ನಾವು ಸುಮ್ನೆ ಅಡಗೂಲಜ್ಜಿ ಕಥೆ ಹೇಳಿ ಕುಳಿತರೆ ಆವಿಷ್ಕಾರದ ಹರಿಕಾರರಾಗುವುದಿಲ್ಲ
ಶಿಶಿರಕಾಲ
ಶಿಶಿರ್‌ ಹೆಗಡೆ, ನ್ಯೂಜೆರ್ಸಿ
ಅವರ ಹೆಸರು ಡಾ. ರಾಜಾಶಂಕರ್ ಕಣಗಲಘಟ್ಟ. ನನಗಿಂತ ಸುಮಾರು ಇಪ್ಪತ್ತು ವರ್ಷ ದೊಡ್ಡವರಿರಬಹುದು. ಅಮೆರಿಕಾಕ್ಕೆ ಬಂದ ಮೇಲೆ, ಚಿಕಾಗೋದಲ್ಲಿ ನೆಲೆಸಿದ್ದಾಗ ಪರಿಚಯವಾದವರು ರಾಜ್. ಸದಾ ತಮಾಷೆ ಮಾಡುತ್ತ, ತೀರಾ ಸರಳ ವ್ಯಕ್ತಿತ್ವ.
ನನಗೆ ಅವರು ಪರಿಚಯವಾಗಿ ಸುಮಾರು ಐದಾರು ತಿಂಗಳು ಅವರು ವಿಜ್ಞಾನಿ ಎನ್ನುವುದೇ ಗೊತ್ತಿರಲಿಲ್ಲ. ಸುಮ್ಮನೆ ಪರಿಚಯ ವಾಗುವಾಗ ಯಾವುದೋ ಒಂದು ಲ್ಯಾಬ್‌ನಲ್ಲಿ ವಿಜ್ಞಾನ ವಿಭಾಗದಲ್ಲಿ ಕೆಲಸಮಾಡುತ್ತಾರೆ ಎಂದಷ್ಟೇ ತಿಳಿದಿತ್ತು. ನಂತರದಲ್ಲಿ ಬೇರೆಯವರಿಂದ ತಿಳಿದದ್ದು ಅವರೊಬ್ಬ ಅಸಾಮಾನ್ಯ ವಿಜ್ಞಾನಿ, ಮೇಧಾವಿ ಮತ್ತು ಸಾಧಕ ಎಂದು. ಕ್ರಿಸ್ಟೆಲೊಗ್ರಾಫಿಯಲ್ಲಿ ಅವರ ಸಾಧನೆ ಅಮೆರಿಕನ್ ಭೌತ ವಿಜ್ಞಾನ ವಲಯದಲ್ಲ ಪರಿಚಿತ. ನಮ್ಮ ನಡುವೆ ಅವರು ಸಾಮಾನ್ಯ ವ್ಯಕ್ತಿಯಂತೆ, ರಾಜಣ್ಣ ನಾಗಿ ಇದ್ದುಬಿಡುತ್ತಿದ್ದರು.
ರಾಜಾಶಂಕರ್ ಮೂಲತಃ ಸಾಗರದವರು. ಸಾಗರದಲ್ಲಿ ಕನ್ನಡ ಭಾಷೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಮುಗಿಸಿ ನಂತರ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಭೌತಶಾಸ್ತ್ರದಲ್ಲಿ ಮಾಸ್ಟರ್ಸ್ ಮಾಡಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆ ಸೈನ್ಸ್ ನಲ್ಲಿ ಪಿಎಚ್.ಡಿ ಪಡೆದು ನಂತರ ಜರ್ಮನಿಯ ಫೆಲೋಶಿಪ್ ಪಡೆದು ಅಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿ ನಂತರ ಅಮೆರಿಕಾದ ಪ್ರತಿಷ್ಠಿತ ಕೊರ್ನೆಲ್ ಯೂನಿವರ್ಸಿಟಿಯಲ್ಲಿ ಮತ್ತು ಆರ್ಗಾನ್ ಲ್ಯಾಬ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದವರು.
ಅಪ್ಪಟ ಕನ್ನಡಿಗ. ಅವರು ಎಷ್ಟು ಸರಳ ಎಂದರೆ ಅವರು ಅಷ್ಟು ದೊಡ್ಡ ವಿಜ್ಞಾನಿ ಎಂದು ಅವರೊಡನೆ ಒಡನಾಡಿದಾಗ ಒಂದುಚೂರು ಸುಳಿವು ಕೂಡ ಹತ್ತುತ್ತಿರಲಿಲ್ಲ. ಅವರು ಅಕಾಲದಲ್ಲಿ ಅನಾರೋಗ್ಯದಿಂದ ಇಹ ಲೋಕ ತ್ಯಜಿಸಿ ಈಗ ಎರಡು ವರ್ಷವಾ ಯಿತು. ಆದರೆ ಅವರೊಂದಿಗೆ ಕೆಲ ವರ್ಷಗಳ ಹಿಂದೆ ನಡೆಸಿದ ಒಂದು ಚರ್ಚೆ ಈಗಲೂ ಆಗೀಗ ನೆನಪಿಗೆ ಬರುತ್ತಲೇ ಇರುತ್ತದೆ ಮತ್ತು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವೆನಿಸುತ್ತದೆ.
ರಾಜಣ್ಣನಂಥ ಅದ್ಭುತ ಮೇಧಾವಿ, ವಿಜ್ಞಾನಿ ಭಾರತ ಬಿಟ್ಟು ಇಲ್ಲಿಗೆ ಬಂದ ಬಗ್ಗೆ ನನಗಂತೂ ತೀರಾ ಅಸಮಾಧಾನ ಇತ್ತು. ಅವರಭಾರತದೆಡೆಗಿನ ಪ್ರೀತಿಯಿಂದ ಹುಟ್ಟುವ ಎಲ್ಲ ಅಸಮಾಧಾನಗಳನ್ನು ಕೇಳಿದಾಗಲೆಲ್ಲ ನನ್ನ ಈ ಅಸಮಾಧಾನ ಮುನ್ನೆಲೆಗೆ ಬರುತ್ತಿತ್ತು. ರಾಜಣ್ಣನ ಜತೆ ಸಲುಗೆ ಬೆಳೆದ ನಂತರ ಒಂದು ದಿನ ಅವರನ್ನು ಈ ವಿಚಾರವಾಗಿ ತರಾಟೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ.
