ಕಾರಣಕ್ಕೆ ಜೂರಿಯ ಬಂಧನವೂ ಆಯಿತು, ಆಕೆ ತನ್ನ ಸೌಂದರ್ಯದ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದಳು. ಆದರೆ ತನ್ನ ನಿಲುವಿನಲ್ಲಿಯಾವುದೇ ಬದಲಾವಣೆ ಇಲ್ಲವೆಂದಳು. ಜೂರಿ ಸಾರ್ವಜನಿಕ ವಾಗಿ ತಪ್ಪೊಪ್ಪಿಕೊಂಡರೆ ಅವಳನ್ನು ಕ್ಷಮಿಸುವುದಾಗಿ ಹೇಳಿದಳು ಪುಷ್ಪಿಕಾ.
ಈ ನಡುವೆ ಆರೋಪದ ವಿಚಾರಣೆ ನಡೆಸಿದ ನಿರ್ಣಾಯಕರು ಪುಷ್ಪಿಕಾ ತನ್ನ ಪತಿಯಿಂದ ದೂರ ಉಳಿದಿದ್ದಾಳೆ, ಅವಳ ವಿಚ್ಛೇದನ ಇನ್ನೂ ಆಗಿಲ್ಲವಾದ್ದರಿಂದ ಆಕೆ ಅರ್ಹಳು ಎಂಬ ತೀರ್ಪನ್ನಿತ್ತು, ಅವಳೇ ವಿಜೇತೆ ಎಂದು ಘೋಷಿಸಿದರು. ಇದರಲ್ಲಿ ಸಾಮಾನ್ಯ ರಿಗೆ ಬಗೆಹರಿಯದ ಪ್ರಶ್ನೆಯೆಂದರೆ, ಮದುವೆಯಾಗದೇ ವಿಚ್ಛೇದನ ಆಗುವುದು ಹೇಗೆ? ಕಾಗದದ ಮೇಲೆ ವಿಚ್ಛೇದನ ಆಗದಿದ್ದರೂ, ವರ್ಷಾನುಗಟ್ಟಲೆ ಪರಸ್ಪರ ದೂರ ಉಳಿದವರನ್ನು ಸಂಸಾರಸ್ಥರೆಂದು ಕರೆಯಬೇಕಾ ಅಥವಾ ವಿಚ್ಛೇದಿತರೆಂದು ಹೇಳಬೇಕಾ? ಒಮ್ಮೆ ವಿಚ್ಛೇದಿತರಾದವರು ಪುನಃ ಸಂಸಾರಸ್ಥರಾಗಬಹುದಲ್ಲ? ಎಲ್ಲಕ್ಕಿಂತಲೂ ಮಿಗಿಲಾಗಿ ಶ್ರೀಮತಿ ಸುಂದರಿ ಸ್ಪರ್ಧೆಗೆ ಈನಿಯಮಗಳು ಎಷ್ಟು ಸಾಧು? ಆಯಿತು, ಒಂದು ವೇಳೆ ನಿಯಮವೇ ಹಾಗೆ ಅಂದುಕೊಂಡರೂ, ರಾಷ್ಟ್ರಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಇದನ್ನೆಲ್ಲ ಪರಿಶೀಲಿಸಬೇಕಾದದ್ದು ಸ್ಪರ್ಧಾಳುಗಳ ಪ್ರವೇಶದ ಸಂದರ್ಭದಲ್ಲಿ ತಾನೆ? ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರೆಂದು ಘೋಷಿಸಿದ ಮೇಲೆ ಅವರಿಂದ ಪ್ರಶಸ್ತಿ ಹಿಂದೆ ಪಡೆಯುವುದು ಎಷ್ಟು ಸರಿ? ಜೂರಿಗೆ ಒಂದು ಸುತ್ತು ಕಮ್ಮಿ ಎಂದೆನಿಸಿದರೆ ತಪ್ಪೇನಿಲ್ಲವಲ್ಲ.
