ಅನಿರ್ದಿಷ್ಠಾವಧಿ ಮುಷ್ಕರದ ಸಾಮಂತರು !
ಶಶಾಂಕಣ
ಶಶಿಧರ ಹಾಲಾಡಿ
ಮುಷ್ಕರ, ಹರತಾಳಗಳಿಂದ ಏನಾದರೂ ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷಿಸಬಹುದೆ? ಈ ಪ್ರಶ್ನೆಗೆ ಉತ್ತರ ‘ಹೌದು’. ದಬಾವಣೆಗೆ, ಶೋಷಣೆಗೆ ಒಳಗಾದಾಗ, ಶೋಷಿತರು ಸಂಘಟಿತರಾಗಿ, ಮುಷ್ಕರ ಕೈಗೊಂಡು ನ್ಯಾಯಯುತವಾದ ಬೇಡಿಕೆಗಳನ್ನು ಮುಂದಿಟ್ಟು, ಸೂಕ್ತ ಪರಿಹಾರ ಪಡೆದುಕೊಂಡ ಹಲವು ಉದಾಹರಣೆಗಳಿವೆ.
ಅಂತಹ ಮುಷ್ಕರ ನಡೆಸುವಾಗ, ಕಾರ್ಮಿಕರೂ ಬದುಕಬೇಕು, ಮಾಲಿಕರೂ ಉಳಿಯಬೇಕು ಎಂಬ ನೀತಿಯನ್ನು ಪಾಲಿಸಲಾ ದೀತು. ನ್ಯಾಯಕ್ಕಾಗಿ ಹೋರಾಟ ನಡೆಸುವುದು, ಮುಷ್ಕರ ನಡೆಸುವುದು ನಾಗರಿಕರ ಹಕ್ಕು. ಆದರೆ, ಅನಿರ್ದಿಷ್ಟ ಕಾಲ ಮುಷ್ಕರ ದಿಂದ ಲಾಭ ಉಂಟೆ? ಈ ಪ್ರಶ್ನೆಗೆ ಉತ್ತರ ಕಷ್ಟ. ನ್ಯಾಯಯುತವೋ ಅಥವಾ ಅದರ ವ್ಯಾಪ್ತಿಗೆ ಮೀರಿದ ಬೇಡಿಕೆಗಳನ್ನಿಟ್ಟು ಕೊಂಡು ‘ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ, ಅನಿರ್ದಿಷ್ಟ ಕಾಲದ ತನಕ ಮುಷ್ಕರ ಮಾಡುತ್ತೇವೆ’ ಎಂದು ಸಾರಾಸಗಟು ಮುಷ್ಕರ ನಡೆಸುತ್ತಾ ಕೂರುವುದು ಎಷ್ಟು ಸರಿ? ಈಗಿನ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಸಾರಿಗೆನೌಕರರ ‘ಅನಿರ್ದಿಷ್ಟ ಕಾಲದ’ ಮುಷ್ಕರವು ಕಳೆದ ಕೆಲವು ದಿನಗಳಿಂದ ನಡೆಯುತ್ತಲೇ ಇದೆ.
ಕಳೆದ ಒಂದು ವರ್ಷದಿಂದ ಕಾಡುತ್ತಿರುವ ಕರೋನಾದಿಂದಾಗಿ, ದೇಶದ ಮತ್ತು ರಾಜ್ಯದ ಆರ್ಥಿಕ ಸ್ಥಿತಿಯೇ ನಲುಗಿದೆ. 2020ರಏಪ್ರಿಲ್‌ನ ಲಾಕ್‌ಡೌನ್‌ನಿಂದಾಗಿ, ಸಾರಿಗೆ ಉದ್ಯಮ ಸಹ ಬಹಳಷ್ಟು ನಷ್ಟ ಅನುಭವಿಸಿದೆ. ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಸಾರಿಗೆ ನೌಕರರು ಹೇಳಿದರೆ ತಾತ್ವಿಕವಾಗಿ ಒಪ್ಪಬಹುದು. ಆದರೆ, ಈಗ ಒಂದಷ್ಟು ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಅವುಗಳಲ್ಲಿ ಬಹುಪಾಲು ಬೇಡಿಕೆಗಳಿಗೆ ಸರಕಾರ ಒಪ್ಪಿದ್ದರೂ ಸಹ, ಅನಿರ್ದಿಷ್ಟ ಕಾಲದ ತನಕ ಮುಷ್ಕರ ಮುಂದುವರಿಸುತ್ತೇವೆಎನ್ನುವುದು ಎಷ್ಟು ಸರಿ? ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸಾರಿಗೆ ನಿಗಮದ ಬಸ್ ಬಿಟ್ಟರೆ, ಬೇರೆ ಸಾರ್ವಜನಿಕ ಸಾರಿಗೆಯೇ ಇಲ್ಲ!
