ನಿನಗೆ ಬೇರೆ ಹೆಸರು ಬೇಕೇ ? ಆದರ್ಶ ಗೃಹಿಣಿ ಎಂದರೆ ಅಷ್ಟೇ ಸಾಕೇ !
ಅಭಿಪ್ರಾಯ
ಡಾ.ಕೆ.ಪಿ.ಪುತ್ತೂರಾಯ
ಅದೊಂದು ಹೈ ಫೈ ಸೊಸೈಟಿಯ ಸ್ನೇಹ ಕೂಟ ಸಮಾರಂಭ. ಹೆಚ್ಚಿನವರು ಸುಶಿಕ್ಷಿತರು. ಮನೆಯಲ್ಲಿ ಕೆಲಸಕ್ಕೆ ಕೈಗೊಂದು ಕಾಲ್ಗೊಂದು ಆಳುಗಳುಳ್ಳ ಶ್ರೀಮಂತ ಆಧುನಿಕ ಸಮಾಜಕ್ಕೆ ಸೇರಿದವರಾಗಿದ್ದರು. ಪುರುಷರು ಸೂಟುಬೂಟುಗಳನ್ನು ಧರಿಸಿದ್ದರು. ಮಹಿಳೆಯರು ಬೆಲೆ ಬಾಳುವ ಉಡುಪು ತೊಡುಪುಗಳನ್ನು ಚಿನ್ನಾಭರಣಗಳನ್ನು ಧರಿಸಿ ಬಂದಿದ್ದರು.
ಮೊದಲಿಗೆ ಪ್ರತಿಯೋರ್ವ ಗಂಡಸು ತನ್ನ ಮಡದಿಯೊಂದಿಗೆ ವೇದಿಕೆಗೆ ಬಂದು ಆಕೆಯನ್ನು ಸಭೆಗೆ ಪರಿಚಯಿಸುವ ಕಾರ್ಯಕ್ರಮವಿತ್ತು. ಅಂತೆಯೇ ಒಬ್ಬೊಬ್ಬರಾಗಿ ಅತಿ ಹೆಮ್ಮೆಯಿಂದ ಸಂತೋಷದಿಂದ ತಮ್ಮ ಮಡದಿಯನ್ನು ಪರಿಚಯಿಸ ಲಾರಂಭಿಸಿದರು. ಒಬ್ಬರು ಈಕೆ ಪದವೀದರೆ, ಕಾಲೇಜೊಂದರಲ್ಲಿ ಅಧ್ಯಾಪಕಿ ಆಗಿದ್ದಾರೆ. ಈಗ ಪಿಎಚ್.ಡಿ ಕೂಡಾ ಮಾಡು ತ್ತಿದ್ದಾರೆ ಎಂದು ಪರಿಚಯಿಸಿದರೆ ಇನ್ನಿತರರು ಈಕೆ ಹೆಸರಾಂತ ವೈದ್ಯೆೆ, ವಕೀಲೆ, ಬ್ಯಾಂಕ್ ಮ್ಯಾನೇಜರ್, ಸಾಫ್ಟ್ ವೇರ್ ಎಂಜಿನಿಯರ್, ಇತ್ಯಾದಿಯಾಗಿ ಅವರ ವಿದ್ಯಾರ್ಹತೆ ಮತ್ತು ಸಾಧನೆಗಳ ಪಟ್ಟಿಯೊಂದಿಗೆ ಪರಿಚಯಿಸುತ್ತಿರಲು ಈ ಮಹಿಳಾಮಣಿಗಳು ನಸುನಗುತ್ತಾ ಅವೆಲ್ಲವನ್ನೂ ತುಸು ಬಿಂಕದಿಂದಲೇ ಸರಿ ‘ಹೌದು’ ಎನ್ನುತ್ತಾ ತಲೆ ಅಲ್ಲಾಡಿಸುತ್ತಿದ್ದರು.