ಈ ಸಂದರ್ಭದಲ್ಲಿ ಇನ್ನೊಂದು ಸೌಂದರ್ಯ ಸ್ಪರ್ಧೆಯ ಸಮಾರಂಭ ನೆನೆಪಿಗೆ ಬರುತ್ತದೆ. ಅದು ಈಗ ಹೇಳಿದ ಘಟನೆಗಿಂತ ಭಿನ್ನವಾದದ್ದು. 2015ರಲ್ಲಿ ಲಾಸ್ ವೆಗಾಸ್‌ನ ಹಾಲಿವುಡ್‌ನಲ್ಲಿ ನಡೆದ ಮಿಸ್ ಯುನಿವರ್ಸ್ ಸ್ಪರ್ಧೆಯ ಅಂತಿಮ ಕ್ಷಣಗಳನ್ನು ಬಹಳಷ್ಟು ಜನ ಇನ್ನೂ ಮರೆತಿರಲಿಕ್ಕಿಲ್ಲ. ಅಂದು ನಿರೂಪಕ ಸ್ಟೀವ್ ಹಾರ್ವಿ, ಮಿಸ್ ಕೋಲಂಬಿಯಾ, ಎರಿಯಾಡ್ನಾ ಗುಟಿಯೆರೆಜ್ ವಿಜೇತೆ ಎಂದು ಘೋಷಿಸಿದ. ಆದರೆ ಅವಳ ಸಂತಸದ ಕ್ಷಣಗಳು ಕೇವಲ ನಾಲ್ಕೂವರೆ ನಿಮಿಷಕ್ಕೇ ಸೀಮಿತ ವಾಯಿತು.
ತಾನು ವಿಜೇತರ ಪಟ್ಟಿ ಓದುವುದರಲ್ಲಿ ತಪ್ಪಾಗಿದೆಯೆಂದೂ, ನಿಜವಾದ ವಿಜೇತೆ ಮಿಸ್ ಫಿಲಿಪೈನ್ಸ್, ಪಿಯಾ ವರ್ಟ್ಸ್ಬಾಕ್ಎಂದು ಹೇಳುವಾಗ ಆತನೂ ಅಧೀರನಾಗಿದ್ದ. ಎರಿಯಾಡ್ನಾಗಂತೂ ಆಕಾಶದಿಂದ ಒಮ್ಮೆಲೇ ಪಾತಾಳಕ್ಕಿಳಿದ ಅನುಭವ. ಪಿಯಾ ಕೂಡ ಇದನ್ನು ನಂಬಲಾಗದೇ ಗರಬಡಿದವಳಂತೆ ನಿಂತಿದ್ದಳು. ಅನೇಕ ವರ್ಷಗಳಿಂದ ಸೌದರ್ಯ ಸ್ಪರ್ಧೆಗೆ ನಿರೂಪಕನಾಗಿಕಾರ್ಯನಿರ್ವಹಿಸಿದ ಅನುಭವಿ ಸ್ಟೀವ್ ಹಾರ್ವಿ ಯಾರೂ ಎಣಿಸದ ಪ್ರಮಾದ ಮಾಡಿದ್ದ. ಅಂದು ಅವನನ್ನು ಕ್ಷಮಿಸಿ ನಿಜವಾಗಿ ಹಿರಿತನ ತೋರಿದಳು ಎರಿಯಾಡ್ನಾ.
ವೇದಿಕೆಯಲ್ಲಿ ನಡೆದ ಇನ್ನೊಂದು ಆಘಾತಕಾರಿ ಘಟನೆಯಿದೆ. ಸುಮಾರು ಐದು ವರ್ಷದ ಹಿಂದೆ ಅಮೆರಿಕದಲ್ಲಿ ನಡೆದ ಮಿಸ್ ಅರ್ಥ್ ಯುನೈಟೆಡ್ ಸ್ಟೇಟ್ಸ್ ಸ್ಪರ್ಧೆ. ಅಂದು ವಿಜೇತಳಾದ ಕೊರಿನ್ ಸ್ಟೆಲಾಕಿಸ್ಳ ತಲೆ ಸಣ್ಣದಾಗಿತ್ತೋ ಅಥವಾ ಆಯೋಜಕರು ಮಾಡಿಸಿದ ಮುಕುಟ ದೊಡ್ಡದಾಗಿತ್ತೋ ಗೊತ್ತಿಲ್ಲ, ಆಕೆಯ ತಲೆಯ ಮೇಲೆ ಮುಕುಟವೇ ನಿಲ್ಲುತ್ತಿರಲಿಲ್ಲ. ಅದೇ ಸಂದರ್ಭದಲ್ಲಿಆಕೆ ತೊಟ್ಟ ರವಿಕೆಯೂ ಕೈಕೊಟ್ಟಿತು. ತನ್ನ ಸಮಯಪ್ರಜ್ಞೆಯಿಂದ ಆಕೆಯೂ ಪರಿಸ್ಥಿತಿ ನಿಭಾಯಿಸಿದಳು.
