ಮಾಡೋದೆಲ್ಲ ತಪ್ಪೆನ್ನುವ ಬದಲು, ಸರಿ ದಾರಿ ತೋರಿ
ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಕರ್ನಾಟಕದಲ್ಲಿ ಕರೋನಾ ಸ್ಫೋಟವಾಗಲು ಸರಕಾರವೇ ಹೊಣೆ… ನಿಮ್ಮ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಡಿ ನಾವು ನಿಭಾಯಿಸುತ್ತೇವೆ.. ಸರಕಾರ ಸತ್ತು ಹೋಗಿದೆ.. ಯಡಿಯೂರಪ್ಪನವರ ಸರಕಾರಕ್ಕೆ ಜನರ ಜೀವದ ಮೇಲೆ ಕಾಳಜಿ ಇಲ್ಲ…’ಕಳೆದೊಂದು ವಾರದಿಂದ ಪ್ರತಿಪಕ್ಷ ನಾಯಕರು, ಸಾರ್ವಜನಿಕರು ಹಾಗೂ ಸೋಷಿಯಲ್ ಮಿಡಿಯಾ ಸೋಕಾಲ್ಡ್ ತಜ್ಞರು ಸರಕಾರದ ವಿರುದ್ಧ ಮಾತನಾಡುತ್ತಿರುವ ಪರಿ.
ಅವರು ಹೇಳುತ್ತಿರುವಂತೆ, ರಾಜ್ಯದ ಜನರನ್ನು ಕಾಪಾಡುವುದು, ಕರೋನಾ ಸಾಂಕ್ರಾಮಿಕದಿಂದ ಜನರನ್ನು ರಕ್ಷಿಸುವುದು ಅವರ ಕರ್ತವ್ಯ ಸರಿ. ಆದರೆ ಕರೋನಾ ನಿಯಂತ್ರಿಸುವ ವಿಷಯದಲ್ಲಿ ಸರಕಾರ ಸರಿಯಾದ ಕ್ರಮವಹಿಸಿಲ್ಲ ಎನ್ನುವುದು ಎಷ್ಟು ಸರಿಯೋ, ಸೋಂಕು ಹಬ್ಬುವುದಕ್ಕೆ ಜನರ ಹುಂಬುತನವೂ ಕಾರಣ ಎನ್ನುವ ವಾದವನ್ನು ಒಪ್ಪಲೇಬೇಕು.
ಕಳೆದ ವರ್ಷ ವಿಶ್ವದಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಾಗ, ಏನು ಮಾಡಬೇಕು ಎನ್ನುವುದು ಸರಕಾರಕ್ಕೆ ಗೊತ್ತಿರಲಿಲ್ಲ. ಜನರಿಗೆ ಹೇಗೆ ಈ ಸೋಂಕಿನಿಂದ ತಪ್ಪಿಸಿಕೊಳ್ಳಬೇಕು ಎನ್ನುವ ಅರಿವು ಇರಲಿಲ್ಲ. ಆದರೆ ಕಳೆದೊಂದು ವರ್ಷದಲ್ಲಿ ಕರೋನಾ ಸೋಂಕಿಗೆ ಮಾತ್ರೆಗಿಂತ ದೊಡ್ಡ ಮದ್ದು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಎನ್ನುವುದನ್ನು ಸಾವಿರ ಬಾರಿ ಸರಕಾರ ಹೇಳಿದೆ.
ಹಲವು ತಜ್ಞರು ಇದೇ ವಾದವನ್ನು ಮಂಡಿಸಿದ್ದಾರೆ. ಅಷ್ಟಾದರೂ ಜನ ಮಾತ್ರ, 2021ರ ಆರಂಭದಲ್ಲಿ ಸೋಂಕಿನ ಸಂಖ್ಯೆ ಕುಸಿಯುತ್ತಿದ್ದಂತೆ, ಎಲ್ಲವನ್ನು ಮರೆತು ದಿಲ್‌ದಾರ್ ಎನ್ನುವಂತೆ ಓಡಾಡಲು ಶುರು ಮಾಡಿದರು. ಎರಡನೇ ಅಲೆ ಮೊದಲ ಅಲೆಗಿಂತ ವೇಗವಾಗಿ ಹಬ್ಬುತ್ತದೆ. ಎಚ್ಚರಿಕೆವಹಿಸಿ ಎನ್ನುವ ಮಾತನ್ನು ತಜ್ಞರು ಹೇಳುತ್ತಾ ಬಂದರೂ ಇದನ್ನು ತಲೆಗೆ ಹಾಕಿ ಕೊಳ್ಳುವ ಪರಿಸ್ಥಿತಿಯಲ್ಲಿ ಯಾರು ಇರಲಿಲ್ಲ.
