ಪ್ರೂಫ್‌ ರೀಡಿಂಗ್ ಅಂದ್ರೆ ನಾವೇ ಮನಸಾರೆ ಮಾಡುವ ಪ್ರೀತಿಯ ಕಾಯಕ
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್‌
ನಟ, ಮಾಜಿ ಸಚಿವ ಅಂಬರೀಶ್ ಅಂತ್ಯಸಂಸ್ಕಾರ ನೆರವೇರಿದ ಮರುದಿನ ನಮ್ಮ ಪತ್ರಿಕೆಯಲ್ಲಿ ಏಳು ಕಾಲಮ್ಮುಗಳಲ್ಲಿ, ದಪ್ಪಕ್ಷರ ಗಳಲ್ಲಿ ‘ದರಿದು ಬಂದ ಜನಪ್ರವಾಹ’ ಎಂಬ ಶೀರ್ಷಿಕೆ ಪ್ರಕಟವಾಗಿತ್ತು. ಅದು ‘ಹರಿದು ಬಂದ ಜನಪ್ರವಾಹ’ ಎಂದಾಗ ಬೇಕಿತ್ತು. ರಾತ್ರಿ ಪಾಳೆಯಲ್ಲಿದ್ದ ಸಂಪಾದಕೀಯ ಸಿಬ್ಬಂದಿಯ ಅಲಕ್ಷ್ಯ ಅಥವಾ ಕಣ್ತಪ್ಪಿನಿಂದ ಈ ದೋಷವಾಗಿತ್ತು.
ಸಂಪಾದಕರ ಮೂಡು ಕೆಡಲು ಇಂಥ ಒಂದು ಪ್ರಮಾದ ಸಾಕು. ಯಾರೂ ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ. ಆದರೆ ಇಂಥ ಕ್ಷುಲ್ಲಕ ಪ್ರಮಾದ ಮಾಡಿದಾಗ, ಆ ಉದ್ದೇಶವಾದರೂ ಏನು ಎಂಬ ಪ್ರಶ್ನೆಯೂ ಏಳುತ್ತದೆ. ಅಷ್ಟು ದೊಡ್ಡ ಅಕ್ಷರಗಳಲ್ಲಿಪ್ರಕಟವಾಗಿದ್ದನ್ನೂ ನೋಡಲಿಲ್ಲವೆಂದರೆ ಅದು ಬೇಜವಾಬ್ದಾರಿಯ ಪರಾಕಾಷ್ಠೆ ಎಂದು ಎಂಥವರಿಗಾದರೂ ಅನಿಸದೇ ಇರದು. ಪತ್ರಿಕೆಯಲ್ಲಿ ಮಾಡಿದ ದೋಷಗಳೆಂದರೆ ಅಮೃತಶಿಲೆಯಲ್ಲಿ ಕೆತ್ತಿದ ಅಕ್ಷರಗಳಂತೆ ಶಾಶ್ವತ.
ಅದನ್ನು ಅಳಿಸಲು ಸಾಧ್ಯವಿಲ್ಲ. ಇದೊಂದು ಸಾಲನ್ನು ನೆನಪಿಸಿಕೊಂಡರೆ, ಈ ಎಚ್ಚರವೇ ಯಾವುದೇ ದೋಷಗಳಾಗದಂತೆ ಕಾಪಾಡುತ್ತದೆ. ಪ್ರೂಫ್ ರೀಡಿಂಗ್ ಒಂದು ಅದ್ಭುತ ಕಲೆ. ಅದೊಂದು ಅಪರೂಪದ, ಪವಿತ್ರ ಕಾರ್ಯ. ಬರಹಗಾರನಾಗಬೇಕಾದವನು ಮೊದಲು ಕರಡು ತಿದ್ದುವವನಾಗಬೇಕು. ಆನಂತರ ಬರಹಗಾರನಾಗಬೇಕು. ಪತ್ರಕರ್ತನಾದವನು ಮೊದಲು ಪ್ರೂಫ್ ರೀಡರ್ ಆಗಲೇಬೇಕು. ಬರೆಯುವಾಗ ಅಥವಾ ಕಂಪೋಸ್ ಮಾಡುವಾಗ ಆ ಶಿಸ್ತು, ಮನಸ್ಥಿತಿಯಿಂದಲೇ ಬರೆಯಬೇಕು. ಬರಹಗಾರರಿಗೆ, ಸಾಹಿತಿಗಳಿಗೆ ಬರೆದಿದ್ದನ್ನು ಮತ್ತೊಮ್ಮೆ ಓದಲು ಸಮಯ ಸಿಗುತ್ತದೆ.
ಆದರೆ ಪತ್ರಕರ್ತರಿಗೆ ಹಾಗಲ್ಲ, ಸದಾ ಡೆಡ್‌ಲೈನ್ ಒತ್ತಡದಲ್ಲಿ ಕೆಲಸ ಮಾಡುವುದರಿಂದ, ತಾವು ಬರೆದಿದ್ದನ್ನು ಮತ್ತೊಮ್ಮೆ ಓದಲು ಸಮಯವಿರುವುದಿಲ್ಲ. ಕೆಲವೊಮ್ಮೆ ನೇರವಾಗಿ ವಿನ್ಯಾಸಗೊಳಿಸುತ್ತಿರುವ ಪುಟದಲ್ಲಿ ಕಂಪೋಸ್ ಮಾಡಬೇಕಾಗುತ್ತದೆ. ಆಗ ಏನು ಬರೆಯುತ್ತೇವೋ, ಏನು ಕಂಪೋಸ್ ಆಗಿರುತ್ತದೋ ಅದೇ ಶಾಶ್ವತ. ಏನಾದರೂ ಪ್ರಮಾದಗಳಾದರೆ, ಪತ್ರಿಕೆಯಲ್ಲಿ ಪ್ರಕಟವಾದ ನಂತರವೇ ಗೊತ್ತಾಗುತ್ತದೆ. ಇದು ಒಂದು ರೀತಿಯಲ್ಲಿ, ಕೊನೆ ವಿಕೆಟ್  ಇಟ್ಟುಕೊಂಡು ಒಂದು ಬಾಲಲ್ಲಿ ಆರು ರನ್ ಹೊಡೆಯಬೇಕಾದ ಸವಾಲನ್ನು ಎದುರಿಸಿದಂತೆ.
