ಸೋಲಿಗೆ ಮಾತ್ರ ಇವಿಎಂ ಹೊಣೆ
ಅಭಿಮತ
ಪ್ರಕಾಶ್‌ ಶೇಷರಾಘವಾಚಾರ್‌
“        ” ಪಂಚರಾಜ್ಯಗಳ ಚುನಾವಣೆಯು ಅಂತಿಮ ಚರಣವನ್ನು ತಲುಪಿದೆ. ಈಗಾಗಲೇ ಪಶ್ಚಿಮ ಬಂಗಾಳ ಹೊರತುಪಡಿಸಿ ಇತರ4ರಾಜ್ಯಗಳ ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿದೆ.
ಮೇ2ರಂದು ಸ್ಪರ್ಧಿಗಳ ಹಣೆಬರಹವು ಬಯಲಾಗುವುದು. ಫಲಿತಾಂಶ ತಮಗೆ ಅನುಕೂಲಕರವಾಗಿದ್ದರೆ ಅದು ಜನತೆಯ ಜಯಮೋದಿಯವರ ಪರಾಭವ ವ್ಯತ್ಯಾಸವಾದರೆ ಇದು ಇವಿಎಂ ಜಯ ಜನಾದೇಶವನ್ನು ಇವಿಎಂ ಮೂಲಕ ತಿರುಚಲಾಗಿದೆ ಎಂದು ವ್ಯಾಖ್ಯಾನಿಸುವುದು ಖಚಿತ. ‘ಎಲ್ಲಾ ಅನಿಷ್ಟಗಳಿಗೂ ಶನೈಶ್ವರನೇ ಕಾರಣ’ ಎಂಬ ಗಾದೆಯ ಹಾಗೆ ರಾಜಕಾರಣಿಗಳಿಗೆ ತಮ್ಮ ಎಲ್ಲಾ ಚುನಾವಣಾ ಸೋಲುಗಳಿಗೆ ವಿದ್ಯುನ್ಮಾನ ಮತಯಂತ್ರ ಕಾರಣವಾಗಿದೆ.
ಮಾಸ್ಟರ್ ಹಿರಣಯ್ಯನವರು ತಮ್ಮ ನಾಟಕದಲ್ಲಿ ಹೇಳುತ್ತಿದ್ದರು “ಬೈದರೆ ದೇವರನ್ನ ಬೈಯ ಬೇಕಂತೆ ಯಾಕೆ? ತಿರುಗಿಸಿ ಹೊಡೆಯಲ್ಲ ಅಥವಾ ಪ್ರತ್ಯುತ್ತರ ಕೊಡಲ್ಲ ಅದಕ್ಕೆ”. ಚುನಾವಣಾ ಸೋಲಿಗೆ ಇವಿಎಂ ದೂಷಿಸಬೇಕು ಯಾಕೆ? ಅದು ನಿರ್ಜಿವ ವಸ್ತು ಪ್ರತ್ಯುತ್ತರ ಕೊಡುವುದಿಲ್ಲ. ತಂತ್ರಜ್ಞಾನದ ಗಂಧಗಾಳಿ ಇಲ್ಲದಿದ್ದವರು ಮಸಿ ಬಳೆದಾಗಲೂ ತಿರುಗಿಸಿ ಹೊಡೆಯಲು ಆಗುವುದಿಲ್ಲ.
ಹೀಗಾಗಿಯೇ2014ರ ನಂತರ ಪ್ರತಿಪಕ್ಷಗಳು ಚುನಾವಣೆಯಲ್ಲಿ ಸೋತ ಕೂಡಲೇ ಇವಿಎಂ ತಿರುಚಲಾಗಿದೆ ಎಂದು ಆರೋಪಿಸಿಸಮಾಧಾನ ಮಾಡಿಕೊಳ್ಳುವ ಚಾಳಿಗೆ ಜೋತುಬಿದ್ದಿದ್ದಾರೆ. ರಾಜಕೀಯದಲ್ಲಿ ಸೋಲನ್ನು ಕ್ರೀಡಾ ಸ್ಪೂರ್ತಿಯಿಂದ ಸ್ವೀಕರಿಸಿರುವ ಹೃದಯ ವೈಶಾಲ್ಯವು ಮರೆಯಾಗುತ್ತಿದೆ. ಸೋಲಿನ ಪರಾಮರ್ಶೆ ಮಾಡಿಕೊಳ್ಳಬೇಕಾದವರು ಮತ ಯಂತ್ರವನ್ನು ಹ್ಯಾಕ್ ಮಾಡಿ ಬಿಜೆಪಿ ಗೆಲವು ಸಾಧಿಸುತ್ತಿದೆ ಎಂದು ಕಪೋಲ ಕಲ್ಪಿತ ಆರೋಪವನ್ನು ಮಾಡಿ ತಮ್ಮ ಕೊರತೆಗೆ ಪರಿಹಾರ ಕಂಡುಕೊಳ್ಳದೆ ಮತದಾರರಿಗೂ ಅಪಮಾನ ಮಾಡಲು ಹಿಂಜರಿಯುತ್ತಿಲ್ಲ.