ಅಂತ್ಯದಲ್ಲಿ ಸಾಧಾರಣ ವ್ಯಕ್ತಿತ್ವದ ಮಹನೀಯರೊಬ್ಬರು ಅವರಂತೆಯೇ ಸರಳ ಸ್ವಭಾವದ ಸಾದಾ ಸೀರೆಯನ್ನುಟ್ಟಿದ್ದ ಹೆಚ್ಚೇನು ಆಭರಣಗಳಿಲ್ಲದ, ಭಾರೀ ಮೇಕಪ್ ಮಾಡಿಕೊಳ್ಳದ ಅಷ್ಟೊಂದು ಸುಶಿಕ್ಷತೆಯಂತೂ ಕಾಣದ ಸಾಮಾನ್ಯ ಮಹಿಳೆಯನ್ನು ತನ್ನಮಡದಿಯೆಂದು ಪರಿಚಯಿಸಲು ಬಂದಾಗ ಇವಳಲ್ಲಿ ಪರಿಚಯಿಸುವಂತಹುದು ಏನಿದೆ ಎಂಬ ಕುತೂಹಲ ಎಲ್ಲರಲ್ಲೂ ಉಂಟಾಯಿತು. ಆದರೆ ಕೊನೆಗೆ ಎಲ್ಲರು ಎದ್ದು ನಿಂತು   ಕೊಡುವಂತಹ ವ್ಯಕ್ತಿತ್ವ ಇವಳದಾಗಿತ್ತು.
ಅವಳ ಗಂಡ ಹೇಳಲಾರಂಭಿಸಿದರು. ‘ಈಕೆ ನನ್ನ ಮುದ್ದಿನ ಮಡದಿ- ಓದಿದ್ದು ಬರೇ ಹತ್ತನೇ ತರಗತಿ. ಆದರೆ ಸಾಂಸಾರಿಕ ಜೀವನವೆಂಬ ಪರೀಕ್ಷೆಯಲ್ಲಿ ಆದರ್ಶ ಗೃಹಿಣಿಯಾಗಿ ಡಾಕ್ಟರೇಟ್ ಪದವಿ. ಚಿನ್ನದ ಪದಕವನ್ನೇ ಪಡೆದುಕೊಂಡಿದ್ದಾಳೆ. ಈಕೆ ಮನೆಯಿಂದ ಹೊರಹೋಗಿ ಯಾವ ನೌಕರಿಯನ್ನೂ ಮಾಡಿ ಸಂಪಾದನೆ ಮಾಡುತ್ತಿಲ್ಲ.
ಆದರೆ, ಮನೆಯೊಳ ಗಿದ್ದುಕೊಂಡೇ ಎಲ್ಲಾ ಕೆಲಸಗಳನ್ನು ಸಮರ್ಪಕವಾಗಿ ಮಾಡಿ ನನ್ನ ಸಂಪಾದನೆಯನ್ನು ಉಳಿಸಿದ್ದಾಳೆ.  ಓರ್ವ ಪರಿಪೂರ್ಣ ಗೃಹಿಣಿ ಯಾಗಿ, ಮನೆಯವರ ಪಾಲಿಗೆ ದೇವತೆಯೇ ಆಗಿದ್ದಾಳೆ. ಮನೆಯನ್ನು ನಂದನವನ್ನಾಗಿಸಿದ್ದಾಳೆ.ಇಷ್ಟಕ್ಕೂ ಇವಳು ಮಾಡುವ ಕೆಲಸಗಳು, ನಿರ್ವಹಿಸುವ ಜವಾಬ್ದಾರಿಗಳೇನೆಂಬುದನ್ನು ಹೇಳುವಿರಾ?’.
ನನಗಂತೂ ನನ್ನ ಅರ್ಧಾಂಗಿಯಾಗಿ ನನ್ನ ಆಸೆ ಆಕಾಂಕ್ಷೆ ಬೇಕು ಬೇಡಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಂಡುಅದಕ್ಕೆ ಸರಿಯಾಗಿ ಸ್ಪಂದಿಸುವ ವಳು. ಕಷ್ಟನಷ್ಟಗಳಿರಲಿ, ನೋವು ನಿಂದನೆಗಳಿರಲಿ, ಯಾರಿರಲಿ ಇರದಿರಲಿ ನಾನಿಲ್ಲವೇ ಎನ್ನುತ್ತಾ ಬಾಳ ಸಂಗಾತಿಯಾಗಿ ನನ್ನ ಜತೆ ಬಂದವಳು. ನನ್ನ ಜೊತೆ ನಿಂದವಳು. ಮುಡಿಗೆ ಹೂವ ತರುವೆನ್ನಲದೆ ಹುಲ್ಲ ತರೆನು’ ಎನ್ನುತ್ತಾ ತನ್ನ ಸತ್ ಚಾರಿತ್ರ್ಯವನ್ನು ಕಾಪಾಡಿ ಕೊಂಡವಳು.
