ಗ್ರಂಥಾಲಯ ನಿಯಮ, ಪ್ರಕಾಶಕರ ಹೇಳತೀರದ ಗೋಳುಗಳು !
ಅಭಿಪ್ರಾಯ
ಜಗದೀಶ ಹಾದಿಮನಿ
ಸರಕಾರದ ಆದೇಶದಂತೆ ’ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಾಲಯಗಳಿಗೆ ಏಕಗವಾಕ್ಷಿ ಯೋಜನೆಯಡಿ’ ಲೇಖಕಅಥವಾ ಪ್ರಕಾಶಕರ 300 ಪುಸ್ತಕಗಳನ್ನು ಖರೀದಿಸುವುದು ಸ್ವಾಗತಾರ್ಹ.
ಮುಂದಿನ ದಿನಮಾನಗಳಲ್ಲಿ ಇದನ್ನು 500ಕ್ಕೆ ಹೆಚ್ಚಿಸಲು ನಿರ್ಧರಿಸಿರುವುದು ಇನ್ನೂ ಒಳ್ಳೆಯ ಬೆಳವಣಿಗೆ. ಆದರೆ, ಆಯ್ಕೆಯಾದ ಕೃತಿಗಳನ್ನು ಲೇಖಕರು, ಪ್ರಕಾಶಕರು ಅಥವಾ ಅವರ ಪರವಾಗಿ ಬೇರೆ ಯಾರಾದರೂ ಬೆಂಗಳೂರಿನ ಕೇಂದ್ರ ಗ್ರಂಥಾಲಯಕ್ಕೆ ಖುದ್ದಾಗಿ ತಂದುಕೊಡಬೇಕೆಂದು ಆದೇಶಿಸುವುದು/ಆದೇಶಿಸಿರುವುದು ಎಷ್ಟರಮಟ್ಟಿಗೆ ಸರಿಯಾದುದು? ಎಲ್ಲಿಯ ಬೀದರ್, ಎಲ್ಲಿಯ ಬೆಂಗಳೂರು!
ಎಲ್ಲಿಯ ಉತ್ತರ ಕರ್ನಾಟಕ, ಎಲ್ಲಿಯ ರಾಜಧಾನಿ? ಬೆಂಗಳೂರು ಕರ್ನಾಟಕ ಬಿಟ್ಟೇನಿಲ್ಲ. ಎಷ್ಟೋ ಜನ ಲೇಖಕ, ಪ್ರಕಾಶಕರಿಗೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಇದು ಅಸಾಧ್ಯವಾಗಬಹುದು. ಎಷ್ಟೋ ಸರಕಾರಿ ನೌಕರರಿಗೆ ರಜೆ ಹಾಕಲು ಆಗದಿರಬಹುದು. ಅಥವಾ ಮೇಲಾಧಿಕಾರಿಗಳು ರಜೆಯನ್ನೇ ನಿರಾಕರಿಸಬಹುದು. ಇಂಥ ಸಂದರ್ಭದಲ್ಲಿ ಬೇರೆಯವರನ್ನು ಒಪ್ಪಿಸಿ ಕಳಿಸಲುಸಾಧ್ಯವೆ? ಕೇಳಿದ ಕೂಡಲೇ ಅವರು ಒಪ್ಪಿ ಹೋಗುವರೆ? ಒಪ್ಪಿದರೂ ಅವರು ಕೇಳಿದಷ್ಟು ಹಣಕ್ಕೆ ಅನಿವಾರ್ಯವಾಗಿ ಒಪ್ಪಲೇಬೇಕಾಗುತ್ತದೆ.
