ಡಾ.ಬಿ.ಆರ್‌.ಅಂಬೇಡ್ಕರ್‌ ಅರ್ಥಶಾಸ್ತ್ರದ ಮಾಣಿಕ್ಯ
ಸ್ಮರಣೆ
ಡಾ.ಪಾಂಡುರಂಗ ಆರ್‌.
ಡಾ.ಬಿ.ಆರ್ ಅಂಬೇಡ್ಕರ್ ಭಾರತ ದೇಶದ ಸಂವಿಧಾನಶಿಲ್ಪಿ, ನ್ಯಾಯವಾದಿ, ರಾಜಕೀಯ ಮುತ್ಸದ್ದಿ, ಸಮಾಜ ಸುಧಾರಕ, ಬುದ್ಧ-ಅಶೋಕನ ತರುವಾಯ ಬೌದ್ಧಧರ್ಮ ಮರುಸ್ಥಾಪಸಿದ ಹರಿಕಾರ, ಸಮಾಜದಲ್ಲಿನ ಶೋಷಿತ ಜನಾಂಗದ ಧ್ವನಿಯಾಗಿ, ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಿ ಹಾಗು ಆಧ್ಯಾತ್ಮಜೀವಿಯಾಗಿ ಹೀಗೆ ಹತ್ತು-ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮಹಾನ್‌ಜ್ಞಾನಿ.
ಆದರೆ ಡಾ.ಬಿ.ಆರ್.ಅಂಬೇಡ್ಕರವರನ್ನು ಒಬ್ಬ ಮೇಧಾವಿ ಅರ್ಥಶಾಸ್ತ್ರಜ್ಞ ಎಂದು ಕೂಡ ಹೇಳಬಹುದು.1998ರಲ್ಲಿ ಡಾ. ಅಮರ್ಥ್ಯ ಸೇನ್ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕವನ್ನು ನೀಡಲಾಯಿತು. ನೊಬೆಲ್ ಪಾರಿತೋಷಕವನ್ನು ಸ್ವೀಕರಿಸಿದ ಅಮ್ಯರ್ಥ ಸೇನ್ ಅವರು ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಕುರಿತು ‘ಅರ್ಥಶಾಸ್ತ್ರದ ಪಿತಾಮಹ’ ಎಂದು ಹೇಳಿರುವ ವಿಷಯವು ಜನಮಾನಸಕ್ಕೆ ತಿಳಿದ ವಿಷಯ. ಹೀಗಿರುವಾಗ ಪ್ರಸ್ತುತ ದಿನದಲ್ಲಿ ಅರ್ಥಶಾಸ್ತ್ರವನ್ನು ಬೋಧಿಸುವ ಶಿಕ್ಷಕರು ಅಂಬೇಡ್ಕರವರ ಆರ್ಥಿಕ ವಿಚಾರಧಾರೆಗಳನ್ನು ತಿಳಿದುಕೊಳ್ಳುವ ಮತ್ತು ಬೋಧಿಸುವುದರಲ್ಲಿ  ವೈಫಲ್ಯವಾಗುತ್ತಿರು ವುದು ವಿಷಾದನೀಯ ಸಂಗತಿ.
