’ಒಳ್ಳೆಯ ಉದ್ದಿಮೆ’ ಹುಟ್ಟಿಕೊಳ್ಳುತ್ತಿದೆ, ಗಮನಿಸಿದ್ದೀರಾ ?
ಪ್ರಚಲಿತ
ಆನಂದ್ ಮಹಿಂದ್ರಾ, ಮಹಿಂದ್ರಾ ಸಮೂಹದ ಚೇರ್ಮ‌ನ್‌
ಒಳ್ಳೆಯ ಬಿಸಿನೆಸ್ ಅಂದರೇನು? ಈ ಪ್ರಶ್ನೆಯ ಉತ್ತರವೇ ಭವಿಷ್ಯದಲ್ಲಿ ಉದ್ಯಮಲೋಕವನ್ನು ಮುನ್ನಡೆಸಲಿದೆ. ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಉದ್ಯಮದ ಕುರಿತ ಚರ್ಚೆಗಳು ಪ್ರಾಮುಖ್ಯತೆ ಪಡೆದಿವೆ. ಉದಾಹರಣೆಗೆ, 2019ರಲ್ಲಿ ಯುರೋಪಿಯನ್ ಒಕ್ಕೂಟವು ಎಲ್ಲಾ ಉದ್ದಿಮೆಗಳು ಹಾಗೂ ಲಿಸ್ಟೆಡ್ ಕಂಪನಿಗಳು ಪರಿಸರ, ಸಾಮಾಜಿಕ ಹಾಗೂ ಆಡಳಿತ (ಇಎಸ್‌ಜಿ) ಸಂಬಂಧಿನಿಯಮಗಳನ್ನು ಪಾಲಿಸಬೇಕೆಂಬ ಕಾನೂನು ತಂದಿತು.
ಗೋಲ್ಡ್‌ಮನ್ ಸ್ಯಾಶಸ್ ಕಂಪನಿ ತಾನು ಇನ್ನು ಮುಂದೆ ಯಾವ ಕಂಪನಿಯಲ್ಲಿ, ಪುರುಷ ನಿರ್ದೇಶಕರು ಇದ್ದಾರೋ ಅಂತಹ ಕಂಪನಿಗಳ ಆರಂಭಿಕ ಷೇರು ಬಿಡುಗಡೆ (ಐಪಿಒ)ಗೆ ಬೆಂಬಲ ನೀಡುವುದಿಲ್ಲ ಎಂದು ಪ್ರಕಟಿಸಿತು. 2019ರ ಆಗಸ್ಟ್‌ನಲ್ಲಿ ಅಮೆರಿಕದ ಅತಿದೊಡ್ಡ ಉದ್ದಮೆಗಳ ಸಮೂಹವಾದ ಬಿಸಿನೆಸ್ ರೌಂಡ್‌ಟೇಬಲ್ ಒಕ್ಕೂಟವು ತನ್ನ ಸುದೀರ್ಘ ಕಾಲದ‘ಷೇರುದಾರರೇ ಅಂತಿಮ’ ಎಂಬ ಸೂತ್ರವನ್ನು ಬದಲಿಸಿ ವಾಣಿಜ್ಯೋದ್ಯಮಗಳು ಕೇವಲ ತಮ್ಮ ಲಾಭ ಮಾತ್ರ ನೋಡದೆ ಪರಿಸರ ಮತ್ತು ಕಾರ್ಮಿಕರ ಹಿತವನ್ನೂ ಗಮನಿಸಬೇಕು ಎಂದು ಒತ್ತಾಯಿಸುವ ಮಾರ್ಗಸೂಚಿ ಅಂಗೀಕರಿಸಿತು.