ಇಂಥ ಸವಾಲನ್ನು ಪತ್ರಕರ್ತ- ನಾದವನು ನಿತ್ಯವೂ ಎದುರಿಸುತ್ತಲೇ ಇರಬೇಕಾಗುತ್ತದೆ. ಕೆಲವು ಸಲ ಕೊನೆ ಬಾಲಲ್ಲಿ ಸಿಕ್ಸರ್ ಹೊಡೆಯುತ್ತಾರೆ. ಇಲ್ಲವೇ ವಿಕೆಟ್ ಚೆಲ್ಲುತ್ತಾರೆ. ಇದು ಡೆಡ್‌ಲೈನ್‌ನಲ್ಲಿ ಕೆಲಸ ಮಾಡುವಾಗ ಸಹಜ. ಕೆಲವೊಮ್ಮೆ ಸಚಿನ್ ತೆಂಡುಲ್ಕರ್‌ನಂಥ ಮಹಾನ್ ಆಟಗಾರರೂ ಕ್ಷುಲ್ಲಕ ಎಸೆತಕ್ಕೆ ವಿಕೆಟ್ ಒಪ್ಪಿಸಿರುತ್ತಾರೆ. ಪತ್ರಕರ್ತರೂ ‘ಹರಿದು ಬಂದ…’ ಎಂದು ಬರೆಯಲು, ‘ದರಿದು ಬಂದ…’ ಎಂದು ಬರೆಯುತ್ತಾರೆ.
ಆದರೆ ಪ್ರೇಕ್ಷಕರಾಗಲಿ, ಓದುಗರಾಗಲಿ ಇವುಗಳನ್ನು ಸಹಿಸಿಕೊಳ್ಳುವುದಿಲ್ಲ. ಅವರಿಗೆ ತಪ್ಪು ತಪ್ಪೇ. ಅದರ ಹಿಂದಿನ ಕಾರಣ ತಿಳಿದುಕೊಂಡು ಅರ್ಥಮಾಡಿಕೊಳ್ಳುವಷ್ಟು ಸಂಯಮ, ಸಹನೆ ಇರುವುದಿಲ್ಲ. ಅಷ್ಟಕ್ಕೂ ಅಂಥ ಸಂಯಮವನ್ನೇಕೆ ಇಟ್ಟುಕೊಳ್ಳಬೇಕು? ನಾನು ‘ಸಂಯುಕ್ತ ಕರ್ನಾಟಕ’ದಲ್ಲಿ ಕೆಲಸ ಅರಸಿಕೊಂಡು ಹೋದಾಗ ಶಾಮರಾಯರು, ‘ಕನ್ನಡ ಚೆನ್ನಾಗಿ ಬರುತ್ತದಾ? ಕರಡು ದೋಷಗಳಿಲ್ಲದಂತೆ ಬರೆಯುತ್ತೀಯಾ?’ ಎಂದು ಕೇಳಿದ್ದರು.
ನಾನು ‘ಹೌದು’ ಎಂಬಂತೆ ತಲೆಯಲ್ಲಾಡಿಸಿದಾಗ, ಅದರಿಂದ ಸಮಾಧಾನವಾಗದ ರಾಯರು ಇಪ್ಪತ್ತೈದು ದೋಷಪೂರಿತ ಪದಗಳನ್ನು ಕೊಟ್ಟು ಸರಿಯಾಗಿ ಬರೆಯುವ ಟೆಸ್ಟ್ ಕೊಟ್ಟಿದ್ದರು. ‘ಭೇದ-ಭಾವ, ಪ್ರಭೃತಿ, ಬಾಂಧವ್ಯ, ಬಾಧೆ, ಕ್ರೋಡೀಕರಣ, ಸರ್ವೋಚ್ಚ, ಉಚ್ಚಾರ, ಚಾವಣಿ, ಪ್ರಶಸ್ತಿ ಪ್ರದಾನ…ಮುಂತಾದ ಐವತ್ತು ಪದಗಳನ್ನು ಸರಿಯಾಗಿ ಬರೆಯುವುದನ್ನು ರೂಢಿ ಮಾಡಿಕೊಂಡರೆ, ಉತ್ತಮ ಪತ್ರಕರ್ತರಾಗಬಹುದು. ಒಬ್ಬ ಯಶಸ್ವಿ ಪತ್ರಕರ್ತ ಮುನ್ನೂರೈವತ್ತಕ್ಕಿಂತ ಹೆಚ್ಚು ಪದಗಳನ್ನು ಬಳಸುವುದಿಲ್ಲ. ಅಷ್ಟು ಪದಗಳನ್ನು ಕರಗತ ಮಾಡಿಕೊಳ್ಳುವುದು ಕಷ್ಟವೇನಲ್ಲ’ ಎಂದು ಅವರು ಹೇಳಿದ್ದರು.
