ಗಡಿ ಭದ್ರತಾ ಪಡೆಗೆ ಕರುನಾಡ ಸಹೋದರಿಯರು
ಅಭಿಮತ
ಚಂದ್ರಶೇಖರ ಬೇರಿಕೆ
ಭಾರತೀಯ ನಾಗರಿಕರು ಮತ್ತು ಸೈನ್ಯದ ನಡುವಿನ ನಂಟು ಭಾವನಾತ್ಮಕ ವಾದುದು. ಸೇನೆ ಎಂದಾಕ್ಷಣ ಪ್ರತಿ ಭಾರತೀಯನ ಮೈ ರೋಮಾಂಚನಗೊಳ್ಳುತ್ತದೆ.
ದೇಶಾಭಿಮಾನವನ್ನು ಬಡಿದೆಬ್ಬಿಸುತ್ತದೆ. ಒಂದು ಕ್ಷಣ ನಮ್ಮನ್ನು ಮಂತ್ರ ಮುಗ್ದರನ್ನಾಗಿಸುವ ಮತ್ತು ನಮಗರಿ ವಿಲ್ಲದಂತೆ ನಮ್ಮಲ್ಲಿ ಭಕ್ತಿಭಾವವನ್ನು ಮೂಡಿಸುವ ಭಾರತೀಯ ಸೇನೆ ಒಂದು ಅದ್ಭುತ ಶಕ್ತಿ. ದೇಶದ ಸೈನ್ಯಕ್ಕಾಗಿ ಸಲ್ಲಿಸುವ ಸೇವೆ ಅತ್ಯಂತ ಪವಿತ್ರವಾದದ್ದು. ದೇಶ ಸೇವೆ ಎಂದರೆ ನಮ್ಮ ಮುಂದೆ ತೆರೆದುಕೊಳ್ಳುವ ಪರದೆಯಲ್ಲಿ ಪ್ರಥಮವಾಗಿ ಪ್ರತ್ಯಕ್ಷವಾಗುವುದು ಮತ್ತುನಾವು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದು ಭಾರತದ ಸೈನ್ಯದಲ್ಲಿ ಸಲ್ಲಿಸುವ ಸೇವೆ ಮತ್ತು ಸೈನಿಕರು.
ಜನ್ಮ ನೀಡಿದ ತಾಯಿ ಮತ್ತು ಜನ್ಮಸ್ಥಾನ ಭಾರತವನ್ನು ಪ್ರತಿಯೊಬ್ಬ ಭಾರತೀಯನೂ ತಾಯಿಯೆಂದೇ ಪೂಜಿಸುತ್ತಾರೆ. ಅಂತೆಯೇ ನಮ್ಮ ಕೆಚ್ಚೆೆದೆಯ ಸೈನಿಕರ ಮನದಲ್ಲಿರುವುದು ತಾಯಿ ಭಾರತಾಂಬೆಯ ರಕ್ಷಣೆ. ಇದು ಈ ದೇಶದ ಮಣ್ಣಿನ ಗುಣ ಮತ್ತು ಶ್ರೇಷ್ಟತೆ. ನಮ್ಮ ದೇಶದ ಮತ್ತು ದೇಶವಾಸಿಗಳ ರಕ್ಷಣೆಯ ಧ್ಯೇಯವನ್ನು ಮೈಗೂಡಿಸಿಕೊಂಡು ತನ್ನ ಜೀವನವನ್ನು ತ್ಯಾಗ, ಬಲಿದಾನ ಕ್ಕೆಂದೇ ಮುಡಿಪಾಗಿಟ್ಟಿರುವ ನಿಸ್ವಾರ್ಥ, ನಿಷ್ಕಲ್ಮಶ ಮನಸ್ಸಿನಿಂದ ಸೇವೆ ಸಲ್ಲಿಸುವ ನಮ್ಮ ಸೈನಿಕರು ಸದಾ ಸ್ಮರಣೀಯರು.