1981ರಲ್ಲಿ ಬೆಂಗಳೂರಿನ ಬಿಇಎಲ್ ಕಾರ್ಖಾನೆಯ ಹಿರಿಯ ಅಧಿಕಾರಿಗಳು ಚುನಾವಣಾ ಆಯೋಗವನ್ನು ಸಂಪರ್ಕಿಸಿ ವಿದ್ಯುನ್ಮಾನ ಯಂತ್ರವನ್ನು ಪ್ರದರ್ಶಿಸಿದ್ದರು. ಬಿಇಎಲ್ ತಾನು ಅಭಿವೃದ್ಧಿಪಡಿಸಿದ್ದ ವಿದ್ಯುನ್ಮಾನ ಯಂತ್ರವನ್ನು ಉಪಯೋಗಿಸಿ12ಸಾವಿರ ಕಾರ್ಮಿಕರ ಚುನಾವಣೆಯನ್ನು ಯಶಸ್ವಿಯಾಗಿ ಕೈಗೊಂಡಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಸಮ್ಮುಖದಲ್ಲಿ ಈ ಯಂತ್ರವನ್ನು ಪ್ರದರ್ಶಿಸಿ ಅವರು ನೀಡಿದ ಉತ್ತೇಜನದಿಂದ ಇವಿಎಂ ಯಂತ್ರದ ಆವಿಷ್ಕಾರವಾಗಿ ಇದೀಗ ದೇಶದ ಚುನಾವಣೆಯ ಅವಿಭಾಜ್ಯ ಅಂಗವಾಗಿದೆ. ಮೊಟ್ಟ ಮೊದಲಬಾರಿಗೆ1982ರ ಕೇರಳದ ಪರವೂರು ವಿಧಾನಸಭೆ ಉಪಚುನಾವಣೆಯ 50 ಬೂತುಗಳಲ್ಲಿ ಇವಿಎಂ ಬಳಸಲಾಯಿತು.
ಕಾನೂನು ಬಲವಿಲ್ಲದ ಕಾರಣ ಸುಪ್ರೀಂಕೋರ್ಟ್‌ನಲ್ಲಿ ಚುನಾವಣೆ ಅಸಿಂಧುಗೊಳಿಸಲಾಯಿತು.1983ರಲ್ಲಿ ಮೊದಲ ಬಾರಿಗೆಬೆಂಗಳೂರಿನ ಶಾಂತಿನಗರ ವಿಧಾನಸಭೆ ಚುನಾವಣೆಯ75ಬೂತ್‌ಗಳಲ್ಲಿ ಇವಿಎಂ ಬಳಸಲಾಗಿತ್ತು. ಇಸಿಐಎಲ್‌ನಲ್ಲಿ ತಾಂತ್ರಿಕ ವ್ಯವಸ್ಥಾಪಕರಾಗಿದ್ದ ಟಿ. ಎಲ್ ಸ್ವಾಮಿಯವರು ಇವಿಎಂ ಕಂಡು ಹಿಡಿದ ಕೀರ್ತಿಗೆ ಭಾಜನರು. ಅಂದಿನ ಮುಖ್ಯ ಚುನಾವಣಾಧಿ ಕಾರಿ ಎಸ್.ಎಲ್.ಶಕ್ದರ್‌ರವರ ಉತ್ತೇಜನದ ಮೇರೆಗೆ ಟಿ.ಎಲ್.ಸ್ವಾಮಿಯವರು ಇವಿಎಂ ಅಭಿವೃದ್ಧಿಪಡಿಸಿ ದೇಶದ ಚುನಾವಣಾ ವ್ಯವಸ್ಥೆಗೆ ಆಧುನಿಕತೆಯ ಸ್ಪರ್ಶ ನೀಡುತ್ತಾರೆ.