ಕನ್ನಡ ಪತ್ರಕರ್ತನಿಗೆ ತನ್ನ ಮಾತೃಭಾಷೆಯಲ್ಲಿ ವ್ಯವಹರಿಸಲು ಅಷ್ಟು ಪದ ಸಂಪತ್ತು ಇದ್ದರೆ ಸಾಕು. ಇಂಗ್ಲಿಷ್ ಪತ್ರಕರ್ತರಿಗೂ ಅಷ್ಟು ಶಬ್ದ ಭಂಡಾರವಿದ್ದರೆ ಸಾಕು. ಕ್ಲಿಷ್ಟ ಪದಗಳನ್ನು ಯಾರೂ ಬಳಸುವುದಿಲ್ಲ. ಪತ್ರಿಕೆ ಜತೆ ಪದಕೋಶವನ್ನಂತೂ ಉಚಿತವಾಗಿ ಕೊಡುವ ಸಂಪ್ರದಾಯವಿಲ್ಲ. ಹೀಗಿರುವಾಗ ಮುನ್ನೂರೋ, ಮುನ್ನೂರೈವತ್ತೋ ಪದಗಳನ್ನು ನಮ್ಮದಾಗಿಸಿ ಕೊಂಡರೆ ಸಾಕು. ದುರ್ದೈವದ ಸಂಗತಿಯೇನೆಂದರೆ, ಬಹುತೇಕ ಪ್ರಮಾದಗಳು ಬೇರೆ ಪದಗಳಿಂದ ಆಗುವುದಿಲ್ಲ. ಈ ಮುನ್ನೂರೋ- ಮುನ್ನೂರೈವತ್ತೋ ಪದಗಳಲ್ಲೇ ಆಗಿರುತ್ತವೆ!
ಸಮಸ್ಯೆಯೇನೆಂದರೆ ಬಹುತೇಕ ಪತ್ರಕರ್ತರು ತಮ್ಮನ್ನು ಪ್ರೂಫ್ ರೀಡರ್‌ಗಳೆಂದು ಅಂದುಕೊಳ್ಳುವುದಿಲ್ಲ, ಕರೆದುಕೊಳ್ಳುವು ದಿಲ್ಲ. ಪತ್ರಕರ್ತರೇ ಬೇರೆ, ಕರಡು ತಿದ್ದುವವರೇ ಬೇರೆ ಎಂದು ಭಾವಿಸಿರುತ್ತಾರೆ. ಅಷ್ಟಕ್ಕೂ ಪ್ರೂಫ್ ರೀಡರ್ ಗಳೆಂದರೆ, ಸುದ್ದಿಮನೆಯಲ್ಲಿ ತಮಗಿಂತ ಕೆಳಗಿನವರು ಎಂಬ ಭಾವ. ಅಲ್ಲದೇ, ಅವರೆಂದರೆ ತಾವು ಬರೆದಿದ್ದನ್ನು ತಿದ್ದುವವರು ಎಂಬ ನಿಕೃಷ್ಟ ಭಾವ. ಹೇಗಿದ್ದರೂ ಅವರು ತಿದ್ದುತ್ತಾರಲ್ಲ ಎಂಬ ಉಡಾಫೆ ಅಥವಾ ತಾತ್ಸಾರ.
ಹೀಗಾಗಿ ತಪ್ಪುಗಳಿಲ್ಲದೇ ಬರೆಯಲು ಹೋಗುವುದಿಲ್ಲ. ಬಾಧೆ ಎಂಬ ಪದದಲ್ಲಿ ‘ಬಾ’ಕ್ಕೆ ಬಾಲ ಕೊಡಬೇಕೋ (ಉತ್ತರ ಕರ್ನಾಟಕದ ಕಡೆ ಕುಂಡೆ ಸೀಳೋದು ಅಂತಾರೆ) ‘ದೆ’ಗೆ ಬಾಲ ಕೊಡಬೇಕೋ ಎಂದು ಪಕ್ಕದಲ್ಲಿ ಕುಳಿತವರನ್ನು, ಹಿರಿಯರನ್ನು ಕೇಳುವುದಿಲ್ಲ ಅಥವಾ ಪದಕೋಶ ತೆರೆದು ಖಾತ್ರಿಪಡಿಸಿಕೊಳ್ಳುವುದಿಲ್ಲ. ತಮ್ಮ ಗೊಂದಲ ನಿವಾರಿಸಿಕೊಳ್ಳದೇ ಅದನ್ನು ಬೇರೆಯವರಿಗೆ ವರ್ಗಾಯಿಸುತ್ತಾರೆ. ಮುಂದಿನವರು ತಿದ್ದದಿದ್ದರೆ ಅದು ಹಾಗೇ ಪ್ರಕಟವಾಗುತ್ತದೆ.
ಇನ್ನು ಕೆಲವು ಪರಮ ಆಲಸಿ ವರದಿಗಾರರು ‘ಭಾಧೆ’ ಎಂದು ಬರೆಯುತ್ತಾರೆ. ತಮ್ಮ ಮೇಲಿನವರು ತಿದ್ದಿಕೊಳ್ಳಲಿ ಎಂಬ ಅವ್ಯಕ್ತಸೂಚನೆ ಈ ‘ಭಾಧೆ’ಯಲ್ಲಿರುತ್ತದೆ! ಅವರೂ ತಿದ್ದದಿದ್ದರೆ ಈ ‘ಭಾಧೆ’ ಓದುಗರಿಗೆ ವರ್ಗವಾಗಿರುತ್ತದೆ. ಇಂದು ಕೆಲವು ಸುದ್ದಿಮನೆಗಳಲ್ಲಿ ಪ್ರೂಫ್ ರೀಡರ್ ಎಂಬ ಹುದ್ದೆಯೇ ಇಲ್ಲ. ಪತ್ರಿಕೆಗಳಲ್ಲಿ ಕರಡು ದೋಷಗಳು ನುಸುಳಲು ಇದೂ ಒಂದು ಪ್ರಮುಖ ಕಾರಣ. ಬರೆದವರೇ ತಮ್ಮ ಕಾಪಿಯನ್ನೂ ತಿದ್ದಲಿ ಎಂಬ ಕಾರಣದಿಂದ ಹಾಗೂ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಕರಡು ತಿದ್ದುವವರ ಕೆಲಸಕ್ಕೆ ಸಂಚಕಾರ ಬಂದಿದೆ.
