ಐಪಿಎಲ್‌: ಕಿರುತೆರೆಯ ಹಾಟ್‌ ಫೇವರೇಟ್ !
ಪ್ರಚಲಿತ
ಹನಮಂತ ಸಿಮಿಕೇರಿ
ಐಪಿಎಲ್‌ನ ಪ್ರಭಾವ ಅಂತಿಂಥದ್ದಲ್ಲ. ಅದರ ಅಗಾಧತೆಯನ್ನು ನೀವು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಬಯಸಿದರೆ, ಟಿವಿ ಹಾಗೂ ಐಪಿಎಲ್ ಲೀಗ್‌ನ ಡಿಜಿಟಲ್ ಎಂಗೇಜ್ ಮೆಂಟ್‌ನಲ್ಲಿ ಕಂಡುಬರುವ ಅಂಕಿ ಅಂಶಗಳನ್ನು ನೋಡಲೇಬೇಕು.
ಮೊದಲ10ವರ್ಷಗಳ ಕಾಲ ಸೋನಿಯಲ್ಲಿ ಪ್ರಸಾರವಾದ ಐಪಿಎಲ್ , ಬಳಿಕ ಸ್ಟಾರ್ ಟಿವಿ ನೆಟ್‌ವರ್ಕ್‌ಗೆ ವರ್ಗಾವಣೆಗೊಂಡಿತು. ಅಂದಿನಿಂದ, ಯಾವುದಕ್ಕೂ ಸರಿಸಾಟಿಯಿಲ್ಲದ ವೀಕ್ಷಕರ ಬೆಳವಣಿಗೆ ಐಪಿಎಲ್‌ನಲ್ಲಿ ಕಂಡುಬಂತು. 2017 ರಿಂದ 2020 ರವರೆಗೆ ಐಪಿಎಲ್ ಜನಪ್ರಿಯತೆಯಲ್ಲಿ ಶೇ.54ರಷ್ಟು ಬೆಳವಣಿಗೆ ಕಂಡುಬಂದಿದೆ. ಉದಯ ಶಂಕರ್ ಮತ್ತು ಸ್ಟಾರ್ ಇಂಡಿಯಾದ ಅಂದಿನ ಸಿಇಒ ಸಂಜಯ್ ಗುಪ್ತಾ ಅವರು5ವರ್ಷಗಳ ಕಾಲ ಮಾಧ್ಯಮ ಹಕ್ಕುಗಳಿಗಾಗಿ 16000 ಕೋಟಿ ರು. ಚೆಕ್ ನೀಡಿ ಐಪಿಎಲ್ ಪ್ರಾಯೋಜಕತ್ವವನ್ನು ಖರೀದಿಸಿದಾಗ, ಇಡೀ ಭಾರತೀಯ ಮಾಧ್ಯಮ ಉದ್ಯಮಕ್ಕೆ ವಿಸ್ಮಯ ಮತ್ತು ಆಶ್ಚರ್ಯವನ್ನುಂಟು ಮಾಡಿತ್ತು.
ಈಗ ಐಪಿಎಲ್14ರ ಹೊಸ್ತಿಲಲ್ಲಿ, ಈ ಸಂಖ್ಯೆಗಳು ಏರುತ್ತಿರುವುದು ಮತ್ತಷ್ಟು ಸ್ಪಷ್ಟವಾಗಿ ಕಾಣುತ್ತಿವೆ. ಭಾರತದಲ್ಲಿ ಕಳೆದ ವರ್ಷ, ಗೂಗಲ್‌ನಲ್ಲಿ ಕರೋನಾ ವೈರಸ್‌ಗಿಂತಲೂ ಹೆಚ್ಚು ಐಪಿಎಲ್ ಬಗ್ಗೆ ಹುಡುಕಾಟವಾಗಿತ್ತು. ಟಿವಿಯಲ್ಲಿ 400 ಬಿಲಿಯನ್ ನಿಮಿಷಗಳ ವೀಕ್ಷಣೆ ಹೊಂದಿದ ಭಾರತದ ಮೊದಲ ಈವೆಂಟ್ ಎಂಬ ಖ್ಯಾತಿಯನ್ನು ಐಪಿಎಲ್ ಪಡೆದಿದೆ. ಐಪಿಎಲ್‌ನ್ನು ಹಳ್ಳಿ ಹೈದನಿಂದ ಹಿಡಿದು ಪೇಟೆಯ ಪ್ರಬುದ್ಧನೂ ಸಹ ನೊಡುತ್ತಾನೆ.
