ನೀ ಕೊಡೆ, ನಾ ಬಿಡೆ ಎಂಬಂತಾದ ಸಾರಿಗೆ ಮುಷ್ಕರ
ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಕರ್ನಾಟಕದಲ್ಲಿ ಇತ್ತೀಚಿಗೆ ಭಾರಿ ಸದ್ದು ಮಾಡುತ್ತಿರುವ ಕೆಲವು ವಿಷಯಗಳೆಂದರೆ, ಕರೋನಾ ಸ್ಫೋಟ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಉಪಚುನಾವಣೆ ಭರ್ಜರಿ ಪ್ರಚಾರ ಹಾಗೂ ಸಾರಿಗೆ ನೌಕರರ ಮುಷ್ಕರ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕರೆ ನೀಡಿರುವ ಬಸ್ ಬಂದ್ ಸೋಮವಾರಕ್ಕೆ ನಾಲ್ಕನೇ ದಿನ ಪೂರೈಸಿದೆ. ಆದರೆ ಇದಕ್ಕೊಂದು ಪರಿಹಾರ ಮಾತ್ರ ಸಿಗುತ್ತಿಲ್ಲ. ಆರನೇ ವೇತನ ಆಯೋಗದ ಶಿ-ರಸು ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ನೈಋತ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದನ್ನು ಬಗೆಹರಿಸಬೇಕಾದ ಆಡಳಿತ ನಡೆಸುವವರು, ‘ಈಗಾಗಲೇ ವೇತನ ಹೆಚ್ಚಳಕ್ಕೆ ಸರಕಾರ ಒಪ್ಪಿದೆ.
ಆದ್ದರಿಂದ ಈ ಮುಷ್ಕರ ಅಗತ್ಯವಿಲ್ಲ. ಉಪಚುನಾವಣೆ ಮುಗಿಯುತ್ತಿದ್ದಂತೆ ವೇತನ ಹೆಚ್ಚಿಸಿ ಆದೇಶ ಹೊರಡಿಸಲಾಗುವುದು’. ಎಂದು ಹೇಳುತ್ತಿದ್ದರೆ, ಇನ್ನೊಂದೆಡೆ, ‘ಯಾವುದೇ ಕಾರಣಕ್ಕೂ ಆರನೇ ವೇತನ ಆಯೋಗದ ಶಿಫಾರಸನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ. ಬೇಕಿದ್ದರೆ ಬರಲಿ ಇಲ್ಲವೇ ಬದಲಿ ವ್ಯವಸ್ಥೆ’ ಮಾಡಿಕೊಳ್ಳುವುದಾಗಿ ನೇರ ಹಾಗೂ ಪರೋಕ್ಷ ಎಚ್ಚರಿಕೆ ನೀಡುತ್ತಿದ್ದಾರೆ.
ಪ್ರತಿಭಟನಾ ನಿರತ ನೌಕರರ ಬೇಡಿಕೆ ಎಷ್ಟು ಸಮಂಜಸವಾಗಿದೆಯೋ, ಸರಕಾರ ಹೇಳುತ್ತಿರುವ ಅಂಶವೂ ಅಷ್ಟೇ ಸರಿಯಾಗಿದೆ. ಅವರವರ ತುದಿಯಲ್ಲಿ ನಿಂತು ಅವರ ವಾದ ಕೇಳಿದಾಗ, ಸರಿಯಾಗಿಯೇ ಇದೆ ಎನಿಸುತ್ತದೆ. ಆದರೆ ಎರಡು ಕಡೆಯವರಈ ‘ನಾ ಕೊಡೆ, ನೀ ಬಿಡೆ’ ಎನ್ನುವ ಮನಸ್ಥಿತಿಯಿಂದ ಕಳೆದೊಂದು ವಾರದಿಂದ ಕಷ್ಟ ಅನುಭವಿಸುತ್ತಿರುವುದು ಮಾತ್ರ ಸಾರ್ವಜನಿಕರು ಎನ್ನುವುದು ಓಪನ್ ಸಿಕ್ರೇಟ್.