‘ಕ್ಷಮಯಾ ಧರಿತ್ರಿ ಎಂಬಂತೆ ನನ್ನ ದೌರ್ಬಲ್ಯಗಳನ್ನು ಸಹಿಸಿಕೊಂಡವಳು. ‘‘ಭೋಜ್ಯೇಷು ಮಾತಾ’’ ಎಂಬಂತೆ ಮಗುವಿನಂತೆ ನನ್ನ ಆರೈಕೆ ಮಾಡಿದವಳು, ನನ್ನನ್ನು ಸಂಭಾಳಿಸಿದವಳು, ಸಲಹಿದ ವಳು. ಈಕೆ ನನ್ನನ್ನು ಒಮ್ಮೆ ಮಗುವಿನಂತೆ ಪ್ರೀತಿಸಿದರೆ ಇನ್ನೊಮ್ಮೆ ಗೆಳೆಯನಂತೆ ಕಾಣುತ್ತಾಳೆ. (ಕಾರ್ಯೇಷು ಮಂತ್ರಿ) ಇವಳ ಸಹನಾಶಕ್ತಿ ಅಸಾಧಾರಣ. ಈ ಸತ್ಯವನ್ನರಿತೇ ಕವಿವಾಣಿ ಹೇಳುತ್ತೆ ‘ಹೆಂಡತಿಯೊಲುಮೆಯ ಭಾಗ್ಯವನ್ನರಿಯದ ಗಂಡಿಗೆ ಜಯವಿಲ್ಲ. ಆದರೆ ಬಹಳಷ್ಟು ಗಂಡಸರಿಗೆ ಹೆಂಡತಿಯ ಪ್ರೀತಿ ಪರಿಶ್ರಮದ ಅರ್ಥವೇ ಆಗೋದಿಲ್ಲ. ಆಕೆ ತಯಾರು ಮಾಡಿದ ರುಚಿ ರುಚಿಯಾದ ಅಡುಗೆಯನ್ನು 2-3 ಸಲ ಹಾಕಿಸಿಕೊಂಡು ತಿಂತಾರೆ. ಆದರೆ ಬಾಯಿ ಯಿಂದ ಒಂದು ಒಳ್ಳೆಯ ಮೆಚ್ಚುಗೆಯ ಮಾತು ಹೊರ ಬರೋದೇ ಇಲ್ಲ.
ಮಡದಿ ಇದ್ದ ಸೀರೆಯನ್ನೇ ನೀಟಾಗಿ ಉಟ್ಟುಕೊಂಡು ಲಕ್ಷಣವಾಗಿ ಕಂಡರೂ ಒಂದು     ಇಲ್ಲ. ಕೆಲ ಗಂಡಂದಿರಿಗೆ ಹಿತ್ತಲ ಗಿಡ ಮದ್ದಲ್ಲ. ಮನೆಯ ಹೆಂಡ್ತಿ ಮುದ್ದಲ್ಲ. ಲಗ್ನದ ವೇಳೇ ಸಪ್ತಪದಿ ನಂತರ ಇವರದು ಗುಪ್ತಪದಿನೆನಪಿನಲ್ಲಿಟ್ಟುಕೊಳ್ಳಿ ಗಂಡಸರೇ. ನಾವು ಕಾಯಿಲೆಗೆ ಬಿದ್ದಾಗ, ನಮ್ಮ ಜೇಬು ಖಾಲಿಯಾದಾಗ, ನಮಗೆ ಅಪಜಯ ಅವಮಾನ ವಾದಾಗ ನಾವು ಏಕಾಂಗಿ ಗಳಾದಾಗ, ನಮ್ಮ ಜತೆ ನಿಲ್ಲುವವಳು ನಮ್ಮ ಹೆಂಡತೀಯೇ ಹೊರತು ಇನ್ಯಾವ ಅಪ್ಸರೆಯೂ ಅಲ್ಲ.
