ಪರಂಪರೆಯ ಮಾರ್ಗದರ್ಶಿ ಪಂಚಾಂಗ
ತನ್ನಿಮಿತ್ತ
ನಂ.ಶ್ರೀಕಂಠ ಕುಮಾರ
ಶ್ರೀ ಕಲ್ಯಾಣಗುಣಾವಹಂ ರಿಪುಹರಂದುಸ್ಸ್ವಪ್ನದೋಷಾಪಹಂ |ಗಂಗಾಸ್ನಾನ ವಿಶೇಷ ಪುಣ್ಯಫಲದಂಗೋಆನತುಲ್ಯಂ ನೃಣಾಂ ||ಅಯರ್ವೃದ್ಧದಮುತ್ತಮಂ ಶುಭಕರಂ ಸಂತಾನಸಂಪತ್ಪ್ರದಂ |ನಾನಾಕರ‍್ಮಸುಸಾಧನಂ ಸಮುಚಿತಂಪಂಚಾಂಗಮಾಕರ್ಣ್ಯತಾಂ ||
ಸಂಪದ್ಯುಕ್ತವಾದ ಸಕಲ ಗುಣಗಳನ್ನು ಹೊಂದಿರುವ, ಶತ್ರುನಾಶಕರವೂ, ಸುಸ್ವಪ್ನ ದೋಷ ನಿವಾರಕವೂ, ಗಂಗಾನದಿ ಸ್ನಾನದಿಂದುಂಟಾಗುವ ವಿಶೇಷ ಪುಣ್ಯಫಲ ದಾಯಕವೂ, ಗೋದಾನಕ್ಕೆ ಸಮಾನವೂ, ಜನರಿಗ ಆಯುರ್ವೃದ್ಧಿದಾಯಕವೂ, ಶುಭದಾಯಕವೂ, ಸುಸಂತಾನ ಸಂಪತ್ತನ್ನುಂಟು ಮಾಡುವುದೂ, ನಾನಾ ವಿಧ ಕರ‍್ಮಗಳಿಗೆ ಉತ್ತಮ ಸಾಧನವೂ ಆಗಿರುವಪಂಚಾಂಗ ಫಲವನ್ನು ಶ್ರವಣ ಮಾಡತಕ್ಕದ್ದು.
ಸನಾತನ ಧರ್ಮದ ಜೀವನ ಶೈಲಿಯಲ್ಲಿ ಪದ್ದತಿಗಳು, ಆಚಾರ ವಿಚಾರಗಳು, ಹಬ್ಬ-ಹರಿದಿನಗಳೆಲ್ಲವೂ ಒಂದು ವ್ಯವಸ್ಥಿತ ಸಿದ್ಧಾಂತದಿಂದ ಸೂಚಿತಗೊಂಡು ಇದೆಲ್ಲವೂ ನಿಗದಿತ ಮಾರ್ಗದರ್ಶನದ ಮೇರೆಗೆ ಜರುಗುತ್ತವೆ. ವಿಶೇಷವಾಗಿ ಸನಾತನ ಧರ್ಮಾಚರಣೆಯೂ ಸಂವತ್ಸರದ ಆರಂಭವು ಚಾಂದ್ರಮಾನ ರೀತಿ ಸಿದ್ಧಾಂತ ಗಣಿತ ರೀತ್ಯಾ ಚೈತ್ರ ಶುಕ್ಲ ಪ್ರತಿಪತ್ ರಂದು ಯುಗಾದಿ ಹಬ್ಬದ ಆಚರಣೆಯಿಂದ ಪ್ರಾರಂಭವಾಗುತ್ತದೆ.