ಅಷ್ಟಕ್ಕೂ ಸಾರಿಗೆ ನೌಕರರ ಈ ಮುಷ್ಕರ ಇದೇ ಮೊದಲಲ್ಲ. ಸೂಕ್ಷ್ಮವಾಗಿ ಗಮನಿಸಿದರೆ, ಈ ನೌಕರರು ವರ್ಷಕ್ಕೆ ಮೂರುಬಾರಿಯಂತೂ ಮಾಡುತ್ತಾರೆ. ಕೆಲವೊಮ್ಮೆ ಬಸ್ ಬಂದ್ ಮಾಡಿದರೆ, ಇನ್ನು ಕೆಲವೊಮ್ಮೆ ಸಾಂಕೇತಿಕ ಬಂದ್ ನಡೆಸುತ್ತಾರೆ. ಮೂರು ತಿಂಗಳ ಹಿಂದೆಯೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಆಗ ಸರಕಾರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆದಿದ್ದರು. ಆದರೀಗ ಆರನೇ ವೇತನ ಆಯೋಗದ ಶಿಫಾರಸನ್ನು ಜಾರಿ ಗೊಳಿಸಿಲ್ಲ.
ಭರವಸೆ ನೀಡಿದ ವೇತನವನ್ನು ನೀಡಿಲ್ಲ ಎಂದು ಹೇಳಿಕೊಂಡು ಪ್ರತಿಭಟನೆ ನಡೆಸುತ್ತಿವೆ. ಆದರೆ ನಿಜಕ್ಕೂ ಆರನೇ ವೇತನ ಆಯೋಗ ಜಾರಿ ಸಾಧ್ಯವೇ? ರಾಜ್ಯದ ನಾಲ್ಕು ನಿಗಮಗಳಲ್ಲಿ ಅಷ್ಟು ಅನುದಾನವಿದೆಯೇ ಎನ್ನುವ ಬಗ್ಗೆಯೂ ಆಲೋಚಿಸ ಬೇಕಿದೆ. ಇಲ್ಲಿ ಗಮನಿಸಬೇಕಿರುವ ವಿಷಯ ಏನೆಂದರೆ, ಸಾರಿಗೆ ನೌಕರರು ಇಟ್ಟಿರುವ ಬೇಡಿಕೆ. ಈ ಬಾರಿ ನಡೆಸುತ್ತಿರುವಪ್ರಮುಖ ಬೇಡಿಕೆ ಎಂದರೆ, ಆರನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎನ್ನುವುದಾಗಿದೆ.
ಸಾರಿಗೆ ನೌಕರರು ಕೇಳುವ ಆರನೇ ವೇತನ ಆಯೋಗದ ಜಾರಿಗೆ ತಂದರೆ ಕನಿಷ್ಟ ಒಬ್ಬ ಚಾಲಕ ಅಥವಾ ನಿರ್ವಾಹಕನಿಗೆ 40 ರಿಂದ 45 ಸಾವಿರ ರು. ವೇತನ ನೀಡಬೇಕಾಗುತ್ತದೆ. ಇಂದಿನ ಜೀವನಕ್ಕೆ ಈ ವೇತನ ಅಗತ್ಯ ಎನ್ನುವುದು ಎಷ್ಟು ಸರಿಯೋ, ನಾಲ್ಕು ನಿಗಮ ಮಂಡಳಿಗಳ ನೌಕರರಿಗೆ ಇಷ್ಟು ದೊಡ್ಡ ಪ್ರಮಾಣದ ಹೈಕ್ ನೀಡಿದರೆ, ಸರಕಾರಕ್ಕೆ ಅಥವಾ ನಿಗಮಗಳಿಗೆ ಕನಿಷ್ಟ ಆರರಿಂದ ಏಳು ಸಾವಿರ ಕೋಟಿ ರು. ವಾರ್ಷಿಕವಾಗಿ ಹೆಚ್ಚುವರಿಯಾಗಿ ಬೇಕಾಗುತ್ತದೆ.