ಅವರು, ನಾವು ಹೇಳಿದ ವಿಳಾಸಕ್ಕೆ ಸರಿಯಾದ ಸಮಯದೊಳಗೆ ಮುಟ್ಟಿಸುತ್ತಾರೆಂಬ ಯಾವ ಭರವಸೆಯೂ ಇಲ್ಲ. ತಲುಪಿಸ ದಿದ್ದಾಗ ಅವರಿಗೆ ಏನೂ ಅನ್ನುವಂತಿಲ್ಲ. ಅಂದರೂ ಯಾವ ಪ್ರಯೋಜನವೂ ಇಲ್ಲ. ಇಂಥ ವಿಷಮ ವಾತಾವರಣದಲ್ಲಿ ಲೇಖಕ/ಪ್ರಕಾಶಕರಿಗೆ ಉಳಿದಿರುವ ಆಶಾಕಿರಣದ ಮಾರ್ಗವಾದರೂ ಯಾವುದು? ಕೇವಲ ಹಣದ ದೃಷ್ಟಿಯಿಂದ ಮಾತ್ರ ಈ ಮಾತನ್ನು ಹೇಳುತ್ತಿಲ್ಲ; ಸಮಯದ ದೃಷ್ಟಿಯಿಂದಲೂ ಕೂಡಾ.
ಎಷ್ಟೋ ಲೇಖಕ/ಪ್ರಕಾಶಕರು ವಿಕಲಚೇತನರಿರುತ್ತಾರೆ. ಸರಕಾರದ ಈ ಹಣವನ್ನೇ ನಂಬಿ ಕುಳಿತವರೂ ಇರುತ್ತಾರೆ. ಹೀಗಿರುವಾಗ ಅವರ ಗೋಳು ಕೇಳುವರ್ಯಾರು? ನೀವು ಹೇಳಿದ ಸ್ಥಳಕ್ಕೆ ಪುಸ್ತಕಗಳನ್ನು ಖುದ್ದಾಗಿ ತಂದುಕೊಡಿಯೆಂದು ಆದೇಶಿಸಿದಂತೆಅವರಿರುವ ಸ್ಥಳಕ್ಕೇನೇ ಆಗಮಿಸಿ ಆ ಕೃತಿಗಳ ಒಟ್ಟು ಹಣವನ್ನು ತಂದುಕೊಡಿಯೆಂದು ಲೇಖಕ/ಪ್ರಕಾಶಕರು ದಾವೆ ಹೂಡಿದರೆ! ಹೇಳಿದರೆ ಹೇಗಾಗಬಹುದು? ಆಗ ಸರಕಾರ, ಯಾರಿಗೆ ಬೇಕಿದೆ ನಿಮ್ಮ ಪುಸ್ತಕ; ಅಲ್ಲೇ ಮನೆಯಲ್ಲಿಟ್ಟುಕೊಂಡು ಆರಾಮಾಗಿ ಕೂಡಿಯೆಂದೇ ಹೇಳಬಹುದೇನೋ!
ಏನೇ ಇರಲಿ, ಖುದ್ದಾಗಿ ತಂದು ಒಪ್ಪಿಸಿಯೆಂದು ಆದೇಶಿಸುವುದರ ಬದಲಿಗೆ ಅಂಚೆ/ಕೊರಿಯರ್ ಮೂಲಕವೂ ಸರಬರಾಜು ಮಾಡಬಹುದೆಂದು ಕೇಳಿಕೊಳ್ಳುವುದೂ ಸರಿಯಾದ ಕ್ರಮವಾದೀತೇನೋ! ಯಾರೋ ನಾಲ್ಕಾರು ಲೇಖಕ/ಪ್ರಕಾಶಕರು ಹತ್ತಾರು ಕೃತಿಗಳನ್ನು ಕಡಿಮೆಯಿಟ್ಟು ಕಳಿಸಿದ ಮಾತ್ರಕ್ಕೆ ಉಳಿದ ಶೇ.90ರಷ್ಟು ಜನಕ್ಕೆ ಅದನ್ನು ಅನ್ವಯಿಸುವುದು ಎಷ್ಟು ಸಮಂಜಸ? ಈಗ, ಮಾಧ್ಯಮಗಳು ಮುಂದುವರೆದ ಕಾರಣ ಎಲ್ಲರ ಬಳಿ ಅವರ ಫೋನ್ ನಂಬರ್ ಇದ್ದೇ ಇರುತ್ತವೆ. ಆಗ, ಅಂತವರನ್ನಷ್ಟೇ ಸಂಪರ್ಕಿಸಿ, ಕೇಳಿ ಸರಿಪಡಿಸಿಕೊಳ್ಳಬಹುದು. ಅಥವಾ ಬಾಕ್ಸ್ ಮಾಡುವಾಗಿನ ವಿಡಿಯೊ ಮಾಡಿ ಕಳಿಸಿ ಎಂದರೂ ನಡೆದೀತು.
