ಬಿಜೆಪಿಯಲ್ಲಿ ಮತ್ತೆ ಶುರುವಾಯಿತು ತೋಳ ಬಂತು ತೋಳ ಕತೆ
ಮೂರ್ತಿಪೂಜೆ
ಆರ್‌.ಟಿ.ವಿಠ್ಠಲಮೂರ್ತಿ
ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಲಾಗುತ್ತದೆ ಎಂಬ ಮಾತು ಪುನಃ ಮುನ್ನೆಲೆಗೆ ಬಂದಿದೆ. ಬಿಜೆಪಿಯ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲರು ಆಡಿದ ಒಂದು ಮಾತು ಇದಕ್ಕೆ ಕಾರಣ.
ಮೇ ಎರಡರ ನಂತರ ಪಕ್ಷದ ವರಿಷ್ಠರು ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ. ಈ ವಿಷಯದಲ್ಲಿ ಅನುಮಾನವೇ ಬೇಡ ಎಂಬುದು ಬಸನಗೌಡ ಪಾಟೀಲರ ಮಾತು. ಆದರೆ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸುವ ಮಾತು ತೋಳ ಬಂತು ತೋಳ ಕತೆಯಂತಾಗಿರುವುದರಿಂದ ಬಸನಗೌಡ ಪಾಟೀಲರ ಮಾತುಗಳನ್ನು ಅನುಮಾನದಿಂದ ನೋಡುವವರ ಸಂಖ್ಯೆ ಹೆಚ್ಚು. ಇಷ್ಟಾದರೂ ಒಂದು ವಿಷಯದ ಬಗ್ಗೆ ಬಿಜೆಪಿಯ ಒಳವಲಯಗಳಲ್ಲಿ ಗಂಭೀರ ಸ್ವರೂಪದ ಚರ್ಚೆ ನಡೆಯುತ್ತಿದೆ.
ಅದೆಂದರೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಆಗುವ ಪರಿಣಾಮವೇನು ಎಂಬುದು. ಈ ಮುನ್ನ ಯಡಿಯೂರಪ್ಪ ಅವರ ಪದಚ್ಯುತಿಯ ಮಾತು ಕೇಳಿ ಬಂದಾಗಲೆಲ್ಲ, ಲಿಂಗಾಯತ ಮತ ಬ್ಯಾಂಕ್ ಬಿಜೆಪಿಯಿಂದ ದೂರವಾಗಲಿದೆ ಎಂಬ ಎಚ್ಚರಿಕೆಯಮಾತುಗಳು ಕೇಳಿ ಬರುತ್ತಿದ್ದವು. ಅಷ್ಟೇ ಅಲ್ಲ, ಅದನ್ನು ಪುಷ್ಟೀಕರಿಸುವಂತೆ 1990ರಲ್ಲಿ ವೀರೇಂದ್ರ ಪಾಟೀಲರನ್ನು ಸಿಎಂ ಹುದ್ದೆಯಿಂದ ಪದಚ್ಯುತಗೊಳಿಸಿ ಕಾಂಗ್ರೆಸ್ ಏನು ಅನುಭವಿಸಿತೋ? ಅದನ್ನೇ ಬಿಜೆಪಿ ಅನುಭವಿಸಲಿದೆ ಎಂಬ ಮಾತು ಕೇಳಿ ಬರುತ್ತಿತ್ತು.
ಆದರೆ ಈಗ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಆಗುವ ಪರಿಣಾಮಗಳ ಬಗ್ಗೆ ಬಿಜೆಪಿಯ ವರಿಷ್ಠರು ತಮ್ಮದೇ ಮೂಲ ಗಳಿಂದ ಮಾಹಿತಿ ಪಡೆಯುತ್ತಿzರೆ. ಈ ದಿಸೆಯಲ್ಲಿ ಅವರಿಗೆ ತಲುಪುತ್ತಿರುವ ಮಾಹಿತಿಗಳೂ ಕುತೂಹಲಕಾರಿಯಾಗಿವೆ. ಅಂದ ಹಾಗೆ ರಾಜ್ಯದ ಪ್ರಬಲ ಲಿಂಗಾಯತ ವರ್ಗ ಇದುವರೆಗೆ ನಾಲ್ಕು ಬಾರಿ ತನ್ನ ನಡೆಯನ್ನು ಬದಲಿಸಿದೆ. ಮತ್ತು ಆ ಮೂಲಕ ರಾಜ್ಯ ರಾಜಕಾರಣದ ಚಿತ್ರವನ್ನು ಬದಲಿಸಿದೆ. ಮೊದಲ ಬಾರಿ ಅದು ಕಾಂಗ್ರೆಸ್ ನ ಮಹಾ ವಿಭಜನೆಯ ಸಂದರ್ಭದಲ್ಲಿ ನಡೆ ಬದಲಿಸಿತು.