ಒಂದು ಹಂತದಲ್ಲಿ, ‘ಮಾಸ್ಕ್ ರಹಿತ ಪ್ರಪಂಚದಲ್ಲಿ ಮಾಸ್ಕ್ ಹಾಕಿಕೊಂಡವನೇ ಮಾನಗೇಡಿ’ ಎನ್ನುವ ಪರಿಸ್ಥಿತಿಯೂ ನಿರ್ಮಾಣ ವಾಗಿತ್ತು. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ, ಕರೋನಾ ಮೂರಂಕಿಗೆ ಇಳಿಯುತ್ತಿದ್ದಂತೆ ಹಾಗೂ ಕರೋನಾ ಲಸಿಕೆಯನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸುತ್ತಿದ್ದಂತೆ, ದೇಶದಲ್ಲಿ ಕರೋನಾವೇ ಇಲ್ಲವೇನೋ ಎನ್ನುವಂತೆ ಓಡಾಡಲು ಶುರುಮಾಡಿದರು. ಆಡಳಿತ ನಡೆಸುವವರಿಗೆ, ಕರೋನಾದ ಅಲೆ ಬರುತ್ತಿದೆ ಎನ್ನುವುದು ತಿಳಿದಿದ್ದರೂ, ಜನರಿಗೆ ಈ ಬಗ್ಗೆ ತಿಳಿವಳಿಕೆ ಹೇಳುವ ಪ್ರಯತ್ನ ವನ್ನೂ ಮಾಡಲಿಲ್ಲ. (ಮಾಡಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ನಮ್ಮ ಜನ ಇರಲಿಲ್ಲ ಎನ್ನುವುದು ಬೇರೆ ಮಾತು) ಅದರ ಫಲವಾಗಿ ಇದೀಗ ರಾಜಧಾನಿ ಒಂದರಲ್ಲೇ, ದಿನಕ್ಕೆ10ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬರುತ್ತಿವೆ.
ಸರಕಾರ ಹೇಳುತ್ತಿರುವ ಪ್ರಕಾರ, ೧೦ಸಾವಿರ ಪ್ರಕರಣದಲ್ಲಿ ಸುಮಾರು ಒಂದರಿಂದ ಒಂದುವರೆ ಸಾವಿರ ಜನರಿಗೆ ಮಾತ್ರ ಆಸ್ಪತ್ರೆ ಯ ಅವಶ್ಯಕತೆ ಇರುತ್ತದೆ. ಆದರೆ ಸರಕಾರ ಸರಾಸರಿ ನಿತ್ಯ200ರಿಂದ250ಬೆಡ್‌ಗಳನ್ನು ಸಿದ್ಧಪಡಿಸುತ್ತಿವೆ. ನಿಜವಾದಸಮಸ್ಯೆ ಶುರುವಾಗಿರುವುದು ಇಲ್ಲಿಯೇ. ಈಗಾಗಲೇ97ಸಾವಿರಕ್ಕೂ ಹೆಚ್ಚು ಸಕ್ರಿಯ ಸೋಂಕಿತರಿದ್ದು, ಇವರಲ್ಲಿ ಕನಿಷ್ಠ 10 ಸಾವಿರ ಜನರಿಗೆ ಆಸ್ಪತ್ರೆಯಲ್ಲಿ ಬೆಡ್ ಅಗತ್ಯವಿದೆ.
