ಪಾಕ ಸಾರ್ವಭೌಮತ್ವದತ್ತ ಭಾರತ ಹೆಜ್ಜೆ ಹಾಕಬೇಕು
ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ಮನೆಯೆ ಮೊದಲ ಪಾಕಶಾಲೆ ಕೂಡ. ಬಹುತೇಕ ಮನೆಗಳಲ್ಲಿ ತಾಯಿಯೇ ಮೊದಲ ಬಾಣಸಿಗಳು. ಅವಳ ಮೂಲಕವೇ ನಮಗೆ ನಾವು ತಿಂದುಣ್ಣುವ ಬಹುತೇಕ ತಿನಿಸುಗಳ, ಕುಡಿಯುವ ಕೆಲವು ಪೇಯಗಳ ಪರಿಚಯ.
ಆಕೆಯ ಒಲವಿಗೆ ಸರಿಸಾಟಿ ಇಲ್ಲದ ಕಾರಣ ಅವಳ ಕೈಯಿಂದ ತಯಾರಾದ ಅಡುಗೆ ಎಂದರೆ ದಿವ್ಯದರ್ಶನ. ಎಳೆಯದರಿಂದಲೇ ಅಂತಹ ಅಡುಗೆ ಜಿಹ್ವೆಯ ಮೂಲಕ ಮನದಲ್ಲಿ ಸ್ಥಾಪಿಸುವ ದಾಖಲೆ ಶಾಶ್ವತ. ಆ ರುಚಿಯೇ ಮುಂದೆ ಮಾನದಂಡವಾಗಿಯೂ ಬಳಸಲ್ಪಡುತ್ತದೆ. ಅದನ್ನು ಸಂಗಾತಿಯ ಮುಂದೆ ಹೇಳುವಾಗ ಹುಷಾರಾಗಿ ಹೇಳಬೇಕು!
ನನ್ನ ನಾಲ್ಕನೆಯ ವಯಸ್ಸಿನಲ್ಲಿ ಅಮ್ಮ ಇದ್ದಿಲೊಲೆಯ ಮೇಲೆ ಮಾಡಿ ಬಡಿಸುತ್ತಿದ್ದ ಚಪ್ಪರದವರೆಕಾಯಿಯ ಹುಳಿಯ ನೆನಪು ಇನ್ನೂ ಮಾಸಿಲ್ಲ. ಅದಕ್ಕೆ ಎತ್ತಿನ ಗಾಣದಲ್ಲಿ ಗೆದ ಹುಚ್ಚೆಳ್ಳೆಣ್ಣೆಯ ಪ್ರೋಕ್ಷಣೆಯೇನು! ಆಹಾ! ಆ ರುಚಿ ಮತ್ತಿನ್ನೆಂದೂ ಸವಿಯಲು ಸಿಗಲೇ ಇಲ್ಲ. ರಸಾನುಭವದ ಪರಿಯೇ ಹಾಗೇನೊ! ಅದೆ ಒಂದು ಕ್ಷಣ. ಇನ್ನೆಂದೊ ಒಂದರೆಕ್ಷಣ. ಹೇರಳವಾಗಿ ಸಿಕ್ಕಿಬಿಟ್ಟರೆ ಅರಗಿಸಿಕೊಳ್ಳದೆ ಕಕ್ಕಬೇಕಾದೀತು!
ತೊಂಭತ್ತರ ದಶಕದಲ್ಲಿ ಆರಂಭವಾದ ಆರ್ಥಿಕ ಉದಾರೀಕರಣ ವಿಶ್ವವನ್ನು ಮತ್ತೆ ಮತ್ತೆ ಗೊಟಾಯಿಸಲಾ ರಂಭಿಸಿತು. ಅದರ ಬೆನ್ನ ಹುಟ್ಟು ಪಡೆದ ಡಿಜಿಟಲ್ ಕ್ರಾಂತಿ ಅದನ್ನು ರಭಸದಿಂದ ಕಡೆಯುತ್ತಾ ಬಂದಿದೆ. ಆದಿಶೇಷನೇ ಹಗ್ಗವಾಗಿ ಬಳಸಲ್ಪಟ್ಟ ಮಂಥನದಿಂದ ಹೊರಹೊಮ್ಮಿದ ಒಳ್ಳೆಯ ಉತ್ಪನ್ನಗಳೂ ಅನೇಕ. ಜಗತ್ತಿನ ಜನಪ್ರಿಯ ತಿನಿಸುಗಳ ತಯಾರಿಕಾ ವಿಧಾನ ಕೈಬೆರಳ ತುದಿಯಲ್ಲಿ ಲಭ್ಯವಾಗಿದ್ದೂ ಒಂದು. ಕೋವಿಡ್-19 ಜನರ ಕಾಲನ್ನು ಮುರಿದು ಗೃಹಬಂಧನದ ಶಿಕ್ಷೆಯನ್ನು ವಿಧಿಸಿದ ನಂತರ ಆ ತಿನಿಸುಗಳನ್ನು ತಯಾರಿಸುವ ಪ್ರಯೋಗಗಳು ವ್ಯಾಪಕವಾಗಿ ನಡೆಸಲ್ಪಟ್ಟವು.
