ನಿರಾಶ್ರಿತರನ್ನು ಅತಂತ್ರರನ್ನಾಗಿಸಿದ ಕಂದಾಯ ಕಟ್ಟಳೆ
ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ವಸತಿಯೂ ಒಂದು. ಪ್ರತಿಯೊಬ್ಬರಿಗೂ ಹೊಟ್ಟೆ-ಬಟ್ಟೆಯ ನಂತರ ಇರಲೊಂದು ಸೂರಿನ ಅನಿವಾರ್ಯತೆ ಎದುರಾಗುತ್ತದೆ. ಪಿತ್ರಾರ್ಜಿತ ಆಸ್ತಿ ಇಲ್ಲದ, ಇದ್ದರೂ ಪಾಲು ದಕ್ಕಿಸಿಕೊಳ್ಳಲಾಗದ ಅದೆಷ್ಟೋ ಕುಟುಂಬಗಳು ಜಗತ್ತಿನೆಡೆ ಇವೆ. ಇಂದಿನ ನ್ಯೂಕ್ಲಿಯರ್ಫ್ಯಾಮಿಲಿ ಪರಿಕಲ್ಪನೆಯ ಓಟವು ದೆಹಲಿಯಿಂದ ಹಳ್ಳಿಯವರೆಗೂ ಕಾಲಿಟ್ಟ ಪರಿಣಾಮ, ಸಬಲರು, ದುರ್ಬಲರು ಎಲ್ಲರೂ ಎದರೊಂದು ಸಣ್ಣ ಮನೆ ಕಟ್ಟಿಕೊಂಡು ನಮ್ಮಷ್ಟಕ್ಕೆ ನಾವು ಗಂಜಿಯೋ ಅನ್ನವೋ ತಿಂದುಕೊಂಡು ಸ್ವತಂತ್ರವಾಗಿರಬೇಕು.
ಹಂಗಿನ ಅರಮನೆಗಿಂತ ವಿಂಗಡದ ಗುಡಿಲೇಸು ಎಂಬ ಯೋಚನೆಯ ಪ್ರಯತ್ನಶೀಲರಾಗುತ್ತಾರೆ. ಆಕೆಯೂ ಹಾಗೆ ಎಂದೋ ಗತಿಸಿದ ಗಂಡನನ್ನುನೆನೆಯುತ್ತಾ, ತನ್ನಿಬ್ಬರು ಮಕ್ಕಳನ್ನು ಪರರ ಮನೆಯಲ್ಲಿದ್ದು ಬೆಳೆಸುತ್ತಾಳೆ. ಮಕ್ಕಳು ದೊಡ್ಡವರಾಗುತ್ತಿದ್ದಂತೆ, ಪರರ ಮನೆಯಲ್ಲಿ ತಾನು ತನ್ನ ಮಕ್ಕಳು ಭಾರವಾದಂತಹ ಭಾವ ಕಾಡುತ್ತದೆ. ಸ್ವಂತ ಸೂರೊಂದನ್ನು ಸರಕಾರಿ ಜಾಗದಲ್ಲಿ ಕಟ್ಟಿ ವಾಸ್ತವ್ಯ ಹೂಡುತ್ತಾಳೆ. ಈಗ ಮನೆ ಏನೋ ಆಯಿತು. ಮನೆಗೆಕರೆಂಟ್ ಸೌಲಭ್ಯ ಬೇಕು. ಭೂ ದಾಖಲೆಗಳಿಲ್ಲದೆ ವಿದ್ಯುತ್ ಸಂಪರ್ಕ ಕೊಡವುದಿಲ್ಲ.
ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು, ಸಾಲ ತೆಗೆಯಲು ಆರ್‌ಟಿಸಿಯೂ ಇಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೋ, ಮದುವೆಗೋ ಲೋನ್ ಮಾಡಲೂ ಸಹ ಯಾವ ಹಕ್ಕು ಪತ್ರವೂ ಅವಳ ಬಳಿಯಿಲ್ಲ. ಆಶ್ರಯ ಮನೆಗೆ ಬೇಡಿಕೆ ಸಲ್ಲಿಸಲೂ ಅವಳು ಅನರ್ಹಳು. ಹಾಗಾದರೆ ಇದಕ್ಕೆಲ್ಲ ಪರಿಹಾರ ಏನು? ೯೪ಸಿ ಅರ್ಜಿ ಭರ್ತಿ ಮಾಡಿ ನೀಡಿದರೆ ತನಗೆ ಹಕ್ಕು ಪತ್ರ ಸಿಗುತ್ತದೆ ಎಂಬ ಮಹದಾಸೆ ಹೊತ್ತು, ಅರ್ಜಿ ಸಲ್ಲಿಸಿ, ಕಾದುಕುಳಿತ ಆಕೆಗೆ ಇಂದಿನವರೆಗೂ ಯಾವ ಹಕ್ಕುಪತ್ರವೂ ಸಿಕ್ಕಿಲ್ಲ.