ಎಲ್ಲರ ವಿಡಿಯೊನೂ ನೋಡಬೇಕೆಂದೇ ನಿಲ್ಲ. ಕಡಿಮೆಯಿದೆಯೆಂದರೆ, ಬಾಕ್ಸ್ ತುಂಬುವಾಗಿನ ಅವರ ವಿಡಿಯೊ ನೋಡ ಬಹುದು. ಅದಕ್ಕಾದರೂ ಸರಿಯಾದ ಪುಸ್ತಕದ ಲೆಕ್ಕ ಕೊಟ್ಟಾರು; ವಿಡಿಯೊ ಮಾಡಿ ಕಳಿಸಿದವರ್ಯಾರೂ ಮೋಸ ಮಾಡುವು ದಿಲ್ಲವೆಂದೇ ನಿಲ್ಲ. ವಿಡಿಯೊ ಮಾಡುವಾಗ ಬಾಕ್ಸ್‌‌ನಲ್ಲಿ ಸರಿಯಾದ ಸಂಖ್ಯೆಯ ಪುಸ್ತಕದ ಲೆಕ್ಕವಿಟ್ಟು ನಂತರ ಓಪನ್ ಮಾಡಿ ಅದರಲ್ಲಿನ ಪುಸ್ತಕಗಳನ್ನ ತೆಗೆದು ಕಳಿಸುವ ಪಂಡಿತ ವರ್ಗಕ್ಕೇನೂ ಕಡಿಮೆಯಿಲ್ಲ, ಅಮೃತದೊಳಿದ್ದರೂ ಮಣ್ಣು ತಿನ್ನೋ ಹಾಪ್ರಭುಗಳು ಇರೋರೆ!
ಅವರಿಗಾಗಿ, ಇಡೀ ಲೇಖಕ/ಪ್ರಕಾಶಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋದು ಎಷ್ಟು ಸರಿ? ಲೇಖಕ/ಪ್ರಕಾಶಕರಿಗೆ ಎರಡುಮೂರು ಸಾವಿರ ರುಪಾಯಿಯೇನು ಮಹಾ ಎನಿಸದಿದ್ದರೂ ಖುದ್ದಾಗಿ ಬೆಂಗಳೂರಿಗೆ/ನೀವು ಹೇಳಿದ ಸ್ಥಳಕ್ಕೆ ತಂದುಕೊಡುವುದಂತೂ ಮಹಾದೊಡ್ಡ ತೊಂದರೆಯೇನೇ. ಕೇಂದ್ರ ಗ್ರಂಥಾಲಯಕ್ಕೆ ಸರಬರಾಜು ಆದ ಗ್ರಂಥಗಳೆಲ್ಲವೂ ಹೆಚ್ಚು-ಕಡಿಮೆ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಸರಬರಾಜು ಆಗುವುದು ನಿಶ್ಚಿತ.
ಆದ್ದರಿಂದ ಆಯ್ಕೆಯಾದ ಪುಸ್ತಕಗಳನ್ನು ಆಯಾ ಲೇಖಕ/ಪ್ರಕಾಶಕರಿಗೆ ಅವರದೇ ಜಿಲ್ಲೆ/ ಅನುಕೂಲಕರವಾದ ಜಿಲ್ಲಾ/ತಾಲೂಕು ಕೇಂದ್ರ ಗ್ರಂಥಾಲಯಗಳಿಗೆ ಸರಬರಾಜು ಮಾಡಲು ಹೇಳಿದರೆ ಬಹು ಉಪಕಾರವಾದೀತು. ಈಗಂತೂ  ನಲ್ಲಿಯೇ ಎಲ್ಲಾ ಮಾಹಿತಿ ಸಿಗುವುದರಿಂದ ಇದು ಕಷ್ಟಕರವಾಗಲಾರದು. ಬಸ್-ಟ್ರೈನ್‌ಗಳಿಗೆ ಮುಂಗಡ ಟಿಕೆಟ್‌ಗಳನ್ನು ಇದೇ ಆಧಾರದ ಮೇಲಲ್ಲವೇ ಕಾಯ್ದಿರಿಸುವುದು? ಸರಕಾರವು ಈ ಕಡೆಗೊಮ್ಮೆ ಕಣ್ತೆರೆದು ಲೇಖಕ/ಪ್ರಕಾಶಕರಿಗೆ ಆಗುವ ತೊಂದರೆಗೆ ಪರಿಹಾರ ಕಂಡುಕೊಂಡರೆ ಸೂಕ್ತವಾದೀತು.
