ಪ್ರೀತಿಯೇ ದೊಡ್ಡ ಕೌನ್ಸೆಲಿಂಗ್‌
ದಾಸ್ ಕ್ಯಾಪಿಟಲ್‌
ಟಿ.ದೇವಿದಾಸ್, ಬರಹಗಾರ, ಶಿಕ್ಷಕ
ತನ್ನ ಭಾವನೆಗಳಿಗೆ ಯಾರು ಸ್ಪಂದಿಸುತ್ತಾರೋ ಅಂಥವರಲ್ಲಿ ಯಾವ ಪ್ರತಿ ಆಲೋಚನೆಯಿಲ್ಲದೆ ಕೇಳಿದ್ದಕ್ಕೆಲ್ಲ ಸ್ಪಂದಿಸಿ ಬಿಡುವ ಸ್ವಭಾವದ ಬುದ್ಧಿ ಬೌದ್ಧಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಬಲಿತಿರದ ಮಕ್ಕಳದ್ದಾಗಿರುತ್ತದೆ.
ಇದನ್ನೇ ಮುಗ್ಧತೆಯೆನ್ನುವುದು. ಮಕ್ಕಳನ್ನು ದೇವರಿಗೆ ಹೋಲಿಸುವುದು, ದೇವರಾಗಿ ಕಾಣುವುದು ಈ ಕಾರಣಕ್ಕಾಗಿ! ಮಕ್ಕಳಿಗೆ ಮೋಸ ಮಾಡುವ ಅನುಭವವಿರುವುದಿಲ್ಲ. ವಂಚಿಸುವ ಬುದ್ಧಿಯಿರುವುದಿಲ್ಲ. ಹೇಳಿದ್ದಕ್ಕಿಂತ ನೋಡಿ ಕಲಿಯುವುದೇ ಮಕ್ಕಳ ಸಹಜ ಗುಣ ಸ್ವಭಾವವಾಗಿರುತ್ತದೆ. ಆದ್ದರಿಂದ ಅವರನ್ನು ಸುಲಭವಾಗಿ ಮೋಸಕ್ಕೊಳಗಾಗಿಸಿ ಬಿಡಬಹುದು. ಮನಸನ್ನು ತಮ್ಮೆಡೆಗೆ ಒಲಿಸಿಕೊಂಡು ಬಿಡಬಹುದು.
ಮಕ್ಕಳಲ್ಲಿರುವ ಇಂಥ ಮುಗ್ಧತೆಯನ್ನೇ ದುರುಪಯೋಗಪಡಿಸಿಕೊಂಡು ದುಡ್ಡು ಮಾಡುವ ದಂಧೆಯನ್ನೇ ಕೌನ್ಸೆಲಿಂಗ್ ಎಂದು ಕರೆಯಬಹುದು. ಇದು ಸರಿಹೊತ್ತಿನ ದುರಂತ. ಸ್ವಲ್ಪವೇ ವರ್ಷಗಳ ಹಿಂದಿರುವ ಸಾಮಾಜಿಕ ಸ್ಥಿತಿಯಂತೆ ಈಗಲೂ ಹಳ್ಳಿಗಳಲ್ಲಿ ರುವ ಶಾಲೆಯ ಮಕ್ಕಳಿಗೆ ಅವರವರ ಮನೆಯೇ ಕೌನ್ಸೆಲಿಂಗ್ ಕೆಲಸ ಮಾಡುತ್ತದೆ. ಆಗೆಲ್ಲ ಶಾಲೆಗಳೇ ಕೌನ್ಸೆಲಿಂಗ್ ನಂತೆ ಕಾರ್ಯ ನಿರ್ವಹಿಸುತ್ತಿತ್ತು. ಬೇರೆ ಬೇರೆ ಮೂಲಗಳಿಂದ ಮಗುವಿನ ಕುರಿತಾಗಿ ವಿಚಾರಗಳನ್ನು ಸಂಗ್ರಹಿಸುತ್ತಿತ್ತು.
ಸಮಾಜವೂ ಒಂದು ಕುಟುಂಬದಂತಿರುವುದರಿಂದ ಎಲ್ಲರ ಮನೆಯ ಮಕ್ಕಳ ಬಗ್ಗೆ ಸಾಮೂಹಿಕ ನಡವಳಿಕೆಯ ಬಗ್ಗೆ ಹಳ್ಳಿಯ ಎಲ್ಲರಲ್ಲೂ ಒಂದು ಜವಾಬ್ದಾರಿಯಿರುತ್ತಿತ್ತು. ತಮ್ಮ ಹಳ್ಳಿಯ ಯಾರದೇ ಮನೆಯ ಮಕ್ಕಳು ನೈತಿಕವಾಗಿ ತಪ್ಪಿದರೂ ಬುದ್ಧಿವಾದ ಹೇಳುತ್ತಿದ್ದರು. ಸರಿದಾರಿಗೆ ಬರಲಿಲ್ಲವೆಂದಾಗ ನಾಕುಪೆಟ್ಟು ಬಿಟ್ಟು ಬುದ್ಧಿ ಬರುವಂತೆ ಮಾಡುತ್ತಿದ್ದರು.
