ಹಂಗಾದ್ರೆ ಹಿಂಗೆ, ಹಿಂಗಾದ್ರೆ ಹಂಗೆ…
ನಾಡಿಮಿಡಿತ
ವಸಂತ ನಾಡಿಗೇರ
ಕರೋನಾದ ಈ ಕಾಲಘಟ್ಟದಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಆ ನಿಯಮ, ಈ ನಿಯಮ, ದಂಡ ಇತ್ಯಾದಿ ಸಂಗತಿಗಳನ್ನು ಬೇಕಾದಷ್ಟು ಗಮನಿಸುತ್ತಿದ್ದೇವೆ. ಜನರು ನಿಯಮಗಳನ್ನು  ಪಾಲಿಸುವುದಿಲ್ಲ ಎಂದು ಅದನ್ನು ರೂಪಿಸುವವರು ಮತ್ತು ಜಾರಿಗೊಳಿಸುವವರು ಹೇಳುತ್ತಾರೆ.
ಆದರೆ ಇವರದು ಬೇಕಾಬಿಟ್ಟಿ ಅನುಷ್ಠಾನ. ಅಲ್ಲದೆ ಅಧಿಕಾರ ಇದೆ ಎಂದು ಮನಬಂದಂತೆ ಅದನ್ನು ಚಲಾಯಿಸುತ್ತಾರೆಎಂಬುದು ಜನಸಾಮಾನ್ಯರ ಅಳಲು. ಕಳೆದ ವಾರ ನನ್ನ ಗಮನಕ್ಕೆ ಬಂದ ಎರಡು ವಿಡಿಯೊಗಳನ್ನು ನೋಡಿದಾಗ, ಹಾಗಾದರೆ ಅವರು ಸರಿಯೋ ಇವರು ಸರಿಯೋ ಎಂಬ ಜಿಜ್ಞಾಸೆ ಉಂಟಾಯಿತು. ಅದರ ಬಗ್ಗೆ ಮತ್ತೆ ಅವಲೋಕನ ಮಾಡುವ ಮುನ್ನ ಈ ವಿಡಿಯೊ ದೃಶ್ಯಗಳ ಬಗ್ಗೆ  ಹೇಳಿಬಿಡುತ್ತೇನೆ.
ದೃಶ್ಯ 1;ಇದು ವಿದೇಶದ್ದು ಎನಿಸುತ್ತದೆ. ಅಲ್ಲಿನ ಮಾತು, ಬರಹ ನೊಡಿದರೆ ಬಹುಶಃ ರಷ್ಯ ಎನಿಸುತ್ತದೆ. ರಷ್ಯದ ಮಾಸ್ಕೊ ಎಂದುಕೊಳ್ಳೋಣ. ಅಲ್ಲೊಂದು ಮಾಲ್, ಅಲ್ಲೊಬ್ಬ ಭದ್ರತಾ ಅಧಿಕಾರಿ. ಪೊಲೀಸಪ್ಪ ಎಂದೇ ಕರೆಯೋಣ. ಅಲ್ಲೇ ಮಾಲ್ ತುಂಬ ಆತನ ಕಣ್ಗಾವಲು. ಮಾಸ್ಕ್ ಹಾಕದೇ ಓಡಾಡುತ್ತಿರುವ ಯುವಕನನ್ನು ನೋಡುತ್ತಲೇ ಆತನಿಗೆ ಬೆತ್ತದಿಂದ ಬಾರಿಸುತ್ತಾನೆ. ಪಕ್ಕದಲ್ಲೆ ಇದ್ದ ವಯಸ್ಕನೊಬ್ಬ ಭಯದಿಂದ ತಾನೂ ಮಾಸ್ಕ್ ಧರಿಸುತ್ತಾನೆ.