1988ರಲ್ಲಿ ಜನಪ್ರತಿನಿಧಿ ಕಾಯಿದೆ1951ಕ್ಕೆ ತಿದ್ದುಪಡಿ ತಂದು 61ಎ ಸೇರ್ಪಡೆ ಮಾಡಿ ಇವಿಎಂ ಮೂಲಕ ಮತದಾನ ಮಾಡಲು ಕಾನೂನಾತ್ಮಕ ಬಲವನ್ನು ನೀಡಿದ ಕೀರ್ತಿಯು ರಾಜೀವ್ ಗಾಂಧಿಯವರಿಗೆ ಸಲ್ಲುತ್ತದೆ.1990ರಲ್ಲಿ ಕಾನೂನು ಸಚಿವರಾಗಿದ್ದ ದಿನೇಶ್ ಗೋಸ್ವಾಮಿಯವರ ನೇತೃತ್ವದಲ್ಲಿ ಸರ್ವ ಪಕ್ಷಗಳ ಚುನಾವಣಾ ಸುಧಾರಣಾ ಸಮಿತಿಯನ್ನು ರಚನೆ ಯಾಗುವುದು. ಈ ಸಮಿತಿಯು ಚುನಾವಣೆಗಳಲ್ಲಿ ಇವಿಎಂ ಬಳಸಲು ಅಧಿಕೃತ ಮೊಹರೆಯನ್ನು ಒತ್ತುತ್ತದೆ. ಗೋಸ್ವಾಮಿ ವರದಿಯಲ್ಲಿ ಇವಿಎಂ ವಿಶ್ವಾಸಾರ್ಹತೆ ಕಾಪಾಡಲು ತಾಂತ್ರಿಕ ಸಮಿತಿಯನ್ನು ರಚಿಸಲು ಸೂಚಿಸುತ್ತದೆ.
ಅದರನ್ವಯ ದೇಶದ ಪ್ರತಿಷ್ಠಿತ ಸಂಸ್ಥೆಗಳ ಪರಿಣಿತರ ನ್ನೊಳಗೊಂಡ ತಾಂತ್ರಿಕ ಸಮಿತಿಯ ರಚಿನೆಯಾಗುತ್ತದೆ. ತಾಂತ್ರಿಕ ಸಮಿತಿಯ ಶಿಫಾರಸಿನ ಅನ್ವಯ ವಿದ್ಯುನ್ಮಾನ ಮತಯಂತ್ರಗಳು ಹಲವಾರು ಬದಲಾವಣೆಗಳನ್ನು ಕಳೆದ3ದಶಕಗಳಲ್ಲಿ ಕಂಡಿವೆ.2013ನಂತರ ಉಪಯೋಗಿಸುವ ಯಂತ್ರದಲ್ಲಿ ಯಾರಾದರು ಯಂತ್ರವನ್ನು ತಿರುಚಲು ಯತ್ನಿಸಿದರೆ ಪತ್ತೆ ಮಾಡುವ ಸುರಕ್ಷತಾ ಸಾಧನವನ್ನು ಅಳವಡಿಸಿದ್ದಾರೆ.
ಇವಿಎಂನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಲು2013ರಲ್ಲಿ ಮೊದಲ ಬಾರಿಗೆ ವಿವಿಪ್ಯಾಟ್(ಮತದಾರರ ದೃಢೀಕರಣ ಪೇಪರ್ ಆಡಿಟ್ ಟ್ರೈಯಲ್) ಸೇರ್ಪಡೆಯಾಯಿತು. ಸುಬ್ರಮಣ್ಯ ಸ್ವಾಮಿಯವರು ಸಲ್ಲಿಸಿದ ಪಿಐಎಲ್ ಪರಿಣಾಮ ನ್ಯಾಯಾಲಯ ಇವಿಎಂ ನೊಂದಿಗೆ ವಿವಿಪ್ಯಾಟ್ ಕಡ್ಡಾಯಗೊಳಿಸಿತು.
ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸುವವರು ತಮ್ಮ ಸೋಲನ್ನು ಮುಚ್ಚಿಕೊಳ್ಳಲು ಮಾಡುವ ಹಾಸ್ಯಾಸ್ಪದ ಆರೋಪ ವಾಗಿದೆ. ಇವಿಎಂ ತಂತ್ರಜ್ಞಾನವನ್ನು ಮತ್ತು ಅಡಕವಾಗಿರುವ ಸುರಕ್ಷಾ ಕ್ರಮಗಳನ್ನು ಅರ್ಥ ಮಾಡಿಕೊಳ್ಳದೆ ನಿರಕ್ಷರಕುಕ್ಷಿಗಳ ಹಾಗೆ ಇವಿಎಂ ತಿರುಚಲಾಗಿದೆ ಎಂದು ಆರೋಪಿಸಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಿಗೆ ಅಪಮಾನ ವೆಸಗುತ್ತಿದ್ದಾರೆ.
ಇಡೀ ವಿಶ್ವಕ್ಕೆ ಮಾದರಿಯಾದಂತಹ ವಿದ್ಯುನ್ಮಾನ ಮತಯಂತ್ರವನ್ನು ಸಾರ್ವಜನಿಕ ಉದ್ದಿಮೆಯಾದ ಬಿ.ಇ.ಎಲ್ ಮತ್ತು ಈಸಿಐಎಲ್ ಅಭಿವೃದ್ದಿಪಡಿಸಿರುವುದು ದೇಶಕ್ಕೆ ಹೆಮ್ಮೆ ಸಂಗತಿಯಾಗಿದೆ. ಇವಿಎಂ ಬೇಡ ಬ್ಯಾಲೆಟ್ ಪೇಪರ್ ಮತ್ತೆ ಮರಳಿ ತನ್ನಿ ಎಂದು ಒತ್ತಾಯಿಸುವ ರಾಜಕಾರಣಿಗಳು ಪ್ರಾಯಶಃ ಬ್ಯಾಲೆಟ್ ಪೇಪರ್ ಸಂದರ್ಭದಲ್ಲಿ ನಡೆಯುತ್ತಿದ್ದ ಚುನಾವಣಾಅಕ್ರಮಗಳ ಬಗ್ಗೆ ಅವರದು ಜಾಣ ಮರೆವು.
1957ರಲ್ಲಿ ಬಿಹಾರದ ಬೇಗೂಸರಾಯ್‌ನ ರಚಿಮಾರಿಯಲ್ಲಿ ಮೊಟ್ಟ ಮೊದಲ ಬಾರಿ ಮತಗಟ್ಟೆ ವಶಪಡಿಸಿಕೊಂಡ ಪ್ರಕರಣ ನಡೆದಿದ್ದು. ತದನಂತರ ಹಲವಾರು ಚುನಾವಣೆಗಳಲ್ಲಿ ಮತಗಟ್ಟೆಯನ್ನು ತೋಳ್ಬಲದಿಂದ ವಶಪಡಿಸಿಕೊಂಡು ಚುನಾವಣಾಫಲಿತಾಂಶಗಳು ಬದಲಾಗಿರುವ ನಿರ್ದಶನಗಳಿವೆ. ಪೇಪರ್ ಬ್ಯಾಲೆಟ್ ಅವಧಿಯಲ್ಲಿ ವ್ಯಾಪಕವಾಗಿ ಚುನಾವಣಾ ಹಿಂಸಾಚಾರ ಮತ್ತು ಮತದಾನ ಕೇಂದ್ರಗಳಿಗೆ ಬೆಂಕಿ ಹಾಕಲಾಗುತ್ತಿತ್ತು.