ಇಂತಹ ಸೇವೆಯಲ್ಲಿ ತೊಡಗಿಸಿ ಕೊಂಡು ತಮ್ಮನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಡಲು ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಗೆ ಸೇರಿಕೊಂಡಿದ್ದಾರೆ ಕರುನಾಡಿನ ಹೆಮ್ಮೆಯ ಸಹೋದರಿಯರು. ಭಾರತೀಯ ಗಡಿ ಭದ್ರತಾ ಪಡೆಗೆ ಏಪ್ರಿಲ್ 1,2021ರಂದು ಮಧ್ಯಪ್ರದೇಶದ ಗ್ವಾಲಿಯರ್‌ನ ತೇಕನ್ಪುರ್‌ನಲ್ಲಿ ಸೇರ್ಪಡೆಗೊಳ್ಳಲು ಕರ್ನಾಟಕದಿಂದ ಆಯ್ಕೆಯಾದ ಯುವತಿಯರ ಪೈಕಿ ಇಬ್ಬರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಮಲೆಕೆರ್ಚಿ ಮೇದಪ್ಪ ಗೌಡಮತ್ತು ದೇವಕಿಯವರ ಪುತ್ರಿ ಯೋಗಿತಾ ಎಂ ಹಾಗೂ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪದ್ಮಯ್ಯ ಗೌಡ ಹಾಗೂ ತೇಜವತಿ ದಂಪತಿ ಪುತ್ರಿ ರಮ್ಯಾ ಡಿ ಎಂಬವರೇ ಈ ಇಬ್ಬರು ವೀರ ವನಿತೆಯರು. ಈ ಪೈಕಿ ಯೋಗಿತಾ ಎಂ. ಅವರು  ಮೈಕ್ರೋ ಬಯಾಲಾಜಿ ವಿಷಯದಲ್ಲಿ ಎಂ.ಎಸ್‌ಸಿ ಪದವೀಧರೆಯಾದರೆ ರಮ್ಯಾ ಡಿ ಯವರು ಬಿಎಸ್‌ಸಿ ಪದವೀಧರೆಯಾಗಿದ್ದು, ಕಳೆದವರ್ಷ ಮೆಡಿಕಲ್ ಪರೀಕ್ಷೆಯನ್ನು ಬರೆದಿದ್ದಾರೆ. ಅಲ್ಲದೇ ಕಾಲೇಜು ದಿನಗಳಲ್ಲಿ ಎನ್‌ಸಿಸಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು. ಈ ಇಬ್ಬರನ್ನು
ನಾನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿ ಶುಭ ಹಾರೈಸುವ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಸೈನ್ಯದಲ್ಲಿ ಸೇವೆ ಸಲ್ಲಿಸುವ ಅವಕಾಶ  ದಗಿ ಬಂದಿರುವುದು ನಮಗೆ ಹೆಮ್ಮೆೆಯ ವಿಚಾರ. ಸೇನೆಗೆ ಸೇರುವ ವಿಚಾರದಲ್ಲಿ ಪೋಷಕರ ಬೆಂಬಲ,ಪ್ರೋತ್ಸಾಹ ನಮಗೆ ಸಹಕಾರಿಯಾಯಿತು. ನಮ್ಮ ಕುಟುಂಬದ ಸದಸ್ಯರೂ, ಸಂಬಂಧಿಕರೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವುದು ನಮಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡಿತ್ತು ಎಂಬ ವಿಚಾರವನ್ನು ಬಹಳ ಸಂತಸದಿಂದ ಹಂಚಿಕೊಂಡರು. ನಾವು ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿ ತರಬೇತಿಯಲ್ಲಿದ್ದು, ಮಾಹಿತಿಯ ಪ್ರಕಾರ ಕರ್ನಾಟಕದ ಸುಮಾರು 72 ಅಭ್ಯರ್ಥಿಗಳು ಈಬಾರಿಯ ಬಿಎಸ್‌ಎಫ್ ತರಬೇತಿಯಲ್ಲಿದ್ದೇವೆ. ಇಲ್ಲಿ ತರಬೇತಿ ಪೂರ್ಣಗೊಳ್ಳುತ್ತಿದ್ದಂತೆ ದೇಶದ ಗಡಿ ಕಾಯಲು ತೆರಳಲಿದ್ದೇವೆ ಎಂದು ತುಂಬಾ ಅಭಿಮಾನದಿಂದ ಹೇಳಿಕೊಂಡರು.