ವರ್ಷದ ಅತಿ ದೊಡ್ಡ ಹಬ್ಬ ಎನಿಸಿದ ಯುಗಾದಿಯ ಸಮಯದಲ್ಲಿ ಗ್ರಾಮೀಣರಿಗೆ ಬಸ್ ಸೌಲಭ್ಯವನ್ನು ವಂಚಿತರನ್ನಾಗಿಸಿದ್ದು ಎಷ್ಟು ಸರಿ? ಹಳ್ಳಿ ಹಳ್ಳಿಯ ಬಸ್ ಸೌಕರ್ಯವನ್ನು ಹಲವು ದಿನಗಳ ಕಾಲ ಇಲ್ಲದಂತೆ ಮಾಡಿದ ಈ ಅನಿರ್ದಿಷ್ಟ ಕಾಲದ ಮುಷ್ಕರಏನನ್ನು ಸಾಧಿಸಲು ಹೊರಟಿದೆ? ಕಷ್ಟವೋ, ಸುಖವೋ, ಲಾಭವೋ, ನಷ್ಟವೋ, ಕಳೆದ ಕೆಲವು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಸಾರಿಗೆ ನಿಗಮವನ್ನು ಹಲವು ದಿನಗಳ ಕಾಲ ಸ್ತಬ್ಧಗೊಳಿಸಿರುವ ಈ ಅಭಿಯಾನವು, ದೊಡ್ಡ ಒಂದು ಹುನ್ನಾರದ ಭಾಗವಾಗಿದೆಯೆ? ಈಗ ನಡೆಯುತ್ತಿರುವ ಸಾರಿಗೆ ಮುಷ್ಕರ ಇಂಥ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮುಷ್ಕರವು ಯಾವಾಗಲೂ ಬಾರ್ಗೈನಿಂಗ್ ಟೂಲ್ ಅಂದರೆ ಮಾತುಕತೆಯ ಚೌಕಾಸಿಯ ಅಸವಾಗಬೇಕೇ ಹೊರತು, ಹಳ್ಳಿಯ ಮತ್ತು ಜನಸಾಮಾನ್ಯರ ದಿನಚರಿಯನ್ನೇ ಮೊಟಕುಗೊಳಿಸುವಂತೆ ಬಹುದಿನಗಳ ಕಾಲ ಮುಂದುವರಿಯಬಾರದು. ಈ ಬಾರಿಯ ಅನಿರ್ದಿಷ್ಟ ಅವಧಿಯ ಮುಷ್ಕರದಿಂದ ಅತಿ ಹೆಚ್ಚು ತೊಂದರೆಗೆ ಒಳಗಾದವರು ಗ್ರಾಮೀಣ ಪ್ರದೇಶದ ರೈತರು ಮತ್ತು ಬಡವರು. ವಿಪರ್ಯಾಸವೆಂದರೆ, ನಮ್ಮ ನಾಡಿನ ಪ್ರಮುಖ ರೈತ ಮುಖಂಡರೊಬ್ಬರು, ಈ ಅನಿರ್ದಿಷ್ಟ ಅವಧಿಯ ಮುಷ್ಕರದ ನೇತೃತ್ವ ವಹಿಸಿದ್ದಾರೆ!
ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಮುಷ್ಕರದ ನೇತೃತ್ವ ವಹಿಸಬಹುದು, ಕಾರ್ಮಿಕ ನಾಯಕರಾಗಬಹುದು, ನಿಜ. ಅದರಲ್ಲಿ ಅನುಮಾನವಿಲ್ಲ. ಸಾಮಾಜಿಕ ನ್ಯಾಯದ ಕಾರ, ಯಾರು ಬೇಕಾದರೂ ಮುಷ್ಕರದ ನೇತೃತ್ವ ವಹಿಸಬಹುದು. ಜತೆಗೆ ಮುಷ್ಕರ ನಡೆಸುವುದಕ್ಕೆ, ತಮ್ಮ ಹಕ್ಕಿಗಾಗಿ ಹೋರಾಡುವುದಕ್ಕೆ ಈ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶವಿದೆ. ಆದರೆ ಕರೋನಾ ಪೀಡಿತ ಈ ಕಾಲದಲ್ಲಿ, ಸಾರಿಗೆ ಸೌಕರರ ‘ಅನಿರ್ದಿಷ್ಟ’ ಅವಽಯ ಮುಷ್ಕರಕ್ಕೆ, ರೈತ ಚಳವಳಿಯಲ್ಲಿ ಗುರುತಿಸಿಕೊಂಡ ರೈತನಾಯಕರೊಬ್ಬರು ಏಕೆ ನಾಯಕತ್ವ ವಹಿಸಬೇಕು? ಸಾರಿಗೆ ನೌಕರರಲ್ಲಿ, ಆ ವೃತ್ತಿಯ ಒಳಹೊರಗನ್ನು ಬಲ್ಲ ಒಬ್ಬರು ನಾಯಕತ್ವ ವಹಿಸಲು ಸಾಧ್ಯವಿಲ್ಲವೆ!
