ಮುಂಬೈಯಲ್ಲಿ ಮತ್ತೊಮ್ಮೆ ಕರೋನಾ ಕರಿನೆರಳು
ಮುಂಬೈ ಡೈರಿ
ಶ್ರೀನಿವಾಸ ಜೋಕಟ್ಟೆ
ಮಹಾರಾಷ್ಟ್ರದಲ್ಲಿ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗಿನ ಏಳರ ತನಕ ಎರಡು ದಿನಗಳ ಲಾಕ್‌ಡೌನ್ ಘೋಷಿಸಿದ್ದ ರಿಂದ 24 ಗಂಟೆಯೂ ಲವಲವಿಕೆಯಿಂದಿದ್ದ ಮುಂಬೈ ಮಹಾನಗರದ ವೇಗಕ್ಕೆ ಕಡಿವಾಣ ಬಿದ್ದಂತಾಗಿದೆ. ಹೊರಗೆ ಬಂದರೆ 2020ರ ಲಾಕ್‌ಡೌನ್ ದಿನಗಳ ದೃಶ್ಯಗಳು ಎದುರಾಯಿತು.
ಸದಾ ಜನಸಂದಣಿಯಿಂದ ಕೂಡಿದ್ದ ರಸ್ತೆಗಳು ಬಿಕೋ ಅನ್ನುತ್ತಿವೆ. ಸಮುದ್ರತೀರಗಳಲ್ಲಿ ಪ್ರವಾಸಿಗರಿಲ್ಲ. ಶಹರದಲ್ಲಿ ಪೊಲೀಸರ ವಾಹನಗಳು ಮತ್ತು ಆಂಬುಲೆನ್ಸ್ ಗಳು ಹೆಚ್ಚಿನ ಕಡೆ ಕಂಡು ಬರುತ್ತಿವೆ. ಶಹರದ ಜೀವನಾಡಿ ಲೋಕಲ್ ರೈಲುಗಳು ಒಂದಿಷ್ಟು ಓಡಾಡುತ್ತಿದ್ದರೂ ಅಗತ್ಯ ಸೇವೆ ಯಲ್ಲಿನ ಪಾಸ್ ಹೋಲ್ಡರ್‌ಗಳಷ್ಟೇ ರೈಲಲ್ಲಿ ಕಂಡುಬಂದಿದ್ದಾರೆ.
ಲಾಕ್‌ಡೌನ್ ಘೋಷಿಸಿದ್ದರಿಂದ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಬೆಸ್ಟ್. ಬಸ್ಸು , ಆಟೋ – ಟ್ಯಾಕ್ಸಿ, ಎಸಿ ಬಸ್ಸು, ಟ್ರೈನ್ ಅಲ್ಲಲ್ಲಿ ಓಡಾಡುತ್ತಿದ್ದರೂ ಬೆರಳೆಣಿಕೆಯ ವಾಹನಗಳಲ್ಲಷ್ಟೇ ಪ್ರಯಾಣಿಕರಿದ್ದಾರೆ. ಅರ್ಥಾತ್ ಮತ್ತೊಮ್ಮೆ ಕರೋನಾ ಕಾಲದಲ್ಲಿನ ಲಾಕ್ಡೌನ್ ದಿನಗಳು ಕಾಲಿಟ್ಟಿತು! ಸರಕಾರದ ಕಠಿಣ ನಿಯಮ ಮತ್ತು ಕರೋನಾದ ಭಯದಿಂದ ಮುಂಬೈ ಜನ ಹೊರಗೆ ತಿರುಗಾಡಲು ಬಂದಿಲ್ಲ.
ಮುಂಬೈನ ಅತಿ ಹೆಚ್ಚು ಜನಸಂಖ್ಯೆ ಇರುವ ದಾದರ್ ಮಾತುಂಗ ಅಂಧೇರಿ ಕುರ್ಲಾ ವರ್ಲಿ ಬಜಾರ್, ಬೆಂಡಿ ಬಜಾರ್, ಮಸ್ಜಿದ್ ಬಂದರ್…. ಇ ರಸ್ತೆಗಳು ಬಿಕೋ ಅನ್ನುತ್ತಿವೆ. ಯಾವುದೇ ಕೆಲಸ ಇಲ್ಲದೆ ಹೊರಗಡೆ ತಿರುಗಾಡುವವರಿಂದ ದಂಡವನ್ನು ವಸೂಲಿಮಾಡಲಾಗುತ್ತಿದೆ. ಕಳೆದ ವರ್ಷದಂತೆ ಅನಗತ್ಯವಾಗಿ ವಾಹನಗಳನ್ನು ಓಡಿಸಿದ ಚಾಲಕರನ್ನು ನಿಲ್ಲಿಸಿ ಬಸ್ಕಿ ತೆಗೆಸಲಾಗಿದೆ.