ಇತ್ತೀಚಿಗೆ ಕೆನಡಾದಲ್ಲಿ ನಿಧನರಾದ ನನ್ನ ಮಿತ್ರ ಲೇಖಕ, ನಾಟಕಕಾರ, ಮತ್ತು ತಿನಿಸುಗಳ ಪರಿಣತ ಬೈರನ್ ಅಯನೊಗ್ಲು ಹುಟ್ಟಿದ್ದು ಇಸ್ತಾಂಬುಲ್‌ನಲ್ಲಿ, ನೆಲೆಸಿದ್ದು ಮಾಂಟ್ರಿಯಲ್‌ನಲ್ಲಿ. ವಿವಿಧ ಬಗೆಯ ತಿನಿಸುಗಳನ್ನು ಟೇಬಲ್ ಮೇಲೆ ಹರಡಿ, ಆತನ ಕಣ್ಣು ಕಟ್ಟಿ ಅವುಗಳನ್ನು ತಿನ್ನಲು ಬಿಟ್ಟರೆ ರುಚಿಮಾತ್ರದಿಂದಲೇ ಪ್ರತಿಯೊಂದು ತಿನಿಸಿನ ಉಗಮ, ಇತಿಹಾಸದ ಕುರಿತು ಹೇಳಬಲ್ಲಷ್ಟು ಸಾಮರ್ಥ್ಯ ಬೈರಾನ್‌ಗಿತ್ತು.
ಏಡ್ಸ್‌ ಮಾರಿ ಜಗತ್ತನ್ನು ನಡುಗಿಸಿದ ಹೊಸತರಲ್ಲಿ ಲೈಂಗಿಕ ಚಟುವಟಿಕೆಯಿಂದ ಜನ (ತಾತ್ಕಾಲಿಕವಾಗಿಯಾದರೂ)  ದೂರವಾದರು ಮತ್ತು ಮನಸ್ಸನ್ನು ಬೇರೆಡೆ ತಿರುಗಿಸಲು ಜಿಹ್ವಾ ಚಾಪಲ್ಯಕ್ಕೆ ಬಲಿಯಾದರು ಎಂಬುದು ಬೈರಾನ್ನ ವಿಚಾರಧಾರೆ. ಅಂಥದೇ ವಾತಾವರಣವನ್ನು ಕರೋನಾ ವೈರಸ್ ಸೃಷ್ಟಿಸಿದೆ. ಅಡುಗೆಮನೆಯ ಪಾತ್ರೆಗಳ ಶಬ್ದ ಹೆಚ್ಚಿದೆ. ಜಾಗತೀಕರಣಕ್ಕೆ ಮೊದಲು ನಾನು ಮದರಾಸ್‌ನಲ್ಲಿ ಉದ್ಯೋಗದಲ್ಲಿದ್ದೆ. ಪತ್ರಿಕಾರಂಗಕ್ಕೆ ಕಾಲಿಡುವ ಮೊದಲು ನಾನು ನಿರತನಾದ ಮೊದಲ ಉದ್ಯೋಗವದು. ಆಯ್ದ ಮೂರ್ನಾಲ್ಕು ಹೋಟೆಲ್‌ಗಳಲ್ಲಷ್ಟೆ ಊಟ ಮಾಡುತ್ತಿದ್ದೆ.