ಅನಂತರ ಆ ಪೊಲೀಸ್ ಎಸ್ಕಲೇಟರ್ ಬಳಿ ಬರುತ್ತಾನೆ. ಅಲ್ಲಿ ಮಾಸ್ಕ್ ಧರಿಸದೇ ಇಳಿದು ಬರುತ್ತಿರುವವರನ್ನು ನೋಡುತ್ತಲೇ‘ಮಾಸ್ಕ್ ಎಲ್ಲಿ’ ಎಂದು ಕೇಳಿ ಬಡಿಯುತ್ತಾನೆ. ಅಲ್ಲೇ ಇದ್ದ ಇನ್ನೊಂದಿಷ್ಟು ಮಂದಿ ಸರ್ರನೆ ಮೂಗಿಗೆ ಮಾಸ್ಕ್ ಏರಿಸುತ್ತಾರೆ. ಈಗ ಮಾಲ್‌ನ ಹಜಾರದ ಸ್ಥಳಕ್ಕೆ ಪೊಲೀಸಪ್ಪ ಬರುತ್ತಾನೆ. ಅಲ್ಲಿ ಮಾಸ್ಕ್ ಹಾಕಿಕೊಳ್ಳದ ಯುವಕನನ್ನು ತದಕುತ್ತಾನೆ. ಪ್ರತಿಬಾರಿ ಪೊಲೀಸಪ್ಪ ಈ ರೀತಿ ದಂಡ ಪ್ರಯೋಗ ಮಾಡುತ್ತಲೇ ಅಕ್ಕಪಕ್ಕದಲ್ಲಿದ್ದವರ ಮೂಗಿನ ಮೇಲೆ ಮಾಸ್ಕ್ ಅಡರಿರುತ್ತದೆ.
ದೃಶ್ಯ 2:ಈಗ ನಮ್ಮ ದೇಶಕ್ಕೆ, ನಮ್ಮ ರಾಜ್ಯಕ್ಕೆ ಬರೋಣ. ಕುಂದಾಪುರದಲ್ಲಿ ನಡೆಯಿತೆನ್ನಲಾದ ಘಟನೆಯ ದೃಶ್ಯವಿದು. ಪೊಲೀಸರು ಮುಖ್ಯರಸ್ತೆಯಲ್ಲಿ ನಿಂತು ಮಿಕಗಳನ್ನು ಹಿಡಿದುಹಾಕುತ್ತಿದ್ದಾರೆ. ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಯುವಕನೊಬ್ಬ ಪೊಲೀಸಪ್ಪನ ಕೈಗೆ ಸಿಕ್ಕಿದ್ದೇ ತಡ. ಬೈಗುಳದ ಸುರಿಮಳೆ. ಅದೂ ‘ಪೊಲೀಸ್ ಭಾಷೆಯಲ್ಲಿ’. ಲಾಠಿ ಏಟಿನ ರುಚಿ ಬೇರೆ. ಯಾಕೆ ಬೈದು, ಹೊಡೆದು ಮಾಡುವಿರಿ ? ಎಂಬ ಪ್ರಶ್ನೆಗೆ ಅದನ್ನೆಲ್ಲ ಕೇಳಲು ನೀನು ಯಾರೊ? ಎಂಬ ಮರುಪ್ರಶ್ನೆ.
ಅಷ್ಟರಲ್ಲಿ ಆತ ಯಾರಿಗೊ ಫೋನ್ ಮಾಡುತ್ತಿದ್ದರೆ ಅದಕ್ಕೂ ಆಕ್ಷೇಪ. ಯಾರ ಜೋಡಿ ಮಾತನಾಡುವಿ. ಮಾತನಾಡಕ್ಕೆ ಅತ್ತೆ ಮಗನಾ ಎಂದು ವ್ಯಂಗ್ಯ ಮಾಡುತ್ತಾರೆ. ಮಾಸ್ಕ್ ಯಾಕೆ ಹಾಕಿಲ್ಲ ಎಂಬ ಆವಾಜ್‌ಗೆ ತಡವರಿಸುತ್ತಿದ್ದಾಗ ‘ಕರ್ಚೀ- ಎಲ್ಲೋ’ ಎಂಬಮತ್ತೊಂದು ಪ್ರಶ್ನೆ. ಅವನು ಏನೋ ಹೇಳಲು ಅನುವಾಗುತ್ತಿದ್ದಾಗ ‘ಕರ್ಚೀ-ಕೊಳ್ಳುವ ಯೋಗ್ಯತೆ ಇಲ್ವಾ’ ಎಂದು ದಬಾಯಿಸುತ್ತಾರೆ.