ಒಂದು ಸೇಫ್ಟಿ ಪಿನ್, ಎರಡು ಹೇರ್ ಪಿನ್ ಇಲ್ಲದಿದ್ದರೆ ಅಂದು ಕಿರೀಟ ಮತ್ತು ರವಿಕೆ ಎರಡೂ ಸ್ವಸ್ಥಾನದಲ್ಲಿ ನಿಲ್ಲುತ್ತಿರಲಿಲ್ಲ.ಇವೆಲ್ಲ ವೇದಿಕೆಯದ ಪ್ರಮಾದಕ್ಕೆ ಒಂದೆರಡು ಉದಾಹರಣೆಗಳು. ವೇದಿಕೆಯಲ್ಲಿ ಈ ರೀತಿಯ ಅನೇಕ ಪ್ರಮಾದಗಳಾಗುವುದಿದೆ. ಅಂಗನವಾಡಿ, ಪ್ರಾಥಮಿಕ ಶಾಲೆಯ ಮಕ್ಕಳ ಸಮಾರಂಭ ಗಳಾದರೆ ವಿಷಯ ಬೇರೆ. ಪ್ರತಿಷ್ಠಿತ ಸಮಾರಂಭಗಳಲ್ಲಿ ಈ ರೀತಿಯಗೋಟಾವಳಿಗಳಾದರೆ ಆ ಅಭಾಸ ಬಹುಕಾಲ ನೆನಪಿನಲ್ಲಿರುತ್ತದೆ. ಇವೆಲ್ಲ ವೇದಿಕೆಯದ ಘಟನೆಗಳು, ಬಿಡಿ.
ನಿಜವಾಗಿ ನೋಡಬೇಕಾದದ್ದು ಈ ಸ್ಪರ್ಧೆಯ ಹಿಂದಿನ ಉದ್ದೇಶ ಮತ್ತು ಆಯ್ಕೆ ಪ್ರಕ್ರಿಯೆಗಳನ್ನು. ಸಾಮಾನ್ಯವಾಗಿ ಇಂತಹ ಸ್ಪರ್ಧೆಗಳಲ್ಲಿ ಸೌಂದರ್ಯಕ್ಕೆ ಎಂದು ಅಂಕಗಳಿರುವುದು ಶೇಕಡಾ ಮೂವತ್ತೈದರಷ್ಟು ಮಾತ್ರ. ಉಳಿದಂತೆ, ಜ್ಞಾನಕ್ಕೆ ಮೂವತ್ತು, ದೇಹದ ಆಕೃತಿ, ಹೊರ ರೂಪಕ್ಕೆ ಇಪ್ಪತ್ತು, ಸಮತೋಲನಕ್ಕೆ ಹತ್ತು ಮತ್ತು ವರ್ತನೆಗೆ ಐದರಷ್ಟು ಅಂಕಗಳು. ಆಯಾ ಸ್ಪರ್ಧೆ ಗಳಲ್ಲಿ ಅವರವರ ನಿಯಮದಂತೆ ಐದು ಅಂಕ ಆಚೆ ಈಚೆ. ಅಂದರೆ, ಈ ಸ್ಪರ್ಧೆಗಳಲ್ಲಿ ಬಾಹ್ಯಕ್ಕಿಂತಲೂ ಆಂತರಿಕ ಸೌಂದರ್ಯಕ್ಕೆ ಬೆಲೆ ಹೆಚ್ಚು ಎಂದಾಯಿತು.