ಇಷ್ಟಾದರೂ ಪತ್ರಕರ್ತರಿಗೆ ತಾವು ಮೂಲತಃ ಪ್ರೂಫ್ ರೀಡರ್‌ಗಳು ಎಂಬ ಪ್ರಜ್ಞೆ ಅಂತರ್ಗತವಾಗಿ ಮೂಡಿಲ್ಲ. ನಾವೇನು ಪ್ರೂಫ್ ರೀಡರ್‌ಗಳಾ, ನಾವು ಪತ್ರಕರ್ತರು ಎಂಬ ಹಮ್ಮು. ಮೂಲತಃ ಪ್ರೂಫ್ ರೀಡರ್ ಗಳಾಗದೇ ಪತ್ರಕರ್ತರಾಗಲು ಸಾಧ್ಯವೇ ಇಲ್ಲ ಎಂಬ ಪ್ರಾಥಮಿಕ ಅರಿವು ಸಹ ಮೂಡಿದಂತಿಲ್ಲ. ಪ್ರೂಫ್ ರೀಡಿಂಗ್ ಅಂದ್ರೆ ಕಳಪೆ ಕೆಲಸ, ತಿಪ್ಪೆ ಸಾರಿಸುವ ಕೆಲಸ ಎಂದೇಭಾವಿಸಿದಂತಿದೆ. ಬರೆದವರೇ ಪ್ರೂಫ್ ರೀಡರ್‌ಗಳೂ ಆದರೆ ತಪ್ಪುಗಳಾಗಲು ಸಾಧ್ಯವೇ ಇಲ್ಲ.
ನನ್ನ ಬರಹಗಳಲ್ಲಿ ತಪ್ಪುಗಳೇ ಆಗುವುದಿಲ್ಲ ಎಂದಲ್ಲ, ಆದರೆ ನನಗೆ ನಾನೊಬ್ಬ ಉತ್ತಮ(?!) ಪ್ರೂಫ್ ರೀಡರ್ ಎಂಬ ಹೆಮ್ಮೆಯಿದೆ. ನಾನು ಬರೆದಿದ್ದನ್ನು ಪ್ರೂಫ್ ರೀಡ್ ಮಾಡದೇ ಮುದ್ರಣಕ್ಕೆ ಕಳಿಸುವುದಿಲ್ಲ. ಪ್ರೂಫ್ ರೀಡರ್ ಆಗುವ ಒಂದುದೊಡ್ಡ ಲಾಭವೆಂದರೆ ಕನ್ನಡ ಪದಕೋಶವನ್ನು ಸದಾ ಮಗ್ಗುಲಲ್ಲೇ ಇಟ್ಟುಕೊಳ್ಳುವ ಅವಕಾಶ. ಒಂದು ಪದದ ಅರ್ಥಹಾಗೂ ಕರಡು ರೂಪ ಖಾತ್ರಿಪಡಿಸಿಕೊಳ್ಳಲು ಪದಕೋಶ ತೆಗೆಯುವಾಗ ಹತ್ತಾರು ಪದಗಳು ಭೇಟಿಯಾಗುತ್ತವೆ, ಪರಿಚಯ ವಾಗುತ್ತವೆ, ಆಪ್ತವಾಗುತ್ತವೆ. ಸಹಜವಾಗಿ ಪದಗಳ ಒಡನಾಟ, ಸಾಂಗತ್ಯ ಹಾಗೂ ಮಿಲನವಾಗುತ್ತವೆ.
ಕ್ರಮೇಣ ಅವುಗಳ ಬಗ್ಗೆ ವಿಶೇಷ ಒಲವು ಮೂಡಲಾರಂಭಿಸಿ ನಮಗೆ ದಕ್ಕುತ್ತವೆ. ಇಲ್ಲದಿದ್ದರೆ ಪದಕೋಶ ತೆರೆಯುವ ಪ್ರಮೇಯವೇಉದ್ಭವಿಸುವುದಿಲ್ಲ. ಕೆಲವೊಮ್ಮೆ ಪ್ರವಾಸದಲ್ಲಿದ್ದಾಗ, ಪ್ರೂಫ್ ರೀಡ್ ಮಾಡಲು ಸಮಯವಿರುವುದಿಲ್ಲ. ಆದರೂ ನನ್ನ  ಮೂರ‍್ನಾಲ್ಕು ಸಹೋದ್ಯೋಗಿಗಳಿಗೆ ಪ್ರೂಫ್ ರೀಡ್ ಮಾಡುವಂತೆ ಹೇಳುತ್ತೇನೆ. ಅಷ್ಟಾಗಿಯೂ ದೋಷಗಳು ನುಸುಳುವುದುಂಟು. ನಾನೇ ಆ ಕಾರ್ಯ ಮಾಡಿದಾಗಲೂ ಮರುದಿನ ಕರಡು ದೋಷ ಕಂಡು ಪಶ್ಚಾತ್ತಾಪ ಪಟ್ಟಿದ್ದೇನೆ, ನನಗೇ ನಾನು ಬೈದುಕೊಂಡಿ ದ್ದೇನೆ. ಆದರೆ ಒಂದು ಸಲವೂ ‘ಅಯ್ಯೋ, ಪ್ರೂಫ್ ರೀಡಿಂಗ್ ಮಾಡಬೇಕಲ್ಲ’ ಎಂದು ಅಲವತ್ತುಕೊಂಡಿಲ್ಲ.
ಸಂಪಾದಕನಾಗುವ ಮುನ್ನ, ಸ್ನೇಹಿತರ ಪುಸ್ತಕಗಳನ್ನು ಸ್ವಯಂಸೂರ್ತಿಯಿಂದ ಪ್ರೂಫ್ ರೀಡ್ ಮಾಡಿಕೊಡುತ್ತಿದ್ದೆ. ಈಗ ಕೆಲಸದ ಒತ್ತಡದಿಂದ ಅದು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಬಿಟ್ಟರೆ, ಇಂದಿಗೂ ಅದು ನನಗೆ ಅತ್ಯಂತ ಪ್ರಿಯವಾದ ಕೆಲಸವೇ.‘ಪ್ರಜಾವಾಣಿ’ ಹಾಗೂ ‘ಕನ್ನಡಪ್ರಭ’ದ ಸಂಪಾದಕರಾಗಿದ್ದ ದಿವಂಗತ ವೈಎನ್‌ಕೆ ಸಹ ತಮ್ಮನ್ನು ಉತ್ತಮ ಪ್ರೂಫ್ ರೀಡರ್ಎಂದು ಭಾವಿಸಿದ್ದರು. ಅವರು ಏನೇ ಬರೆದರೂ, ಅವರೇ ಪ್ರೂಫ್ ರೀಡ್ ಮಾಡುತ್ತಿದ್ದರು.