ಈಗ ಜಗತ್ತನ್ನು ಕಾಡುತ್ತಿರುವ ಕೋವಿಡ್ ಸಾಂಕ್ರಾಮಿಕ ರೋಗವು ಪರಿಸರದ ಕುರಿತ ಚರ್ಚೆಗೆ ಹಾಗೂ ಉದ್ದಿಮೆಗಳ ಪಾತ್ರ ಮತ್ತು ಉದ್ದೇಶಗಳ ಕುರಿತಾದ ಚರ್ಚೆಗೆ ಇನ್ನಷ್ಟು ಮಹತ್ವ ಬರುವಂತೆ ಮಾಡಿದೆ. ಉದ್ದಿಮೆಗಳು ಹೇಗೆ ನಡೆಯಬೇಕು ಹಾಗೂ ಉದ್ದಿಮೆ ಗಳು ಮತ್ತು ಉದ್ಯಮಪತಿಗಳನ್ನು ಹೇಗೆ ಕಾಲಕಾಲಕ್ಕೆ ಪರಿಶೀಲನೆಗೆ ಒಳಪಡಿಸಬೇಕು ಎಂಬುದಕ್ಕೆ ಈಗ ಹೆಚ್ಚು ಮಹತ್ವ ಬಂದಿದೆ. ಇದು ಸರಿ ಕೂಡ.
ಬಂಡವಾಳಶಾಹಿತನಕ್ಕೆ ಉದ್ದಿಮೆ ಎಂಬುದೊಂದು ರೂಪಕ. ನಮ್ಮ ಸಾಮಾಜಿಕ ವ್ಯವಸ್ಥೆಯ ತಳಹದಿ, ನಾವು ಹೇಗೆ ಮೌಲ್ಯ ಗಳನ್ನು ರೂಪಿಸುತ್ತೇವೆ ಹಾಗೂ ಯಶಸ್ಸನ್ನು ವ್ಯಾಖ್ಯಾನಿಸುತ್ತೇವೆ ಎಂಬುದೆಲ್ಲವೂ ಇದರ ಮೇಲೆಯೇ ನಿಂತಿದೆ. ಮಹಿಂದ್ರಾ ಸಮೂಹಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಾವು ಒಳ್ಳೆಯ ಬಿಸಿನೆಸ್ ಅಂದರೇನು ಎಂದು ಜನರಿಂದಲೇ ಮಾಹಿತಿ ಸಂಗ್ರಹಿ ಸಲು ಸಮೀಕ್ಷೆಯೊಂದನ್ನು ನಡೆಸಿದೆವು.
ಅದರಲ್ಲಿ ದೊರೆತ ಫಲಿತಾಂಶ ಹೇಗೆ ನಮ್ಮ ಸಮಾಜದಲ್ಲಿ ಉದ್ದಿಮೆಗಳ ಪಾತ್ರ ಮತ್ತು ಉದ್ದಿಮೆಗಳ ಕುರಿತಾದ ಜನರ ದೃಷ್ಟಿಕೋನ ಬದಲಾಗಿದೆ ಎಂಬುದನ್ನು ತಿಳಿಸಿತು. ಒಳ್ಳೆಯ ಉದ್ದಿಮೆ ಅಂದರೇನು, ಒಳ್ಳೆಯ ನೌಕರಿ ಯಾವುದು ಅಥವಾ ಒಳ್ಳೆಯ ಹೂಡಿಕೆ ಹೇಗಿರಬೇಕು ಎಂಬುದನ್ನು ಈ ಸಮೀಕ್ಷೆ ನಮಗೆ ಹೇಳಿತು. ‘ಮಹಿಂದ್ರಾ ಗುಡ್ ಬಿಸಿನೆಸ್ ಸ್ಟಡಿ’ಗೆ ನಾವು 2000 ಭಾರತೀಯರನ್ನು ಮಾತನಾಡಿಸಿದ್ದೆವು. ಅವರಲ್ಲಿ ಶೇ.62.42 ಜನರು ಒಳ್ಳೆಯ ಉದ್ದಿಮೆಯ ಬಗ್ಗೆ ತಮಗಿರುವ ಚಿಂತನೆಯಲ್ಲಿ ಸಮಾಜ ಮತ್ತು ಸಮುದಾಯಕ್ಕೆ ಮಹತ್ವದ ಪಾತ್ರವಿದೆ ಎಂದು ಹೇಳಿದರು.