ಇನ್ನೊಂದು ವಿಷಯವೆಂದರೆ, ಬಹಳಷ್ಟು ವರ್ಷಗಳವರೆಗೆ ಇಲ್ಲಿ ಪ್ರತಿಭಾ ಸ್ಪರ್ಧೆ ಇದ್ದಿರಲಿಲ್ಲ. ಕಳೆದ ಎರಡು ದಶಕಗಳಿಂದ ಉತ್ತಮ ಪ್ರತಿಭೆ ಎಂಬ ವಿಭಾಗವನ್ನೂ ಸೇರಿಸಿಕೊಳ್ಳಲಾಗಿದೆ. ಇದರ ಜತೆಗೆ ಉತ್ತಮ ನಗು, ಭಾವಚಿತ್ರಕ್ಕೆ ಒಗ್ಗುವ ಮುಖ,ಈಜುಡುಗೆ, ಕ್ರೀಡಾ ಪೋಷಾಕು ಇತ್ಯಾದಿ ಬೇರೆ ಬೇರೆ ವಿಭಾಗಗಳಿದ್ದು, ಅದಕ್ಕೆ ಪ್ರತ್ಯೇಕ ಬಹುಮಾನಗಳಿರುತ್ತವೆ. ಇವರ ಆಯ್ಕೆಗಾಗಿ ಎಂಟರಿಂದ ಹತ್ತು ಜನ ನಿರ್ಣಾಯಕರಿರುತ್ತಾರೆ.
ಇಂದು ವಿಶ್ವದಾದ್ಯಂತ ಮಿಸ್ ಯುನಿವರ್ಸ್, ಮಿಸ್ ವರ್ಲ್ಡ್, ಮಿಸ್ ಅರ್ಥ್, ಮಿಸ್ ಇಂಟರ್‌ನ್ಯಾಷನಲ್ ನಂಥ ಪ್ರತಿಷ್ಠಿತ ಸ್ಪರ್ಧೆಗಳೂ ಸೇರಿದಂತೆ ಒಟ್ಟೂ ಹದಿನೈದಕ್ಕೂ ಹೆಚ್ಚು, ಮಹಿಳೆಯರ ಸೌಂದರ್ಯಕ್ಕೆ ಸಂಬಂಧಿಸಿದ ಸ್ಪರ್ಧೆಗಳಿವೆ. ಸುಮಾರು ಎಂಬತ್ತರಿಂದ ತೊಂಬತ್ತು ದೇಶವನ್ನು ಪ್ರತಿನಿಧಿಸುವ ಸ್ಪರ್ಧಾಳು ಗಳಿರುತ್ತಾರೆ. ಇವರಲ್ಲಿ ಶೇಕಡಾ ಎಂಬತ್ತರಷ್ಟು ಮೊದಲನೆಯ ಸುತ್ತಿನ ಹೊರನಡೆಯುತ್ತಾರೆ.
ಕೊನೆಯ ಸುತ್ತಿಗೆ ತಲುಪುವಾಗ ಮೂರರಿಂದ ಐದು ಜನ ಸ್ಪರ್ಧಾಳುಗಳು ಕಣದಲ್ಲಿರುತ್ತಾರೆ. ಇದರಲ್ಲಿ ದೇಹ ಮತ್ತು ಆಕೃತಿಗೆ ಇರುವ ಇಪ್ಪತ್ತು ಅಂಕಗಳಿಗಾಗಿ ರಾತ್ರಿಯ ಪೋಷಾಕು (ನೈಟ್ ಗೌನ್) ಮತ್ತು ಈಜುಡುಗೆಯನ್ನು (ಸ್ವಿಮ್ ವೇರ್) ಯಾಕೆ ತೊಡಿಸುತ್ತಾರೆ ಎನ್ನುವುದು ಇಂದಿಗೂ ಸಾಮಾನ್ಯರಿಗೆ ಅರ್ಥವಾಗದ ಯಕ್ಷಪ್ರಶ್ನೆಯೇ. ಆ ಉಡುಗೆ ತೊಟ್ಟು ಹೇಗೆ ನಿರ್ವಹಿಸುತ್ತಾರೆ ಎಂದು ನೋಡುವುದಾದರೆ, ಅದಕ್ಕೆ ಅಂತ ಇರುವುದು ಐದು ಅಂಕಗಳು ಮಾತ್ರ. ಅಂತಿಮ ಹಂತಕ್ಕೆ ತಲುಪಿದವರು ಕೆಲವೊಮ್ಮೆ ಈಜುಡುಗೆಯನ್ನು ಎರಡು ಬಾರಿ ತೊಡಬೇಕಾಗುತ್ತದೆ.
