ಜ್ಞಾನದ ಬೆಳಕು ಮಹಂತ ಅಲ್ಲಮಪ್ರಭು
ತನ್ನಿಮಿತ್ತ
ಡಾ.ಗುರುರಾಜ ಪೋಶೆಟ್ಟಿ ಹಳ್ಳಿ
ಅಲ್ಲಮ ಜಗ ಕಂಡ ಶ್ರೇಷ್ಠ ಅನುಭಾವಿ. ಅವನ ವಚನಗಳು, ಅನುಭಾವದ ರಸಪಾಕ. ಆಳ, ವಿಸ್ತಾರ, ಎತ್ತರ ಎಲ್ಲದರಲ್ಲೂ ಮೀರುವಿಕೆ ಅಲ್ಲಮನ ವಚನಗಳ ಒಳಭಾವ.
ಸಂಭ್ರಮದ ಯುಗಾದಿ ವಸಂತನಾಗಮನದ ಶುಭದಿನದಂದೇ ಅಲ್ಲಮ ಉದಯಿಸಿದ್ದು ಒಂದು ಯೋಗಾಯೋಗ. ಅತ್ಯಂತ ಸಮೀಪದ ನಮ್ಮ ಪೂರ್ವಜರ ಜನ್ಮ ದಿವಸ ಗಳೇ ನಮಗೆ ತಿಳಿದಿರುವುದಿಲ್ಲ ಆದರೆ ಮಹಾತ್ಮರ, ಸಾಧಕರ ಜನ್ಮ ದಿನಗಳು ನಮಗೆ ನೆನಪಿಡುವಂತೆ ಮಾಡಿರುವುದು ಅವರ ಘನ ವ್ಯಕ್ತಿತ್ವ ಮತ್ತು ಸಾಧನೆ ಗಳೇ ಕಾರಣ.
ಅಂತ ಹಲವಾರು ಸಾಧಕರ ಜಯಂತಿಯನ್ನು ಆಚರಿಸುವ ಮೂಲಕ ಮತ್ತೇ ಮತ್ತೇ ನಾವು ಅವರ ಸ್ಮರಣೆಯ ಮೂಲಕ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡುತ್ತಿರುತ್ತೇವೆ. ಅಲ್ಲಮ… ಹೆಸರು ಕೇಳಿದಾಕ್ಷಣ ನೆನಪಾಗುವುದುಹನ್ನೆರಡನೇ ಶತಮಾನ. ಶೂನ್ಯಸಿಂಹಾಸನಾಧೀಶನಾಗಿ, ಬಸವಾದಿ ಪ್ರಥಮರ ಮಾನಸಿಕ ಗುರುವಾಗಿ, ಅಪ್ಪಟ ಜಂಗಮನಾಗಿ, ಸಮಕಾಲೀನ ಶರಣರನ್ನೆಲ್ಲ ಸಮಾನ ಪ್ರೀತಿ ಗೌರವಗಳಿಂದ ಕಂಡವನಾಗಿ, ಮೃದು ಹೃದಯದ ಕಠಿಣ ನಿಲುವಿನವನಾಗಿ, ವ್ಯೋಮ ಮೂರ್ತಿಯಾಗಿ ನಭೋಮಂಡಲವನ್ನು ಬೆಳಗಿದ ಅಲ್ಲಮ ಪ್ರಭು ದೇವನೆಂದೇ ಕರೆಸಿಕೊಂಡವನು, ಕರೆಸಿಕೊಳ್ಳುತ್ತಿರುವವನು.
