ಆರ್‌ಎಸ್‌ಎಸ್‌: ಭವಿಷ್ಯಕ್ಕೊಂದು ಮಹತ್ವಾಕಾಂಕ್ಷಿ ಕಾರ್ಯಸೂಚಿ
ಪ್ರಚಲಿತ
ವಾಲ್ಟರ್‌ ಆಂಡರ್ಸನ್‌
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್‌ಎಸ್)ದ ಪರಮೋಚ್ಚ ಮಂಡಳಿಯಾಗಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್) ಇತ್ತೀಚೆಗೆ ತನ್ನ ವಾರ್ಷಿಕ ಅಧಿವೇಶನದಲ್ಲಿ ಕೆಲ ಹಿರಿಯ ಮುಖಂಡರನ್ನು ಸಂಘದ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿದೆ. ಅವರಲ್ಲಿ ಪ್ರಮುಖರೆಂದರೆ ಸಂಘದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ 66 ವರ್ಷದದತ್ತಾತ್ರೇಯ ಹೊಸಬಾಳೆ.
ಈವರೆಗೆ ಇವರು ಸಂಘದ ಆರು ಜಂಟಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದರು. ಇನ್ನು ಮುಂದೆ ಸಂಘದ ದೈನಂದಿನಚಟುವಟಿಕೆಗಳನ್ನು ನೋಡಿಕೊಳ್ಳಲಿದ್ದಾರೆ. ಇನ್ನುಳಿದ ಐವರು ಪ್ರಧಾನ ಕಾರ್ಯದರ್ಶಿಗಳಲ್ಲಿ ಮೂವರು ಹೊಸಬರು. ಹೊಸಬಾಳೆಯಂತೆ ಇವರೂ ತಕ್ಕಮಟ್ಟಿಗೆ ಯುವಕರು. ಹೀಗಾಗಿ ಆರ್‌ಎಸ್‌ಎಸ್‌ನ ಮಹತ್ವಾಕಾಂಕ್ಷಿ ಕಾರ್ಯಸೂಚಿಗಳ ಭವಿಷ್ಯ ಮುಂದಿನ 10-15 ವರ್ಷಗಳ ಕಾಲ ಇವರ ಕೈಯಲ್ಲಿರುತ್ತದೆ.
ಆರ್‌ಎಸ್‌ಎಸ್‌ನಲ್ಲಿರುವ ಅಲಿಖಿತ ಸಂವಿಧಾನದ ಪ್ರಕಾರ75ವರ್ಷವಾದವರು ತಮ್ಮ ಹುದ್ದೆಯನ್ನು ಸ್ವಯಂಪ್ರೇರಿತರಾಗಿ ತ್ಯಜಿಸಬೇಕು. ರಾಷ್ಟ್ರ ಮಟ್ಟದಲ್ಲಿ ಹೊಸಬಾಳೆ ಸಲ್ಲಿಸಿದ ಸೇವೆಯ ಅವಧಿಯಲ್ಲಿ ಅವರಿಗೆ ಸಂಘದ 34 ಆಂತರಿಕ ಸದಸ್ಯ ಕುಟುಂಬಗಳ ಹಿರಿಯರ ಜತೆಗೆ ಹತ್ತಿರದ ನಂಟು ಬೆಳೆದಿದೆ. ಸಂಘದ ಜತೆಗೆ ಕೆಲಸ ಮಾಡುವ ಈ ಸಂಸ್ಥೆಗಳಲ್ಲಿ ಶಿಕ್ಷಣ, ಕಾರ್ಮಿಕ, ರಾಜಕೀಯ ಮುಂತಾದ ನಾನಾ ಕ್ಷೇತ್ರಗಳ ಚಟುವಟಿಕೆಗಳಲ್ಲಿ ತೊಡಗಿಕೊಂಡಿ ರುವ ಸಂಸ್ಥೆಗಳಿವೆ.