ಭಾರತದ ಪ್ರಾಥಮಿಕ ಗಡಿ ರಕ್ಷಣಾ ಸಂಘಟನೆಯಾದ ಬಿಎಸ್‌ಎಫ್ ಭಾರತದ ಒಕ್ಕೂಟದ ಐದು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಂದಾಗಿದ್ದು, ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ಭಾರತದ ಗಡಿಯನ್ನು ಕಾಯುವ ಗಡಿ ಕಾವಲು ಸಂಸ್ಥೆಯಾಗಿದೆ.
’ಜೀವನ ಪರ್ಯಂತ ಸೇವೆ’ ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಪಡೆಯು 1965 ರ ಡಿಸೆಂಬರ್ 1 ರಂದು  ಸ್ಥಾಪನೆಯಾ ಗಿದ್ದು, ಇದು ಗೃಹ ವ್ಯವಹಾರಗಳ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತದೆ. 2008 ರವರೆಗೆ ಈ ಪಡೆಯಲ್ಲಿ ಮಹಿಳೆಯರಿಗೆ ಅವಕಾಶವಿರಲಿಲ್ಲ. ಭಾರತೀಯ ಸೇನೆ ಎಂದಾಕ್ಷಣವೇ ಸಾಮಾನ್ಯವಾಗಿ ಅಲ್ಲಿ ಕಾರ್ಯ ನಿರ್ವಹಿಸುವುದು ಪುರುಷರು ಎಂಬ ಕಲ್ಪನೆ ಹಲವರಲ್ಲಿದೆ ಮತ್ತು ಈಗಲೂ ಅಂತಹ ಅಭಿಪ್ರಾಯ ಜನ ಸಾಮಾನ್ಯರಲ್ಲಿ ಮನೆ ಮಾಡಿದೆ.
ಆದರೆ ಕೆಲ ವರ್ಷಗಳಿಂದ ಸೇನೆಯಲ್ಲಿ ಮಹತ್ತರ ಸುಧಾರಣೆಗಳಾಗಿದ್ದು, ಮಹಿಳೆಯರಿಗೂ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. 2008ರಿಂದ ಗಡಿ ಭದ್ರತಾ ಪಡೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿಮಹಿಳೆಯರು ಈ ಪಡೆಯನ್ನು ಸೇರ್ಪಡೆಯಾಗುತ್ತಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಫೆಬ್ರವರಿ 2021ರ ಅಂಕಿ ಅಂಶಗಳ ಪ್ರಕಾರ ಗೆಜೆಟೆಡ್ ಶ್ರೇಣಿಯಲ್ಲಿ 140 ಮತ್ತು ನಾನ್ ಗೆಜೆಟೆಡ್ ಶ್ರೇಣಿಯಲ್ಲಿ 5179 ರಂತೆ ಒಟ್ಟು 5319 ಮಹಿಳಾ ಸಿಬ್ಬಂದಿಗಳುಬಿಎಸ್‌ಎಫ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಭಾರತದ ಗಡಿ ಭದ್ರತಾ ಪಡೆ ಸ್ಥಾಪನೆಗೊಂಡ ಬಳಿಕ ಈ ಪಡೆಯ ಗೆಜೆಟೆಡ್ ಶ್ರೇಣಿಯ ಪ್ರಥಮ ಮಹಿಳಾ ಅಸಿಸ್ಟೆೆಂಟ್ ಕಮಾಂಡೆಂಟ್ ಪದವಿ ಪಡೆದವರು