ಮಾತೆಂಬುದು.. ನನ್ನನೇ ನುಂಗಾ
ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಮಾತೆಂಬುದು ಜ್ಯೋತಿರ್ಲಿಂಗ ಎಂದೇ ವಚನವಿದೆ. ಆದರೆ ಈ ದಿನಗಳಲ್ಲಿ ಯಾರ ಮಾತಿಗೆ ಜ್ಯೋತಿರ್ಲಿಂಗ ವಾಗುವ ಶಕ್ತಿ ಇದೆಹೇಳಿ? ನನಗಂತೂ ಮಾತೆಂಬುದು ನನ್ನನ್ನೇ ನುಂಗಾ ಎನಿಸುತ್ತಿದೆ.
ನಮ್ಮ ಮನೆತನವೇ ಹೀಗೆ. ಎಲ್ಲರದೂ ಸ್ವಲ್ಪ ಮಾತು ಜಾಸ್ತಿ. ಅಣ್ಣ ಜ್ಯೋತಿಷಿ, ಊರ ಪುರೋಹಿತ, ಅರ್ಚಕ ಇಡೀ ದಿನ ಬೆಳಗ್ಗೆಅರ್ಚಕ ವೃತ್ತಿಯಲ್ಲಿ ಮಂತ್ರ ಹೇಳುತ್ತಾ ದೇವರ ಮೂರ್ತಿಗಳನ್ನು ಪೂಜಿಸುತ್ತಾ ಭಕ್ತರನ್ನು ಮಾತಿನಿಂದ ಮೆಚ್ಚಿಸಬೇಕು. ಮಧ್ಯಾಹ್ನ ಅವರಿವರ ಮನೆಗಳಲ್ಲಿ ಶುಭ – ಅಶುಭ ಕಾರ್ಯಗಳಲ್ಲಿ ಮಂತ್ರ ಹೇಳಬೇಕು. ಇನ್ನು ಸಂಜೆ ಜ್ಯೋತಿಷ್ಯ, ಭವಿಷ್ಯ ಕೇಳುವ ಭಕ್ತರಿಗೆ ಕೈ, ಮುಖ, ಕಾಲುಗಳನ್ನೂ ನೋಡಿ ಜ್ಯೋತಿಷ್ಯ ಹೇಳಬೇಕು, ಇನ್ನು ರಾತ್ರಿ ಒಂದೇ ಬಾಯಿಗೆ ಬೀಗ, ಅಥವಾ ವಿಶ್ರಾಂತಿ ಎನ್ನುವಂತಿಲ್ಲ.
ಬೆಳಗಿನ ಈ ಮೂರು ಶಿಫ್ಟ್‌ಗಳಲ್ಲಿ ಮಾತನಾಡಿದ ವಿವಿಧ ಜನರ ಸಂಪರ್ಕದಿಂದಾಗಿ ಕನವರಿಸುವ ಕ್ರಿಯೆಯಲ್ಲಿ ಮಾತನಾಡು ವುದು. ಹೀಗೆ ಮಾತಿನಿಂದಲೇ ಜೀವನ ನಮ್ಮಣ್ಣನದು. ಇನ್ನು ನನ್ನದಂತೂ ಸರೇ ಸರಿ. ಹಗಲೆಲ್ಲ ನಾನೇ ಜೋಕುಗಳನ್ನು ನನಗೆ ಹೇಳಿಕೊಳ್ಳುವುದು, ಸಂಜೆ ಸ್ಟೇಜ್ ಮೇಲೆ ಹಾಸ್ಯ ಸಂಜೆ, ರಾತ್ರಿ ಹನ್ನೊಂದು, ಹನ್ನೆರೆಡರವರೆಗೆ ಸಂಘಟಕರ, ಅಭಿಮಾನಿಗಳ ಜೊತೆ ಮತ್ತು ಫೋನುಗಳಲ್ಲಿ ಮಾತು ಹೀಗೆ ಮಾತಾಡುವುದೇ ನನ್ನ ಉದ್ಯೋಗ. ಈ ಮಾತುಗಳು ನನಗೆ ಹೆಸರು, ಮಾನ, ಸನ್ಮಾನ ಗಳನ್ನು ಕೊಟ್ಟಂತೆಯೇ ಅಸಮಾಧಾನ, ನಿಷ್ಠುರ, ಅಪವಾದ, ಅವಮಾನಗಳನ್ನೂ ಕೊಟ್ಟಿದೆ.