ಹೀಗೆ, ಇದು ಯಾರೋ ಒಬ್ಬರ ಸಮಸ್ಯೆ ಮಾತ್ರವಲ್ಲ. ಸಹಸ್ರ ಸಹಸ್ರ ಜನರು ಎದುರಿಸುತ್ತಿರುವ ಇಷ್ಟೂ ಸಮಸ್ಯೆಗಳಿಗೆ ಪರಿಹಾರ ಕೊಡಬೇಕಾದವರು ಯಾರು? ಈ ಕಾಯಿದೆಯು ಪ್ರಮುಖ ಪದಗಳ ವ್ಯಾಖ್ಯಾನ, ಭೂ ಆದಾಯದ ಮೌಲ್ಯಮಾಪನ, ಹಕ್ಕುಗಳ ದಾಖಲೆಗಳ ನಿರ್ವಹಣೆ, ಭೂಮಿಯ ಸಮೀಕ್ಷೆ ಮತ್ತು ವಸಾಹತು, ಭೂಮಿಯ ವರ್ಗೀಕರಣ, ಭೂ ಕಂದಾಯ ಸಂಗ್ರಹಣೆ, ಕಂದಾಯ ಅಧಿಕಾರಿಯ ಅಧಿಕಾರಗಳು, ಹಕ್ಕನ್ನು ಒದಗಿಸುತ್ತದೆ.
ಮೇಲ್ಮನವಿ ಮತ್ತು ಪರಿಷ್ಕರಣೆ, ಮತ್ತು ಅದರ ನಿಬಂಧನೆಗಳನ್ನು ಅನುಸರಿಸದಿದ್ದಕ್ಕಾಗಿ ದಂಡಗಳನ್ನು ವಿಧಿಸುವುದು. ಈ ಕಾಯಿದೆಯು ಕರ್ನಾಟಕ ದಲ್ಲಿ ಕಂದಾಯ ವ್ಯವಸ್ಥೆಯ ಸಮರ್ಥ ಮತ್ತು ನ್ಯಾಯಯುತ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಮತ್ತು ಭೂಮಿ ಮತ್ತು ಕಂದಾಯದನಿರ್ವಹಣೆಯಲ್ಲಿ ಸ್ಪಷ್ಟತೆ ಮತ್ತು ಖಚಿತತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಭೂಕಂದಾಯ ಎಂದರೆ ಎಲ್ಲಾ ಮೊತ್ತಗಳು ಮತ್ತು ಪಾವತಿಗಳು ಹಣದಲ್ಲಿ ಅಥವಾ ಯಾವುದೇ ವ್ಯಕ್ತಿಯಿಂದ ಆತನ ಬಳಿಯಿರುವ ಭೂಮಿಯ ಖಾತೆಯಲ್ಲಿ ಯಾವುದೇ ತೆರಿಗೆ, ಸೆಸ್, ದರ ಇತ್ಯಾದಿಗಳನ್ನು ಸರ್ಕಾರವು ಕ್ಲೈಮ್ ಮಾಡಬಹುದಾಗಿದೆ.