ಉದ್ಯೋಗಿಗಳ ದೃಷ್ಟಿಕೋನದಿಂದ ನೋಡಿದರೆ, ಹೆಚ್ಚುಕಮ್ಮಿ ಅರ್ಧದಷ್ಟು ಉದ್ಯೋಗಿಗಳು (ಶೇ.49.35) ತಾವು ಸಮಾನ ಅವಕಾಶ, ವಿವಿಧತೆ, ಕೆಲಸದಲ್ಲಿ ಹೊಂದಾಣಿಕೆ ಹಾಗೂ ಸೃಜನಶೀಲ ಪರಿಸರಕ್ಕೆ ಒತ್ತು ನೀಡುತ್ತೇವೆ. ಈ ಎಲ್ಲ ಸಂಗತಿಗಳನ್ನುನೌಕರರಿಗೆ ಒದಗಿಸುವವನೇ ಒಳ್ಳೆಯ ಉದ್ಯೋಗದಾತ ಎಂದು ಹೇಳಿದರು. ಒಳ್ಳೆಯ ಉದ್ದಿಮೆಯ ಇಂತಹ ಲಕ್ಷಣಗಳು ಹೂಡಿಕೆಯ ಆಯ್ಕೆಗಳಲ್ಲೂ ಕಾಣಿಸುತ್ತವೆ.
ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.70.97ಜನರು ತಮಗೆ ನಿಜವಾಗಿಯೂ ಒಳ್ಳೆಯದು ಅನ್ನಿಸದ ಬಿಸಿನೆಸ್‌ನಲ್ಲಿ ತಾವು ಯಾವತ್ತೂ ಹೂಡಿಕೆ ಮಾಡುವುದಿಲ್ಲ ಎಂದು ಹೇಳಿದರು. ನನ್ನ ಪ್ರಕಾರ, ಒಳ್ಳೆಯ ಉದ್ದಿಮೆಯ ಬಗ್ಗೆ ಇರುವ ಕಲ್ಪನೆ ಕಳೆದ ಹತ್ತು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಬದಲಾಗುವುದಕ್ಕೆ ಎರಡು ಪ್ರಮುಖ ಸಂಗತಿಗಳು ಕಾರಣ. ಮೊದಲನೆಯದು,25ರಿಂದ35ವರ್ಷದೊಳಗಿನ (ಇವರನ್ನು ಮಿಲೇನಿಯಲ್‌ಗಳು ಎಂದು ಕರೆಯುತ್ತಾರೆ) ಯುವಕರು ಉದ್ಯಮ ವಲಯದಲ್ಲಿ ಪ್ರವರ್ಧಮಾನಕ್ಕೆ ಬಂದಿರುವುದು ಹಾಗೂ ಇಲ್ಲಿ ಒಂದು ರೀತಿಯ ಆಕ್ಟಿವಿಸಂ ಆರಂಭಿಸಿರುವುದು.
ಡೆಲಾಯ್ಟ್‌ನ ಇತ್ತೀಚಿನ ಮಿಲೇನಿಯಲ್ ಸಮೀಕ್ಷೆಯಲ್ಲಿ ಕಾಲು ಭಾಗಕ್ಕಿಂತ ಹೆಚ್ಚಿನ ಮಿಲೇನಿಯಲ್‌ಗಳು ಒಂದು ಕಂಪನಿಯ ರಾಜಕೀಯ ಒಲವಿನ ಕಾರಣದಿಂದ ಆ ಕಂಪನಿಯ ವಸ್ತುವನ್ನು ತಾವು ಖರೀದಿಸುವುದಿಲ್ಲ ಎಂದು ಹೇಳಿದರು. ಶೇ.29ಜನರು ಒಂದು ಕಂಪನಿಯ ಮುಖ್ಯಸ್ಥನ ಹೇಳಿಕೆ ಅಥವಾ ನಡತೆಯ ಕಾರಣಕ್ಕೆ ಆ ಕಂಪನಿಯಿಂದ ವಸ್ತು ಖರೀದಿಸುವುದಿಲ್ಲ ಎಂದು ಹೇಳಿದರು.