ಹಬ್ಬದಂದು ಮೈಸೂರು ರೇಷ್ಮೆ ವಸ್ತ್ರಗಳನ್ನು ಧರಿಸಿ, ಮೈಸೂರು ಮಲ್ಲಿಗೆ ಮುಡಿದು, ವೀಳೆಯದೆಲೆಯನ್ನು ಜೋಡಿಸಿ ಪೂಜೆಗೆ ಅಣಿ ಮಾಡುವುದು ಹೆಂಗಳೆಯರ ಸಂಭ್ರಮವಾದರೆ, ಹಿರಿಯರು ನೂತನ ಸಂವತ್ಸರದ ಮೈಸೂರು ಪಂಚಾಂಗವನ್ನಿಟ್ಟು, ಕುಂಕುಮ ಅರಿಶಿನವನ್ನು ಲೇಪಿಸಿ ಪೂಜಿಸಿ, ಪಂಚಾಂಗ ಶ್ರವಣ ಮಾಡಿ ನಂತರ ಕುಟುಂಬದವರೆಲ್ಲರೂ ಸುಖ, ದುಖಃಗಳ ಸಮಾನಸಂಕೇತವಾಗಿ ಬೇವು-ಬೆಲ್ಲವನ್ನು ‘ಶತಾಯುರ್ವವಜ್ರ ದೇಹಾಯ ಸರ‍್ವಸಂಪತ್ಕರಾಯಚ| ಸರ‍್ವಾರಿಷ್ಟವಿನಾಶಾಯನಿಂಬಕಂದಳ ಭಕ್ಷಣಂ ||” ( ಅಂದರೆ ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾರಣೆಗಾಗಿಯೂ) ಎಂದು ಹೇಳಿ ಸೇವಿಸುವುದು ಹಬ್ಬದ ವಿಶೇಷ.
ಸನಾತನ ಹಿಂದೂ ಧರ್ಮಾಚರಣೆಗೂ, ಪಂಚಾಂಗಕ್ಕೂ ಬಿಡಿಸಲಾಗದ ಬಾಂಧವ್ಯ. ಜ್ಯೋತಿಶಾಸ್ತ್ರವು ವೇದದ ಒಂದು ಅಂಗ. ಅದರಲ್ಲಿ ಸಿದ್ದಾಂತ, ಸಂಹಿತ ಹಾಗೂ ಹೋರಾ ಎಂಬ ಪ್ರಮುಖ ಭಾಗಗಳಿವೆ. ಸಿದ್ಧಾಂತದಲ್ಲಿ ಗಣಿತ ಕ್ರಮವನ್ನು ವಿವರಿಸಲಾಗಿದೆ. ನಿತ್ಯ ಕರ್ಮಾನುಷ್ಠಾನಕ್ಕೂ, ಶುಭಾಶುಭ ಕರ್ಮಗಳಿಗೂ, ವ್ರತಾದಿ ಹಬ್ಬಗಳ ಆಚರಣೆಗೂ ಸೂರ‍್ಯ ಸಿದ್ಧಾಂತ, ವಾಕ್ಯ,ಆರ್ಯಭಟೀಯ ಸಿದ್ಧಾಂತ, ದೃಗ್ಗಣಿತ ಈ ನಾಲ್ಕೂ ಸೇರಿದ ಶಾಸ್ತ್ರ ಸಮ್ಮತವಾದ ಕಾಲನಿರ್ಣಯಗಳಾದ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳೆಂಬ ಐದು ಅಂಗಗಳಿಂದಲೂ ಕೂಡಿರುವುದರಿಂದ ಪಂಚಾಂಗವೆಂದು ಕರೆಯುತ್ತಾರೆ.
ಪಂಚಾಂಗದ ಆಚರಣೆಯು ಚಾಂದ್ರಮಾನ ಮತ್ತು ಸೌರಮಾನ ಪದ್ಧತಿಗಳಿಂದ ಆಚರಿಸುವ ಸಂಪ್ರದಾಯವಿದೆ. ಇದನ್ನು ಕಾಲಗಣನ ಹಾಗೂ ವೈಜ್ಞಾನಿಕ ಆಧಾರಗಳ ಮೇಲೆ ದಾಖಲಿಸಲು ಹಾಗೂ ವಿಶ್ಲೇಷಿಸಲು ರಚಿಸಿದ ಶಾಸ್ತ್ರವೆಂದು ಕರೆಯುವರು.ಚಂದ್ರನು ಭೂಮಿಯನ್ನು ಸುತ್ತಲು ತೆಗೆದುಕೊಳ್ಳುವ ಚಲನೆಯ ಅವಧಿಯನ್ನು ಆಧರಿಸಿ ಶುಭ-ಅಶುಭ, ರಿಕ್ತ ತಿಥಿಗಳು ಎಂಬ ವಿಶ್ಲೇಷಣೆ ಮಾಡಲಾಗಿದೆ. ಭೂಮಿ ತನ್ನ ಅಕ್ಷದ ಸುತ್ತ ಸುತ್ತು ಹಾಕುವ ಇಪ್ಪತ್ನಾಲ್ಕು ಗಂಟೆಗೆ ಒಂದು ದಿನ ಎಂತಲೂ, ಏಳು ದಿನಗಳಿಗೆ ಪುನರಾವರ್ತನೆ ಆಗುವುದರಿಂದ ಇದನ್ನು ವಾರ ಎಂತಲೂ, ಸೂರ್ಯನನ್ನು ಒಂದು ಗ್ರಹ ಎಂದು ಪರಿಗಣಿಸಿ ರವಿ,ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಗ್ರಹಗಳ ಮೂಲಕ ದಿನಗಳನ್ನು ನಿರ್ಧರಿಸುತ್ತಾರೆ.