ಪ್ರಧಾನಿಯೂ ಸೇರಿದಂತೆ ಇವುಗಳ ಬಹುತೇಕ ಮುಖ್ಯಸ್ಥರು ಆರ್‌ಎಸ್‌ಎಸ್‌ನಿಂದಲೇ ಬಂದವರು. ಹಾಗೆಯೇ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ)ದಲ್ಲಿ ಹೆಚ್ಚಿನವರು ಆರ್‌ಎಸ್‌ಎಸ್‌ನ ಸದಸ್ಯರು. ಹೊಸಬಾಳೆಗೂ ಮುನ್ನ ಪ್ರಧಾನ  ಕಾರ್ಯದರ್ಶಿಯಾಗಿದ್ದ 73 ವರ್ಷದ ಸುರೇಶ್ ಭಯ್ಯಾಜಿ ಜೋಶಿ ಈಗ ಆರ್‌ಎಸ್‌ಎಸ್‌ನ ಎಕ್ಸಿಕ್ಯೂಟಿವ್ ಕೌನ್ಸಿಲ್‌ಗೆ ತೆರಳಿದ್ದಾರೆ.2014ರಲ್ಲಿ ಆಡಳಿತಾರೂಢ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿ ಕೊಂಡಿದ್ದ ರಾಮ್ ಮಾಧವ್ ಕೂಡ ಈಗ ಎಕ್ಸಿಕ್ಯೂಟಿವ್ ಮಂಡಳಿಗೆ ಬಂದಿದ್ದಾರೆ. ಜೋಶಿ ಸತತ ನಾಲ್ಕು ಅವಧಿಗೆ ತಲಾ ಮೂರು ವರ್ಷಗಳ ಕಾಲ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈಗ ಆರೋಗ್ಯದ ಕಾರಣಗಳಿಗಾಗಿ ಹುದ್ದೆ ತೊರೆದಿದ್ದಾರೆ.
ಸಂಘದ ರಾಷ್ಟ್ರೀಯ ಹುದ್ದೆಗಳಲ್ಲಿರುವವರು ದೇಶಾದ್ಯಂತ ಸತತ ಪ್ರವಾಸ ಮಾಡಿ ತಳಮಟ್ಟದ ಸಂಘಟನೆಯಲ್ಲಿ ತೊಡಗಬೇಕಾಗುತ್ತದೆ. ಅದಕ್ಕೆ ಉತ್ತಮ ಆರೋಗ್ಯವಿರಬೇಕು. ಅದರಲ್ಲೂ ಈಗ ಸಂಘದ ಕಾರ್ಯಸೂಚಿಗಳು ಇನ್ನಷ್ಟು ಮಹತ್ವಾಕಾಂಕ್ಷಿಯಾಗಿರುವುದರಿಂದ ಮೊದಲಿಗಿಂತ ಹೆಚ್ಚು ಕ್ರಿಯಾಶೀಲರಾಗಿರುವವರು ಬೇಕು. ಆರ್‌ಎಸ್‌ಎಸ್‌ನಲ್ಲಿ ಹಾಗೂ ಅದರ ಅಂಗ ಸಂಸ್ಥೆಗಳಲ್ಲಿ ಎಲ್ಲಾ ನಿರ್ಣಯಗಳನ್ನೂ ಒಮ್ಮತದ ಮೇಲೆ ಕೈಗೊಳ್ಳಲಾಗುತ್ತದೆ. ಹೀಗಾಗಿ ರಾಷ್ಟ್ರೀಯ ನಾಯಕತ್ವಕ್ಕೆ ಸ್ಥಳೀಯಮಟ್ಟದ ವಿಷಯಗಳಲ್ಲಿ ಸ್ಪಷ್ಟ ಜ್ಞಾನ ಇರಬೇಕಾಗುತ್ತದೆ.
ಉದಾಹರಣೆಗೆ, ಈಗ ನಡೆಯುತ್ತಿರುವ ಕೃಷಿ ಸುಧಾರಣೆ ಕುರಿತಾದ ಚರ್ಚೆ. ಈ ವಿಷಯದಲ್ಲಿ ಆರ್‌ಎಸ್‌ಎಸ್‌ನಲ್ಲೇ ಅಭಿಪ್ರಾಯ ಭೇದಗಳಿವೆ. ಆದರೆ, ಆರ್‌ಎಸ್‌ಎಸ್ ಯಾವುದೇ ನಿರ್ಧಾರ ಕೈಗೊಳ್ಳುವಾಗ ಅದನ್ನು ಒಗ್ಗಟ್ಟಿನಿಂದ ಕೈಗೊಳ್ಳುವುದರಿಂದ ಸಾಮಾನ್ಯವಾಗಿ ಆಂತರಿಕ ಭಿನ್ನಮತಗಳು ಉದ್ಭವಿಸುವುದಿಲ್ಲ. ಆರ್‌ಎಸ್‌ಎಸ್‌ನ ಬಹುತೇಕ ರಾಷ್ಟ್ರೀಯ ಮುಖಂಡರಂತೆ ಹೊಸಬಾಳೆ ಕೂಡ ಪೂರ್ಣ ಪ್ರಮಾಣದ ಪ್ರಚಾರಕ.