ಅವತ್ತು ಎಐಸಿಸಿ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪ ಅವರು ಇಂದಿರಾಗಾಂಧಿ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದರಲ್ಲ? ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ವಿಭಜನೆ ಆಯಿತು. ಅದರ ಪರಿಣಾಮವಾಗಿ ಇಲ್ಲಿ ಅಧಿಕಾರ ಹಿಡಿದಿದ್ದ ವೀರೇಂದ್ರ ಪಾಟೀಲರ ಸರಕಾರ ಕುಸಿದು ಬಿತ್ತು. ಈ ಬೆಳವಣಿಗೆಯಿಂದ ಕ್ರುದ್ಧಗೊಂಡ ಲಿಂಗಾಯತ ಸಮುದಾಯ ಕಾಂಗ್ರೆಸ್ನೆಲೆಯಿಂದ ದೂರ ಸರಿಯಿತು.
ಹೀಗೆ ಅದು ನಡೆ ಬದಲಿಸಿದ್ದರಿಂದ ಇಲ್ಲಿ ಜನತಾ ಪಕ್ಷ ಪ್ರಬಲವಾಗಿ ಬೆಳೆಯಿತು. ಹೀಗೆ ಪ್ರಬಲವಾದ ಜನತಾ ಪಕ್ಷ ತಕ್ಷಣವೇ ಅಧಿಕಾರ ಹಿಡಿಯಲಾಗದಿದ್ದರೂ ಕ್ರಾಂತಿರಂಗದ ಜತೆ ಕೈ ಜೋಡಿಸಿ 1983ರಲ್ಲಿ ಕರ್ನಾಟಕದ ಅಧಿಕಾರ ಸೂತ್ರವನ್ನು ಹಿಡಿಯಿತು. ಮುಂದೆ ಲಿಂಗಾಯತ ಸಮುದಾಯದ ಮತಗಳು ವೀರೇಂದ್ರ ಪಾಟೀಲರಿಂದಾಗಿ ಕಾಂಗ್ರೆಸ್ ಕಡೆ ಹೋದರೂ ಅದು ಕೈ ಪಾಳೆಯದ ಬಗೆಗಿನ ನಂಬಿಕೆಯಿಂದಲ್ಲ, ಬದಲಿಗೆ ಸನ್ನಿವೇಶದ ಅನಿವಾರ್ಯತೆಯಿಂದ. ಯಾಕೆಂದರೆ 1989ರ ಹೊತ್ತಿಗಾಗಲೇ ಜನತಾದಳ ತನ್ನ ಬಿಕ್ಕಟ್ಟಿನ ಹೊಡೆತ ತಾಳಲಾರದೆ ಇಬ್ಬಾಗವಾಗಿತ್ತು.
ಹೆಗಡೆ ಹಾಗೂ ದೇವೇಗೌಡರು ಪ್ರತ್ಯೇಕ ನೆಲೆಗಳಲ್ಲಿ ನಿಂತಿರುವುದರಿಂದ ಜನತಾದಳ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮುನ್ನೆಚ್ಚರಿಕೆ ಯಿಂದ ಅದು ಕಾಂಗ್ರೆಸ್ ಕಡೆ ನೋಡಿತ್ತು. ಈ ಸಂದರ್ಭಕ್ಕೆ ಸರಿಯಾಗಿ ಲಿಂಗಾಯತ ಸಮುದಾಯದವರೇ ಆದ ವೀರೇಂದ್ರ ಪಾಟೀಲರನ್ನು ತನ್ನ ಮುಂದಿಟ್ಟುಕೊಂಡಿದ್ದರಿಂದ ಕಾಂಗ್ರೆಸ್‌ಗೆ ಲಾಭವಾಯಿತು. ಆದರೆ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರಕಾರದ ಮುಂಚೂಣಿಯಲ್ಲಿ ವೀರೇಂದ್ರ ಪಾಟೀಲರು ಬಹುಕಾಲ ಉಳಿಯಲಿಲ್ಲ.