ನಮ್ಮಂಥವರು ಎಲ್ಲಿದ್ದರೂ ಒಂದೇ. ಆದರೆ ನಿಮ್ಮಂಥ ವಿಜ್ಞಾನಿಗಳು ಭಾರತ ಬಿಟ್ಟು ಅಮೆರಿಕಾ ಸೇರಿದ್ದು ಎಷ್ಟು ಸರಿ? ಹುಟ್ಟಿದ್ದು, ಬೆಳೆದದ್ದು, ಕಲಿತದ್ದು, ಉಂಡದ್ದು ಎಲ್ಲ ಭಾರತದಲ್ಲಿ. ಇವತ್ತಿಗೂ ಭಾರತ ಎಂದರೆ ಎಲ್ಲಿಲ್ಲದ ಪ್ರೀತಿ ಎನ್ನುತ್ತೀರಿ. ಸಂಸ್ಕೃತಿ, ಭಾಷೆ ಎಲ್ಲವನ್ನು ಕೊಟ್ಟ ನೆಲವನ್ನು ಬಿಟ್ಟು ಇಲ್ಲಿಗೆ ಬಂದು ನಿಮ್ಮ ಪ್ರತಿಭೆಯನ್ನು ಮೆರೆಯುವ ಅವಶ್ಯಕತೆ ಯೇನಿತ್ತು? ಭಾರತದ ಇದ್ದರೆ ನಿಮ್ಮ ಎಲ್ಲ ಆವಿಷ್ಕಾರ ಭಾರತಕ್ಕೆ ಸಿಗುತ್ತಿತ್ತಲ್ಲ. ನಮ್ಮ ದೇಶ ವಿಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ಉಳಿದ ಹಲವು ದೇಶಗಳಿಗಿಂತ ಹಿಂದಿರುವುದೇ ನಿಮ್ಮಂಥ ಅದ್ಭುತ ಪ್ರತಿಭೆಗಳು ದೇಶ ಬಿಟ್ಟು ಬಂದಿರುವುದರಿಂದ’ ಎಂದುಬಿಟ್ಟೆ.
ರಾಜ್ ಅಮೆರಿಕಾದ ಟಾಪ್ ವಿಜ್ಞಾನಿಗಳಲ್ಲಿ ಒಬ್ಬರು. ಈ ಪ್ರಶ್ನೆಗಳನ್ನು ಕೇಳಲು ಅವರೇ ತೀರಾ ಸಮಂಜಸವಾದವರಾಗಿದ್ದರು.ಅಂದು ಅವರು ನನ್ನ ಪ್ರಶ್ನೆಗೆ ತೀರಾ ಸಮಾಧಾನದ ಉತ್ತರಿಸಿದ್ದರು. ಅವರು ಪಿಎಚ್.ಡಿ ಮುಗಿಸುವಾಗ ಇದ್ದ ನಮ್ಮ ದೇಶದ ಸ್ಥಿತಿಯನ್ನು ಎಳೆಎಳೆಯಾಗಿ ನನ್ನ ಮುಂದಿಟ್ಟಿದ್ದರು. ಅಂದಿನ ಸರಕಾರ ವಿಜ್ಞಾನವನ್ನು ಕಲಿಸುವ ವ್ಯವಸ್ಥೆಯನ್ನೇನೋ ಮಾಡಿತ್ತು. ಆದರೆ ಅದರ ಬಳಕೆ ಮಾಡುವ ಅಥವಾ ಬಳಸಿ ಆವಿಷ್ಕಾರ ನಿಮಿತ್ತ ಕೆಲಸ ಮಾಡುವ ಗ್ರ್ಯಾಂಟ್‌ಗಳ ಪ್ರಮಾಣ ತೀರಾ ಎಂದರೆ ತೀರಾ ಕಡಿಮೆಯಿತ್ತು. ವಿಜ್ಞಾನಿ ಏನಾದರು ಕಂಡುಹಿಡಿಯಬೇಕು ಎಂದಾದರೆ ಕೈಯಿಂದಲೇ ದುಡ್ಡು ಹಾಕಿ ಕೆಲಸ ಮಾಡಬೇಕಿತ್ತು.
ಭಾರತದಂಥ ಕೋಟಿ ಕೋಟಿ ಜನರಲ್ಲಿ ಲಕ್ಷಗಟ್ಟಲೆ ಮಂದಿ ವಿಜ್ಞಾನ ಕಲಿತು ಸಾವಿರ ಸಾವಿರದ ಲೆಕ್ಕದಲ್ಲಿ ಪಿಎಚ್.ಡಿ ಮಾಡಿದಮೇಧಾವಿಗಳ ಮುಂದೆ ಒಂದು ಉದ್ಯೋಗವೇ ಇರದಂಥ ಕಾಲವದು. ವಿಜ್ಞಾನಕ್ಕೆ ಸಂಬಂಧಿಸಿದ ಸರಕಾರಿ ಉದ್ಯೋಗವಿದ್ದರೂಅಲ್ಲಿ ಕೋಟಾ ಇತ್ಯಾದಿ. ಅಲ್ಲದೆ ಸರಕಾರಿ ವಿಜ್ಞಾನ ಉದ್ಯೋಗ ಕೂಡ ಹೊರ ಬರುತ್ತಿದ್ದ ವಿಜ್ಞಾನಿಗಳ ಸಂಖ್ಯೆಗೆ ಒಂದು ಹುಂಡೂ ತಾಳೆಯಾಗುತ್ತಿರಲಿಲ್ಲ. ಸಹಜವಾಗಿ ಜೀವನೋಪಾಯಕ್ಕೆ ಬೇರೆ ದೇಶಕ್ಕೆ ಹೋಗಲೇ ಬೇಕಾದ ಸ್ಥಿತಿಯಿತ್ತು. ಅಲ್ಲಿಯೇ ಇದ್ದರೆ ಬದುಕುವುದೇ ಸಾಧ್ಯವಾಗುತ್ತಿರಲಿಲ್ಲ.
ಇದೊಂದು ರೀತಿಯಲ್ಲಿ ಸಪ್ಲೈ ಡಿಮ್ಯಾಂಡ್ ಸಮಸ್ಯೆ. ಭಾರತ ಅದ್ಭುತ ಪ್ರತಿಭೆಯನ್ನು ಹೊಂದಿತ್ತು, ವಿಜ್ಞಾನಿಗಳು ತಯಾರಾಗು ತ್ತಿದ್ದರು ಆದರೆ ದೇಶಕ್ಕೆ ಆ ಪ್ರಮಾಣದ ವಿಜ್ಞಾನಿಗಳ ಅವಶ್ಯಕತೆಯೇ ಇರಲಿಲ್ಲ. ಈ ರೀತಿ ಸಮತೋಲನ ತಪ್ಪಿದಾಗಲೇ ನಿರುದ್ಯೋಗ ಸಮಸ್ಯೆಯಾಗುವುದು ಅಥವಾ ಪ್ರತಿಭೆಗೆ ತಕ್ಕದಲ್ಲದ ಕೆಳಗಿನ ಹಂತದ ಕೆಲಸವನ್ನು ನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗುವುದು.