ಒಂದೆರಡು ದಿನಗಳ ಮುಷ್ಕರವಾಗಿದ್ದರೆ, ಇಂಥ ಪ್ರಶ್ನೆಯನ್ನು ಯಾರೂ ಕೇಳುತ್ತಿರಲಿಲ್ಲ, ಈ ರೀತಿಯ ಪ್ರಶ್ನೆಯೇ ಉದ್ಭವಿಸು ತ್ತಿರಲಿಲ್ಲ. ಕಡಿಮೆ ವೆಚ್ಚದ ಪ್ರಯಾಣಕ್ಕೆ ಅನುವು ಮಾಡಿಕೊಡುವ ಬಸ್‌ಗಳು ನಿಂತು ಹೋಗಿ ಒಂದು ವಾರವೇ ಮೀರಿದೆ. ರೈತರು, ಕೃಷಿ ಕಾರ್ಮಿಕರು, ದಿನಗೂಲಿಗಳು, ನಗರದ ಜನಸಾಮಾನ್ಯರು ಏನು ಮಾಡುವುದೆಂದು ತೋಚದೆ ಹತಾಶರಾಗಿದ್ದಾರೆ.
ಇದೇ ರೀತಿ ಕೆಲವು ವಾರ ಮುಂದುವರಿದರೆ, ಖಾಸಗಿ ಪಯಣವೇ ಪ್ರಮುಖ ಎನಿಸಿ, ಸಾರಿಗೆ ನಿಗಮವೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬಹುದು! ವ್ಯವಸ್ಥಿತವಾಗಿ ನಡೆಯುತ್ತಿರುವ ನಮ್ಮ ರಾಜ್ಯದ ಸಾರಿಗೆ ನಿಗಮದ ಜಾಲವನ್ನೇ ಖಾಸಗಿ ಬಸ್‌ಗಳು ಅಪಹರಿಸಬಹುದು! ಇದೇ ನೆಪದಲ್ಲಿ, ಖಾಸಗಿ ಬಸ್‌ಗಳು ಮುಕ್ತವಾಗಿ ಸಂಚರಿಸುವ ಅವಕಾಶ ದೊರೆತರೂ ದೊರಕೀತು! ಒಂದು ವೇಳೆ ಹಾಗಾದ ಪಕ್ಷದಲ್ಲಿ, ಈಗ ಸಾರಿಗೆ ನಿಗಮದಲ್ಲಿ ನೌಕರಿ ಮಾಡುತ್ತಿರುವವರ ಪಾಡೇನು? ಖಾಸಗಿ ಬಸ್ ವ್ಯವಸ್ಥೆಯಲ್ಲಿ ಸೇರಿಕೊಂಡು, ಅಲ್ಲಿನ ಕಡಿಮೆ ಸಂಬಳದ ಕೆಲಸವನ್ನು ಒಪ್ಪಿಕೊಳ್ಳಬೇಕು ಎಂದರ್ಥವೆ? ಈ ರೀತಿಯ ಹಲವು ಅಪಾಯಕಾರಿ ಆಯಾಮಗಳು, ‘ಅನಿರ್ದಿಷ್ಟ’ ಕಾಲದ ಮುಷ್ಕರದಲ್ಲಿವೆ.
ಇಂಥ ಸಾಧ್ಯತೆಯನ್ನು ಈ ರೀತಿ ಮುಷ್ಕರಕ್ಕೆ ಕರೆಕೊಟ್ಟವರು ಪರಿಶೀಲಿಸಿದ್ದಾರಾ! ಈ ‘ಅನಿರ್ದಿಷ್ಟ ಕಾಲ’ ಎಂಬುದು ಒಂದು ದೊಡ್ಡ ಸಂಚಿನ ಭಾಗವಾಗಿರಬಹುದೆ! ಇಂಥ ಹಲವು ಕಳವಳಕಾರಿ ಪ್ರಶ್ನೆಗಳು ಈ ಸಂದರ್ಭದಲ್ಲಿ ಎದುರಾಗುತ್ತಿವೆ. ಅನಿರ್ದಿಷ್ಟ ಕಾಲದ ಮುಷ್ಕರ ಎಂದಾಕ್ಷಣ, ನಮ್ಮ ದೇಶದಲ್ಲಿ ನೆನಪಾಗುವುದು, ದತ್ತಾ ಸಾಮಂತ್ ಮತ್ತು ಮುಂಬೈಯ ಮಿಲ್ ನೌಕರರ ಮುಷ್ಕರ.