ನಾನು ಒಬ್ಬ ಅರ್ಥಶಾಸ್ತ್ರದ ಸಂಶೋಧಕ ಹಾಗು ಉಪನ್ಯಾಸಕನಾಗಿ ಅಂಬೇಡ್ಕರವರ ಆರ್ಥಿಕ ಸಲಹೆ ಮತ್ತು ಕೊಡುಗೆಗಳನ್ನು ತಿಳಿಸುವ ನಿಟ್ಟಿನಲ್ಲಿ ಈ ಲೇಖನವನ್ನು ಪ್ರಸ್ತುತ ಪಡಿಸಲು ಇಚ್ಛಿಸುತ್ತೇನೆ. ವಿಶೇಷವಾಗಿ ಡಾ.ಬಿ.ಆರ್ ಅಂಬೇಡ್ಕರವರು ಅರ್ಥಶಾಸ್ತ್ರ ವಿಷಯದ ಕುರಿತು ವಿದೇಶದಲ್ಲಿ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅವರು ಅರ್ಥಶಾಸ್ತ್ರ ವಿಷಯದಲ್ಲಿ ಮಾಡಿದಂತಹ ಸಾಧನೆಗಳು ಅಪಾರ. 1915ರಲ್ಲಿ ಕೊಲಂಬಿಯ ವಿಶ್ವ ವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು. 1923ರಲ್ಲಿ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್‌ನಲ್ಲಿ ‘ದಿಪ್ರಾಬ್ಲಮ್ ಆಫ್ ರೂಪಿ : ಇಟ್ಸ್ ಆರೀಜನ್ ಆಂಡ್ ಸಲ್ಯೂಷನ್’ ಎಂಬ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರ್ ಆಫ್  ಸೈನ್ಸ್ ಎಂಬ ಪದವಿಯನ್ನು ಪಡೆದರು. 1927ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಫಿಲಾಸಫಿಯನ್ನು ‘ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸಿನ ವಿಕಾಸನ : ಸಾಮ್ರಾಜ್ಯಶಾಹಿ ಹಣಕಾಸು ಪ್ರಾಂತೀಯ ವಿಕೇಂದ್ರಿಕರಣದ ಮೇಲೆ ಒಂದು ಅಧ್ಯಯನ’ ಎಂಬ ಪ್ರಬಂಧಕ್ಕೆ ಪದವಿ ಪಡೆದರು. ಈ ಸಂಶೋಧನಾ ಮಹಾಪ್ರಬಂಧಕ್ಕೆ ಸಾರ್ವಜನಿಕ ಹಣಕಾಸಿನ ಹೆಸರಾಂತ ಅರ್ಥಶಾಸಜ್ಞರಾದ ಪ್ರೊ. ಎಡ್ವಿನ್ ಆರ್.ಎ. ಸೆಲಿಗ್ಮನ್ ಮಾರ್ಗದರ್ಶಕರಾಗಿದ್ದರು.
1952ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯ ಡಾ.ಬಿ.ಆರ್ ಅಂಬೇಡ್ಕರವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು. ‘ದಿ ಪ್ರಾಬ್ಲಮ್ ಆಫ್ ರೂಪಿ : ಇಟ್ಸ್ ಆರೀಜನ್ ಆಂಡ್ ಸಲ್ಯೂಷನ್’ಎಂಬ ಸಂಶೋಧನಾ ಪ್ರಬಂಧವು ಭಾರತೀಯ ಹಣಕಾಸಿನ ಇತಿಹಾಸ ಮತ್ತು ಬ್ಯಾಂಕುಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿತು. ಈ ಪ್ರಬಂಧವನ್ನು ಆಧಾರವಾಗಿಟ್ಟುಕೊಂಡು ಹಿಲ್ಟನ್ ಯಂಗ್ ಕಮಿಷನ್ ಎಂಬ ಆಯೋಗವು ಆರ್‌ಬಿಐ ಎಂಬ ಕೇಂದ್ರ ಬ್ಯಾಂಕನ್ನು ಸ್ಥಾಪಿಸಬೇಕೆಂದು ಸೂಚನೆ ನೀಡಿತು. ಈಸೂಚನೆಯಾನ್ನಾಧರಿಸಿ 1935ರಲ್ಲಿ ಆರ್‌ಬಿಐ ಸ್ಥಾಪನೆಗೊಂಡಿತು.