ಅಷ್ಟಕ್ಕೂ ಬಿಡದೆ, ಇವನ ಮೇಲೆ ಕೇಸ್ ಮಾಡ್ರಿ ಎಂದು ಹೇಳಿ, ಅವನನ್ನು ಎಳೆದು ಪೊಲೀಸ್ ಜೀಪಿಗೆ ಹಾಕುತ್ತಾರೆ. ಇದಾದ ಬಳಿಕಉಳಿದ ಬೈಕ್ ಸವಾರರ ಮೇಲೂ ಇವರ ಪ್ರತಾಪ ಮುಂದುವರಿಯುತ್ತದೆ. ಅವರಿಗೂ ಲಾಠಿ ಏಟಿನ ಗಲಾಟಿ ನಡೆಯುತ್ತದೆ. ನಾವು ಇಲ್ಲಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ ಸಾಯುತ್ತಿದ್ದರೆ ಕರ್ಚೀ- ತೊಗೊಳ್ಳಲು೧೦ರು ಇಲ್ಲ ಅಂತ ಹೇಳ್ತಾರೆ ಎಂದು ಪೊಲೀಸರು ಗೊಣಗಾಡುತ್ತಿರುವುದು ಕೇಳುತ್ತದೆ.
ದೃಶ್ಯ 3:ಇಂದೋರ್‌ನಲ್ಲಿ ನಡೆದ ಘಟನೆ ಇದು. ಪೊಲೀಸರು ವ್ಯಕ್ತಿಯೊಬ್ಬನನ್ನು ದನಕ್ಕೆ ಬಡಿದ ಹಾಗೆ ಬಡಿಯುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ದಾಖಲಾಗಿದೆ. ಅನಾರೋಗ್ಯಪೀಡಿತ ತಂದೆಯನ್ನು ನೋಡಲು ರಿಕ್ಷಾಚಾಲಕನೊಬ್ಬ ಹೋಗುತ್ತಿದ್ದಾಗ ಅವನನ್ನು ತಡೆದ ಪೊಲೀಸರು ಮಾಸ್ಕ್ ಹಾಕಿಕೊಂಡಿಲ್ಲ ಎಂದು ತಕರಾರು ತೆಗೆದರು. ಕಾರಣ ವಿವರಿಸಿದರೂ ಬಿಡದ ಅವರು, ಅವನನ್ನು ಕೆಳಕ್ಕೆ ಬೀಳಿಸಿ ಥಳಿಸತೊಡಗಿದರು.
ಆಗ ಅಲ್ಲಿಯೇ ಇದ್ದ ಆತನ ಮಗ ‘ನನ್ನ ತಂದೆಯನ್ನು ಬಿಟ್ಟುಬಿಡಿ’ ಎಂದು ಅಂಗಲಾಚುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಏಕೆಂದರೆ ಪೊಲೀಸರು ಅಷ್ಟೊಂದು ಮೃಗೀಯವಾಗಿ, ನಿರ್ದಯವಾಗಿ ವರ್ತಿಸುತ್ತಿದ್ದರು. ಕೊನೆಗೆ ಮಗ ಬಿಕ್ಕಿ ಬಿಕ್ಕಿ ಅತ್ತರೂ ಅವರಮನ ಕರಗಲಿಲ್ಲ. ಈ ಮೂರೂ ವಿಡಿಯೊ ದೃಶ್ಯಗಳು ಒಂದೇ ವಿಷಯಕ್ಕೆ ಸಂಬಂಧಿಸಿದಂಥವು. ಆದರೆ ಅದನ್ನು ನಿರ್ವಹಿಸಿದ ರೀತಿ ಬೇರೆ ಬೇರೆ ರೀತಿಯಲ್ಲಿದೆ. ಅಂತೆಯೇ ಅದಕ್ಕೆ ಕೇಳಿಬಂದ, ಕಂಡುಬಂದ ಪ್ರತಿಕ್ರಿಯೆಯೂ ವಿಭಿನ್ನವಾಗಿದೆ.
ಮೊದಲಿನ ದೃಶ್ಯಕ್ಕೆ ಬರೋಣ. ಮಾಸ್ಕೊದಲ್ಲಿ (ಅಲ್ಲಿಯದೇ ಆಗಿದ್ದಲ್ಲಿ) ಭದ್ರತಾ ಸಿಬ್ಬಂದಿ ಅತ್ಯಂತ ಕಠಿಣವಾಗಿ, ಕಟ್ಟುನಿಟ್ಟಾಗಿ, ನಿರ್ದಾಕ್ಷಿಣ್ಯವಾಗಿ ಮಾಸ್ಕ್ ನಿಯಮವನ್ನು ಜಾರಿಗೊಳಿಸುತ್ತಾನೆ. ಈ ವಿಡಿಯೊ ಎಲ್ಲ ಕಡೆ ಬಹಳಷ್ಟು ಷೇರ್ ಆಯಿತು. ಜತೆಗೆ ಇದಕ್ಕೆ ಬಂದಿರುವ ಪ್ರತಿಕ್ರಿಯೆಗಳೂ ಜೋರಾಗಿದ್ದವು.