ಒಂದೇ ವ್ಯತ್ಯಾಸ ಅಂದ್ರೆ ಲಾಕ್‌ಡೌನ್ ಹೊರತಾಗಿ ಈ ಸಲ ಹೈವೇಯನ್ನು ಬಂದ್ ಮಾಡಿಲ್ಲ. ಕರೋನಾ ಪ್ರಕರಣದ ಹೆಚ್ಚು ತ್ತಿರುವ ಘಟನೆಯಿಂದ ಮುಂಬೈ ಮಹಾನಗರ ಪಾಲಿಕೆ, ಮಹಾರಾಷ್ಟ್ರ ಸರಕಾರ ತೀವ್ರ ಚಿಂತೆಗೀಡಾಗಿದೆ. ಸದ್ಯ ವೀಕೆಂಡ್ ಶನಿವಾರ ಮತ್ತು ರವಿವಾರ2ದಿನಗಳ ಲಾಕ್‌ಡೌನ್ ಘೋಷಿಸಲಾದರೂ ಮುಂಬೈಯಲ್ಲಿ ಮತ್ತೊಮ್ಮೆ ಮೂರು ವಾರಗಳ ಲಾಕ್‌ಡೌನ್ ಗೆ ಚಿಂತನೆ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ಲಾಕ್‌ಡೌನ್‌ಗೆ ತೀವ್ರ ವಿರೋಧಿಸಿದೆ.
ಮುಂಬೈನಲ್ಲಿ ಈವಾಗ ಅನೇಕ ಕಡೆ ಕರೋನಾ ಲಸಿಕೆಯ ಮೊದಲ ಡೋಸ್ ಅಲ್ಲ, ಎರಡನೇ ಡೋಸ್ ಚುಚ್ಚಿಸಿಕೊಳ್ಳಲುಜನ ಕಾಯುತ್ತಿದ್ದಾರೆ. ಅತ್ತ ಮುಂಬೈಯ ಅನೇಕ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಸ್ಟಾಕ್ ಮುಗಿಯುತ್ತಿದೆ. ಒಂದು ಲಸಿಕಾಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಲಸಿಕೆ ಚುಚ್ಚಿಸಿಕೊಳ್ಳಲು ಜನರ ಓಡಾಟ ಆರಂಭವಾಗಿದೆ. ಕರೊನಾ ಸೋಂಕುರೋಗದಎರಡನೇ ಅಲೆಗೆ ಮತ್ತೊಮ್ಮೆ ಸ್ಮಶಾನ ಗಳಲ್ಲಿ ಶವಸಂಸ್ಕಾರಕ್ಕೆ ಕ್ಯೂ ಕಾಣಿಸಿಕೊಳ್ಳಲು ಆರಂಭ ವಾಗಿದೆ.