ಅವುಗಳಲ್ಲಿ, ಪ್ಯಾರೀಸ್ (’)ನಲ್ಲಿದ್ದ ಗಂಗಾ ಒಂದು.  ದುಬಾರಿ ಹೊಟೆಲ. ಇಡೀ ಮದರಾಸಿನಲ್ಲಿ ಬಿಸಿಬೇಳೆಭಾತ್ ಸಿಗುತ್ತಿದ್ದ ಏಕೈಕ ರೆಸ್ಟೋರೆಂಟ್ ಅದು. ಅಂಗಾರ-ಅಕ್ಷತೆ ಧರಿಸಿದ ಅದರ ಮಾಧ್ವ ಸಂಸ್ಥಾಪಕರ ಫೋಟೊವನ್ನು ತೂಗು ಹಾಕಲಾಗಿತ್ತು. ನನ್ನ ಸಹೋದ್ಯೋಗಿಗಳೆಲ್ಲರೂ ತಮಿಳರು. ಅವರ‍್ಯಾರಿಗೂ ಬಿಸಿಬೇಳೆ ಭಾತ್ ಪರಿಚಯವಿರಲಿಲ್ಲ. ಗಂಗಾ ಅವರೆಲ್ಲರಿಗೂ ದೂರ. ಹಾಗಾಗಿ ಅವರಿಗೆ ಬಿಸಿಬೇಳೆ ಭಾತ್ ಪರಿಚಯಿಸಲು ನಾನೇ ಸೌಟು ಹಿಡಿಯಬೇಕಾಯಿತು.
ಒಂದು ಭಾನುವಾರ, ನನ್ನ ಬಾಸ್ ವಿಜಯ್‌ಕುಮಾರ್ ಅವರೂ ಸೇರಿದಂತೆ ನಾವೊಂದು ಎಂಟು ಮಂದಿ ಬೈಕುಗಳಲ್ಲಿ ಮಹಾಬಲಿಪುರಂಗೆ ಹೋಗಿ ಬರಲು ನಿರ್ಧರಿಸಿದೆವು. ವಿಜಯ್ ಕುಮಾರ್ ಸೀಮಿತವಾಗಿ ಬಳಸುತ್ತಿದ್ದ ಒಂದು-ಟ್ಇತ್ತು. ಅ ನಾನು ಭಾತ್ ತಯಾರಿಸುವುದೆಂದು ನಿರ್ಧಾರವಾಯಿತು. ಸಣ್ಣಪುಟ್ಟ ಸಹಾಯ ಮಾಡುವುದಕ್ಕೆ ನನ್ನ ಜತೆಯಿದ್ದ ಮುರುಳಿ ಹನ್ನೊಂದು ಗಂಟೆಗೆಲ್ಲ ನಿದ್ರೆಗೆ ಜಾರಿದ. ನಡು ರಾತ್ರಿ ನನ್ನ ಕಾರ್ಯಾಚರಣೆ. ಮೈಗಳ್ಳ ಮುರುಳಿಯನ್ನು ಶಪಿಸುತ್ತಾ ತರಕಾರಿ ಹೆಚ್ಚಿಕೊಂಡೆ.
ಸುಮಾರು ಮೂರು ಗಂಟೆಗೆ ಬೃಹತ್ ಸವಾಲೊಂದು ಎದುರಾಯಿತು. ಬೇಕೇ ಬೇಕಿದ್ದ ದೊಡ್ಡ ಗಾತ್ರದ ಪಾತ್ರೆಯೇ ಕಾಣೆ. ಆ ವೇಳೆಯಲ್ಲಿ ಯಾರನ್ನು ಮೊರೆಹೋಗುವುದು. ವಿಧಿಯೇ ಇಲ್ಲದೆ ಕಿರಿ ದಾದ ಬಾಯಿಯ ಸಾಧಾರಣ ಗಾತ್ರದ ಸ್ಟೀಲ್ ಬಿಂದಿಗೆ ನನ್ನರಕ್ಷಣೆಗೆ ಎದ್ದು ನಿಂತಿತು. ಸೌಟನ್ನಾಡಿಸುವುದು ಕಷ್ಟ. ನನ್ನ ಲೆಕ್ಕಾಚಾರ ತಪ್ಪಿತು. ಬ್ರಾಹ್ಮೀ ಮುಹೂರ್ತದಲ್ಲಿ ಏನು ಮಾಡಬೇಕೊ ಅದನ್ನು ಮಾಡಿದರೆ ಸರಿ. ಬೈಕಿನ ಹಿಂಭಾಗಕ್ಕೆ ಬಿಂದಿಗೆ ಯನ್ನು ಕಟ್ಟಿ ಮಹಾಬಲಿಪುರಂಗೆ ಹೋಗಿದ್ದಾಯಿತು.