ಎಲ್ಲ ದೇಶಪ್ರೇಮ ಆದರ್ಶವೆಲ್ಲವನ್ನು ಬದಿಗಿಟ್ಟು ಒಮ್ಮೆ ನೀವು ಆ ಸ್ಥಾನದಲ್ಲಿದ್ದು ವಿಚಾರ ಮಾಡಿ ನೋಡಿ. ವಿಜ್ಞಾನ ಓದಿ ಆಗಿದೆ, ಅಸಾಮಾನ್ಯ ಪ್ರತಿಭೆಯಿದೆ, ಏನಾದರೂ ಸಾಧಿಸಬೇಕೆಂಬ ಛಲವಿದೆ. ಇದೇ ಜಾಗದಲ್ಲಿ, ಸ್ಥಿತಿಯಲ್ಲಿ ನೀವಿದ್ದರೆ, ಪಾಲಿಗೆಬಂದದ್ದೇ ಪಂಚಾಮೃತ ಎಂದು ದೇಶದ ಇರುತ್ತಿದ್ದಿರೆ? ಅಥವಾ ಸುಲಭದಲ್ಲಿ ಎದುರಿಗಿರುವ ವಿದೇಶದ ಆಫರ್ ಒಂದನ್ನುಎತ್ತಿಕೊಳ್ಳುತ್ತಿದ್ದಿರೆ? ಇಲ್ಲಿ ರಾಜ್ ಕೂಡ ವಿದೇಶವನ್ನು ಆಯ್ಕೆ ಮಾಡಿಕೊಂಡದ್ದು ಇಲ್ಲಿನ ಐಷಾರಾಮಿ ಜೀವನವನ್ನು ನೆಚ್ಚಿ ಅಲ್ಲ.
ಅವರು ತಮ್ಮೆದುರಿಗಿದ್ದ ಅವಕಾಶವನ್ನು ಒಪ್ಪಿಕೊಂಡದ್ದಕ್ಕೆ ವಿಜ್ಞಾನದೆಡೆಗಿನ ಪ್ರೇಮ, ಸಾಧನೆಯ ಹಂಬಲ ಎನ್ನುವುದಕ್ಕಿಂತಮಿಗಿಲಾಗಿ ಅನಿವಾರ್ಯತೆ ಕೂಡ ಇತ್ತು. ಆಗೆಲ್ಲ ವಿಜ್ಞಾನಿಗಳಿಗೆ, ಅದರಲ್ಲೂ ಮಾಧ್ಯಮ ವರ್ಗದಿಂದ ಬಂದವರಿಗೆ ಭಾರತತೊರೆಯದೇ ಬೇರೆ ದಾರಿಯೇ ಇರಲಿಲ್ಲ. ಹಾಗಂತ ಈಗ ಈ ಪರಿಸ್ಥಿತಿ ಬದಲಾಗಿದೆಯೇ? ಅದರ ನಿಮಿತ್ತ ಕೆಲವು ಲೆಕ್ಕಾಚಾರ ಗಳನ್ನು ನೋಡುವುದಕ್ಕಿಂತ ಮೊದಲು ವಿಜ್ಞಾನ ಆವಿಷ್ಕಾರದ ವಿಭಾಗ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಸಂಕ್ಷಿಪ್ತವಾಗಿ ವಿವರಿಸುತ್ತೇನೆ.
ಆವಿಷ್ಕಾರ ಎಂದರೆ ಮಾವಿನ ಮರದೆದುರಿಗೆ ನಿಲ್ಲಿಸಿ, ಕಣ್ಣಿಗೆ ಬಟ್ಟೆ ಕಟ್ಟಿ, ಸುತ್ತು ಹೊಡೆಸಿ, ಕಲ್ಲು ಹೊಡೆ ಎಂದಂತೆ. ಕಲ್ಲು ಹೇಗೆ ಮತ್ತು ಯಾವ ಎತ್ತರಕ್ಕೆ ಹೊಡೆಯಬೇಕು ಎನ್ನುವುದು ತಿಳಿದಿರುತ್ತದೆ ಆದರೆ ಕಲ್ಲು ಹೊಡೆಯುವ ದಿಕ್ಕಿನ ಮಾವಿನ ಕಾಯಿ ಅಥವಾ ಅಸಲಿಗೆ ಮರವಿದೆಯೇ ಎನ್ನುವುದು ತಿಳಿದಿರುವುದಿಲ್ಲ. ಅಲ್ಲದೆ ಹಾಗೆ ಹೊಡೆದ ಕಲ್ಲು ಮಾವಿನ ಮರಕ್ಕೆ, ಮತ್ತು ಮಾವಿನ ಕಾಯಿಗೆ ತಾಗಿ ಬೀಳುವ ಸಾಧ್ಯತೆ ಕಡಿಮೆ. ಆವಿಷ್ಕಾರ ಮಾಡಿದವರಷ್ಟೇ ವಿಜ್ಞಾನಿ ಅಲ್ಲ.
ಆವಿಷ್ಕಾರದ ಹಾದಿಯನ್ನು ಆರಿಸಿಕೊಂಡವರೆಲ್ಲ ವಿಜ್ಞಾನಿಗಳೇ. ಕೆಲವರ ಕೆಲಸ ಆವಿಷ್ಕಾರದಲ್ಲಿ ಕೊನೆಯಾಗುತ್ತದೆ ಆದರೆ ಬಹು ದೊಡ್ಡ ವರ್ಗದ ವಿಜ್ಞಾನಿಗಳು ಯಾವುದೇ ಆವಿಷ್ಕಾರವನ್ನು ಮಾಡಿರುವುದಿಲ್ಲ. ಇದರರ್ಥ ಅವರೆಲ್ಲ ದಡ್ಡರೆಂದಲ್ಲ ಅರ್ಥ. ಅಂದು ಹೊಸತು ಆವಿಷ್ಕಾರವಾಗಿಲ್ಲ ಅಷ್ಟೇ. ಮಾವಿನ ಕಾಯಿ ಉದುರಿಲ್ಲ ಎಂದಾಕ್ಷಣ ಕಲ್ಲು ಹೊಡೆಯಲು ಬರುವುದಿಲ್ಲ ಎಂದು ನಿರ್ಧರಿಸುವಂತಿಲ್ಲ. ಈ ಆವಿಷ್ಕಾರದ ಹಾದಿ ಅಷ್ಟು ಸುಲಭವಲ್ಲ. ಇದನ್ನು ಇಂದಿನ ಕಾಲದಲ್ಲಿ ಯಾರೂ ಸ್ವಂತ ಖರ್ಚಿನಿಂದ ನಿಭಾಯಿಸುವುದು ಅಸಾಧ್ಯ.