ಈ ಹಾಸ್ಯಸಂಜೆಗಳು ಪ್ರಾಣೇಶರ ಬಾಯಿಂದ ಕೇಳುವುದೇ ಚೆಂದ ಎಂಬ ಮೆಚ್ಚುಗೆ, ಬಿರುದುಗಳನ್ನು ಜನರಿಂದ ಕೊಡಿಸಿದ್ದರೆ, ಬಂಧು, ಬಳಗ, ಸ್ನೇಹಿತರ ವಲಯದಲ್ಲಿ ‘ಈ ಪ್ರಾಣೇಶನ ಬಾಯಾಗ ಒಂದು ನುಚ್ಚು ನೆನೆಯಂಗಿಲ್ಲ, ಮಾತೇ ನಿಲ್ಲುವುದಿಲ್ಲ, ನಗಾರಿಗೆ ಮುತ್ತು ಕೊಡೋದೇನೋ, ಈ ಪ್ರಾಣೇಶನ ಮುಂದೆ ಗುಟ್ಟಿನ ಸುದ್ದಿ ಹೇಳೇದೇನೋ, ಎರಡೂ ಒಂದೇ’ ಎಂಬ ಟೀಕೆ ಸರ್ವೇ ಸಾಮಾನ್ಯ. ಯಾರಿಗೂ ಹೇಳಬೇಡ ಎಂದು ನನಗೆ ಯಾರಾದರೂ ಹೇಳಿ ಒಂದು ಗುಟ್ಟನ್ನು ಹೇಳಿದರೆಂದರೆ ಅವರ ಕಥೆ ಮುಗಿಯಿತೆಂದೇ ತಿಳಿಯಬೇಕು. ಅವರು ಹೇಳಬೇಡ ಎಂದದ್ದು ಮರೆತು ಹೋಗಿ ಅವರು ಹೇಳಿದ ಗುಟ್ಟು ಗಟ್ಟಿಯಾಗಿ ನೆನಪಲ್ಲು ಳಿದು ಅದನ್ನು ನನಗರಿವಿಲ್ಲದೇ ಹೇಳಿಬಿಟ್ಟಿರುತ್ತೇನೆ.
ಹೀಗೆ ಹೇಳಿ ನಾನು ಅನುಭವಿಸಿದ ಹಿಂಸೆ, ಅಪಮಾನ, ನಿಷ್ಟೂರಗಳು, ನನಗಾದ ಸನ್ಮಾನ, ಹಾರ, ಶಾಲು ಗಳಿಗಿಂತ ಹೆಚ್ಚಿವೆ. ‘ಈ ಪ್ರಾಣೇಶ ಹೋದ ಜನ್ಮದಾಗೆ ಹೆಣ್ಣು ಆಗಿದ್ದನೋ ಏನೋ, ಒಟ್ಟು ಆತನ ಮುಂದೆ ಮಾತೇ ಆಡಬಾರದು’ ಎಂದೇ ನನ್ನ ಬಂಧು ವರ್ಗ, ಆತ್ಮೀಯ ಸ್ನೇಹಿತವರ್ಗ ನಿರ್ಧರಿಸಿದೆ, ನಾನೂ ಎಷ್ಟೋ ಸಲ ನನ್ನ ಮುಂದೆ ಏನೂ ಹೇಳಬೇಡಿ, ಅದರಲ್ಲೂ ಗುಟ್ಟಿನ ವಿಷಯ ಎಂದು ಎಲ್ಲರಿಗೂ ಕೈಮುಗಿದು ಕೇಳಿಕೊಂಡಿದ್ದೇನೆ. ಅವರೂ ಬಿಡುವುದಿಲ್ಲ.