ಸಾಧಾರಣ ರುಚಿಯ ಬಿಸಿಬೇಳೆಭಾತ್. ಅದರ ಬಣ್ಣವೋ ಆ ಬಲಿಚಕ್ರವರ್ತಿಗೇ ಪ್ರೀತಿ. ಅದೇನು ಬರಗೆಟ್ಟಿ ದ್ದರೊ, ನನ್ನಸಹೋದ್ಯೋಗಿಗಳು ಚಪ್ಪರಿಸಿಕೊಂಡು ಹೊಡೆದರು. ಅದೇ ಬಿಸಿಬೇಳೆ ಭಾತ್‌ನೊಂದಿಗೆ ಅವರ ಮೊದಲ ಅನುಭವ. ಅದರ ರುಚಿ ಅವರ ಮನದಲ್ಲಿ ಸ್ಥಾಯಿಯಾಗಿದ್ದು ಬಿಸಿಬೇಳೆ ಭಾತ್ ಅಂದರೆ ವಿಜಯೇಂದ್ರನದ್ದು ಎನ್ನುವ ಭಾವ ಮೂಡಿದ್ದರೂ ಆಶ್ಚರ್ಯವಿಲ್ಲ. (ಚಲನಚಿತ್ರದ ಗೀತೆಯನ್ನು ಹಾಡುವ ಗಾಯಕ-ಗಾಯಕಿಯರ ಹಾಡು ನಮ್ಮಲ್ಲಿ ಮನೆ ಮಾಡುತ್ತದೆ. ಆ ನಂತರ ಅದನ್ನು ಬೇರೆ ಯಾರೇ ಹಾಡಿದರೂ ಅದನ್ನು ನಾವು ಕೇಳುವಾಗ ಮನದ ಅದರ ಮೂಲರೂಪ ಗುಯ್ ಗುಡುತ್ತಿರುತ್ತದೆ, ಅನಿರ್ಯಾತವಾಗಿ ಅದರೊಟ್ಟಿಗೆ ಹೋಲಿಕೆ ನಡೆಯುತ್ತಿ ರುತ್ತದೆ.) ಆ ನಂತರದ ವರ್ಷಗಳಲ್ಲಿ ಬಿಸಿಬೇಳೆ ಭಾತ್ ಸಾರ್ವತ್ರಿಕ ವಾಗಿದ್ದು ನನ್ನ ಬಿಸಿಬೇಳೆ ಭಾತನ್ನು ಅಳತೆಗೋ ಲಾಗಿ ಬಳಸಿದ್ದರೆ, ನನ್ನ ಜನ್ಮ ಜಾಲಾಡುವಂತೆ ಬೈದುಕೊಂಡಿರಲಿಕ್ಕೂ ಸಾಕು.
ಬಿಸಿಬೇಳೆ ಭಾತ್‌ನ ನೈಜ ರುಚಿ ಅವರ ಕಹಿನೆನಪನ್ನು ಮರೆಸಿದ್ದರೆ ನನಗೆ ಅದಕ್ಕಿಂತಾ ಪುಣ್ಯ ಬೇಡ. ಉದ್ಯೋಗನಿಮಿತ್ತ ಹುಟ್ಟೂರಿ ನಿಂದ ದೂರ ಹೋಗುವ ಅವಿವಾಹಿತರು ಒಂದು ರೀತಿಯಲ್ಲಿ ದುಂಬಿಯಂತೆ. ತಮ್ಮ ಹೊಟ್ಟೆಪಾಡು ಮುಖ್ಯ ಉದ್ದೇಶವಾದರೂ, ಅದನ್ನು ನೀಗಿಸುವಲ್ಲಿ ಪರಾಗವಾಹಕ ದುಂಬಿಯಂತೆ ತಮ್ಮ ಹುಟ್ಟೂರಿನ ತಿನಿಸುಗಳನ್ನು ಬೇರೊಂದು ಊರಿನಲ್ಲಿ ಜನಪ್ರಿಯ ಗೊಳಿಸಬಲ್ಲರು. ಬಿಸಿಬೇಳೆ ಭಾತ್‌ನ ಪರಿಚಯ ವಿರದ ಮದರಾಸಿನಲ್ಲಿ ಅದು ಹೇಗೊ ಪರಾಟ ಜನಪ್ರಿಯತೆ ಪಡೆದುಕೊಂಡಿತ್ತು.