ಹೊಟ್ಟೆಯೊಳಗಿರುವಾಗ ಮಗು ತನಗೆ ಕಾಲಲ್ಲಿ ಒದ್ದರೂ, ತನ್ನ ಜೀವನ ಸಾರ್ಥಕವಾಯಿತೆಂದು ತಿಳಿದು ತನ್ನ ಕಣ್ಣುಗಳನ್ನು ಒದ್ದೆ ಮಾಡಿಕೊಂಡ ಮಹಾತಾಯಿ ಈಕೆ. ಮಳೆಯ ನೀರಿನಲ್ಲಿ ಆಟವಾಡಿ ಮೈಯ್ಯೆಲ್ಲಾ ಒದ್ದೆ ಮಾಡಿಕೊಂಡು ಮನೆಗೆ ಬಂದ  ಮಗುವನ್ನು ಕಂಡಾಗ ಮಳೆಯನ್ನೇ ಬೈಯ್ಯುವ ಮಕ್ಕಳ ಮೇಲಿನ ಪ್ರೇಮವನ್ನು ಪ್ರಕಟಿಸಿದವಳು. ಇನ್ನು ನಮ್ಮ ಮಕ್ಕಳಿಗಂತೂ ಇವಳೇ ಸ್ಪೂರ್ತಿ.
  ಗುರು ಹಾಗೂ ಮಮತೆಯ ಮಡಿಲು. ಮಕ್ಕಳಿಗೆ  ಮಾಡಲು ನೆರವಾಗೋದಲ್ಲದೆ ನೀತಿ ಕತೆಗಳನ್ನು ಹೇಳೋದರ ಮೂಲಕ ಸಂಸ್ಕಾರವನ್ನು ತುಂಬುತ್ತಾಳೆ. ಬಡವರ ಮುಂದೆ ತಮ್ಮ ಸಂಪತ್ತನ್ನು ಪ್ರದರ್ಶಿಸಬಾರದು.  ದುಃಖದಲ್ಲಿರುವವರ ಎದುರು ನಮ್ಮ ಸುಖ ಸಂತೋಷಗಳನ್ನು ವರ್ಣನೆ ಮಾಡಬಾರದು’’ ಎಂಬ ಕಿವಿ ಮಾತನ್ನು ಹೇಳುವವಳು,‘ಯೋಗ್ಯತೆ ಇಲ್ಲದ ಯೋಗವೇ ಬೇಡ, ಸಿದ್ಧಿ ಇಲ್ಲದ ಪ್ರಸಿದ್ಧಿಯೇ ಬೇಡ, ದುಡಿಮೆ ಮಾಡದ ದುಡ್ಡೇ ಬೇಡ, ಅರ್ಹತೆ ಇಲ್ಲದ ಅಪೇಕ್ಷೆಯೇ ಬೇಡಬೆಂಬುದು ಇವಳು ಮಕ್ಕಳಿಗೆ ಕಲಿಸಿದ ಸಿದ್ಧಾಂತವಾಗಿತ್ತು.
ಶಿಕ್ಷಣ ಹಣ ಸಂಪಾದನೆಗೆ ನೆರವಾದರೆ, ಸಂಸ್ಕಾರ ಗುಣ ಸಂಪಾದನೆಗೆ ನೆರವಾಗುತ್ತೆ ಎಂಬುದು ಇವಳ ಬಲವಾದ ನಂಬಿಕೆಯಾಗಿತ್ತು. ತಾನೆಷ್ಟು ಹಸಿದಿದ್ದರೂ  ಗಂಡನಿಗೆ, ಮಕ್ಕಳಿಗೆ ಉಣ ಬಡಿಸದೆ ತಾನು ಉಂಡವಳಲ್ಲ. ತಾನು ಜೀವನದಲ್ಲಿಮಹತ್ತರವಾದುದನ್ನು ಸಾಧಿಸಲಾಗದಿದ್ದರೂ ಗಂಡನ ಮತ್ತು ಮಕ್ಕಳ ಸಾಧನೆಗಳನ್ನು ನೋಡಿ ಸಂತಸಪಟ್ಟವಳು,  ಹೆಮ್ಮೆಪಟ್ಟವಳು ಈ ನಿಸ್ವಾರ್ಥ ಜೀವ.
