ದುಃಖ ನುಂಗಿ ಜಗವ ನಗಿಸಿದ ಚಾರ್ಲಿ ಚಾಪ್ಲಿನ್
ತನ್ನಿಮಿತ್ತ
ಎಲ್‌.ಪಿ.ಕುಲಕರ್ಣಿ
       .          .
ಈ ಮೇಲಿನ ಅದ್ಭುತ ಸಾಲುಗಳನ್ನು ಹೇಳಿದವರು ಜಗತ್ತು ಕಂಡ ಶ್ರೇಷ್ಠ ಹಾಸ್ಯ ನಟ, ಹಾಸ್ಯ ಸಾರ್ವಭೌಮ ಚಾರ್ಲಿ ಚಾಪ್ಲಿನ್. ಈಗ ಅವರು ಬದುಕಿದ್ದರೆ ಸಾರ್ಥಕ 132ನೇ ವರ್ಷದ ಹುಟ್ಟುಹಬ್ಬ ವನ್ನು ಆಚರಿಸಿಕೊಳ್ಳುತ್ತಿದ್ದರು!
ತೊಂಬತ್ತರ ದಶಕದಲ್ಲಿ ಅವರು ಅಭಿನಯಿಸಿದ ಎಲ್ಲ ಹಾಸ್ಯಮಯ ಮೂಕಿ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಅಷ್ಟೇಅಲ್ಲ ಇಂದಿಗೂ ಸಹ ಅವು ಎಲ್ಲರ ಮನಸೊರೆಗೊಂಡಿವೆ. ನಗುವಿಗೆ ಇನ್ನೊಂದು ಭಾಷ್ಯ ಬರೆದ ಶ್ರೇಷ್ಠ ಕಲಾವಿದ, ನಟ ಎಂದರೆ ಅದು ಚಾರ್ಲಿ ಚಾಪ್ಲಿನ್ ಮಾತ್ರ!. ಈ ಹಿಂದೆ ಚಾರ್ಲಿ ಚಾಪ್ಲಿನ್‌ನ 129ನೇ ಜನ್ಮ ವರ್ಷಾಚರಣೆಯನ್ನು ಆಚರಿಸಿದಾಗ, ಅವರ ಗೌರವಾರ್ಥವಾಗಿ ವ್ಯಾಟಿಕನ್‌ನ ಕ್ಯಾಥೋಲಿಕ್ ಚರ್ಚ್ ಆಡಳಿತ ಸದಸ್ಯರು ಚಾಪ್ಲಿನ್ ನಟನೆಯ ಚಿತ್ರವಿರುವ ಅಂಚೆ ಚೀಟಿಯೊಂದನ್ನು ಬಿಡುಗಡೆ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಚಾರ್ಲಿ ಚಾಪ್ಲಿನ್ ಹುಟ್ಟು 1889ರ ಏಪ್ರಿಲ್ 16ರಂದು ಇಂಗ್ಲೆಂಡ್ ನಗರದ ಹೊರವಲಯದ ಪಟ್ಟಣದಲ್ಲಿದ್ದ ತಂದೆ ಚಾರ್ಲಸ್ ಚಾಪ್ಲಿನ್ ಸೀನಿಯರ್. ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ಚಾಪ್ಲಿನ್ ಚಿಕ್ಕಂದಿನ ಹಲವು ಕಷ್ಟ ಕಾರ್ಪಣ್ಯ ಗಳನ್ನು ಅನುಭವಿಸಿ ಬೆಳೆದವರು. ಇವರ ತಂದೆ ತಾಯಿ ಇಬ್ಬರೂ ಸಣ್ಣಪುಟ್ಟ ಸಮಾರಂಭಗಳಲ್ಲಿ ಹಾಡುಗಾರರಾಗಿ ಕೆಲಸ ಮಾಡುತ್ತಿದ್ದರು. ಆದರೆ ತಂದೆ ಮದ್ಯವ್ಯಸನಿಯಾಗಿದ್ದ, ಹೀಗಾಗಿ ಆತನ ದುಡಿಮೆಯಿಂದ ಬರುವ ಹಣವೆ ಸಾರಾಯಿಗೆಹೋಗುತ್ತಿತ್ತು. ಇದರಿಂದ ಬೇಸತ್ತ ತಾಯಿ ಹೆನ್ನಾ ಇವನಿಂದ ವಿಚ್ಛೇದನ ಪಡೆದು ರಂಗ ಭೂಮಿಯ ಸಹಕಲಾವಿದನೊಂದಿಗೆ ಜೀವಿಸುತ್ತಿದ್ದಳು.