ಹಳೆ ಸೋಂಕಿತರೊಂದಿಗೆ ಹೊಸಬರು ಸೇರಿಕೊಳ್ಳುತ್ತಿರುವುದರಿಂದ ಬೆಡ್‌ಗಳು ಸಿಗುತ್ತಿಲ್ಲ. ಈ ಕರೋನಾ ಸಂದಿಗ್ಧ ಪರಿಸ್ಥಿತಿ ಯನ್ನು ಸರಕಾರ ನಿಭಾಯಿಸುವುದು ಅದ್ಯ ಕರ್ತವ್ಯವಾಗಬೇಕು. ಆದರೆ ಸರಕಾರದ ಪ್ರತಿ ಹೆಜ್ಜೆಯೂ ತಪ್ಪು ಎನ್ನುವ ಬದಲು, ಈಪರಿಸ್ಥಿತಿಯಿಂದ ಹೊರಬರುವುದು ಹೇಗೆ ಎನ್ನುವ ನಿಟ್ಟಿನಲ್ಲಿ ಸರಕಾರಕ್ಕೆ ಸಲಹೆ ನೀಡುವ ಕೆಲಸವನ್ನು ಮಾತ್ರ ಯಾರೊಬ್ಬರುಮಾಡುತ್ತಿಲ್ಲ. ಪ್ರತಿಪಕ್ಷಗಳು ಸಲಹೆ ನೀಡುವ ಬದಲು ಪರಿಸ್ಥಿತಿಯ ಲಾಭ ಪಡೆಯುವ ಮನಸ್ಥಿತಿಯಲ್ಲಿದ್ದರೆ, ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸರಕಾರ ಹೇಳುವ ಮಾರ್ಗಸೂಚಿಯನ್ನು ಪಾಲಿಸುತ್ತಿಲ್ಲ. ಜನರ ಈ ಮನಸ್ಥಿತಿಯಿಂದ ಕೆಲವರು ‘ಸೂಪರ್ ಸ್ಪ್ರೆಡರ್’ ಗಳಾಗುತ್ತಿರುವುದು ಸುಳ್ಳಲ್ಲ.
ಸಂವಿಧಾನದಲ್ಲಿ ಆಡಳಿತ ಪಕ್ಷಕ್ಕೆ ಇರುವಷ್ಟೇ ಮಹತ್ವ ಪ್ರತಿಪಕ್ಷಗಳಿಗೂ ಇದೆ ಎನ್ನುವುದನ್ನು ಒಪ್ಪಲೇಬೇಕು. ಅದಕ್ಕೆ ಪ್ರತಿಪಕ್ಷ ವನ್ನು   ಎಂದು ಕರೆಯುತ್ತಾರೆ. ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಾಗಲಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಾಗಲಿ ಕರೋನಾ ಸಂಕಷ್ಟದಿಂದ ಹೊರಬರುವ ಮಾರ್ಗವನ್ನು ಹೇಳಿದ್ದು ನಾನಂತು ಕೇಳಿಲ್ಲ.
ಸರಕಾರ ಲಾಕ್‌ಡೌನ್ ಮಾಡುವುದಿಲ್ಲ ಎಂದರೆ, ‘ಜನರ ಜೀವದೊಂದಿಗೆ ಸರಕಾರ ಆಟವಾಗುತ್ತಿದೆ’ ಎನ್ನುವ ನಾಯಕರು, ಲಾಕ್‌ಡೌನ್ ಮಾಡುತ್ತೇವೆ ಎಂದರೆ, ‘ಲಾಕ್ ಡೌನ್ ಒಂದೇ ಕರೋನಾ ನಿಯಂತ್ರಣಕ್ಕೆ ಪರಿಹಾರವಲ್ಲ. ಇದರಿಂದ ರಾಜ್ಯದ ಬೊಕ್ಕಸ ಬರಿದಾಗುತ್ತದೆ’ ಎನ್ನುತ್ತಿದ್ದಾರೆ. ಹಾಗಾದರೆ ಲಾಕ್‌ಡೌನ್ ಬೇಕು-ಬೇಡ ಎನ್ನುವುದರ ಮಧ್ಯೆ ನಿಯಂತ್ರಣಕ್ಕೆ ಇರುವ ಕ್ರಮದ ಬಗ್ಗೆಯಾದರೂ ಸರಕಾರಕ್ಕೆ ಹೇಳಬಹುದಲ್ಲ.