ಇನ್ನು ಸಂಸಾರದಲ್ಲಿ ತನ್ನ ಕಡೆಯವರೇ ಇರಲಿ, ಗಂಡನ ಕಡೆಯವರೇ ಇರಲಿ, ಎಲ್ಲರನ್ನೂ ಸರಿಸಮಾನವಾಗಿ ಪ್ರೀತಿಯಿಂದ ಕಂಡವಳು. ಸಂಸಾರದಲ್ಲಿ ಸಂಬಂಧಗಳು ಮುಖ್ಯವಲ್ಲ. ಅನುಬಂಧ ಮುಖ್ಯವೆನ್ನುವವಳು. ಒಮ್ಮತವಿರುವ ವಿಷಯಗಳನ್ನಲ್ಲ. ಒಮ್ಮತ ವಿಲ್ಲದ ವಿಷಯಗಳನ್ನು ಹೇಗೆ ನಿಭಾಯಿಸುತ್ತೇವೆ ಎನ್ನೋದೇ ಸುಖ ಸಂಸಾರದ ಸೂತ್ರವೆಂಬುದು ಇವಳ ನಂಬಿಕೆ. ಅಂತೆಯೇ ಸಂಸಾರದಲ್ಲಿ ನಾವು ಗೆದ್ದು ಸೋಲಬಾರದು; ಸೋತು ಗೆಲ್ಲಬೇಕೆಂಬುದೇ ಇವಲ ತತ್ವ ಸಿದ್ಧಾಂತ.
ರಾಗಿ ಮುದ್ದೆಯನ್ನು ಜಗಿಯಬಾರದು, ಹಾಗೆಯೇ ನುಂಗಿಬಿಡಬೇಕು. ಅಂತೆಯೇ ನೋವು- ನಿಂದನೆಗಳನ್ನು ಚರ್ಚಿಸಬಾರದು, ಹಾಗೆಯೇ ನುಂಗಿಬಿಡಬೇಕೆನ್ನುವುದು ಇವಲ ಅನುಭವ. ‘ಒಟ್ಟಿನಲ್ಲಿ ಸಹನೆಯು ನಮ್ಮದಾದರೆ ಸಕಲವೂ ನಮ್ಮದೇ ವಿನಯವೂ ನಮ್ಮದಾದರೆ ವಿಜಯವೂ ನಮ್ಮದೇ’ ಎಂಬುದು ಇವಳ ಕಿವಿಮಾತು. ಇನ್ನು ಅಡುಗೆಯ ವಿಚಾರದಲ್ಲಿ ಇವಳು .
ಯಾರಿಗೆ ಯಾವುದು ಇಷ್ಟ, ಯಾವ ಕಾಲಕ್ಕೆ ಯಾವ ಅಡುಗೆ ಹಿತಕಾರಿ ಎಂಬುದನ್ನು ಗಮನಿಸಿ ರುಚಿ ರುಚಿಯಾದ ಆಹಾರವನ್ನು ತಯಾರು ಮಾಡುತ್ತಾಳೆ. ಹಾಗೂ ದಿನ ದಿನದ ಅಡುಗೆಯನ್ನು ಬದಲಾಯಿಸುತ್ತಾಳೆ. ಅಡುಗೆ ಮಾಡೋದು ಮಾತ್ರವಲ್ಲ; ಮಾಡಿದಅಡುಗೆಯನ್ನು ಇವಳೇ ಬಡಿಸಬೇಕು. ಆಗಲೇ ಅವಳಿಗೆ ತೃಪ್ತಿ. ನಾವೆಲ್ಲಾ ಆನಂದವಾಗಿ ಉಣ್ಣೋದನ್ನು ಕಣ್‌ತುಂಬ ನೋಡಿ ಖುಷಿ ಪಡುತ್ತಾಳೆ.