ಶೇ.70ರಷ್ಟು ಮಿಲೇನಿಯಲ್‌ಗಳು ತಮ್ಮ ಉದ್ಯೋಗದಾತ ಸಾಮಾಜಿಕ ಅಥವಾ ಆಂದೋಲನದ ರೀತಿಯ ವಿಷಯಗಳ ಬಗ್ಗೆ ಗಮನ ಹರಿಸಬೇಕೆಂದು ಬಯಸಿದರು. ಇಲ್ಲಿಯವರೆಗಿನ ಇನ್ನಾವುದೇ ತಲೆಮಾರಿನ ಜನರು ಈ ರೀತಿಯಲ್ಲಿ ವು ಹೇಗೆ  ಬಿಸಿನೆಸ್ ನಡೆಸಬೇಕು, ಉದ್ಯೋಗಿಗಳ ಅನುಭವ ಹಾಗೂ ಗ್ರಾಹಕರ ನಿರೀಕ್ಷೆಗಳ ಬಗ್ಗೆ ಸ್ಪಷ್ಟವಾಗಿ ಹೇಳಿರಲಿಲ್ಲ. ನಾವು ನಡೆಸಿದ ‘ಗುಡ್ ಬಿಸಿನೆಸ್ ಸ್ಟಡಿ’ಯಲ್ಲೂ ಇಂತಹುದೇ ಫಲಿತಾಂಶ ಬಂದಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.45.27 ಮಿಲೇನಿಯಲ್‌ಗಳು ಒಳ್ಳೆಯ ಉದ್ದಿಮೆಯನ್ನು ಹಣಕಾಸೇತರ ಮಾನದಂಡಗಳಿಂದ ಅಳೆದಿದ್ದಾರೆ. ಅವರಿಗೆ ಒಳ್ಳೆಯ ಕೆಲಸದ ವಾತಾವರಣವಿರಬೇಕು, ಅಲ್ಲಿ ವೈವಿಧ್ಯತೆ ಇತ್ಯಾದಿಗಳು ಇರಬೇಕು. ಇದಕ್ಕೆ ವ್ಯತಿರಿಕ್ತವಾಗಿ,46ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕೇವಲ ಶೇ.39.22ರಷ್ಟು ಜನರು ಮಾತ್ರ ಹಣಕಾಸೇತರ ಸಂಗತಿಗಳಿಗೆ ಮಹತ್ವ ನೀಡಿದ್ದಾರೆ.
ಎರಡನೆಯದಾಗಿ, ನಮ್ಮ ಕಂಪನಿಯೂ ಸೇರಿದಂತೆ ಸಾಂಪ್ರದಾಯಿಕ ರೀತಿಯಲ್ಲಿ ಬಿಸಿನೆಸ್ ಮಾಡುತ್ತಿರುವ ಕಂಪನಿಗಳು ಒಳ್ಳೆಯ ಉದ್ದಿಮೆಯಾಗಲು ಒತ್ತು ನೀಡಬೇಕು ಎಂಬ ಅಂಶವೇ ಸಮೀಕ್ಷೆಯಲ್ಲಿ ವ್ಯಕ್ತವಾಯಿತು. ಉದಾಹರಣೆಗೆ, ಪರಿಸರಕ್ಕೆ ಹಾನಿಯಾಗುವಂತಹ ಉತ್ಪಾದನಾ ವಿಧಾನ ಹಾಗೂ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಬೇಕು, ಉದ್ಯೋಗಿಗಳಿಗೆ ಪಾರದರ್ಶಕ ರೀತಿ ಯಲ್ಲಿ ವೃತ್ತಿಯ ಅವಕಾಶಗಳನ್ನು ಕಲ್ಪಿಸಬೇಕು, ಅವರ ನಿರೀಕ್ಷೆಗಳನ್ನು ಈಡೇರಿಸಬೇಕು, ಇದನ್ನೇ ಹೂಡಿಕೆದಾರರಿಗೆ ಹಾಗೂ ಸಮಾಜಕ್ಕೆ ತಿಳಿಸಬೇಕು ಎಂಬಿತ್ಯಾದಿ ಸಂಗತಿಗಳು ಒಂದು ಕಂಪನಿಯನ್ನು ಈಗಿನ ತಲೆಮಾರಿನವರಿಗೆ ‘ಕೆಲಸ ಮಾಡಲು ಒಳ್ಳೆಯ ಸ್ಥಳ’ವನ್ನಾಗಿಸುತ್ತವೆ ಎಂಬ ಅಂಶ ವ್ಯಕ್ತವಾಯಿತು.