ಇಲ್ಲಿ ಸರಕಾರದ ಒಳಗೊಳ್ಳುವಿಕೆ ಮತ್ತು ಪ್ರೋತ್ಸಾಹವಿಲ್ಲದೆ ಏನೂ ಸಾಧ್ಯವಾಗುವುದಿಲ್ಲ. ಅರ್ಥ ಇಷ್ಟೇ, ಸರಕಾರ ಹಣತೊಡಗಿಸಿಲ್ಲ ಎಂದರೆ ವಿಜ್ಞಾನಿ ಎಷ್ಟೇ ಬುದ್ಧಿವಂತರಾಗಿದ್ದರೂ ಪ್ರಯೋಜನವಿಲ್ಲ, ಆವಿಷ್ಕಾರವಾಗುವುದಿಲ್ಲ. ವಿಜ್ಞಾನಮುಂದುವರಿದಂತೆಲ್ಲ ಹೊಸ ಆವಿಷ್ಕಾರದ ಸಾಧ್ಯತೆ ಮತ್ತು ಜಟಿಲತೆಯಿಂದಾಗಿ ತುಟ್ಟಿಯಾಗುತ್ತ ಹೋಗುತ್ತದೆ.
ಇದೆಲ್ಲ ಹೇಗೆ ನಡೆಯಬೇಕೆಂದರೆ ಸರಕಾರ, ವಿಶ್ವವಿದ್ಯಾಲಯಗಳು ದೊಡ್ಡ ಮೊತ್ತದ ಹಣವನ್ನು ಆವಿಷ್ಕಾರಕ್ಕೆಂದೇ ಮೀಸಲಿಡಬೇಕು. ಆ ಹಣವನ್ನು ವಿಜ್ಞಾನಿಗಳು ಬಳಸುವಂತೆ ಗ್ರಾಂಟ್‌ಗಳು ವ್ಯವಸ್ಥಿಥಿತವಾಗಿ ಸಿಗಬೇಕು. ಅಂದು ಆರೋಗ್ಯಕರ ಪೈಪೋಟಿ ನಿರ್ಮಾಣವಾಗಿರಬೇಕು. ಅದರ ಮೂಲಕ ಗ್ರ್ಯಾಂಟ್ ವಿಜ್ಞಾನಿಗಳಿಗೆ ಸಿಗುವಂತಾಗಬೇಕು. ಅದೆಲ್ಲದಕ್ಕಿಂತ ಹೆಚ್ಚಾಗಿ ಹೀಗೆ ಸಿಗುವ ಹಣದ ಮೊತ್ತ ಸಮಾಜದಲ್ಲಿ ವಿಜ್ಞಾನಿಯೊಬ್ಬ ಗೌರವಯುತವಾಗಿ ಬದುಕಲು ಬೇಕಾದಷ್ಟು ಇರಬೇಕು. ಅದನ್ನುಬಳಸಿ ವಿಜ್ಞಾನಿಗಳು ಆವಿಷ್ಕಾರದತ್ತ ಕೆಲಸ ಮಾಡಬೇಕು. ಸರಕಾರ ಈ ನಿಟ್ಟಿನಲ್ಲಿ ಕೈ ಬಿಚ್ಚಿ ಹಣ ತೊಡಗಿಸಬೇಕು.
ಇದು ದೇಶವೊಂದು ತೆಗೆದುಕೊಳ್ಳುವ ಮತ್ತು ತೆಗೆದುಕೊಳ್ಳಲೇ ಬೇಕಾದ ರಿಸ್ಕ್. ಲೆಕ್ಕಾಚಾರದ ಮತ್ತು ದೂರದರ್ಶಿತ್ವದಿಂದ ಕೂಡಿದ ಯೋಜನೆ. ಈಗ ಲೆಕ್ಕಾಚಾರ ನೋಡೋಣ. ಭಾರತ ಬಾಕಿ ದೇಶಕ್ಕೆ ಹೋಲಿಸಿದರೆ ಇಂದಿನ ದಿನದಲ್ಲಿ ಎಷ್ಟು ಹಣವನ್ನು ಆವಿಷ್ಕಾರಕ್ಕೆ ಮೀಸಲಿಡುತ್ತಿದೆ ಎಂದು. ಈ ಹಣದ ಬಳಕೆ ಹೇಗೆ ಪೋಲಾಗುತ್ತಿದೆ ಎಂಬಿತ್ಯಾದಿ ಇಲ್ಲಿ ಅಪ್ರಸ್ತುತ. ಇಂದು ಭಾರತ ದಲ್ಲಿ ಆವಿಷ್ಕಾರ – ರಿಸರ್ಚ್ ಸಂಬಂಧಿತ ಉದ್ಯೋಗವನ್ನು ಆರಿಸಿಕೊಳ್ಳುವವರ ಸಂಖ್ಯೆ ಎಷ್ಟು ಗೊತ್ತೇ? ಕೇವಲ ಶೇ.0.000252.
ಡೆನ್ಮಾರ್ಕ್, ದಕ್ಷಿಣ ಕೊರಿಯಾ, ಸ್ವೀಡನ್, ಇಸ್ರೇಲ್ ಮೊದಲಾದ ಇಪ್ಪತ್ತು ದೇಶಗಳಲ್ಲಿ ಈ ಲೆಕ್ಕ ನಮಗಿಂತ ಮೂವತ್ತರಿಂದ ನಲವತ್ತು ಪಟ್ಟು ಜಾಸ್ತಿ. ಇದು ಯುನೆಸ್ಕೋ ಇನ್ಸ್ಟಿಟ್ಯೂಟ್ ಆಫ್ ಸ್ಟಾಟಿಸ್ಟಿಕ್‌ನ ಲೆಕ್ಕ. ನಿಮ್ಮಲ್ಲಿ ಹಲವಾರು ಮಂದಿ ಈಗಾಗಲೇ ಇಸ್ರೇಲ್ ಕುರಿತಾದ ವಿಶ್ವೇಶ್ವರ ಭಟ್ಟರ ಪುಸ್ತಕ ‘ಆವಿಷ್ಕಾರದ ಹರಿಕಾರ’ ಓದಿರುತ್ತೀರಿ. ಇಸ್ರೇಲ್ ನಲ್ಲಿ ಅದೇಕೆ ಅಷ್ಟು ಆವಿಷ್ಕಾರ ವಾಗುತ್ತಿದೆ? ಜಗತ್ತಿನ ಮುಂಚೂಣಿ ಮಾನವ ತಳಿ/ರೆಸ್ ಭಾರತೀಯರು.