ಊಟದಲ್ಲಿ ಏನೆಲ್ಲಾ ಪೋಷಕಾಂಶಗಳು ಇರಬೇಕೆಂಬುದೂ ಇವಳಿಗೆ ಚೆನ್ನಾಗಿ ಗೊತ್ತು. ಇವನ್ನೆಲ್ಲಾ ಎಲ್ಲಿಂದ ಯಾವಾಗ ಕಲಿತಳೋ ನಾಕಾಣೆ. ಹೊತ್ತು ಹೊತ್ತಿಗೆ ನಮ್ಮನ್ನೆಲ್ಲಾ ಉಣಿಸಿದ ನಂತರವೇ ಇವಳ ಊಟ. ಒಟ್ಟಿನಲ್ಲಿ ಈಕೆಯೋರ್ವ ಅನ್ನ  ಪೂರ್ಣೇಶ್ವರಿ. ಅತಿಥಿಗಳನ್ನು ಹೇಗೆ ಸತ್ಕರಿಸಬೇಕೆಂಬುದನ್ನು ಇವಳಿಂದ ಕಲಿಯಬೇಕು. ಮನೆಗೆ ಬಂದವರು ಯಾರೇಆಗಲಿ, ಎಷ್ಟು ಹೊತ್ತಿಗೆ ಬರಲಿ, ಅವರನ್ನು ಮನಃ ಪೂರ್ವಕವಾಗಿ ಸತ್ಕರಿಸಿ ಉಪಚರಿಸಿ, ಕಳುಹಿಸದಿದ್ದರೆ ಇವಳಿಗೆ ಸಮಾಧಾನವಿಲ್ಲ. ಒಂದು ದಿನವೂ ಅತಿಥಿಗಳು ಬಂದಾಗ ಈಕೆ ಗೊಣಗಿದವಳಲ್ಲ. ಇವಳಿಂದಾಗಿಯೇ ಮನೆಗೆ ಬರುವವರ ಸಂಖ್ಯೆೆ ಬಹಳವಾಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ.
ಹಬ್ಬ ಹುಣ್ಣಿಮೆಗಳನ್ನು ತಪ್ಪದೇ ಅತ್ಯಂತ ಉತ್ಸಾಹದಿಂದ ಆಚರಿಸುವವಳು. ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಮರೆಯಕೂಡದು. ಮಕ್ಕಳಿಗೂ ಪರಿಚಯಿಸಬೇಕೆಂಬುದೇ ಇವಳ ಆಶಯ. ಎಲ್ಲರ ಬಟ್ಟೆೆಗಳನ್ನು ಸ್ವಚ್ಛಗೊಳಿಸಿ ಜೋಡಿಸಿ ಇಡೋದು, ಮನೆಯನ್ನು ಸ್ವಲ್ಪವೂ ಕಸವಿಲ್ಲದೆ, ಕ್ಕಟ ವಾಗಿ ಇಡುವ ಕೆಲಸ. ಪ್ರದರ್ಶನದ ವಸ್ತುಗಳನ್ನು ಓರಣವಾಗಿಡೋದು, ಎಲ್ಲವೂ ಅವಳಿಗೆ ಮುದವನ್ನೀಯುವ ಕೆಲಸಗಳು.