ಅಷ್ಟೇ ಅಲ್ಲ ಎಷ್ಟೋ ಲೇಖಕ/ಪ್ರಕಾಶಕರಿಗೆ ರಾಜಧಾನಿ ಬೆಂಗಳೂರು ಅಪರಿಚಿತ ಸ್ಥಳವಾಗಿದ್ದರಿಂದ ಪುಸ್ತಕಗಳ ಬಾಕ್ಸ್‌ಅ‌ನ್ನು ತೆಗೆದುಕೊಂಡು ಹೋದಾಗ ಆಟೋ/ಟ್ಯಾಕ್ಸಿಯವರೂ ಕೂಡ ವಿಪರೀತ ಬೆಲೆಯನ್ನು ಹೇಳಿ ಕಂಗಾಲುಗೊಳಿಸುವುದು/ ನಾಲ್ಕಾರು ಕಿಮೀಗೆ ಆರೆಂಟು ನೂರು ಕೇಳುವವರೂ ಉಂಟು. ಮೊದಲ ಸಲ ಹೋದಾಗ, ಅವರು ಕೇಳಿದಷ್ಟು/ಚೌಕಾಸಿ ಮಾಡಿ ಕೊಟ್ಟು ಬಂದವರೂ ಸಾಕಷ್ಟಿದ್ದಾರೆ.
ಮುಗ್ಧರನ್ನೇ ಬಂಡವಾಳವಾಗಿಸಿಕೊಂಡು ಸುಲಿಗೆ ಮಾಡುವವರಿಗೇನೂ ಕೊರತೆಯಿಲ್ಲ. ಇವರಿಂದಾಗಿಯೇ ಲೇಖಕ/ ಪ್ರಕಾಶಕ ರಿಗೆ ತೊಂದರೆ ಯೆಂದು ಹೇಳುತ್ತಿಲ್ಲ; ಹಾಗಾಗಲು ಸಾಧ್ಯವೂ ಇಲ್ಲ. ಕಾಲಕಾಲಕ್ಕೆ ತಾವು ತೆಗೆದುಕೊಳ್ಳುವ ಲೇಖಕ/ ಪ್ರಕಾಶಕರ ವಿರೋಧ ನೀತಿಗಳೇ ಇಂತಹವುಗಳಿಗೆಲ್ಲಾ ನೇರ ಹೊಣೆಯೆಂದು ಹೇಳುವುದಷ್ಟೇ ನನ್ನ ಉದ್ದೇಶ.