ಹಿಡುವಳಿದಾರ ಎಂದರೆ ಗುತ್ತಿಗೆದಾರ, ಉಪಕರಣ ಅಥವಾ ಮೌಖಿಕ ಒಪ್ಪಂದದ ಅಡಿಯಲ್ಲಿ ಭೂಮಿಯನ್ನು ಹಿಡಿದಿಟ್ಟುಕೊಳ್ಳುವುದಾಗಿರುತ್ತದೆ. ಜೊತೆಗೆ, ಹಕ್ಕುಗಳ ದಾಖಲೆಗಳು, ಸಮೀಕ್ಷೆ ಮತ್ತು ವಸಾಹತು, ಭೂಮಿಯ ವರ್ಗೀಕರಣ ಇತ್ಯಾದಿ ನಿಯಮಗಳು ಕೂಡ ಇದರಲ್ಲಿವೆ. ಇನ್ನು, ಭೂಮಿಯ ಪ್ರಕಾರಗಳನ್ನು ಗಮನಿಸಿದರೆ, ಒಣ ಭೂಮಿ (ರಾಜ್ಯ ಸರಕಾರದ ಆಸ್ತಿಯಾಗಿರುವ ಯಾವುದೇ ನೀರಿನ ಮೂಲದಿಂದ ಪಡೆದ ನೀರಿನಿಂದ ನೀರಾವರಿ ಮಾಡುವುದನ್ನು ಹೊರತುಪಡಿಸಿ ಆರ್ದ್ರ ಬೆಳೆಗಳನ್ನು ಬೆಳೆಯಲಾಗದ ಭೂಮಿ), ಆರ್ದ್ರ ಭೂಮಿ (ಮಳೆ ನೀರು ಅಥವಾ ರಾಜ್ಯ ಸರಕಾರದ ಆಸ್ತಿಯಲ್ಲದ ಯಾವುದೇ ನೀರಿನ ಮೂಲದಿಂದ ಪಡೆದ ನೀರನ್ನು ಬಳಸಿ ಆರ್ದ್ರ ಬೆಳೆಗಳನ್ನು ಬೆಳೆಯಬಹುದಾದ ಭೂಮಿ) ಉದ್ಯಾನ ಭೂಮಿ (ತೋಟದ ಬೆಳೆಗಳನ್ನುಹೊರತುಪಡಿಸಿ ಬೆಳೆಗಳನ್ನು ಬೆಳೆಯಬಹುದಾದ ಭೂಮಿ, ಮತ್ತು ಒಣ ತೋಟದ ಭೂಮಿ ಮತ್ತು ಆರ್ದ್ರ ತೋಟದ ಭೂಮಿಯನ್ನು ಒಳಗೊಂಡಿರು ತ್ತದೆ) ಮತ್ತು ತೋಟದ ಭೂಮಿ(ಅಂದರೆ ಏಲಕ್ಕಿ, ಕಾಫಿ, ಮೆಣಸು, ರರ್ಬ್ಬ ಅಥವಾ ಚಹಾವನ್ನು ಬೆಳೆಯಬಹುದಾದ ಭೂಮಿ) ಎಂದು ಸಾಮಾನ್ಯ ವಾಗಿ ವರ್ಗೀಕರಿಸಲಾಗಿದೆ.
ಹಾಗೆಯೇ, ಈ ಒಂದು ಕಾನೂನು ಇದರ ನೀತಿ, ನಿಯಮ ಮತ್ತು ಅಧಿಕಾರಿಗಳ ವ್ಯಾಪ್ತಿಯನ್ನು ರಾಮಚಂದ್ರ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ (೨೦೦೬) ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಈ ಕಾಯಿದೆಯ ನಿಬಂಧನೆಗಳು ವ್ಯಕ್ತಿಗಳು, ನಿಗಮಗಳು ಮತ್ತು ಸರ್ಕಾರಿ ಏಜೆನ್ಸಿಗಳು ಹೊಂದಿರುವ ಎಲ್ಲಾ ಜಮೀನುಗಳಿಗೆ ಅನ್ವಯಿಸುತ್ತದೆ ಮತ್ತು ಕಂದಾಯ ಅಧಿಕಾರಿಗೆ ಅಧಿಕಾರವಿದೆ ಎಂದು ಅಭಿಪ್ರಾಯ ತಿಳಿಸುವ ಮೂಲಕ ಹೆಚ್ಚು ಬಲವನ್ನು ನೀಡಿತೆನ್ನಬಹುದು.