ಕೇವಲ ಎಂಟು ವರ್ಷದವನಿzಗಲೇ ಚಾಪ್ಲಿನ್ ವೇದಿಕೆ ಏರಿದ. ತಂದೆಯ ಅಕಾಲಿಕ ಸಾವು, ಕ್ಷೀಣಿಸುತ್ತಿದ್ದ ತಾಯಿಯ ಆರೋಗ್ಯ ಇವುಗಳಿಂದ ಚಾಪ್ಲಿನ್ ಮತ್ತು ಆತನ ಸಹೋದರ ಇಬ್ಬರೂ ಕೆಲಕಾಲ ಅನಾಥಾಶ್ರಮ ಸೇರಿದರು. ಬಡತನ, ಹಸಿವು ಮತ್ತು ನಿರ್ಲಕ್ಷ್ಯಗಳು ಚಾಪ್ಲಿನ್‌ನ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮ ಬೀರಿದವು. ತನ್ನ ಹದಿನೇಳನೇ ವಯಸ್ಸಿಗೆ ಚಾಪ್ಲಿನ್ ,ಕಾರ್ನೋ ಕಂಪನಿ ಸೇರಿದ. ಅದು ಮನರಂಜನೆಗೋಸ್ಕರ ಲಘು ನಾಟಕಗಳನ್ನು ಪ್ರದರ್ಶಿಸುತ್ತಿತ್ತು.
1913ರಲ್ಲಿ ಅಮೆರಿಕಾದ ಚಿತ್ರ ನಿರ್ಮಾಪಕ ಮ್ಯಾಕ್ ಸೆನ್ನೆಟ್ ಒಂದು ದಿನ ಕಾರ್ನೊ ಕಂಪನಿಯ ಪ್ರದರ್ಶನವೊಂದರಲ್ಲಿ ಚಾಪ್ಲಿನ್‌ನ ನಟನೆಯನ್ನು ನೋಡಿ ಪ್ರಭಾವಿತನಾದ. ಸೆನ್ನೆಟ್ , ಚಾಪ್ಲಿನ್‌ನನ್ನು ಕ್ಯಾಲಿಫೋರ್ನಿಯಾಕ್ಕೆ ಆಹ್ವಾನಿಸಿದನು. ಅದೇ ವರ್ಷ ಎಂದರೆ 1913ರಲ್ಲಿ ಚಾರ್ಲಿ ಚಾಪ್ಲಿನ್ ನಟಿಸಿದ ಮೊದಲ ಚಿತ್ರ ’ ಕಿಡ್ ಆಟೋ ರೇಸಸ್ ಎಟ್ ವೆನ್ನಿಸ್ ತಯಾರಾಗಿ 1914ರಲ್ಲಿ ಬಿಡುಗಡೆಗೊಂಡಿತು. ಆ ಚಿತ್ರದಲ್ಲಿ ಚಾಪ್ಲಿನ್ ವಿಶೇಷ ಪೋಷಾಕು ಧರಿಸಿ ಹಾಸ್ಯಗಾರನಾಗಿ ಕಾಣಿಸಿಕೊಂಡ. ಅಂದಿನಿಂದ ದೊಗಲೆ ಪ್ಯಾಂಟು, ಅಗತ್ಯಕ್ಕಿಂತ ದೊಡ್ಡದಾದ ಬೂಟು, ಬೌಲರ್ ಹ್ಯಾಟ್, ವಕ್ರವಾಗಿ ಹೊರಚಾಚಿದ ಪಾದಗಳು, ಸಡಿಲವಾದ ಜಾಕೆಟ್, ವಿಚಿತ್ರ ಚಿಕ್ಕದಾದ ಮೀಸೆ, ಕೈಯಂದು ಊರುಗೋಲು ಇವು ಚಾರ್ಲಿಯ ಖಾಯಂ ಹೆಗ್ಗುರುತಾದವು. ಹೀಗೆಚಾಪ್ಲಿನ್ ಆ ಕಾಲದ ಜಗತ್ಪ್ರಸಿದ್ಧ ನಟನಾಗಿ ಮೆರೆದ.