ಜಸ್ತಾನದ ತನುಶ್ರೀ ಪಾರ್ರೀಖ್. ಆ ಬಳಿಕ ಎರಡನೇ ಮಹಿಳಾ ಅಸಿಸ್ಟೆೆಂಟ್ ಕಮಾಂಡೆಂಟ್ ಆಗಿ ಹುದ್ದೆಯನ್ನು ಅಲಂಕರಿಸಿದ ಕೀರ್ತಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿ ನಂಗ ಡಿಯ ಸ್ಪೂರ್ತಿ ಭಟ್ ಎಂಬವರಿಗೆ ಸಲ್ಲುತ್ತದೆ.‘ಸೈನ್ಯಕ್ಕೆ ಸೇರುವವರು ಬಡಕುಟುಂಬದ ಯುವಕರೇ ಹೊರತು ಶ್ರೀಮಂತರ ಮನೆ ಮಕ್ಕಳಲ್ಲ’ ಬದಲಾಗಿ ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲ, ಕೆಲಸವಿಲ್ಲ ಎನ್ನುವವರು ಸೈನ್ಯಕ್ಕೆ ಹೋಗಿ ಸೇರುತ್ತಾರೆ’ ಎಂದು 2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ರಾಜ್ಯದ ಒಬ್ಬ ರಾಜಕಾರಣಿ ಹೇಳಿದ್ದನ್ನು ಥಟ್ಟನೆ ನೆನೆಪಿಸಿಕೊಂಡು ಈಗಷ್ಟೇ ಬಿಎಸ್‌ಎಫ್‌ಗೆ ಸೇರ್ಪಡೆಯಾದ ಯುವತಿಯರ ಮನೆಯ ಆರ್ಥಿಕ ಸ್ಥಿತಿಗತಿಯನ್ನು ವಿಚಾರಿಸಿದೆ.
ಆದರೆ ಖಂಡಿತವಾಗಿಯೂ ಅವರ ಮನೆಯ ಸ್ಥಿತಿಗತಿಯು ಉತ್ತಮವಾಗಿಯೇ ಇದೆ. ಜೀವನ ನಿರ್ವಹಣೆಗಾಗಿ ಸೈನ್ಯಕ್ಕೆ ಸೇರ್ಪಡೆಯಾಗಬೇಕಾದ ಅನಿವಾರ್ಯತೆ ಆ ಯುವತಿಯರಿಗೂ ಇರಲಿಲ್ಲ ಮತ್ತು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸುವಪರಿಸ್ಥಿತಿ ಅವರ ಪೋಷಕರಿಗೂ ಎದುರಾಗಿಲ್ಲ. ತಮ್ಮ ವಿದ್ಯಾರ್ಹತೆಯ ಆಧಾರದಲ್ಲಿ ಗೌರವಯುತ ಸಂಬಳ ಪಡೆಯುತ್ತಾ ನಿಶ್ಚಿಂತೆಯಿಂದ ಜೀವನ ಮಾಡಬಹುದಾಗಿತ್ತು.
ತಮ್ಮ ವೈಯಕ್ತಿಕ ಬದುಕಿನ ಬಗ್ಗೆೆ ಚಿಂತಿಸದೇ ಸೇನೆಗೆ ಸೇರ್ಪಡೆಗೊಳ್ಳುವುದಿದೆಯಲ್ಲಾ ಅದುವೇ ಛಲ, ಶ್ರದ್ದೆ, ದೇಶಾಭಿಮಾನ ಮತ್ತು ದೇಶಭಕ್ತಿ. ತಮ್ಮ ಸುಖ ಸಂತೋಷಗಳನ್ನು ದೇಶದ ಗಡಿಯಲ್ಲಿ ಕಂಡುಕೊಳ್ಳುತ್ತಾ, ದೇಶದ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಸೈನಿಕರು ಮತ್ತು ಅವರ ಕುಟುಂಬದ ತ್ಯಾಗ, ಸೈನಿಕರ ಶೌರ್ಯ, ಸಾಹಸ, ಸಮರ್ಪಣಾ ಭಾವಯಾವುದೇ ವರ್ಣನೆಗೆ, ಹೋಲಿಕೆಗಳಿಗೆ ನಿಲುಕದ್ದು.