ಅರ್ಥಶಾಸ್ತ್ರ ಮತ್ತು ಸಂವಿಧಾನ
ಪ್ರಂಪಚದಲ್ಲಿ ಒಬ್ಬ ಅರ್ಥಶಾಸ್ತ್ರಜ್ಞನಿಂದ ಮತ್ತು ಆರ್ಥಿಕ ಅಂಶಗಳು ಒಳಗೊಂಡು ರಚನೆಯಾಗಿರುವ ಏಕೈಕ ಸಂವಿಧಾನ ವೆಂದರೆ ಅದುವೇ ಭಾರತೀಯ ಸಂವಿಧಾನ. ಈ ಸಂವಿಧಾನದ ಮುಖೇನ ಆರ್ಥಿಕ ವಿಚಾರಗಳನ್ನು ಒಳಗೊಂಡ ವಿಧಿಗಳನ್ನು ಉಲ್ಲೇಖಿಸುತ್ತ. ಭಾರತ ಸಂವಿಧಾನದ 112ನೇ ವಿಧಿ ಕೇಂದ್ರ ಮುಂಗಡ ಪತ್ರದ ಬಗ್ಗೆ ಹೇಳಿದರೆ,202ನೇ ವಿಧಿ ರಾಜ್ಯ ಮುಂಗಡ ಪತ್ರದ ಬಗ್ಗೆ ಉಲ್ಲೇಖಿಸುತ್ತದೆ. ಹಾಗೆಯೇ280ನೇ ವಿಧಿ ಹಣಕಾಸಿನ ಆಯೋಗದ ಬಗ್ಗೆ ಹಾಗು360ನೇ ವಿಧಿ-ಹಣಕಾಸಿನ ಸಂದಿಗ್ದ ಪರಿಸ್ಥಿತಿ ಕುರಿತು ಉಲ್ಲೇಖಿಸುತ್ತದೆ.
301ರಿಂದ407ರ ವಿಧಿಯು ವ್ಯಾಪಾರ ಮತ್ತು ವಾಣಿಜ್ಯದ ಬಗೆಗಳನ್ನು ಉಲ್ಲೇಖಿಸುತ್ತದೆ. ಅದೇ ರೀತಿಯಾಗಿ ಸಂವಿಧಾನದಲ್ಲಿ ಅನೇಕ ತಿದ್ದುಪಡಿಗಳನ್ನು ಮಾಡಿ, ವಿಶೇಷವಾಗಿ73ಮತ್ತು74ನೇ ತಿದ್ದುಪಡಿ ಸ್ಥಳೀಯಸರಕಾರ ರಚನೆಗೆ ಹೆಚ್ಚಿನ ಪ್ರಾಶಸ್ತ್ಯನೀಡಲಾಯಿತು. ಈ ಅಂಶವನ್ನು ಗಮನಿಸಿ ಭಾರತೀಯ ಆರ್ಥಿಕತೆಯ ನಾಡಿ-ಮಿಡಿತವನ್ನು ಅರಿತುಕೊಂಡು ಸಂವಿಧಾನದಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ಆರ್ಥಿಕ ವಿಚಾರಧಾರೆಗಳಿಗೆ ನೀಡಲಾಯಿತು.
ಕೈಗಾರಿಕೀಕರಣಕೈಗಾರಿಕೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ವಿಶೇಷವಾಗಿ ವೇಗದ ಕೈಗಾರಿಕೀಕರಣವಿಲ್ಲದೆ ದೇಶದ ಅಭಿವೃದ್ಧಿಯು ಅಸಾಧ್ಯ ಎಂದರು. ಏಕೆಂದರೆ ಕೈಗಾರಿಕೀಕರಣದಿಂದ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗವನ್ನು ನಿರ್ಮಿಸುವುದರ ಜತೆಗೆ ವಿದೇಶಿ ವಿನಿಮಯ ವ್ಯಾಪಾರವನ್ನು ಸೃಷ್ಠಿಸಬಹುದು. ಅದೇ ರೀತಿಯಾಗಿ ಕಚ್ಚಾ ಸರಕುಗಳನ್ನು ಸರಿಯಾದ ಮತ್ತು ಸಮಾನತೆಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವುದಕ್ಕಾಗಿ ಕೈಗಾರಿಕೀಕರಣವನ್ನು ರಾಷ್ಟ್ರೀಕರಣಗೊಳಿಸಬೇಕೆಂದು ವಾದಿಸಿದರು.