ಭಾರತದಲ್ಲೂ ಇಂಥ ಕಠಿಣ ಕ್ರಮದ ಅಗತ್ಯವಿದೆ ಎಂಬುದು ಒಬ್ಬರ ಅಭಿಪ್ರಾಯ. ‘ದಂಡಂ ದಶಗುಣಂ ’ ಅನ್ನೋ ಮಾತು ಸುಳ್ಳಲ್ಲ ಅಂದವರು ಕೆಲವರು. ಆ ಪೊಲೀಸನ ಖದರು ಜೋರು ಅಂದವರು ಮತ್ತೊಬ್ಬರು. ಇದರ ತಾತ್ಪರ್ಯ ಇಷ್ಟು. ನಮ್ಮಲ್ಲಿ ಸ್ವಯಂ ಪ್ರೇರಿತರಾಗಿ ನಿಯಮ ಪಾಲಿಸುವವರ ಸಂಖ್ಯೆ ಕಡಿಮೆ. ಈ ರೀತಿ ಬಡಿಗೆ ಹಿಡಿದರೆ ಮಾತ್ರ ಬಗ್ಗುವುದು. ಇಲ್ಲವಾದರೆಯಾರೂ ಕೇರ್ ಮಾಡುವುದಿಲ್ಲ. ಆದರೆ ಎರಡನೇ ದೃಶ್ಯಕ್ಕೆ ಬಂದಾಗ ಬೇರೆಯದೇ ಆದ ಅಭಿಪ್ರಾಯಗಳು ಹೊರಹೊಮ್ಮಿವೆ. ಪೊಲೀಸರ ಈ ವರ್ತನೆ ಅತಿಯಾಯಿತು. ಅವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲವೆ ಎಂಬುದು ಸಾರ್ವತ್ರಿಕಅನಿಸಿಕೆ. ಆ ಯುವಕನಿಗೆ ಕರ್ಚೀ- ಕೊಳ್ಳುವ ಯೋಗ್ಯತೆ ಇದೆಯೋ ಇಲ್ಲವೊ. ಆದರೆ ಈ ಪೊಲೀಸರಿಗೆ, ಪೊಲೀಸರಾಗಿ ಇರುವ ಯೋಗ್ಯತೆಯಂತೂ ಇಲ್ಲ ಎಂದೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕಾನೂನು ಜಾರಿಗೊಳಿಸುವಲ್ಲಿ ಒಂದು ರೀತಿ ನೀತಿ ಇರುತ್ತದೆ. ಮನಸೋ ಇಚ್ಛೆ ನಡೆದುಕೊಂಡರೆ ಹೇಗೆ. ಇದೆಂಥ ಅಮಾನವೀಯ ವರ್ತನೆ? ಅವರಿಗೆ ಈ ಅಧಿಕಾರವನ್ನು ಕೊಟ್ಟವರು ಯಾರು? ಎಂಬಿತ್ಯಾದಿ. ಮೊದಲ ಬಾರಿಗೆ ಲಾಕ್‌ಡೌನ್ ಸಂದರ್ಭದಲ್ಲಿ ಮಾಸ್ಕ್ ಧರಿಸದಿರುವವರಿಗೆ ದಂಡ ವಿಽಸುವ ಕ್ರಮ ಜಾರಿಗೆ ಬಂದಾಗ ಅದಕ್ಕೆ ವಿರೋಧ ವ್ಯಕ್ತವಾಗಿದ್ದೇ ಹೆಚ್ಚು.