ಸೇನೆಗೆ ಯುವಕರನ್ನೇ ಕಳುಹಿಸಿಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದ ಕಾಲವಿತ್ತು. ಸೇನೆಗೆ ಸೇರ್ಪಡೆಗೊಂಡವರು ಜೀವಂತವಾಗಿ ಮನೆಗೆ ಹಿಂದಿರುಗುವುದಿಲ್ಲ ಎಂಬ ಜನಸಾಮಾನ್ಯರ ಅಭಿಪ್ರಾಯವು ಈ ನಿರ್ಧಾರಗಳಿಗೆ ಕಾರಣವಾಗಿತ್ತು. ಮಿಗಿಲಾಗಿ ಸೇನೆಗೆ ಸೇರ್ಪಡೆಗೊಳ್ಳುವವರು ಮಧ್ಯಮ ಮತ್ತು ಕೆಳವರ್ಗದವರು ಎಂಬ ಅಭಿಪ್ರಾಯವೂ ವ್ಯಾಪಕವಾಗಿತ್ತು.ಆದರೆ ಈಗ ಪರಿಸ್ಥಿತಿ ಬದಲಾಗಿದೆ.
ಖಂಡಿತವಾಗಿಯೂ ನಮ್ಮ ಸೇನೆಯು ಸಾಮಾಜಿಕ ಅಂತಸ್ತು, ಜಾತಿ, ವರ್ಗ, ಧರ್ಮದ ಭಾವನೆಗಳ ಚೌಕಟ್ಟನ್ನು ಮೀರಿ ರಚನೆಯಾದ ಒಂದು ರಕ್ಷಣಾ ವ್ಯವಸ್ಥೆ. ದೇಶ ಸೇವೆ ಎಂದರೆ ಸೈನದಲ್ಲಿ ಸೇವೆ ಸಲ್ಲಿಸುವುದು ಮತ್ತು ಅದಕ್ಕಿಂತ ಮಿಗಿಲಾದಸೇವೆಯನ್ನು ದೇಶಕ್ಕಾಗಿ ಸಲ್ಲಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವೇ ಈಗ ಗಟ್ಟಿಯಾಗಿ ನೆಲೆಯೂರಿದೆ.
ದೇಶಪ್ರೇಮ ಚಿಗುರೊಡೆಯಲು ಭಾರತದ ಸೈನ್ಯವೇ ಭಾರತೀಯರಿಗೆ ಸ್ಪೂರ್ತಿ. ಅಲ್ಲದೇ ದೇಶ ಸೇವೆಯಲ್ಲಿ ತೊಡಗಿಸಿ ಕೊಂಡವರಷ್ಟು ಗೌರವ ಪಡೆಯಲು ಯಾರೊಬ್ಬರೂ ಅರ್ಹರಲ್ಲ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮನೆ ಮಾಡಿದೆ. ಇತರೆ ದೇಶಗಳ ಸೈನಿಕರು ವೇತನಕ್ಕಾಗಿ, ಸ್ವಹಿತಕ್ಕಾಗಿ ಆ ದೇಶದ ಸೇನೆಯಲ್ಲಿ ಕೆಲಸ ಮಾಡಿದರೆ, ಭಾರತೀಯ ಸೈನಿಕರು ತಾಯಿ ನೆಲದರಕ್ಷಣೆಗಾಗಿ ಸಮರ್ಪಣಾ ಭಾವದಿಂದ ಸೈನ್ಯಕ್ಕೆ ಸೇರುತ್ತಾರೆ.
ಅಲ್ಲದೇ ಆತ್ಮಸಾಕ್ಷಿಯಿಂದ ಮತ್ತು ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸುತ್ತಾರೆ. ದೇಶಕ್ಕಾಗಿ ವಿವಿಧ ರೀತಿಯ ಸೇವೆ ಸಲ್ಲಿಸಲು ಅವಕಾಶವಿದ್ದರೂ ಸೈನ್ಯದಲ್ಲಿ ಸೇವೆ ಸಲ್ಲಿಸಲು ಹೊರಟವರಿಗೆ ಸಿಗುವ ಗೌರವ ಮತ್ತು ಭಕ್ತಿಪೂರ್ವಕಆದರಾಭಿ ಮಾನಗಳು ಬೇರೆ ಯಾರಿಗೂ ದೊರೆಯದು.