ಆದಾಗ್ಯೂ ಯಾರೋ ತಮ್ಮ ಮಕ್ಕಳಿಗೆ ಹೊಡೆದರು ಅಂತ ಆ ಮಕ್ಕಳ ಪೋಷಕರು ಗಲಾಟೆಗೆ ಹೋಗುತ್ತಿರಲಿಲ್ಲ. ಪ್ರಶ್ನೆಮಾಡುವುದಿಲ್ಲವಾಗಿತ್ತು. ಅಂಥ ಒಂದು ಅಮೂರ್ತವಾದ ಒಪ್ಪಂದ ತಮ್ಮೂರಿನ ಮಕ್ಕಳ ವರ್ತನೆಯ ಒಟ್ಟೂ ನಡೆಯ ಬಗ್ಗೆಎಲ್ಲರಲ್ಲೂ ಇತ್ತು. ಆದರೆ ಈಗ ಹಾಗಲ್ಲ. ಮಕ್ಕಳಿಗಿಂತ ದೊಡ್ಡವರ ವೈಚಾರಿಕ ಮತ್ತು ಬೌದ್ಧಿಕ ನಿಲುವುಗಳು  ಬದಲಾಗಿವೆ. ಮಕ್ಕಳಿಗಿಂತ ಚೀಪಾಗಿ ದೊಡ್ಡವರ ವರ್ತನೆ ಗಳಿರುತ್ತವೆ. ತಪ್ಪು ಮಾಡಿದರೆ ಮಕ್ಕಳಿಗೆ ಬೈಯಬಾರದು.
ಹೊಡೆಯಬಾರದು. ಕಾನೂನುಗಳು ಬಂದಿವೆ. ಅವಾಚ್ಯ ಪದಗಳನ್ನು ದೊಡ್ಡವರೇ ಮಕ್ಕಳೆದುರು ಉಪಯೋಗಿಸುತ್ತಾರೆ.ಎಲ್ಲಕ್ಕಿಂತ ಮುಖ್ಯವಾಗಿ, ಮಕ್ಕಳ ಹಕ್ಕು ರಕ್ಷಣಾ ವೇದಿಕೆಯಿದೆ. ಮನುಷ್ಯರು ಏನೇ ಮಾಡಿದರೂ ದೇವರಿಗೆ ತಿಳಿಯುತ್ತದಂತೆ. ಅದೇ ರೀತಿಯಲ್ಲಿ ದೇವರಾಗಿ ಇಂದು ಶಾಲೆಗಳಲ್ಲಿ ಸಿಸಿ ಕ್ಯಾಮೆರಾಗಳು ಬಂದಿವೆ.
ಪರಿಣಾಮವಾಗಿ ಕಲಿಕೆ ಮತ್ತು ಬೋಧನೆ ಯಾಂತ್ರಿಕವಾಗಿ ಎಲ್ಲವೂ ನಿಸ್ತೇಜವಾಗುತ್ತಿದೆ. ನಿಸ್ಸಾರವಾಗುತ್ತಿದೆ. ತಪ್ಪು ಮಾಡಿದಾಗ ನೀಡಬೇಕಾದ ಯಾವ ಶಿಕ್ಷೆಯೂ ಇಲ್ಲದೆ ಮಕ್ಕಳು ಹಾಳಾಗುತ್ತಿzರೆ. ಶಾಲೆಯಲ್ಲಿ ನಾಕುಪೆಟ್ಟು ಬಿದ್ದಿದ್ದರೆ ಪೊಲೀಸ್ ಸ್ಟೇಷನ್‌ನಲ್ಲಿ ಪೆಟ್ಟು ಬೀಳೋದು ಕಡಿಮೆಯಾಗುತ್ತಿತ್ತು ಎಂಬ ಮಾತು ಸತ್ಯವನ್ನೇ ವರ್ತಮಾನವನ್ನು ಹೇಳುತ್ತದೆ. ಇರಲಿ, ಅದು ಬೇರೆಯದೇಆದ ಚರ್ಚೆಯ ವಿಚಾರ.ಈಗ ಏನೇ ಆದರೂ ಕೌನ್ಸೆಲಿಂಗ್ ಎಂಬ ದುಡ್ಡು ಮಾಡುವ ದಂಧೆಯದ್ದೇ ಮ್ಯಾನಿಯಾ!
ಈಗ ಸಮಾಜ, ಶಾಲೆ, ಮನೆ ಮಾಡಬೇಕಾದ ಕೆಲಸವನ್ನು ಈಗ ಕೌನ್ಸಿಲಿಂಗಿನ ಅಂಗಡಿಗಳು ಮಾಡುತ್ತಿವೆ. ಶಾಲೆಗಳೇ ತಮ್ಮ ವಿದ್ಯಾರ್ಥಿಗಳ ಹೆತ್ತವರಿಗೆ ಕೌನ್ಸೆಲಿಂಗ್ ಮಾಡಿಸುವಂತೆ ಸಲಹೆ ಕೊಡುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅದೊಂದನ್ನು ಮಾಡಿಸಿಬಿಟ್ಟರೆ ಮಕ್ಕಳು ಸರಿಹೋಗಿ ಬಿಡುತ್ತಾರೆಂಬ ಭಾವನೆಯನ್ನು ಶಾಲೆಗಳೇ ಬೆಳೆಸುತ್ತಿವೆ. ಕೂಡುಕುಟುಂಬದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಯಾವ ಕೌನ್ಸೆಲಿಂಗ್ ಆವಶ್ಯವಿರುವುದಿಲ್ಲ.
ಈಗ ಎಡೆ ವಿಭಕ್ತ ಕುಟುಂಬಗಳೇ ಹೆಚ್ಚಿವೆ, ಹೆಚ್ಚುತ್ತಿವೆ. ತಮಗೇ ಹುಟ್ಟಿದ ಮಕ್ಕಳನ್ನು ಒಂದು ಗಳಿಗೆ ಅವರ ಜತೆಯಲ್ಲಿ ಕೂತುಮಾತಾಡುವ ಮುದ್ದಿಸುವ ವ್ಯವಧಾನ, ಪುರುಸೊತ್ತು ಹೆತ್ತವರಿಗಿಲ್ಲವಾಗಿದೆ. ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಓಡುವುದು. ಎಲ್ಲದರಲ್ಲೂ ಧಾವಂತ ಧಾವಂತ ಧಾವಂತ. ತಪ್ಪೇನಲ್ಲ ಬಿಡಿ. ಅವರಾದರೂ ಏನು ಮಾಡಿಯಾರು? ಬೆಳಗ್ಗೆಯಾದರೂ ಸಾಕು, ಗಂಡ ಒಂದು ದಿಕ್ಕಿಗೋಡಿದರೆ, ಹೆಂಡತಿ ಇನ್ನೊಂದಿಕ್ಕಿಗೆ ಓಡುತ್ತಾಳೆ.