ಯಾವುದೇ ಪುಟ್ಟ ಉಡುಪಿ ಹೊಟೆಲ್ ನಗಲೀ, ರಸ್ತೆಬದಿ ಯಗಲೀ ಅದು ಬೆಳ್ಳಂಬೆಳಿಗ್ಗೆಯೇ ಲಭ್ಯ. (ನಾನು ತಿಂದದ್ದು ಅಪರೂಪ.) ಇಡ್ಲಿ-ವಡೆ- ಪೊಂಗಲ-ದೋಸೆಗೆ ಹೊಂದಿಕೊಂಡ ಮದರಾಸಿಗರು ಪರಾಟಕ್ಕೆ ಒಗ್ಗಿರುವುದಕ್ಕೂ ಅವರ ಹಿಂದಿ-ವಿರೋಧಿಧೋರಣೆಗೂ ತಾಳೆಯಾಗುವುದಿಲ್ಲ.
ಇಊSಐನಲ್ಲಿ ವಿಜ್ಞಾನಿಯಾಗಿದ್ದ ನನ್ನ ಹಿರಿಯ ಮಿತ್ರ- ಈಗಿಲ್ಲ – ಪ್ರಹ್ಲಾದ್ ದಾನಿ ಅವರ ಸಂಶೋಧನೆಯ ಪ್ರಕಾರಮಹಾಭಾರತದ ಕಾಲದಿಂದಲೂ ದಾಲ-ರೋಟಿ ದೇಶದ (ಬಹುಸಂಖ್ಯಾತರ) ಮುಖ್ಯ ಆಹಾರಕ್ರಮವಾಗಿದೆ. ಎಷ್ಟೆ ಪರಕೀಯರ ದಾಳಿಗೊಳಗಾಗಿ, ನೂರಾರು ವರ್ಷ ಅವರ ದೌರ್ಜನ್ಯಕ್ಕೊಳಗಾದ ಭಾರತೀಯರ ಆಹಾರನಿಷ್ಠೆ ಅಚಲ ವಾಗಿರುವುದು ವ್ಯಕ್ತಿಗತವಾಗಿಯೂ, ದೇಶದ ಸಾಂಸ್ಕೃತಿಕ ಪರಂಪರೆಯ ಒಟ್ಟಾರೆ ಹಿತದೃಷ್ಟಿಯಿಂದಲೂ ಮುಖ್ಯವಾಗುತ್ತದೆ.
ಪಾಕಶಾಸ್ತ್ರವೇ ಮೂಲ ಹಾಗೂ ಅತ್ಯಂತ ಪುರಾತನ ಕಲಾಪ್ರಕಾರ. ಹಳೆಯ ಬೇರು, ಹೊಸ ಚಿಗುರೆಂಬ ನೀತಿಯನ್ನು ಗಟ್ಟಿಗೊಳಿ ಸುವ ರೀತಿಯಲ್ಲಿ ಆಹಾರಕ್ರಮ ಆವಿಷ್ಕಾರ ಕಾಣಬೇಕು. ದೇಶದ ಬಹುರೂಪಿತ್ವ ಜನರ ಬದುಕಿನ ಎಳೆ ಎಳೆಯಲ್ಲೂ ಕಾಣಸಿಗು ತ್ತದೆ. ಊಟದ ವಿಷಯದಲ್ಲಂತೂ ಕೇಳುವ ಹಾಗೇ ಇಲ್ಲ. ಬಹುರೂಪೀ ಆಹಾರ ಪರಂಪರೆಯನ್ನು ಪೋಷಿಸಿಕೊಂಡು ಬಂದಿರುವುದೇ 1.ನಮ್ಮ ಜಾತಿ ವ್ಯವಸ್ಥೆ2.ಗ್ರಾಮೀಣ ಜೀವನಕ್ರಮ.