ಕೊನೆಯಲ್ಲಿ, ‘ಕರ್ನಾಟಕ ಭೂಕಂದಾಯ ಕಾಯಿದೆ, ೧೯೬೪’ ಭಾರತದ ಕರ್ನಾಟಕ ರಾಜ್ಯದ ಕಂದಾಯ ಆಡಳಿತವನ್ನು ನಿಯಂತ್ರಿಸುವ ಒಂದು ಸಮಗ್ರ ಶಾಸನವಾಗಿದೆ. ಈ ಕಾಯಿದೆಯು ಭೂ ಕಂದಾಯದ ಮೌಲ್ಯಮಾಪನ ಮತ್ತು ಸಂಗ್ರಹಣೆ, ಹಕ್ಕುಗಳ ದಾಖಲೆಗಳ ನಿರ್ವಹಣೆ ಮತ್ತು ಭೂಮಿಯ ವಸಾಹತುಗಳನ್ನು ಒದಗಿಸುತ್ತದೆ. ಇದು ಕಂದಾಯ ಅಧಿಕಾರಿಗೆ ಅಧಿಕಾರವನ್ನು ನೀಡುತ್ತದೆ ಮತ್ತು ಮೇಲ್ಮನವಿ ಮತ್ತು ಪರಿಷ್ಕರಣೆಯ ಹಕ್ಕನ್ನು ಒದಗಿಸುತ್ತದೆ, ಜೊತೆಗೆ ಅದರ ನಿಬಂಧನೆಗಳನ್ನು ಅನುಸರಿಸದಿದ್ದರೆ ದಂಡವನ್ನು ನೀಡುವ ಅಽಕಾರ ಕೂಡ ಹೊಂದಿದೆ ಎಂದಿದೆ.
ಇಂತಹ ಒಂದು ಬಲವಾದ ನಿಯಮಗಳಿದ್ದೂ, ದುರ್ಬಳಕೆ ಮಾಡಿಕೊಂಡಲ್ಲಿ ಹೇಗೆ ಜನರ ವಿರುದ್ದ ಮತ್ತು ಉಳ್ಳವರೇ ಮತ್ತೆ ಮತ್ತೆ ಅನುಕೂಲ ಪಡೆಯುಂತಾಗಿರುವ ಪ್ರಕರಣಗಳೂ ಅಲ್ಲಲ್ಲಿ ಕಂಡುಬಂದಿವೆ. ಕಾಟಾಚಾರಕ್ಕೆಂದು ಬಹುಶಃ ೧೩೦ಕ್ಕೂ ಹೆಚ್ಚು ತಾಲೂಕುಗಳಲ್ಲಿ ಈ ಬಗರ್‌ಹುಕುಂ ಸಮಿತಿ ಮಾಡಿದ್ದು ಬಿಟ್ಟರೆ, ಈ ಸಮಿತಿಯಿಂದಾದ ಲಾಭಗಳೇನು ಎಂಬುದು ಸ್ವತಃ ಇಲಾಖೆಗೇ ಅರಿವಿಲಿಕ್ಕಿಲ್ಲ!
ಜತೆಗೆ ದಶಕಗಳು ಕಳೆದರೂ ಯೋಗ್ಯರಿಗೆ, ಅರ್ಹರಿಗೆ ಸಕಾಲದಲ್ಲಿ ಈ ಯೋಜನೆಯ ಪ್ರಯೋಜನವಾಗಿದಿರುವದೂ ಬಹುದೊಡ್ಡ ವಿಫಲತೆ ಎನ್ನಬ ಹುದು. ಈ ವಿಚಾರವಾಗಿ ‘ನಿಜವಾದ ಬಡವರು’ ಇರುವ ಅಲ್ಪ ಹಣದಲ್ಲಿ, ಆ ಕಚೇರಿ ಈ ಕಚೇರಿ ಅಲೆಯುತ್ತ ತಲೆಮಾರು ಕಳೆಯುವಂತಾಗಿದೆ. ಇದರ ಕತೆ ಹೀಗಾದರೆ, ಇದೇ ಕಂದಾಯ ಇಲಾಖೆಗೆ ಸೇರಿದ ೯೪(ಸಿ) ನಿಯಮದಿಂದ ಬಡವರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ, ಇಬ್ಬದಿಯಲ್ಲೂ ಬೆಳಕು ಕಾಣದಂತಾಗಿದ್ದಾರೆ.