ಮಗ/ಮಗಳು ಮತ್ತೊಂದಿಕ್ಕಿಗೆ ಓಡುತ್ತಾರೆ. ಅವರ ಲಾಲನೆ ಪಾಲನೆ ಪೋಷಣೆಗೆ ಅಂತ ಜನರನ್ನು ನಿಯೋಜಿಸಿ ಬಿಟ್ಟರೆ ಮಕ್ಕಳನ್ನು ಹೆತ್ತದ್ದಕ್ಕೆ ಸಾರ್ಥಕವಾಯಿತೆಂಬ ಭಾವ ಇಂದಿನ ಹೆತ್ತವರಿಗೆ ಬಂದು ಬಿಟ್ಟಿದೆ. ಗಾಡಿಗೊಂದು ಡ್ರೈವರ್ ನನ್ನುಇಟ್ಟುಕೊಂಡಂತೆ. ಇಂಥ ವಾತಾವರಣದಲ್ಲಿ ಬೆಳೆದ ಮಕ್ಕಳಲ್ಲಿ ಸಮಸ್ಯೆಯಿದ್ದೇ ಇರುತ್ತದೆ. ಸಿಗಬೇಕಾದ ಸಮಯದಲ್ಲಿಹೆತ್ತವರ ಪ್ರೀತಿಯ ಸುಖದ ಸ್ಪರ್ಶ ಸಿಗದಾಗ ಬೆಳೆಯುವ ಹಂತದ ಅವರ ಮನೋವಿಕಾಸದ ವಿನ್ಯಾಸದ ಆಕೃತಿಗಳಲ್ಲಿ ಏರುಪೇರಾಗುವುದು ಸಹಜ.
ವರ್ತನೆಗಳಲ್ಲಿ ಅನಪೇಕ್ಷಣೀಯ, ಅನಿರೀಕ್ಷಿತ ಬೆಳವಣಿಗೆಗಳು ಖಂಡಿತವಾಗಿ ಕಾಣುತ್ತವೆ. ಸಣ್ಣ ವಯಸ್ಸಿನ ಸಿಡುಕು, ಮುಂಗೋಪ, ಖಿನ್ನತೆ, ಹತಾಶೆಯ ಮನೋಭಾವ, ಒಬ್ಬಂಟಿತನ, ಸುಳ್ಳು ಹೇಳುವುದು ಕಾಣಬಹುದು, ಅವೇ ಓದಿಗೆ ಅಡ್ಡವಾಗಿ ಕಾಡಬಹುದು.ಕೂಡು ಕುಟುಂಬದದರೆ ಮನೆಯ ಸದಸ್ಯರೇ ಇಂಥವು ಗಳಿಗೆ ಮನೋವೈದ್ಯರಾಗಿ ಸರಿದಾರಿಗೆ ತಂದು ಬಿಡುತ್ತಿದ್ದರು. ಮೊದಲೆಲ್ಲ, ಶಾಲೆಯಲ್ಲಿ ಅಧ್ಯಾಪಕರು, ಗೆಳೆಯರು ಈ ಕೆಲಸವನ್ನು ಮಾಡುತ್ತಿದ್ದರು. ಆಲೋಚಿಸಿ ನೋಡಿ. ಹಿಂದೆ ಗೆಳೆತನವೆಂಬುದು ಜೀವನಾಮೃತದ ಒರತೆಯಂತಿರುತ್ತಿತ್ತು.
ಈಗಲೂ ಹಾಗೇ ಇದೆ ಹಲವೆಡೆಯಲ್ಲಿ. ಆದರೆ ಹಿಂದಿನಷ್ಟು ಗಾಢವಾಗಿ ಢಾಳಾಗಿ ಈ ಕಾಲದ ಸ್ನೇಹಗಳಿರುವುದಿಲ್ಲ. ಮೈತ್ರಿಯ ವ್ಯಾಖ್ಯಾನ ಅಥವಾ ಭಾಷ್ಯಗಳು ಕಾಲಕಳೆದಂತೆ ಬದಲಾಗುತ್ತಾ ಬಂದಿವೆ. ಅದರಲ್ಲೂ ಉಳ್ಳವರ ಮಕ್ಕಳಂತೂ ದಂಡನ್ನು ಕಟ್ಟಿಕೊಂಡು ಮಾಡಬಾರದ ಅನಾಹುತಗಳನ್ನು ಸೃಷ್ಟಿಸುವಂಥ ಗೆಳೆತನವೇ ಈಗ ಅಧಿಕವಾಗಿದೆ. ಮೈತ್ರಿಯಲ್ಲೂ ಸ್ಚಾರ್ಥ, ಅಪನಂಬಿಕೆ ತುಂಬಿರುವ ಈ ಕಾಲದಲ್ಲಿ ಎಲ್ಲವನ್ನೂ ರಾಜಕೀಯ ಅಮರಿಕೊಂಡಿದೆ.