1919ರಲ್ಲಿ ತನ್ನ ಸಹ ನಟರಾದ ಮೇರಿಪಿಕ್ ಫೋರ್ಡ್ ಮತ್ತು ಡಗ್ಲಾಸ್-ರ್ಬ್ಯಾಂಕ್ ಸಹಯೋಗದೊಂದಿಗೆ ಯುನೈಟೆಡ್ ಆರ್ಟಿಸ್ಟ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ. ಚಾರ್ಲಿ ಚಾಪ್ಲಿನ್ ಒಂದರ ಹಿಂದೆ ಮತ್ತೊಂದರಂತೆ  ಹಲವು ಸರಣಿ ಚಲನಚಿತ್ರಗಳನ್ನು ನಿರ್ಮಿಸಿದ. 1921ರಲ್ಲಿ ‘ದಿ ಕಿಡ್’, 1925 ರಲ್ಲಿದಿ ಗೋಲ್ಡ್ ರಶ್, 1931ರಲ್ಲಿ ‘ಸಿಟಿ ಲೈಟ್ಸ್’, ಮತ್ತು 1936ರಲ್ಲಿ ‘ಮಾರ್ಡನ್ ಟೈಮ್ ಚಿತ್ರಗಳು ಚಾಪ್ಲಿನ್‌ನ ನಟನೆಗೆ ಮೆರಗನ್ನುಕೊಟ್ಟವು.
1931ರಲ್ಲಿ ಬಿಡುಗಡೆಯಾದ ‘ದ ಸರ್ಕಸ್ ’ ಅದರಲ್ಲಿ ಚಾಪ್ಲಿನ್ ಒಬ್ಬ ವಿದೂಷಕನಾಗಿ ನಟಿಸಿದ, ಸಡನ್ನಾಗಿ ಬೀಳುವುದು, ಪಟಪಟನೆ ಜಿಗಿಯುತ್ತಾ ಓಡುವುದು, ಹಗ್ಗದ ಮೇಲೆ ನಡೆಯುವುದು(ಟೈಟ್ ರೋಪ್ ವಾಕಿಂಗ್) ಜತೆಗೆ ಮಂಗಗಳನ್ನು ಹೊತ್ತುಕೊಂಡು ನಡೆಯುವುದು. ಇವೆಲ್ಲವೂ ಜನರ ಮನದಲ್ಲಿ ಅಚ್ಚಳಿಯದೇ ಇಂದಿಗೂ ಉಳಿದಿವೆ.
‘ದಿ ಗ್ರೇಟ್ ಡಿಟೆಕ್ಟರ್’ ಚಲನ ಚಿತ್ರದಲ್ಲಿ ಜರ್ಮನಿಯ ಸರ್ವಾಧಿಕಾರಿ ಅಡಾಲ ಹಿಟ್ಲರ್‌ನ ಪಾತ್ರದಲ್ಲಿ ಚಾಪ್ಲಿನ್‌ನ ಹಾಸ್ಯಮಯನಟನೆ ಇಂದಿಗೂ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಮೂಕಿ ಚಿತ್ರಗಳಿಗೆ ಕೇವಲ ತನ್ನ ವಿಶೇಷ ವಿಶಿಷ್ಟ ಮುಖದ, ಅವಯವಗಳ ಚಲನೆಯಿಂದ ಭಾವತುಂಬಿ ಅಭಿನಯಿಸಿದ ಚಾಪ್ಲಿನ್ ಒಬ್ಬ ಎವರ್ ಗ್ರೀನ್ ಹಾಸ್ಯ ನಟ.