ಇನ್ನು ಹಣಕಾಸು ನಿರ್ವಹಣೆಯೂ ಇವಳ ಸುಪರ್ದಿಗೆ ಸೇರಿದ್ದು. ನಾನು ತಿಂಗಳಲ್ಲಿ ಅವಳ ಕೈಗೆ ಕೊಡುವ ಹಣ ಎಷ್ಟೇ ಇರಲಿ, ಅದನ್ನು ದುಂದು ವೆಚ್ಚಮಾಡದೆ ಆದಾಯ ಖರ್ಚುಗಳನ್ನು ಸರಿದೂಗಿಸಿ  ಕೊಂಡು ಹೋಗು ಆರ್ಥಿಕ ಮಂತ್ರಿಯೂ ಈಕೇನೆ.‘‘ಹಾಸಿಗೆ ಇದ್ದಷ್ಟೆೆ ಕಾಲುಚಾಚಬೇಕು; ಇಲ್ಲವಾದರೆ ಎಲ್ಲರ ಮುಂದೆ ಕೈಚಾಚ ಬೇಕಾಗುತ್ತದೆ’’. ಎನ್ನುವ ಕಿವಿಮಾತನ್ನು ಆಗಾಗ ಹೇಳುವವಳು. ನೆರೆಹೊರೆಯವರಿಗೆ, ಬಂಧುಮಿತ್ರರಿಗೆಲ್ಲಾ ಈಕೆಯೇ ಮೊದಲ ವೈದ್ಯೆ. ಯಾರಿಗಾದರೂ ಆರೋಗ್ಯಕೆಟ್ಟು ಹೋದರೆ ಯಾವ ಕಷಾಯ ಮಾಡಿಕೊಡಬೇಕು, ಯಾವ ಮುಲಾಮು ಹಚ್ಚಬೇಕು, ಯಾವ ಮನೆ ಮದ್ದನ್ನು ಮಾಡಬೇಕೆಂಬುದನ್ನು ತಿಳಿ ಹೇಳುತ್ತಾಳೆ.
ಬಡ ಬಗ್ಗರಿಗೆ ದಾನ ಮಾಡುವಲ್ಲಿ ಇವಳು ಹಿಂದೆ ಮುಂದೆ ನೋಡೋದಿಲ್ಲ. ‘‘ಬಿಟ್ಟು ಹೋಗೋದಕ್ಕಿಂತ ಕೊಟ್ಟು ಹೋಗೋದು ಲೇಸಲ್ವ’’ ಎಂಬುದು ಇವಳ ಸಿದ್ಧಾಂತ. ಮನೆ ಕೆಲಸದವರನ್ನು ಎಂದೂ ಏಕವಚನ ದಲ್ಲಿ ಕರೆದವಳಲ್ಲ; ಕೀಳಾಗಿ ಕಂಡವಳಲ್ಲ, ಭೇದಭಾವ ಮಾಡಿದವಳಲ್ಲ, ತಾನು ಅವರ ಜತೆಗೂಡಿ ಕೆಲಸ ಮಾಡಿದವಳು.
ಇನ್ನು ತೋಟಗಾರಿಕೆ ಇವಳ ನೆಚ್ಚಿನ ಕೆಲಸ. ಟೆರೇಸ್ ಸೇರಿದಂತೆ ಮನೆಯ ಸುತ್ತ ಚಿಕ್ಕ ಹಸಿರು ಉದ್ಯಾನವನ ವನ್ನೇ ನಿರ್ಮಿಸಿ ಬಿಟ್ಟಿದ್ದಾಳೆ. ಗಿಡಗಳಿಗೆ ನೀರೆರೆಯು ವುದು, ಅವನ್ನ ಸಾಕಿ ಬೆಳೆಸೋದೆಂದರೆ, ಇವಳಿಗೆ ಅತ್ಯಂತ ಪ್ರಿಯವಾದ ಕೆಲಸವನ್ನೇ ಮಾಡಬೇಕು. ಇದು ಸಾಧ್ಯವಾಗದಿದ್ದರೆ ನಾವು ಮಾಡೋ ಕೆಲಸವನ್ನೇ ಇಷ್ಟಪಡಬೇಕೆಂಬುದು ಇವಳ ತತ್ವ.