ಈಗಾಗಲೇ ನಷ್ಟದಲ್ಲಿರುವ ಸಾರಿಗೆ ನಿಗಮ ಮಂಡಳಿಗಳಿಗೆ ಇಷ್ಟು ದೊಡ್ಡ ಪ್ರಮಾಣದ ಹೆಚ್ಚುವರಿ ಹೊರೆಯನ್ನು ತಡೆದು ಕೊಳ್ಳಲು ಸಾಧ್ಯವೇ? ಎನ್ನುವುದನ್ನು ಸಾರಿಗೆ ನೌಕರರು ಯೋಜಿಸಬೇಕಿದೆ. ಕೆಎಸ್‌ಆರ್‌ಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವವ ರಿಗೆ ಸಿಗುತ್ತಿರುವ ಒಟ್ಟು ವೇತನ ಎಷ್ಟು ಎನ್ನುವುದನ್ನು ನೋಡಬೇಕಿದೆ. ಆರಂಭದಲ್ಲಿ ಚಾಲಕರು ಹಾಗೂ ನಿರ್ವಾಹಕರು ಮೂಲ ವೇತನ ಎಂದು 12400 ರು, 11640ರು ಕ್ರಮವಾಗಿ ಪಡೆಯುತ್ತಾರೆ. ಇದರೊಂದಿಗೆ ತುಟ್ಟಿಭತ್ಯೆಯೆಂದು 5601ಹಾಗೂ 5267 ಒಟ್ಟು ಚಾಲಕರೊಬ್ಬರು 31948 ಹಾಗೂ ನಿರ್ವಾಹಕರು 30308 ರು. ಪಡೆಯುತ್ತಾರೆ. ಇದರಲ್ಲಿ ಒಂದು ನಿಗಮದಿಂದ ಇನ್ನೊಂದು ನಿಗಮಕ್ಕೆ ಒಂದೆರೆಡು ಸಾವಿರ ಏರಿಳಿತ ಆಗಬಹುದು. ಆದರೆ ಸರಾಸರಿ30ಸಾವಿರ ಅಂತೂ ಪಡೆಯುತ್ತಾರೆ.
ಇದೀಗ ಇದಕ್ಕೆ ಶೇ.36 ವೇತನ ಹೆಚ್ಚಳ ಮಾಡಿದರೆ, ಪ್ರತಿಯೊಬ್ಬ ನೌಕರರಿಗೆ ಕನಿಷ್ಟ ಎಂಟು ಸಾವಿರ ರು. ವೇತನ ಹೆಚ್ಚಳಮಾಡಬೇಕಾಗುತ್ತದೆ. ಆದರೆ ಈಗಾಗಲೇ ಕರೋನಾ ಸಮಯದಲ್ಲಿ ಆದಾಯವಿಲ್ಲದೇ, ಸರಕಾರದಿಂದ ದುಡ್ಡ ಪಡೆದು ನೌಕರರಿಗೆ ವೇತನ ನೀಡಿರುವ ನಿಗಮಗಳಿಂದ ಇದನ್ನು ನಿರ್ವಹಿಸುವುದು ಕಷ್ಟದ ವಿಷಯ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ಇನ್ನು ಸಾರಿಗೆ ನೌಕರರ ಇನ್ನೊಂದು ಪ್ರಮುಖ ಬೇಡಿಕೆ ಎಂದರೆ, ನಿಗಮ ನೌಕರರು ಎನ್ನುವ ಬದಲು ಸಾರಿಗೆ ಇಲಾಖೆಯ ಸಿಬ್ಬಂದಿಯನ್ನಾಗಿ ಸೇರಿಸಬೇಕು ಎನ್ನುವುದು. ಅಧಿಕಾರ ವಿಕೇಂದ್ರಿಕರಣ ಹಾಗೂ ಸಾರಿಗೆ ಇಲಾಖೆಯನ್ನು ಲಾಭದತ್ತ ತರುವ ದೃಷ್ಟಿಯಿಂದ ರಾಜ್ಯ ಸರಕಾರ, ರಸ್ತೆ ಸಾರಿಗೆಯನ್ನು ನಾಲ್ಕು ವಿಭಾಗವನ್ನಾಗಿ ಮಾಡಿದೆ. ಇದರಲ್ಲಿ ಬಿಎಂಟಿಸಿ ಹೊರತು ಪಡಿಸಿದರೆ, ಇನ್ನುಳಿದ ಮೂರು ನಿಗಮಗಳು ನಷ್ಟದಲ್ಲಿಯೇ ದಿನ ದೂಡುತ್ತಿವೆ. ಇಡೀ ದೇಶಕ್ಕೆ ಮಾದರಿಯಾಗಿ ನಿಂತಿರುವ ಕೆಎಸ್‌ಆರ್‌ಟಿಸಿ ಸಹ ಲಾಭದತ್ತ ವಾಲದೇ ನಷ್ಟದಲ್ಲಿಯೇ ವರ್ಷಗಳಿಂದ ಇರುವುದು ಹಲವು ಅನುಮಾನಗಳಿಗೆ ಕಾರಣವಾದರೂ, ಆನ್ ರೆಕಾರ್ಡ್ ಒಪ್ಪಿಕೊಳ್ಳಬೇಕು.