ಹಲವು ಭಾಷೆ ಮಾತನಾಡಬಲ್ಲರು. ಉತ್ತಮ ಶಿಕ್ಷಣ ಹೊಂದಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆರ್‌ಎಸ್‌ಎಸ್‌ನ ಸದಸ್ಯರಾಗಿ ಹಾಗೂ ಅದರ ಅಂಗ ಸಂಸ್ಥೆಗಳ ಮುಖ್ಯಸ್ಥರಾಗಿ ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅನುಭವ ಹೊಂದಿದ್ದಾರೆ. ಸಂಘದ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಗೆಕಾರ್ಯದರ್ಶಿ ಯಾಗಿದ್ದರು. ಆ ವೇಳೆ 1975-77ರ ಅವಧಿಯಲ್ಲಿ ತುರ್ತು ಸ್ಥಿತಿ ವಿರೋಧಿಸಿ ಜೈಲಿಗೆ ಹೋಗಿದ್ದರು.
2003ರಲ್ಲಿ ಆರ್‌ಎಸ್‌ಎಸ್‌ನ ಜಂಟಿ ಬೌದ್ಧಿಕ ಕಾರ್ಯದರ್ಶಿ (ಸಹ ಬೌದ್ಧಿಕ ಪ್ರಮುಖ್)ಯಾಗಿ ಸಂಘದ ಸಾವಿರಾರು ಶಾಖೆಗಳಲ್ಲಿ ದೇಶಾದ್ಯಂತ ನಿತ್ಯ ನಡೆಯುವ ಚರ್ಚೆಗಳ ವಿಷಯಗಳನ್ನು ನಿರ್ಧರಿಸುತ್ತಿದ್ದರು. ನಂತರ 2009ರಲ್ಲಿ ಮೋಹನ್ ಭಾಗವತ್ ಅವರು ಆರ್‌ಎಸ್‌ಎಸ್‌ನ ಮುಖ್ಯಸ್ಥರಾದ ಮೇಲೆ ಇವರು ಸಂಘದ ಜಂಟಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. 2018ರ ಸೆಪ್ಟೆಂಬರ್‌ನಲ್ಲಿ ಹೊಸಬಾಳೆ ಎರಡು ದಿನ ವಾಷಿಂಗ್ಟನ್ ಡಿ.ಸಿ.ಯಲ್ಲಿದ್ದರು. ಆಗ ದಕ್ಷಿಣ ಏಷ್ಯಾದ ಬಗ್ಗೆ ಜಾಗತಿಕ ಮಟ್ಟದಲ್ಲಿ ರುವ ರಾಜಕೀಯ ಅಭಿಪ್ರಾಯಗಳು ಹಾಗೂ ಸ್ಥಾನಮಾನಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದರು.
ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಅಧ್ಯಯನಗಳ ವಿಭಾಗದ ನನ್ನ ಕಚೇರಿಯಲ್ಲಿ ಅವರಿಗೆ ವಿಶ್ವ ಸಂಸ್ಥೆಯ ವಿದೇಶಾಂಗ ನೀತಿಗಳ ಬಗ್ಗೆ ಸಣ್ಣದೊಂದು ಮಾಹಿತಿ ಕೂಟ ಆಯೋಜಿಸಿದ್ದೆ. ನಂತರ ಕ್ಯಾಪಿಟಲ್ ಹಿಲ್‌ನಲ್ಲಿ ನಡೆದಸಮಾರಂಭದ ಅಧ್ಯಕ್ಷತೆ ವಹಿಸಿದ್ದೆ. ಅಲ್ಲಿ ಅವರು ಆರ್ ಸ್‌ಎಸ್‌ನ ದೃಷ್ಟಿಕೋನದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು ಅಂದರೇನು ಎಂಬ ಬಗ್ಗೆ ಮಾತನಾಡಿದ್ದರು.