ಆಗಲೂ ಪೊಲೀಸರು ಗಲ್ಲಿ ಗಲ್ಲಿಯಲ್ಲಿ ನಿಂತು ಇದನ್ನು ಜಾರಿಗೆ ತರುತ್ತಿದ್ದರು. ನಿಯಮ ಉಲ್ಲಂಸಿದವರಿಗೆ ದಂಡ ವಿಧಿಸುತ್ತಿದ್ದರು. ಒಂದು ಪ್ರಕರಣದಲ್ಲಿ, ಬೈಕ್ ಮೇಲೆ ಬಂದ ಸವಾರರು ಹಾಗೂ ಪೊಲೀಸರ ನಡುವೆ ವಾಗ್ಯುದ್ಧ ನಡೆಯಿತು. ಕೊನೆಗೆ ವಾಹನ ಸವಾರರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದರು. ಮತ್ತೊಂದು ಪ್ರಕರಣದಲ್ಲಿ, ಮನೆಯ ಸದಸ್ಯನ ಜತೆ ಬೈಕ್‌ನಲ್ಲಿ ಕುಳಿತುಹೋಗುತ್ತಿದ್ದ ಮಹಿಳೆಯನ್ನು ತಡೆದ ಪೊಲೀಸರು ಆಕೆಗೆ ದಂಡ ವಿಧಿಸಿದರು.
ಅಷ್ಟಕ್ಕೆ ಕೆಂಡಾಮಂಡಲಳಾದ ಆ ಮಹಿಳೆ ಪೊಲೀಸರಿಗೆ ಹಿಡಿಶಾಪ ಹಾಕಿದಳು. ನಾನು ಈ ದಿನ ದುಡಿದ ಹಣವನ್ನು ದಂಡ ಕಟ್ಟಿದರೆ ಖರ್ಚಿಗೆ ಎನು ಮಾಡಲಿ? ನಿಮ್ಮದೆಂಥಾ ರೂಲ್ಸು ಎಂದು ಕಣ್ಣೀರು ಹಾಕುತ್ತ ಹೋದಳು. ಇವನ್ನೆಲ್ಲ ನೋಡಿದರೆ ಯಾರು ಸರಿ, ಯಾರದು ತಪ್ಪು ಎಂಬ ಗೊಂದಲಕ್ಕೆ ಬೀಳುತ್ತೇವೆ. ಹಾಗೆಯೇ, ವಿಷಯ ಒಂದೇ ಆದರೂ ಬೇರೆ ಬೇರೆ ಕಡೆ, ಬೇರೆ ಬೇರೆ ಜನರು ಪ್ರತಿಕ್ರಿಯಿಸುವ ರೀತಿ ಬೇರೆ ಆಗಿರುತ್ತದೆ.
ರಷ್ಯದಲ್ಲಿ ಮಾಸ್ಕ್ ಧರಿಸದ ಜನರನ್ನು ಪೊಲೀಸ್ ಹೊಡೆದು ಬುದ್ಧಿ ಕಲಿಸಿದ ಕ್ರಮಕ್ಕೆ ಸ್ವಾಗತ ವ್ಯಕ್ತವಾಯಿತು. ಆದರೆನಮ್ಮವರೇ ಇಂಥ ಕೆಲಸ ಮಾಡಿದಾಗ ಇದು ಅಮಾನವೀಯ, ಕ್ರೂರ ಎಂದು ವಿರೋಧಿಸಿದರು. ಇದರ ಅರ್ಥವೇನು? ಅವರು ಹೊಡೆದರೆ ಸರಿ. ಇವರು ತದುಕಿದರೆ ತಪ್ಪು ಎಂದಾ? ಹೀಗೆ ಮಾಡುವುದೇ ಸರಿ. ಇಲ್ಲವಾದರೆ ನಮ್ಮ ಜನರಿಗೆ ಅರ್ಥವಾಗುವುದಿಲ್ಲ.ಬುದ್ಧಿಯೂ ಬರುವುದಿಲ್ಲ ಎನ್ನುವವರೂ ನಾವೇ. ಅದೇ ರೀತಿ, ಬಡವರು ಬಲ್ಲಿದರು, ಹೆಂಗಸರು ಮಕ್ಕಳೆಂದೂ ನೋಡದೆ ನಿರ್ದಯವಾಗಿ ಕ್ರಮ ಕೈಗೊಳ್ಳುವುದು ಸರಿಯೇ ಎಂದು ಇದ್ದಕ್ಕಿದ್ದಂತೆ ಮಾನವೀಯ ಮುಖವನ್ನು ಅನಾವರಣಗೊಳಿಸಿ ಬಿಡುವವರೂ ನಾವೇ.