ಹೀಗಿರುವಾಗ ಈ ನೌಕರರು ಸರಕಾರಿ ಸಿಬ್ಬಂದಿಗಳು ಎಂದು ಪರಿಗಣಿಸಿದರೆ, ಸರಕಾರಿ ಸಿಬ್ಬಂದಿಗಳಿಗೆ ನೀಡಬೇಕಾದ ಸವಲತ್ತು ನೀಡಬೇಕು. ವೇತನ ನೀಡುವುದಕ್ಕೆ ಒದ್ದಾಡುತ್ತಿರುವ ನಿಗಮ ಮಂಡಳಿಗಳಿಂದ ಈ ಸವಲತ್ತು ನೀಡಲು ಸಾಧ್ಯವೇ? ಇನ್ನು ಸಾರಿಗೆ ನಿಗಮದ ನೌಕರರಿಗೆ ಮಾತ್ರ ಸರಕಾರಿ ನೌಕರರ ಸ್ಥಾನಮಾನ ನೀಡಿದರೆ, ಇನ್ನುಳಿದ ನಿಗಮ ಮಂಡಳಿಗಳ ನೌಕರರು ಸುಮ್ಮನೆ ಕೂರುತ್ತಾರೆಯೇ? ಇಂಧನ ಇಲಾಖೆಯ ಬೆಸ್ಕಾಂ, ಚೆಸ್ಕಾಂ ಸೇರಿದಂತೆ ವಿವಿಧ ವಿದ್ಯುತ್ ನಿಗಮಗಳು, ಅಂಗನವಾಡಿ ನೌಕರರು ಸೇರಿದಂತೆ ರಾಜ್ಯದಲ್ಲಿ 150ಕ್ಕೂ ಹೆಚ್ಚು ನಿಗಮ ಮಂಡಳಿಗಳ ಸಿಬ್ಬಂದಿಗಳು ಸರಕಾರಿ ಸಿಬ್ಬಂದಿಗಳ ಸ್ಥಾನಮಾನಕ್ಕೆ ಆಗ್ರಹಿಸು ತ್ತಾರೆ. ಈಗಾಗಲೇ ರಾಜ್ಯ ಬಜೆಟ್ ಶೇ.85ರಷ್ಟು ಹಣ ವೇತನ, ಪಿಂಚಣಿಗೆ ಹೋಗುತ್ತಿದೆ.
ಈ ಎಲ್ಲ ನಿಗಮ ಮಂಡಳಿ ಸಿಬ್ಬಂದಿಗಳನ್ನು ಸರಕಾರಿ ನೌಕರರು ಎಂದು ಪರಿಗಣಿಸಿದರೆ, ರಾಜ್ಯದ ಬೊಕ್ಕಸದಲ್ಲಿರುವ ಎಲ್ಲಹಣವನ್ನು ಇದಕ್ಕೆ ವಿನಿಯೋಗಿಸಬೇಕಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಸಾರಿಗೆ ನೌಕರರು ಸರಕಾರದ ಮುಂದೆ ಇಟ್ಟಿರುವ ಬೇಡಿಕೆಗಳಲ್ಲಿ ಈ ಎರಡು ಬೇಡಿಕೆ ಈಡೇರಿಸಲು ಸಾಧ್ಯವೇ ಇಲ್ಲ ಎನ್ನುವುದು ಪ್ರತಿಭಟನಾ ನಿರತರಿಗೂ ತಿಳಿದಿಲ್ಲ ಎಂದಲ್ಲ. ಆದರೆ ಧರಣಿ ಮಾಡಬೇಕು ಎನ್ನುವ ಕಾರಣಕ್ಕೆ ಈ ಬೇಡಿಕೆಗಳನ್ನು ಇಟ್ಟಿದ್ದಾರೆ.