ಹಿಂಸಾಚಾರಕ್ಕೆ ನೂರಾರು ಜನರೂ ಬಲಿಯಾಗಿದ್ದಾರೆ. ಬಿಹಾರ ಉತ್ತರ ಪ್ರದೇಶ, ಪಶ್ಚಿಮಬಂಗಾಳ, ಮುಂತಾದ ರಾಜ್ಯಗಳುಚುನಾವಣಾ ಅಕ್ರಮ ಮತ್ತು ಹಿಂಸಾಚಾರದಲ್ಲಿ ಮುಂಚೂಣಿಯಲ್ಲಿದ್ದವು. 2004ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ543ಕ್ಷೇತ್ರಗಳಲ್ಲಿ ಇವಿಎಂ ಬಳಕೆ ಮಾಡಲಾಯಿತು. ದೇಶದಲ್ಲಿ ಒಂದೇ ಒಂದು ಬೂತ್ ವಶಪಡಿಸಿಕೊಂಡ ಪ್ರಕರಣಗಳುನಡೆಯಲಿಲ್ಲ. ಹಿಂಸಾಚಾರ ತಗ್ಗಿ ನೂರಾರು ಜೀವಗಳು ಉಳಿದವು. ಮತ ಎಣಿಕೆಯ ಸಂದರ್ಭದಲ್ಲಿ ಚಿಹ್ನೆಯ ಮೇಲೆ ಒತ್ತಿರುವ ಸೀಲು ವ್ಯತ್ಯಾಸವಿದ್ದರೆ ಗೊಂದಲಗಳಿಗೆ ಕಾರಣವಾಗಿ ಹಿಂಸಾಚಾರಕ್ಕೆ ತಿರುಗುತ್ತಿತ್ತು.
ಪದೇಪದೆ ಮರುಎಣಿಕೆಯು ಎಷ್ಟೊ ಸಂದರ್ಭದಲ್ಲಿ ನಡೆಯುತ್ತಿತ್ತು. ಇವಿಎಂ ನಲ್ಲಿ ಒಂದು ಗಂಟೆಗೆ240ಓಟುಗಳನ್ನುಮಾತ್ರ ಚಲಾವಣೆ ಮಾಡಲು ಸಾಧ್ಯವಿರುವುದರಿಂದ ಬೂತ್ ವಶಪಡಿಸಿಕೊಳ್ಳುವ ದಂಧೆ ನಿಂತಿದೆ ಮತ ಎಣಿಕೆ ಸಂದರ್ಭ ದಲ್ಲಿಯೂ ಯಾವುದೇ ಗೊಂದಲ ಇಲ್ಲವಾಗಿದೆ. ವಿಪರ್ಯಾಸವೆಂದರೆ ದೇಶದಲ್ಲಿ ಇವಿಎಂ ಬಳಕೆಗೆ ತಂದಿದ್ದೇ ಕಾಂಗ್ರೆಸ್ ಪಾರ್ಟಿ. ಎರಡು ಬಾರಿ ಲೋಕಸಭಾ ಚುನಾವಣೆಯನ್ನು ಇವಿಎಂ ಮೂಲಕವೇ ಜಯ ಸಾಧಿಸಿದರು.
ಅದಲ್ಲದೆ ಅನೇಕ ವಿಧಾನ ಸಭಾ ಚುನಾವಣೆಗಳನ್ನು ಗೆದ್ದಿದ್ದಾರೆ.2014ರ ಲೋಕಸಭಾ ಚುನಾವಣೆಯಲ್ಲಿ ಸೋತ ತರುವಾಯ ಇವರಿಗೆ ಇವಿಎಂ ದೋಷಪೂರಿತ ಎಂಬ ಜ್ಞಾನೋದಯ ಉಂಟಾಗಿದೆ.2009ರಲ್ಲಿ ವಾರ್ತಾ ಮತ್ತು ಪ್ರಸಾರ ರಾಜ್ಯ ಮಂತ್ರಿ ಯಾಗಿದ್ದ ಸಚಿನ್ ಪೈಲೆಟ್ ಇವಿಎಂ ಮೂಲಕ ನಾವು ಚುನಾವಣೆಯನ್ನು ಡಿಜಿಟಲೈಸ್ ಮಾಡಿದ್ದೇವೆ. ಇವಿಎಂ ವಿರುದ್ಧದ ಆಪಾದನೆಯನ್ನು ನಾನು ನಂಬುವುದಿಲ್ಲ ಅವು ಸಂಪೂರ್ಣ ದೋಷರಹಿತವಾಗಿದೆ ಎಂದು ಹೆಮ್ಮೆ ಪಡುತ್ತಾರೆ.