ಆಗಸದಲ್ಲಿ ನಮಗೆ ಕೋಟ್ಯನುಕೋಟಿ ನಕ್ಷತ್ರಗಳು ಗೋಚರಿಸಿದರೂ ಸೂರ್ಯನ ಸುತ್ತ ಇರುವ ಅಶ್ವಿನಿ, ಭರಣಿ, ಕೃತಿಕೆ ಇತ್ಯಾದಿ ಇಪ್ಪತ್ತೇಳು ನಕ್ಷತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. ಇನ್ನುಳಿದ ನಕ್ಷತ್ರಗಳನ್ನು ತ್ಯಾಜ್ಯ ನಕ್ಷತ್ರಗಳು ಎಂದು ವಿಶ್ಲೇಷಿಸಲಾಗಿದೆ. ಯೋಗ ಎಂಬುದು ಸೂರ್ಯ ಚಂದ್ರರಿಬ್ಬರು ನಿರ್ದಿಷ್ಟ ಕೋನದ ಸಮೀಪಕ್ಕೆ ಬರುವುದನ್ನು ಯೋಗ ಎನ್ನುತ್ತಾರೆ. ಈ ಯೋಗದಲ್ಲಿ ಸೂರ್ಯ ಚಂದ್ರರ ಚಲನೆಯ ವ್ಯತ್ಯಾಸ ತಿಳಿಸಲಾಗಿದೆ. ಈ ಲೆಕ್ಕಾಚಾರದಿಂದಾಗಿಯೇ ಗ್ರಹಣಗಳು ಯಾವಾಗ ಘಟಿಸುತ್ತದೆ ಎಂಬುದಾಗಿ ನಿರ್ಧರಿಸುವರು.
ಇನ್ನು ಕರಣ, ಸೂರ‍್ಯ, ಚಂದ್ರರ ಚಲನೆಯನ್ನು ದೃಗ್ಗಣಿತ ರೀತ್ಯಾ ಅರ್ಥೈಸಿದರೂ ವೈಜ್ಞಾನಿಕವಾಗಿಯೂ ಸರ್ವಸಮ್ಮತವಾಗಿದೆ.ಧರ್ಮದ ಸ್ವರೂಪವನ್ನು ಪ್ರತ್ಯಕ್ಷವಾಗಿ ನೋಡಿ ತಿಳಿಯಲು ಸಾಧ್ಯವಿಲ್ಲದಿರುವುದರಿಂದ ಅಪೌರುಷೇ ಯವು, ನಿತ್ಯವೂ ಆಗಿರುವ ವೇದಗಳು ಮತ್ತು ತದನುಸಾರವಾಗಿ ವೇದ ದರ್ಶಿಗಳಾದ ಮಹರ್ಷಿಗಳಿಂದ ರಚಿಸಲ್ಪಟ್ಟಿರುವ ಸ್ಮತಿ, ಪುರಾಣ, ಸಿದ್ದಾಂತ, ಆಗಮಾದಿ ಶಾಸ್ತ್ರಗಳು ಅದನ್ನು ವಿಸ್ತಾರವಾಗಿ ನಿರೂಪಿಸುತ್ತವೆ.
ಇವುಗಳೆಲ್ಲದರ ಸಾರವನ್ನು ಹೇಮಾದ್ರಿ, ಮಾಧವಾದಿ ಸರ್ವಜ್ಞರು ಸಂಗ್ರಹಿಸಿ ಧರ್ಮ ನಿಬಂಧಗಳನ್ನು ರಚಿಸಿರುತ್ತಾರೆ. ಇವುಗಳನ್ನೇ ಧರ್ಮ ಶಾಸ್ತ್ರವೆನ್ನುತ್ತಾರೆ. ಧರ್ಮ ಶಾಸಗಳಲ್ಲಿ ಮಾಡಬೇಕಾದ ವಿಧಿ ಹಾಗೂ ಮಾಡಬಾರದ ವಿಧಿಗಳನ್ನು ಪ್ರತ್ಯೇಕಿಸಿ ಹೇಳಲಾಗಿದೆ. ಇದನ್ನು ಧರ್ಮ-ಅಧರ್ಮ ಎಂದು ರೂಢಿಯಲ್ಲಿ ಕರ್ಮಗಳೆಂದು ವಿವರಿಸಲಾಗಿದೆ. ಆಯಾ ಕರ್ಮಗಳುಇಂತಿಂತಹ ಕಾಲದಲ್ಲಿಯೇ ಆಚರಿಸಲ್ಪಡತಕ್ಕವೆಂದು ಕಾಲ ನಿರ್ದೇಶಕ ಪೂರ್ವಕವಾಗಿಯೇ ಶಾಸ್ತ್ರಗಳಲ್ಲಿ ವಿಧಿಸಲ್ಪಟ್ಟಿವೆ.