ಹಲವಾರು ದೇಶಗಳು ಸ್ಪರ್ಧೆಯಲ್ಲಿ ಭಾಗವಹಿಸದಿರುವುದಕ್ಕೆ ಇದು ಒಂದು ಕಾರಣವಾದರೆ, ಸ್ಪರ್ಧೆಯಲ್ಲಿ ಭಾಗವಹಿಸಲು ತಗುಲುವ ವೆಚ್ಚ ಇನ್ನೊಂದು ಕಾರಣ. ಒಬ್ಬ ಸ್ಪರ್ಧಾಳು ಅಂತಾರಾಷ್ಟ್ರೀಯ ಮಟ್ಟದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕೆಂದರೆ ಪ್ರಯಾಣ, ಉಡುಗೆ, ಸೌಂದರ್ಯ ವರ್ಧಕಗಳು ಇತ್ಯಾದಿಗಳ ಖರ್ಚು ಏನಿಲ್ಲವೆಂದರೂ ಸುಮಾರು ಹತ್ತು ಲಕ್ಷ ರುಪಾಯಿಯಷ್ಟಾಗುತ್ತದೆ. ಇದಕ್ಕೆ ಬೇಕಾದ ಪೂರ್ವ ಸಿದ್ಧತೆ, ತರಬೇತಿಗಳ ವೆಚ್ಚ ಬೇರೆ.
ಜಯಿಸಿದರೆ ಆಯಿತು, ಇಲ್ಲವಾದರೆ ಅದಷ್ಟೂ ನೀರಿನಲ್ಲಿ ಹೋಮ ಮಾಡಿದಂತೆಯೇ. ಇದಕ್ಕೆ ಪ್ರಾಯೋಜಕರು ಇದ್ದರೆ ಅಡ್ಡಿ ಯಿಲ್ಲ, ಇಲ್ಲವಾದರೆ ಇದು ಬಡವರು ಕಾಣುವ ಕನಸಲ್ಲ! ಸೌಂದರ್ಯ ಸ್ಪರ್ಧೆಗಳು ಎಂದಿನಿಂದ ಆರಂಭವಾದವು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಪ್ರಾಚೀನ ಕಾಲದಲ್ಲಿ ಚೀನಾ, ಗ್ರೀಸ್‌ನ ಲೆಸ್ವೋಸ್ ದ್ವೀಪ, ಟ್ರಾಯ್ ಪ್ರದೇಶಗಳಲ್ಲಿ ಮನರಂಜನೆಯ ಒಂದು ಭಾಗವಾಗಿ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದರಂತೆ.
ಒಂದು ದಾಖಲೆಯ ಪ್ರಕಾರ 1839ರಲ್ಲಿ ಸ್ಕಾಟ್ಲ್ಯಾಂಡ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸಾಮರ್ಸೆಟ್‌ನ ಹನ್ನೆರಡನೇ ಡ್ಯೂಕ್ ಎಡ್ವರ್ಡ್ ಸೆಮೌರ್ ಪತ್ನಿ 30ವರ್ಷದ ಜೇನ್ ಜಾರ್ಜಿಯಾನಾ ಮೊದಲ ಬಾರಿ ‘ಸೌಂದರ್ಯದ ರಾಣಿ’ ಎಂದು ಕರೆಸಿಕೊಂಡಳಂತೆ. ನಿರ್ಣಾಯಕರು, ಹೇಹದ ಸೌಂದರ್ಯ ಅಳೆಯುವ ಮಾನದಂಡ ಅಳವಡಿಸಿಕೊಂಡ ಮೊದಲ ಆಧುನಿಕ ಸ್ಪರ್ಧೆ 1854ರಲ್ಲಿ ಅಮೆರಿಕಾದಲ್ಲಿ ಆರಂಭವಾಯಿತಂತೆ. ಕಡಲ ತೀರದಲ್ಲಿ ವ್ಯಾಪಾರ ಉತ್ತೇಜಿಸಲು ಎಂದು 1880ರ ದಶಕದಲ್ಲಿ ಬೇಸಿಗೆ ಹಬ್ಬದ ಅಂಗವಾಗಿ ಮೊದಲ ‘ಸ್ನಾನದ ಸೌಂದರ್ಯ ಸ್ಪರ್ಧೆ’ಯನ್ನೂ, 1888ರಲ್ಲಿ ಬೆಲ್ಜಿಯಂನಲ್ಲಿ ಮೊದಲ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯನ್ನೂ ಆಯೋಜಿಸಲಾಯಿತು ಎನ್ನುತ್ತದೆ ಇತಿಹಾಸ.