2020ರ ದೃಶ್ಯಗಳ ಪುನರಾವರ್ತನೆ ಆಗುತ್ತಿದೆಯೋ…? ಎಂಬ ಭಯದಲ್ಲಿ ಮಹಾರಾಷ್ಟ್ರದ ಜನರಿದ್ದಾರೆ. ಹೌದು. ಕಳೆದ ವರ್ಷ2020ರ ಕರೋನಾ ಕಾಲದ ದೃಶ್ಯಗಳು ಇದೀಗ ನಮ್ಮ ಕಣ್ಣ ಮುಂದೆ ಮತ್ತೆ ಕಾಣಿಸಿಕೊಳ್ಳಲು ಆರಂಭವಾಗಿವೆ. ವ್ಯಾಕ್ಸಿನ್ ಬಂದಿದೆ ಎಂದು ಖುಷಿಪಡುತ್ತಿದ್ದ ಜನರಿಗೆಲ್ಲ ಆಘಾತವಾಗುತ್ತಿದೆ. ತಜ್ಞರು ಈಗಾಗಲೇ ಲಸಿಕೀಕರಣ ಕರೋನಾ ಸೋಂಕು ತಗಲಲಾರದು ಎನ್ನುವ ಕುರಿತು ನೂರು ಶೇಕಡಾ ಗ್ಯಾರಂಟಿ ಏನೂ ಆಗಿಲ್ಲ. ಒಂದು ಹಂತದವರೆಗೆ ಮಾತ್ರ ಅದು ಕಡಿಮೆ ಮಾಡಬಹುದಷ್ಟೆ. ಲಸಿಕೆ ಚುಚ್ಚಿಸಿಕೊಂಡರೂ ಮಾಸ್ಕ್ ಮತ್ತು ಅಂತರ ಕಾಯ್ದುಕೊಳ್ಳುವುದೇ ನಿಜವಾದ ಲಸಿಕೆ ಎಂದು ಬೊಬ್ಬೆ ಹೊಡೆಯುತ್ತಲೇ ಇದ್ದರೂ ಅನೇಕರಿಗೆ ಅದು ಅರ್ಥ ಆಗ್ತಿಲ್ಲ ಯಾಕೋ.
ಸೋಂಕು ಪ್ರಮಾಣ ವೇಗದಲ್ಲಿದೆ, ಸಾವಿನ ಪ್ರಕರಣಗಳೂ ಏರುತ್ತಿವೆ. ಈ ದಿನಗಳಲ್ಲಿ ಮತ್ತೆ ಶವಸಂಸ್ಕಾರಕ್ಕೆ ಸ್ಮಶಾನಗಳಲ್ಲಿ ಕ್ಯೂಕಾಣಿಸಿದೆ. ಬೀಡ್ ಜಿಯಲ್ಲಿ ಊರ ಸ್ಮಶಾನದಲ್ಲಿ ಕರೋನಾ ರೋಗಿಗಳ ಶವಗಳನ್ನು ತರಬಾರದು ಎಂದು ಪ್ರತಿಭಟಿಸಿದ ನಂತರ ಎರಡು ಕಿಲೋ ಮೀಟರ್ ದೂರದಲ್ಲಿ ಎಂಟು ಕರೋನಾ ರೋಗಿಗಳ ಶವಗಳನ್ನು ಒಂದೇ ಚಿತೆಯಲ್ಲಿರಿಸಿ ದಹಿಸಿದ ಅಮಾನ ವೀಯ ಘಟನೆ ವರದಿಯಾಗಿದೆ. ಆ ಚರ್ಚೆ ತಣ್ಣಗಾಗಿಲ್ಲ. ಅಹ್ಮದ್ ನಗರ ಜಿಯಲ್ಲಿ 42 ಶವಗಳನ್ನು ಏಕಕಾಲಕ್ಕೆ ಅಂತ್ಯಸಂಸ್ಕಾರಮಾಡಿದ ಸಂದರ್ಭದಲ್ಲಿ 6 ಶವಗಳನ್ನು ಒಂದರ ಮೇಲೆ ಒಂದಿರಿಸಿ ಅಮಾನವೀಯವಾಗಿ ದಹಿಸಿದ ದೃಶ್ಯದ ವಿಡಿಯೋ ವೈರಲ್ ಆದ ನಂತರ ತನಿಖೆಗೆ ಆದೇಶಿಸಲಾಗಿದೆ.
(ಕಳೆದ ವರ್ಷ ಕರ್ನಾಟಕದಲ್ಲಿ ಅಂಬ್ಯುಲೆನ್ಸ್‌ನಿಂದ ಕರೋನಾ ರೋಗಿಗಳನ್ನು ಕೆಳಹಾಕಿ ಹೊಂಡದ ತನಕ ನಾಯಿ ಎಳೆದಂತೆ ಎಳೆದು ಒಂದರ ಮೇಲೆ ಒಂದು ಶವವನ್ನು ಇರಿಸಿ ದಫನ್ ಮಾಡಿದ ದೃಶ್ಯ ಟಿವಿ ಚಾನಲ್‌ಗಳಲ್ಲೂ ಬಂದು ಮಾನವೀಯತೆ ಎಲ್ಲಿ ಹೋಯ್ತು ಎಂದು ಚರ್ಚೆ ಆಗಿತ್ತಲ್ಲವೇ.) ಅದಕ್ಕಿಂತಲೂ ಭೀಕರ ದೃಶ್ಯಗಳು ಈ ಸಲ ಮತ್ತೆ ಕರೋನಾ ಎರಡನೇ ಅಲೆಯಲ್ಲೂ ಕಾಣಿಸಿಕೊಂಡದ್ದು ಭಾರತೀಯರ ದುರದೃಷ್ಟ.