1982ರಲ್ಲಿ ದತ್ತಾ ಸಾಮಂತ್ ಎಂಬ ಡಾಕ್ಟರರು ನೀಡಿದ ಕರೆಗೆ ಓಗೊಟ್ಟ ಸುಮಾರು 300000 ಕಾರ್ಮಿಕರು ಮುಂಬೈ ಯಲ್ಲಿ ಮುಷ್ಕರ ಆರಂಭಿಸಿದರು. ಅದೂ ಸಹ ಅನಿರ್ದಿಷ್ಟ ಕಾಲದ ಮುಷ್ಕರ ಎನಿಸಿತ್ತು. ವೃತ್ತಿಯಲ್ಲಿ ವೈದ್ಯರಾಗಿದ್ದ ದತ್ತಾಸಾಮಂತ್, ಅಂದಿನ ಕಾರ್ಮಿಕ ಚಳವಳಿಯ ನೇತೃತ್ವ ವಹಿಸಿದ್ದೇ ಒಂದು ವಿಶೇಷ ವಿದ್ಯಮಾನ. ಮುಷ್ಕರದಲ್ಲಿ ಭಾಗಿಯಾಗಿದ್ದ ಕಾರ್ಮಿಕರಿಗೆ, ಸಣ್ಣ ಮೊತ್ತದ ಸಹಾಯವನ್ನು ಕೊಡಿಸಲು ಸಹ ದತ್ತಾ ಸಾಮಂತ್ ವ್ಯವಸ್ಥೆ ಮಾಡಿದ್ದರು. ಸುಮಾರು ಎಂಬತ್ತಕ್ಕೂ ಹೆಚ್ಚಿನ ಮಿಲ್ ಗಳಲ್ಲಿದ್ದ ಕಾರ್ಮಿಕರು, ಕೆಲಸಕ್ಕೆ ಹೋಗದೆ ಮುಷ್ಕರ ನಡೆಸಿದರು.
ತಮ್ಮ ಬೇಡಿಕೆ ಈಡೇರುವ ತನಕ ಮುಷ್ಕರ ನಿಲ್ಲಿಸುವ ಮಾತೇ ಇಲ್ಲ ಎಂದು ದತ್ತಾ ಸಾಮಂತ್ ಗುಡುಗಿದ್ದರು. ಮುಷ್ಕರ ನಿಲ್ಲಿಸಲು ಮಾತುಕಡೆಯಾಡುವ ಸರಕಾರದ ಪ್ರಯತ್ನಗಳಿಗೆ ತಣ್ಣೀರೆರಚಿದ್ದರು. ದತ್ತಾ ಸಾಮಂತ್ ಒಳ್ಳೆಯ ಮಾತುಗಾರ. ಮಾತಿನಲ್ಲೇ ನೌಕರರನ್ನು ಮೋಡಿ ಮಾಡುತ್ತಿದ್ದರು. ಡಾಕ್ಟರ್ ಸಾಹೆಬ್ ಎಂದೇ ಜನಪ್ರಿಯರಾಗಿದ್ದ ಈ ವೈದ್ಯರ ಮಾತುಗಳನ್ನು ಮುಂಬಯಿ ಯ ಬಹುಪಾಲು ಕಾರ್ಮಿಕರು ನಂಬಿದ್ದರು.
18.1.1982ರಂದು ಆರಂಭಗೊಂಡ ಆ ಮುಷ್ಕರ ಒಂದು ವರ್ಷ ಕಳೆದರೂ, ಅಂದರೆ 1983ರಲ್ಲೂ ಮುಂದುವರಿಯಿತು. ಕಾರ್ಮಿಕರು ಕುಟುಂಬ ನಿರ್ವಹಣೆಗಾಗಿ ಹೆಣಗಾಡಿ, ಬಸವಳಿದು ಹೋದರು. ಅತ್ತ ಮಿಲ್ ಮಾಲಿಕರು ಕಂಗಾಲಾದರು, ನಷ್ಟಕ್ಕೆ ಒಳಗಾದರು. ಮುಂಚೆಯೇ ಒಪ್ಪಿಕೊಂಡಂತೆ, ಬಟ್ಟೆಯನ್ನು ಮತ್ತು ಉತ್ಪನ್ನ ಗಳನ್ನು ಸರಬರಾಜು ಮಾಡುವಲ್ಲಿ ವಿಫಲರಾಗಿ, ಆರ್ಥಿಕ ನಷ್ಟದ ಜತೆ, ಕಾನೂನಿನ ಕ್ರಮಕ್ಕೂ ಗುರಿಯಾದರು. ಒಂದು ವರ್ಷ ಮುಗಿಯುವಷ್ಟರಲ್ಲಿ50ಕ್ಕಿಂತ ಹೆಚ್ಚು ಮಿಲ್‌ಗಳುಖಾಯಂ ಆಗಿ ಮುಚ್ಚಿ ಹೋದವು. ಇನ್ನು ಕೆಲವು ಮಿಲ್ ಗಳು ಬಹುದೂರಕ್ಕೆ ಸ್ಥಳಾಂತರಗೊಂಡವು.