ಆ ವೇಳೆ ಅಮೆರಿಕದ ವಿದೇಶಾಂಗ ನೀತಿ ತಜ್ಞರಿಂದ ಸಾಕಷ್ಟು ಸಲಹೆಗಳನ್ನು ಪಡೆದಿದ್ದರು. ಅಲ್ಲಿದ್ದ ಅನೇಕ ಪ್ರೇಕ್ಷಕರು ಹೊಸಬಾಳೆ ಹೊಸ ಐಡಿಯಾಗಳಿಗೆ ಮುಕ್ತವಾಗಿದ್ದಾರೆ ಎಂದು ಮಾತನಾಡಿಕೊಂಡಿದ್ದರು. ೨೦೨೦ರ ವಿಜಯದಶಮಿಯಂದು ಸಂಘದ ವಾರ್ಷಿಕ ಸಮ್ಮೇಳನದಲ್ಲಿ ಮೋಹನ ಭಾಗವತ್ ಅವರು ಮಾಡಿದ ಭಾಷಣ ಮುಂದಿನ ದಶಕಕ್ಕೆ ಆರ್‌ಎಸ್‌ಎಸ್‌ನ ಅಜೆಂಡಾ ಏನೆಂಬುದನ್ನು ತೆರೆದಿಟ್ಟಿದೆ.
ಅದರಲ್ಲಿ ಕೋವಿಡ್-19ಸಾಂಕ್ರಾಮಿಕ ರೋಗವನ್ನು ಎದುರಿಸಲು ಆದ್ಯತೆ ನೀಡಲಾಗಿದೆ. ಜತೆಗೆ ಸರಕಾರ ಜಾರಿಗೊಳಿಸಿದ ಲಾಕ್ಡೌನ್ ಅತ್ಯಗತ್ಯವಾಗಿತ್ತು ಎಂದೂ ಪ್ರತಿಪಾದಿಸಲಾಗಿದೆ. ನಂತರ ತನ್ನ ‘ವಸುಧೈವ ಕುಟುಂಬಕಂ’ ಧ್ಯೇಯವಾಕ್ಯದಂತೆ ಭಾರತವು ಜಗತ್ತಿನ ನಾನಾ ದೇಶಗಳಿಗೆ ಕೊರೋನಾ ಲಸಿಕೆ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಿ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಈಗ ಭಾರತಕ್ಕೆ2ನೇ ಅಲೆ ಅಪ್ಪಳಿಸಿರುವುದರಿಂದ ಪರಿಸ್ಥಿತಿ ಹದಗೆಟ್ಟಿದೆ.
ಭಾಗವತ್ ತಮ್ಮ ಭಾಷಣದಲ್ಲಿ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಯ ಮೇಲೆ ಉಂಟಾದ ದುಷ್ಪರಿಣಾಮಗಳ ಬಗ್ಗೆಯೂ ಮಾತನಾಡಿದರು. ಆ ವೇಳೆ ಆರ್‌ಎಸ್‌ಎಸ್ ಕಾರ್ಯಕರ್ತರು ಲಾಕ್‌ಡೌನ್‌ನಿಂದ ಕಷ್ಟಕ್ಕೆ ಸಿಲುಕಿದ ಜನರಿಗೆ ಆಹಾರ, ವಸತಿ, ಔಷಧಗಳನ್ನು ದೊಡ್ಡ ಪ್ರಮಾಣದಲ್ಲಿ ವಿತರಿಸಿ ಮೆಚ್ಚುಗೆಗೆ ಪಾತ್ರವಾಗಿದ್ದನ್ನು ಶ್ಲಾಘಿಸಿದರು. ಕರೋನಾದಿಂದ ಸಂಘದ ಚಟುವಟಿಕೆಗಳ ಮೇಲಾದ ಅಡ್ಡ ಪರಿಣಾಮಗಳ ಬಗ್ಗೆಯೂ ಆರ್‌ಎಸ್‌ಎಸ್ ನಾಯಕರಿಗೆ ಅರಿವಿದೆ. ಲಾಕ್‌ಡೌನ್ ವೇಳೆ ದೇಶಾದ್ಯಂತ ಇರುವ ಸಂಘದ ನಿತ್ಯ ಶಾಖೆಗಳು ಬಂದ್ ಆಗಿದ್ದವು. ಅವು ಮತ್ತೆ ತೆರೆದಿದ್ದು 2020ರ ನವೆಂಬರ್‌ನಲ್ಲಿ.