ಎಲ್ಲ ಕ್ಷೇತ್ರದ ಅದರಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಎಲ್ಲ ದೇಶದ ಜನರಿಗಿಂತ ಭಾರತೀಯರೇ ಜೋರು ಮತ್ತು ಮುಂದೆ. ಆದರೆ ಭಾರತದಕೆ ಈ ಆವಿಷ್ಕಾರಗಳಾಗುತ್ತಿಲ್ಲ? ಇಸ್ರೇಲ್ ತನ್ನ ಜಿಡಿಪಿಯ ಶೇ.5ರಷ್ಟು ಹಣವನ್ನು ಆವಿಷ್ಕಾರಕ್ಕೆಂದೇಮೀಸಲಿಡುತ್ತದೆ, ನಾವು ಆ ನಿಟ್ಟಿನಲ್ಲಿ ತೆಗೆದಿಡುವ ಹಣ ಜಿಡಿಪಿಯ ಕೇವಲ ಶೇ.0.64. ಇದೊಂದು ಲೆಕ್ಕ ಸಾಕು ನಮ್ಮ ಬಂಡವಾಳ ತಿಳಿಯಲು.
ಇಸ್ರೇಲ್ ಒಂದೇ ದೇಶವಲ್ಲ, ಅತಿ ಹೆಚ್ಚು ಆವಿಷ್ಕಾರಗಳಾಗುವ ದಕ್ಷಿಣ ಕೊರಿಯಾ, ಸ್ವೀಡನ್, ಜಪಾನ್, ಆಸ್ಟ್ರಿಯಾ, ಜರ್ಮನಿ, ಅಮೆರಿಕಾ ಹೀಗೆ ಹದಿನೈದು ದೇಶಗಳು ಆವಿಷ್ಕಾರಕ್ಕೆ ವ್ಯಯಿಸುವ ಮೊತ್ತ ನಮಗಿಂತ ಇಪ್ಪತ್ತರಿಂದ ಮೂವತ್ತು ಪಟ್ಟು ಜಾಸ್ತಿ. ಹಣ ವ್ಯಯಿಸಿದರಷ್ಟೇ ಆವಿಷ್ಕಾರವಾಗುವುದೇ, ಬುದ್ಧಿವಂತಿಕೆ ಒಂದಿದ್ದರೆ ಸಾಕಾಗದೆ? ಎನ್ನುವ ಪ್ರಶ್ನೆ ಎದುರಿಗೆ ಬರಬಹುದು. ಆದರೆ ಅದೇ ಸತ್ಯ – ಸರಕಾರ ಹಣ ವ್ಯಯಿಸಿದರಷ್ಟೇ ಆವಿಷ್ಕಾರವಾಗುವ ವಾತಾವರಣ ಮತ್ತು ಸಾಧ್ಯತೆ ನಿರ್ಮಾಣವಾಗುವುದು. ಅಲ್ಲಿನ ನಾಗರೀಕರು ಆವಿಷ್ಕಾರದ ಕೆಲಸದಲ್ಲಿ ಕೈ ಜೋಡಿಸುವುದು.
ಎಷ್ಟೇ ಬುದ್ಧಿವಂತಿಕೆಯಿದ್ದರೂ ಹಣವಿಲ್ಲದಿದ್ದರೆ ಇಂದು ಆವಿಷ್ಕಾರ ಸಾಧ್ಯವಿಲ್ಲ. ಆವಿಷ್ಕಾರ ಎಂದರೆ ಬಾಳೆಹಣ್ಣು ಸಿಪ್ಪೆ ತೆಗೆದು ತಿಂದಂತಲ್ಲ. ಕೆಲವೊಂದು ಆವಿಷ್ಕಾರಕ್ಕೆ ಒಂದೆರಡು ದಶಕವೇ ತಾಗಬಹುದು. ಕೆಲವು ವಿಜ್ಞಾನಿಗಳು ಜೀವನವಿಡೀ ಕೆಲಸಮಾಡಿ ದರೂ ಎಂಟಾಣೆಯ ಆವಿಷ್ಕಾರವಾಗದಿರಬಹುದು. ಮೇಲ್ನೋಟಕ್ಕೆ ಇವೆಲ್ಲ ಲಾಟರಿಯಂತೆ ಎನ್ನಿಸಿದರೂ ಇದು ಹಾಗಲ್ಲ. ಎಲ್ಲರೂ ಕಷ್ಟಪಡಲೇಬೇಕು. ಕಷ್ಟಪಟ್ಟವರೆಲ್ಲ ಗೆಲ್ಲುವುದಿಲ್ಲ. ಅದು ಆವಿಷ್ಕಾರದ ಹಾದಿ. ಇನ್ನು ಒಂದು ಆವಿಷ್ಕಾರ ಆದ ನಂತರ ಅದರ ಬಳಕೆ ಹೇಗಾಗಬೇಕು ಎಂದು ನಿರ್ಧರಿಸಲೂ ಕೂಡ ಅನುವಾಗುವ ವ್ಯವಸ್ಥೆ ಮತ್ತು ಅಪಾರ ಪ್ರಮಾಣದ ಅವಶ್ಯಕತೆಯಿರುತ್ತದೆ. ಇದೆಲ್ಲ ಸರಕಾರದ ಹಸ್ತಕ್ಷೇಪವಿಲ್ಲದೇ ಸಾಧ್ಯವೇ ಇಲ್ಲ.
ಪ್ರೈವೇಟ್ ಕಂಪನಿಗಳಿಗೆ ಈ ರೀತಿಯ ದಶಕಗಳ ದೂರದರ್ಶಿ ರಿಸ್ಕ್‌ಗಳನ್ನು ಕಡಿಮೆ ಕೆಪಿಟಲ್ ಇದ್ದಲ್ಲಿ ತೆಗೆದುಕೊಳ್ಳಲಾಗುವುದಿಲ್ಲ.ಇಂದಿಗೂ ನಮ್ಮ ಆಳುವ ಸರಕಾರಗಳು ಮುಂದೆ ಹತ್ತಿಪ್ಪತ್ತು ವರ್ಷದ ನಂತರದ ಆವಿಷ್ಕಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.ಇರುವ ಐದುವರ್ಷದಲ್ಲಿ ಮತ್ತೊಮ್ಮೆ ಆರಿಸಿಬರಲು ರಸ್ತೆ, ನೀರು ಮೊದಲಾದ ಸೌಕರ್ಯ ಜನರಿಗೆ ಕೊಡಬೇಕು, ಅದು ಬಿಟ್ಟುಯಾವುದೋ ಯಾರಿಗೂ ತಿಳಿಯದ ರಿಸರ್ಚ್‌ಗೆ ಹಣ ಕೊಟ್ಟರೆ ಏನು ಪ್ರಯೋಜನ? ಅದನ್ನು ನೋಡಿ ಜನರು ವೋಟ್ಹಾಕುತ್ತಾರೆಯೇ? ಈ ಸರಕಾರದ ವೋಟ್ ನಿಮಿತ್ತದ ಯೋಜನೆಗಳೇ ಮುಖ್ಯವಾದಾಗ ಆವಿಷ್ಕಾರವಾಗುವ ವಾತಾವರಣವೇ ನಿರ್ಮಾಣವಾಗುವುದಿಲ್ಲ.