ಹಾಗಿದ್ದರೆ ಈ ನಿರೀಕ್ಷೆಗಳನ್ನು ಈಡೇರಿಸಲು ಉದ್ದಿಮೆಗಳಿಂದ ಸಾಧ್ಯವಿದೆಯೇ? ನಮ್ಮ ಕಂಪನಿ ಯದೇ ಉದಾಹರಣೆಗಳನ್ನು ನೋಡಬಹುದು. ನಮ್ಮ ಗ್ರೂಪ್‌ನಲ್ಲಿ ಸಸ್ಟೆನ್ ಎಂಬ ಕಂಪನಿಯಿದೆ. ಅದು ಭಾರತದ ಕೆಲ ಅತ್ಯಂತ ಕುಗ್ರಾಮಗಳಿಗೂ ಸ್ವಚ್ಛಇಂಧನವನ್ನು ಪೂರೈಕೆ ಮಾಡುತ್ತದೆ. ಮಹಿಂದ್ರಾ ವೇಸ್ಟ್ ಟು ಎನರ್ಜಿ ಸೊಲ್ಯೂಷನ್ಸ್ ಲಿ. ಕಂಪನಿ ಸಾವಯವ ತ್ಯಾಜ್ಯಗಳನ್ನು ಬಯೋ-ಸಿಎನ್‌ಜಿ ಮತ್ತು ರಸಗೊಬ್ಬರವಾಗಿ ಪರಿವರ್ತಿಸುತ್ತದೆ.
ಮಹಿಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿ. ಕಂಪನಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ.ಒಟ್ಟಾರೆಯಾಗಿ ಈ ಕಂಪನಿಗಳು ‘ಒಳ್ಳೆಯ ಉದ್ದಿಮೆ’ ಎಂಬ ವ್ಯಾಖ್ಯೆಯಡಿ ಬರುತ್ತವೆ. ಅಷ್ಟೇ ಅಲ್ಲ, ಇವು ಈಗಾಗಲೇ ಪ್ರತಿವರ್ಷ ಸುಮಾರು50ಕೋಟಿ ಡಾಲರ್‌ನಷ್ಟು ಆದಾಯ ಕೂಡ ಗಳಿಸುತ್ತಿವೆ. ಮುಂದಿನ ದಶಕಗಳ ಬಗ್ಗೆ ಈ ಟ್ರೆಂಡ್ ಏನು ಹೇಳುತ್ತದೆ?ಒಂದು- ಜನಲಕ್ಷಣದ ದೃಷ್ಟಿಯಿಂದ ನೋಡಿದರೆ ಇಂದಿನ ಹೊಸ ತಲೆಮಾರಿನವರು ನಾಳೆ ಮ್ಯಾನೇಜರ್ ಗಳಾಗಿ, ಉದ್ಯಮಪತಿ ಗಳಾಗಿ ಹಾಗೂ ಔದ್ಯೋಗಿಕ ನಾಯಕರಾಗಿ ತಮ್ಮ ಪ್ರಭಾವವನ್ನು ಹೀಗೇ ಉಳಿಸಿಕೊಳ್ಳುತ್ತಾರಾ ಅಥವಾ ಹೇಗೆ ಉಳಿಸಿಕೊಳ್ಳುತ್ತಾರೆ ಎಂಬುದು ನನಗೆ ಬಹಳ ಕುತೂಹಲಕರ ಸಂಗತಿ.
ಎರಡು- ನಾನು ಈ ತಲೆಮಾರಿನವರ ಉತ್ತರಾಧಿಕಾರಿಗಳ ಬಗ್ಗೆ ಇನ್ನೂ ಕುತೂಹಲ ಹೊಂದಿದ್ದೇನೆ. ಅವರೇ ಜನರೇಷನ್ ‘ಝಡ್.’ ಅವರು ಇನ್ನೂ25ವರ್ಷದ ಒಳಗಿದ್ದಾರೆ. ಈ ವಯೋಮಾನದವರು ಮುಂದಿನ ಐದು ವರ್ಷಗಳಲ್ಲಿ ತಮ್ಮ ತಲಾ ವೆಚ್ಚವನ್ನುಶೇ.70ರಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಆಗ ಅವರು ತಮ್ಮ ಖರ್ಚು, ಕೆಲಸ ಹಾಗೂ ಹೂಡಿಕೆ ಮುಂತಾದ ಸಂಗತಿಗಳನ್ನು ನಿಭಾಯಿಸುತ್ತಾ ಒಳ್ಳೆಯ ಉದ್ದಿಮೆ ಯೆಂಬ ಕಲ್ಪನೆಯನ್ನು ಹೇಗೆ ಪೊರೆಯುತ್ತಾರೆ? ‘ಝಡ್’ ಜನರೇಷನ್‌ನ ತರುಣರು ಭೂಮಿಹಾಗೂ ವಿವಿಧ ನೈತಿಕ ವಿಷಯಗಳಲ್ಲಿ ನಮಗಿಂತ ಹೆಚ್ಚು ಬದ್ಧತೆ ಹೊಂದಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳುತ್ತದೆ.