ಇಂತಹ ಮಹಾಕಾಯ ಅಲ್ಲಮನನ್ನು ನಮ್ಮವನನ್ನಾಗಿ ಬಂಧಿಸುವುದೆಂದರೆ ಗಾಳಿ, ಬೆಳಕು, ನೀರು, ಶಬ್ಧವನ್ನು ಬಂಧಿಸಿದಂತೆ, ತನ್ನನ್ನು ತಾನು ಸಾಧಿಸಿಕೊಂಡು ತದನಂತರ ಮುಕ್ತಾಯಕ್ಕ, ಗೊಗ್ಗಯ್ಯ ಗೋರಕ್ಷ, ಸಿದ್ಧರಾಮ, ಕಲ್ಯಾಣಕ್ಕೆ ಒಂದು ನೆಲನಿಂತನಂತರ ಬಸವಣ್ಣ, ಮಹಾದೇವಿಯಕ್ಕ ಮುಂತಾದವರಿಗೆ ನಿಜದ ಅರಿವನ್ನು ಉಂಟುಮಾಡಿದವ. ನಿದ್ದೆಹೋಗಿರುವ ಚೈತನ್ಯದ ಆತ್ಮಶಿಶುವನ್ನು ಎಚ್ಚರಿಸಿ ಎಲ್ಲರಿಗೂ  ಪರಿಚಯಿಸಿರುವವ. ಕಂಡದ್ದರಿಂದಾಚೆಗಿರುವ ಕಾಣ ದ್ದನ್ನು ತೋರಿಗೊಟ್ಟವ. ಒಳನೋಟಗಳ ಅಪ್ರತಿಮ ಅನುಭಾವಿ ಬೆಡಗಿನ ವಚನಗಳ ರತ್ನಾಕರ.
ಅನುಭವ ಮಂಟಪದ ಶೂನ್ಯ ಸಿಂಹಾಸನಾಧೀಶನಾದ ಅಲ್ಲಮ ಅಷ್ಟಾಂಗ ಯೋಗೀಶ್ವರ. ದೇಹೇಂ ದ್ರಿಯ ಮನಃಪ್ರಾಣಾ ಹರಿಕಾರಾದಿ ಗುಣಧರ್ಮ ಕರ್ಮ ನಿರ್ಲೇಪನ, ಗುರು-ಲಿಂಗ-ಜಂಗಮ-ಪ್ರಸಾ ದ-ಪಾದೋದಕಾದಿ ಪಂಚಾಚಾರ ಪ್ರತಿಷ್ಠಾಪನಾ ಚಾರ್ಯ, ಬಸವ-ಚೆನ್ನಬಸವ ಪ್ರಾಣನಾಯಕ, ವೀರ ಶಿವಾಚಾರ ಪ್ರಥಮ ನಾಯಕ, ಮರ್ತ್ಯಲೋಕಪಾವನ ಕಾರಣಾವತಾರ, ಅನುಮಿಷನ ಶಿಷ್ಯ, ಗುಹೇಶ್ವರ ನಾಮಾಮೃತ ಸ್ವೀಕಾರ ಸಂತುಷ್ಟ.
ಸಕಲ ಜಗದಾ ಚಾರ್ಯ ಎಂದೆಲ್ಲ ಕರೆಸಿಕೊಂಡಿದ್ದಾನೆ. ಅನುಭವ ಮಂಟಪ ಎಂಬುದು ಆತ್ಮಜಿಜ್ಞಾಸುಗಳ ಆಧ್ಯಾತ್ಮ ಅನುಭವ ಸಂಪತ್ತಾಗಿತ್ತು. ಈ ಅನುಭವ ಮಂಟಪದಲ್ಲಿ ಸೇರಿದ್ದ ಪ್ರತಿಯೊಬ್ಬರೂ ಅನುಭವ ಮೂರ್ತಿಯಾದರು. ಈ ಅನುಭವ ಎಂಬುದು ಮನದ ಮೈಲಿಗೆ ತೊಳೆಯುವ ಪವಿತ್ರ ತೀರ್ಥ, ಆತ್ಮಾನು ಸಂಧಾನದ ಜ್ಞಾನ, ಪರಮಾತ್ಮ ಸಾಕ್ಷಾತ್ಕಾರದ ಅನುಪಮ ಪ್ರಭೆ. ಅಲ್ಲಮನ ಬದುಕೇ ಅನುಭಾವದ ಬದುಕು, ಅನುಭವಿಸಿದ ಬೆಳಕು.