1990ರಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾದಾಗ ಕಾಂಗ್ರೆಸ್ ವರಿಷ್ಠ ರಾಜೀವ್ಗಾಂಽಬೆಂಗಳೂರಿಗೆ ಬಂದರು. ವಿಮಾನ ನಿಲ್ದಾಣ ದಲ್ಲಿಯೇ ನಿಂತು ‘ಕಾಂಗ್ರೆಸ್ ಪಕ್ಷ ತನ್ನ ಹೊಸ ಶಾಸಕಾಂಗ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿದೆ’ ಎಂದು ಘೋಷಿಸಿಯೂ ಬಿಟ್ಟರು. ಆದರೆ ತಮ್ಮನ್ನು ತಕ್ಷಣ ಇಳಿಸದಿರುವಂತೆ ವೀರೇಂದ್ರ ಪಾಟೀಲರು ಮನವಿ ಮಾಡಿಕೊಂಡರೂ ರಾಜೀವ್ ಗಾಂಧಿ ಒಪ್ಪಲಿಲ್ಲ. ಈ ಹಂತದಲ್ಲಿ ರಾಮನಗರ, ಚನ್ನಪಟ್ಟಣ,  ದಾವಣಗೆರೆ, ಮೊಳಕಾಲ್ಮೂರು ಸೇರಿದಂತೆ ಹಲವು ಕಡೆ ಕೋಮು ಗಲಭೆಗಳಾದವಲ್ಲ? ಅದನ್ನೇ ಮುಂದಿಟ್ಟುಕೊಂಡು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕಾರಣ ನೀಡಿ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಲಾಯಿತು.
ಈ ಬೆಳವಣಿಯಿಂದ ಕ್ರುದ್ದರಾದ ಲಿಂಗಾಯತರು ಕಾಂಗ್ರೆಸ್ ವಿರುದ್ದ ತಿರುಗಿ ಬಿದ್ದರು. ಅವತ್ತು ಅದರ ಲಾಭ ಪಡೆದಿದ್ದು ಜನತಾದಳ. 1994 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಽಕಾರ ಹಿಡಿಯುವುದರಲ್ಲಿ ಲಿಂಗಾಯತರ ಪಾಲೂಮಹತ್ವzಗಿತ್ತು. ಆದರೆ ಹೀಗೆ ಜನತಾಪರಿವಾರಕ್ಕೆ ಮರಳಿದ ಲಿಂಗಾಯತ ಸಮುದಾಯ ಅಲ್ಲೂ ಬಹುಕಾಲ ನಿಲ್ಲಲಿಲ್ಲ. ಇದಕ್ಕೆ ಮುಖ್ಯ ಕಾರಣ, ರಾಮಕೃಷ್ಣ ಹೆಗಡೆ ಅವರ ಉಚ್ಚಾಟನೆ ಎಪಿಸೋಡು.
1994ರಲ್ಲಿ ಮುಖ್ಯಮಂತ್ರಿಯಾದ ದೇವೇಗೌಡರು ತೊಂಭತ್ತಾರರ ಲೋಕಸಭಾ ಚುನಾವಣೆಯ ನಂತರ ಈ ದೇಶದ ಪ್ರಧಾನಿ ಯಾದರು. ಹೀಗೆ ಪ್ರಧಾನಿಯಾದ ಸಂದರ್ಭದಲ್ಲಿ ಹೆಗಡೆ ಅವರು ತಮ್ಮನ್ನು ಮೂದಲಿಸಿದ ಬೆಳವಣಿಯಿಂದ ಕ್ರುದ್ದರಾದ ದೇವೇಗೌಡರು ತಮ್ಮ ಶಕ್ತಿ ಬಳಸಿ ಹೆಗಡೆ ಅವರು ಜನತಾದಳದಿಂದ ಉಚ್ಚಾಟನೆ ಯಾಗುವಂತೆ ನೋಡಿಕೊಂಡರು. ಈ ಬೆಳವಣಿಗೆ ಯಿಂದ ಕೆರಳಿದ ಹೆಗಡೆ ಅವರು ಲೋಕಶಕ್ತಿ ಪಕ್ಷವನ್ನು ಕಟ್ಟಿ ಬಿಜೆಪಿಯ ಜತೆ ಕೈ ಜೋಡಿಸಿದರು. ಕರ್ನಾಟಕದ ಇತಿಹಾಸದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ತಲೆ ಎತ್ತಿದ್ದೇ ಆಗ.
ಅರ್ಥಾತ್,  ಹೆಗಡೆಯವರ ಜತೆ ನಿಂತ ಲಿಂಗಾಯತ ಶಕ್ತಿ ಬಿಜೆಪಿಗೂ ಬಲ ನೀಡಿತು. ಕಾಂಗ್ರೆಸ್ ಹಾಗೂ ಜನತಾದಳಕ್ಕಿಂತ ದೊಡ್ಡಶಕ್ತಿಯಾಗಿ ಬೆಳೆದು ನಿಲ್ಲುವಂತೆ ನೋಡಿಕೊಂಡಿತು. ಮುಂದೆ ಬಿಜೆಪಿಯ ಬಲ ಗಣನೀಯ ಮಟ್ಟದಲ್ಲಿ ಉಳಿದಿದ್ದಷ್ಟೇ ಅಲ್ಲ, ೨೦೦೪ರ ವಿಧಾನಸಭಾ ಚುನಾವಣೆಯಲ್ಲಿ ಎಪ್ಪತ್ತೊಂಭತ್ತು ಸೀಟುಗಳೊಂದಿಗೆ ಅತ್ಯಂತ ದೊಡ್ಡ ಶಕ್ತಿಯಾಗಿ ನಿಲ್ಲುವಂತೆ ಮಾಡಿತು. ಅದರ ಕಣ್ಣ ಮುಂದೆ ಯಡಿಯೂರಪ್ಪ ಕಂಡ ಮೇಲಂತೂ ಲಿಂಗಾಯತ ವರ್ಗ ಅಲ್ಲೇ ಸೆಟ್ಲ್ ಆಯಿತು.