ಚಾಂಗದಲ್ಲಿ ಸುರ್ಯೋದಯ, ಸೂರ್ಯಾಸ್ತ, ಗ್ರಹಣಾದಿಗಳು, ನಾನಾ ಮುಹೂರ್ತಗಳು, ಶ್ರಾದ್ಧತಿಥಿ ಆಚರಣೆ, ಮಳೆಯೋಗ, ವಿವಾಹೋ ಪಯುಕ್ತವಾದ ದ್ವಾದಶ ಕೂಟಗಳು, ಅಕ್ಷಾಂಶಾದಿಗಳು, ರಥೋತ್ಸವಾದಿಗಳು, ದ್ವಾದಶ ಸಂಕ್ರಮಣ ಮತ್ತುಪುಣ್ಯಕಾಲಗಳು, ಅಶೌಚ ಪ್ರಕರಣಗಳು, ರಾಹುಕಾಲ, ಗುಳಿಕ, ಯಮಗಂಡ ಕಾಲಗಳು, ನವಗ್ರಹಾದಿ ದೇವತಾ ಪೂಜಾ ವಿಧಾನ ಹಾಗೂ ಫಲಗಳು ಇನ್ನಿತರ ಉಪಯುಕ್ತ ಧಾರ್ಮಿಕ ಆಚರಣೆಯನ್ನು ತಿಳಿಸುವ ನಿಟ್ಟಿನಲ್ಲಿ ರಚನೆಯಾಗುತ್ತದೆ.
ಪಂಚಾಂಗ ಕ್ಷೇತ್ರದಲ್ಲಿ ಪ್ರತಿ ಪಂಚಾಂಗಕ್ಕೂ ಅದರದ್ದೇ ಇತಿಹಾಸ ಹಾಗೂ ಪರಂಪರೆಯಿದೆ. ಧರ್ಮಾಚರಣೆಯಲ್ಲಿನ ಆಸ್ತಿಕರ ನಂಬಿಕೆಯಿಂದಾಗಿ ಪಂಚಾಂಗರೀತ್ಯಾ ಪಾಲನೆ ಹೆಚ್ಚಾಗುತ್ತಿದೆ. ಹೀಗಾಗಿ ಹಲವಾರು ಸಿದ್ಧಾಂತಿಗಳು ಹಾಗೂ ಮಠಮಾನ್ಯಗಳುತಮ್ಮದೇ ಆದ ಆಚರಣೆ ಹಾಗೂ ಸಂಪ್ರದಾಯದಂತೆ ಪ್ರತ್ಯೇಕ ಪಂಚಾಂಗವನ್ನು ಹೊಂದಿರುವುದು ಕಾಣಬಹುದು. ಹೆಚ್ಚಿನ ಕನ್ನಡಿಗರು ಪಾಲನೆ ಮಾಡುತ್ತಿರುವ ಪಂಚಾಂಗಗಳಲ್ಲಿ ಮೈಸೂರು ಪಂಚಾಂಗವೇ ಪ್ರಮುಖ ಹಾಗೂ ಪ್ರಖ್ಯಾತವಾಗಿದೆ.
ಸುಮಾರು 134 ವರ್ಷಗಳಿಂದ ವಂಶಪಾರಂಪರ್ಯವಾಗಿ ಪ್ರಕಟವಾಗುತ್ತಿರುವ ಮೈಸೂರು ಪಂಚಾಂಗದ ಮೂಲಕತೃ ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾನ್ ಸಿದ್ಧಾಂತಿ ಶ್ರೀ ತಮ್ಮಯ್ಯ ಶಾಸಿಗಳು ( 1862-1944) ಮೂಲತ: ಕೊಳ್ಳೇಗಾಲ ತಾಲೂಕಿನ ಅಗರ ಗ್ರಾಮದವರು. ಸಾಮವೇದ, ಬೋದಾಯನ ಪ್ರಯೋಗ, ಸಾಹಿತ್ಯ, ಜ್ಯೋತಿಷ್ಯ,  ಧರ್ಮಶಾಸ್ತ್ರ, ವೇದಾಂತಗಳಲ್ಲಿ ಪಾಂಡಿತ್ಯ ಪಡೆದಿದ್ದರು.