ಅಲ್ಲಮನ ಆತ್ಮದ ಕುಲುಮೆಯಲ್ಲಿ ವಿಶ್ವಧರ್ಮದ ಅಭಿಮತ ಬಂತು. ಜಗತ್ತಿನಲ್ಲಿ ಧರ್ಮ, ಜಾತಿ, ಮತ, ಕುಲ, ಆಸ್ತಿ, ಅಂತಸ್ತು, ಲಿಂಗಗಳ ಹೆಸರಿನಲ್ಲಿ ನಡೆಯುತ್ತಿದ್ದ ಹೃದಯವಿದ್ರಾವಕ ದೃಶ್ಯವನ್ನೂ ಕಂಡು ಅಲ್ಲಮನು ಬೆಂಕಿಯಾದನು. ಜ್ಞಾನಿಗಳೆನಿಸಿ ಕೊಂಡವರ ಪಾದಕ್ಕೆ ಆತ್ಮಾನುಭವವೆನ್ನುವ ಕೆಂಡದ ಕೊಂಡವಾದನು. ದಲಿತರು ಅಥವಾ ಶೋಷಿತರೆನಿಸಿಕೊಂಡವರ ಕೈಗೆ ಉರಿಯುವ ಪಂಜಾದನು.
ಅಲ್ಲಮನಿಗೆ ಕೀಳರಿಮೆಯ ಭಾವವು ಲವಲೇಶವೂ ಇರಲಿಲ್ಲ. ಆತನಿಗೆ ತನ್ನ ಬಗ್ಗೆ, ತನ್ನ ಖಚಿತ ನಿಲುವಿನ ಬಗ್ಗೆ ಅಪಾರವಾದ ನಂಬಿಕೆಯಿತ್ತು. ಹಾಗೆಯೇ ಆತ ತನ್ನ ತನ್ನ ಸಹಜೀವಿಗಳಲ್ಲೂ ಅಲ್ಪತನವನ್ನು ಕಾಣಬಯಸುತ್ತಿರಲಿಲ್ಲ. ಖಚಿತ ನಿಲುವಿನ ಮೂರ್ತರೂಪನಾದ ಆತನ ಔನ್ನತ್ಯ ಅಳ್ಳೆದೆಯವರ ಪಾಲಿನ ಪರುಷ ಮಣಿಯಾಗಿತ್ತು. ಅಲ್ಲಮನ ವಚನಗಳಲ್ಲಿ ತಾತ್ವಿಕ ಚಿಂತನೆ ಹಾಗೂ ವಿಶಾಲ ಪಂಥವನ್ನು ಸ್ಪಷ್ಟವಾಗಿ ಕಾಣಬಹುದು.
ಮತೀಯವಾದ ಭ್ರಮೆ, ಭ್ರಾಂತಿ, ಪರಮತೀಯವಾದ ಕ್ರೋಧಗಳಿಗೆ ಅಲ್ಲಮನ ವಚನಗಳಲ್ಲಿ ಕಿಂಚಿತ್ತೂ ಠಾವಿಲ್ಲ. ಅಲ್ಲಮನ ಆಲೋಚನೆಯೆಲ್ಲ ಮೂಲಭೂತ ವಾದ ಸುಧಾರಣೆಯತ್ತ ಕೇಂದ್ರೀಕೃತವಾಗಿತ್ತು. ಮಾನವರು ಯಾವ ಜಾತಿ, ಧರ್ಮ, ಕರ್ಮ, ಸ್ಥಾನ, ಸ್ತರದವನಾಗಿರಲಿ ಆತ ಎಲ್ಲದರಲ್ಲಿಯೂ ತನ್ನಷ್ಟೇ ಅಲ್ಲ, ಶಿವನನ್ನೂ ಕಾಣುವ ಭಾವವನ್ನೂ ತೊರೆಯದೆ, ಈ ಅಖಂಡ ಸೃಷ್ಟಿಗೆ ದೊರೆಯಾಗಿ ಮೆರೆಯಬೇಕೆಂಬುದೇ ಅಲ್ಲಮನ ಅಂತರಂಗದ ಬಯಕೆಯಾಗಿತ್ತು.