ಹೀಗಾಗಿ ನಾನೇ ಇತ್ತೀಚೆಗೆ ಎಲ್ಲರೊಂದಿಗೆ ಬೆರೆಯುವುದನ್ನು ಕಡಿಮೆ ಮಾಡಿದ್ದೇನೆ. ಈ ನನ್ನ ದೌರ್ಬಲ್ಯದಿಂದಾಗಿ ಕೆಲವರು ತಾವೇ ಹೇಳಿ, ‘ನಮಗೆ ಪ್ರಾಣೇಶ ಹೇಳಿದ’ ಎಂಬುದಾಗಿ ನುಣುಚಿಕೊಳ್ಳುವಂತಾಗಿದೆ. ಒಂದೆಡೆ, ಮಾತಿನಿಂದಾಗಿ ಗೌರವ, ಇನ್ನೊಂದೆಡೆ ಅದೇ ಮಾತಿನಿಂದಾಗಿ ಅಗೌರವವಾಗಿ ಎರಡು ಮುಖದ ಗಂಡಭೇರುಂಡ ಪಕ್ಷಿಯಾಗಿದ್ದೇನೆ. ಬಾಯಿ ಎರಡಿದ್ದರೂ ಆ ಪಕ್ಷಿಗೆ ಹೊಟ್ಟೆ ಒಂದೇ! ಒಂದು ಕಡೆ ಹಾಸ್ಯ ಸಂಜೆಗಳ ಅಭಿಮಾನಿ ಬಳಗ ಅಮೃತ ಕುಡಿಸಿದರೆ, ಬೇಡದವರು ವಿಷ ಹಾಕುತ್ತಿದ್ದಾರೆ.
ಅವೆರಡೂ ಒಂದೇ ಹೊಟ್ಟೆಯನ್ನು ಸೇರುವುದರಿಂದ ಅಮೃತದೊಂದಿಗೆ ವಿಷದ ಪ್ರಮಾಣವೂ ಸೇರಿ, ವಿಷದ ಪ್ರಮಾಣವೇ ಜಾಸ್ತಿಯಾಗಿ ಪಕ್ಷಿಗೆ ಪ್ರಾಣಸಂಕಟ ಹುಟ್ಟುತ್ತಿದೆ. ಈ ಮಾತೆಂಬುದು ಎರಡೂ ಕಡೆ ಚೂಪಾದ ಬಾಣವಿದ್ದಂತೆ, ಗುರಿ ಇಟ್ಟು ಎಸೆಯುವ ಬೂಮರಾಂಗ್ ಇದ್ದಂತೆ. ಗೋಡೆಗೆ ಎಸೆಯುವ ಪುಟಿವ ಚೆಂಡಿದ್ದಂತೆ, ಮತ್ತೆ ನಮಗೇ ತಿರುಗಿ ಬಂದು ಹೊಡೆಯುತ್ತದೆ. ಅದಕ್ಕೆ ಏನೋ ಸಾಧುಗಳು, ಸಂತರು, ಯೋಗಿಗಳು ನಿರ್ಜನ ತಾಣಗಳಲ್ಲಿ ಮೌನಿಯಾಗಿ ಒಬ್ಬರೇ ಇರುವುದು ಎನಿಸಿದೆ. ಅದಕ್ಕೆ ಕೀರ್ತಿಯ ಬಗ್ಗೆ ಒಂದು ಮಾತಿದೆ, ‘ಬಹು ಎತ್ತರಕ್ಕೆ ಹಾರಬೇಕೆನ್ನುವವನು ಅದಕ್ಕೆ ಮೊದಲು ಬಹುದೂರ ಓಡಬೇಕಂತೆ’.
ಎಲ್.ಎಮ್. ಬುಜೋಲ್ಡ್ ಎಂಬ ಲೇಖಕರೊಬ್ಬರು ಹೇಳುವಂತೆ ‘ಇತರರು ನಿನ್ನ ಬಗ್ಗೆ ತಿಳಿದಿರುವುದು ಕೀರ್ತಿ ಎನಿಸಿದರೆ, ನಿನ್ನ ಬಗ್ಗೆ ನೀನು ತಿಳಿದಿರುವುದು ನಿನ್ನ ಗೌರವವನ್ನು ನಿರ್ಧರಿಸುತ್ತದೆ’. ಲಿಂಕನ್‌ನ ಈ ಮಾತುಗಳು ನನಗೆ ಸದಾ ರಕ್ಷೆ ‘ನನ್ನ ಬಗ್ಗೆ ಜನರು ಮಾಡುವ ಪ್ರತಿಯೊಂದು ದೂಷಣೆಯನ್ನು ನಾನು ಕೇಳುತ್ತಾ ಹೋದರೆ, ಅವುಗಳಂತೆ ನಡೆಯುವುದು ದೂರವೇ ಉಳಿಯಿತು.
