ಕೋವಿಡ್ ಸೋಂಕು ಕಟ್ಟಿ ಹಾಕಲು ಪಾಲ್ಗೊಳ್ಳುವಿಕೆ ಮಂತ್ರ
ಅಭಿಪ್ರಾಯ
ಚಂದ್ರಶೇಖರ ಬೇರಿಕೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ  ಅಂಕಣ ಬರಹದಲ್ಲಿ ಸಾಮೂಹಿಕ ಸಂಕಲ್ಪದಿಂದ ಕರೋನಾ ನಿಯಂತ್ರಿಸುವ ಬಗೆಯನ್ನು ಬಹಳ ಸುಂದರವಾಗಿ ತೆರೆದಿಟ್ಟಿದ್ದರು.
ಸರಕಾರದ ಯೋಜನೆ ಮತ್ತು ಖಾಸಗಿ ಸಂಸ್ಥೆಗಳ ಯೋಚನೆ ಇವೆರಡೂ ಸೇರಿ ಕಾರ್ಯಗತ ಮಾಡಿದಾಗ ಶ್ರಮ ಕಡಿಮೆಯಾಗುತ್ತದೆ, ಫಲ ಜಾಸ್ತಿಯಾಗುತ್ತದೆ ಎನ್ನುವ ಚಿಂತನೆಯನ್ನು ಹೊರ ಹಾಕಿದ್ದರು. ’ಪಿಪಿಪಿ’ (ಸಾರ್ವಜನಿಕ ಖಾಸಗಿ ಪಾಲುದಾರಿಕೆ) ಎಂಬ ಕಲ್ಪನೆ  ಯನ್ನು ಪಬ್ಲಿಕ್ ಪ್ರೈವೇಟ್ ಪಾರ್ಟಿಶಿಪೇಷನ್ (ಸಾರ್ವಜನಿಕ ಖಾಸಗಿ ಪಾಲ್ಗೊಳ್ಳುವಿಕೆ) ಎಂಬುದಾಗಿ ಬದಲಾಯಿಸಬೇಕು. ಪಾರ್ಟ್‌ನರ್‌ಶಿಪ್ ಅನ್ನು ಪಾರ್ಟಿಶಿಪೇಷನ್ ಆಗಿ ಪರಿವರ್ತಿಸಿದಾಗ ನಾವು ಯಾವ ಕಾರ್ಯ ಮಾಡಿದರೂ ಅದು ನಮ್ಮ ರಾಜ್ಯ, ದೇಶ, ಸಮಾಜ, ನಮ್ಮ ಸಂಸಾರ, ನಮ್ಮ ನೆರೆಹೊರೆ ಎಲ್ಲವೂ ನಮ್ಮದೇ ಎನ್ನುವ ಭಾವನೆ ಮೂಡುತ್ತದೆ.
ಸಾರ್ವಜನಿಕವಾಗಿ ಓಡಾಡುವ ವಿಷಯದಲ್ಲಿ ಆಗಿರಲಿ, ಮಾ ಧರಿಸುವ ವಿಷಯದಗಲೀ, ಆಹಾರ-ವಿಹಾರ, ವಿಚಾರದಗಲಿ ಎಲ್ಲವನ್ನೂ ಸರಕಾರದ ಮೇಲೆ ಬಿಟ್ಟುಬಿಡುವ ಬದಲು ನಾವೂ ಜವಾಬ್ದಾರಿ ನಿಭಾಯಿಸಬೇಕು. ಪ್ರತಿಯೊಬ್ಬರೂ ಕರೋನಾವಿರುದ್ಧದ ಹೋರಾಟದಲ್ಲಿ ಕೈಜೋಡಿಸಿ ಸಮಾಜದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುವವರನ್ನು ಪ್ರಶ್ನಿಸಿ, ತಿಳುವಳಿಕೆ, ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರೆ ಈ ಸಂಕಷ್ಟದಿಂದ ಹೊರಬರಬಹುದೆಂದರು.
ನಾವೆಲ್ಲರೂ ಹೊಣೆಗಾರಿಕೆಯಿಂದ ಇದ್ದು, ನಮ್ಮ ಕರ್ತವ್ಯವನ್ನು ನಿಭಾಯಿಸುವಾಗ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು, ಒಂದೇ ದೇಶದ ಪ್ರಜೆಗಳು, ಒಂದೇ ಸಮಾಜದ ಜೀವಿಗಳು, ಧರ್ಮಾತೀತವಾಗಿ ನಾವು ಮನುಷ್ಯರು ಎಂಬ ಭಾವನೆಯನ್ನು ತಳೆದರೆ ಕರೋನಾವನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಇಡೀ ಸಮಾಜದ ಪ್ರತಿಯೊಬ್ಬ ಪ್ರಜೆಯನ್ನು ಹೊಣೆಗಾರಿಕೆ ಯುಳ್ಳವರನ್ನಾಗಿ ಮಾಡಿ ಎಂದೂ ಕೇಳಿಕೊಂಡಿದ್ದರು.