ಯಾವುದನ್ನು ಮನೆಯೇ ನಿರ್ವಹಿಸುತ್ತಿತ್ತೋ ಅದನ್ನೇ ಈಗ ಕೌನ್ಸೆಲಿಂಗ್ ಮೂಲಕ ಮಾಡಬೇಕಾದ ಪರಿಸ್ಥಿತಿ ಬಂದಿದೆ. ದುಡ್ಡು ಕೊಟ್ಟು ನಗಾಡುವಂತ, ನಾಕು ಜನರ ಬಾಯಿಗೆ ಆಹಾರವಾಗುವಂಥ ದುರವಸ್ಥೆಯನ್ನು ತಂದುಕೊಂಡಿದ್ದೇವೆ. ಈ ಕೌನ್ಸೆಲಿಂಗ್ ದಂಧೆಯೆಂಬುದು ಒಂಥರಾ ಜಾತಕವನ್ನು ಕೊಟ್ಟು ಜ್ಯೋತಿಷ್ಯವನ್ನು ಹೇಳಿಸಿದಂತೆ. ಮನುಷ್ಯ ಜೀವನ ಅಂದ ಮೇಲೆ ದ್ವಂದ್ವಗಳು, ಬಲಹೀನತೆಗಳು ಇದ್ದೇ ಇರುತ್ತವೆ.
ಅವುಗಳನ್ನೇ ಬಂಡವಾಳವಾಗಿಸಿಕೊಂಡು ದುಡ್ಡು ಮಾಡೋ ದಂಧೆಗೆ ನಿಯತ್ತಿರುವುದು ಹಣದ ಮೇಲೆಯೇ ಹೊರತುಮನುಷ್ಯರ ಮೇಲಲ್ಲ. ಮನೋವೈಜ್ಞಾನಿಕ ನೆಲೆಯಲ್ಲಿ ಕೌನ್ಸೆಲಿಂಗ್ ಒಪ್ಪಿತವಾದುದೇ ಆಗಿದೆ. ಯಾವ ಕೌನ್ಸೆಲಿಂಗ್ ಭಾವನಾ ತ್ಮಕ ನೆಲೆಯಲ್ಲಿ ಬ್ಲಾಕ್ ಮೇಲ್ ಅಂತೆ ನಡೆಯುತ್ತದೋ ಅದು ಹಣ ಗಳಿಸುವ ದಂಧೆಯೇ ಆಗಿ ವ್ಯವಸ್ಥಿತ ಮಾರ್ಕೆಟ್ ಜಾಲವಾಗಿದೆ. ಹಾಗಂತ ಇದು ಸೈಂಟಿಫಿಕಲಿ ಪ್ರೂವ್ಡ್ ಅಂತ ಫಿಲಾಸಫಿಯಂತೂ ಅಲ್ಲವೇ ಅಲ್ಲ.
ಅಷ್ಟಕ್ಕೂ ಸೈಂಟಿಫಿಕಲಿ ಪ್ರೂವ್ಡ್ ಎಂಬ ಫಿಲಾಸಫಿಯೇ ಒಂದು ರೀತಿಯ ಮನೋರೋಗ. ಇದೊಂದು ಶುದ್ಧ ದಂಧೆ. ದಂಧೆಯ ರೂಪದ ಕೌನ್ಸಿಲಿಂಗಲ್ಲಿ ಕೇಳಬಹುದಾದ ಪ್ರಶ್ನೆಗಳು ಹೇಗಿರುತ್ತವೆ ನೋಡಿ.
ಉದಾಹರಣೆ 1.ನೀವು ತುಂಬಾ ಒಳ್ಳೆಯವರಿದ್ದೀರಿ, ಆದರೆ ನಿಮ್ಮ ಹೆಂಡತಿಗೆ ಇದನ್ನು ಅರ್ಥೈಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಈ ಸಮಸ್ಯೆಗಳು ಹುಟ್ಟಿಕೊಂಡಿವೆ.2. ನಿಮ್ಮ ಹೆಂಡತಿಯ/ಗಂಡನ ನಡವಳಿಕೆಯ ಬಗ್ಗೆ ನಿಮಗೇ ಇರಿಸುಮುರಿಸಾಗುವಂಥ ಘಟನೆಗಳು ನಡೆದಿವೆ. ಇದರಿಂದ ಮಾನಸಿಕವಾಗಿ ನೊಂದು ನೀವು ಹೀಗಾಗಿದ್ದೀರಿ, ಅಲ್ಲವೆ? 3. ನಿಮ್ಮ ಮಗ/ಮಗಳಲ್ಲಿ ವಿದ್ಯೆ,ಬುದ್ಧಿ ಪ್ರತಿಭೆಯಿದೆ. ಆದರೆ ನಿಮ್ಮಿಬ್ಬರ ಸಮಸ್ಯೆಗಳು ಅವರನ್ನು ಬಾಧಿಸುತ್ತಿವೆ.4. ನಿಮ್ಮ ಮೇಲಧಿಕಾರಿಗೆ ನಿಮ್ಮ  ಮೇಲೆ ಮಾತ್ಸರ್ಯವಿದೆ. ಅವರು ನಿಮ್ಮ ಮೇಲೆ ಸುಳ್ಳು ಅಥವಾ ತಪ್ಪು ಮಾಹಿತಿಯನ್ನು ನೀಡುತ್ತಾ ನಿಮ್ಮ ತೇಜೋವಧೆಗೆ ನಿರಂತರ ವಾಗಿ ಪ್ರಯತ್ನಿಸುತ್ತಲೇ ಇzರೆ. ಇದು ನಿಮಗೆ ಗೊತ್ತಿದೆ.