ಇಷ್ಟೆಲ್ಲಾ ಕೆಲಸವನ್ನು ಯಾವುದೇ ಹೊಗಳಿಕೆ, ಅಪೇಕ್ಷೆ ನಿರೀಕ್ಷೆಗಳಿಲ್ಲದೆ ಮಾಡುತ್ತಿರುತ್ತಾಳೆ. ಈಕೆ ಮಾಡುವ  ಕೆಲಸ ಹತ್ತು ಜನ ಮಾಡುವ ಕೆಲಸ. ಇವಳಿಗೂ ತನ್ನದೇ ಆದ ಆಸೆ ಆಕಾಂಕ್ಷೆಗಳಿರಬಹುದು. ಆದರೆ ಅವೆಲ್ಲವನ್ನು ಮನೆಗೋಸ್ಕರ, ಮನೆ ಮಂದಿಗೋಸ್ಕರ ತ್ಯಾಗ ಮಾಡಿದ ವಳು. ತನಗಾಗಿ ಎಂದೂ ಏನನ್ನೂ ಕೇಳಿದವಳಲ್ಲ. ನಾವು ಗಂಡಸರು ನಮ್ಮ ವೃತ್ತಿಯಿಂದ ನಿವೃತ್ತಿ ಪಡೆಯುತ್ತೇವೆ. ಆದರೆ ಇಂತಹ ಆದರ್ಶ ಗೃಹಿಣಿಗಳಿಗೆ ನಿವೃತ್ತಿ ಎಂಬುದೇ ಇಲ್ಲ. ತನ್ನ ಪತಿ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಜೀವನ ಪರ್ಯಂತ ದುಡಿಯುತ್ತಲೇ ಇರುತ್ತಾಳೆ.
ಈಕೆಯದು ಪ್ರಶ್ನಾತೀತವಾದ, ಪರಿಶುದ್ಧವಾದ ಪರಿಪೂರ್ಣವಾದ ಪ್ರಚಾರ. ಪ್ರತಿಫಲಾಪೇಕ್ಷೆಯಿಲ್ಲದ ಸೇವೆ. ಈಕೆಯೇ ನಮ್ಮಸಂಸಾರದ ಕಣ್ಣು. ಈಕೆ ಒಂದು ಕ್ಷಣ ಮನೆಯಲ್ಲಿ ಇಲ್ಲದಿದ್ದರೆ ಸಡಗರವಿಲ್ಲ; ಸಂಭ್ರಮವಿಲ್ಲ. ಇಂತಹ      ಆದರ್ಶ ಗೃಹಿಣಿಗಳ ಬಗ್ಗೆೆ ಅನುಕಂಪ ಬೇಡ, ಗೌರವವಿರಲಿ, ಪ್ರೀತಿ ಇರಲಿ. ಇಂತಹವರನ್ನು ಪೂಜಿಸ ದಿದ್ದರೂ ಪರವಾಗಿಲ್ಲ, ಶೋಷಣೆ  ಮಾಡಬಾರದು.
ಇವಳಿಗೆ ಬಾಲ್ಯದಲ್ಲಿ ಹೆತ್ತವರು ಯೌವನದಲ್ಲಿ ಗಂಡ ವೃದ್ಧಾಪ್ಯದಲ್ಲಿ ಮಕ್ಕಳು ನೆರವಾಗಬೇಕು. ಇವಳ ನಿಲುವು ಮತ್ತು ಒಲವುಗಳ ಮುಂದೆ ಯಾವ ಡಿಗ್ರಿಯು  ಪದವಿಯೂ ಸರಿಸಮಾನವಲ್ಲ. ‘‘ಒಲವೆಂಬ ಹೊತ್ತಿಗೆಯ ಓದ ಬಯಸುತ ನೀನು, ಬೆಲೆ ಎಷ್ಟೆಂದು ಕೇಳಬಯಸುವೆಯ ಹುಚ್ಚಾ, ಹಗಲಿರುಳು ದುಡಿದರೂ ಹಲವು ಜನುಮ ಕಳೆದರೂ ನೀ ತೆರಲಾರೆ ಬರೇ ಅದರ ಅಂಚೆ ವೆಚ್ಚ’’ ಎಂಬ ಬೇಂದ್ರೆೆಯವರ ನುಡಿ ಇವಳನ್ನೇ ಕುರಿತು ಹೇಳಿದ್ದಾಾಗಿರಬೇಕು. ಇಂತಹ ಪೂರ್ಣಾವತಾರಿ, ಆದರ್ಶ ಗೃಹಿಣಿಗೆ ನಮೋನಮಃ.