ಜಾತಿ ರಾಜಕಾರಣದ ವ್ಯಾಪಕ ವಿಷಮತೆಯಿಂದ ಜಾತಿ ವ್ಯವಸ್ಥೆಯನ್ನು ವಿಮುಕ್ತಿಗೊಳಿಸಿದಲ್ಲಿ ಅದು ಸಂಸ್ಕೃತಿಯ ಬೇರುಗಳನ್ನು ಭದ್ರಗೊಳಿಸಲು ಸಹಾಯವಾಗಬಲ್ಲದು. ಗ್ರಾಮೀಣ ಜನತೆಯ ಅಭಿವೃದ್ಧಿಯೆಂದರೆ ವಿವೇಚನಾ ಶೂನ್ಯ ನಗರೀಕರಣವಲ್ಲ. ಗ್ರಾಮೀಣ ಸೊಗಡನ್ನು ಸಂರಕ್ಷಿಸಿ ಕೊಂಡೇ ಗ್ರಾಮಸ್ಥರ ಆರ್ಥಿಕ ಸಬಲತೆಯತ್ತ ಹೆಜ್ಜೆ ಹಾಕಬೇಕು. ದೇಶವನ್ನು ಆರ್ಥಿಕ ದಾಸ್ಯಕ್ಕೆ ಮತ್ತೆ ದೂಡದಿರಲು ಇವೆರಡನ್ನೂ ಜರೂರಾಗಿ ಮಾಡಬೇಕಿದೆ.
ಕೋವಿಡ್ ಕಾರಣದಿಂದ ಬೀದಿಗೆ ಬಿದ್ದ ಕೋಟ್ಯಂತರ ವಲಸೆ ಕಾರ್ಮಿಕರ ಅನೂಹ್ಯ ಸಂಕಷ್ಟ ಕುಲಕಸುಬುಗಳ ಪ್ರಾಮುಖ್ಯತೆ ಯನ್ನೂ, ಗ್ರಾಮೀಣ ಬದುಕಿನ ಅನಿವಾರ್ಯತೆಯನ್ನೂ ಮತ್ತೆ ವೇದಿಕೆಯ ಮಧ್ಯಕ್ಕೆ ತಂದು ನಿಲ್ಲಿಸಿದೆ. ಜಾತಿಯ ಅನಿಷ್ಟ ಮುಖಕ್ಕೆ ಮಸಿ ಬಳಿದು, ಜಾತಿಯ ಮೂಲಬಲವಾದ ಪರಿಣತಿ, ಸಹಕಾರ, ಸಹಬಾಳ್ವೆಗಳಿಗೆ ಇಂಬು ಕೊಟ್ಟಲ್ಲಿ ಗ್ರಾಮೀಣ ಬದುಕನ್ನು ಸಹ್ಯವಾಗಿಸಲು ಸಾಧ್ಯ.
ಜಾಗತೀಕರಣದಿಂದ ಇನ್ನಷ್ಟು ಅಗಲವಾಗಿ ಬಾಯ್ಬಿಟ್ಟಿರುವ ಬಡವ-ಶ್ರೀಮಂತರ ನಡುವಿನ ಕಂದಕವನ್ನು ಕಿರಿದಾಗಿಸುವಲ್ಲಿ ಈ ಕ್ರಮ ಅವಶ್ಯಕ. ಕುಲಕಸುಬು ಈ ನೆಲದ ತಾಕತ್ತು, ಕೃಷಿಪ್ರಾಧಾನ್ಯ ವ್ಯವಸ್ಥೆಯ ಬೆನ್ನೆಲುಬು. ಕಾರಣ ಯಾವುದೇ ಇರಲಿ, ಕಳೆದ ಮೂರ್ನಾಲ್ಕು ಶಕಗಳಲ್ಲಿ ರಾಗಿ ಜನಪ್ರಿಯತೆ ಕಂಡುಕೊಳ್ಳುತ್ತಿರುವುದು ಸಂತಸದ ವಿಷಯ. ರಾಗಿ ಮುದ್ದೆಯ ಹಿರಿಮೆಯನ್ನು ವಿಂಧ್ಯ ಪರ್ವತದಾಚೆಗೂ ತಲುಪಿಸಿದ ಕೀರ್ತಿ ಮಾಜಿ ಪ್ರಧಾನಿ ಗೌಡರದ್ದು.