ಇನ್ನುಳಿದಂತೆ ಸಾರಿಗೆ ನೌಕರರು ಕೇಳಿರುವ ರಾತ್ರಿ ಪಾಳಿ ಮಾಡುವ ಡ್ರೈವರ್, ಕಂಡಕ್ಟರ್‌ಗಳಿಗೆ ವಿಶಾಂತ್ರಿಗೃಹ, ಸೂಕ್ತ ಆಹಾರ, ರಜೆ ಸಮಸ್ಯೆ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಬಗೆಹರಿಸಬಹುದಾಗಿದೆ. ಈ ಬೇಡಿಕೆಗಳು ಈ ಹಿಂದೆಯೂ ಇದ್ದವು. ಆಗಲೂ ಬಗೆಹರಿಸುವ ಭರವಸೆ ನೀಡಲಾಗಿದೆ ಹೊರತು ಈಡೇರಿಸಿಲ್ಲ ಎನ್ನುವ ಆರೋಪ ಸರಕಾರದ ಮೇಲಿದೆ. ಆದ್ದರಿಂದ ಸರಕಾರ, ಅತ್ಯಾವಶ್ಯಕ ಸೇವೆ ಎಂದು ಸಾರಿಗೆ ಇಲಾಖೆಯನ್ನು ಪರಿಗಣಿಸಿ, ಎಸ್ಮಾದ ಎಚ್ಚರಿಕೆ ನೀಡುವ ಜತೆಜತೆಗೆ ಸಾರಿಗೆ ನೌಕರರಿಗೆ ನೀಡಬೇಕಿರುವ ಸವಲತ್ತುಗಳನ್ನು ನೀಡುವ ಕೆಲಸವನ್ನು ಮಾಡಲಿ.
ಇದರೊಂದಿಗೆ ಸಾರಿಗೆ ನೌಕರರು ಕೇಳುತ್ತಿರುವ ಆರನೇ ವೇತನ ಆಯೋಗದ ಜಾರಿ ಸಾಧ್ಯವಿಲ್ಲ ಎನ್ನುವುದು ಮೂರು ತಿಂಗಳ ಹಿಂದೆಯೇ ಸರಕಾರಕ್ಕೆ ಗೊತ್ತಿದ್ದರೂ, ಈಡೇರಿಸುವ ಹುಸಿ ಭರವಸೆಯನ್ನು ನೀಡಿದ್ದು, ಇಂದಿನ ಈ ಪರಿಸ್ಥಿತಿಗೆ ಕಾರಣ. ಆದ್ದರಿಂದ ಮುಂದಿನ ದಿನದಲ್ಲಾದರೂ, ಹುಸಿ ಆಶ್ವಾಸನೆ ನೀಡುವುದನ್ನು ಸರಕಾರಗಳು ಬಿಡಬೇಕು. ಸದ್ಯ ಸರಕಾರ ನೌಕರರಿಗೆ ಶೇ.೮ರಷ್ಟು ವೇತನ ಹೆಚ್ಚಳಕ್ಕೂ ಒಪ್ಪಿಗೆ ನೀಡಿದೆ. ಆದರೆ ನೀತಿ ಸಂಹಿತೆಯ ಕಾರಣಕ್ಕೆ ಆದೇಶ ಹೊರಡಿಸಲು ಸಾಧ್ಯವಿಲ್ಲ ಎನ್ನುತ್ತಿದೆ.
ತಾಂತ್ರಿಕವಾಗಿ ನೋಡಿದರೆ, ಇದು ಸತ್ಯವೂ ಸಹ. ಆದ್ದರಿಂದ ಕಳೆದ ಹಲವು ವರ್ಷಗಳಿಂದ ಕಾಯುತ್ತಿರುವ ಸಿಬ್ಬಂದಿ ಇನ್ನೊಂದು ತಿಂಗಳು ಕಾಯುವುದರಲ್ಲಿ ಸಮಸ್ಯೆಯೇನು? ‘ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಎನ್ನುವ ಹಾಗೆ, ಸರಕಾರಹಾಗೂ ಸಾರಿಗೆ ನೌಕರರ ನಡುವಿನ ಹೋರಾಟದಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎನ್ನುವುದನ್ನು ಎರಡು ಕಡೆಯ ವರು ಅರ್ಥ ಮಾಡಿಕೊಳ್ಳಬೇಕಿದೆ.