ಆ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಬರೋಬ್ಬರಿ ಶೇ.92ಮಂದಿ ತಾವು ಸಾಮಾಜಿಕ ಹಾಗೂ ಪರಿಸರ ಸಂಬಂಧಿವಿಷಯಗಳ ಬಗ್ಗೆ ಬಹಳ ಕಾಳಜಿ ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಶೇ.89ಮಂದಿ ಭೂಮಿಯ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದೇವೆ ಎಂದಿದ್ದಾರೆ.  ಶೇ.94ಮಂದಿ ಇಂತಹ ತುರ್ತು ವಿಷಯಗಳಲ್ಲಿ ಕಂಪನಿಗಳು ಏನಾದರೂ ಮಾಡಬೇಕು ಎಂದಿದ್ದಾರೆ. ಈ ಪ್ರಮಾಣ ಇವರಿಗಿಂತ ಮುಂಚಿನ ಮಿಲೇನಿಯಲ್ ತಲೆಮಾರಿನವರಿಗಿಂತ ಹೆಚ್ಚು. ಅಂದರೆ ಪರಿಸರ ಮತ್ತುಭೂಮಿಯ ಬಗ್ಗೆ ಮಿಲೇನಿಯಲ್‌ಗಳಿಗಿಂತ ‘ಝಡ್’ ಜನರೇಷನ್‌ನವರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.
ಇಂತಹ ಅಂಕಿ ಅಂಶಗಳು ಮುಂಬರುವ ದಶಕದಲ್ಲಿ ‘ಒಳ್ಳೆಯ ಉದ್ದಿಮೆ’ಯ ಗುಣಲಕ್ಷಣಗಳು ಹೇಗಿರುತ್ತವೆ ಎಂಬ ವಿಷಯದ ಬಗ್ಗೆ ಧನಾತ್ಮಕ ಸುಳಿವು ನೀಡುತ್ತವೆ. ಮುಂಬರುವ ದಶಕಗಳಲ್ಲಿ ಯಾವ ಉದ್ದಿಮೆ ತಳಮಟ್ಟದಿಂದ ಒಳ್ಳೆಯದಾಗಿದೆಯೋ ಅದು ಮಾತ್ರ ಉಳಿದುಕೊಳ್ಳುತ್ತದೆ. ಅಂದರೆ ಒಂದು ಉದ್ದಿಮೆಯ ಮೂಲ ವಿನ್ಯಾಸವೇ ಅತ್ಯುತ್ತಮವಾಗಿರಬೇಕು. ಇಲ್ಲದಿದ್ದರೆ ಅಂತಹ ಉದ್ದಿಮೆ ಉಳಿಯುವುದಿಲ್ಲ. ಒಂದು ಉದ್ದಿಮೆ ಒಳ್ಳೆಯ ಉದ್ದಿಮೆಯೋ ಕೆಟ್ಟ ಉದ್ದಿಮೆಯೋ ಎಂಬುದು ಆ ಉದ್ದಿಮೆ ಏನನ್ನುತಯಾರಿಸುತ್ತದೆ, ಹೇಗೆ ತಯಾರಿಸುತ್ತದೆ, ನೌಕರರ ಹಾಗೂ ಸಮಾಜದ ಜತೆಗೆ ಅದರ ಸಂಬಂಧ ಹೇಗಿದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಇಲ್ಲಿ ತಂತ್ರಜ್ಞಾನ ಬಹಳ ಮಹತ್ವದ ಪಾತ್ರ ವಹಿಸುತ್ತದೆ.