1925ರ ಜುಲೈ6ಚಾಪ್ಲಿನ್ ಅಮೆರಿಕಾದ ಪ್ರತಿಷ್ಠಿತ ಪತ್ರಿಕೆ ನಿಯತಕಾಲಿಕೆ ಟೈಮ್ ಮ್ಯಾಗಝಿನ್ ಮುಖಪುಟದಲ್ಲಿ ಮೊದಲ ಚಲನಚಿತ್ರ ಕಲಾವಿದನಾಗಿ ಕಂಡಿದ್ದ. ತಾನು ಆರು ದಶಕಗಳ ಕಾಲ ಅಮೆರಿಕಾದ ನೆಲೆಸಿದ್ದರೂ ಆ ದೇಶದ ಪೌರತ್ವ ನಿರಾಕರಿಸಿದ್ದ. ಆಗ ಚಲನಚಿತ್ರ ರಂಗದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿತ್ತು. ಸಿನೆಮಾ ಅದೇ ತಾನೆ ಮಾತು ಪಡೆದುಕೊಂಡಿತ್ತು. ಹಿಚ್ ಕಾಕ್ ‘ಬ್ಲ್ಯಾಕ್ ಮೇಲ್ ’ ಎಂಬ ಟಾಕಿ ಚಲನಚಿತ್ರ ಮಾಡಿ ಸುದ್ದಿಯಲ್ಲಿದ್ದ. ಆದರೆ ಚಾಪ್ಲಿನ್‌ನ ಟ್ರ್ಯಾಂಪ್ ಮೂಕನಲ್ಲವೆ!
ಕಿತ್ತು ತಿನ್ನುವ ಸಮಾಜದಲ್ಲಿ ಅವನು ಮಾತನಾಡುವುದು ಹೇಗೆ ಸಾಧ್ಯ!. ತನ್ನ ಮುಂದಿನ ಚಿತ್ರ ‘ಸಿಟಿ ಲೈಟ್ಸ್’ ಅನ್ನು ಮಾತಿನ ಗೊಡವೆಗೆ ಹೋಗದೆ ಮಾಡಲು ನಿರ್ಧರಿಸಿದ. ಶ್ರೀಮಂತ ಕುಡುಕ, ಬಡತನದಿಂದಾಗಿ ಹೂವು ಮಾರುವ ಕುರುಡಿ ಮತ್ತು ಅಲೆಮಾರಿ ಟ್ರ್ಯಾಂಪ್. ಈ ಮೂರು ಪಾತ್ರಗಳ ಸುತ್ತ ಚಾಪ್ಲಿನ್ ಅದ್ಭುತವಾಗಿ ಯೋಚಿಸಿದ. ಇದೇ ಸಂದರ್ಭದಲ್ಲಿ ವಿಶ್ವವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಜಗದ್ವಿಖ್ಯಾತ ನಟ ಚಾರ್ಲಿ ಚಾಪ್ಲಿನ್ ಒಬ್ಬರನ್ನೊಬ್ಬರು ಭೇಟಿಯಾಗುತ್ತಾರೆ. ಐನ್ ಸ್ಟೈನ್, ಚಾಪ್ಲಿನ್ ಕುರಿತ. ಚಾಪ್ಲಿನ್, ನಿಮ್ಮ ನಟನೆಯಲ್ಲಿ ನಾನು ಮೆಚ್ಚುವುದೆಂದರೆ, ನಿಮ್ಮ ಸಾರ್ವತ್ರಿಕತೆ. ನೀವು ಒಂದೂ ಪದವನ್ನಾಡದೆ, ಜಗತ್ತಿಗೆ ಅರ್ಥವಾಗಬಲ್ಲಿರಿ. ಆಗ ಚಾಪ್ಲಿನ್ ಮಾರುತ್ತರವಾಗಿ, ಅದೇನೋ ನಿಜವೇ! ಆದರೆ ನಿಮ್ಮ ಯಾವ ಮಾತನ್ನೂ ಅರ್ಥಮಾಡಿಕೊಳ್ಳದೆಯೂ, ಜಗತ್ತು ನಿಮ್ಮನ್ನು ಮೆಚ್ಚಿರುವ ಜನಪ್ರಿಯತೆ ಇನ್ನೂ ದೊಡ್ಡದು! ಎಂದಿದ್ದರು.