ಕೃಷಿ ಪ್ರಧಾನ ಉದ್ಯಮಭಾರತದಲ್ಲಿ ಶ್ರಮಿಕರು ಹೆಚ್ಚಿರುವುದರಿಂದ ಶ್ರಮಸಾಂದ್ರ ಉತ್ಪಾದನೆಗೆ ಸಲಹೆ ನೀಡುವುದರ ಜತೆಗೆ ಕೃಷಿಯನ್ನು ಪ್ರಧಾನ ಉದ್ಯಮವಾಗಿ ಪರಿಗಣಿಸಬೇಕೆಂದು ಸಲಹೆ ನೀಡಿದರು. ಕೃಷಿಯಲ್ಲಿ ಸಣ್ಣ ಹಿಡುವಳಿಗಳ ಸಮಸ್ಯೆಯನ್ನು ವ್ಯಾಪಕವಾಗಿ ಅಧ್ಯಯನ ಮಾಡಿದರು. ಭೂ ವಿಭಜನೆ ಮತ್ತು ಭೂ ವಿಘಟನೆಯಿಂದ ಕಡಿಮೆ ಉತ್ಪಾದನೆ ಆಗುತ್ತದೆ ಎಂದು ಅವಲೋಕಿಸಿಭೂ ವಿಕೇಂದ್ರೀಕರಣಕ್ಕೆ ಆಧ್ಯತೆ ನೀಡುವುದರ ಜತೆಗೆ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಭೂ ರಾಷ್ಟ್ರೀಕರಣ ಅವಶ್ಯವೆಂದರು.
ಮಹಿಳಾ ಸುಧಾರಣೆ ಮತ್ತು ಆರ್ಥಿಕ ಉನ್ನತಿಮಹಿಳಾ ಸುಧಾರಣೆ ಮತ್ತು ಮಹಿಳೆಯರ ಆರ್ಥಿಕ ಉನ್ನತಿಗೆ ಡಾ. ಬಿ.ಆರ್. ಅಂಬೇಡ್ಕರ್ ರವರ ಕೊಡುಗೆ ಅಪಾರವಾದದ್ದು. ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಇಲ್ಲದಿದ್ದರೆ ಮಹಿಳೆಯರ ಸಾಮಾಜಿಕ ಸ್ಥಾನ-ಮಾನ ಮತ್ತು ಸಮಾನತೆಯನ್ನು ಸಾಧಿಸಲು ಅಸಾಧ್ಯವೆಂದು ಹೇಳಿದರು. ಡಾ.ಬಿ.ಆರ್ ಅಂಬೇಡ್ಕರ್ ರವರು ಹೇಳುವಂತೆ “ನಾನು ಒಂದುದೇಶದ ಪ್ರಗತಿಯನ್ನು ಮಹಿಳೆಯರು ಸಾಧಿಸಿದ ಪ್ರಗತಿಯ ಆಧಾರದ ಮೇಲೆ ಅಳೆಯುತ್ತೇನೆ” ಎಂದರು.
ಮಹಿಳೆಯರಲ್ಲಿ ಸಮಾನತೆಯನ್ನು ತರುವ ಉದ್ದೇಶಕ್ಕಾಗಿ ದಿ ಹಿಂದೂ ಕೋಡ್ ಬಿಲ್‌ನ್ನು ಜಾರಿಗೆಗೊಳಿಸಲು ಒತ್ತಾಯಿಸಿದಾಗ ಆಗಿನ ಸರ್ಕಾರ ಇದನ್ನು ನಿರಾಕರಿಸಿದ್ದಕ್ಕಾಗಿ ತಮ್ಮ ಕಾನೂನು ಸಚಿವ ಸ್ಥಾನವನ್ನು ತ್ಯಾಗ ಮಾಡಿದರು. ಆದರೆ ಡಾ.ಬಿ.ಆರ್. ಅಂಬೇಡ್ಕರವರು ಮಹಿಳೆಯರ ಸುಧಾರಣೆಗಾಗಿ ಮಾಡಿದಂತಹ ಹೋರಾಟ ಮತ್ತು ಸಾಧನೆ ಈ ದಿನಮಾನಗಳಲ್ಲಿಸಾಕ್ಷರತೆಯನ್ನು ಹೊಂದಿದ ಮಹಿಳೆಯರು ಎಷ್ಟರ ಮಟ್ಟಿಗೆ ಅವಲೋಕನವನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬುವುದು ಅವರ ವಿವೇಚನೆಗೆ ಬಿಟ್ಟಿದ್ದು.