ಆದ್ದರಿಂದಲೇ ಜಾತೀಯತೆ, ಪ್ರಾಂತೀಯತೆಯಾದಿ ಪ್ರತ್ಯೇಕತೆಯಿಂದ ಅಲ್ಲಮ ದೂರವಾಗಿದ್ದನು. ‘ಅನಾದಿಯ ಮಗನು ಆದಿ, ಆದಿಯ ಮಗನತೀತ, ಅತೀತನ ಮಗನು ಆಕಾಶ, ಆಕಾಶನ ಮಗನು ವಾಯು, ವಾಯುವಿನ ಮಗನಗ್ನಿ, ಅಗ್ನಿಯ ಮಗನುಅಪ್ಪು, ಅಪ್ಪುವಿನ ಮಗನು ಪೃತ್ವಿ, ಪೃತ್ವಿಯಿಂದ ಸಕಲ ಜೀವರೆಲ್ಲರು ಉದ್ಬವಿಸಿದರು ಗುಹೇಶ್ವರ’. ಈ ವಚನದಲ್ಲಿ ಅಲ್ಲಮರ ವೈಜ್ಞಾನಿಕ ದೃಷ್ಠಿಕೋನವನ್ನು ಕಾಣಬಹುದಾಗಿದೆ. ತೀರಾ ಇತ್ತೀಚಿಗೆ ಹತ್ತೊಂಬತ್ತನೇ ಶತಮಾನದಲ್ಲಿ ನಮ್ಮ ವಿಜ್ಞಾನಿಗಳು ಹೇಳುವಂತೆ, ಈ ಬ್ರಹ್ಮಾಂಡದ ಉಗಮವು ಒಂದು ಬಿಂದುವಿನ ಮಹಾ ಸ್ಪೋಟದಿಂದ ಅಸಂಖ್ಯಾತ ಕಣಗಳಾಗಿ ಅವು ಕೂಡುತ್ತಾಸಂಗಮವಾಗಿ ನಕ್ಷತ್ರಗಳಾಗಿ, ಆ ನಕ್ಷತ್ರಗಳ ಸುತ್ತ ತಿರುಗುವ ಕಣಗಳು ಕೂಡುತ್ತಾ ಕೂಡುತ್ತಾ ಗ್ರಹಗಳಾದವು.
ಅವುಗಳ ಸುತ್ತಲಿನ ಕಣಗಳು ಉಪಗ್ರಹವಾಗಿ ಬ್ರಹ್ಮಾಂಡ ಸೃಷ್ಟಿಯಾಗಿರುವ ಬಗ್ಗೆ ಹೇಳುತ್ತಾರೆ. ಇದೇ ವಿಚಾರವನ್ನೇ ಅಲ್ಲಮರು ತಮ್ಮದೇ ಆದ ವೈಜ್ಞಾನಿಕ ಚಿಂತನೆಯ ಮೂಲಕ ಹನ್ನೆರಡನೇ ಶತಮಾನದಲ್ಲಿಯೇ ಈ ವಚನದಲ್ಲಿ ಹೇಳಿರುವುದನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಮಹಾಸ್ಫೋಟದ ಮೊದಲಿನ ಬ್ರಹ್ಮಾಂಡ ಇಲ್ಲದ ಸ್ಥಿತಿಗೆ ಅಲ್ಲಮರು ಅನಾದಿ ಎಂದುಕರೆದರು, ಸ್ಪೋಟದ ನಂತರ ಆದಿ ಸ್ಥಿತಿ ತಲುಪಿ ನಂತರ ಸ್ಫೋಟದ ಕಣಗಳೆಲ್ಲಾ ಉದ್ಭವವಾದಾಗ ಅತೀತ ಸೃಷ್ಟಿಯಾಗಿ ಅತೀತದ ನಂತರ ಆಕಾಶ ಗೋಚರಿಸಿತು.
ಈ ಆಕಾಶದಲ್ಲಿ ವಾಯು ಸೃಷ್ಟಿಯಾಗಿ ಅದರ ಸಂಸರ್ಗ ದಲ್ಲಿ ಅಗ್ನಿಯಾಯಿತು. ಇದರಲ್ಲಿ ಜಲಜನಕವಿದ್ದು ಇವೇ ಮುಂದೆ ಸೂರ್ಯನಂತ ನಕ್ಷತ್ರಗಳಾಗಿ ನಂತರ ಭೂಮಿಯಂತ ಗ್ರಹಗಳಾಗಿ, ನಂತರದಲ್ಲಿ ಭೂಮಿ ಯಲ್ಲಿ ಜೀವಜಾಲ ಸೃಷ್ಟಿಯಾದ ಬಗ್ಗೆ ಅವರ ಚಿಂತನೆಗಳನ್ನು ನಾವಿಲ್ಲಿ ಕಾಣಬಹುದಾಗಿದೆ. ಪಂಚ ಮಹಾಭೂತಗಳನ್ನು ಬಯಲು ಒಳಗೊಂಡಿದ್ದು ಇದೇ ಬಯಲಿಗೆ ಅಲ್ಲಮರು ಶೂನ್ಯವೆಂದರು, ಶೂನ್ಯದಲ್ಲಿ ಇಡೀ ವಿಶ್ವವೇ ಇದ್ದು ಇದರಿಂದಲೇ ಎಲ್ಲವೂ ಆಗಿರುವ ಬಗ್ಗೆ ಇಂದಿನ ವಿಜ್ಞಾನವೂ ಹೇಳುತ್ತದೆ.