ಇದುವರೆಗೂ ಆ ಶಕ್ತಿ ಬಿಜೆಪಿಯ ಜತೆಗೇ ಇದೆ. ಹೀಗಿರುವಾಗ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದರೆ ಇತಿಹಾಸ ಪುನರಾವರ್ತನೆ ಆಗುವುದಿಲ್ಲವೇ? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ವರಿಷ್ಠರು ಹಲ ನಾಯಕರೊಂದಿಗೆ ಚರ್ಚೆ ನಡೆಸುತ್ತಲೇ ಇದ್ದಾರೆ. ತೀರಾ ಇತ್ತೀಚಿನವರೆಗೂ ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ವರಿಷ್ಠರು ಆಂತರಿಕ ಸರ್ವೆ ಮಾಡಿದರೆ, ಗೊಂದಲದ ಉತ್ತರ ಬರುತ್ತಿತ್ತು.
ಆದರೆ ಈಗ ಹಲವರು ಯಡಿಯೂರಪ್ಪ ಅವರೀಗ ಲಿಂಗಾಯತರ ಐಕಾನ್ ಅಲ್ಲ. ಅಲ್ಲೀಗ ಒಳಪಂಗಡಗಳು ಮೇಲೆದ್ದು ನಿಂತಿವೆ.ನಾಯಕತ್ವಕ್ಕಾಗಿ ಹವಣಿಸುತ್ತಿವೆ ಎನ್ನುತ್ತಿದ್ದಾರೆ. ಅದೇ ರೀತಿ, ನಿಜಲಿಂಗಪ್ಪ, ಹೆಗಡೆ, ವೀರೇಂದ್ರ ಪಾಟೀಲ್ ವಂಶಪಾರಂಪರ್ಯ ರಾಜಕಾರಣಕ್ಕೆ ಬೆಂಬಲ ನೀಡುತ್ತಿರಲಿಲ್ಲ. ಅದರೆ ಯಡಿಯೂರಪ್ಪ ಅದನ್ನೇ ಮಾಡುತ್ತಿದ್ದಾರೆ. ಹೀಗಾಗಿ ಅವರ ನಾಯಕತ್ವದ ವಿಷಯದಲ್ಲಿ ಈಗ ಲಿಂಗಾಯತರ ಧ್ವನಿ ಏಕವಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಬಸನಗೌಡ ಪಾಟೀಲ್ ಯತ್ನಾಳರ ಮಾತು ಮೇ ಎರಡರ ನಂತರ ನಿಜವಾದರೂ ಅಚ್ಚರಿ ಇಲ್ಲ ಎಂದು ಕೆಲವರಾದರೂ ನಂಬುತ್ತಿದ್ದಾರೆ.
ಅಷ್ಟೇ ಅಲ್ಲ, ಯಡಿಯೂರಪ್ಪ ಅವರು ತೆರವು ಮಾಡುವ ಜಾಗಕ್ಕೆ ಹಾಲಿ ಉಪಮುಖ್ಯಮಂತ್ರಿ ಡಾ.ಅಶ್ವಥ್ಥನಾರಾಯಣಅವರಿಂದ ಹಿಡಿದು ಅರವಿಂದ ಬೆಲ್ಲದ್ ಅವರ ತನಕ ಯಾರು ಬೇಕಾದರೂ ಬಂದು ಕೂರಬಹುದು ಎನ್ನತೊಡಗಿದ್ದಾರೆ.ಇದು ನಿಜವಾಗುತ್ತದೋ?ತೋಳ ಬಂತು ತೋಳ ಕತೆಯ ಪುನರಾವರ್ತನೆ ಆಗುತ್ತದೋ ಗೊತ್ತಿಲ್ಲ. ಅದರೆ ಒಟ್ಟಿನಲ್ಲಿನಾಯಕತ್ವ ಬದಲಾವಣೆಯ ಕೂಗು ಮತ್ತೊಂದು ಸುತ್ತಿನ ಚರ್ಚೆಯನ್ನಂತೂ ಹುಟ್ಟು ಹಾಕಿದೆ. ಅದೇ ಸದ್ಯದ ವಿಶೇಷ.