ಸಿಟಿ ಲೈಟ್ ಬಿಡುಗಡೆ ಮಾಡಲು ಯಾರೂ ಮುಂದೆ ಬರಲಿಲ್ಲ. ಚಾರ್ಲಿ ಚಾಪ್ಲಿನ್ ಒಬ್ಬನೇ ಚಿತ್ರ ಬಿಡುಗಡೆ ಮಾಡಿದ. ಚಿತ್ರ ಮೊದಲ ಹಂತದ ನಾಲ್ಕು ಲಕ್ಷ ಡಾಲರ್ ಗಳಿಸಿತು. ಆ ಚಿತ್ರ ನೋಡಿದ ಆಲ್ಬರ್ಟ್ ಐನ್‌ಸ್ಟೈನ್ ಕಣ್ಣಲ್ಲಿ ನೀರು ಬರುತ್ತವೆ.ಅಂಥ ಮನೋಜ್ಞ ಅಭಿನಯವನ್ನು ಚಾಪ್ಲಿನ್ ಕೊಟ್ಟಿದ್ದ. ಚಿತ್ರದ ಜಯಭೇರಿಯಲ್ಲಿ ಚಾಪ್ಲಿನ್ ಇಂಗ್ಲೆಂಡಿಗೆ ಪ್ರಯಾಣ ಬೆಳೆಸುತ್ತಾನೆ ಅಲ್ಲಿ ಚರ್ಚಿಲ್ಮೊದಲಾದ ಗಣ್ಯರು ಭೇಟಿಯಾಗುತ್ತಾರೆ. ಅದೇ ಸಂದರ್ಭದಲ್ಲಿ ಲಂಡನ್ ನಗರದಲ್ಲಿ ತಂಗಿದ್ದ ಮಹಾತ್ಮ ಗಾಂಧಿಯನ್ನೂ ಸಹ ಚಾಪ್ಲಿನ್ ಭೇಟಿಯಾಗುತ್ತಾನೆ.
ಹೊಸ ಚಿತ್ರ ‘ಮಾಡರ್ನ್ ಟೈಮ್ಸ ’ ಹನ್ನೊಂದು ತಿಂಗಳುಗಳ ಕಾಲ ಚಿತ್ರೀಕರಣ ಮಾಡಿ ಬಿಡುಗಡೆಗೊಳಿಸಿದ. ಔದ್ಯೋಗಿಕ ಕ್ರಾಂತಿಯಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳನ್ನು ಚಾಪ್ಲಿನ್ ಕಲಾತ್ಮಕವಾಗಿ ಚಿತ್ರದಲ್ಲಿ ಹಿಡಿದಿಟ್ಟಿದ್ದ. ಚಿತ್ರ ಅಪಾರ ಜನಮನ್ನಣೆಗಳಿಸಿ ಯಶಸ್ಸನ್ನು ತಂದುಕೊಟ್ಟಿತು. ಪ್ರೇಕ್ಷಕರೆಲ್ಲ ಪ್ರತಿಧ್ವನಿಸುವ ನಿಶ್ಶಬ್ದವೆಂದುಹೊಗಳಿದರು. ಆದರೆ ಅಮೆರಿಕದ ಪ್ರತಿಕ್ರೀಯೆ ಚಾಪ್ಲಿನ್‌ಗೆ ವಿರುದ್ಧವಾಗಿತ್ತು.