ಪ್ರತಿ ಗುರುವಾರ ಅವರ ಅಂಕಣ ‘ವಂಡರ್-ಕಣ್ಣು’ ಪ್ರಕಟವಾಗುತ್ತಿತ್ತು. ಅದನ್ನು ಅವರು ಮಂಗಳವಾರವೇ ಬರೆದು ಸಿದ್ಧಪಡಿಸಿ, ಪ್ರೂಫ್ ರೀಡ್ ಮಾಡಿ ಇಟ್ಟಿರುತ್ತಿದ್ದರು. ಮರುದಿನ ಅವರು ತಾವೇ ಬರೆದ ಅಂಕಣವನ್ನು ಪುನಃ ಓದಿದರೆ, ಅದರಲ್ಲಿ ಒಂದೆರಡು ಪ್ರೂಫ್ ಮಿಸ್ಟೇಕ್‌ಗಳು ಸಿಗುತ್ತಿದ್ದವು. ಹೀಗಾಗಿ ಅವರ ಅಂಕಣದಲ್ಲಿ ಪ್ರಮಾದಗಳನ್ನು ಹುಡುಕುವುದು ಸಾಧ್ಯವೇ ಇರಲಿಲ್ಲ.
‘ನೀವು ಎಷ್ಟೇ ಸಲ ಪ್ರೂಫ್ ರೀಡ್ ಮಾಡಿ, ಕನಿಷ್ಠ ಒಂದೆರಡು ದೋಷಗಳಾದರೂ ಸಿಗುತ್ತವೆ. ಅವು ಹೇಗೆ ಮೊದಲು ಕಾಣದಂತೆ ಅಡಗಿಕೊಂಡಿರುತ್ತವೋ ಎಂಬುದನ್ನು ಹೇಳುವುದು ಕಷ್ಟ’ ಎಂದು ವೈಎನ್‌ಕೆ ಹೇಳುತ್ತಿದ್ದರು. ಪ್ರೂಫ್ ರೀಡರ್‌ಗಳಿಗೆ ಅಕ್ಷರಗಳ ಕುರಿತು ಒಂದು ಸೌಂದರ್ಯ ಪ್ರಜ್ಞೆ ಇರುತ್ತದೆ. ಅದೇನೆಂದರೆ ಒಂದೊಂದು ಪದವನ್ನು ಒಬ್ಬ ವ್ಯಕ್ತಿಯಂತೆ, ಆಕಾರದಂತೆ, ಸ್ವರೂಪದಂತೆ ನೋಡುವ ದೃಷ್ಟಿಕೋನ ಬೆಳೆಸಿಕೊಂಡಿರುತ್ತಾರೆ. ಉದಾಹರಣೆಗೆ, ‘ಪದ’ ಎಂಬ ಪದ ಅವರಿಗೆ ಒಂದು ಫೋಟೊ ದಂತೆ, ಆಕೃತಿಯಂತೆ ಅಚ್ಚೊತ್ತಿರುತ್ತದೆ.
ಅದನ್ನು ‘ಪಧ’ ಎಂದು ಬರೆದರೆ, ಮೀಸೆ ಇಲ್ಲದ ಮುಖಕ್ಕೆ ಮೀಸೆ ಅಂಟಿಸಿದಂತೆ, ಏನೋ ಭಿನ್ನವಾಗಿ ಕಾಣುತ್ತದೆ. ಪ್ರೂಫ್ರೀಡರ್‌ಗಳಿಗೆ ಎಲ್ಲ ಪದವೂ ಒಂದು ಆಕೃತಿಯೇ, ಪ್ರತಿಕೃತಿಯೇ. ಹೀಗಾಗಿ ಒಂದು ಪದವನ್ನು ನೋಡುತ್ತಿದ್ದಂತೆ, ಅವರಿಗೆ ಒಬ್ಬ ವ್ಯಕ್ತಿಯನ್ನು ನೋಡಿದಂತಾಗುತ್ತದೆ. ಯಾವುದೇ ದೋಷಗಳಿದ್ದರೂ ತಟ್ಟನೆ ಗೊತ್ತಾಗಿಬಿಡುತ್ತದೆ. ಒಂದು ಪದವನ್ನು ನೋಡುವ, ಒಲಿಸಿಕೊಳ್ಳುವ ಸುಲಭ ವಿಧಾನವಿದು.
ಇದನ್ನು ರೂಢಿ ಮಾಡಿಕೊಂಡರೆ, ಒಂದು ತಾಪತ್ರಯವೂ ಇದೆ. ಅದೇನೆಂದರೆ ನೀವು ಆಹ್ವಾನಪತ್ರ, ಪ್ರೇಮಪತ್ರ, ಭಿತ್ತಿಪತ್ರ ಹೀಗೆ ಎಲ್ಲಿ, ಏನನ್ನೇ ನೋಡಿದರೂ ಕರಡು ದೋಷಗಳೇ ಎದ್ದು ಕಾಣುತ್ತವೆ. ಇದು ಒಮ್ಮೊಮ್ಮೆ ಓದಿನ ಸುಖವನ್ನು ಕೆಡಿಸಿಬಿಡುವ ಅಪಾಯವೂ ಇದೆ. ಕರಡು ದೋಷಗಳನ್ನು ಗಮನಹರಿಸದೇ ಸುಲಭವಾಗಿ ಓದಲು ಆಗುವುದೇ ಇಲ್ಲ. ಎಲ್ಲಾ ಪದಗಳನ್ನೂ ವ್ಯಕ್ತಿಗಳಂತೆ, ಆಕೃತಿಗಳಂತೆ ನೋಡಲಾರಂಭಿಸುತ್ತೇವೆ. ರೇಸ್ ಕುದುರೆ ವಿವರಗಳು, ಹೋಟೆಲ್ ಮೆನು ನೋಡಿದಾಗಲೂ ಪ್ರೂ- ಮಿಸ್ಟೇಕ್ಸ್‌ಗಳಿಗಾಗಿ ಕಣ್ಣುಗಳು ಹೊಂಚುಹಾಕಿ ಹುಡುಕುತ್ತಿರುತ್ತವೆ.