ಮೊದಲ ಅಂತಾರಾಷ್ಟ್ರೀಯ ಸುಂದರಿ ಎಂಬ ಬಿರುದಿಗೆ ಪಾತ್ರಳಾದವಳು ಹದಿನೆಂಟು ವರ್ಷದ ಮಾರ್ಥೆ ಸೌಕರೆಟ್.ಆಧುನಿಕ ಯುಗದಲ್ಲಿ ಈ ಸ್ಪರ್ಧೆ ಹೆಚ್ಚು ಸುದ್ದಿ ಮಾಡಲು ಆರಂಭಿಸಿದ್ದು 1950ರ ನಂತರ. 1951ರಲ್ಲಿ ಲಂಡನ್‌ನಲ್ಲಿ ಮೊದಲ ಮಿಸ್ ವಲ್ಡ ಕಾರ್ಯಕ್ರಮ ಆಯೋಜಿಸಲಾಯಿತು. ನಂತರ 1952ರಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮಿಸ್ ಯುನಿವರ್ಸ್, 1960ರಲ್ಲಿ ಜಪಾನ್‌ನ ಟೋಕಿಯೋ ನಗರದಲ್ಲಿ ಮಿಸ್ ಇಂಟರ್ ನ್ಯಾಷನಲ್‌, 2001ರಲ್ಲಿ ಫಿಲಿಫೈನ್ಸ್‌ನ ರಾಜಧಾನಿ ಮನಿಲಾದಲ್ಲಿ ಮಿಸ್ ಅರ್ಥ್ ಕಾರ್ಯಕ್ರಮಗಳನ್ನು ಮೊಟ್ಟ ಮೊದಲ ಬಾರಿಗೆ ಆಯೋಜಿಸಲಾಗಿತ್ತು.
ಈ ನಾಲ್ಕೂ ಪ್ರತಿಷ್ಠಿತ ಸ್ಪರ್ಧೆಗಳು ಇಂದಿಗೂ ಮುಂದುವರಿದಿವೆ. ಇವುಗಳ ಜತೆಗೆ ಈಗ ಬಾಲಕಿಯರ, ಯುವತಿಯರ ಮತ್ತು ಶ್ರೀಮತಿಯರ ಪ್ರತ್ಯೇಕ ಸ್ಪರ್ಧೆಗಳೂ ಹುಟ್ಟಿಕೊಂಡಿವೆ. ಎಲ್ಲಾ ಸ್ಪರ್ಧೆಗಳ ಹಿಂದಿನ ಉದ್ದೇಶವೂ ಹೆಚ್ಚು ಕಮ್ಮಿ ಒಂದೇ. ವಿಜೇತ ರಾದವರು ಜನಹಿತ ಮತ್ತು ಲೋಕ ಕಲ್ಯಾಣಕ್ಕಾಗಿ ಕೆಲಸಮಾಡಬೇಕು ಎನ್ನುವುದು. ಇದೇ ಕಾರಣಕ್ಕೆ ಪ್ರತಿಷ್ಠಿತ ಮಿಸ್ಯುನಿವರ್ಸ್, ಮಿಸ್ ವರ್ಲ್ಡ್‌ನಂಥ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಂದು ವರ್ಷ ಪ್ರಾಯೋಜಕರ ಖರ್ಚಿನ ವಿಶ್ವ ಪರ್ಯಟನೆಯಾಗುವುದು.