ನನ್ನ ಈ ಕಾರ್ಯಾಗಾರವನ್ನು ಮುಚ್ಚಬೇಕಾಗುತ್ತದೆ. ಶಕ್ತಿ ಮೀರಿ ಕೆಲಸ ಮಾಡುವುದು ನನಗೆ ರೂಢಿಯಾಗಿದೆ. ಅಂತಿಮ ಫಲಒಳ್ಳೆಯದಾದರೆ, ಈ ದೂಷಣೆಗಳೆಲ್ಲ ಅರ್ಥಹೀನ. ಅದು ಹಾಗಾಗದಿದ್ದರೆ ದೇವತೆಗಳು ನನ್ನನ್ನು ಹೊಗಳಿದರೂ ಅದುನಿರರ್ಥಕ’. ಇರಲಿ, ಇವೆಲ್ಲ ನಾಣ್ಣುಡಿಗಳು ಧೈರ್ಯ, ಜಾಗೃತಿ ಕೊಟ್ಟರೆ, ನಮ್ಮ ವಂಶದ ಈ ಮಾತುಗಾರಿಕೆ ಕೇವಲ ಗಂಡು ಮಕ್ಕಳಿಗಲ್ಲ. ನಮ್ಮ ಅಕ್ಕತಂಗಿಯರೂ ಮಹಾ ವಾಚಾಳಿಗಳು. ಎಂಟು, ಹತ್ತನೆಯ ಕ್ಲಾಸಿಗೆಲ್ಲ ಶಾಲೆಗೆ ಶರಣು ಹೊಡೆದು ಮದುವೆ, ಮಕ್ಕಳಾಗಿ ಇಪ್ಪತ್ತು, ಇಪ್ಪತ್ತೈದಕ್ಕೆಲ್ಲ ತತ್ತ್ವಜ್ಞಾನಿಗಳೇ ಆಗಿಬಿಟ್ಟಿದ್ದಾರೆ.
‘ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್’ ಎಂಬ ನೃಪತುಂಗನ ನುಡಿ ನಮ್ಮ ಮನೆಯ ಈ ಹೆಣ್ಣು ಮಕ್ಕಳಿಗಾಗಿಮಾಡಿಟ್ಟು ಹೋದನೇನೋ ಎನಿಸುತ್ತದೆ. ತಮಗನಿಸಿದ್ದನ್ನು ಎದುರಿದ್ದವನ ಮುಖಕ್ಕೇ ಹೇಳುವಲ್ಲಿ ಯಾವ ಸಂಕೋಚ ಭಿಡೆಗಳೂಇಲ್ಲ, ಅವರೇನು ಅಂದುಕೊಂಡಾರೋ ಎಂಬ ಪ್ರಜ್ಞೆಯೂ ಇಲ್ಲ. ಒಟ್ಟು ಆ ಕ್ಷಣಕ್ಕೆ ತೋಚಿದ್ದು, ಬಾಯಿಗೆ ಬಂದದ್ದು ಆಡಿ ಬಿಡಬೇಕು, ಇದು ಮುಖ್ಯ ಗುರಿ. ವಂಶವಾಹಿನಿಯ ಪರಿ. ಸಿನಿಮಾಗಳ ನಟರ ನಟನೆ ಇರಲಿ, ಸಂಗೀತಗಾರರ ಸಂಗೀತವಿರಲಿ, ಮದುವೆಗೆ ಬಂದ ಗಂಡುಗಳ ಗುಣ, ರೂಪ, ನಡೆ ನುಡಿಗಳಿರಲಿ ಇವುಗಳನ್ನು ಅವರ ಜತೆ ಅರ್ಧ ಗಂಟೆ ಕಳೆದರೆ ಸಾಕು ಅವರ ಇಡೀ ಜಾತಕ, ಭವಿಷ್ಯ ಮತ್ತು ಮುಂದೆ ಅವರ ಮರಣ ಹೇಗಾಗುತ್ತದೆಂಬುದನ್ನೂ ಸುತ್ತ ಹರಟೆಗೆ ಕುಳಿತಾಗ ಹೇಳಿಬಿಡುತ್ತಾರೆ.