ಒಮ್ಮೊಮ್ಮೆ ಪುಸ್ತಕಗಳನ್ನು ಸರಬರಾಜು ಮಾಡಲು ಹೇಳಿದ ಸ್ಥಳ ಸಾಕಷ್ಟು ದೂರವಿರುತ್ತದೆ. ಕಾರಣ: ಪ್ರತಿವರ್ಷ ಸರಬರಾಜು ಆಗುವ ಪುಸ್ತಕಗಳನ್ನು ಸಂಗ್ರಹಿಸುವುದೇ ಒಂದು ಹರಸಾಹಸ. ಅವುಗಳ ಹೊಸಹೊಸ ಉಗ್ರಾಣಗಳನ್ನು ಹುಡುಕಬೇಕಾಗುತ್ತದೆ.ಅಲ್ಲಿಗೆ ತಲುಪಿದೊಡನೆಯೇ ಸರದಿ ಬರುತ್ತದೆಂಬ ನಿಯಮವಿಲ್ಲ. ಬೆಳಗ್ಗೆೆಯಿಂದ ರಾತ್ರಿಯವರೆಗೆ ಕಾಯುವ ಪ್ರಸಂಗವೂ ಬರಬಹುದು. ಎಷ್ಟೋ ಪ್ರಕಾಶಕ/ಲೇಖಕರು ಅವರು ಹೇಳಿದ ದಾಖಲೆಗಳನ್ನೆಲ್ಲಾ ತಂದಿದ್ದರೂ ಸರಿಯಿಲ್ಲವೆಂದು ಹೇಳಿದಾಗಲೋ/ ಆಕಸ್ಮಿಕವಾಗಿ ಕಾಗದ ಪತ್ರಗಳು ಸರಿಯಿಲ್ಲದ ಸಮಯದಲ್ಲಿ ಬೇರೆ ಕಂಪ್ಯೂಟರ್ ಕಾಪಿ ತೆಗೆದುಕೊಂಡುಬನ್ನಿಯೆಂದಾಗಲೋ ಆಗವರು ಹುಡುಕಿಕೊಂಡು ಹೋಗಬೇಕೆಲ್ಲಿ? ಜನನಿಬಿಡ ಪ್ರದೇಶದಲ್ಲಿದ್ದರೆ ಅಷ್ಟೊಂದು ತೊಂದರೆ ಯಾಗದು. ಅಧಿಕಾರಿಗಳಿಗೆ ನಮ್ಮನ್ನು ಕಾಡಬೇಕೆನ್ನುವ ಉದ್ದೇಶವಿರದಿದ್ದರೂ ಆ ಸಂದರ್ಭದಲ್ಲಾಗುವ ತೊಂದರೆಯೇನೂ ಸಣ್ಣದಲ್ಲ.
ಅವರು ಕಳಿಸಿದ ಪತ್ರದೊಂದಿಗೆ ಅವರು ಕೇಳಿದಷ್ಟು ಪುಸ್ತಗಳು, ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್, ಪಾನ್‌ಕಾರ್ಡ್ ಮುಖ್ಯವಾಗಿ ಉಳಿದವು ನಗಣ್ಯವಾದರೂ ಒಂದೊಂದು ಸಲ ಎಲ್ಲವೂ ಗಣನೆಗೆ ಬಂದು ವಿನಾಕಾರಣ ತೊಂದರೆ ಅನುಭವಿಸಬೇಕಾಗಬಹುದು. ಹರಿದ/ಹಾಳಾದ/ಕಡಿಮೆ ದರ್ಜೆ ಕಾಗದ ಪುಸ್ತಕಗಳನ್ನು ತಿರಸ್ಕರಿಸುವ ಹಕ್ಕು ಅಧಿಕಾರಿಗಳಿಗುಂಟು. ಕೆಲವರು ಅಲ್ಲಿಯ ಗುಮಾಸ್ತರಿಗೆ ಹಣ ಕೊಟ್ಟರೆ ಸಾಕು, ಎಂಥ ಪುಸ್ತಕಗಳಿದ್ದರೂ ನಡೆಯುತ್ತೆ.
ಸರದಿಯೂ ಬೇಗ ಬರುತ್ತೆ’ ಅಂತಾ ಹೇಳುವರು. ಇದು ನನ್ನ ಅನುಭವಕ್ಕೆಬಾರದು. ಕಾರಣವೇ ಇಲ್ಲದೆ ಅವರ ಮೇಲೆ ಆರೋಪಮಾಡಲಾರೆ. ನಾವೂ ಅಷ್ಟೆೆ. ಕೋಟೆ ಕೊಳ್ಳೆ ಹೊಡೆದವರನ್ನು ನೋಡದೆ, ಕೊಳ್ಳೆ ಹೊಡೆಯುವಾಗ ಹಾದಿ-ಬೀದಿಯಲ್ಲಿ ಬಿದ್ದದ್ದನ್ನು ಆಯ್ದುಕೊಂಡವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದುಂಟು. ಹಾಗೆ ನೋಡಿದರೆ ಎರಡೂ ತಪ್ಪೆ. ಸಣ್ಣದನ್ನೇ ದೊಡ್ಡದನ್ನಾಗಿ ಬಿಂಬಿಸುವುದು ಬಡಾಯಿಪ್ರಿಯರು ಬಿಡಬೇಕಷ್ಟೇ.