ಅವರನ್ನು ಮುದ್ದೆಯ ರಾಯಭಾರಿ ಎಂದರೂ ನಡೆಯುತ್ತೆ. ನನಗಂತೂ, ಹಿಟ್ಟಿದ್ದರೆ ಅನ್ನವೇ ಬೇಡ. ಆದರೆ, ಸುಖದೌತಣಕ್ಕೆ ಹಿಟ್ಟೊಂದೇ ಸಾಲದು. ಅದಕ್ಕೆ ತಕ್ಕ ಬಸ್ಸಾರು ಅಥವಾ ಸೊಪ್ಪಿನ ಸಾರು ಇದ್ದರಷ್ಟೇ ರುಚಿ. ಜತೆಗೊಂದೆರಡು ಸುಟ್ಟ ಉದ್ದಿನ ಹಪ್ಪಳವಿದ್ದರೆ ಸುಗ್ರಾಸ ಅದಕ್ಕಿಂತ ಸುಗ್ರಾಸ ಭೋಜನ ಬೇಕೇ? ನನ್ನಾಕೆ ಗುಜರಾತಿ. ಮುದ್ದೆ ಕಟ್ಟಲು ಬಾರದು. ಮುದ್ದೆ ಕಟ್ಟದ ಹಿಟ್ಟನ್ನು ತಿಂದರೂ ಅದೇ ರುಚಿ, ಆದರೆ ಮನಸ್ಸು ಸಂತೃಪ್ತಿ ಕಾಣುವುದಿಲ್ಲ. ಅಂತರಪ್ರಾಂತೀಯ ದಂಪತಿಗಳಿಂದ ಆಹಾರದ ವೈವಿಧ್ಯತೆಗೆ ಧಕ್ಕೆ ಆಗೇ ಆಗುತ್ತೆಂದೇನಿಲ್ಲ.
ದೇಶಸ್ಥ ಮಾಧ್ವನಾದ ನನ್ನ ಹಿಂದಿನವರ ಮೂಲ ಮಹಾರಾಷ್ಟ್ರ. ಮಹಾರಾಷ್ಟ್ರದ ಅಡುಗೆಗೂ, ಪಕ್ಕದ ಗುಜರಾತ್ ಅಡುಗೆಗೂ ಸ್ವಲ್ಪ ಹೋಲಿಕೆ ಇದೆ. ಉದಾಹರಣೆಗೆ ನಮ್ಮ ಕಟ್ಟು ಸಾರಿಗೂ, ಅವರ ಒಸಾಮಾನ್ಗೂ ತಾಳೆಯಾಗುತ್ತೆ. (ಅದನ್ನು ನಾನು ಜೈ ಸಾಲ್ಮೇರ್ ಎಂದು ತಮಾಷೆಗಾಗಿ ಕರೆಯುತ್ತೇನೆ.) ರಾಗಿ ಜನಪ್ರಿಯತೆ ಗಾಳಿಸುವುದರಿಂದ ರೈತನಿಗಷ್ಟೇ ಲಾಭ ವಲ್ಲ, ಬೆಳಗ್ಗೆ ರಾಗಿ ಅಂಬಲಿ ಕುಡಿದ ಜನರು ಪಾಶ್ಚಾತ್ಯ ಆಹಾರ ಪದ್ಧತಿಗೆ ಬಲಿಯಾಗಲಾರರು. ನನ್ನದೊಂದು ಬೃಹದಾಶೆ.
ಭಾರತದ ಪಾಕ ಪದ್ಧತಿಗೆ ಇಡೀ ಪ್ರಪಂಚವನ್ನು ದಾಸ್ಯ ಕ್ಕೊಳಗಾಗಿಸುವ ಶಕ್ತಿಯಿದೆ. ಆ ಶಕ್ತಿಯ ಸಂಪೂರ್ಣ ಲಾಭವನ್ನು ಪಡೆದುಕೊಂಡು ವಿಶ್ವವನ್ನು ತನ್ನೆಡೆ ಆಕರ್ಷಿಸಿ ಸಮಸ್ತ ಜನತೆಯ ಜೀವಕೋಶಗಳಲ್ಲಿ ಸಾತ್ವಿಕ ಶಕ್ತಿಯನ್ನು ತುಂಬಬೇಕು. ಆ ಗುರಿಯನ್ನು ಮುಟ್ಟಲು ನವಮಾಧ್ಯಮ ಹೇಳಿಮಾಡಿಸಿದಂತಿದೆ.