ಇಡೀ ವಿಶ್ವವನ್ನೇ ಕಾಡಿಸುತ್ತಿರುವ ಕರೋನಾ ನಿಯಂತ್ರಿಸುವುದರಲ್ಲಿ ಸರಕಾರದ ಕೆಲಸ ಎಷ್ಟು ಪ್ರಮುಖವೋ, ಪ್ರತಿಪಕ್ಷವಾಗಿ ಸರಕಾರಕ್ಕೆ ಬೆಂಬಲ ನೀಡುವುದು ಅಷ್ಟೇ ಮುಖ್ಯ. ಕಾಂಗ್ರೆಸ್‌ನ ರಾಹುಲ್ ಗಾಂಧಿಯಿಂದ ಹಿಡಿದು, ಆ ಪಕ್ಷದ ತಾಲೂಕು ಪಂಚಾಯಿತಿ ಸದಸ್ಯನವರೆಗೂ ಸರಕಾರವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಪರಿಹಾರಕ್ಕೆ ಸಲಹೆಗಳನ್ನು ಮಾತ್ರ ನೀಡುತ್ತಿಲ್ಲ. ಸಲಹೆ ನೀಡಿ ಎಂದು ಕೇಳಿದರೆ, ‘ನಮ್ಮ ಸಲಹೆಗಳನ್ನು ಪರಿಗಣಿಸುವುದಿಲ್ಲ’ ಎಂದು ಸಾರಾಸಗಟಾಗಿ ತಳ್ಳಿಹಾಕುವಪ್ರವೃತಿ ಇದೀಗ ಅನೇಕರಲ್ಲಿ ಶುರುವಾಗಿದೆ. ಆದರೆ ಮೊದಲು ಏನು ಮಾಡಬೇಕು ಎಂದು ಸಲಹೆ ನೀಡಿ.
ಬಳಿಕ ಸರಕಾರ ಅದನ್ನು ಪರಿಗಣಿಸಿತೋ ಇಲ್ಲವೋ ಎನ್ನುವ ಬಗ್ಗೆ ಯೋಚಿಸಿದರಾಯಿತು. ಇನ್ನು ಪ್ರತಿಪಕ್ಷದ ಹಿರಿಯ ನಾಯಕರ ಈ ರೀತಿಯ ನಡುವೆಯೂ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಿನ್ನವಾಗಿ ನಿಂತಿದ್ದಾರೆ. ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವ ಅವರು, ಕರೋನಾ ನಿಯಂತ್ರಣಕ್ಕೆ ಐದು ಅಂಶಗಳ ಸಲಹೆಯನ್ನು ನೀಡಿದ್ದಾರೆ. ಕೇಂದ್ರ ಸರಕಾರವೂ ಇದೀಗ ಈ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿಬೇಕಾಗುತ್ತದೆ.
ಇದೇ ರೀತಿ ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಬಳಿಯಿರುವ ಸಲಹೆಗಳನ್ನು ಯಡಿಯೂರಪ್ಪನವರಿಗೆ ನೀಡುವ ಕೆಲಸಕ್ಕೆ ಮುಂದಾಗಬೇಕು. ಕರೋನಾ ನಿಯಮಾವಳಿ ವಿಷಯದಲ್ಲಿ ಇನ್ನೊಂದು ಆರೋಪವಿದೆ. ಏನೆಂದರೆ, ಕಾನೂನು, ಶಾಸನ ರೂಪಿಸುವ ಜನಪ್ರತಿನಿಧಿಗಳು ಈ ಕಾನೂನುಗಳನ್ನು ಏಕೆ ಪಾಲಿಸುವುದಿಲ್ಲ? ಜನಸಾಮಾನ್ಯರಿಗೆ ಇರುವ ಕಾನೂನು ಅವರಿಗೆ ಅನ್ವಯವಾಗುವುದಿಲ್ಲವೇ? ಎನ್ನುವ ಪ್ರಶ್ನೆಯಿದೆ.