ಎಚ್ಚೆತ್ತುಕೊಳ್ಳದಿದ್ದರೆ ಎಚ್ಚರಿಸುವು ದಂತೂ ಸರಿ. ಅವರು ಬೇಡವೆಂದರೂ/ಬೇಡಿದರೂ ಚಹಕ್ಕೋ-  ಉಪಹಾರಕ್ಕೋ ಕೊಟ್ಟಿದ್ದನ್ನೇ ದೊಡ್ಡದಾಗಿ ಹಲಗೆ ಬಾರಿಸುವವರು ನಮ್ಮಲ್ಲೇನು ಕಡಿಮೆಯಿಲ್ಲ. ಈಗಂತೂ ಬಸ್ ಮುಷ್ಕರವಿರುವ ಸಂದರ್ಭ ದಲ್ಲಿ ಹೇಳಿದ ಸ್ಥಳಕ್ಕೆ/ಸಮಯಕ್ಕೆ ಕೃತಿಗಳನ್ನು ತಲುಪಿಸಲು ಅನುಭವಿಸುವ ನರಕಯಾತನೆ ಹೇಳತೀರದು.
ಒಮ್ಮೊಮ್ಮೆ ಎರಡು-ಮೂರು ದಿನ ತಡವಾಗಿ ಹೋದರೂ ಸ್ವೀಕರಿಸಿದ ಉದಾರಿಗಳೂ ಕೇಂದ್ರ ಗ್ರಂಥಾಲಯದ ಅಧಿಕಾರಿ ಗಳಲ್ಲುಂಟು. ಆದರೆ ಅಲ್ಲಿಗೆ ಖುದ್ದಾಗಿ ತಲುಪಿಸಬೇಕಾದದ್ದೇ ದೊಡ್ಡ ತಲೆನೋವು. ಸರಕಾರವೇ ಶೀಘ್ರ ಎಚ್ಚೆತ್ತು ಸಮೀಪದ ತಾಲೂಕು/ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿಯೇ ಲೇಖಕ/ ಪ್ರಕಾಶಕರು ತಮ್ಮ ಪುಸ್ತಕಗಳನ್ನು ಸರಬರಾಜು ಮಾಡುವ/ ಅಂಚೆ-ಕೊರಿಯರ್ ಮೂಲಕ ಕಳಿಸಿ ಕೊಡಲು ತೀರ್ಮಾನಿಸುವ ವ್ಯವಸ್ಥೆ ತೆಗೆದುಕೊಳ್ಳುವುದು ಸೂಕ್ತ.
ಹಣ ಬೇಕಾದರೆ ತಿಂಗಳು ತಡವಾಗಿ ಜಮೆಯಾದರೂ ನಡೆಯುತ್ತೆ. ಲೇಖಕ/ಪ್ರಕಾಶಕರು ಪ್ರಕಟಿಸಿದ ಕೃತಿಗಳನ್ನು ಕೇಂದ್ರ ಗ್ರಂಥಾಲಯ/ ಸರಕಾರ ಖರೀದಿಸಲು ಮೂರು ವರ್ಷದ ದೀರ್ಘ ಸಮಯವನ್ನೇ ತೆಗೆದುಕೊಳ್ಳುತ್ತದೆ. ಅಷ್ಟು ವರ್ಷ ಮನೆ ಯಲ್ಲಿಟ್ಟೇ ಪುಸ್ತಕಗಳನ್ನು ಕಾಯ್ದವರಿಗೆ ಒಂದು ತಿಂಗಳೇನೂ ದೊಡ್ಡದ್ದಲ್ಲ. ಯಾವುದಕ್ಕೂ ಸರಕಾರವು ಪೂರ್ವಾಪರ ಯೋಚಿಸಿ, ಲೇಖಕ/ಪ್ರಕಾಶಕರಿಗೆ ಆಗುವ ತೊಂದರೆಗೆ ಸ್ಪಂದಿಸಿ, ನಿವಾರಿಸುವುದೆಂಬ ಭರವಸೆಯಿದೆ. ಏನಾಗುವುದೋ ಕಾದು ನೋಡೋಣ.