ಈ ಸಮಯ ದೇಶದಲ್ಲಿ ಕರೋನಾ ಸೋಂಕುರೋಗ ದಿನಕ್ಕೆ ಒಂದೂವರೆ ಲಕ್ಷ ಸಂಖ್ಯೆಯನ್ನು ಸಮೀಪಿಸಲು ಕಾಯುತ್ತಿದೆ. ಸಾವಿನ ಸಂಖ್ಯೆಯೂ ಏರುತ್ತಿದೆ. ಅನೇಕ ರಾಜ್ಯಗಳಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ. ಅತ್ತ ಕರೋನಾ ವನ್ನಾದರೂ ಎದುರಿಸಬಹುದು, ಲಾಕ್‌ಡೌನ್ ಅಲ್ಲ ಹೀಗೆಂದು ಹೇಳಿಕೊಂಡ ವಲಸೆ ಕಾರ್ಮಿಕರೆಲ್ಲ ಅವರವರ ಊರುಗಳಿಗೆ ಮರಳಲು ರೈಲ್ವೆ ಸ್ಟೇಷನ್‌ಗಳತ್ತ ಓಡುತ್ತಿದ್ದಾರೆ.
ಯುಪಿ, ಬಿಹಾರ್ ಮೊದಲಾದೆಡೆ ತೆರಳುವ ರೈಲುಗಳನ್ನಂತೂ ಕೇಳುವುದೇ ಬೇಡ. ಪ್ರಯಾಣಿಕರ ನೂಕುನುಗ್ಗಲನ್ನು ಕಂಡು ಮುಂಬೈಯ6ಸ್ಟೇಷನ್ನುಗಳಲ್ಲಿ ಪ್ಲಾಟ್ ಫಾರಂ ಟಿಕೆಟ್ ಮಾರಾಟವನ್ನೇ ನಿಲ್ಲಿಸಿದ್ದಾರೆ. ಇವುಗಳೆಂದರೆ ಲೋಕಮಾನ್ಯ ತಿಲಕ್ ಟರ್ಮಿನಸ್, ಕಲ್ಯಾಣ್, ಥಾಣೆ, ದಾದರ್, ಪನ್ವೇಲ್ ಮತ್ತು ಸಿಎಸ್‌ಎಂಟಿ (ವಿಟಿ). ಲಾಕ್‌ಡೌನ್ ಭಯದಲ್ಲಿ ಮತ್ತೊಮ್ಮೆ ವಲಸೆಕಾರ್ಮಿಕರು ಪಲಾಯನ ಆರಂಭಿಸಿದ್ದರಿಂದ ಹೊರ ರಾಜ್ಯಗಳಿಗೆ ಹೋಗುವ ರೈಲ್ವೆ ಸ್ಟೇಷನ್‌ಗಳಲ್ಲಿ ಭಾರೀ ನೂಕುನುಗ್ಗಲು ದೃಶ್ಯ ಆರಂಭ ವಾಗಿದೆ. ಇವರೆಲ್ಲ ಮತ್ತೆ ತಮ್ಮ ಊರಿನತ್ತ ಮುಖಮಾಡಿದ್ದಾರೆ.
ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್ ಸ್ಟೇಷನ್‌ನಲ್ಲಿ ಉತ್ತರ ಪ್ರದೇಶಕ್ಕೆ ತೆರಳುವ ಟ್ರೈನ್‌ನ ಜನರಲ್ ಬೋಗಿಯಲ್ಲಿಕಾಲಿಡಲೂ ಜಾಗವಿಲ್ಲ. ಒಬ್ಬರ ಮೇಲೊಬ್ಬರು ಬಿದ್ದುಕೊಂಡಿದ್ದಾರೆಯೋ ಎನ್ನುವಂಥ ದೃಶ್ಯ. ಪ್ರಯಾಣಿಕರಲ್ಲಿ ಕೇಳಿದರೆ – ಕಳೆದ ಸಲದಂತೆ ಇಲ್ಲಿಂದ ಯುಪಿ ತನಕ, ಬಿಹಾರ ತನಕ ರಸ್ತೆಗಳಲ್ಲಿ ವಾರಗಟ್ಟಲೆ ನಡೆದುಹೋಗುವ ಬದಲು ರೈಲೊಳಗೆ ಎರಡು ದಿನದಲ್ಲಿ 30-35 ಗಂಟೆಗಳ ಕಾಲ ನಿಂತುಕೊಂಡು ಪ್ರಯಾಣ ಮಾಡಿದರೂ ಅದೇ ಒಳಿತು ಎನ್ನುತ್ತಾರೆ.
ಸರಿಯಾಗಿ ನಿಂತುಕೊಳ್ಳಲೂ ಆಗದಷ್ಟು ಒಳಗಡೆ ಕಿಕ್ಕಿರಿದ ಪ್ರಯಾಣಿಕರಿಂದಾಗಿ ಅಂತರ ಕಾಪಾಡಿಕೊಳ್ಳುವ ಮಾತು ಎಲ್ಲಿದೆ? ಊರಿಗೆ ಹೋದ ನಂತರ ಕರೋನಾ ಭಯ ಮತ್ತಷ್ಟು ಹೆಚ್ಚಾಗುವುದನ್ನೂ ನಿರಾಕರಿಸುವಂತಿಲ್ಲ. ಮುಂಬೈಯಲ್ಲಿ ಹೊರ ರಾಜ್ಯಗಳ ಹೆಚ್ಚಿನ ಜನರು ಮುಂಬೈಯಲ್ಲಿ ನೌಕರಿಯನ್ನು ಇದೀಗ ಮತ್ತೆ ಕಳಕೊಂಡವರಿzರೆ. ಲಾಕ್ ಡೌನ್ ವದಂತಿಯನ್ನುಗಮನಿಸಿ ನಮಗೆ ಕೆಲಸಗಳು ಸಿಗುತ್ತಿಲ್ಲ . ಇಲ್ಲಿದ್ದು ಏನು ಪ್ರಯೋಜನ? ಹಾಗಾಗಿ ನಾವೆಲ್ಲ ನಮ್ಮೂರಿಗೆ ವಾಪಸ್ ಹೊರಡು ತ್ತಿದ್ದೇವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಭಿವಂಡಿಯಂಥ ವಿದ್ಯುತ್ ಮಗ್ಗಗಳ ಕಾರ್ಖಾನೆಗಳ ಕೆಲಸಗಾರರು ಮತ್ತೆ ಊರಿನತ್ತ ಮುಖಮಾಡಿದ್ದಾರೆ. ಅನೇಕ ವಲಸೆ ಕಾರ್ಮಿಕರು ಈ ವರ್ಷದ ಜನವರಿಯಿಂದ ಮುಂಬೈ ನಗರ ಮತ್ತೆ ಮೊದಲಿನ ಸ್ಥಿತಿಗೆ ಬರಬಹುದು ಎನ್ನುವ ಆಶಾಭಾವನೆ ಇರಿಸಿ ಮುಂಬೈಗೆ ಮರಳಿ ಬಂದಿದ್ದರು. -ಬ್ರವರಿ ನಂತರ ಲೋಕಲ್ ರೈಲಲ್ಲೂ ಸಾರ್ವಜನಿಕರಿಗೆ ಸಮಯ ಮಿತಿಯ ಪ್ರವೇಶ ದೊರಕಿದನಂತರ ಉಸಿರು ಬಿಡುವಂತಾಗಿತ್ತು. ಅಂತೂ ಇಂತೂ ಮುಂಬೈಯಲ್ಲಿ ಮತ್ತೆ ದಿನದೂಡಬಹುದು ಎಂದರೆ, ಮಾರ್ಚ್ ತಿಂಗಳು ಬರುತ್ತಲೇ ಬದುಕು ಕಷ್ಟವಿದೆ ಎಂದು ತಿಳಿಯಿತು. ಅನೇಕ ಕಂಪನಿಗಳು ಮತ್ತೆ ಒಂದೊಂದೇ ಬಾಗಿಲು ಹಾಕುವ ಸಿದ್ಧತೆಯಲ್ಲಿರು ವುದು ವರದಿಯಾಯ್ತು.