ಬ್ರಿಟಿಷ್ ಹಣಕಾಸಿನ ನೀತಿಯನ್ನು ವಿರೋಧಿಸಿದರು ಡಾ.ಬಿ.ಆರ್. ಅಂಬೇಡ್ಕರ್‌ರವರು ಬ್ರಿಟಿಷ್ ಆಡಳಿತ ಹಣಕಾಸಿನ ನ್ಯೂನತೆ ಗಳನ್ನು ವಿರೋಧಿಸಿದರು ಏಕೆಂದರೆ ವಿಶೇಷವಾಗಿ ತೆರಿಗೆ ಹೊರೆ ಶ್ರೀಮಂತರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಡವರ ಮೇಲೆ ಹೆಚ್ಚು ಎಂದು ಟೀಕಿಸಿದರು. ತೆರಿಗೆಯಿಂದ ಬಂದ ಹಣವನ್ನು ಸಾರ್ವಜನಿಕರಿಗೆ ಖರ್ಚು ಮಾಡದೆ ಕೇವಲ ಆಡಳಿತ ವರ್ಗ ಮತ್ತು ಗಣ್ಯರುಗಳಿಗೆ ಸೌಲತ್ತುಗಳನ್ನು ಒದಗಿಸಲು ವೆಚ್ಚ ಮಾಡಲಾಗುತ್ತಿತ್ತು. ಬ್ರಿಟಿಷರ ದಬ್ಬಾಳಿಕೆ ಮತ್ತು ದೋಷಪೂರಿತ ತೆರಿಗೆ ನೀತಿಯನ್ನು ವಿರೋಧಿಸಿದರು.
ಒಟ್ಟಾರೆಯಾಗಿ ಹೆಸರಾಂತ ವಿಶ್ವವಿದ್ಯಾಲಯಗಳಾದ ಕೊಲಂಬಿಯ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್  ಎಕಾನಮಿಕ್ಸ್ ನಂತಹ ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಪಡೆದು ಮತ್ತು ಗೌರವಿಸಲ್ಪಟ್ಟ ಭಾರತದ ಆರ್ಥಿಕತೆ ಬೆಳವಣಿಗೆಗೆ ತಮ್ಮದೆ ಆದ ಅಭೂತಪೂರ್ವ ಕೊಡುಗೆಗಳನ್ನು ನೀಡಿದ ಮಹಾನಾಯಕನಾದ ಡಾ.ಬಿ.ಆರ್.ಅಂಬೇಡ್ಕರವರನ್ನು ಯಾವುದೇ ಜಾತಿ ಮತ್ತು ಧರ್ಮಕ್ಕೆ ಮೀಸಲಿಡುವುದು ಭಾರತೀಯರಾದ ನಾವು ನಮ್ಮಷ್ಟಕ್ಕೆ ನಾವೇ ಅಪಮಾನ ಮಾಡಿ ಕೊಂಡಂತೆ, ಅದಕ್ಕಾಗಿ ಭಾರತೀಯರಾದ ನಾವು ಹೇಗೆ ಕೌಟಿಲ್ಯನನ್ನು ಅರ್ಥಶಾಸದ ಚಾಣುಕ್ಯನೆಂದು ಕರೆಯುತ್ತೇವೆ ಅದೇ ರೀತಿಯಾಗಿ ಡಾ.ಬಿ.ಆರ್.ಅಂಬೇಡ್ಕರವರನ್ನು ಭಾರತದ ಅರ್ಥಶಾಸ್ತ್ರದ ಮಾಣಿಕ್ಯ ಎಂದು ಕರೆಯುವುದರಲ್ಲಿ ಅರ್ಥಪೂರ್ಣ ವಾಗಿದೆ. ಇಂತಹ ಮಹಾನ್ ವ್ಯಕ್ತಿಯ 130ನೆಯ ಜಯಂತಿಗೆ ಶುಭಕೋರಿರುತ್ತೇನೆ.