ಅವರ ಉಟ್ಟ ಸೀರೆ, ತೊಟ್ಟ ಆಭರಣಗಳ ಬೆಲೆಯನ್ನೂ ಅಂಗಡಿಯವನೇ ದಂಗು ಬಡಿಯುವಂತೆ ಹೇಳಬಲ್ಲವರು. ಹಿಂದೆ ಉದಯ ಟಿ.ವಿ ಯಲ್ಲಿ ಬರುತ್ತಿದ್ದ ಶ್ರೀನಾಥ, ಶೈಲಜಾರ ಆದರ್ಶ ದಂಪತಿಗಳು ಶೋನಲ್ಲಿ ಶ್ರೀನಾಥರು ತಮ್ಮ ಹೊಟ್ಟೆ, ಗಲ್ಲಗಳನ್ನು ಕುಣಿಸುತ್ತಾ, ‘ಅಮ್ಮಾ, ಈ ಸೀರೆಯ ನಿಖರವಾದ ಬೆಲೆ ಹೇಳ್ತಿರಾ?’ ಎಂದು ಕೇಳುತ್ತಿರುವಾಗಲೇ ಇಲ್ಲಿ ನಮ್ಮನೆಯಲ್ಲಿ ಒಂದು ರುಪಾಯಿ ಕಡಿಮೆ ಇಲ್ಲದಂತೆ ಹೇಳಿಬಿಡುತ್ತಿದ್ದರು.
ಎಷ್ಟೋ ಸಲ, ನಮ್ಮ ಗದ್ದೆ, ಮನೆಗಳ ವಿಷಯ ರೈತ ಮತ್ತು ವಕೀಲರವರೆಗೂ ಹೋಗಿ, ಸಂಕೀರ್ಣಗೊಂಡಾಗ ನಮ್ಮ ಆರು,ಏಳನೆಯ ಕ್ಲಾಸಿಗೆ ಶಾಲೆ ಬಿಟ್ಟ ತಂಗಿ, ಅಕ್ಕಂದಿರೇ ವಕೀಲರಿಗೆ ಯಾವ ಪಾಯಿಂಟ್ ಮೇಲೆ ಅವನನ್ನು ಬಾಯಿ ಬಿಡಿಸಬೇಕು,ಹಣಿಯಬೇಕೆಂಬುದನ್ನೂ ಹೇಳಿಕೊಟ್ಟಿದ್ದೂ ಉಂಟು. ವಕೀಲ ‘ನಿಮ್ಮದೆಲ್ಲ ಈ ಜನ್ಮದ್ದಲ್ಲಮ್ಮ ಹೋದ ಜನ್ಮದ್ದೇ ಈ ಜ್ಞಾನ’ ಎಂದು ಗಲ್ಲ ಗಲ್ಲ ಬಡಿದುಕೊಂಡು ಹೋದದ್ದೂ ಉಂಟು. ನಮ್ಮ ಮನೆಗಳಲ್ಲಿ ಗಂಡು ಹುಡುಗರ ಪಾತ್ರ ಶೂನ್ಯ. ಅಕ್ಕ ತಂಗಿಯರ ಮಾತೇ ಮಾನ್ಯ.