ಆದರೆ ಅವರು ಮಾಡುವ ಪಾಪದ ಅವರನ್ನೇ ನಾಶಗೊಳಿಸಲಿ ಅಂತ ನೀವು ಸುಮ್ಮನಿದ್ದೀರಿ. ಇನ್ನು ಮಕ್ಕಳಿಗಾದರೆ,5. ನಿಮ್ಮ ಮಗು ತುಂಬಾ ಇಂಟೆಲಿಜೆಂಟ್. ಅನ್ಯರಲ್ಲಿರುವ ಅಸಹನೆ, ಮಾತ್ಸರ್ಯ ನಿಮ್ಮ ಮಗುವಿನ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬಿದ್ದಿದೆ. ಅದಕ್ಕಾಗಿ ಮಗು ಹಿಂಜರಿದಿದೆ...6. ನಿನಗೆ ಅಪ್ಪ ಇಷ್ಟನೋ, ಅಮ್ಮ ಇಷ್ಟನೋ, ಯಾವ ಟೀಚರು ಇಷ್ಟ, ಯಾವ ಟೀಚರು ಹೊಡಿತಾರೆ, ಅವರ‍್ಯಾಕೆ ಹೊಡಿತಾರೆ…ಹೀಗೆ ಭಾವನಾತ್ಮಕವಾದ ನೆಲೆಯಲ್ಲಿ ಪ್ರಶ್ನೆಗಳು ಸಾಗುತ್ತವೆ.
ಇಂಥ ನಾನ್‌ಸೆನ್ಸ್ ಪ್ರಶ್ನೆಗಳಿಗೆ ಮಗು ಏನು ಉತ್ತರ ಕೊಟ್ಟೀತು? ಭಾವನೆಗಳಿಗೆ ಸ್ಪಂದಿಸುವ ಮಾತುಗಳನ್ನು ಕೇಳಿದಾಕ್ಷಣಎಂಥವನ ಮನಸ್ಸಿಗೂ ಒಮ್ಮೆ ಹೌದು ಅನ್ನಿಸಿಬಿಡುತ್ತದೆ. ಮನುಷ್ಯ ಸಹಜ ಸ್ವಭಾವ ಮತ್ತು ಬದುಕಿನ ಸ್ಥಿತಿಗಳು ಸಾರ್ವತ್ರಿಕವಾಗಿ ರುವುದರಿಂದ ನಿರ್ದಿಷ್ಟವಾಗಿ ಕೆಲವರಿಗೆ ಮಾತ್ರ ಇಂಥವುಗಳಿರುತ್ತವೆಯೆಂದು ಹೇಳುವುದು ಮನುಷ್ಯನ ದೌರ್ಬಲ್ಯವನ್ನು ಗುರುತಿಸಿ ದಮನಗೊಳಿಸುವ ಯತ್ನವಾಗಿ ಖಂಡಿತವಾಗಿ ಇರಲಾರದು.
ಆತ್ಮವಿಶ್ವಾಸವನ್ನು ವೃದ್ಧಿಸುವ ಕೆಲಸ ಇಂಥ ದಂಧೆಗಳಿಂದ ಆಗುವುದೇ ಇಲ್ಲ. ಪರಿಪೂರ್ಣವಾಗಿ ಯಾರೂ ಯಾವುದೂ ಸರಿಯಿಲ್ಲ ಎಂದ ಮಾತ್ರಕ್ಕೆ ನ್ಯೂನತೆಗಳೇ ಬದುಕಲ್ಲ. ಎಲ್ಲವನ್ನೂ ಗೆಲ್ಲುವ ಸಾಮರ್ಥ್ಯವನ್ನು ಹೆಚ್ಚಿಸುವುದು ವೈಜ್ಞಾನಿಕ ಕೌನ್ಸೆಲಿಂಗ್‌ಗೆ ಮಾತ್ರ ಸಾಧ್ಯವಿದೆ. ಸೈಕಾಲಜಿ ಕೂಡ ಊಹಾತ್ಮಕವಾದ ವಿಜ್ಞಾನವೇ ಆಗಿದೆ. ಜ್ಯೋತಿಷ್ಯವೂ ಹಾಗೆಯೇ. ಈಕೌನ್ಸೆಲಿಂಗ್ ಎಂಬುದು ಅದರಿಂದಲೇ ಜನ್ಮತಳೆದದ್ದು. ಹೆಣ್ಣನ್ನು ಭಾವನಾತ್ಮಕವಾಗಿ ಸೆರೆಹಿಡಿಯಬಲ್ಲಷ್ಟು ಸಲೀಸಾಗಿ ಗಂಡನ್ನು ಹಿಡಿಯಲಾಗದು. ಈ ಸೆರೆಹಿಡಿಯುವ ಅಥವಾ ನಿಯಂತ್ರಿಸುವ ಕಾರ್ಯವೇ ಶುದ್ಧ ತಪ್ಪು.
ಅಂಥ ನಿಯಂತ್ರಣಕ್ಕೆ ಒಳಗಾಗಿ ಸೋಲುವುದು ಮತ್ತೊಂದು ಶುದ್ಧಾತಿಶುದ್ಧ ತಪ್ಪು. ಮೋಸದ ಬಲೆಗೆ ಬೀಳುವುದು ಸುಲಭ. ಆದರೆ ಅಂಥ ಮೋಸವನ್ನು ಗೆಲ್ಲುವುದನ್ನು ಕಲಿಯಬೇಕಾಗಿದೆ. ಅಂದರೆ ಮನಸ್ಸನ್ನು ಗಟ್ಟಿಗೊಳಿಸುವುದು. ಅದರಲ್ಲೂ ಮಕ್ಕಳಿಗೆ ಇಂಥಅನುಭವಗಳು ಭವಿಷ್ಯದ ದೃಷ್ಟಿಯಿಂದ ಹಿತವಲ್ಲ. ಮಕ್ಕಳೂ ಕೂಡ ಕೌನ್ಸಿಲಿಂಗನ್ನು ದುರುಪಯೋಗ ಪಡಿಸಿಕೊಳ್ಳಲುಮುಂದಾಗುತ್ತಾರೆ. ತನ್ನನ್ನು ಎಲ್ಲರೂ ಬೇರೆಯದೇ ಆದ ರೀತಿಯಲ್ಲಿ ನೋಡುತ್ತಾರೆಂಬುದೇ ಅವರಲ್ಲಿ ದೌರ್ಬಲ್ಯವನ್ನುಹೆಚ್ಚಿಸುತ್ತಾ ಹೋಗುತ್ತದೆ.