ಇದನ್ನೆಲ್ಲ ಗಮನಿಸಿದರೆ ನಿಯಮಗಳು ಪರಿಸ್ಥಿತಿ, ಸನ್ನಿವೇಶಕ್ಕೆ ಅನುಗುಣವಾಗಿ ಬದಲಾವಣೆ ಹೊಂದುತ್ತವೆ ಎಂದು ತೋರುತ್ತದೆ. ಅದನ್ನು ಅನುಷ್ಠಾನಗೊಳಿಸುವವರ ಸ್ವಭಾವ, ಮನೋಭಾವ; ಸಾರ್ವಜನಿಕರ ಸ್ಪಂದನೆ, ಪ್ರತಿಕ್ರಿಯೆಯನ್ನೂ ಅವಲಂಬಿ ಸಿರುತ್ತದೆ. ಅಲ್ಲದೆ ಈ ಪ್ರತಿಕ್ರಿಯೆಗಳಲ್ಲಿ ಸಾಕಷ್ಟು ವ್ಯತ್ಯಾಸ, ಗೊಂದಲ, ವೈರುಧ್ಯಗಳಿರುತ್ತವೆ. ಉದಾಹರಣೆಗೆ, ಬೆಂಗಳೂರಿನಂಥ ಮಹಾನಗರದಲ್ಲಿ ಯಾವುದೇ ನಿಯಮ ಪಾಲನೆ ಮಾಡಲು ಬಹಳಷ್ಟು ಸಂಖ್ಯೆಯ ಸಿಬ್ಬಂದಿ ಬೇಕಾಗುತ್ತದೆ.
ಒಂದು ಪ್ರದೇಶದಲ್ಲಿನ ಸಿಬ್ಬಂದಿ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಬಹುದು. ಅವರ ವರ್ತನೆ ಕಠಿಣವಾಗಿರಬಹುದು. ಅಂಥವರು ಜನರ ಕಣ್ಣಲ್ಲಿ ವಿಲನ್ ಎನಿಸಿದರೂ ಅಚ್ಚರಿ ಇಲ್ಲ. ಮತ್ತೊಂದು ಭಾಗದಲ್ಲಿನ ಪೊಲೀಸರೋ ಅಥವಾ ಮಾರ್ಷಲ್ ‌ಗಳೊ ಸ್ವಲ್ಪ ದಯಾಳುಗಳಾಗಿರಬಹುದು. ಸಮಸ್ಯೆ ಹೇಳಿಕೊಂಡರೆ, ಬೇಡಿಕೊಂಡರೆ, ‘ಆಯ್ತು ಹೋಗಿ ’ ಎಂದು ಬಿಟ್ಟುಬಿಡ ಬಹುದು. ಅಂಥವರು ಜನರ ಪಾಲಿಗೆ ಒಳ್ಳೆಯವರಾಗಿಬಿಡುತ್ತಾರೆ.
ಹಾಗಾದರೆ ಒಳ್ಳೆಯವರಾಗಿರುವುದು ಒಳ್ಳೆಯದೋ ಅಥವಾ ಸರಿಯಾಗಿ ರೂಲ್ಸು ಜಾರಿಮಾಡುವವರು ಸರಿಯೋ ಎಂಬ ಪ್ರಶ್ನೆಗೆಸರಿಯಾದ ಉತ್ತರವಿಲ್ಲ. ಇದಕ್ಕೆ ತಕ್ಕಂತೆ ಸರಕಾರ ಮತ್ತು ಅಧಿಕಾರಿಗಳ ವರ್ತನೆ ಮತ್ತು ಧೋರಣೆಯೂ ಆಗಾಗ ಬದಲಾವಣೆ ಆಗುತ್ತದೆ. ಕರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭ, ಮದುವೆ, ಜಾತ್ರೆ, ರಥೋತ್ಸವ ಇತ್ಯಾದಿ ಗಳನ್ನು ನಿರ್ಬಂಧಿಸಲಾಗುತ್ತದೆ. ಆದರೆ ಚುನಾವಣೆ ಸಭೆ, ರ‍್ಯಾಲಿಗಳು ಎಗ್ಗಿಲ್ಲದೆ ನಡೆಯುತ್ತವೆ.