‘ಹತ್ತು ಮಂದಿ ಗಂಡಸರನ್ನ ಮುರಿದು, ಹುರಿದು ನಿಮ್ಮನ್ನು ದೇವರು ಹುಟ್ಟಿಸ್ಯಾನ ನೋಡ್ರೇವ್ವಾ’ ಎಂದೇ ನಮ್ಮ ಓಣಿಯ ಮಡಿ ಹೆಂಗಸರು ನಮ್ಮ ಮನೆಯವರನ್ನು ನೋಡಿ ಹೇಳುತ್ತಿದ್ದುದೂ ಉಂಟು. ಧೈರ್ಯ, ಗತ್ತು, ಜೀವನಾನುಭವ ಬೈ ಬರ್ತ್ ಬಂದಿದ್ದರೆ,ಮದುವೆಯಾಗಿ ಎರಡು ಮಕ್ಕಳಾದವೆಂದರೆ ಪಿಎಚ್.ಡಿ ಪದವಿ ಪಡೆದಂತೆಯೇ ಲೆಕ್ಕ, ಅವರ ಮಕ್ಕಳಿಗೆ ಮದುವೆಯಾಗಿಸೊಸೆಯೋ, ಅಳಿಯನೋ ಬಂದುಬಿಟ್ಟರೆ ವಿಶ್ವವಿದ್ಯಾಯದ ಕುಲಪತಿಯೇ ಆಗಿಬಿಡುತ್ತಾರೆ.
ಹೀಗೆ ಮನೆಗಳಲ್ಲಿ ನಮ್ಮ ಮಾತು ನಡೆಯದ್ದರಿಂದಲೋ ಏನೋ ನಾನು ಭಾಷಣಕಾರರನಾಗಿ ನನ್ನ ಮಾತಿನ ಕೋಟಾ ಖರ್ಚು ಮಾಡುತ್ತಿದ್ದೇನೇನೋ ಎನಿಸುತ್ತದೆ. ಇಂಗ್ಲೀಷಿನ ಒಂದು ನಾಣ್ಣುಡಿಯಲ್ಲಿ ವಾದವು ಪುರುಷೋಚಿತವಾದರೆ, ಸಂವಾದ ಸೀ ಸಹಜವಾಗಿದೆ ಎಂದಿದ್ದಾರೆ. ಆದರೆ ನಮ್ಮ ಮನೆಗಳಲ್ಲಿ ವಾದ, ಸಂವಾದ ಎರಡೂ ಸ್ತ್ರೀಯರದಾಗಿ, ನಾವು ಬಾಯಿ ತೆರೆದರೆ ಬರೀ ವಿವಾದಗಳೆಂದು ಮೌನವನ್ನೇ ಆಯುಧ ಮಾಡಿಕೊಂಡಿದ್ದೇನೆ.
ನನ್ನ ಹಾಸ್ಯ ಸಂಜೆಗಳನ್ನು ನೋಡುವ, ಕೇಳುವ ಬಹಳ ಜನ, ನಿಮ್ಮ ಮನೆಯವರು ಲಕ್ಕಿ ಸಾರ್, ಹೀಗೇ ಸದಾ ನಗಿಸ್ತಾ ಇರ್ತಿರಾ?’ಎಂದು ಕೇಳುವಾಗ ಅವರನ್ನೊಮ್ಮೆ ಮನೆಗೆ ಬಂದು ನೋಡಿ ಎಂದು ಹೇಳುತ್ತೇನೆ. ಮನೆಯಲ್ಲಿ ನಾವು ಬುದ್ಧಿಮಾಂದ್ಯರು, ವಿಕಲಾಂಗರು, ಮೂಕರು ಎಂಬಂತಿರುತ್ತೇವೆ. ಅವರಿಗೆ ತಿಳಿಸುವುದಾಗುತ್ತಿಲ್ಲ. ಅವರು ನೋಡಿಯೇ ತಿಳಿಯಬೇಕು. ಒಟ್ಟಿನಲ್ಲಿ ‘ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು’ ಎನ್ನುವ ನಾಣ್ಣುಡಿ ನಮ್ಮ ಮನೆಯ ವಿಷಯಕ್ಕೆ ಮಾತ್ರ. ‘ಮಾತು ಮನೆಯನ್ನೂ ಉಳಿಸಿತು, ಒಲೆಯನ್ನೂ ಹೊತ್ತಿಸಿತು’ ಎನ್ನುವಂತಾದದ್ದು, ಕನ್ನಡ ಜನತೆಯ ಔದಾರ್ಯವೂ ಹೌದು, ಕರ್ನಾಟಕದಲ್ಲಿ ಹುಟ್ಟಿದ ನಮ್ಮ ಪುಣ್ಯವೂ ಹೌದು ಇಲ್ಲದಿದ್ದರೆ,  ನಗೆಹನಿಗಳನ್ನು ಹೇಳುವುದರಿಂದಲೇ ಏಳುಕೋಟಿ ಕನ್ನಡಿಗರ ಕರುಣೆ ನಮ್ಮೆಡೆ ಹರಿದಿದ್ದು ದೈವಕೃಪೆ. ನಮ್ಮ ಪೂರ್ವಜರಾರೂ ಶ್ರೀಮಂತರಲ್ಲ.