ಇನ್ನು ಸಾರಿಗೆ ನೌಕರರ ಈ ಪ್ರತಿಭಟನೆಗೆ ಹಿನ್ನಡೆ ಅನುಭವಿಸಲು ಇರುವ ಮತ್ತೊಂದು ಸಮಸ್ಯೆಯೆಂದರೆ, ಅವರು ಆಯ್ಕೆ ಮಾಡಿಕೊಂಡಿರುವ ನಾಯಕತ್ವದಲ್ಲಿ. ರೈತರ ಪರ ಹೋರಾಟ ಮಾಡಿಕೊಂಡು ಬಂದಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರು ಕಳೆದ ಮೂರು ತಿಂಗಳ ಹಿಂದೆ ಇದ್ದಕ್ಕಿದಂತೆ ಸಾರಿಗೆ ನೌಕರರ ಮುಖಂಡನಾಗಿ ಹೊರಹೊಮ್ಮಿದರು.
ಕೃಷಿ ವಿರೋಧಿ ಕಾಯಿದೆ ವಿರೋಧಿಸಿ ನಡೆದ ರೈತರ ಬೃಹತ್ ಪ್ರತಿಭಟನೆಯ ಮರುದಿನ ಇದ್ದಕ್ಕಿದ್ದಂತೆ, ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷರಾದರು. ಆದರೆ ಇಷ್ಟಕ್ಕೂ ಸಾರಿಗೆ ಇಲಾಖೆ ಬಗ್ಗೆ ಕೋಡಿಹಳ್ಳಿ ಅವರಿಗೆ ಇರುವ ಜ್ಞಾನವಾದರೂ ಏನು ಎನ್ನುವ ಪ್ರಶ್ನೆಗೆ ಪ್ರತಿಭಟನಾ ನಿರತರ ಬಳಿ ಉತ್ತರವಿಲ್ಲ. ನಾಯಕತ್ವದ ಆಯ್ಕೆಯಲ್ಲಿ ಎಡವಿದರೆ, ಭವಿಷ್ಯದಲ್ಲಿ ಸಾರಿಗೆ ನೌಕರರಿಗೆಸಮಸ್ಯೆಯಾಗುತ್ತದೆ ಎನ್ನುವುದನ್ನು ಅರಿಯುವಲ್ಲಿ ನೌಕರರು ಹಿಂದೆ ಬಿದ್ದಿದ್ದಾರೆ.
ಕ್ಷೇತ್ರ ಗೊತ್ತಿಲ್ಲದೇ ಹೋರಾಟದ ಮೂಲ ಅರಿಯಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ನೀಡುವುದಾದರೆ, 80ರ ದಶಕದಲ್ಲಿ ಮುಂಬಯಿಯಲ್ಲಿ ಮಿಲ್ ಕೆಲಸಗಾರರು ಮುಷ್ಕರ ನಡೆಸಿದ್ದರು. 65 ಬಟ್ಟೆ ಗಿರಣಿಯ ಸುಮಾರು ಎರಡೂವರೆ ಲಕ್ಷ ಕೆಲಸ ಗಾರರು ದತ್ತ ಸಾಮಂತ್ ಎಂಬವರ ನೇತೃತ್ವದಲ್ಲಿ ಮುಷ್ಕರ ಹೂಡಿದ್ದರು. ವರ್ಷಕ್ಕಿಂತಲೂ ಹೆಚ್ಚು ಕಾಲ ಮುಷ್ಕರ ನಡೆಯಿತು. ಕೊನೆಗೆ ಎಲ್ಲ ಗಿರಣಿಗಳೂ ಬಾಗಿಲು ಹಾಕಿದವು.