ವಿಶ್ವದಲ್ಲಿ ಎಲ್ಲವೂ ಒಂದರಿಂದ ಇನ್ನೊಂದಾಗಿದೆ, ಒಂದರ ಮೇಲೊಂದು ಅವಲಂಬಿಸಿವೆ ಈ ಸಂಬಂಧ ಸಕಲ ಜೀವಾತ್ಮರ ಮಧ್ಯಯೂ ಇರುತ್ತದೆ. ಇದೇ ಶರಣರ ಅದ್ವೈತ ತತ್ವವೆಂಬುದು ಅಲ್ಲಮರ ಸ್ಪಷ್ಟನೆ.
ಮಾನವ ಘನತೆಯನ್ನು ಎತ್ತಿ ಹಿಡಿದ ಧೀಮಂತ:ಮಧ್ಯಕಾಲೀನ ಚರಿತ್ರೆಯಲ್ಲಿ ಕರ್ನಾಟಕದ ಹನ್ನೆರಡನೇ ಶತಮಾನ ಅವಿಸ್ಮರಣೀಯವಾದುದು. ಜನಮಾನಸದಲ್ಲಿ ಬೇರೂರಿದ್ದ ಎಲ್ಲ ಮೌಢ್ಯ ಕತ್ತೆಲೆಯನ್ನು ತೊಲಗಿಸಿ, ಮಾನವ ಘನತೆಯನ್ನು ಎತ್ತಿ ಹಿಡಿಯುವ ಮೌಲ್ಯಗಳಿಗೆ ಚಾಲನೆ ತುಂಬಿ ಅವು ಚಲಿಸುವಂತೆ ಮಾಡಿದ ಶರಣರು ಹುಟ್ಟಿದ ಕಾಲವದು. ಜಾತಿ-ವರ್ಗ. ಮೇಲು-ಕೀಳು, ಮಹಿಳಾ-ದಲಿತ ಶೋಷಣೆಗಳು ಸುಂದರ ಮಾನವ ಬದುಕನ್ನು ಆಪೋಶನ ತೆಗೆದುಕೊಳ್ಳುತ್ತಿರುವಾಗ ಬ್ರಾಹ್ಮಣ ಶ್ರೇಷ್ಠ.
ರಾಜನೇ ಪ್ರತ್ಯಕ್ಷ ದೇವತೆ ಉಳಿದವರು ಕನಿಷ್ಠರು ಎಂಬ ಭೇದ ದಟ್ಟವಾಗಿ ಸ್ಪಷ್ಟವಾಗಿ ಕಾಣಿಸಿಕೊಂಡ ಕಾಲವದು. ಅದೊಂದು ರೀತಿ ಕತ್ತಲಿನ ಕಾಲ. ಈ ಕತ್ತಲಿನ ಗರ್ಭದೊಳಗಿಂದ ಹುಟ್ಟಿದ ಬೆಳಕೇ ಬಸವಣ್ಣ. ಇಡೀ ಕತ್ತಲನ್ನು ಬೆಳಕಾಗಿ ಪರಿವರ್ತಿಸಲು ನಡೆಸಿದ ಹೋರಾಟವೇ ಶರಣಕ್ರಾಂತಿ. ಆ ಕಾಲದಲ್ಲಿ ಸರ್ವೇಸಾಮಾನ್ಯ ಮನುಷ್ಯನಿ ತನ್ನ ಬದುಕನ್ನು ರೂಪಿಸಿಕೊಳ್ಳಲು ಯಾವುದೇ ಅವಕಾಶವಿರಲಿಲ್ಲ.