ಹೇಳಿಕೊಳ್ಳುವಂಥ ವಂಶವಲ್ಲ, ದೊಡ್ಡ ದೊಡ್ಡ ಓದು, ಓದಲಿಲ್ಲ, ದೊಡ್ಡ ದೊಡ್ಡ ಉದ್ಯೋಗಿಗಳಲ್ಲ, ಹೆಸರು ಮಾತ್ರ ಹಸಿರಾಗುಳಿಯಿತು. ಇನ್ನು ಅದನ್ನು ಉಳಿಸಿಕೊಳ್ಳುವ ಅನುಗ್ರಹವಾಗಬೇಕಿದೆ. ಎರಡನೇ ವರ್ಷಕ್ಕೆ ಕಾಲಿಟ್ಟಿರುವ ಕರೋನಾ, ಮತ್ತೆ ಕಲಾವಿದರನ್ನೆಲ್ಲ ಬೀದಿಗೆ ತರಲಿದೆ. ಸಿನಿಮಾ, ನಾಟಕ, ನಗೆಹಬ್ಬಗಳು, ಮದುವೆ ಸಮ್ಮೇಳನಗಳು ಎಲ್ಲವೂ ನಿಂತರೇನುಗತಿ? ಜನಜಂಗುಳಿಯ ಮಧ್ಯೆ ಸದಾ ಸಾಯಂಕಾಲಗಳನ್ನು ಕಳೆದ ನಮಗೆ ಜನರಿಲ್ಲದ ಸಂಧ್ಯಾಕಾಲವನ್ನು ಒಂಟಿಯಾಗಿಮನೆಯಲ್ಲಿದ್ದರೂ ಮರುಭೂಮಿಯಲ್ಲಿದ್ದಂತೆ ಕಳೆಯುವ ಹೊತ್ತು ಬಂದರೇನು ಗತಿ ಎನಿಸುತ್ತಿದೆ.
ಕಲಾವಿದರ ಬದುಕೆಂದರೆ ಇಂಗ್ಲೀಷ್ ಕವಿ ವಿ. ಹ್ಯಾಸ್ಲಿಟ್ ಹೇಳಿದಂತೆ ‘ಜೀವನದ ಮೂಲತತ್ತ್ವವೆಂದರೆ ಕಡಿಮೆ ಸುಖಿಸುವುದು, ಹೆಚ್ಚು ಸಹಿಸುವುದು’ ಎಂಬುದೇ ನಿಜವಾಗುತ್ತಿದೆ. ಇದ್ದವರು, ಕೂಡಿಟ್ಟವರು ಇಂಥ ದಿನಗಳಲ್ಲಿ ಹೇಗೋ ಬದುಕುತ್ತಾರೆ. ಆದರೆ, ಅಂದಿಗಂದಿನದೇ ದುಡಿಮೆ ಯಿಂದಲೇ ಅಂದಿನ ಅನ್ನ ಎನ್ನುವಂತಿರುವವರ ಪಾಡೇನು? ಮಾತಿನ ಮೇಲೇ ನಿಂತವರು, ಕೂತವರು, ಮಲಗುವರು ಕಲಾವಿದರು. ಅದಕ್ಕೆ ಮಾತೆಂಬುದೇ ಜ್ಯೋತಿರ್ಲಿಂಗ ಮಹಾತ್ಮರಿಗೆ. ನಾವು ಕಲೆ ನಂಬಿದ ಕಲಾತ್ಮರು,ಅದಕ್ಕೆ ‘ನಾನೆಂದುದು ಮಾತೆಂಬುದೇ ನನ್ನನ್ನು ನುಂಗಾ’ ಎಂಬುದು ಸರಿಯಾಯ್ತು ತಾನೆ?