ಮತ್ತೊಬ್ಬನ ಪೆನ್ನೋ ಪೆನ್ಸಿಲನ್ನೋ ಕದ್ದವನಿಗೆ ಕೌನ್ಸೆಲಿಂಗ್ ಮಾಡುವ ಹಂತಕ್ಕೆ ನಾವು ತಲುಪಿದ್ದೇವೆ. ವಯೋಸಹಜ ಅಸಹಜವಾದ ನಡವಳಿಕೆಗಳನ್ನು ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಂಡೇ ತಿದ್ದುವುದನ್ನು ನಮ್ಮ ಹಿರಿಯರಿಗೆ ಯಾರು ಕಲಿಸಿದರು? ಕೌನ್ಸೆಲಿಂಗ್ ಮಾಡೋದನ್ನು ಅವರಿಗೆ ಯಾರು ಕಲಿಸಿದರು? ಕಲಿಕೆಯಲ್ಲಿ ಹಿಂದುಳಿದ ತಮ್ಮ ಮಕ್ಕಳಿಗೆ ಮೋಟಿವೇಷನ್, ಧೈರ್ಯ ತುಂಬುವುದು, ಆತ್ಮವಿಶ್ವಾಸವನ್ನು ಹೆಚ್ಚಿಸುವುದು, ಸಾಮ – ದಾನ – ಬೇಧ – ದಂಡಗಳ ಪ್ರಯೋಗ – ಇವೆಲ್ಲ ಹಿರಿಯರಲ್ಲಿ ಸಹಜವಾಗೇ ಇತ್ತು.
ಆ ಮೂಲಕವೇ ತಮ್ಮ ಮಕ್ಕಳನ್ನು ಸಹಜದಾರಿಗೆ ತರುವಂಥ ಕಾರ್ಯಗಳು ಅವರಿಂದಾಗುತ್ತಿತ್ತು. ಎಲ್ಲದರಲ್ಲೂ ಆಯ್ಕೆ ಮತ್ತು ಸ್ವಾತಂತ್ರ್ಯಗಳನ್ನು ಮಕ್ಕಳಿಗೆ ನೀಡಿ ಅವರಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತಿದ್ದರು. ಇದು ಅವರ ನಿತ್ಯ ಬದುಕಿನಲ್ಲಿ ಸಹಜವಾಗೇ ಇತ್ತು. ಮಕ್ಕಳ ಬಗ್ಗೆ ಯಾವುದನ್ನೂ ತೀರಾ ಎಂಬಷ್ಟು ತಲೆಗೆ ಹಚ್ಚಿಕೊಳ್ಳದ ಬೌದ್ಧಿಕ ಜಾಣ್ಮೆ ಅವರಲ್ಲಿತ್ತು. ಆದ್ದರಿಂದ ಅವರ ಕಾಲದಲ್ಲಿ ಕೌನ್ಸೆಲಿಂಗ್ ಹುಟ್ಟಲೇ ಇಲ್ಲ. ಆದರೆ ಈಗ ಎಲ್ಲೂ ಕೌನ್ಸೆಲಿಂಗ್‌ನದ್ದೇ ಹಾವಳಿ.
ಇದೆಲ್ಲ ದುಡ್ಡು ಮಾಡುವುದು ಬಿಟ್ಟರೆ ಬೇರೆ ಯಾವುದೇ ಯಾವ ಪ್ರಯೋಜನವೂ ಇಲ್ಲದ್ದು ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಪೋಷಕರಿಗೂ ಕೌನ್ಸೆಲಿಂಗ್ ಎಂಬುದು ಫ್ಯಾಷನ್ ಆಗಿಬಿಟ್ಟಿದೆ. ನನ್ನ ಮಗನನ್ನು, ಮಗಳನ್ನು ಕೌನ್ಸಿಲಿಂಗಿಗೆ ಕಳಿಸಿದೆಯೆನ್ನುವುದೂ ಒಂದು ಪ್ರೆಸ್ಟೀಜ್ ಆಗಿಬಿಟ್ಟಿದೆ. ಈ ಬಗೆಯ ಕೌನ್ಸಿಲಿಂಗಿಗೆ ಹೋಗಿ ಉದ್ಧಾರ ವಾಗಿರೋದನ್ನು ನಾನು ಕಂಡಿಲ್ಲ. ಉದ್ಧಾರವಾಗಿದೆ ಎಂದುಕೊಂಡವರದ್ದು ಭ್ರಮೆಯೇ ಹೊರತು ವಾಸ್ತವವಲ್ಲ.
ವಿದ್ಯಾರ್ಥಿಗಳೇಕರು ಕೌನ್ಸೆಲಿಂಗ್‌ಗೆ ಹೋಗಿ ಬರುತ್ತಾರೆ. ಅದನ್ನೇ ದುರುಪಯೋಗ ಮಾಡಿಕೊಂಡು ಎಲ್ಲ ಜವಾಬ್ದಾರಿಗಳಿಂದ ಕಾರ್ಯಗಳಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆಂಬ ಆರೋಪವಂತೂ ಸರ್ವೇಸಾಮಾನ್ಯ ವಾಗಿ ಕೇಳಿಬರುತ್ತದೆ. ನಮ್ಮ ಮಕ್ಕಳನ್ನು ನಾವೇ ಪ್ರೀತಿ, ಸ್ನೇಹದಿಂದ ನೋಡಿಕೊಂಡರೆ ಹಣ ಸುಲಿಯುವ ಇಂಥ ಯಾವ ಆಧುನಿಕ ಕೌನ್ಸೆಲಿಂಗ್‌ನ ಅಗತ್ಯವಾಗಲೀ ಆವಶ್ಯ ವಾಗಲೀ ಬರಲಾರದು.