ಪಾಲಿಸುತ್ತಿಲ್ಲ ಎನ್ನುವುದಕ್ಕೆ ಉಪಚುನಾವಣೆಗಳ ರ‍್ಯಾಲಿಯನ್ನು ಉದಾಹರಣೆಯಾಗಿ ನೀಡುವ ಕೆಲಸವನ್ನು ಅನೇಕರುಮಾಡಿದ್ದಾರೆ. ಈ ರೀತಿ ಸಾರ್ವಜನಿಕರು ಪ್ರಶ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ. ರಾಜ್ಯದಲ್ಲಿ ನಡೆದ ಬೆಳಗಾವಿ ಲೋಕಸಭೆಹಾಗೂ ಮಸ್ಕಿ, ಬಸವಕಲ್ಯಾಣ ಉಪಚುನಾವಣೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಯಾವ ಪಕ್ಷ, ಕರೋನಾ ಮಾರ್ಗಸೂಚಿ ಯನ್ನು ಉಲ್ಲಂಘನೆ ಮಾಡಿ ವೀರಾವೇಷದ ಮಾತುಗಳನ್ನು ಆಡಿದರು.
ಇನ್ನು ಈ ವಿಷಯದಲ್ಲಿ ಆಡಳಿತರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ಕರೋನಾ ಎನ್ನುವುದೇ ಇಲ್ಲ ಎನ್ನುವ ರೀತಿ ರ‍್ಯಾಲಿ ನಡೆಸಿದರು. ಪ್ರತಿ ರ‍್ಯಾಲಿಯಲ್ಲಿಯೂ ಕನಿಷ್ಠ 30ರಿಂದ 40 ಸಾವಿರ ಜನರನ್ನು ಸೇರಿಸಲಾಯಿತು.ಆದರೆ ಆಡಳಿತದಲ್ಲಿರುವ ಬಿಜೆಪಿ ಈ ವಿಷಯದಲ್ಲಿ ಇನ್ನಷ್ಟು ಎಚ್ಚರಿಕೆವಹಿಸಬೇಕಿತ್ತು. ಆಡಳಿತ ಪಕ್ಷಕ್ಕೆ ಉಪಚುನಾವಣೆಯನ್ನು ಗೆಲ್ಲಿಸಿಕೊಂಡು ಬರುವುದು ದೊಡ್ಡ ಸಮಸ್ಯೆ ಏನಲ್ಲ. ಆದರೆ ಇಡೀ ಸಚಿವ ಸಂಪುಟ ಸದಸ್ಯರು, ರಾಜ್ಯದ ಎಲ್ಲ ಕಾರ್ಯಕರ್ತರು ಅಲ್ಲಿ ಹೋಗಿ ಮೊಕ್ಕಾಂ ಹೂಡಿದರು.
ಇದೆಲ್ಲ ಮುಕುಟಮಣಿಯಂತೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾರಗಟ್ಟಲೇ ಅಲ್ಲಿಯೇ ನಿಂತು ಪ್ರಚಾರ ನಡೆಸಿದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಗುಡ್ಡೆ ಹಾಕಿಕೊಂಡು ಪ್ರಚಾರ ಮಾಡಿದ್ದರಿಂದ ಆ ಭಾಗದಲ್ಲಿ ಕರೋನಾ ಸೋಂಕು ಹಬ್ಬಿದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಯಡಿಯೂರಪ್ಪ ಅವರು ಎರಡನೇ ಬಾರಿಗೆ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಬೆಳಗಾವಿಯಲ್ಲಿ ಪ್ರಚಾರ ಮಾಡುತ್ತಿರುವ ವೇಳೆ, ಜ್ವರ ಕಾಣಿಸಿಕೊಂಡರೂ ಪ್ರಚಾರವನ್ನು ಮೊಟಕುಗೊಳಿಸುವ ಬದಲು ಮುಂದುವರಿಸಿದ್ದು ಎಷ್ಟು ಸರಿ? ರಾಜ್ಯದ ಮುಖ್ಯಮಂತ್ರಿಯಾಗಿ ಅವರೇ ಕರೋನಾ ಪ್ರೊಟೋಕಾಲ್ ಪಾಲಿಸದೇ ಇದ್ದರೆ ಜನರಿಂದ ನಿರೀಕ್ಷೆ ಮಾಡಲು ಹೇಗೆ ಸಾಧ್ಯ? ಉಪಚುನಾವಣಾ ಪ್ರಚಾರ ನಡೆಯುವಾಗ ಮೂರು ಪಕ್ಷದ ನಾಯಕರಿಗೂ ಕರೋನಾ ಇರುವುದು ತಿಳಿದಿರಲಿಲ್ಲ ಎನ್ನುವಂತೆ ವರ್ತಿಸುತ್ತಿದ್ದರು.