ಧರ್ಮ ಕಲುಷಿತವಾಗಿತ್ತು. ಅಧರ್ಮ ಅದರ ನಾಯಕನಾಗಿತ್ತು. ಧರ್ಮ ತನ್ನ ಮೂಲಾರ್ಥವನ್ನು ಕಳೆದುಕೊಂಡು ವಿಕಾರವಾಗಿತ್ತು. ಅದು ತನ್ನ ಪೂರ್ವಿಕರ ಸಾಮರಸ್ಯ ತತ್ತ್ವವನ್ನು ನುಂಗಿ ನೀರು ಕುಡಿದಿತ್ತು. ಆಧ್ಯಾತ್ಮಿಕ ಅನ್ವೇಷಣೆ ಸಂಪೂರ್ಣನಿಂತುಹೋಗಿತ್ತು. ರಾಜರೆಲ್ಲ ತಮ್ಮ ಶಕ್ತಿ ವರ್ಧನೆಗಾಗಿ ಎಂಥ ಹೇಸಿಗೆ ಕೆಲಸಕ್ಕೂ ಸಿದ್ಧರಾಗಿದ್ದರು. ದೇವಸ್ಥಾನ ಗಳು ತಲೆಯೆತ್ತಿ ಶ್ರೀಸಾಮಾನ್ಯರ ಬದುಕಿನಲ್ಲಿ ಆಟವಾಡುತ್ತಿದ್ದವು. ಜನಸಾಮಾನ್ಯರಿಗೆ ಅಲ್ಲಿ ಪ್ರವೇಶವಿರಲಿಲ್ಲ.
ಇದನ್ನೆಲ್ಲ ಪ್ರತಿಭಟಿಸಿ ಕಾಯಕ ತತ್ತ್ವಕ್ಕೆ ಹೊಸ ಆಯಾಮ ದೊರಕಿಸಿಕೊಟ್ಟವರು ಬಸವಣ್ಣನವರು. ಅಂತರಂಗದ ಬೆಳಕಿನ ಸಾಕ್ಷಾತ್ಕಾರ ವನ್ನು ನಡೆನುಡಿ ಸಿದ್ಧಾಂತದ ಮೂಲಕ ತೋರಿಗೊಟ್ಟವರೂ ಅವರೇ. ಮನುಷ್ಯನ ನರನಾಡಿಯಾಗಿ ಹೋಗಿದ್ದ ಕರ್ಮ, ಜಾತಿ, ಲಿಂಗ, ಬಣ್ಣ, ಮೋಕ್ಷ… ಇತ್ಯಾದಿಗಳ ಸೀಮಿತ ಅರ್ಥವನ್ನು ಧಿಕ್ಕರಿಸಿ, ಸಕಲ ಜೀವಾತ್ಮರಿಗೂ ಲೇಸಬಯಸುವ ಪ್ರಕ್ರಿಯೆಯಲ್ಲಿ ಅಣ್ಣನಿಗೆ ಬೆಂಗಾವಲಾಗಿ ನಿಂತವರು ಅಲ್ಲಮ, ಮತ್ತವನೊಡನೆ ಸಾವಿರಾರು ಶರಣ ಚೈತನ್ಯಳು.
ಆದರೆ ವೀರಶೈವದ ಪರಿಭಾಷೆಯನ್ನೇ ಬಳಸಿಕೊಂಡು, ವೀರಶೈವದ ಮತೀಯತೆಯನ್ನು ಕೊಚ್ಚಿ ಸವರುವ ಸ್ತುತ್ಯಕಾರ್ಯದಲ್ಲಿ ಅಲ್ಲಮನಷ್ಟು ಆವೇಶ, ಅಭಿನಿವೇಶದಿಂದ ಬಸವಣ್ಣನಿಂದಲೂ ಶ್ರಮಿಸಲಾಗಲಿಲ್ಲವೆಂಬುದು ವಿಚಿತ್ರವಾದರೂ ಸತ್ಯವಾದು ದಾಗಿದೆ. ಅಲ್ಲಮಪ್ರಭು ವಚನಚಳವಳಿಯ ಬಹುಮುಖ್ಯ ವ್ಯಕ್ತಿತ್ವ. ಅಣ್ಣನ ಆತ್ಮಲಿಂಗವೇ ಅಲ್ಲಮ. ಪ್ರಭು ಅಲ್ಲಮರ ಮಾತು ಸಟಿಕದ ಸಲಾಕೆ. ಕೆಳವರ್ಗದಿಂದ ಮೇಲೆದ್ದುಬಂದ ಅಪ್ರತಿಮ ಪ್ರತಿಭಾವಂತ ಅಲ್ಲಮ. ಬಹುದೊಡ್ಡ ಸಾಧಕ. ಸಿದ್ಧರಾಮ, ಗೊಗ್ಗಯ್ಯ, ಗೊರಕ್ಷ ಮೊದಲಾದ ಅನೇಕರನ್ನು ಸರಿದಾರಿಗೆ ತಂದು ಅತ್ಯುತ್ತಮ ಮಾರ್ಗದರ್ಶಿ.