ಅದೇ ರೀತಿ, ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ರೂಪಾಂತರ ಕೂಡ ಬಹಳ ಮುಖ್ಯ. ಭಾರತದ ತಾಂತ್ರಿಕ ಶಿಕ್ಷಣದ ಮಾರುಕಟ್ಟೆ ಮುಂದಿನ ಐದು ವರ್ಷಗಳಲ್ಲಿ ಈಗಿನ ಒಂದು ಬಿಲಿಯನ್ ಡಾಲರ್ ನಿಂದ 8-10 ಬಿಲಿಯನ್ ಡಾಲರ್‌ಗೆ ಬೆಳೆಯಲಿದೆ. ಈಕ್ಷೇತ್ರವೇ ಒಳ್ಳೆಯ ಉದ್ದಿಮೆಗಳನ್ನು ರೂಪಿಸುವುದಕ್ಕೂ ತಳಪಾಯವಾಗಲಿದೆ.
ಕಳೆದ ದಶಕದ ಈ ಎಲ್ಲ ಸಂಗತಿಗಳು ಮುಂದಿನ ದಶಕದಲ್ಲಿ ಒಳ್ಳೆಯ ಉದ್ದಿಮೆಗಳ ಭವಿಷ್ಯವೇನು ಎಂಬ ಬಗ್ಗೆ ನಮಗೊಂದು ಸುಳಿವು ನೀಡುತ್ತಿವೆ. ಹಾಗಿದ್ದರೆ ೨೦೩೦ರ ದಶಕದಲ್ಲೂ ಇದು ಚರ್ಚೆಯ ಮುಖ್ಯ ವಿಷಯವಾಗಿರುತ್ತದೆಯೇ? ನನ್ನ ಪ್ರಕಾರ ಇಲ್ಲ. ಏಕೆಂದರೆ ‘ಒಳ್ಳೆಯ ಉದ್ದಿಮೆ’ ಎಂಬ ಚರ್ಚೆಯಲ್ಲಿ ‘ಒಳ್ಳೆಯ’ ಎಂಬ ವಿಶೇಷಣ ತನ್ನಿಂತಾನೇ ಅಪ್ರಸ್ತುತವಾಗುತ್ತದೆ. ಕ್ರಮೇಣ ಉದ್ದಿಮೆ ಅಂದರೆ ಅಲ್ಲಿ ಒಳ್ಳೆಯ ಸಂಗತಿಗಳು ಮಾತ್ರ ಇವೆ ಎಂಬ ವಾತಾವರಣ ಮೂಡುತ್ತದೆ. ಏಕೆಂದರೆ ಮುಂದಿನ ದಿನಗಳಲ್ಲಿ ಒಂದು ಉದ್ದಿಮೆ ಉಳಿದಿದೆ ಅಂದರೆ ಅದು ತನ್ನ ವಿನ್ಯಾಸದಲ್ಲೇ ಒಳ್ಳೆಯ ಉದ್ದಿಮೆಯಾಗಿರುತ್ತದೆ.
ಆಗ ಒಳ್ಳೆಯ ಹಾಗೂ ಉದ್ಯಮ ಎಂಬ ಪದಗಳು ಸಮಾನಾರ್ಥಕ ಪದಗಳಾಗಿರುತ್ತವೆ. ಇಂತಹ ಉದ್ದಿಮೆಗಳು ಈಗಾಗಲೇ ಲಾಭ ಮತ್ತು ಇನ್ನಿತರ ದೃಷ್ಟಿಕೋನಗಳಿಂದ ತಮ್ಮ ಛಾಪು ಮೂಡಿಸುತ್ತಿವೆ. ಇನ್ನು, ಸಮಾಜವಂತೂ ಯಾವತ್ತೂ ಆರ್ಥಿಕ ಲಾಭ ಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುತ್ತದೆ. ಹಾಗಿದ್ದರೆ 2030ರ ವೇಳೆಗೆ ಬೇರೆ ಯಾವ ರೀತಿಯ ಉದ್ದಿಮೆಗಳ ಬಗ್ಗೆ ಚರ್ಚೆ ನಡೆಯಬಹುದು?’