ಅನಿರ್ದಿಷ್ಟ ಮುಷ್ಕರು ಯಾವುದೇ ಫಲ ನೀಡದೇ, ಅದರಷ್ಟಕ್ಕೇ ತಣ್ಣಗಾಗುವಷ್ಟರಲ್ಲಿ, ಸುಮಾರು 5,00,000ಜನ ಕೆಲಸಕಳೆದುಕೊಂಡರು. ಒಟ್ಟಾರೆಯಾಗಿ 1982ರ ಮುಂಬೈ ಮುಷ್ಕರವು, ಆ ಮಹಾನಗರದಲ್ಲಿ ಹಿಂದೆಂದೂ ಕಾಣದ ಸಂಕಟವನ್ನು, ಸಾಮಾಹಿಕ ತಲ್ಲಣವನ್ನು, ಆರ್ಥಿಕ ನಷ್ಟವನ್ನು ಸೃಷ್ಟಿಸಿತು. 1982ರ ಮುಂಬಯಿಯ ‘ಅನಿರ್ದಿಷ್ಟ ಮುಷ್ಕರ’ದಿಂದ ಕಾರ್ಮಿಕ ರಿಗೆ ಏನು ಲಾಭವಾಯಿತು? ದತ್ತಾ ಸಾಮಂತ್‌ರ ಬಿಗಿ ನಿಲುವಿನಿಂದ ಕಾರ್ಮಿಕರ ಬೇಡಿಕೆಗಳು ಈಡೇರಿದವೆ? ದುರಂತ ಎಂದರೆ, 50ಕ್ಕೂ ಹೆಚ್ಚು  ಮಿಲ್‌ಗಳು ಖಾಯಂ ಆಗಿ ಮುಚ್ಚಿ ಹೋಗಿದ್ದರಿಂದ, ಬೇಡಿಕೆ ಈಡೇರುವ ಪ್ರಶ್ನೆಯೇ ಉದ್ಭವಿಸಲಿಲ್ಲ. ಮುಷ್ಕರ ಅದರಷ್ಟಕ್ಕೆ ತಣ್ಣಗಾಯಿತು.
ಮಹಾ ಹಠಮಾರಿ ಮತ್ತು ಜಿಗುಟು ಸ್ವಭಾವದ ದತ್ತಾ ಸಾಮಂತ್, ಯಾವುದೇ ಮಾತುಕತೆಗೆ ಒಪ್ಪದ ಆಸಾಮಿ. ಅನಿರ್ದಿಷ್ಟ ಕಾಲದ ಮುಷ್ಕರಕ್ಕೆ ಕರೆ ನೀಡುವ ಮೂಲಕ, ಮುಂಬಯಿಯ ಮಿಲ್ ಸಂಸ್ಕೃತಿಯನ್ನೇ ನಾಶ ಮಾಡಿದ ಖ್ಯಾತಿ ದತ್ತಾ ಸಾಮಂತ್ ಅವರ ದಾಯಿತು. ಭಾರಿ ಮೌಲ್ಯ ಹೊಂದಿದ್ದ ಮಿಲ್‌ಗಳ ಜಾಗಗಳನ್ನು ರಿಯಲ್ ಎಸ್ಟೇಟ್ ಮಾಫಿಯಾ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಒಂದು ಶತಮಾನಕ್ಕಿಂತ ಹೆಚ್ಚು ಕಾಲದ ಇತಿಹಾಸ ಹೊಂದಿದ್ದ ಹಲವು ಹತ್ತಿ ಗಿರಣಿಗಳಿದ್ದ ಜಾಗ ಕೋಟ್ಯಂತರ ರುಪಾಯಿಗಳಿಗೆ ಬಿಕರಿಯಾದವು. ಅದಾಗಲೇ ಕಷ್ಟದಲ್ಲಿದ್ದ, ನಷ್ಟದಲ್ಲಿದ್ದ ಕೆಲವು ಕಾರ್ಖಾನೆ ಮಾಲಿಕರಿಗೆ, ಮಿಲ್ ನಡೆಸುವ ದಕ್ಕಿಂತ, ಆ ಜಾಗ ವನ್ನು ವಿಲೇವಾರಿ ಮಾಡಿ ಬರುವ ಹಣವೇ ಹೆಚ್ಚು ಲಾಭದಾಯಕ ಎನಿಸಿತು.