2021ರ ಮಾರ್ಚ್‌ನಲ್ಲಿ ಪ್ರಕಟವಾದ ಎಬಿಪಿಎಸ್ ವರದಿಯ ಪ್ರಕಾರ ಈಗ ಸಂಘದ ಶೇ.90ರಷ್ಟು ಶಾಖೆಗಳು  ಪುನಾರಂಭ ಗೊಂಡಿವೆ. ದರೆ, ಶಾಖೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಭಾರತದಲ್ಲಿ ಆರ್‌ಎಸ್‌ಎಸ್ ಅತಿದೊಡ್ಡ ಖಾಸಗಿ ಶಾಲೆಗಳಸರಣಿಯನ್ನು ಹೊಂದಿದೆ. ಅವೂ ಕೂಡ ಲಾಕ್‌ಡೌನ್ ವೇಳೆ ಬಂದ್ ಆಗಿದ್ದವು. ಈಗಷ್ಟೇ ಮತ್ತೆ ಬಾಗಿಲು ತೆರೆಯುತ್ತಿವೆ.
ಸಂಘದ ‘ಸೇವಾ’ ಚಟುವಟಿಕೆಗಳನ್ನು ಮತ್ತೆ ಮೊದಲಿನಂತೆ ದೊಡ್ಡ ಪ್ರಮಾಣದಲ್ಲಿ ಪುನಾರಂಭಿಸಲು ಸಾಕಷ್ಟು ಶ್ರಮ ಹಾಕುವ ಅಗತ್ಯವಿದೆ. ಇನ್ನು, ರಾಷ್ಟ್ರೀಯ ಭದ್ರತೆಗಿರುವ ಆತಂಕಗಳನ್ನು ನಿವಾರಿಸುವ ಅಗತ್ಯವಿದೆ ಎಂದೂ ಎಬಿಪಿಎಸ್ ಹೇಳುತ್ತಿದೆ. ಕರೋನಾ ವೈರಸ್ ಹುಟ್ಟಿದ್ದು ಚೀನಾದಲ್ಲಿ ಎಂಬ ವಾದ, ಅದರ ಜತೆಗೆ ಪೂರ್ವ ಲಡಾಖ್ ನಲ್ಲಿ ಭಾರತದ ಮೇಲೆ ಚೀನಾ ಸೇನೆಯ ದಬ್ಬಾಳಿಕೆ – ಇವೆರಡೂ ಸಂಗತಿಗಳು ಒಟ್ಟಾರೆ ಬಿಕ್ಕಟ್ಟಿಗೆ ಬೇರೆಯದೇ ಆದ ದೃಷ್ಟಿಕೋನವನ್ನೂ ನೀಡುತ್ತಿವೆ.
ಮುಂದಿನ ಮೂರು ವರ್ಷಗಳಲ್ಲಿ ದೇಶದ ಪ್ರತಿ ತಾಲೂಕಿನಲ್ಲೂ ಆರ್‌ಎಸ್‌ಎಸ್‌ನ ಸ್ಥಳೀಯ ಶಾಖೆಗಳನ್ನು ತೆರೆಯಲು ಹಾಗೂ ಸಂಘದ ಉಪಸ್ಥಿತಿಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲು ಸಂಕಲ್ಪ ಮಾಡಲಾಗಿದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಘದ ಅಸ್ತಿತ್ವ ದುರ್ಬಲವಾಗಿರುವ ಕಡೆ ಇದಕ್ಕೆ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಸದ್ಯ ಆರ್‌ಎಸ್ ಎಸ್‌ನಲ್ಲಿ 6000 ಮಂದಿ ಪೂರ್ಣಾವಽ ಕಾರ್ಯಕರ್ತರಿದ್ದಾರೆ. ಅವರ ಸಂಖ್ಯೆಯನ್ನೂ ಹೆಚ್ಚಿಸಬೇಕಾದ ಅಗತ್ಯವಿದೆ.ಅಂದರೆ ಹೆಚ್ಚಿನ ಕಾರ್ಯಕರ್ತರಿಗೆ ತರಬೇತಿ ನೀಡಿ ಅವರನ್ನು ಸಂಘದ ಚಟುವಟಿಕೆಗಳಿಗೆ ಸಜ್ಜುಗೊಳಿಸಬೇಕಾಗುತ್ತದೆ.