ಪ್ರಥಮವಾಗಿ 1887 ರಲ್ಲಿ ಕಾಲಪಂಚಾಂಗವನ್ನು ಗುಣಿಸಿ ಪ್ರಚುರಪಡಿಸಿದರು. 1914 ರಲ್ಲಿ ಇವರ ಪಾಂಡಿತ್ಯವನ್ನು ಗಮನಿಸಿ ಅಂದಿನ ಮೈಸೂರು ಸಂಸ್ಥಾನದ ಪ್ರಭುಗಳಾದ ಶ್ರೀ ಶ್ರೀಮನ್ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ ಅಸ್ಥಾನ ವಿದ್ವಾಂಸರನ್ನಾಗಿ ಹಾಗೂ ಅರಮನೆ ಪಂಚಾಂಗ ಶೋಧನಾ ಕಮಿಟಿಯ ಸದಸ್ಯರಾಗಿನೇಮಿಸಿದ್ದರು. 1942 ರಲ್ಲಿ ಶ್ರೀಮನ್ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಸಿದ್ಧಾಂತಿ ಶ್ರೀ ತಮ್ಮಯ್ಯ ಶಾಸಿಗಳಿಗೆ ಜ್ಯೋತಿಷ್ಯ ರತ್ನಂ ಎಂಬ ಬಿರುದನ್ನು ನೀಡಿ ಚಿನ್ನದ ತೋಡಾ ತೊಡಿಸಿದ್ದರು.
ಇವರ ಕಾಲಾನಂತರ ಪ್ರಥಮ ಪುತ್ರರಾದ ಕೊಳ್ಳೇಗಾಲ ನಿವಾಸಿಗಳಾಗಿದ್ದ ಸಿದ್ಧಾಂತಿ ಟಿ.ವೆಂಕಟಸುಬ್ಬಾ ಶಾಸ್ತ್ರಿಗಳು 1937 ರಲ್ಲಿ ಸೀತಾರಾಘವ ವೈದ್ಯಶಾಲೆಯ ಮೈಸೂರು ಪಂಚಾಂಗ (ಕೊಳ್ಳೇಗಾಲ ಪಂಚಾಂಗ) ಎಂತಲೂ ರಚನೆ ಪ್ರಾರಂಭಿಸಿದರು. ಪಂಚಾಂಗ ಕತೃಗಳಾದ ಸಿದ್ಧಾಂತಿ ಶ್ರೀ ವೆಂಕಟಸುಬ್ಬಾ ಶಾಸ್ತ್ರಿಗಳವರನ್ನು 1943 ರಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಅಭಿನವ ವಿದ್ಯಾತೀರ್ಥ  ಮಹಾಸ್ವಾಮಿಗಳವರು ಶೃಂಗೇರಿ ಶ್ರೀಮಠೀಯ ಪಂಚಾಂಗ ಕರ್ತರನ್ನಾಗಿ ನೇಮಿಸಿಕೊಂಡಿದ್ದರು. ಹಾಗೂ ಜ್ಯೋತಿ ಸಿದ್ಧಾಂತಿ ಕೇಸರಿ ಎಂಬ ಬಿರುದು ನೀಡಿ ಆಶೀರ್ವದಿಸಿದ್ದರು.
ಸಿದ್ಧಾಂತಿ ತಮ್ಮಯ್ಯ ಶಾಸ್ತ್ರಿಗಳ ದ್ವಿತೀಯ ಪುತ್ರರಾದ ಮೈಸೂರು ನಿವಾಸಿಗಳಾಗಿದ್ದ ಸಿದ್ಧಾಂತಿ ಶ್ರೀ ಟಿ.ವೆಂಕಟಕೃಷ್ಣ ಶಾಸ್ತ್ರಿಗಳು 1926 ರಲ್ಲಿ ಒಂಟಿಕೊಪ್ಪಲ್ ಮೈಸೂರು ಪಂಚಾಂಗ ಎಂತಲೂ ಪ್ರತ್ಯೇಕವಾಗಿ ರಚಿಸಿ ಮುಂದುವರೆಸಿದರು. 1932 ರಲ್ಲಿಮೈಸೂರು ಸಂಸ್ಥಾನದ ಅರಮನೆ ವಾಕ್ಯ ಪಂಚಾಂಗವನ್ನು ಗುಣಿಸಿಕೊಡುವುದಕ್ಕೆ ಶ್ರೀಮನ್ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯgರ ಅವರು ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿದರು.