ಇದು ಒಂದು ರೀತಿಯ ‘ಒಳ್ಳೆಯ ಕಾಯಿಲೆ’! ಇದನ್ನು ‘ಪ್ರೂಫ್ ರೀಡರ‍್ಸ್ ಸಿಂಡ್ರೋಮ್’ ಅಂತ ಕರೆಯುತ್ತಾರೆ. ಈ ಸಿಂಡ್ರೋಮ್ಇರುವವರಿಗೆ, ‘ನೀವು ಇತ್ತೀಚೆಗೆ ಓದಿದ ಆ ಪುಸ್ತಕ ಹೇಗಿದೆ?’ ಎಂದು ಕೇಳಿದರೆ, ‘ಬಹಳ ಚೆನ್ನಾಗಿದೆ. ಯಾವುದೇ ಪ್ರೂಫ್ಮಿಸ್ಟೇಕ್‌ಗಳಿಲ್ಲ’ ಎಂದು ಪ್ರತಿಕ್ರಿಯಿಸುತ್ತಾರೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಅವರಿಗೆ ಪತ್ರಿಕಾ ಸಲಹೆಗಾರ ರಾಗಿದ್ದ, ಕನ್ನಡಿಗರಾದ ಎಚ್.ವೈ. ಶಾರದಾ ಪ್ರಸಾದ ಅವರು ಪ್ರೂಫ್ ರೀಡಿಂಗ್‌ಗೆ ಹೆಸರುವಾಸಿ.
ಅವರು ಇಂದಿರಾ ಗಾಂಧಿಗೆ ಭಾಷಣ ಬರೆದುಕೊಡುತ್ತಿದ್ದರು. ಈಗಿನಂತೆ ಆಗ ಸ್ಪೆಲ್ ಚೆಕ್ ವ್ಯವಸ್ಥೆ ಇರಲಿಲ್ಲ. ಆರಂಭದಲ್ಲಿ ಅವರು ಕೈಯಲ್ಲಿ ಬರೆಯುತ್ತಿದ್ದರು. ನಂತರ ಟೈಪ್ ರೈಟರ್‌ನಲ್ಲಿ ಟೈಪ್ ಮಾಡುತ್ತಿದ್ದರು. ಆದರೆ ಯಾವುದೇ ಕಾಪಿಯನ್ನು ಬಿಡುಗಡೆ ಮಾಡುವ ಮುನ್ನ ಕನಿಷ್ಠ ನಾಲ್ಕು ಸಲ ಓದುತ್ತಿದ್ದರಂತೆ. ವಿದೇಶಿ ಗಣ್ಯರಿಗೆ ಬರೆದ ಪತ್ರಗಳನ್ನು ಕಳಿಸುವ ಮುನ್ನ,ಶಾರದಾ ಪ್ರಸಾದ ಅವರಿಗೆ ‘ನೀವೊಮ್ಮೆ ನೋಡಿಯೇ ಕಳಿಸಿ’ ಎಂದು ಇಂದಿರಾ ಗಾಂಧಿ ಹೇಳುತ್ತಿದ್ದರಂತೆ.
ಇಂದಿರಾ ಅವರ ಭಾಷಣದ ಪ್ರತಿಯನ್ನು ಸಹ ಅವರು ಕನಿಷ್ಠ ನಾಲ್ಕು ಸಲ ಪ್ರೂಫ್ ಚೆಕ್ ಮಾಡಿ ಕಳಿಸುತ್ತಿದ್ದರಂತೆ. ವಿದೇಶಿ ಗಣ್ಯರ ಹೆಸರುಗಳನ್ನು ಸಂಬಂಧಪಟ್ಟವರ ಜತೆ ಚರ್ಚಿಸಿ, ಪ್ರೂಫ್ ದೋಷಗಳು ಇಲ್ಲದಂತೆ ತಯಾರಿಸುತ್ತಿದ್ದರಂತೆ. ‘ನಾನುಬರಹಗಾರ ಆಗುವುದಕ್ಕಿಂತ ಮುನ್ನ ಒಳ್ಳೆಯ ಪ್ರೂಫ್ ರೀಡರ್’ ಎಂದು ಅವರು ಬರೆದುಕೊಂಡಿದ್ದಾರೆ.
ಪಾವೆಂ ಆಚಾರ್ಯ ಎಂದೇ ಹೆಸರಾದ ಪಾಡಿಗಾರು ವೆಂಕಟರಮಣ ಆಚಾರ್ಯರು ಪ್ರೂಫ್ ರೀಡಿಂಗ್ ವಿಷಯದಲ್ಲಿ ಮಹಾ ಜಿಗುಟ. ಕಣ್ಣಲ್ಲಿ ಕಣ್ಣಿಟ್ಟು ತಾವೇ ಕರಡು ತಿದ್ದುತ್ತಿದ್ದರು. ಕರಡು ದೋಷಗಳನ್ನು ಅವರು ಸಹಿಸುತ್ತಿರಲಿಲ್ಲ. ಅಲ್ಪ ವಿರಾಮ, ಪೂರ್ಣ ವಿರಾಮಗಳನ್ನು ಸಹ ಎಚ್ಚರದಿಂದ ನೋಡುತ್ತಿದ್ದರು. ಕನ್ನಡಕಧಾರಿಯಾದ ಆಚಾರ್ಯರು ಕೈಯಂದು ಭೂತಗನ್ನಡಿ ಹಿಡಿದಿರುತ್ತಿದ್ದರು. ಯಾವ ಕರಡು ದೋಷವೂ ತಮ್ಮ ಕಣ್ಣಿನಿಂದ ನುಸುಳಬಾರದು ಎಂದು ಭೂತಗನ್ನಡಿಧಾರಿಯಾಗಿ ಇರುತ್ತಿದ್ದರು. ಆಚಾರ್ಯರು ಕಾಪಿ ನೋಡಿದ್ದಾರೆಂದರೆ ಅದರಲ್ಲಿ ಯಾವ ದೋಷವೂ ಇರಲು ಸಾಧ್ಯವೇ ಇರಲಿಲ್ಲ.