ಆದರೆ ಇದೀಗ ಕರೋನಾ ನಿಯಂತ್ರಣಕ್ಕೆ ಸರಕಾರ ಕ್ರಮ ಕೈಗೊಂಡಿಲ್ಲ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಸೋಂಕು ಹೆಚ್ಚಾಗು ತ್ತಿದ್ದಂತೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪಶ್ಚಿಮ ಬಂಗಾಳದ ರ‍್ಯಾಲಿಗಳನ್ನು ರದ್ದುಪಡಿಸಿದಂತೆ ನೀವು ರದ್ದು ಪಡಿಸಿ ಮಾದರಿಯಾಗಬಹುದಾಗಿತ್ತು ಅಲ್ಲವೇ? (ಸೋಲುವ ಭೀತಿಯಿಂದ ಕರೋನಾ ನೆಪದಲ್ಲಿ ರ‍್ಯಾಲಿಗಳನ್ನು ರದ್ದುಪಡಿಸಿ ದ್ದಾರೆ ಎನ್ನುವ ವಾದಕ್ಕಿಂತ, ಕನಿಷ್ಠ ಒಬ್ಬರಾದರೂ ಆ ಕ್ರಮ ಕೈಗೊಂಡರಲ್ಲ ಎನ್ನುವುದು ಗಮನಾರ್ಹ).
ಕರೋನಾದ ಈ ಸಂಕಷ್ಟದ ಸಮಯದಲ್ಲಿ ನಡೆಯುವ ಚುನಾವಣಾ ಪ್ರಚಾರವನ್ನು ಸಾಂಪ್ರದಾಯಿಕವಾಗಿ ಮಾಡದೇ, ಆನ್‌ಲೈನ್ ಮೊರೆ ಹೋಗಬಹುದಾಗಿತ್ತು. ಆದರೆ ಯಾವ ಪಕ್ಷಗಳು ಈ ಕೆಲಸವನ್ನು ಮಾಡಲು ಮನಸು ಮಾಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಮಮತಾ ಬ್ಯಾನರ್ಜಿ ಅವರೆಲ್ಲ ಲಕ್ಷಗಟ್ಟಲೇ ಜನರನ್ನು ಸೇರಿಸಿಕೊಂಡು ಪ್ರಚಾರ ನಡೆಸಿದರು. ಈ ಸಮಯದಲ್ಲಿ ಸ್ವತಃ ಪ್ರಧಾನಿಗಳು ಮಾಸ್ಕ್ ಹಾಕಿರಲಿಲ್ಲ.
ಹೀಗೆ ಜನರಿಗೆ ಬುದ್ಧಿವಾದ ಹೇಳಬೇಕಾದ ನಾಯಕರೇ ಕರೋನಾ ಮುನ್ನೆಚ್ಚರಿಕೆ ವಹಿಸದಿದ್ದರೆ, ಜನಸಾಮಾನ್ಯರಿಂದ ಇದನ್ನು ನಿರೀಕ್ಷೆ ಮಾಡಲು ಸಾಧ್ಯವೇ? ರಾಜಕೀಯ ನಾಯಕರ ಕೆಸರೆರಚಾಟದ ನಡುವೆ ನಾವಿಲ್ಲಿ ಸಾರ್ವಜನಿಕರು ಬುದ್ಧಿ ಕಲಿಯಬೇಕಿದೆ. ಪಕ್ಷಕ್ಕಿಂತ ಹೆಚ್ಚಾಗಿ ಸರಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಆದರೆ ಈ ಮಾರ್ಗಸೂಚಿಗಳನ್ನು ಪಾಲಿಸುವುದು ಸಾರ್ವಜನಿಕರ ಕೆಲಸ ಎನ್ನುವುದನ್ನು ಅರಿಯಬೇಕು.