ಅಲ್ಲಿ ಮಾಸ್ಕ್, ಸಾಮಾಜಿಕ ಅಂತರ ಇಂಥ ಯಾವವೂ ಇರುವುದಿಲ್ಲ. ಆದರೆ ಮದುವೆಯಲ್ಲಿ ಜಾಸ್ತಿ ಜನರು ಭಾಗವಹಿಸಿದ್ದರೆಂದು ಅಲ್ಲಿಗೆ ಬಂದು ಊಟ ತಿಂಡಿಯನ್ನು ಚೆಲ್ಲಾಡಿ ಹೋಗುವಂಥ ನಿರ್ದಯಿ ಅಧಿಕಾರಿಗಳು ಮತ್ತೊಂದು ಕಡೆ. ಚುನಾವಣೆಯಲ್ಲಿರಾಜಾರೋಷವಾಗಿ ನಿಯಮ ಉಲ್ಲಂಘನೆ ಯಾಗುತ್ತಿದ್ದರೂ ಮೂಕಪ್ರೇಕ್ಷಕರಾಗಿರಬೇಕಾಗುತ್ತದೆ.
ಮತ್ತೊಬ್ಬ ಅತ್ಯುತ್ಸಾಹಿ ಹಿರಿಯ ಅಧಿಕಾರಿ, ಮಾಸ್ಕ್ ಹಾಕದಿದ್ದರೆ ದಂಡದ ಮೊತ್ತವನ್ನು ಹೆಚ್ಚುಮಾಡಿ ಆದೇಶ ಹೊರಡಿಸುತ್ತಾರೆ. ಅದಕ್ಕೆ ಜನರಿಂದ ಯದ್ವಾದತ್ವಾ ಪ್ರತಿಕ್ರಿಯೆ ಬರುತ್ತದೆ. ಸರಕಾರ ತಕ್ಷಣ ಮಧ್ಯಪ್ರವೇಶಿಸಿ ಈ ಆದೇಶವನ್ನು ವಾಪಸ್ ಪಡೆಯುತ್ತದೆ. ಹಾಗಾದರೆ ಈ ಅಧಿಕಾರಿಯ ಕಾಳಜಿ, ಉತ್ಸಾಹ ತೋರುವುದೇ ತಪ್ಪಾ? ಅಥವಾ ಸರಕಾರ ಅವರ ಉತ್ಸಾಹಕ್ಕೆ ತಣ್ಣೀರೆರಚಿದೆ ಎಂದು ಇದನ್ನು ಭಾವಿಸುವುದಾ?. ಅದು ನಿಜ ಎನ್ನುವುದಾದರೆ ಸರಕಾರದ ನಡೆ ತಪ್ಪಾ? ಸಿನಿಮಾ ವಿಷಯದಲ್ಲೂ ಹೀಗೆಯೇ ಆಯಿತು.
ಪ್ರೇಕ್ಷಕರ ಸಂಖ್ಯೆಯನ್ನು ನಿಯಂತ್ರಿಸಿ ಆದೇಶ ಹೊರಡಿಸಲಾಯಿತಾದರೂ ಕೆಲವರ ವಿರೋಧ ಅನ್ನಿ ಅಥವಾ ಮನವಿ ಅನ್ನಿ, ಅದರ ಮೇರೆಗೆ ನಿಯಮ ಸಡಿಲಿಸಲಾಯಿತು. ಅದೂ ಅಲ್ಲದೆ ಇಲ್ಲಿ ಒಂದೊಂದು ವಿಷಯಕ್ಕೆ ಒಂದೊಂದು ನಿಯಮ; ಸಿನಿಮಾಗೆ ಬೇರೆ, ಜಿಮ್‌ಗೆ ಬೇರೆ ನಿಯಮ, ಚುನಾವಣೆಗೊಂದು ನೀತಿ, ಜಾತ್ರೆಗೊಂದು ನೀತಿ; ಮದುವೆಗೊಂದು ರೀತಿ, ಮಸಣಕೊಂದು ರೀತಿ.