ಇಷ್ಟು ವರ್ಷ ಆಗಿದ್ದು ಅದೇ. ನಮ್ಮ ಇಲ್ಲಿನ ವರೆಗೆ ಆಳಿದ ಸರಕಾರಗಳಿಗೆ ರಿಸರ್ಚ್ ಎನ್ನುವುದು ಒಂದು ಡೆಡ್ ಇನ್ವೆಸ್ಟ್ಮೆಂಟ್ ಎಂದೇ ಅನ್ನಿಸಿದ್ದು. ಆ ಕಾರಣಕ್ಕೆ ಇಂದಿಗೂ ಕೂಡ ವಿಜ್ಞಾನದಲ್ಲಿ ಪಿಎಚ್.ಡಿ ಪಡೆದವರು ವಿದೇಶಕ್ಕೆ ವಲಸೆ ಹೋಗುತ್ತಿರುವುದುಮುಂದುವರಿದಿರುವುದು. ಈ ವಲಸೆಯನ್ನು ತಡೆಯಲು ಕೇವಲ ದೇಶಪ್ರೇಮದ ಸ್ಲೋಗನ್ ಗಳಿಂದ ಸಾಧ್ಯವಾಗುವುದಿಲ್ಲ. ಅದರಬದಲಿಗೆ ಸರಕಾರ ಆವಿಷ್ಕಾರಗಳಿಗೆ ಬೇಕಾದ ಸೌಲಭ್ಯ, ವಾತಾವರಣ, ಸಂಬಳ ಹೀಗೆ ಹಣವನ್ನು ಮತ್ತು ರಿಸ್ಕ್ ಅನ್ನು ತೆಗೆದು ಕೊಂಡರೆ ಮಾತ್ರ ಸಾಧ್ಯ.
ಹರಗೋವಿಂದ್ ಖುರಾನಾ, ಸುಬ್ರಮಣ್ಯನ್ ಚಂದ್ರಶೇಖರ್, ವೆಂಕಿ ರಾಮಕೃಷ್ಣನ್, ಅಭಿಜಿತ್ ಬ್ಯಾನರ್ಜಿ ಈ ನಾಲ್ಕು ಜನರಹೆಸರು ನೀವು ಈಗಾಗಲೇ ಕೇಳಿರುತ್ತೀರಿ. ಅವರೆಲ್ಲ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಭಾರತೀಯರು – ಉಹು, ಅಲ್ಲ ಭಾರತೀಯ ಮೂಲದವರು. ಇವರ‍್ಯಾರೂ ಭಾರತ ವಾಸಿಗಳಾಗಿರಲಿಲ್ಲ. ಸಿ.ವಿ. ರಾಮನ್ ನಂತರ ನೊಬೆಲ್ ಪಡೆಯುವ ವಿಜ್ಞಾನಿ ನಮ್ಮಲ್ಲಿ ಉಳಿಯಲೇ ಇಲ್ಲ. ಹಾಗಂತ ಸಾಧನೆಗೆ ನೊಬೆಲ್ ಒಂದೇ ಮಾಪಕ ಎಂದು ಹೇಳುತ್ತಿಲ್ಲ. ಆದರೆ ಸಿ ವಿ ರಾಮನ್ ನೊಬೆಲ್ ಸಿಕ್ಕಿದ್ದು 1930ರಲ್ಲಿ.
ಅದಾದ ನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು. ಅಲ್ಲಿಂದ ಇಲ್ಲಿನವರೆಗೆ ಒಂದೇ ನೊಬೆಲ್ ಬರದಿರುವುದಕ್ಕೆ ಕಾರಣವೇನುಹಾಗಾದರೆ? ನಾವು ಬಾಕಿ ಆ ನಾಲ್ಕು ಮಂದಿ ನೊಬೆಲ್ ಪಡೆದವರನ್ನು ಭಾರತೀಯ ಮೂಲದವರು ಎಂದು ಬೀಗುತ್ತೇವೆ.ಅದೇ ಸಮಯದಲ್ಲಿ ಅವರು ನಮ್ಮಲ್ಲಿ ಉಳಿದು ಈ ಸಾಧನೆ ಮಾಡಲಿಲ್ಲವಲ್ಲ ಎನ್ನುವ ವ್ಯಥೆಯನ್ನು ಮರೆಯುತ್ತೇವೆ ಅಥವಾಅದು ನಮ್ಮ ಗ್ರಹಿಕೆಗೇ ಬರುವುದಿಲ್ಲ. ಅವರೆಲ್ಲ ಭಾರತೀಯ ಮೂಲದವರು ಅಥವಾ ನಮ್ಮವರೆನ್ನುವುದರಲ್ಲಿ ಮತ್ತು ಅದರಿಂದಖುಷಿ ಪಡುವುದರಲ್ಲಿ ತಪ್ಪಿಲ್ಲ. ಆದರೆ ಇದೆಲ್ಲದರ ನಡುವೆ ದೊಡ್ಡ ಪ್ರಮಾದವೊಂದನ್ನು ನಾವು ಒಪ್ಪುತ್ತಲೇ ಇಲ್ಲವಲ್ಲ ಅದು ಬೇಸರದ ವಿಚಾರ. ಅವರನ್ನು ಕರೆದು ಪದ್ಮಭೂಷಣ ವಿಭೂಷಣ ಕೊಡುವುದು ಓಕೆ, ಆದರೆ ನಮ್ಮ ಏಕೆ ಇಂಥವರು ಇದೆಲ್ಲ ಸಾಧನೆಯನ್ನು ಮಾಡುತ್ತಿಲ್ಲ ಎನ್ನುವುದು ಪ್ರಶ್ನೆಯೇ ಆಗುವುದಿಲ್ಲವಲ್ಲ ಅದು ಬೇಜಾರಾಗುವ ವಿಚಾರ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದಿಂದ ತೊಂಭತ್ತರ ದಶಕದ ವರೆಗೆ ವಿದೇಶಕ್ಕೆ ವಲಸೆ ಬಂದ ಭಾರತೀಯರಲ್ಲಿ ಅತಿ ಹೆಚ್ಚು ವಿಜ್ಞಾನ ಮತ್ತು ವೈದ್ಯಕೀಯ ರಂಗಕ್ಕೆ ಸಂಬಂಽಸಿದವರೇ. ನಂತರ ಕಂಪ್ಯೂಟರ್, ಸಾಫ್ಟ್ವೇರ್ ಜಮಾನ ಶುರುವಾದ ನಂತರಎಂಜಿನೀಯರುಗಳು ವಲಸೆ ಬರಲು ಶುರುಮಾಡಿದ್ದು. ರಾಜ್ ಅಂತೇ ಅದೆಷ್ಟೋ ಸಾವಿರ ವಿಜ್ಞಾನಿಗಳು ದೇಶಬಿಟ್ಟು ಬರಲುಕಾರಣ ಹುಡುಕಿ ಅದನ್ನು ಪರಿಹರಿಸದೇ ದೇಶಪ್ರೇಮದಿಂದ ದೇಶದ ವಿಜ್ಞಾನಿಗಳು ಉಳಿಯಬೇಕು ಎಂದರೆ ಅದು ಹೇಗೆಪ್ರಾಕ್ಟಿಕಲ್ ಮತ್ತು ಲೊಜಿಕಲ್ ಆಗಿ ಸಾಧ್ಯ? ಹಾಗಂತ ಭಾರತದ ಉಳಿದು ಸಾಧಿಸಿದವರಿಲ್ಲವೆಂದಲ್ಲ.