ಬಡವರಿಗೆ, ನಿರಾಶ್ರಿತರಿಗೆ ಬದುಕಲು ಸಹಾಯವಾಗಲೆಂದು ಕರ್ನಾಟಕದಲ್ಲಿ ಭೂ ಕಂದಾಯ ಕಾಯ್ದೆಯಲ್ಲಿ ಸೆಕ್ಷನ್ ೯೪(ಸಿ) ಮತ್ತು ೯೪(ಸಿಸಿ) ನಿಯಮ ಗಳ ಅಡಿಯಲ್ಲಿ – ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಕಟ್ಟಿಕೊಂಡಿರುವ ಮನೆಗಳಿಗೆ ಹಕ್ಕುಪತ್ರ ವಿತರಿಸಲು ಅವಕಾಶವಿದೆ. ೯೪(ಸಿ) – ಆಕ್ರಮಿತಭೂಮಿಯಲ್ಲಿ ವಾಸದ ಮನೆ ನಿರ್ಮಾಣದ ಸಂದರ್ಭದಲ್ಲಿ ನಿವೇಶನ ಮಂಜೂರು – ೧೯೯೯ ಅಧಿನಿಯಮದಲ್ಲಿ ಯಾವುದೇ ವ್ಯಕ್ತಿಯು ಸರಕಾರಕ್ಕೆ ಸೇರಿದ ಯಾವುದೇ ಭೂಮಿಯನ್ನು ಅನಧಿಕೃತವಾಗಿ ವಶಪಡಿಸಿಕೊಂಡು, ವಾಸದ ಮನೆಯನ್ನು ನಿರ್ಮಿಸಿಕೊಂಡಿದ್ದಾನೆ ಎಂದು ಮತ್ತು ಅದು ಸೂಕ್ತವೆಂದು ಭಾವಿಸುವಂತಹ ವಿಚಾರಣೆಯನ್ನು ನಡೆಸಿದ ನಂತರ ತೃಪ್ತಿಗೊಂಡರೆ (ಜನವರಿ, ೨೦೧೫ಕ್ಕಿಂತ ಮೊದಲಾಗಿರಬೇಕು) ಅಂತಹ ಭೂಮಿಯನ್ನು ಅಂತಹ ವ್ಯಕ್ತಿಯಿಂದ ಈ ಅವಧಿಯೊಳಗೆ ಯೋಗ್ಯ ಶುಲ್ಕವನ್ನು ಪಾವತಿಸಿದ ನಂತರ ಅನುದಾನವನ್ನು ನಿಗದಿಪಡಿಸಬಹುದು. ಆದರೆ, ಈ ನಿಯಮವು ಯಾವುದೇ ರೀತಿಯ ಅರಣ್ಯ ಭೂಮಿಗೆ ಅನ್ವಯಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ನಗರ ಪ್ರದೇಶಗಳಲ್ಲಿ ಅನಧಿಕೃತ ನಿರ್ಮಾಣಗಳ ಕರ್ನಾಟಕ ರೆಗ್ಯುಲರೈಸೇಶನ್ ಅಧಿನಿಯಮ, ೧೯೯೧ ರ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗುತ್ತದೆ.
ಬಗರ್‌ಹುಕುಂನಂತೆಯೇ, ಈ (೯೪ಸಿ) ಕಾಯಿದೆಯೂ ಸಹ, ವಸತಿರಹಿತರು – ಸೂರಿಲ್ಲದವರು ಅರ್ಜಿ ಸಲ್ಲಿಸಿದ ಮೇಲೆ, ಇಂದು ಹಕ್ಕುಪತ್ರ ಸಿಕ್ಕೀತು, ನಾಳೆ ಸಿಕ್ಕಿತು ಎಂಬ ಕುರುಡು ಭರವಸೆ ಹೊತ್ತು ಕೂರುವ ಬಡಸಾಮಾನ್ಯರ ಬದುಕನ್ನು ಅಡ್ಡಕತ್ತರಿಯಲ್ಲಿರಿಸಿ ಸುಮ್ಮನೆ ಕುಳಿತುಬಿಟ್ಟಿದೆ. ಸುಮಾರು ೫ ಲಕ್ಷದಷ್ಟು ಅರ್ಜಿಗಳನ್ನು ನೇರವಾಗಿಯೇ ತಿರಸ್ಕರಿಸಲಾಗಿದೆ. ಸ್ವತಃ ಕಂದಾಯ ಸಚಿವರೇ ಅನರ್ಹರು ಈ ಯೋಜನೆಯ ಲಾಭ ಪಡೆಯುತ್ತಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.