ಸಾಮಾಜಿಕ ಜಾಲತಾಣಗಳು ಬಂದಮೇಲೆ, ಅವು ಹೆಚ್ಚು ಸಕ್ರಿಯವಾದ ಮೇಲೆ, ಯಾವುದೇ ವಿಷಯದ ಬಗ್ಗೆ ಪ್ರತಿಕ್ರಿಯಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ಅದರಲ್ಲಿನ ಅಭಿಪ್ರಾಯಗಳು ವಿಭಿನ್ನವಾಗಿರುತ್ತವೆ. ಅಷ್ಟು ಮಾತ್ರವಲ್ಲದೆ ಹೆಚ್ಚು ತೀಕ್ಷ್ಣವಾಗಿರುತ್ತವೆ. ಕೆಲವು ಚರ್ಚೆಗಳು ಮೂಲವಿಷಯವನ್ನು ಬಿಟ್ಟು ಅದನ್ನು ಎಲ್ಲೆಲ್ಲೋ ಎಳೆದುಕೊಂಡು ಹೋಗುತ್ತವೆ. ಇದರ ಪ್ರಭಾವ ಸರಕಾರ ಮತ್ತು ನಿಯಮ ಮಾಡುವವರು ಹಾಗೂ ಅನುಷ್ಠಾನಗೊಳಿಸುವವರ ಮೇಲೂ ಆಗುತ್ತಿದೆ. ಏನೇ ಕ್ರಮ ಕೈಗೊಂಡರೂ ಅದಕ್ಕೆ ಪರ ವಿರೋಧ ಚರ್ಚೆ ಹುಟ್ಟಿಕೊಳ್ಳುತ್ತವೆ. ಆದರೆ ಮೆರಿಟ್ ಆಧಾರದಲ್ಲಿ ಅಲ್ಲ, ಬದಲಾಗಿ ಅವರವರ ಮೂಗಿನ ನೇರಕ್ಕೆ. ಆಗ – ಒಂದೋಆ ನಿಯಮವೇ ರದ್ದಾಗುತ್ತದೆ. ಇಲ್ಲವೆ ಅದು ದುರ್ಬಲಗೊಳ್ಳುತ್ತದೆ.
ಈ ಪರಿಸ್ಥಿತಿಗೆ, ಸನ್ನಿವೇಶಕ್ಕೆ ನಾವಿಂದು ಬಂದು ನಿಂತಿದ್ದೇವೆ. ಇದು ಒಮ್ಮೊಮ್ಮೆ ತುಘಲಕ್ ಆಡಳಿತವನ್ನು ನೆನಪಿಸುತ್ತದೆ. ನೀತಿ ನಿರ್ಧಾರಗಳಲ್ಲಿ ಗಟ್ಟಿಯಾಗಿರದೆ ಇತರರ ಅಭಿಪ್ರಾಯಕ್ಕೆ ಅನುಗುಣವಾಗಿ ಅದನ್ನು ಬದಲಾಯಿಸತೊಡಗಿದರೆ ಅದರ ಮೂಲ ಉದ್ದೇಶಕ್ಕೇ ಧಕ್ಕೆ ಬರುತ್ತದೆ. ಆದರೆ ಇದರಿಂದ ಒಟ್ಟಾಗಿ ತೊಂದರೆ ಆಗುವುದು ನಮಗೇ ಎಂಬುದನ್ನು ನಾವು ಮನಗಾಣುತ್ತಿಲ್ಲ.
ಎಲ್ಲದರಲ್ಲೂ ಮೂಗು ತೂರಿಸು ವುದನ್ನು, ಎಲ್ಲವನ್ನೂ ಪ್ರಶ್ನಿಸುವುದನ್ನು ನಾವು ಕಡಿಮೆ ಮಾಡಬೇಕಾದ ಅವಶ್ಯಕತೆಇದೆ. ನಿಯಮ ಪಾಲನೆ ನಮ್ಮ ಕರ್ತವ್ಯ ಎಂಬುದನ್ನು ಮನಗಾಣಬೇಕಿದೆ. ಇಲ್ಲದಿದ್ದರೆ ಎಲ್ಲ ವಿಷಯಗಳೂ ಪರ ವಿರೋಧ ಚರ್ಚೆಯಲ್ಲೇ ಮುಗಿದುಹೋಗುತ್ತವೆ.
ನಾಡಿಶಾಸ್ತ್ರನೀತಿ ನಿಯಮಗಳಿಗೆ ಇರಲಿ ಗೌರವಇಲ್ಲದಿರೆ ಅದು ಕಳಕೊಂಡೀತು ಜೀವಬೇಡ ಕೋಳಿಯ ಕೇಳಿ ಮಸಾಲೆಅರೆವ ಸ್ವಭಾವ, ಎಲ್ಲವನ್ನೂ ಟೀಕಿಸುವ ಮನೋಭಾವ