ಇದೊಂದು ಸಕಾಲಿಕ ಚಿಂತನೆ ಎನಿಸುತ್ತದೆ. ಇಷ್ಟೊಂದು ಜನಸಂಖ್ಯೆ ಇರುವ ದೇಶದಲ್ಲಿ ಯಾವುದೇ ಅಭಿಯಾನಗಳು, ಯೋಜನೆಗಳು ಫಲಪ್ರದವಾಗಬೇಕಾದರೆ ಪ್ರತಿ ಯೊಬ್ಬ ನಾಗರಿಕರ ಸಹಕಾರ ಅತ್ಯಗತ್ಯ. ಧರ್ಮಾಧಿಕಾರಿಯವರ ಚಿಂತನೆಗೆ ಪೂರಕವಾಗಿ ಅವಲೋಕಿಸಿದಾಗ ನಮ್ಮ ದೇಶದಲ್ಲಿ ಅದೆಷ್ಟೋ ಅಭಿಯಾನಗಳು, ಯೋಜನೆಗಳು ಈ ತತ್ವದಡಿ ಯಶಸ್ಸು ಕಂಡಿದ್ದನ್ನು ಗಮನಿಸಬಹುದು. ಉದಾಹರಣೆಗೆ ನಮ್ಮ ದೇಶವನ್ನು ಪೋಲಿಯೋ ಮುಕ್ತವನ್ನಾಗಿಸುವ ಅಭಿಯಾನ, ಸ್ವಚ್ಛಭಾರತ, ಪ್ಲಾಸ್ಟಿಕ್ ಮುಕ್ತ ಭಾರತ ಮುಂತಾದವುಗಳಲ್ಲಿ ಜನರ ಸ್ವಯಂ ಪಾಲ್ಗೊಳ್ಳುವಿಕೆ ಕೆಲಸ ಮಾಡಿದೆ.
ಹಾಗೆಯೇ ಯೋಜನೆಗಳನ್ನು ತೆಗೆದುಕೊಂಡರೆ ಉದ್ಯೋಗ ಖಾತರಿ (ನರೇಗಾ), ಮನೆಗೊಂದು ಶೌಚಾಲಯ, ಜನಧನ, ಡಿಜಿಟಲ್ ಇಂಡಿಯಾ ಮೂಲಕ ಅನ್‌ಲೈನ್ ವ್ಯವಹಾರ ಮುಂತಾದವುಗಳು ಸಾರ್ವಜನಿಕರ ಸಹಕಾರವಿಲ್ಲದೆ ಅದರ ಯಶಸ್ಸನ್ನು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ನಾಗರಿಕರ ಸ್ವಯಂ ಪಾಲ್ಗೊಳ್ಳುವಿಕೆಯಿಂದ ಈ ಎಲ್ಲಾ ಅಭಿಯಾನಗಳು, ಯೋಜನೆಗಳು ದೇಶಾದ್ಯಂತ ಅಭೂತಪೂರ್ವ ಯಶಸ್ಸನ್ನು ಕಂಡಿದೆ.
ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರು ಸಂತ್ರಸ್ತರ ರಕ್ಷಣೆ ಮತ್ತು ಬದುಕಿಗೆ ನೆರವಾಗುವುದು ಪಾಲುದಾರಿಕೆಯ ಬದಲಾಗಿ ಪಾಲ್ಗೊಳ್ಳುವಿಕೆ ಎನಿಸಿಕೊಳ್ಳುತ್ತದೆ. ಪ್ರಸಕ್ತ ಸಂದರ್ಭದಲ್ಲೂ ಪ್ರತಿಯೊಬ್ಬರೂ ಪಾಲ್ಗೊಳ್ಳುವಿಕೆ ಮಂತ್ರವನ್ನು ಜಪಿಸಿದರೆ ಮಾತ್ರ ನಿರೀಕ್ಷಿತ ಮಟ್ಟದ ಸಾಧನೆ ಮಾಡಬಹುದು.