ಮನೆ ಸದಸ್ಯರು ಮತ್ತು ಗ್ರಾಮಸ್ಥರೂ ಒಟ್ಟುಗೂಡಿ ದೀಪ ಬೆಳಗಿಸಿ, ಆರತಿ ಎತ್ತಿ ಸಾಂಪ್ರದಾಯಿಕವಾಗಿ ಶುಭ ಹಾರೈಸಿ ಕರ್ತವ್ಯಕ್ಕೆ ಸೇರಿಕೊಳ್ಳಲು ಕಳುಹಿಸಿಕೊಡು ವುದಿದೆಯಲ್ಲಾ ಅದು ಅವಿಸ್ಮರಣೀಯ ಮತ್ತು ಬೆಲೆ ಕಟ್ಟಲಾಗದ್ದು. ಸೈನಿಕರ ಬಗ್ಗೆೆ ಲಿಯೋನಾಡೊರ್ ಡ ವಿನ್ಸಿಯ ಮಾತು ಹೀಗಿದೆ, ‘ಯಾರು ತಮ್ಮ ಸಂಕಷ್ಟದಲ್ಲೂ ನಗುತ್ತಿರುತ್ತಾರೋ, ತಮ್ಮ ಶಕ್ತಿಯನ್ನು ಕಾಪಿಟ್ಟುಕೊಳ್ಳುತ್ತಾರೋ ಅವರೇ ನಿಜವಾದ ಪರಾಕ್ರಮಿಗಳು ಮತ್ತು ಆ ಪರಾಕ್ರಮಿಗಳು ಪ್ರಪಂಚದಲ್ಲಿ ಸೈನಿಕರು ಮಾತ್ರ.
ಭಾರತೀಯ ಸೇನೆ ಶೌರ್ಯದ ಪ್ರತೀಕ, ಸ್ಪೂರ್ತಿಯ ಚಿಲುಮೆ. ಇಂತಹ ಸೇನೆಗೆ ಸೇರ್ಪಡೆಯಾಗಬೇಕು, ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂಬುದು ನನ್ನ ಬಾಲ್ಯದ ಬಹುದೊಡ್ಡ ಕನಸಾಗಿತ್ತು. ಈ ದಿಸೆಯಲ್ಲಿ ನಾನು ಹಲವು ಬಾರಿ ಸೇನಾ ನೇಮಕಾತಿ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದುಂಟು. ಭಾರತೀಯ ಗಡಿ ಭದ್ರತಾ ಪಡೆ, ಭಾರತೀಯ ನೌಕಾದಳ ಹಾಗೂ ಭಾರತೀಯ ವಾಯುದಳದ ಹುದ್ದೆಗೂ ಅರ್ಜಿ ಸಲ್ಲಿಸಿ ಪ್ರಯತ್ನಿಸಿದ್ದುಂಟು. ಎಲ್ಲೂ ಯಶಸ್ಸು ಕಾಣದೇ ಅಂತಿಮವಾಗಿ ವಯಸ್ಸಿನ ಮಿತಿ ದಾಟಿದ್ದರಿಂದ ಸೇನೆಗೆ ಸೇರ್ಪಡೆಯಾಗುವ ನನ್ನ ಕನಸು ಕನಸಾಗಿಯೇ ಉಳಿಯಿತು.