ಕೈಗಾರಿಕೋದ್ಯಮಿಗಳು ಚಾಪ್ಲಿನ್‌ನನ್ನು ಟೀಕಿಸಲು ಶುರುಮಾಡಿದರು. ಅಮೆರಿಕ ಸರಕಾರ ಚಾಪ್ಲಿನ್ ನಿಗೆ ಕಮ್ಯುನಿಸ್ಟ್ ಎಂಬಹಣೆಪಟ್ಟಿ ಕೊಟ್ಟು ತಿರಸ್ಕಾರದಿಂದ ಕಂಡಿತು ಅದು, 1932ರ ಸಮಯ. ಚಾಪ್ಲಿನ್ ಜೀವನದಲ್ಲಿ  ಬಹಳ ಕೆಟ್ಟ ಘಟನೆಯೊಂದು ಹೀಗೆ ಬಂದು ಹಾಗೆ ಹೋಯಿತು. ಆಗ ಚಾಪ್ಲಿನ್, ಜಪಾನ್ ದೇಶಕ್ಕೆ ಭೇಟಿ ಕೊಟ್ಟಿದ್ದರು. ಆದರೆ ಆ ಹೊತ್ತಿಗೆ ಜಪಾನಿನಲ್ಲಿಪ್ರಜಾಪ್ರಭುತ್ವ ಸರಕಾರದ ನಿಷ್ಕ್ರೀಯತೆಯ ಬಗ್ಗೆ ಜನಕ್ಕೆ ರೋಸಿಹೋಗಿತ್ತು. ಪ್ರಜಾಪ್ರಭುತ್ವ ಸರಕಾರ ಕಿತ್ತೊಗೆದು ಮತ್ತೆ ರಾಜನ ಕೈಗೆ ದೇಶದ ಅಧಿಕಾರ ಕೊಡಬೇಕೆಂದು ಹಲವರು ಬಯಸುತ್ತಿದ್ದರು. ಅದಕ್ಕಾಗಿ ಹನ್ನೊಂದು ಜನ ಸೈನಿಕರು ಸೇರಿ ಪ್ರಧಾನಿಯನ್ನು ಮುಗಿಸಬೇಕೆಂದು ಹೊಂಚುಹಾಕಿ ಕುಳಿತಿದ್ದರು.
ಅವರ ಯೋಜನೆಯಂತೆ ಸರಿಯಾಗಿ ಮೇ 15ನೇ ತಾರೀಕು ಪ್ರಧಾನಿಯ ಕೊಲೆಯೂ ಆಯಿತು. ಆ ಕೂಡಲೇ ದೇಶದ ನಿಯಂತ್ರಣ ವನ್ನು ತಮ್ಮ ಕೈಗೆತ್ತಿಕೊಂಡು, ಅತಿಥಿಯಗಾಗಿ ಅಲ್ಲಿಗೆ ಭೇಟಿಕೊಟ್ಟಿದ್ದ ಚಾರ್ಲಿ ಚಾಪ್ಲಿನ್ ನನ್ನೂ ಕೊಂದು ಅಮೆರಿಕದ ಮೇಲೆ ಯುದ್ಧಕ್ಕೆ ಹೋಗಬೇಕೆಂಬುದು ಅವರ ಮುಂದಿನ ಯೋಜನೆಯಾಗಿತ್ತು. ಆದರೆ, ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ರಾಜನ ಕೊಲೆಗಾರರನ್ನು ಬಂಧಿಸಿದ್ದರಿಂದಾಗಿ ಚಾಪ್ಲಿನ್ ಕೂದಲೆಳೆಯ ಅಂತರದಲ್ಲಿ ಪಾರಾದರು. ಜಗತ್ತನ್ನೆ ತನ್ನ ನಗೆಗಡಲಲ್ಲಿ ತೇಲಿಸುತ್ತಿದ್ದ ಈ ಹಾಸ್ಯ ಸಾಮ್ರಾಟನ ಹೆಸರು ಯುದ್ಧ ಪೀಪಾಸು ಅಡಾರ್ಲ್ಫ ಹಿಟ್ಲರ್‌ನ ಹಿಟ್ ಲಿಸ್ಟ್‌ನಲ್ಲಿಯೂ ಇತ್ತೆನ್ನುವ ಗುಟ್ಟು ಬಹಳ ವರ್ಷಗಳ ನಂತರ ರಟ್ಟಾಗಿದ್ದು ಈಗ ಇತಿಹಾಸ.