ಏಪ್ರಿಲ್ ಆರಂಭವಾಗುತ್ತಲೇ ಲಾಕ್‌ಡೌನ್ ಭೀತಿ, ರಾತ್ರಿಕರ್ಫ್ಯೂಕಾರಣ ನಮ್ಮವರ ಹೊಟೇಲ್ ಇಂಡಸ್ಟ್ರಿಗೂ ಬಹುದೊಡ್ಡ ಹೊಡೆತ ಬಿದ್ದಿತು. ವೀಡಿಯೋ, ವಾಟ್ಸಪ್ ಗಳಲ್ಲೂ ಸರಕಾರದ ನಿರ್ಧಾರ ದಿಂದ ಆಗಿರುವ ತೊಂದರೆಗಳನ್ನು ಹೊಟೇಲ್ ಇಂಡಸ್ಟ್ರಿ ಯವರು ಮಾಧ್ಯಮಗಳಿಗೂ ಹೇಳಿಕೊಂಡರು. ಹೊಟೇಲ್ ಇಂಡಸ್ಟ್ರಿಯಲ್ಲಿ ಕರಾವಳಿ ಜಿಯವರ ಹಿಡಿತ ಇದ್ದರೂ ಇಂದು ಅವರೆಲ್ಲರು ಸಂಕಷ್ಟದಲ್ಲಿದ್ದಾರೆ. ಮಾರ್ಚ್ ಒಳಗೆ ಲೈಸನ್ಸ್ ನವೀಕರಣದ ಎಲ್ಲ ಫೀಸ್ ಕಟ್ಟಿದ ನಂತರವೂ ಏಪ್ರಿಲ್‌ನಲ್ಲಿ ಲಾಕ್‌ಡೌನ್ , ನೈಟ್ಕರ್ಫ್ಯೂಅವರನ್ನು ಬೆಚ್ಚಿಬೀಳಿಸಿದೆ. ಈ ನಡುವೆ ಉತ್ತರಪ್ರದೇಶದ ಪಂಚಾಯ್ತಿ ಚುನಾವಣೆಯೂ ಮುಂಬೈ ಜನರನ್ನು ಅವರವರ ಊರಿಗೆ ಹೋಗಲು ಪ್ರಚೋದನೆ ನೀಡಿರಬಹುದು ಎಂಬ ಮಾತೂ ಕೇಳಿ ಬಂದಿದೆ.
ರೈಲ್ವೆ ಬೋರ್ಡ್ ಚೇರ್‌ಮೆನ್ ಸುನೀತ್ ಶರ್ಮಾ ಹೇಳಿದ್ದಾರೆ – ವದಂತಿಗಳಿಗೆ ಕಿವಿ ಕೊಡಬೇಡಿ. ರೈಲು ಸೇವೆಗಳನ್ನು ನಿಲ್ಲಿಸೊಲ್ಲ. ವಿಶೇಷ ರೈಲುಗಳನ್ನೂ ಚಲಾಯಿಸುತ್ತೇವೆ. ದಯವಿಟ್ಟು ಪ್ರಯಾಣಿಕರು ಗೊಂದಲ ಮಾಡಿ ರೈಲ್ವೆ ಸ್ಟೇಷನ್‌ಗಳಿಗೆ ಓಡಬೇಡಿ. ಕೋವಿಡ್ ನಿಯಮಗಳನ್ನು ಪಾಲಿಸಲು ಪ್ರಯತ್ನಿಸಿ. ಟ್ರೈನ್ ಹೊರಡುವ ಒಂದೂವರೆ ಗಂಟೆ ಮೊದಲೇ ಸ್ಟೇಷನ್‌ಗೆ ಬನ್ನಿ.ಟಿಕೆಟ್ ಇದ್ದವರಿಗೆ ಮಾತ್ರ ಪ್ರವೇಶ. ಕೋವಿಡ್ ನಿಯಮಗಳನ್ನು ಗಮನದಲ್ಲಿರಿಸಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದಿದ್ದಾರೆ.