ಸಿದ್ಧಾಂತಿ ಟಿ.ವೆಂಕಟಕೃಷ್ಣ ಶಾಸಿಗಳಿಂದ ಪ್ರಾರಂಭಿಸಲ್ಪಟ್ಟ ಒಂಟಿಕೊಪ್ಪಲ್ ಮೈಸೂರು ಪಂಚಾಂಗವು 1976 ರಿಂದ ಕರ್ನಾಟಕ ಸರಕಾರದ ಅಧಿಕೃತ ಪಂಚಾಂಗವಾಗಿದೆ. ಮುಜರಾಯಿ ಇಲಾಖೆಗೆ ಸಂಬಂಧಿಸಿದ ಹಬ್ಬ ಹರಿದಿನ, ವ್ರತ, ರಥೋತ್ಸವಾದಿಗಳು ಎಲ್ಲದಕ್ಕೂ ಈ ಪಂಚಾಂಗವೇ ಆಧಾರ. 1946 ರಲ್ಲಿ ಸಿದ್ಧಾಂತಿ ವೆಂಕಟಕೃಷ್ಣ ಶಾಸ್ತ್ರಿಗಳು ಪರಂಧಾಮ ವನ್ನು ಹೊಂದಿದ ನಂತರ ಇವರ ಪುತ್ರರಾದ ಸಿದ್ಧಾಂತಿ ಶ್ರೀ ವಿ.ರಾಮಕೃಷ್ಣ ಶಾಸ್ತ್ರಿಗಳು ಪಂಚಾಂಗ ಕತೃಗಳಾಗಿ ಕಾರ್ಯನಿರ್ವಹಿಸಿ ಮುಂದುವರೆಸಿದರು.
ಇಂದಿಗೂ ಇವರ ಪುತ್ರರಾದ ಸಿದ್ಧಾಂತಿ ಆರ್. ಕುಮಾರ್ ರವರು ಹಾಗೂ ಪೌತ್ರರಾದ ಸಿದ್ಧಾಂತಿ ವಿ.ಮನೋಹರ್ ರವರು ಐದನೇ ತಲೆಮಾರಿನ ಪಂಚಾಂಗ ಕತೃಗಳಾಗಿ ವಂಶಪಾರ್ಯಂಪರ್ಯವಾಗಿ ಒಂಟಿಕೊಪ್ಪಲ್ ಮೈಸೂರು ಪಂಚಾಂಗವನ್ನು ನಿರ್ವಹಿಸಿ ಕೊಂಡು ಬರುತ್ತಿದ್ದಾರೆ. ಜತೆಗೆ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗಾಗಿ ಅಲ್ಲಿನ ಅಕ್ಷಾಂಶ, ರೇಖಾಂಶಗಳಿಗೆ ಅನುಗುಣವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ಪಂಚಾಂಗವನ್ನು ಗುಣಿಸಿ ಆಂಗ್ಲ ಭಾಷೆಯಲ್ಲಿ ಪ್ರಕಟಿಸಲಾಗುತ್ತಿದೆ.
ಅಲ್ಲಿ ಜನಿಸಿದ ಮಕ್ಕಳ ಜಾತಕ ಬರೆಯಲು, ಹಬ್ಬ-ಹರಿದಿನ, ವ್ರತ ಆಚರಿಸಲು ಅನುಕೂಲವಾಗುತ್ತಿದೆ. ಒಂಟಿಕೊಪ್ಪಲ್ ಮೈಸೂರು ಪಂಚಾಂಗವು ಶುದ್ಧ, ಸರಳ ಕನ್ನಡದಲ್ಲೇ ಜ್ಯೋತಿಷ್ಯ ವಿಷಯ ಪ್ರಕಟವಾಗುತ್ತಿದೆ ಎಂಬುದೇ ಕನ್ನಡಿಗರಹೆಮ್ಮೆಯ ವಿಷಯ. ಹಾಗೆಯೇ ಆಸ್ತಿಕ ಬಂಧುಗಳೆಲ್ಲರಿಗೂ ನೂತನ ಶ್ರೀ ಪ್ಲವ ಸಂವತ್ಸರದ ಶುಭಾಶಯಗಳು.