ಒಟ್ಟಿನಲ್ಲಿ 1982-83ರ ಆ ಅನಿರ್ದಿಷ್ಟ ಮುಷ್ಕರ ವಿಫಲವಾಯಿತು. ಮಿಲ್‌ಗಳ ಪ್ರಮುಖ ಕೇಂದ್ರ ಎನಿಸಿದ್ದ ಮುಂಬೈಯು, ಆ ನಂತರ ವ್ಯವಹಾರ ಕೇಂದ್ರಿತ ಮಹಾನಗರವಾಗಿ ಬೆಳೆಯತೊಡಗಿತು. ಕೆಲವು ಮಿಲ್‌ಗಳು ಅಹಮದಾಬಾದ್, ಸೂರತ್ ಮೊದಲಾದ ಪಟ್ಟಣಗಳಿಗೆ ಸ್ಥಳಾಂತರಗೊಂಡವು.
ದತ್ತಾ ಸಾಮಂತ್ ಅವರ ವ್ಯಕ್ತಿತ್ವ ಮತ್ತು ಜೀವನ ಬಹಳ ಕುತೂಹಲಕಾರಿ. ಅವರು ಕಾರ್ಮಿಕರಲ್ಲ. ಆದರೆ ಕಾರ್ಮಿಕರ ಕಷ್ಟ ಗಳನ್ನು ಹತ್ತಿರದಿಂದ ಕಂಡವರು. ಹಳ್ಳಿಯಿಂದ ಮುಂಬೈಗೆ ಬಂದು, ಕಷ್ಟಪಟ್ಟು ವೈದ್ಯ ಪದವಿ ಗಳಿಸಿ, ಕಲ್ಲುಕ್ವಾರೆಯಕೆಲಸಗಾರರಿಗೆ ಚಿಕಿತ್ಸೆ ನೀಡುವಾಗ, ಅವರಲ್ಲಿದ್ದ (ಸಾಮಂತ್) ಕಾರ್ಮಿಕ ನಾಯಕ ಬೆಳಕು ಕಂಡ. ಕಡಿಮೆ ಸಂಬಳಕ್ಕೆದುಡಿಯುತ್ತಿದ್ದ ಕಲ್ಲು ಕ್ವಾರಿ ಕೆಲಸಗಾರರಿಗೆ ನ್ಯಾಯ ದೊರಕಿಸಲು ಆರಂಭಿಸಿದ ಹೋರಾಟವು, ಅವರನ್ನು ಟ್ರೇಡ್ ಯೂನಿ ಯನ್ ಚಟುವಟಿಕೆಗಳ ನಾಯಕತ್ವ ವಹಿಸುವಂತೆ ಮಾಡಿತು.
ಹಲವು ಮಿಲ್ ಮಾಲಿಕರೊಂದಿಗೆ ಮಾತುಕತೆ ನಡೆಸಿ, ಕೆಲಸಗಾರರ ಸಂಬಳ ಹೆಚ್ಚುವಂತೆ ಮಾಡಿದರು. 1967ರಲ್ಲಿ ಚುನಾವಣೆ ಯಲ್ಲಿ ಸ್ಪರ್ಧಿಸಿ ಜಯಗಳಿಸಿದರು. 1972ರಲ್ಲಿ ಕಾಂಗ್ರೆಸ್ ಪಕ್ಷದ ಎಂಎಲ್‌ಎ ಆದರು. ಮಹಾರಾಷ್ಟ್ರದಲ್ಲಿ ಅಂದು ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಎ.ಆರ್.ಅಂಟುಳೆಯವರಿಗೆ ಹತ್ತಿರದವರಾದರು. ಆದರೆ, ಮಿಲ್ ಮತ್ತು ಕಾರ್ಖಾನೆಗಳ ಮಾಲಿಕರ ವಿರುದ್ಧ ಮತ್ತು ಕಾರ್ಮಿಕರ ಪರವಾಗಿ ಹೋರಾಡುತ್ತಿದ್ದ ಇವರನ್ನು, ಪ್ರಧಾನಿ ಇಂದಿರಾ ಗಾಂಧಿ ಇಷ್ಟಪಡಲಿಲ್ಲ. ಈ ವ್ಯಕ್ತಿ ಮುಂದೊಂದು ದಿನ ತಮ್ಮ ಪಕ್ಷಕ್ಕೆ ಎದುರಾಳಿಯಾಗಿ ಬೆಳೆಯಬಲ್ಲ ಎಂದು ಅವರು ಗುರುತಿಸಿದ್ದರು. ಆದ್ದರಿಂದ, ಕಾಂಗ್ರೆಸ್ ಎಂಎಲ್‌ಎ ಆಗಿದ್ದ ದತ್ತಾ ಸಾಮಂತ್ ಅವರು, 1975ರಲ್ಲಿ ಜೈಲು ಸೇರಬೇಕಾಯಿತು!