ಇzರೆ. ಆದರೆ ಅವರ ಸಂಖ್ಯೆ ಎಷ್ಟು? ಎಷ್ಟು ಮಂದಿ ಅದರಲ್ಲಿ ಅನಿವಾರ್ಯವಾಗಿ ಉಳಿದುಕೊಂಡವರು. ಅವರಲ್ಲಿ ಅದೆಷ್ಟುಮಂದಿ ತಾವು ಭಾರತದ ಉಳಿದುಕೊಂಡದ್ದಕ್ಕೆ ಮುಂದೊಂದು ದಿನ ಬೇಸರಪಟ್ಟುಕೊಂಡಿಲ್ಲ? ಭಾರತ ಒಂದು ರೀತಿಯಲ್ಲಿಮೊದಲಿನಿಂದಲೂ ಟ್ಯಾಲೆಂಟ್ ತಯಾರಿಸುವ ಕಾರ್ಖಾನೆಯಾಗಿದೆಯೇ ವಿನಃ ಆ ಪ್ರತಿಭೆಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೆಲಸವೇ ಆಗಿಲ್ಲ. ಇಂದಿಗೂ ಆ ತಪ್ಪು ಮುಂದುವರಿದಿದೆ.
ಅಮೆರಿಕಾ ಮೊದಲಾದ ದೇಶಗಳು ವಿಜ್ಞಾನಿಗಳನ್ನು ಕಡಿಮೆ ಸಂಖ್ಯೆಯಲ್ಲಿ ತಯಾರಿಸುತ್ತಿದ್ದರೂ ಆವಿಷ್ಕಾರದಲ್ಲಿ ಮುಂದಿದ್ದಾರೆ.ಒಂದು ವೇಳೆ ನಮ್ಮಲ್ಲಿ ಇಂಥ ಸ್ಥಿತಿ ಸಾಧ್ಯತೆಗಳಿದ್ದರೆ ರಾಜ್‌ನಂಥ ಅದೆಷ್ಟೋ ಲಕ್ಷ ವಿಜ್ಞಾನಿಗಳು, ಸಾಧಕರು ಭಾರತದಉಳಿದುಕೊಳ್ಳುತ್ತಿದ್ದರು. ಅವರೆಲ್ಲರ ಆವಿಷ್ಕಾರ ನಮ್ಮ ದೇಶಕ್ಕೇ ಸಲ್ಲುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ – ಆದರೆ ಕಾಲ ಮಿಂಚಿಲ್ಲಎಂದು ನಾವು ಹೇಳಲು ಶುರುಮಾಡಿ ಅದೆಷ್ಟೋ ದಶಕಗಳೇ ಕಳೆದಿವೆ.
ಇಂಥ ವಿಚಾರಗಳಿಗೆ ಸಮಯ ಕೂಡಿ ಬರುವ ವರೆಗೂ ಕಾಲ ಯಾವತ್ತೂ ಮಿಂಚುವುದೇ ಇಲ್ಲ. ವಿಪರ್ಯಾಸವೆಂದರೆ ಇಂದಿಗೂ ಆ ನಿಟ್ಟಿನಲ್ಲಿ ಕೆಲಸವಾಗುತ್ತಿಲ್ಲ. ಸ್ಟಾರ್ಟ್ ಅಪ್ ಮೊದಲಾದ ಹೆಸರುಗಳಲ್ಲಿ ಹಣವನ್ನು ಎತ್ತಿಡುವ ಕೆಲಸ ಮೋದಿ ಸರಕಾರ ಬಂದಮೇಲೆ ನಡೆದಿದೆ ನಿಜ, ಆದರೆ ಇದೆಲ್ಲ ಅರೆಕಾಸಿನ ಮಜ್ಜಿಗೆಯಂತೆ ಎನ್ನುವುದು ಕೂಡ ಅಷ್ಟೇ ಸತ್ಯ. ಇಸ್ರೇಲ್ ಆಗಲಿ ಅಥವಾ ಅಮೆರಿಕಾವಿರಲಿ, ಇವ್ಯಾವ ದೇಶವೂ ಸುಮ್ಮನೆ ಇಂದು ಆ ದೇಶವಾಗಿಲ್ಲ.
2015ರ ಲೆಕ್ಕವನ್ನು ತೆಗೆದುಕೊಂಡರೆ ಭಾರತ ಪಡೆದುಕೊಂಡ ಅಂತಾರಾಷ್ಟ್ರೀಯ ಪೇಟೆಂಟ್ ಸಂಖ್ಯೆ 1423. ಇದನ್ನು ಕೇವಲ ಎನ್ನುವ ಶಬ್ದದೊಂದಿಗೆ ಹೇಳಬೇಕು. ನೆಟ್ಟಗೆ ಕರ್ನಾಟಕಾದಷ್ಟಿರದ ಜಪಾನ್ ಪಡೆದ ಪೇಟೆಂಟ್ ಸಂಖ್ಯೆ ಎಷ್ಟು ಗೊತ್ತೇ? ಬರೋಬ್ಬರಿ 44,235. ಇನ್ನು ಚೀನಾ 29.846, ದಕ್ಷಿಣ ಕೊರಿಯಾ 14,626. ಈ ಎಲ್ಲ ಸಂಖ್ಯೆಗಳು ಏನನ್ನು ಹೇಳುತ್ತಿವೆ? ಇಂಥ ನೂರು ಲೆಕ್ಕಗಳನ್ನು ನಿಮ್ಮ ಮುಂದೆ ಇಡಬಹುದು. ಇವೆಲ್ಲ ಸ್ಟಾಟಿಸ್ಟಿಕ್ಸ್‌ಗಳನ್ನು ನಮ್ಮ ಸರಕಾರವೇಕೆ ಸರಿಯಾಗಿ ಗ್ರಹಿಸುತ್ತಿಲ್ಲ? ಆರ್ಯಭಟ, ಚರಕ ಇವರೆಲ್ಲರ ನಾಡು ಎಂದು ಬೀಗುತ್ತಲೇ ಇದ್ದು ಕೈ ಕಟ್ಟಿ ಕುಳಿತರೆ ನಾವು ಖಂಡಿತವಾಗಿ ಹಿಂದೆಯೇ ಉಳಿದುಬಿಡುತ್ತೇವೆ.