ವಿಶ್ವದಾತ್ಯಂತ ಇರುವ ಸಾಮಾಜಿಕ ಸಮಸ್ಯೆಗಳನ್ನು ಅರಿತು, ಅದರ ಉದ್ಧಾರಕ್ಕಾಗಿ ಕೆಲಸ ಮಾಡಬೇಕು ಎನ್ನುವುದು. ವಿಪರ್ಯಾಸವೆಂದರೆ ಈ ಮಾರ್ಗದಲ್ಲಿ ಮುನ್ನಡೆಯುವ ವಿಜೇತರ ಸಂಖ್ಯೆ ಮಾತ್ರ ತೀರಾ ಕಮ್ಮಿ. ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದವರಲ್ಲಿ ರಾಜಕೀಯ ಪ್ರವೇಶಿಸಿದವರು, ಚಿತ್ರರಂಗ ಪ್ರವೇಶಿದವರು, ಮಾಡೆಲಿಂಗ್ ಅಥವಾ ಜಾಹೀರಾತು ಲೋಕ ವನ್ನು ಆಯ್ದುಕೊಂಡವರೇ ಹೆಚ್ಚು. ಯಾವುದೂ ಬೇಡವೆಂದು ಸಂಸಾರಸ್ಥರಾದವರೂ ಸಾಕಷ್ಟಿದ್ದಾರೆಯೇ ಹೊರತು ಸಮಾಜ ಕಲ್ಯಾಣಕ್ಕಾಗಿ ದುಡಿದವರು ತೀರಾ ಕಮ್ಮಿ.
ಇದು ನಮ್ಮ ದೇಶದ್ದೊಂದೇ ಅಲ್ಲ, ಹೆಚ್ಚು ಕಮ್ಮಿ ಎಲ್ಲಾ ದೇಶದ ಕಥೆಯೂ ಹೀಗೆಯೇ. ಇದು ತಪ್ಪು ಎಂದು ಹೇಳುವುದಿಲ್ಲ. ಅವರವರ ಭವಿಷ್ಯವನ್ನು ರೂಪಿಸಿಕೊಳ್ಳುವ ಆಯ್ಕೆ, ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಅದೆಷ್ಟೋ ವರ್ಷದ ಸಾಧನೆಯ ನಂತರ ಪ್ರಶಸ್ತಿಗೆ ಭಾಜನರಾಗಿ, ಅದರ ಮೂಲ ಉದ್ದೇಶವನ್ನೇ ಬಿಟ್ಟು ಬೇರೆ ಯಾವುದೋ ದಿಕ್ಕಿನಲ್ಲಿ ಚಲಿಸುವುದು ಸರಿಯೋ, ತಪ್ರೋ ಎಂಬುದು ಅರ್ಥವಾಗದ ಸಂಗತಿ.
ಸಾಮಾನ್ಯವಾಗಿ ಅಂತಿಮ ಹಂತ ತಲುಪಿದ ಸ್ಪರ್ಧಾಳುಗಳಿಗೆ ಕೇಳುವ ಪ್ರಶ್ನೆಗಳು ಮಹಿಳಾ ಸಬಲೀಕರಣ, ಮಕ್ಕಳ ಕಲ್ಯಾಣ, ಸಮಾನತೆ, ಶಾಂತಿ, ಮಾರಕ ರೋಗಗಳೂ, ಪರಿಸರ ಇತ್ಯಾದಿ ವಿಷಯಗಳ ಕುರಿತೇ ಇರುತ್ತವೆ. ಆ ಸಂದರ್ಭದಲ್ಲಿ ವಿಶ್ವವೇಮೆಚ್ಚುವಂಥ ಉತ್ತರ ನೀಡುವವರು ವಿಜೇತರಾದ ನಂತರ ಆ ಕ್ಷೇತ್ರದಿಂದ ಮಾಯವಾಗುವುದು ಏಕೋ ಏನೋ? ವಿಜೇತರಾಗಿ ಕೆಲವು ವರ್ಷಗಳ ನಂತರವೂ ಈ ಕ್ಷೇತ್ರದಲ್ಲಿ ಉಳಿಯುವವರು ಬೆರಳೆಣಿಕೆಯಷ್ಟು ಮಾತ್ರ.