ಕರೋನಾದ ರೂಪದಲ್ಲಿ ಎದುರಾದ ಅಸ್ಥಿರತೆಯಿಂದ ಹೊರಬರಲು ಅನಿರೀಕ್ಷಿತ ಮತ್ತು ಅನಿವಾರ್ಯ ಲಾಕ್ ಡೌನ್ ಮಾಡ ಬೇಕಾಯಿತು. ಈ ಅವಧಿಯಲ್ಲಿ ಕೆಲವರಿಗೆ ಸಂಕಷ್ಟ ಎದುರಾದರೂ ಇಂತಹ ಸಂದಿಗ್ಧತೆ, ಅಸ್ಥಿರತೆ ಮತ್ತು ಅನಿಶ್ಚಿತತೆಯ ಜೀವನದಿಂದ ಸ್ಥಿರ ಜೀವನಕ್ಕೆ ಮರಳಲು ಎಲ್ಲರೂ ಕೈಜೋಡಿಸಬೇಕು. ಈ ಜವಾಬ್ದಾರಿಯಿಂದ ಯಾರೂ ಹೊರತಲ್ಲ. ಆದರೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ನಗರ ಬಿಟ್ಟು ಊರು ಸೇರಿದ ಜನರು ಈ ಸಾಂಕ್ರಾಮಿಕ ಊರಿಗೂ ಹಬ್ಬು ವಲ್ಲಿ ಕಾರಣಕರ್ತರಾದರು.
ಇಲ್ಲೂ ನಾಗರಿಕರು ವೈಯಕ್ತಿಕವಾಗಿ ನಿಭಾಯಿಸಬಹುದಾದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಎಡವಿದರು. ಕರೋನಾ ವೈರಾಣುವಿನ ಅವಾಂತರದಿಂದ ಕಂಗೆಟ್ಟ ಈ ಸಂದರ್ಭದಲ್ಲಿ ಅದನ್ನು ನಿಗ್ರಹಿಸುವ ವಿಚಾರದಲ್ಲಿ ಕೆಲವರು ತಮ್ಮ ಜವಾಬ್ದಾರಿ ಯಿಂದ ನುಣುಚಿಕೊಂಡು ತನ್ನ ತಪ್ಪನ್ನು ಇನ್ನೊಬ್ಬರ ತಲೆಗೆ ಕಟ್ಟುವುದು ಹೇಗೆ ಎಂಬುದರ ಚಿಂತಿತರಾಗಿದ್ದಾರೆ. ತನ್ನ ತಪ್ಪನ್ನು ಸಮರ್ಥನೆ ಮಾಡಿಕೊಂಡು ಇನ್ನೊಬ್ಬರ ತಪ್ಪಿಗೆ ಸಕಾರಣ ಕೇಳುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ದೇಶ ಪ್ರತಿಯೊಬ್ಬ ನಾಗರಿಕನಿಂದ ಬಯಸಿದ್ದು ಸಾಧ್ಯವಾದಷ್ಟು ಮನೆಯಲ್ಲಿರಿ, ಅಗತ್ಯವಿದ್ದರಷ್ಟೇ ಮನೆಯಿಂದ ಹೊರಬನ್ನಿ, ಹೊರ ಬರಬೇಕಾದರೆ ಅಗತ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಸ್ಯಾನಿಟೈಸರ್ ಬಳಸಿ, ಕರೋನಾ ಹರಡುವಿಕೆಗೆ ತಾವು ಕಾರಣವಾಗದೆ ನೀವೂ ಸುರಕ್ಷಿತರಾಗಿರಿ, ಇತರರನ್ನೂ ಸುರಕ್ಷಿತವಾಗಿಸಿ ಎಂಬುದನ್ನಷ್ಟೇ.
ರಾಜ್ಯ ಸರಕಾರದ ವತಿಯಿಂದ ಹೇರಲಾದ ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಕೆಲವೊಂದು ಕೈಗಾರಿಕೆಗಳು, ಉತ್ಪಾದನಾ ಘಟಕಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಅಗತ್ಯ ಸರಕುಗಳು, ನಿರಂತರ ಪ್ರಕ್ರಿಯೆಗೆ ಅಗತ್ಯವಿರುವ ಉತ್ಪಾದನಾ ಘಟಕಗಳು, ಅಗತ್ಯ ಸೇವೆಗಳಾದ ಆರೋಗ್ಯ ವಲಯದ ಸೇವೆಗಳು ಮತ್ತು ಆಹಾರೋತ್ಪಾದನಾ ಘಟಕಗಳನ್ನು ಕೋವಿಡ್-19ರ ನಿರ್ವಹಣೆಗಾಗಿನ ರಾಷ್ಟ್ರೀಯ ನಿರ್ದೇಶನಗಳಿಗೆ ಬದ್ಧವಾಗಿದ್ದುಕೊಂಡು ಕಾರ್ಯ ನಿರ್ವಹಿಸಲು ವಿನಾಯಿತಿ ನೀಡಲಾಗಿದೆ.