ಕೆಲಸಗಾರರು ಬೀದಿಗೆ ಬಿದ್ದರು. ಅವರಿಗೆ ಯಾವ ಸವಲತ್ತೂ ಸಿಗಲಿಲ್ಲ. ಈ ಮುಷ್ಕರದ ನೇತೃತ್ವ ವಹಿಸಿದ್ದು ಡಾ. ದತ್ತಾಸಾಮಂತ. ಇವರು ಗಿರಣಿ ಕೆಲಸಗಾರರಾಗಿರಲಿಲ್ಲ. ಹೊರಗಿನವರಾಗಿದ್ದರು. ಅವರು ಈ ಮುಷ್ಕರಕ್ಕೆ ಮೊದಲು ಪ್ರೀಮಿಯರ್ ಕಾರ್ ಕಂಪನಿಯಲ್ಲಿ ಮುಷ್ಕರ ಹೂಡಿಸಿ ಜಯ ಸಾಧಿಸಿದ್ದರು. ಅಲ್ಲಿ ಕಂಪನಿ ಲಾಭದಲ್ಲಿತ್ತು. ಆದ್ದರಿಂದ ಇವರ ಬೇಡಿಕೆ ಸಾಧ್ಯವಾಯಿತು. ಆದರೆ ಮುಂಬಯಿಯ ಬಟ್ಟೆ ಗಿರಣಿಗಳು ದೊಡ್ಡ ಲಾಭ ಮಾಡುತ್ತಿರಲಿಲ್ಲ. ಹಾಗಾಗಿ ಇವರ ಬೇಡಿಕೆಗೆ ಒಪ್ಪಲೇ ಇಲ್ಲ. ಆದ್ದರಿಂದ ಗಿರಣಿಗಳು ಮುಚ್ಚಿದವು. ಈಗ ನಾನಿಲ್ಲಿ ಈ ಘಟನೆ ನೆನಪು ಮಾಡಿಕೊಳ್ಳಲು ಕಾರಣವೂ ಇದೇ. ದತ್ತಾ ಸಾಮಂತ ರೀತಿ ಇದೀಗ ಸಾರಿಗೆ ನೌಕರರ ನೇತೃತ್ವವನ್ನು ಕೋಡಿಹಳ್ಳಿ ವಹಿಸಿಕೊಂಡಿದ್ದಾರೆ.
ಸಾರಿಗೆ ನೌಕರರ ಸಂಘಟನೆಯಲ್ಲಿ ಒಂದು ನಾಯಕನಿಲ್ಲವೇ? ಸಾರ್ವಜನಿಕ ಸೇವೆಯಲ್ಲಿರುವ ಸಂಸ್ಥೆ ಹಾಗೂ ನೌಕರರು ಹಠಕ್ಕೆಬಿದ್ದರೆ ಸಮಸ್ಯೆಯಾಗುವುದು ಜನ ಸಾಮಾನ್ಯರಿಗೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ. ಸಾರ್ವಜನಿಕರ ಅತ್ಯಾವಶ್ಯಕ ಸೇವೆಯಾಗಿರುವ ಸಾರಿಗೆ ಸೇವೆಯಲ್ಲಿ ಇಡೀ ದೇಶಕ್ಕೆ ಕರ್ನಾಟಕದ ಸಾರಿಗೆ ಸಂಸ್ಥೆಗಳು ಮಾದರಿಯಾಗಿ ನಿಲ್ಲುತ್ತವೆ. ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕರ್ನಾಟಕ ಸಾರಿಗೆಗೆ ತನ್ನದೇಯಾದ ಸ್ಥಾನಮಾನವನ್ನು ಹೊಂದಿದೆ.
ಮಾದರಿ ಸಂಸ್ಥೆಯಾಗಿರುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ಮಾತ್ರ ವರ್ಷಕ್ಕೆ ನಾಲ್ಕು ಬಾರಿ ಮುಷ್ಕರವೆಂದು ಸೇವೆ ನಿಲ್ಲಿಸಿದರೆ, ಸಾರ್ವಜನಿಕರು ಏನು ಮಾಡಬೇಕು? ಇನ್ನು ಸರಕಾರಗಳು ನೌಕರರು ಮುಷ್ಕರಕ್ಕೆ ನಿಂತಾದ ಎಲ್ಲ ಬೇಡಿಕೆ ಈಡೇರಿ ಸುವ ಭರವಸೆ ನೀಡಿ, ಬಳಿಕ ಸುಮ್ಮನಾಗುವುದು ಸರಿಯಲ್ಲ. ಈ ರೀತಿ ವರ್ಷಕ್ಕೆ ನಾಲ್ಕು ಮುಷ್ಕರ ನಡೆಸಿ ಸಾರ್ವಜನಿಕರಿಗೆ ಸಮಸ್ಯೆ ಮಾಡುವುದಕ್ಕಿಂತ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.