ಕೇಂದ್ರ ಕಾನೂನು ಸಚಿವರಾಗಿದ್ದ ವೀರಪ್ಪ ಮೊಯ್ಲಿಯವರು ಇವಿಎಂಗಳ ವಿಶ್ವಾಸಾರ್ಹತೆಯನ್ನು ಬಲವಾಗಿ ಸಮರ್ಥಿಸಿ ಕೊಂಡು ಸೋಲಿನ ಮನಸ್ಥಿತಿಯಿಂದ ಇವಿಎಂ ವಿರುದ್ಧ ಸಲ್ಲದ ಆರೋಪವನ್ನು ಮಾಡಲಾಗುತ್ತಿದೆ ಎಂಬ ಕಟುಸತ್ಯವನ್ನು ನೇರವಾಗಿ ಹೇಳಿದ್ದಾರೆ. ನಾವು ಹೊಸತನದ ರಾಜಕೀಯ ಮಾಡುವವರು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಆಮ್ ಆದ್ಮಿ ಪಾರ್ಟಿಯು ಇವಿಎಂ ಬಗ್ಗೆ ನಿರ್ಲಜ್ಜವಾದ ಇಬ್ಬಗೆ ನೀತಿ ಅನುಸರಿಸುತ್ತಾರೆ.
ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ70ಕ್ಕೆ63ಸೀಟು ಗೆದ್ದಾಗ ಇವಿಎಂ ಬಗ್ಗೆ ಚಕಾರವಿಲ್ಲ. ಪಂಜಾಬ್ ಮತ್ತು ದೆಹಲಿ ನಗರಪಾಲಿಕೆ ಚುನಾವಣೆಯಲ್ಲಿ ಸೋತ ಕೂಡಲೇ ಇವಿಎಂ ಹ್ಯಾಕ್ ಮಾಡಿ ನಮ್ಮನ್ನು ಸೋಲಿಸಲಾಗಿದೆ ಎಂದು ರೋದಿಸುತ್ತಾರೆ.ರಾಜಕಾರಣಿಗಳು ಅನುಕೂಲಕ್ಕೆ ತಕ್ಕ ಹಾಗೆ ನಿಲುವು ತಾಳುವುದು ಹೊಸತಲ್ಲ ಮತ್ತು ದ್ವಂದ್ವ ನಿಲುವು ತಾಳದಂತಹ ರಾಜಕೀಯ ಪಕ್ಷವೇ ದೇಶದಲ್ಲಿ ಇಲ್ಲ.
ಅಧಿಕಾರದಲ್ಲಿ ಇದ್ದಾಗ ಮತ್ತು ಅಧಿಽಕಾರ ವಂಚಿತರಾದಾಗ ನಿಲುವುಗಳು ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತದೆ. ‘ಇವಿಎಂ ವಿರೋಧವನ್ನು ಮಾಡುವವರು ಸಮಯಸಾಧಕ ರಾಜಕೀಯ ಮಾಡುತ್ತಿದ್ದಾರೆ’ ಎನ್ನುತ್ತಾರೆ ಇವಿಎಂ ಇತಿಹಾಸ ಕುರಿತು ಪುಸ್ತಕ ಬರೆದಿರುವ ಮಾಜಿ ಕೇಂದ್ರ ಉಪಚುನಾವಣಾಧಿಕಾರಿ ಅಲೋಕ್ ಶುಕ್ಲರವರು. ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ2009ಮತ್ತು2017ರಲ್ಲಿ ಇವಿಎಂ ಹ್ಯಾಕ್ ಮಾಡಿ ತೋರಿಸಿ ಎಂದು ಬಹಿರಂಗವಾಗಿ ಸವಾಲು ನೀಡುತ್ತದೆ.
ಆದರೆ ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ಗೂಬೆ ಕೂರಿಸುತ್ತಿದ್ದ ರಾಕೀಯ ಪಕ್ಷಗಳು ಸವಾಲು ಸ್ವೀಕರಿಸಲು ಮುಂದೆ ಬರುವುದೇ ಇಲ್ಲ. ಅಮೆರಿಕದಲ್ಲೇ ಇವಿಎಂ ಬಳಸುವುದಿಲ್ಲ ಎಂದು ಅಬ್ಬರಿಸುತ್ತಾರೆ ಭಾರತದ ಇವಿಎಂ ವಿರೋಧಿಗಳು. ಅಮೆರಿಕದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ವಿಧದ ಮತದಾನ ಪ್ರಕ್ರಿಯೆಯನ್ನು ಅನುಸರಿಸುತ್ತಾರೆ ಹಾಗೂ ಕೆಲವು ರಾಜ್ಯಗಳಲ್ಲಿ ಇವಿಎಂ ಬಳಕೆಯೂ ಜಾರಿಯಲ್ಲಿದೆ.