ಸೇನೆಗೆ ಸೇರ ಬೇಕೆಂಬ ಹಂಬಲ, ಆಕಾಂಕ್ಷೆ ಹಲವರಲ್ಲಿದ್ದರೂ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಅಂತಹ ಅವಕಾಶ ವಂಚಿತರಲ್ಲಿ ನಾನೂ ಒಬ್ಬನಾಗಿದ್ದು, ಸೇನೆಗೆ ಸೇರ್ಪಡೆಯಾಗದಿರುವ ಬಗೆಗಿನ ಕೊರಗು ನನ್ನಲ್ಲಿ ಈಗಲೂ ಜೀವಂತ.ಕರುನಾಡ ಸಹೋದರಿಯರು ಸೇನೆಗೆ ಸೇರ್ಪಡೆಗೊಂಡ ಸಂಭ್ರಮದ ಮಧ್ಯೆಯೇ ಏಪ್ರಿಲ್ 3ರಂದು ಛತ್ತೀಸ್‌ಗಢದ ಸುಕ್ಮಾ-ಬಿಜಾಪುರ ಗಡಿ ಪ್ರದೇಶವಾದ ಜೊನಗುಡದ ಬಳಿ ಭದ್ರತಾ ಪಡೆಗಳು ಮತ್ತು ಮಾವೋ ವಾದಿ ನಕ್ಸಲರ ನಡುವೆ ನಡೆದ ಗುಂಡಿನಚಕಮಕಿಯಲ್ಲಿ 22 ಮಂದಿ ಯೋಧರು ಹುತಾತ್ಮರಾಗಿದ್ದಾರೆ.
ಈ ವೀರ ಪುತ್ರರಿಗೆ ಹಾಗೂ ದೇಶಕ್ಕಾಗಿ ತನ್ನ ಕರುಳ ಕುಡಿಯನ್ನು ತ್ಯಾಗ ಮಾಡಿದ ತಾಯಂದಿರಿಗೆ ಹಾಗೂ ಕುಟುಂಬದವರಿಗೆ ಕೋಟಿ ನಮನಗಳು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಹೋದರ, ಸಹೋದರಿಯರು ಸೇನೆಗೆ ಸೇರಲುಉತ್ಸಾಹ ತೋರುತ್ತಿರುವುದನ್ನು ಗಮನಿಸಿದಾಗ ನಮಗೆ ಇನ್ನಷ್ಟು ಹೆಮ್ಮೆಯೆನಿಸುತ್ತದೆ.
ಆದರೆ ತಾಯಿ ಭಾರತಾಂಬೆ ಮತ್ತು 135 ಕೋಟಿ ಮಕ್ಕಳ ರಕ್ಷಣೆಗಾಗಿ ತಮ್ಮ ಜೀವವನ್ನು ಪಣಕ್ಕಿಟ್ಟಿರುವ ವೀರ ಯೋಧರನ್ನುಸ್ಮರಿಸುವ ಬದಲಾಗಿ ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿರುವುದಾದರೂ ಏನು? ಸ್ವಯಂಕೃತ ತಪ್ಪುಗಳು, ಅವಿವೇಕತನದ ನಡತೆಗಳೊಂದಿಗೆ ವೈಯಕ್ತಿಕವಾಗಿ ಭಾಗಿಯಾಗಿದ್ದುಕೊಂಡು ಮಾಡಿದ ಯಾವುದೋ ಕೃತ್ಯಗಳಿಗೆ ಹಾಗೂ ವ್ಯಕ್ತಿಿಗಳಿಗೆ ಪ್ರಾಮುಖ್ಯತೆ ನೀಡುತ್ತಿರುವುದು ದುರದೃಷ್ಟಕರ.
ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಮರ್ಪಣಾ ಭಾವದಿಂದ ಮುಂದಡಿಯಿಟ್ಟ ಮತ್ತು ದೇಶ ರಕ್ಷಣೆಯಲ್ಲಿ ಜೀವನದ ಸಾರ್ಥಕತೆ ಕಾಣಲು ಹೆಜ್ಜೆಯಿಟ್ಟ ಕರುನಾಡ ವೀರ ಸಹೋದರಿಯರಿಗೆ ಅಭಿಮಾನದಿಂದ ಹಾರೈಸಿ ಕೃತಜ್ಞರಾಗೋಣ. ಜೈ ಭಾರತಾಂಬೆ.