ಈ ಅರಣ್ಯ ರೋಧನ ಇನ್ನೆಷ್ಟು ಕಾಲ ಮುಂದುವರಿಯಬೇಕು? ವರ್ತಮಾನದಲ್ಲಿ ಬದುಕಬೇಕು ಎಂದು ಜಗತ್ತಿಗೆ ಪಾಠ ಹೇಳುವ ಭಾರತ, ವಿಜ್ಞಾನ, ತಂತ್ರಜ್ಞಾನ ಆವಿಷ್ಕಾರದ ವಿಚಾರಗಳಲ್ಲಿ ಇನ್ನೂ ಭೂತಕ್ಕೆ ಅಂಟಿಕೊಂಡು, ನಮ್ಮದು ಇಂಥ ಇತಿಹಾಸ, ನಮ್ಮ ಹಿಂದಿನವರ ಸಾಧನೆ ಹಾಗೆ ಹೀಗೆ, ನಮ್ಮಲ್ಲಿ ಪುಷ್ಪಕ ವಿಮಾನ ಸಾವಿರ ವರ್ಷ ಮೊದಲೇ ಇತ್ತು ಎಂದೆಲ್ಲ ಹೇಳುತ್ತ ಕೈಕಟ್ಟಿ ಕುಳಿತರೆ ಮಾವಿನ ಕಾಯಿ ಏನು ಮಂತ್ರಕ್ಕೆ ಉದುರುತ್ತದೆಯೇ? ಇಂದು ಎಂಜಿನೀಯರಿಂಗ್ ಮಾಡಿ ಸಾಫ್ಟ್’ವೇರ್ ಕಂಪನಿ ಸೇರಿ ಕೊಳ್ಳುವುದು ಮಾತ್ರ ಒಳ್ಳೆಯ ಸಂಬಳ ಪಡೆಯುವುದಕ್ಕೆ ರ್ಗ ಎಂದಾಗಿಬಿಟ್ಟಿದೆ.
ಎಂಜಿನೀಯರಿಂಗ್, ಮೆಡಿಕಲ್ ಸಿಗದಿದ್ದವರು ಬಿಎಸ್ಸಿ ಮಾಡುವುದು ಎನ್ನುವ ಟ್ರೆಂಡ್ ಬಂದು ಮೂರು ದಶಕವಾಯಿತು. ಟ್ರೆಂಡ್ ಎನ್ನುವುದಕ್ಕಿಂತ ಇದು ಅನಿವಾರ್ಯ ಎಂಬಂತಾಗಿದೆ. ಬುದ್ಧಿವಂತರೆಲ್ಲ ಈ ರೀತಿ ಸಮಾಜ ಸೃಷ್ಠಿಸಿದ ಅನಿವಾರ್ಯತೆಯಿಂದ ಒಂದೋ ಡಾಕ್ಟರ್ ಆಗುತ್ತಾರೆ ಇಲ್ಲವೇ ಎಂಜಿನೀಯರ್ ಆಗುತ್ತಾರೆ. ಸಾಧನೆ ಎಂದರೆ ಸಿಇಟಿ ರಾಂಕಿಂಗ್. ಪಿಯುಸಿ ಮುಗಿಸುವ ಬುದ್ಧಿವಂತರೆಲ್ಲ ಹಂಬಲಿಸುವುದು ಎಂಜಿನೀಯರಿಂಗ್ ಅಥವಾ ಮೆಡಿಕಲ್ ಸೀಟ್ ಅನ್ನು.
ವಿಜ್ಞಾನಿಯಾಗಬೇಕು, ಆವಿಷ್ಕಾರ ಮಾಡಬೇಕು ಎನ್ನುವ ಒಬ್ಬ ಪಿಯುಸಿ ವಿದ್ಯಾರ್ಥಿಯನ್ನು ಹುಡುಕಿ ತೋರಿಸಿ ನೋಡೋಣ. ಹಾಗೊಮ್ಮೆ ಸಿಕ್ಕರೂ ಅದನ್ನು ಒಪ್ಪುವ, ಬೆಂಬಲಕ್ಕೆ ನಿಲ್ಲುವ ಒಬ್ಬ ತಂದೆ ತಾಯಿಯನ್ನು ಹುಡುಕಿ ತೋರಿಸಿ ನೋಡೋಣ. ಎಲ್ಲರಿಗೂ ಸಂಬಳಬರುವ ಕೆಲಸ ಬೇಕು. ಜೀವನದಲ್ಲಿ ದೃಢತೆ ಬೇಕು. ಅದರಲ್ಲಿ ತಪ್ಪೇ ಇಲ್ಲ. ಆದರೆ ಪರಿಸ್ಥಿತಿಯೇ ಹೀಗಿರುವಾಗ, ಅನಿಶ್ಚಿತತೆಯಿರುವ ಈ ಹಾದಿಯನ್ನು ಬುದ್ಧಿವಂತರಾದ ಯಾರು ಆರಿಸಿಕೊಳ್ಳುತ್ತಾರೆ? ಇದಕ್ಕೆಲ್ಲ ಕಾರಣ ಏನು? ಅನಿವಾರ್ಯತೆ? ಅವಕಾಶದ ಕೊರತೆ? ವಾತಾವರಣವಿಲ್ಲದಿರುವುದು? ಆವಿಷ್ಕಾರದ ಹಾದಿಯನ್ನೇ ತುಳಿಯದ ಸ್ಥಿತಿ ನಮ್ಮಲ್ಲಿರುವಾಗ ಆವಿಷ್ಕಾರ ಆಗುವುದಾದರೂ ಹೇಗೆ ಸ್ವಾಮಿ? ಈಗಂತೂ ಜಗತ್ತಿಗೆ ಸರ್ವಿಸ್ ದೇಶವಾಗಿಬಿಟ್ಟಿದೆ ಭಾರತ.
ಅಗ್ಗದ ಬೆಲೆಗೆ ಸಾಫ್ಡ್ವೇರ್ ಕೆಲಸ ಮಾಡಿಕೊಡುವುದು, ಕಡಿಮೆ ದರಕ್ಕೆ ಬೇರೆ ದೇಶಗಳ ಸೆಟಲೈಟ್ ಅನ್ನು ಒಯ್ಯುವುದು, ಅಗ್ಗಕ್ಕೆ ಜಗತ್ತಿಗೆ ಔಷಧಿ ತಯಾರಿಸಿಕೊಡುವುದು ಇವೆಲ್ಲ ನಮ್ಮ ತೃಪ್ತಿ ಮತ್ತು ಹೆಮ್ಮೆ. ಹುಹ್ಹ್..