ಆಚಾರ್ಯರು ‘ಕಸ್ತೂರಿ’ ಮಾಸಪತ್ರಿಕೆಗೆ ಹತ್ತೊಂಬತ್ತು ವರ್ಷಗಳ ಕಾಲ ಸಂಪಾದಕರಾಗಿದ್ದರು. ಈ ಅವಧಿಯಲ್ಲಿ ಅವರು ಸಂಪಾದಿಸಿದ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ, ಒಂದೇ ಒಂದು ಕರಡು ದೋಷ ಹುಡುಕಲು ಸಾಧ್ಯವೇ ಇಲ್ಲ. ಮಾಸಪತ್ರಿಕೆ ಹೊರತರಲು ಸಾಕಷ್ಟು ಸಮಯವಿರುತ್ತದೆಂದು ಭಾವಿಸಿದರೂ, ಒಂದೇ ಒಂದು ಕರಡು ದೋಷ ಇಣುಕದಂತೆ ಅವರು ವಹಿಸುತ್ತಿದ್ದ ಕಾಳಜಿ ಮಾತ್ರ ಅನನ್ಯ. ಆಚಾರ್ಯರ ಸಂಪಾದಕತ್ವದಲ್ಲಿ ಹೊರಬಂದ ‘ಕಸ್ತೂರಿ’- ಯಲ್ಲಿ ಮಾಹಿತಿ ದೋಷಗಳಿದ್ದಿರಬಹುದು. ಅದನ್ನು ಅವರು ಮುಂದಿನ ಸಂಚಿಕೆಯಲ್ಲಿ ಸರಿಪಡಿಸಿ ‘ತಪ್ಪು-ಒಪ್ಪು’ ವಿಭಾಗದಲ್ಲಿ ಪ್ರಕಟಿಸುತ್ತಿದ್ದರು. ಆದರೆ ಕರಡು ದೋಷವನ್ನಂತೂ ಹುಡುಕುವುದು ಸಾಧ್ಯವೇ ಇರಲಿಲ್ಲ.
ಪತ್ರಿಕೆಯನ್ನು ಮುದ್ರಣಕ್ಕೆ ಕಳಿಸುವ ಮುನ್ನ, ಸ್ವತಃ ಆಚಾರ್ಯರೇ ಕಣ್ಣಿಗೆ ಭೂತಗನ್ನಡಿ ಇಟ್ಟುಕೊಂಡು ಸಾಲು ಸಾಲು, ಪದ ಪದ, ಅಕ್ಷರ ಅಕ್ಷರ, ಪೂರ್ಣ ವಿರಾಮ, ಅಲ್ಪ ವಿರಾಮಗಳನ್ನೆಲ್ಲ ಸಮಾಧಾನದಿಂದ ನೋಡುತ್ತಿದ್ದರು. ಕರಡು ತಿದ್ದುವುದರಲ್ಲಿ ಅವರಿಗೆ ಅದೆಂಥ ಅಮಿತ ಆಸಕ್ತಿ, ಶ್ರದ್ಧೆ ಮತ್ತು ಕಾಳಜಿ ಇತ್ತೆಂಬುದು ಇದರಿಂದ ಗೊತ್ತಾಗುತ್ತದೆ.
‘ಒಂದೇ ಒಂದು ತಪ್ಪಿಲ್ಲದಂತೆ ಪತ್ರಿಕೆ ರೂಪಿಸಬೇಕು. ಪ್ರತಿ ತಪ್ಪು ಸಹ ನಮ್ಮ ಬೇಜವಾಬ್ದಾರಿಯ ದ್ಯೋತಕ’ ಎಂದು ನಂಬಿದ್ದ ಪಾವೆಂ, ‘ಮುದ್ರಿತ ಪದಗಳು ಪವಿತ್ರ, ಅವುಗಳಲ್ಲಿ ದೋಷಗಳು ಇರಲೇ ಕೂಡದು’ ಎಂದು ಪ್ರತಿಪಾದಿಸುತ್ತಿದ್ದರು. ಆಚಾರ್ಯರು ಪದಗಳ ಬಗೆಗೂ ಇಂಥದೇ ಪ್ರೀತಿ ಬೆಳೆಸಿಕೊಂಡಿದ್ದರು. ಒಂದು ಪದದ ಅರ್ಥ ಹುಡುಕಲು ಅವರು ನೂರಾರು ಕಿಮಿ ಬಸ್ ಪ್ರವಾಸ ಮಾಡಿದ್ದುಂಟು. ಸಂಬಂಧಪಟ್ಟ ವಿದ್ವಾಂಸರಿಂದ ಸರಿಯಾದ ಅರ್ಥ ತಿಳಿದುಕೊಂಡು ಬರುತ್ತಿದ್ದರು. ಅವರು ‘ಕಸ್ತೂರಿ’ಯಲ್ಲಿ ಬರೆಯುತ್ತಿದ್ದ ‘ಪದಾರ್ಥ ಚಿಂತಾಮಣಿ’ ಇದಕ್ಕೆ ಸಾಕ್ಷಿ.