ಅರ್ಹರಿಗೆ, ಯೋಗ್ಯರಿಗೆ ಸಕಾಲದಲ್ಲಿ ದೊರೆಯಬೇಕಾದ ಸಹಾಯ ಸೌಲಭ್ಯಗಳು ಮರೀಚಿಕೆಗಳಂತೆ ಮುಂದಕ್ಕೆ ಹೋಗುತ್ತಲೇ ಇವೆ. ಇದರಂತೆ, ೯೪ಸಿಸಿಯಲ್ಲಿಯೂ ಎರಡು ಲಕ್ಷಕ್ಕೂ ಹೆಚ್ಚು ಅರ್ಜಿಗಳು ತಿರಸ್ಕೃತಗೊಂಡಿವೆ. ಇದರಲ್ಲಿ, ಯೋಗ್ಯರು, ಬಡವರು ಇರುವುದು ಒಂದು ದುರಂತವೇ ಸರಿ. ಇನ್ನು ಕೆಲವರು, ಕಟ್ಟಡ ಆರಂಭಿಸಿ, ಮುಂದೆ ಕಟ್ಟುವುದಕ್ಕೆ ತಕರಾರು ಬಂದು ಅರ್ಧಕ್ಕೇ ನಿಂತಿವೆ. ಜೋರು ಮಳೆಗಾಲ ಬೇರೆ. ಸಾಲ, ಬಡ್ಡಿಸಾಲ ಮಾಡಿ ಹೇಗೋ ಮನೆಯೊಂದನ್ನು ಹೊಂದಿಸಿಕೊಂಡರಾಯ್ತೆಂದು ಯೋಜನೆ ಯಲ್ಲಿದ್ದ ಮುಗ್ಧ ಬಡವರ ಪರಿಸ್ಥಿತಿ ಆ ದೇವರಿಗೇ ಮತ್ತು ರಾಜ್ಯ ಕಂದಾಯ ಇಲಾಖೆಯ ಅಧಿಕಾರಿಗಳಿಗೇ ಪ್ರೀತಿ.
ಇನ್ನು, ನಗರ ಪ್ರದೇಶದಲ್ಲಿನ ಅನಽಕೃತ ಕಟ್ಟಡ ಮತ್ತು ಬಡಾವಣೆಗಳಿಗೆ (ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ದಾಖಲಿಸಿರುವ ಪ್ರಕರಣ) ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರಕ್ಕೆ, ಕಂದಾಯ ಇಲಾಖೆಗೆ ಹಿನ್ನಡೆ ಮತ್ತು ಮುಖಭಂಗವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಜನರ ಸೇವೆಯ ಪ್ರತಿಜ್ಞೆಗೈದು ಅಧಿಕಾರಕ್ಕೆ ಬಂದ ಸರಕಾರ ಕೂಡಲೇ, ಮಳೆಗಾಲ ರಚ್ಚೆಹಿಡಿದು ಸುರಿಯುವ ಮುನ್ನವೇ ಬೀದಿಬದಿಯಿರುವ ಅರೆಬರೆ ೯೪ಸಿ ಹೊಂದಿರುವ ಮನೆಗಳಿಗೆ ಒಂದು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಅಥವಾ ಒಂದು ವಿಶೇಷಾಧಿಕಾರದ ಮೂಲಕ ರಾಜ್ಯ ಕಂದಾಯಸಚಿವರು, ಉಸ್ತುವಾರಿ ಸಚಿವರು ಮತ್ತು ಆಯಾ ಜಿಲ್ಲಾಧಿಕಾರಿಗಳು ಸ್ವಯಿಚ್ಚೆಯ ಪರಮಾಧಿಕಾರ ಬಳಸಿ, ಯೋಗ್ಯರಿಗೆ ಸೂರು ಒದಗಿಸಿಕೊಡುವ ಮೂಲಕ ಕಾನೂನಿನ ಅಡೆತಡೆಗಳನ್ನು ನಿವಾರಿಸುವ ಮೂಲ ಹೊಣೆಗಾರಿಕೆ ಹೊಂದಿದ್ದಾರೆಂಬುದನ್ನು ಈ ಮೂಲಕ ಹೇಳಬಯಸುತ್ತೇನೆ.
‘ಜನರಿಂದ’ ಆಯ್ಕೆಯಾದವರು ಮಾಡಿದ ನಿಯಮಗಳು, ಕಾನೂನುಗಳು ಸಕಾಲದಲ್ಲಿ ‘ಜನರಿಗಾಗಿ’ ಮತ್ತು ‘ಜನರಿಗೋಸ್ಕರ’ ಬಳಕೆಯಾಗದಿದ್ದರೆ ಈಎಲ್ಲ ನೀತಿನಿಯಮಗಳು ಅರಣ್ಯರೋದನವೇ ಸರಿ!