ಕರೋನಾ ಎರಡನೇ ಅಲೆಯ ಈ ದಿನಗಳಲ್ಲಿ ಮುಂಬೈ, ನಾಗ್ಪುರಗಳಂಥ ನಗರಗಳಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯದಿಂದ ಬೆಂಕಿ ಅವಘಡ ಸಂಭವಿಸಿ ಹಲವು ರೋಗಿಗಳು ಸಾವನ್ನಪ್ಪಿದ ದೃಶ್ಯಗಳೂ ಇವೆ. ಇಂಥ ಘಟನೆಗಳೆಲ್ಲ ನಡೆದಾಗ ಆಡಳಿತದ ನಿರ್ಲಕ್ಷ್ಯಕ್ಕೆ ಸಿಟ್ಟೂ ಬರುತ್ತದೆ. ಸರಕಾರ ಕ್ಷಮೆ ಕೇಳಿ, ಪರಿಹಾರ ನೀಡುವ ಘೋಷಣೆ ಮೂಲಕ ಕುಟುಂಬವನ್ನು ಸುಮ್ಮನಾಗಿಸುತ್ತದೆ.
ಪ್ರಧಾನಿ ಮೋದಿಯವರು ಏಪ್ರಿಲ್ 11 ರಿಂದ 14ರ ತನಕ ಲಸಿಕೆ ಉತ್ಸವ ಎಂದು ಘೋಷಿಸಿದರೆ, ಇತ್ತ ಮಹಾರಾಷ್ಟ್ರ ಸಹಿತ ಕೆಲವು ರಾಜ್ಯಗಳಲ್ಲಿ ಲಸಿಕೆಯ ಸ್ಟಾಕ್ ತೀವ್ರಗತಿಯಲ್ಲಿ ಸಮಾಪ್ತಿ ಆಗುತ್ತಿದೆ. ಮುಂಬಯಿ ಸಹಿತ ಅನೇಕ ಕಡೆ ಲಸಿಕಾ ಕೇಂದ್ರಗಳಿಗೆ ಬಾಗಿಲು ಹಾಕಲಾಗುತ್ತಿದೆ. ಹಾಗಿದ್ದೂ ಕೇಂದ್ರ ಆರೋಗ್ಯ ಮಂತ್ರಿ ವ್ಯಾಕ್ಸಿನ್ ಪೂರೈಕೆಯ ಭರವಸೆಯನ್ನೂ ನೀಡುತ್ತಿದ್ದಾರೆ.
ಕೇಂದ್ರ ಸರಕಾರ ವ್ಯಾಕ್ಸಿನ್ ವಿಷಯದಲ್ಲಿ ರಾಜ್ಯಗಳಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿವೆ ಎಂದು ಮಹಾರಾಷ್ಟ್ರ ಮಂತ್ರಿಗಳು ಆರೋಪ ಮಾಡಿದ್ದಾರೆ. ಇದು ತನಿಖೆಗೆ ಬಿಟ್ಟ ಸಂಗತಿ. ಇಂಥ ಹಲವಾರು ದೃಶ್ಯಗಳ ನಡುವೆ ಮಹಾರಾಷ್ಟ್ರದ ಕರೋನಾ ಪಾಸಿಟಿವ್ ಸಂಖ್ಯೆ ವಿಶ್ವದ ಗಮನ ಸೆಳೆದಿದೆ. ಈ ಸಲವೂ ಮಹಾರಾಷ್ಟ್ರವೇ ಕರೋನಾ ಹಾಟ್ ಸ್ಪಾಟ್ ಆಗಿದೆ. ಅದರ ಎರಡನೆಯ ಅಲೆಗೆ ಸಿಕ್ಕಿ ಇಂದು ನಾವು ಪೂರ್ಣ ಲಾಕ್‌ಡೌನ್ ಸ್ಥಿತಿಯ ಅಂಚಿಗೆ ಬಂದು ನಿಂತಿದ್ದೇವೆ.