ದುರದೃಷ್ಟವೆಂದರೆ ಈ ಅಗತ್ಯ ಸೇವಾ ವಲಯಗಳಿಗೆ ನೀಡಲಾದ ವಿನಾಯಿತಿಯನ್ನು ಅಗತ್ಯ ಸೇವಾ ವಲಯದಿಂದ ಹೊರತಾದ ಅಥವಾ ಭಾಗಶಃ ಅಗತ್ಯ ಸೇವಾ ವಲಯದಲ್ಲಿರುವ ಅದೆಷ್ಟೋ ಕೈಗಾರಿಕೆಗಳು ದುರುಪಯೋಗಪಡಿಸಿಕೊಂಡಿವೆ. ಹಾಗಾದರೆ ಈಕೋವಿಡ್ ಸರಪಣಿಯನ್ನು ತುಂಡರಿಸಿ ನಾಗರಿಕರ ಪ್ರಾಣ ಕಾಪಾಡಿಕೊಳ್ಳುವುದಕ್ಕಾಗಿ ಹಾಗೂ ರಾಷ್ಟ್ರೀಯ ಅಥವಾ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೇರಲಾದ ಲಾಕ್‌ಡೌನ್ ಆದೇಶವನ್ನು ಧಿಕ್ಕರಿಸಿ ಅಥವಾ ದುರುಪಯೋಗ ಪಡಿಸಿಕೊಂಡು ಮುಂದುವರಿಯುವುದಾದರೆ ಸಾಮಾಜಿಕ ಜವಾಬ್ದಾರಿ ಎಂಬುದಕ್ಕೆ ಅರ್ಥವೆಲ್ಲಿದೆ? ಈ ಸಾಮಾಜಿಕ ಜವಾಬ್ದಾರಿ ಎಂಬುದು ಇನ್ನೊಬ್ಬರಿಗೆ ಉಪದೇಶ ನೀಡಲು ಅಥವಾ ಕೆಲವೇ ಮಂದಿಗೆ ಮಾತ್ರ ಸೀಮಿತವೇ? ಈ ಲಾಕ್‌ಡೌನ್ ವಿನಾಯಿತಿಯನ್ನು ದುರುಪಯೋಗಪಡಿಸಿಕೊಂಡು ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿನ ನೌಕರರಲ್ಲಿ ಕೆಲವರು ಸ್ವಇಚ್ಛೆಯಿಂದಕರ್ತವ್ಯಕ್ಕೆ ಹಾಜರಾದರೆ ಇನ್ನು ಕೆಲವರು ಒತ್ತಡಕ್ಕೆ ಒಳಗಾಗಿಯೋ ಅಥವಾ ಕೆಲಸ ಕಳೆದುಕೊಳ್ಳುವ ಭಯದಿಂದಲೋ ಕರ್ತವ್ಯಕ್ಕೆ ಹಾಜರಾಗುತ್ತಾರೆ.
ಕರೋನಾ ಹರಡುವಿಕೆಯ ಬಗ್ಗೆ ಜ್ಞಾನವಿದ್ದೂ ಸಂಸ್ಥೆಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು ತಪ್ಪು. ಹಾಗೆಯೇಸರಕಾರಗಳೂ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಘೋಷಿಸಿ ಅದರ ಅನುಷ್ಠಾನವು ನಾಗರಿಕರ ಜವಾಬ್ದಾರಿ ಎಂಬಂತೆ ಕೈತೊಳೆದುಕೊಂಡು ಬಿಟ್ಟರೆ ಅದು ಜವಾಬ್ದಾರಿಯುತ ಸರಕಾರದ ನಡೆ ಎನಿಸುವುದಿಲ್ಲ. ಕೆಲವು ಜನರಿಗೆ ನಿಂತಲ್ಲಿ ನಿಲ್ಲಲಾಗುವು ದಿಲ್ಲ, ಕೂತಲ್ಲಿ ಕೂರಲಾಗುವುದಿಲ್ಲ. ಅಥವಾ ಅವರಿಗೆ ತಮ್ಮ ಮನೆಯಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ.