ಫೋನುಗಳಿಲ್ಲದ ಆ ಕಾಲದಲ್ಲಿ ಆಚಾರ್ಯರು ಕರ್ನಾಟಕದ ಉದ್ದಗಲ ಸಂಚರಿಸಿ ಪದ ವಿಸ್ತಾರ, ವ್ಯುತ್ಪತ್ತಿ, ಅರ್ಥ, ಬಳಕೆ ಬಗ್ಗೆ ತೋರಿದ ಕಾಳಜಿ ಅದ್ಭುತ. ಪಾವೆಂ ತಮ್ಮ ಜೀವಿತ ಅವಧಿಯ ಗಣನೀಯ ಕಾಲಾವಧಿಯನ್ನು ಪ್ರೂಫ್ ರೀಡಿಂಗ್‌ನಲ್ಲಿಯೇ ಕಳೆದಿದ್ದಾರೆ. ಅಂಥ ಅಚ್ಚುಕಟ್ಟುತನ! ಅದನ್ನು ಒಂದು ವ್ರತದಂತೆ, ತಪಸ್ಸಿನಂತೆ ಮಾಡಿದರು. ‘ಕರಡು ತಿದ್ದುವುದು’ ಎಂಬ ಲೇಖನದಲ್ಲಿ ಅವರು ಒಂದೆಡೆ ಬರೆದಿದ್ದಾರೆ- ‘ಲೇಖಕರನ್ನು ಬಿಟ್ಟರೆ ಬರೆದಿದ್ದನ್ನೆಲ್ಲ ಪೂರ್ತಿ ಓದುವವರೆಂದರೆ ಕರಡು ತಿದ್ದುವವರು.
ಲೇಖಕರು ಗಮನಿಸದ ಸಂಗತಿಗಳನ್ನು ಕರಡು ತಿದ್ದುವವರು ನೋಡುತ್ತಾರೆ. ಲೇಖಕರು ಒಂದು ಸಲ ಮಾತ್ರ ಓದಬಹುದು.ಆದರೆ ನನ್ನಂಥ ಪ್ರೂಫ್ ರೀಡರ್‌ಗಳು ಬರೆದಿದ್ದನ್ನು ಮೂರು-ನಾಲ್ಕು ಸಲ ಓದುತ್ತಾರೆ. ಇದರಿಂದ ವಿಷಯ ತಲೆಯಲ್ಲಿ ಶಾಶ್ವತವಾಗಿ ನೆಲೆಸುತ್ತದೆ. ಕರಡು ತಿದ್ದುವುದರ ಬಲು ದೊಡ್ಡ ಲಾಭವಿದು. ಯಾರಿಗೆ ಈ ವಿಷಯದಲ್ಲಿ ಆಸ್ಥೆ ಇರುವುದಿಲ್ಲವೋ ಅವರು ಉತ್ತಮ ಲೇಖಕರಾಗಲು ಸಾಧ್ಯವಿಲ್ಲ.’
ಆದರೆ ದುರ್ದೈವದ ಸಂಗತಿಯೇನೆಂದರೆ, ಈಗಿನ ಕಾಲದ ಪತ್ರಕರ್ತರಿಗೆ ಪ್ರೂಫ್ ರೀಡಿಂಗ್ ಮಹತ್ವವೇ ಗೊತ್ತಿಲ್ಲ. ಸುದ್ದಿಬರೆಯುವುದಷ್ಟೇ ತಮ್ಮ ಕೆಲಸ ಎಂದು ಅವರು ಭಾವಿಸಿದಂತಿದೆ. ಸುದ್ದಿ ಹೆಕ್ಕಿ ತೆಗೆಯುವವರು ಭಾಷೆ, ವ್ಯಾಕರಣ, ಪ್ರೂಫ್ ರೀಡಿಂಗ್, ವಾಕ್ಯ ರಚನೆ… ಈ ಎಲ್ಲ ಸಂಗತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂಬುದು ಅವರ ವಾದ. ಸುದ್ದಿಮನೆಯಲ್ಲಿ ಶುದ್ಧ ಭಾಷೆಯ ಬಗ್ಗೆ ಮಾತಾಡುವವರು ಪುರೋಹಿತಶಾಹಿಗಳು, ಕೆಳಜಾತಿಯವರು ಪತ್ರಿಕೋದ್ಯಮಕ್ಕೆ ಬರದಂತೆ ತಡೆಯಲು ಈ ಹುನ್ನಾರ ಹೂಡುತ್ತಾರೆ ಎಂದು ವಾದಿಸುವ ಅವಿವೇಕಿಗಳೂ ಇದ್ದಾರೆ.
ಇಂಥವರಿಂದ ಪ್ರಭಾವಿತರಾಗಿ ಭಾಷೆಯ ಬಗ್ಗೆ ಉದಾಸೀನ ಭಾವ ಬೆಳೆಸಿಕೊಳ್ಳುವ ವರ್ಗವೂ ಸುದ್ದಿಮನೆಯೊಳಗೆ ಅಡಿ ಇಡುತ್ತಿದೆ. ಆದರೆ ಭಾಷೆಯ ಬಗ್ಗೆ ಒಂದಷ್ಟು ಪ್ರೀತಿ, ಮೋಹವಿರುವವರು ಹಾಗೂ ತಾನೂ ಒಬ್ಬ ಪ್ರೂಫ್ ರೀಡರ್ ಎಂದು ಅಭಿಮಾನದಿಂದ ಹೇಳಿಕೊಳ್ಳುವವರು ಮಾತ್ರ ಭಾಷೆಯನ್ನು ಒಲಿಸಿಕೊಳ್ಳಲು ಸಾಧ್ಯ. ಅಷ್ಟಕ್ಕೂ ಪ್ರೂಫ್ ರೀಡಿಂಗ್ ಅಂದ್ರೆ ಬೇರೆಯವರ ಮೇಲೆ ಎತ್ತಿ ಹಾಕುವ, ಬೇರೆಯವರಿಗೆ ಒರೆಸುವ, ವಹಿಸುವ ಕೆಲಸವಲ್ಲ. ನಾವೇ ಮನಸಾರೆ ಮಾಡುವ ಪ್ರೀತಿಯ ಕಾಯಕ!