ತುರ್ತುಪರಿಸ್ಥಿತಿಯ ಅತಿರೇಕದ ಭಾಗವಾಗಿ, ದತ್ತಾ ಸಾಮಂತ್‌ರನ್ನು ಬಂಧಿಸಿ, ಜೈಲಿಗೆ ತಳ್ಳಲಾಯಿತು. ಕಾರ್ಖಾನೆಯ ಮಾಲೀಕ ರಾಗಿದ್ದ, ದತ್ತಾ ಸಾಮಂತ್ ಪ್ರತಿಭಟನೆಯ ರುಚಿಯನ್ನು ಕಂಡಿದ್ದ ವಿರೇನ್ ಶಹಾ ಎಂಬವರು ಸಹ ಅಂದು ಬಂಧನಕ್ಕೆ ಒಳಗಾಗಿದ್ದರು. ಇವರಿಬ್ಬರನ್ನೂ ಒಂದೇ ಸೆಲ್‌ನಲ್ಲಿ ಕೂಡಿಹಾಕಿತ್ತು, ತುರ್ತುಪರಿಸ್ಥಿತಿಯ ಅಂದಿನ ಕಾನೂನು!
ಮುಂಬೈಯ ನೌಕರರ ಸಂಬಳ ಹೆಚ್ಚಿಸುವ ಹೋರಾಟ ನಡೆಸುವಲ್ಲಿ ದತ್ತಾ ಸಾಮಂತ್ ಅಂದು ಖ್ಯಾತರು. ಪ್ರೀಮಿಯರ್ ಆಟೊಮೊಬೈಲ್ಸ್ ಎಂಬ ಲಾಭದಾಯಕ ಸಂಸ್ಥೆಯ ನೌಕರರಿಗೆ, ಒಮ್ಮೆಗೇ ಸಂಬಳವನ್ನು ಡಬಲ್ ಮಾಡಿಸಿದ ಖ್ಯಾತಿ ಸಾಮಂತ್ ಅವರದ್ದು. ಕಾರ್ಖಾನೆ ಮಾಲಿಕರೊಂದಿಗೆ ಅವರ ಹೋರಾಟ ನೇರ, ಸರಳ. ‘ಕೇಳಿದಷ್ಟು ಸಂಬಳ ನೀಡಿ, ಇಲ್ಲವೇ ಕಾರ್ಖಾನೆ ಬಂದ್ ಮಾಡಿ’ ಎಂಬ ನೇರ ಧಮಕಿ! ಪ್ರೀಮಿಯರ್ ಆಟೊಮೊಬೈಲ್ಸ್ ನ ನೌಕರರಿಗೆ ಅತಿ ಹೆಚ್ಚು ಸಂಬಳ ಕೊಡಿಸಿದ ನಂತರ, ದತ್ತಾ ಸಾಮಂತ್ ಹೆಚ್ಚು ಜನಪ್ರಿಯತೆ ಗಳಿಸಿದರು. ಇತರ ಯೂನಿಯನ್‌ಗಳು ಹಿನ್ನೆಲೆಗೆ ಸರಿದವು. ಬೇರೆ ಯೂನಿಯನ್ನಾಯಕರು ಸಾಮಂತರ ವಿಧಾನವನ್ನು ಇಷ್ಟಪಡುತ್ತಿರಲಿಲ್ಲ.
‘ಮಾಲಿಕರು ಬದುಕಬೇಕು, ಅವರು ಲಾಭ ಗಳಿಸಿ, ಅದರಲ್ಲಿ ನಾವು ಪಾಲು ಕೇಳಬೇಕು. ಹೊರತು ಒಮ್ಮೆಗೇ ಯದ್ವಾ ತದ್ವಾಸಂಬಳ ಹೆಚ್ಚಿಸುವಂತೆ ಧಮಕಿ ಹಾಕಿದರೆ, ಕಾರ್ಖಾನೆ ನಷ್ಟಕ್ಕೆ ಒಳಗಾಗಿ, ಮುಂದಿನ ದಿನಗಳಲ್ಲಿ ಕಾರ್ಮಿಕರು ಕೆಲಸಕಳೆದುಕೊಳ್ಳುವಂತೆ ಆಗಬಹುದು. ಹಾಗಾಗಬಾರದು’ ಎಂದು ಇತರ ಯೂನಿಯನ್ ನಾಯಕರು ಹೇಳಿದರೆ, ದತ್ತಾ ಸಾಮಂತ್ ಅದನ್ನು ಒಪ್ಪುತ್ತಿರಲಿಲ್ಲ. ಸಂಬಳ ಕೂಡಲೆ ಹೆಚ್ಚಿಸಿ, ಇಲ್ಲವೇ ಬಾಗಿಲು ಮುಚ್ಚಿ ಇದು ಸಾಮಂತ್ ಅಸ್ತ್ರ.