ಸಾಮಾನ್ಯ ಮನರಂಜನಾ ಚಾನೆಲ್‌ಗಳು ನಿಷ್ಠಾವಂತ ವೀಕ್ಷಕರ ನೆಲೆಯನ್ನು ಹೊಂದಿರುತ್ತದೆ. ಆದರೆ, ಭಾರತದಲ್ಲಿ ಸಾಮಾನ್ಯ ವಾಗಿ ಒಂದೇ ಟಿವಿಯುಳ್ಳ ಮನೆಗಳಿರುವುದರಿಂದ, ಐಪಿಎಲ್ ಸಮಯದಲ್ಲಿ ಟಿವಿ ರಿಮೋಟ್‌ಗಾಗಿ ಜಗಳ ನಡೆಯುವುದೂ ಇದೆ. ಕೆಲವೆಡೆ ಪುರುಷರು ಐಪಿಎಲ್ ನೋಡುತ್ತಾರಾದರೆ, ಇನ್ನೂ ಕೆಲವೆಡೆ ಐಪಿಎಲ್ ಒಂದು ಸಂಪೂರ್ಣ ಕುಟುಂಬದ ನೆಚ್ಚಿನ ಟಿವಿ ಈವೆಂಟ್ ಎಂಬಂತೆ ವೀಕ್ಷಿಸಿ, ಇವರೂ ಸಹ ಐಪಿಎಲ್ ವರ್ಗದವರು ಎಂದೆನಿಸಿಕೊಳ್ಳುತ್ತಾರೆ.
ಐಪಿಎಲ್ 2020 ಎಲ್ಲಾ ಟೆಲಿವಿಷನ್ ರೇಟಿಂಗ್ ದಾಖಲೆಗಳನ್ನು ಮೀರಿ, 10.4 ರೇಟಿಂಗ್ ಅನ್ನು ಪಡೆದಿದೆ ಮತ್ತು158ಮಿಲಿಯನ್ ಪ್ರೇಕ್ಷಕರನ್ನು ತಲುಪುವುದರೊಂದಿಗೆ ಸಾರ್ವಕಾಲಿಕ ಹೆಚ್ಚು ವೀಕ್ಷಣೆ ಪಡೆದ ದಾಖಲೆಯನ್ನು ಐಪಿಎಲ್ ಮಾಡಿತ್ತು.125ಕ್ಕೂ ಹೆಚ್ಚು ಜಾಹೀರಾತುದಾರರು ಪ್ರತಿವರ್ಷ ದೂರದರ್ಶನದಲ್ಲಿ ತಮ್ಮ ಪ್ರಮುಖ ಉತ್ಪನ್ನಗಳ ಪ್ರಚಾರಕ್ಕಾಗಿ ಐಪಿಎಲ್‌ನ್ನು ಆಯ್ಕೆ ಮಾಡುತ್ತಾರೆ.
ಡ್ರೀಮ್ 11, ಬೈಜೂಸ್ ನಂತಹ ಪ್ರಮುಖ ಕಂಪನಿಗಳು 250-400 ಕೋಟಿಯನ್ನು ಕೇವಲ ಐಪಿಎಲ್ ಸಂದರ್ಭದಲ್ಲಿ ಬಳಸುತ್ತವೆ. ಫೋನ್ ಪೇ, ಎಂಆರ್‌ಎಫ್ ಅಥವಾ ಪಾಲಿಸಿ ಬಜಾರ್‌ನವರು ಸಹಾಯಕ ಪ್ರಾಯೋಜಕರಾಗಿ 150-200 ಕೋಟಿ ರು. ಖರ್ಚನ್ನು ಮಾಡುತ್ತಾರೆ. ಸ್ಟಾರ್ ಟಿವಿ ಅವರು ಪ್ರಸಾರವನ್ನು ವಹಿಸಿಕೊಂಡಾಗಿನಿಂದ ಐಪಿಎಲ್ ಇನ್ನಷ್ಟು ಸ್ಥಳೀಯವಾಗಿ ಜನಪ್ರಿಯ ಗೊಂಡಿದೆ.
ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿ ಸುಮಾರು ಶೇ.80ಐಪಿಎಲ್ ವೀಕ್ಷಣೆ ಪ್ರಾದೇಶಿಕ ಭಾಷೆಗಳಲ್ಲಿದೆ. ಇನ್ನೂ ಹೆಚ್ಚು ಆಸಕ್ತಿ ದಾಯಕ ಸಂಗತಿ ಎಂದರೆ , ಶೇ.58 ಮಹಿಳಾ ವೀಕ್ಷಕರು 18-29 ವರ್ಷ ವಯಸ್ಸಿನವರಾಗಿದ್ದಾರೆ. ಐಪಿಎಲ್ ಅಸಂಖ್ಯಾತ ಅಂಕಿ ಅಂಶಗಳು ಮತ್ತು ದೃಷ್ಟಿಕೋನಗಳನ್ನು ಹುಟ್ಟುಹಾಕುವ ವಿಷಯವಾಗಿದೆ. ಐಪಿಎಲ್ ಇಂದು ಭಾರತದ ಅಗ್ರಗಣ್ಯ ಕ್ರೀಡಾ ಬ್ರ್ಯಾಂಡ್ ಆಗಿದೆ ಎಂಬುದು ಸತ್ಯ. ದೂರದರ್ಶನ ಹಾಗೂ ಡಿಜಿಟಲ, ಎರಡರಲ್ಲೂ ಐಪಿಎಲ್ ತನ್ನದೇ ಆದ ವೀಕ್ಷಕರ ವೃಂದ ವನ್ನು ಹೊಂದಿದೆ. ಐಪಿಎಲ್ 14 ಇನ್ನೂ ಹೆಚ್ಚಿನ ಮತ್ತು ದೊಡ್ಡ ದಾಖಲೆಗಳನ್ನು ಬರೆಯುವುದರಲ್ಲಿ ಸಂದೇಹವಿಲ್ಲ.