ಒಂದೆರೆಡು ತಿಂಗಳು ಪ್ರವಾಸವನ್ನು ಮುಂದೂಡುವುದರಿಂದ, ಒಂದೆರೆಡು ವಾರ ಹೊಟೇಲ್‌ಗೆ ಹೋಗದೇ ಇರುವುದರಿಂದ ಅಥವಾ ಸಿಟಿಯ ಸ್ಥಿತಿ ನೋಡಬೇಕು ಎನ್ನುವ ಕಾರಣಕ್ಕೆ ಬೈಕ್‌ನಲ್ಲಿ ತಿರುಗಾಡಬೇಕು ಎನ್ನುವ ಮನಸ್ಥಿತಿಯಿಂದ ಜನರು ಹೊರ ಬರಬೇಕಿದೆ. ಅನಿವಾರ್ಯ ಪರಿಸ್ಥಿತಿಯನ್ನು ಹೊರತುಪಡಿಸಿ ಅನಗತ್ಯವಾಗಿ ಓಡಾಡುವುದನ್ನು ಬಿಟ್ಟು ಮನೆಯಲ್ಲಿ ಸುರಕ್ಷಿತ ವಾಗಿರುವುದು ಸೂಕ್ತ.
ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಹಾಗೂ ಈಗಿನ ಅಧ್ಯಕ್ಷ ಜೋ ಬೈಡನ್ಸೇರಿದಂತೆ ವೈದ್ಯಕೀಯ ವ್ಯವಸ್ಥೆಯಲ್ಲಿ ದೊಡ್ಡಣ್ಣ ಎನಿಸಿಕೊಂಡಿದ್ದ ಇಟಲಿಯೇ ಒಂದು ಕ್ಷಣ ಕರೋನಾ ನಿರ್ವಹಣೆ ಅಸಾಧ್ಯ ಎಂದು ಕೈ ಮೀರಿದ್ದ ಸಮಯದಲ್ಲಿ, ಕರ್ನಾಟಕ ಸರಕಾರ ಎಲ್ಲವನ್ನು  ರೀತಿ ಇಡಬೇಕು ಎಂದು ಯೋಚಿಸುವುದು ಸರಿಯಲ್ಲ. ಆದರೆ ಸರಕಾರಿ ವ್ಯವಸ್ಥೆಯೊಂದಿಗೆ ಖಾಸಗಿ ವಲಯ ಹಾಗೂ ಪ್ರತಿಪಕ್ಷಗಳ ಸಹಕಾರ ಹಾಗೂ ಸಾರ್ವಜನಿಕರಿಂದ ಮಾತ್ರ ಈ ಕರೋನಾವನ್ನು ಹಿಮೆಟ್ಟಿಸಲು ಸಾಧ್ಯ.
ಆದ್ದರಿಂದ ಸರಕಾರದ ಪ್ರತಿಹೆಜ್ಜೆಯನ್ನು ತೆಗಳುತ್ತಾ ಸಾಗುವ ಬದಲು, ಏನಾಗುತ್ತಿದೆ? ಮುಂದೇನು ಮಾಡಬೇಕು ? ಕರೋನಾ ನಿಯಂತ್ರಣಕ್ಕೆ ಇರುವ ಮಾರ್ಗೋಪಾಯಗಳೇನು ಎನ್ನುವ ಬಗ್ಗೆ ಪ್ರತಿಪಕ್ಷಗಳು ಸಲಹೆ ನೀಡಬೇಕು. ಇದರೊಂದಿಗೆ ಸಾರ್ವ ಜನಿಕರು ಸಹ ‘ಕರೋನಾ ಎನ್ನುವುದೇ ಸುಳ್ಳು’ ಎಂದು ಅನವಶ್ಯಕವಾಗಿ ಓಡಾಡುವ ಬದಲು, ಮನೆಯಲ್ಲಿಯೇ ಸುರಕ್ಷಿತವಾಗಿ ಇರುವುದೇ ಸರಕಾರಕ್ಕೆ ನೀವು ಮಾಡುವ ಬಹುದೊಡ್ಡ ಸಹಾಯ ಎಂದರೆ ತಪ್ಪಲ್ಲ.