ಪಾರಂಪರಿಕ ಯೌಗಿಕ ನಿಲುವಿಗೆ ಹೊಸ ಅರ್ಥತುಂಬಿ ಕೊಟ್ಟವನಿವನು. ಸುಂದರ ಬದುಕಿಗೆ ತಾತ್ವಿಕ ತಳಹದಿ ಹಾಕಿಕೊಟ್ಟವನು. ಚಾಮರಸನ ಪ್ರಕಾರ ಅಲ್ಲಮನ ಹೆತ್ತವರು ನಿರಂಹಕಾರ ಮತ್ತು ಸುಜ್ಞಾನದೇವಿ. ಬಳ್ಳಿಗಾವೆಯಲ್ಲಿ ಜನಿಸಿದವನು. ಮದ್ದಲೆ ನುಡಿಸುವ ನಿರ್ಮಾಯದ ಅನುಭವವಾಯಿತು. ಶಿವತತ್ತ್ವಜ್ಞಾನವುಂಟಾಯಿತು. ಸುಖವನ್ನು ಮರೆತರೆ ಸಿದ್ಧಿ ಸಾಧ್ಯ ಎಂದರಿವಾಯಿತು. ಲೋಕ ಸಂಚಾರಕ್ಕೆ ಮುಂದಾದ.
‘ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ ಆ ಕಲ್ಲು ಕಲ್ಲ ಮೇಲೆ ಕಡೆದಡೆ, ದೇವರೆತ್ತ ಹೋದರೋ? ಲಿಂಗ ಪ್ರತಿಷ್ಠೆಯ ಮಾಡಿದವರಿಗೆ ನಾಯಕ ನರಕ ಗುಹೇಶ್ವರಾ’. ಮಾನವ ಜನಾಂಗದಲ್ಲಿ ಇಷ್ಟಲಿಂಗ ವೆಂಬುದು ಬೇದಗಳನ್ನೆಲ್ಲಳಿದು ಸಕಲ ಜೀವಿಗಳಿಗೆ ಇಷ್ಟಾರ್ಥವನ್ನು ಕೊಡುವ ಅರಿವಿನ ಕುರುಹು ಆಗಿದ್ದು  ಇಲ್ಲಿ ಜೀವಾತ್ಮ, ಪರಮಾತ್ಮರ ಮಧ್ಯ ಅದ್ವೈತ ಸಾಽಸುವಮೂಲಕ ಪೂಜಕ ತನ್ನೊಳಗಿನ ದೇವರ ಜತೆ ಒಂದಾಗುವ ಕ್ರಮವಿದೆ.