ದೇಶದ ವಿವಿಧ ನ್ಯಾಯಾಲಯಗಳಲ್ಲಿ ಇವಿಎಂ ಬಳಕೆಯ ವಿರುದ್ದ ಅನೇಕ ಕೇಸುಗಳು ದಾಖಲಾಗಿದೆ ಗಮನಾರ್ಹ ಸಂಗತಿ ಯೆಂದರೆ ನ್ಯಾಯಾಲಯಗಳು ಸುಧಾರಣೆಗೆ ಸಲಹೆಗಳನ್ನು ನೀಡಿವೆ ವಿನಹ ಇವಿಎಂ ವಿಶ್ವಾಸಾರ್ಹತೆಯ ವಿರುದ್ದ ತೀರ್ಪು ನೀಡಿಲ್ಲ ಪ್ರಪಂಚದಲ್ಲಿ ಅಂರ್ತಜಾಲದೊಂದಿಗೆ ಜೋಡಣೆಯಾಗದ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಮತ್ತು ಇವಿಎಂನೊಳಗೆ ಅಳವಡಿಸಿರುವ ಚಿಪ್ ಒಂದು ಪಕ್ಷಕ್ಕೆ ಅನುಕೂಲವಾಗುವಂತೆ ತಯಾರಿಸಲು ಆಪೆಲ್ ಜನಕ ಸ್ವೀವ್ ಜಾಬ್ ನಂತಹ ತಾಂತ್ರಿಕ ದಿಗ್ಗಜನಿಂದಲೂ ಸಾಧ್ಯವಾಗುತ್ತಿರಲಿಲ್ಲ.
ಇವಿಎಂನೊಂದಿಗೆ ವೈರ್‌ಲೆಸ್ ಸಂವಹನ ಸಾಧಿಸಲು ಬೇಕಾದ ಯಾವುದೇ ಆಂಟೆನವಾಗಲಿ, ಟ್ರಾನ್ಸಮೀಟರ್ ಹಾಗೂ ರೀಸಿವರ್‌ ಗಳಿಲ್ಲ ಹೀಗಾಗಿ ಇವಿಎಂಗಳನ್ನು ಯಾವುದೇ ನೆಟ್‌ವರ್ಕ್‌ಗೆ ಜೋಡಿಸಲೂ ಸಾಧ್ಯವಿಲ್ಲ. ಆರೋಪ ಮಾಡುವ ರಾಜಕೀಯ ಪಕ್ಷಗಳು ಇವಿಎಂ ಹೇಗೆ ತಿರುಚಲು ಸಾಧ್ಯ ಎಂಬುದನ್ನು ತಾಂತ್ರಿಕವಾಗಿ ನಿರೂಪಿಸಲು ಸೋತಿವೆ. ಆದರೆ ಇವಿಎಂ ಬಗ್ಗೆ ತಮಗಿ ರುವ ಅಜ್ಞಾನವನ್ನು ನಿರ್ಲಜ್ಜತೆಯಿಂದ ಪ್ರರ್ದಶಿಸುವುದನ್ನು ಅಚ್ಚುಕಟ್ಟಾಗಿ ಮುಂದುವರೆಸಿವೆ.
‘ತನ್ನ ದೋಷವ ನೂರು ಬೆನ್ನ ಹಿಂದಕ್ಕಿಟ್ಟು ಅನ್ಯ್ರೊಂದಕ್ಕೆ ಹುಲಿಯಪ್ಪ ಮಾನವನು ಕುನ್ನಿಯಲ್ಲೇನು ಸರ್ವಜ್ಞ’. ಶತಮಾನಗಳ ಕೆಳಗೆ ಸರ್ವಜ್ಞ ಈ ಬಗೆಯ ವರ್ತನೆಯನ್ನು ಅಂದೇ ಸುಂದರವಾಗಿ ಬಣ್ಣಿಸಿದ್ದರು.