ಕಳೆದ ಮೂರು ವಾರಗಳಲ್ಲಿ ಕರೋನಾ ಪ್ರಕರಣಗಳಲ್ಲಿ 276 ಪ್ರತಿಶತ ಮತ್ತು ಸಾವಿನಲ್ಲಿ 281 ಪ್ರತಿಶತ ಪ್ರಕರಣಗಳು ವೃದ್ಧಿ ಯಾಗಿವೆ. ಇಂಥ ಸಂದರ್ಭದಲ್ಲಿ ಅರ್ಥವ್ಯವಸ್ಥೆಯನ್ನು ಉಳಿಸಿಕೊಳ್ಳುವುದು ಬಹಳ ಕಠಿಣ ಸಂಗತಿ. ಕರೋನಾದ ಮೊದಲ ಅಲೆಯಲ್ಲಿ ಅರ್ಥಾತ್ ಏಪ್ರಿಲ್‌ನಿಂದ ಜೂನ್ 2020ರ ತನಕ ದೇಶದಲ್ಲಿ ವಿಕಾಸ ದರ 23.9 ಪ್ರತಿಶತ ಕೆಳಗಿಳಿದಿತ್ತು. ನಾವು ಮತ್ತೆ ಅದೇ ರಸ್ತೆಯಲ್ಲಿ ಇದ್ದೇವೆಯೇ? ಅಂದರೆ – ಅರ್ಥಶಾಸ್ತ್ರಜ್ಞರ ಪ್ರಕಾರ ಹಾಗೇನೂ ಇಲ್ಲ!
ಇದಕ್ಕೆ ಕಾರಣ ಇಲ್ಲಿನ ಮಧ್ಯಮವರ್ಗದ ಜನರು. ಈ ಮಧ್ಯಮ ವರ್ಗದ ಜನರೇ ಸರಕಾರದ ‘ಸೊಂಟ’ ಮುರಿಯುವುದನ್ನುಪಾರಾಗಿಸುತ್ತಾರಂತೆ. ಇಂದು ಕರೋನಾ ಸಕ್ರಿಯ ರೋಗಿಗಳ ಪ್ರಕರಣದಲ್ಲಿ ಮಹಾರಾಷ್ಟ್ರ ವಿಶ್ವದಲ್ಲಿ ಏಳನೇ ಸ್ಥಾನದಲ್ಲಿದೆ. ಯಾಕೆಂದರೆ ಸಕ್ರಿಯ ಕರೋನಾ ಸಂಖ್ಯೆ ಐದೂವರೆ ಲಕ್ಷವನ್ನು ಸಮೀಪಿಸಿದೆ. ಮುಂಬೈಯಲ್ಲಂತೂ ಪ್ರತಿ ದಿನ 9-10ಸಾವಿರ ಪಾಸಿಟಿವ್ ಕೇಸುಗಳು ಸಿಗಲಾರಂಭಿಸಿವೆ.
ಪ್ರಮುಖ ಮಾರುಕಟ್ಟೆಗಳಲ್ಲಿ ಶುಕ್ರವಾರದ ತನಕ ಕಿಕ್ಕಿರಿದು ಜನ ಓಡಾಡುತ್ತಿದ್ದರು. ಹೊರಗಡೆ ಎಷ್ಟೇ ಪೊಲೀಸರಿದ್ದರೂಮಾರ್ಕೆಟ್ ಒಳಗಡೆ ಜನಸಂದಣಿ ಇದ್ದೇ ಇರುತ್ತದೆ. ಬಾಕಿ ದಿನಗಳಲ್ಲಿ ಲೋಕಲ್ ರೈಲುಗಳಲ್ಲಿ ಯಾವ ರೀತಿಯ ಅಂತರ ಕಾಪಾಡಲು ಸಾಧ್ಯ? ತಜ್ಞರೇ ಉತ್ತರಿಸಬೇಕು. ಇಂದು ಮಹಾರಾಷ್ಟ್ರ ಸರಕಾರಕ್ಕೆ ಒಂದೆಡೆ ಕೋವಿಡ್ 19ಸೋಂಕುರೋಗದ ನಿಯಂತ್ರಣ ಹೇಗೆ ಮಾಡುವುದು ಎಂಬ ಚಿಂತೆ, ಇನ್ನೊಂದೆಡೆ ಮಂತ್ರಿಗಳ ಮತ್ತು ಪೊಲೀಸರ ವಿರುದ್ಧದ ಸಿಬಿಐ ತನಿಖೆಯ ಕಿರಿಕಿರಿ. ಅಂತೂ ಮುಂಬೈ ಜನತೆಗೆ ಈ ವರ್ಷವೂ ಯುಗಾದಿ ಹಬ್ಬದ ಖುಷಿ ಸಿಗುವಂತಿಲ್ಲ.