ಈ ಅಸ್ತ್ರಕ್ಕೆ, 1982ರ ಆ ಒಂದು ವರ್ಷ ಸಮಯದ ಮುಷ್ಕರಕ್ಕೆ ಮುಂಬಯಿಯ ಬಹುಪಾಲು ಮಿಲ್‌ಗಳು ನಲುಗಿದವು; ಹಲವು ಖಾಯಂ ಆಗಿ ಮುಚ್ಚಿದವು. 1982ರ ಆ ದೀರ್ಘ, ವಿಫಲ, ಅನಿರ್ದಿಷ್ಟ ಅವಧಿಯ ಮುಷ್ಕರದ ನಂತರ ಸಾಮಂತ್ ಕೆಲಕಾಲ ಜನಪ್ರಿಯ ನಾಯಕರಾಗಿ ಮುಂದುವರಿದರು. ಕಾಂಗ್ರೆಸ್‌ನಿಂದ ಹೊರಬಂದು, 1984ರಲ್ಲಿ ಪಕ್ಷೇತರರಾಗಿಸ್ಪಽಸಿ, ಲೋಕಸಭಾ ಸದಸ್ಯರಾದರು. ಕಾರ್ಮಿಕರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದರು. ಮಿಲ್ ಮುಚ್ಚಿದ ನಂತರ, ಆ ಜಾಗವನ್ನು ಪರಭಾರೆ ಮಾಡುತ್ತಿದ್ದ ಮಾಲಿಕರ ವಿರುದ್ಧ ಹೋರಾಡಿ, ಕಾರ್ಮಿಕರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಪ್ರಯತ್ನ ನಡೆಸಿದರು. ಕೋಟಿಗಟ್ಟಲೆ ಮೌಲ್ಯದ ಜಾಗವು ರಿಯಲ್ ಎಸ್ಟೇಟ್ ಮಾಫಿಯಾದ ಕೈವಶವಾಗಲು ದತ್ತಾ ಸಾಮಂತ್ ತೊಡಕಾಗಿದ್ದರು.
ಇದರ ಫಲವೇ ಇರಬೇಕು, 16.1.1997ರಂದು ನಡೆದ ಕೊಲೆ. ಹಾಡು ಹಗಲೇ, ಬಾಡಿಗೆ ಕೊಲೆಗಾರರು ಸಾಮಂತ್ ಮೇಲೆ 17 ಗುಂಡು ಹಾರಿಸಿ, ಕೊಲೆ ಮಾಡಿದರು. ಛೋಟಾ ರಾಜನ್ ಗ್ಯಾಂಗ್ ಮೇಲೆ ಆರೋಪ ಬಂತು. ಆದರೆ ಆ ಕೊಲೆಯ ಹಿಂದೆ ಯಾರು ಇದ್ದರೆಂದು ಇಂದಿಗೂ ಋಜುವಾತಾಗಿಲ್ಲ. 2019ರಲ್ಲಿ ಆ ಪ್ರಕರಣವನ್ನು ಸಿಬಿಐ ವಹಿಸಿಕೊಂಡು, ತನಿಖೆ ಮುಂದುವರಿಸಿದೆ!ಅನಿರ್ದಿಷ್ಟ ಮುಷ್ಕರ ಎಂದಾಗ, ಮುಂಬೈಯಲ್ಲಿ 1982ರಲ್ಲಿ ನಡೆದ ಆ ಬೃಹತ್ ಮುಷ್ಕರದ ನೆನಪಾಗುತ್ತದೆ, ಆಗಲೇ ಬೇಕು. ಯಾವುದೇ ಮುಷ್ಕರವು ಸೀಮಿತ ಅವಧಿಯದಾಗಿರಬೇಕು, ಆ ಮೂಲಕ ಬೇಡಿಕೆಗಳ ಕುರಿತು ಮಾತುಕತೆ ನಡೆಸುವ ದಾಳವಾಗ ಬೇಕೇ ಹೊರತು, ಅನಿರ್ದಿಷ್ಟ ಕಾಲದ ಮುಷ್ಕರದಿಂದ ಯಾರಿಗೂ ಲಾಭವಿಲ್ಲ. ಈ ವಿಚಾರವನ್ನು ಮನನ ಮಾಡಿಕೊಳ್ಳ ಬೇಕಾದದ್ದು ಇಂದಿನ ತುರ್ತು ಅಗತ್ಯ.