ದೇಹವೆಂಬ ಗುಹೆಯಲ್ಲಿ ಗುಹೇಶ್ವರನಾದ ಪರಮಾತ್ಮ ಹಾಗೂ ಜೀವಾತ್ಮ ಒಂದಾಗುವ ವ್ಯಕ್ತಿಯೂ ವ್ಯಷ್ಟಿ ಪ್ರಜ್ಞೆಯಿಂದ ಹೊರಬಂದು ಸಮಷ್ಟಿ ಪ್ರಜ್ಞೆಯಲ್ಲಿ ಒಂದಾಗುವುದನ್ನು ಗುರುತಿಸಲಾಗಿದೆ. ಕಲ್ಲು ದೇವರಲ್ಲವಾದ ಕಾರಣ ಸ್ಥಾವರ ಲಿಂಗದಿಂದ ಹೀಗೆ ವಿಶ್ವಮಾನವನಾಗುವುದು ಅಸಾಧ್ಯ ವಾಗಿದೆ. ನಿಜವಾದ ದೇವರು ಮನುಷ್ಯನೊಳಗೇ ಇರುವ ಕಾರಣ ಮನುಷ್ಯ ಮನುಷ್ಯರ ಮಧ್ಯ ಗೋಡೆ ಗಳನ್ನು ಕಟ್ಟಿಕೊಳ್ಳುವ ಬದಲಿಗೆ ಸೇತುವೆಯಾದರೆ ವಿಶ್ವಮಾನವನಾಗುತ್ತಾನೆ. ಇಲ್ಲಿ ಶಿವ ಎಂದರೆ ಮಂಗಳಕರ, ಯೋಗ ಎಂದರೆ ಕೂಡುವುದು ಇದೇ ಶಿವಯೋಗವಾಗಿದ್ದು, ಇದು ಇಷ್ಟಲಿಂಗವನ್ನು ಪೂಜಿಸಿ ಕೊಳ್ಳುವ ಮೂಲಕ ಸಾಧ್ಯವಾಗಿರು ವಾಗ ಸೃಷ್ಟಿಗೆ ಹುಟ್ಟಿದ ಕಲ್ಲಿನ ಮೇಲೆ ಕಲ್ಲನ್ನಿಟ್ಟು ಅದಕ್ಕೆ ದೇವರೆಂದು ಪೂಜಿಸಿದರೆ ನಿಜವಾಗಿ ನಾವು ಸಂಧಿಸಬೇಕಾದದೇವರೆಲ್ಲಿ? ಎಂದು ಪ್ರಶ್ನಿಸಿದ್ದಾರೆ.
‘ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ ಅವು ಜಗಕ್ಕಿಕ್ಕಿದ ವಿಧಿ, ನಿನ್ನ ಒಡವೆ ಎಂಬುದು ಜ್ಞಾನರತ್ನ, ಅಂತಿಪ್ಪ ದಿವ್ಯರತ್ನವ ಕೆಡಗುಡದೆ ಆ ರತ್ನವ ನೀನು ಅಲಂಕರಿಸಿದೆಯಾದಡೆ, ನಮ್ಮ ಗುಹೇಶ್ವರಲಿಂಗದಲ್ಲಿ ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೆ’. ಅಲ್ಲಮರು ಇಲ್ಲಿ ಲೌಕಿಕದ ಕುರಿತು ಚಿಂತಿಸಿದ್ದಾರೆ, ಮನುಷ್ಯ ಭೂಮಿ, ಬಂಗಾರ, ಕಾಮನೆ ಗಳ ಬೆನ್ನು ಹತ್ತಿ ಹೋದರೆ ಆತನಿಗೆ ವಿಷಾದ, ದುಃಖ ಬೆನ್ನಿಗೆ ಅಂಟಿಕೊಂಡೇ ಬರುತ್ತವೆ.
ಎಲ್ಲಾ ವಿಧದ ಭೌತಿಕ ಸುಖಗಳನ್ನು ಮೀರಿದ ಪರಮಾನಂದವನ್ನು ಶಿವಯೋಗದಲ್ಲಿ ಹೊಂದುತ್ತಾರೆ ಇದುವೇ ಲಿಂಗಾಂಗಸಾಮರಸ್ಯ. ಭೌತಿಕ ವಸ್ತುಗಳು ನಮ್ಮೊಂದಿಗಿದ್ದರೂ ಅವು ನಮ್ಮವಲ್ಲ. ನಮ್ಮವೆಂಬ ಭ್ರಮೆಯಲ್ಲಿರುತ್ತೇವೆ. ಈ ಸತ್ಯ ಅರಿತರೆ ಅದೇ ಜ್ಞಾನ ರತ್ನವಾಗಿದೆ ಎನ್ನುವುದು ಅಲ್ಲಮನ ಲೌಕಿಕದ ಬಗೆಗಿನ ಅಂತರಂಗದ ಬಯಲಾಗಿದೆ. ಹಿಂದೆಯೆಲ್ಲಾ ವಸ್ತುಗಳನ್ನುಪಯೋಗಿಸಿ ವ್ಯಕ್ತಿಗಳನ್ನು ಪ್ರೀತಿಸುತ್ತಿದ್ದರು ಆದರೆ ಇಂದು ವ್ಯಕ್ತಿಗಳನ್ನುಪಯೋಗಿಸಿಕೊಂಡು ವಸ್ತುಗಳನ್ನು ಪ್ರೀತಿಸುವ ಮನಸ್ಸುಗಳೇ ಎಲ್ಲೆಡೆ ತುಂಬಿವೆ.