ತಮ್ಮ ಮಕ್ಕಳನ್ನು ಪ್ರೀತಿಸದೆ ಕೌನ್ಸೆಲಿಂಗ್‌ಗೇ ಮೊರೆಹೋಗುವ ಹೆತ್ತವರು ಮೊದಲು ಇದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಪ್ರೀತಿಗಿಂತ ದೊಡ್ಡ ಕೌನ್ಸೆಲಿಂಗ್ ಈ ಪ್ರಪಂಚದಲ್ಲಿ ಯಾವುದಿದೆ? ಪ್ರೀತಿಗೆ ಸೋಲದವರು ಯಾರಿದ್ದಾರೆ? ದೇವಾನುದೇವತೆಗಳೇ ಪ್ರೀತಿಗೆ ಸೋಲುವಾಗ ಇನ್ನು ಹುಲು ಮಾನವನ ಪಾಡೇನು? ಅದರಲ್ಲೂ ಮಕ್ಕಳು ಸೋಲಲಾರರೆ? ನೋ ಚಾನ್ಸ್.
ಕೊನೆಯ ಮಾತು:ಪ್ರತಿ ಪೋಷಕನೂ ಶಿಕ್ಷಕನೂ ಒಬ್ಬ ಕೌನ್ಸಿಲರ್ ಆಗಿರುತ್ತಾನೆ. ವಿದ್ಯಾರ್ಥಿಯ ಗುಣ, ನಡತೆ, ಸ್ವಭಾವ, ಓದು, ಆಸಕ್ತಿ, ಅಭಿರುಚಿ, ಸಂಸ್ಕಾರ – ಸಂಸ್ಕೃತಿಯ ಬಗ್ಗೆ ಶಿಕ್ಷಕನಿಗೆ ಗೊತ್ತಿರುವಷ್ಟು ಕೆಲವೊಮ್ಮೆ ಪೋಷಕರಿಗೂ ಗೊತ್ತಿರುವುದಿಲ್ಲ. ಆ- ಕೋರ್ಸ್ ಗೊತ್ತಿರುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ ಸಂದರ್ಭ ಸನ್ನಿವೇಶಗಳಿಗೆ ವಿದ್ಯಾರ್ಥಿಯ ವರ್ತನೆಗಳು ಬೇರೆ ಬೇರೆಯಾಗಿರುತ್ತವೆ.
ರಾಜಕಾರಣಿಗಳನ್ನೇ ನೋಡಿ, ಸದನದೊಳಗೆ ಕಚ್ಚಾಡುವವರು ಮದುವೆಯ ಕಾರ್ಯಕ್ರಮದಲ್ಲಿ ಕಚ್ಚಾಡುವುದಿಲ್ಲ. ಸಾರ್ವಜನಿಕ ಸಭೆಗಳಲ್ಲಿ ಬಳಸುವ ಪದಗಳನ್ನು ಸದನದೊಳಗೆ ಬಳಸುವುದಿಲ್ಲ. ಚುನಾವಣಾ ಸಂದರ್ಭಗಳಲ್ಲಂತೂ ರಾಜಕಾರಣಿಗಳ ಮಾತು ಮತ್ತು ನಡೆವಳಿಕೆಯಲ್ಲಿ  ಭೂತಾವೇಶವಾಗಿರುತ್ತದೆ. ದೊಡ್ಡವರದ್ದೇ ಸಾಂದರ್ಭಿಕವಾಗಿ ವರ್ತನೆಗಳು ಬೇರೆಬೇರೆಯಾಗಿರುತ್ತವೆ. ಅಂದಮೇಲೆ ಮಕ್ಕಳಲ್ಲೂ ಇರಲಾರದೆ? ಇಲ್ಲದಿರಲು ಹೇಗೆ ಸಾಧ್ಯ? ಅವರು ಮಕ್ಕಳಲ್ಲವೆ? ದೊಡ್ಡವರನ್ನು ನೋಡಿಯೇ ಅವರುಕಲಿಯುವುದು. ಅದರಲ್ಲೂ ರೆಸಿಡೆನ್ಷಿಯಲ್ ಶಾಲೆಗಳಲ್ಲಿ ಓದುತ್ತಿರುವ ಪ್ರತಿ ಮಕ್ಕಳ ಬಗ್ಗೆ ಹೆಚ್ಚು ಕಡಿಮೆ ಎಲ್ಲ ವಿಚಾರಗಳೂ ಶಿಕ್ಷಕರಿಗೆ ಗೊತ್ತಿರುತ್ತದೆ.
ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸುವುದನ್ನು ಯಾವ ಶಿಕ್ಷಕ ಮಕ್ಕಳಿಗೆ ಹೇಳಿಕೊಡುತ್ತಾನೋ ಅಂಥ ಮಕ್ಕಳು ಬೌದ್ಧಿಕವಾಗಿ, ವೈಚಾರಿಕವಾಗಿ, ಭಾವನಾತ್ಮಕ ವಾಗಿ ಸದೃಢರಾಗುತ್ತಾರೆ. ಹಾಗಂತ ಶಿಕ್ಷಕರೂ ಪರಿಪೂರ್ಣರಲ್ಲ. ತಮ್ಮ ಸರ್ವಿಸ್ಸಿನಲ್ಲಿ ಅವರು ಹೊಸ ಹೊಸ ವಿದ್ಯಾರ್ಥಿಗಳನ್ನು ಪ್ರತಿ ವರ್ಷವೂ ನೋಡುತ್ತಾರೆ. ಮಕ್ಕಳನ್ನು ಹ್ಯಾಂಡಲ್ ಮಾಡುವ ಪ್ರಯೋಗಶೀಲತೆಯಲ್ಲಿ ಅವರು ಹೊಸತನವನ್ನೂ ರೂಢಿಸಿಕೊಳ್ಳಬೇಕು. ಹಳೆಯದಕ್ಕೇ ಜೋತುಕೊಂಡರೆ ಸಾಧ್ಯವಿಲ್ಲ.