ಆರ್‌ಎಸ್‌ಎಸ್‌ನ ಸಹ ಸಂಸ್ಥೆಯಾಗಿರುವ ವಿಶ್ವ ಹಿಂದೂ ಪರಿಷತ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ದೇಣಿಗೆ ಸಂಗ್ರಹಿಸುತ್ತಿದೆ. ಅದನ್ನು ಇನ್ನಷ್ಟು ವಿಸ್ತರಿಸುವ ಜವಾಬ್ದಾರಿಯೂ ಸಂಘದ ಮೇಲಿದೆ. ಸಾವಿರಾರು ಆರ್ ಎಸ್‌ಎಸ್ ಸದಸ್ಯರು ವಿಶ್ವ ಹಿಂದೂ ಪರಿಷತ್‌ಗೆ ಈ ಕಾರ್ಯದಲ್ಲಿ ನೆರವು ನೀಡಲು ನಿಯೋಜಿತರಾಗಿದ್ದಾರೆ.
ಆರಂಭದಲ್ಲಿ 1100 ಕೋಟಿ ರುಪಾಯಿ ಸಂಗ್ರಹಿಸಲು ಹಾಕಿಕೊಂಡಿದ್ದ ಗುರಿ ಕೆಲವೇ ದಿನಗಳಲ್ಲಿ ಈಡೇರಿಕೆಯಾಗಿ ಅದರ ದುಪ್ಪಟ್ಟು ಹಣ ಸಂಗ್ರಹವಾಗಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ. ಇನ್ನು, ಆರ್‌ಎಸ್‌ಎಸ್ ಹುಟ್ಟಿ 100ವರ್ಷ ಗಳಾಗುತ್ತಿವೆ. 1925ರಲ್ಲಿ ಜನಿಸಿದ ಸಂಘದ ಶತಮಾನೋತ್ಸವವನ್ನು ಅದ್ಧೂರಿಯಾಗಿಯೇ ಆಚರಿಸಬೇಕು. ಜೊತೆಗೆ, ಏ.13ರಿಂದ ದೇಶಾದ್ಯಂತ ಸಂಘದ ಸಹಯೋಗದಲ್ಲಿ ಆರಂಭವಾಗುತ್ತಿರುವ ನೀರಿನ ಬರ ನೀಗುವ ಹಾಗೂ ಮಣ್ಣಿನ ಗುಣಮಟ್ಟ ಹೆಚ್ಚಿಸುವ ನಾನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸುವ ಅಗತ್ಯವಿದೆ.
ವಿಜಯದಶಮಿಯ ಭಾಷಣ ಹಾಗೂ ಇತ್ತೀಚಿನ ಎಬಿ ವಿಪಿ ಸಭೆಯಲ್ಲಿ ಆರ್‌ಎಸ್‌ಎಸ್‌ನ ಮೂಲ ಶಕ್ತಿಯಾಗಿರುವ ಎಬಿವಿಪಿ ಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಬಗ್ಗೆ ಚರ್ಚಿಸಲಾಗಿದೆ. ಈ ಎಲ್ಲ ಕಾರ್ಯಸೂಚಿಗಳೂ ದತ್ತಾತ್ರೇಯ ಹೊಸಬಾಳೆ ಅವರ ಮುಂದಿರುವ ಜವಾಬ್ದಾರಿಯನ್ನು ಹೆಚ್ಚಿಸಿವೆ. ಹಿರಿಯ ನಾಯಕರು ಅವರನ್ನು ಈ ಮಹತ್ವದ ಹುದ್ದೆಗೆ ತಂದಿರುವುದರ ಉದ್ದೇಶ ಗಳಲ್ಲಿ ಇದೂ ಒಂದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ವಾಲ್ಟರ್ ಕೆ ಆಂಡರ್‌ಸನ್ಅಮೆರಿಕ ಮೂಲದ ವಾಲ್ಟರ್ ಕೆ. ಆಂಡರ್‌ಸನ್ ಅವರು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಆರ್‌ಎಸ್‌ಎಸ್ ಮೇಲೆ ಅವರ ಅಪಾರವಾದ ಸಂಶೋಧನೆ ನಡೆಸಿ ಪುಸ್ತಕವನ್ನು ಹೊರತಂದಿದ್ದಾರೆ. ಸದ್ಯ ಜಾನ್ ಹಾಪ್ಕಿನ್ಸ್ ವಿವಿಯ ದಕ್ಷಿಣ ಏಷ್ಯಾ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ವಿಶ್ವವಿದ್ಯಾಲಯಗಳಿಗೆ ಅಂತಾ ರಾಷ್ಟ್ರೀಯ ಪೊಲಿಟಿಕ್ ಸೈನ್ಸ್‌ನ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.