1972ರಲ್ಲಿ ಗೌರವ ಆಸ್ಕರ್ ಪ್ರಶಸ್ತಿಗೆ ಚಾರ್ಲಿ ಚಾಪ್ಲಿನ್ ಭಾಜನರಾದರು. ಜೀವನದ ತಿರುವಿನಲ್ಲಿ ನಾಲ್ಕು ಬಾರಿ ಮದುವೆಯಾಗಿದ್ದ ಚಾಪ್ಲಿನ್ , ಕೊನೆಯ ಮದುವೆಯಾದಾಗ ಅವರಿಗೆ ಆಗ ಕೇವಲ 54ವರ್ಷಗಳು ಆದರೆ ಅವರ ಸಂಗಾತಿ ಯೂಗಿನಿ ಎಂಬ ತರುಣಿಗೆ 18 ರ ಪ್ರಾಯ!, ಅದುವರೆಗೂ ಚಾಪ್ಲಿನ್ ಹದಿಹರೆಯದ ಯುವತಿಯರನ್ನೇ ಮದುವೆ ಯಾಗಿದ್ದ ನೆಂಬುದು ಕೂತೂಹಲ ಹುಟ್ಟಿಸೋ ವಿಚಾರ!.
ಚಾಪ್ಲಿನ್ ಹುಟ್ಟಿದ್ದು ಮಾತ್ರ ಇಂಗ್ಲೆಂಡ್ ಆದರೆ ಬಹುಕಾಲ ಜೀವಿಸಿದ್ದು ಮಾತ್ರ ಅಮೆರಿಕಾದಲ್ಲಿ . ಯುದ್ಧ ಸರ್ವಾಡಳಿತವನ್ನು ವಿರೋಧಿಸುತ್ತಿದ್ದ ಚಾಪ್ಲಿನ್ ಜರ್ಮನಿಯನ್ನು ತಿರಸ್ಕರಿಸಿದ್ದ. ಇಷ್ಟಿದ್ದರೂ ನಲವತ್ತಕ್ಕೂ ಹೆಚ್ಚು ದೇಶಗಳು (ಭಾರತವನ್ನು ಒಳಗೊಂಡು) ಚಾಪ್ಲಿನ್‌ಗೆ ಗೌರವ ಸೂಚಿಸಲು ಅಂಚೆ ಚೀಟಿಗಳನ್ನು ಹೊರತಂದಿವೆ ಎನ್ನುವುದು ಮಹತ್ವದ ವಿಷಯ. ನಾನುಯಾವ ದೇಶಕ್ಕೂ ಸೇರಿದವನಲ್ಲ. ನನ್ನದು ಜಾಗತಿಕ ಕುಟುಂಬ ಎಂಬ ವಿಶ್ವಮಾನವ ಸಂದೇಶಕ್ಕೆ ಕಟಿಬದ್ಧನಾಗಿದ್ದ ಚಾಪ್ಲಿನ್, ಆಗಿನ ಕಾಲದಲ್ಲಿ ಹಲವು ಶಕ್ತಿಶಾಲಿ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದೂ ಇದೆ.