ಮುಖ್ಯವಾಗಿ, ಎಲ್ಲ ಮಕ್ಕಳನ್ನು ನಿಷ್ಪಕ್ಷಪಾತವಾಗಿ ನೋಡುವ ದೊಡ್ದ ಔದಾರ್ಯ ಶಿಕ್ಷಕರಲ್ಲಿರಬೇಕು. ಮಕ್ಕಳು ಮಕ್ಕಳ ಗುಂಪನ್ನು ಹುಟ್ಟುಹಾಕುವುದು, ಸ್ವಜನ ಪಕ್ಷಪಾತ, ಮೇಲುಕೀಳು ಭಾವ, ತಾತ್ಸಾರ ಮನೋಭಾವ, ಉದಾಸೀನ ಮಾಡುವುದು, ನಿರ್ಲಕ್ಷ ಭಾವ, ಅವರ ಮಾನಸಿಕ ವೈಚಾರಿಕ ದೌರ್ಬಲ್ಯಗಳನ್ನು ಎನ್ ಕ್ಯಾಶ್ ಮಾಡುವುದು, ಸಾಂದರ್ಭಿಕ ವಾಗಿ ಬ್ಲಾಕ್ ಮೇಲ್ ಮಾಡುವುದು, ಜಾತಿಯಾಧಾರಿತ ತಾರತಮ್ಯ ತೋರುವುದು – ಶಿಕ್ಷಕರಿಗೆ ಶೋಭೆಯಾಗಿ ತೋರುವುದಿಲ್ಲ, ಶಾಲೆಗೂ ಸಮುದಾಯಕ್ಕೂ ಇದು ಆರೋಗ್ಯಯುತವಲ್ಲ ಎಂಬ ಎಚ್ಚರ ಶಿಕ್ಷಕರಿಗೆ ಒಳ್ಳೆಯದಲ್ಲ.
ಕೇಜಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ದುಡಿಯುವ ಶಿಕ್ಷಕರಿಗೆ ಮಕ್ಕಳ ಬಗ್ಗೆ ಹೆಚ್ಚು ಗೊತ್ತಿರುತ್ತದೆ. ವಿವಿಗಳಲ್ಲಿ ವಿದ್ಯಾರ್ಥಿಗಳವೈಚಾರಿಕತೆಯನ್ನು ಎನ್ ಕ್ಯಾಶ್ ಮಾಡಿ ದಾರಿ ತಪ್ಪಿಸಲು ಸಾಧ್ಯವಿದೆಯೇ ಹೊರತು ಅಂಗನವಾಡಿಗಳಲ್ಲಿ ಸಾಧ್ಯವಿಲ್ಲ.ಮಕ್ಕಳನ್ನು ಎಂಥಾ ಸ್ಥಿತಿಯಲ್ಲೂ ಸಂಭಾಳಿಸುವ ಅಂಗನವಾಡಿ ಟೀಚರುಗಳಿಗೆ ವಿವಿಯ ಸ್ಕಾಲರು(?)ಗಳಿಗೆ ಕೊಡುವ ಸಂಬಳದ ಕಾಲುಭಾಗದಷ್ಟಾದರೂ ಕೊಡಬೇಕೆಂಬ ಆಗ್ರಹ ನನ್ನದು.
ಕೊಟ್ಟಿದ್ದರೆ ಇನ್ನಷ್ಟು ಮುತುವರ್ಜಿಯಿಂದ ದುಡಿದಾರು. ಹಾಗಂತ ಈಗ ದುಡಿಯುತ್ತಿಲ್ಲವೆಂದರ್ಥವಲ್ಲ ಕೇಜಿಯಿಂದ ಹಿಡಿದು ಹತ್ತರವರೆಗೆ ಮಕ್ಕಳಿಗೆ ತಂದೆ ತಾಯಂದಿರು, ಶಿಕ್ಷಕರು, ಗೆಳಯರು, ಸಮಾಜವೇ ನಿಜವಾದ ದೊಡ್ಡ ಕೌನ್ಸಿಲರುಗಳು. ಪ್ರತಿ ಮನೆಯಲ್ಲೂ ಶಾಲೆಯಲ್ಲೂ ಸಮೂಹದಲ್ಲೂ ಮಕ್ಕಳಿಗೆ ಎತ್ತರದ ಪ್ರೀತಿ, ತಿಳಿಯಾದ ಹಾಸ್ಯಪ್ರಜ್ಞೆ ಮತ್ತು ಸ್ವಲ್ಪಮಟ್ಟಿಗಿನ ಭಯವನ್ನು ತೋರುವ ಎಚ್ಚರ ದೊಡ್ಡವರಲ್ಲಿ ಹುಟ್ಟಬೇಕಾಗಿದೆ.
ನಮ್ಮ ಮಕ್ಕಳು ಎಂಬಲ್ಲಿ ನಮ್ಮ ಪದದ ಅರ್ಥ ಮತ್ತು ವ್ಯಾಪ್ತಿ ವಿಸ್ತಾರವಾಗಬೇಕಿದೆ. ಪ್ರೀತಿಯೇ ದೊಡ್ದ ಕೌನ್ಸಿಲಿಂಗ್. ಅದಕ್ಕೆಜಾತಿ – ಮತ – ಧರ್ಮಗಳ ಹಂಗಿರುವುದಿಲ್ಲ.