ವಿಶ್ವದ ನಾಲ್ಕು ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಇದುವರೆಗೆ ವಿಜೇತರಾದ ಸುಮಾರು ಇನ್ನೂರಕ್ಕೂ ಹೆಚ್ಚು ವಿಜೇತರಲ್ಲಿಎಷ್ಟು ಜನ ಸಮಾಜಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ ಹೇಳಿ? ಭಾರತದಲ್ಲಿ 1947ರಲ್ಲಿ ಆರಂಭವಾದಂದಿನಿಂದ ಇದುವರೆಗೆ ವಿಜೇತರಾದ ಎಪ್ಪತ್ತಕ್ಕೂ ಹೆಚ್ಚು ಸುಂದರಿಯರಲ್ಲಿ ಎಷ್ಟು ಜನರ ಹೆಸರು ನಮಗೆ ನೆನೆಪಿದೆ? ಹೋಗಲಿ, 1952ರಲ್ಲಿ ಮೊದಲ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಇಂದ್ರಾಣಿ ರೆಹಮಾನ್ ಹೆಸರು ಎಷ್ಟು ಜನರಿಗೆ ಗೊತ್ತಿದೆ? ಭಾರತದಲ್ಲಿ -ಮಿನಾಸಂಸ್ಥೆ ನಡೆಸುವ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಯುನಿವರ್ಸ್, ಎರಡನೆಯ ಸ್ಥಾನ ಪಡೆದವರನ್ನು ವಲ್, ಮೂರನೆಯ ಸ್ಥಾನ ಪಡೆದವರನ್ನು ಇಂಟರ್ ನ್ಯಾಷನಲ್ ಸ್ಪರ್ಧೆಗೆ ಕಳಿಸಿಕೊಡಲಾಗುತ್ತಿತ್ತು.
ನಂತರದ ದಿನಗಳಲ್ಲಿ ಅರ್ಥ್ ಮತ್ತು ಏಷ್ಯಾ ಪೆಸಿಫಿಕ್‌ಗಳನ್ನು ಇದಕ್ಕೆ ಸೇರಿಸಿಕೊಂಡು, ಇತ್ತೀಚಿನ ದಿನಗಳಲ್ಲಿ ಮಿಸ್ ಇಂಡಿಯಾ– ಯುನಿವರ್ಸ್, ಮಿಸ್ ಇಂಡಿಯಾ – ವರ್ಲ್ಡ್ ಹೀಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. 1970ರಲ್ಲಿ ಮಿಸ್ ಏಷ್ಯಾ ಪೆಸಿಫಿಕ್ ಪ್ರಶಸ್ತಿಗೆ ಭಾಜನಳಾದ ಮೊದಲ ಭಾರತೀಯ ಸುಂದರಿ ಝೀನತ್ ಅಮಾನ್, 1994ರಲ್ಲಿ ಭಾರತದ ಮೊದಲ ಮಿಸ್ ಯುನಿವರ್ಸ್ ಆದ ಸುಶ್ಮಿತಾ ಸೇನ್, ಮಿಸ್ ವರ್ಲ್ಡ್ ಆದ ಐಶ್ವರ್ಯಾ ರೈ, 2000ರಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜಯಿಸಿದ ಲಾರಾ ದತ್ತಾ,ಪ್ರಿಯಾಂಕಾ ಚೋಪ್ರಾ, ದಿಯಾ ಮಿರ್ಜಾ, ಈ ನಡುವೆ ವಿಜೇತರಾದ ಡಯಾನಾ ಹೈಡನ್, ಯುಕ್ತಾ ಮೂಖಿ ಎಲ್ಲರೂ ಚಿತ್ರರಂಗ ಕ್ಕಷ್ಟೇ ಸೀಮಿತರಾದರು.
ಯಾವುದೇ ವೃತ್ತಿ ಜೀವನ ಆರಿಸಿಕೊಂಡರೂ, ಯಾವ ಉದ್ದೇಶದಿಂದ ಕೀರ್ತಿವಂತರಾದೆವೆಂದು ನೆನಪಿಟ್ಟುಕೊಂಡು ಅದರ ಜತೆಪ್ರಯಾಣ ಮುಂದುವರಿಸಿದರೆ ಮಾತ್ರ ಸುಂದರಿಯರ ಸೌಂದರ್ಯ ಚಿರಕಾಲ ಉಳಿಯುತ್ತದೆ. ಅದಿಲ್ಲದಿದ್ದರೆ ವಿಶ್ವ ಸುಂದರಿ ವೇಸ್ಟ್ !