ಮಹಾತ್ಮ ಗಾಂಧಿ ಮತ್ತು ಚಾರ್ಲಿ ಚಾಪ್ಲಿನ್ ಸ್ನೆಹಿತರಾಗಿದ್ದರು, ಏಕೆಂದರೆ ಇಬ್ಬರೂ ಯುದ್ಧವನ್ನು ವಿರೋಧಿಸಿ ಶಾಂತಿ ಬಯಸಿದವರು. ಇಂದಿಗೂ ಅಂತರ್ಜಾಲದಲ್ಲಿ, ಇಲ್ಲವೇ ಗಾಂಧೀಜಿ, ಚಾಪ್ಲಿನ್‌ರ ಜೀವನ ಚರಿತ್ರೆಯ ಪುಸ್ತಕಗಳ ಪುಟಗಳಲ್ಲಿ ಇವರಿಬ್ಬರ ಹಳೆಯ ಬ್ಲ್ಯಾಕ್ ಆಂಡ್ ವೈಟ್ ಫೋಟೋಗಳು ಕಾಣಸಿಗುತ್ತವೆ. ಅಷ್ಟೇ ಅಲ್ಲ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್, ಕಲಾಕಾರ ಪಿಕಾಸೋ, ಸಾಹಿತಿಗಳಾದ ಬ್ರೆಕ್ಟ್ , ವೇಲ, ರಾಜಕಾರಣಿ ವಿನಸ್ಟನ್ ಚರ್ಚಿಲ್, ಮನೋವಿಜ್ಞಾನಿ ಸಾತ್ರೆ ಇವರೆಲ್ಲರೊಂದಿಗೂ ಉತ್ತಮ ಗೆಳೆತನ ಹೊಂದಿದ್ದರು.
ಗುಜರಾತಿನಲ್ಲಿ ಇವತ್ತಿಗೂ ಚಾರ್ಲಿ ಚಾಪ್ಲಿನ್‌ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಅದು ಹೇಗೆ ಅಂತಿರಾ. ಗುಜರಾತ್‌ನ ಸಮುದ್ರತೀರದಲ್ಲಿ ಕಛ್ ರಣಭೂಮಿಯ ಹತ್ತಿರ ‘ಆದಿಪುರ ’ ವೆಂಬ ಪುಟ್ಟದಾದ ಊರಿದೆ. ಇಲ್ಲಿ ಕಳೆದ ಐದು ದಶಕಗಳಿಂದ ಊರಿಗೂರೇ ಚಾಪ್ಲಿನ್‌ನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತ ಆಚರಿಸಿಕೊಂಡು ಬರುತ್ತಿದೆ. ಏಪ್ರಿಲ್ 16ರಂದು ಇಲ್ಲಿನ ಹುಡುಗರು, ಯುವಕರು, ಹಿರಿಯರು ಬೋಗುಣಿ ಕ್ಯಾಪ್ ಹಾಕಿ, ಎರಡಿಂಚಿನ ಮೀಸೆ ಬಿಟ್ಟು, ಚಾಪ್ಲಿನ್ ಕೋಟು ಧರಿಸಿ, ಬೆತ್ತದ ಕೋಲು ಹಿಡಿದುಕೊಂಡು ಚಾರ್ಲಿ ಚಾಪ್ಲಿನ್‌ನ ಹಾಗೆಯೇ ಊರೆ ಕುಣಿದು ಕುಪ್ಪಳಿಸುತ್ತಾರೆ.
ಅಂದು ಚಾಪ್ಲಿನ್‌ನ ನೆನಪಿನಲ್ಲಿ ಮೂಕಾಭಿನಯದ ಸ್ಪರ್ಧೆಗಳು ನಡೆಯುತ್ತವೆ. ಇಂಥ ಜಗತ್ಪ್ರಸಿದ್ಧ ಹಾಸ್ಯನಟ ಮಾನವತಾ ವಾದಿ, ವಿಶ್ವಮಾನವ ಚಾರ್ಲಿ ಚಾಪ್ಲಿನ್ 25ನೇ ಡಿಸೆಂಬರ್ 1977ರಲ್ಲಿ ವಿಧಿವಶರಾದರು. ತನ್ನ ಹಾಸ್ಯಪ್ರಜ್ಞೆಯ ನಟನೆಯಿಂದ ಇಂದಿಗೂ ಎಲ್ಲರ ಮನದಲ್ಲಿ ಚಾರ್ಲಿ ಚಾಪ್ಲಿನ್ ಜೀವಂತವಾಗಿ ಉಳಿದಿದ್ದಾರೆ.