ಅರ್ಥಾತ್ ಅವರ ಮನಸ್ಸು ಅವರ ಹತೋಟಿಯಲ್ಲಿರುವುದಿಲ್ಲ. ಅದಕ್ಕಾಗಿ ಅವರು ಹೊರಗಡೆಯೇ ಇರಲು ಬಯಸುತ್ತಾರೆ. ಜನರ ಓಡಾಟ ನಿಷೇಧ ಮಾಡಿದ ಸಂದರ್ಭದಲ್ಲಿ ಹೊರಗಡೆ ಬಂದು ಸರಕಾರದ ನಿಯಮಗಳ ಅನುಷ್ಠಾನಕ್ಕೆ ಅಡ್ಡಿಪಡಿಸಿದರೆ ಅದರಿಂದ ಅವರಿಗೆ ಸಿಗುವ ಆನಂದ ಅಪಾರ. ಇಂತಹ ವಿಕೃತ ಆನಂದ ಪಡೆಯುವ ಪ್ರವೃತ್ತಿಯ ಜನರನ್ನು ಶಿಕ್ಷಿಸದೇ ವಿಽಯಿಲ್ಲ. ಈ ವರ್ಗದ ಜನರು ವಿಕೃತ ಸಂತೋಷ ಪಡೆಯುವ ಸಲುವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರಿಂದಾಗಿ ಈ ಸಂದರ್ಭದಲ್ಲಿ ಅಗತ್ಯ ಮತ್ತು ಅನಿವಾರ್ಯ ಕೆಲಸದ ನಿಮಿತ್ತ ಹೊರಗಡೆ ಬಂದವರು ಮತ್ತು ಅಮಾಯಕರು ಶಿಕ್ಷೆ ಅನುಭವಿಸಿ ಬೆಲೆ ತೆರಬೇಕಾಗುತ್ತದೆ.
ಸಾರ್ವಜನಿಕರು ಪೊಲೀಸರಿಗೆ ಪೂರ್ಣ ಸಹಕಾರ ನೀಡುತ್ತಿಲ್ಲವಾದ್ದರಿಂದ ಕರೋನಾ ಸರಪಣಿಯನ್ನು ಕಡಿತಗೊಳಿಸಲು ಜನರ ಓಡಾಟವನ್ನು ನಿಯಂತ್ರಿಸುವುದು ಅನಿವಾರ್ಯವಾಗಿರುವಾಗ ಅನಗತ್ಯವಾಗಿ ಬೀದಿ ಸುತ್ತುವವರಿಗೆ ಮೂಗುದಾರ ಹಾಕಲೇ ಬೇಕಾಗುತ್ತದೆ. ಇದಕ್ಕಾಗಿ ಅನಿವಾರ್ಯವಾಗಿ ಬಲ ಪ್ರಯೋಗವನ್ನು, ದಂಡನಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಕೇವಲ ಪೊಲೀಸ್ ಇಲಾಖೆಯನ್ನು ಮಾತ್ರ ಹೊಣೆ ಮಾಡಲಾಗದು. ಆದ್ದರಿಂದ ಇಲ್ಲೂ ಪಬ್ಲಿಕ್ ಪ್ರೈವೇಟ್ ಪಾರ್ಟಿಶಿ ಪೇಷನ್ ತತ್ವವು ಕೆಲಸ ಮಾಡಬೇಕಾಗುತ್ತದೆ. ಈ ಕಷ್ಟದ ಸಮಯವನ್ನು ಹಣ ಗಳಿಸುವುದಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವ ಇನ್ನೊಂದು ಹಣದಾಹಿ ವರ್ಗವಿದೆ.
ಅವರಿಗೆ ಮಾನವೀಯತೆ, ಅಂತಕರಣದ ನರಗಳು ಸತ್ತು ಹೋಗಿವೆ. ಅವರು ಹಣವನ್ನಷ್ಟೇ ತಿನ್ನುವವರಾದ್ದರಿಂದ ಮನುಷ್ಯನ ಜೀವದ ಮೌಲ್ಯವನ್ನು ತಿಳಿಯಲಾರರು. ಇಂತವರಿಗೆ ದಿಕ್ಕಾರವಿರಲಿ ಎಂದಷ್ಟೇ ಹೇಳಬಹುದು. ಸಾರ್ವಜನಿಕ ಜವಾಬ್ದಾರಿಯನ್ನು ಮರೆತು ಅನಾಗರಿಕರಂತೆ ವರ್ತಿಸುವ ಇಂತಹ ಜನರಿಂದ ಜನಹಿತದ ಯಾವುದೇ ನಿರ್ಧಾರಗಳು ಯಶಸ್ವಿಯಾಗುವುದು ಬಹಳಕಷ್ಟ.
ವೇಗವಾಗಿ ಹಬ್ಬುತ್ತಿರುವ ಈ ಸಾಂಕ್ರಾಮಿಕದಿಂದ ಮತ್ತು ಜನರ ನಿರ್ಲಕ್ಷ್ಯದಿಂದ ಹೆಚ್ಚಿನ ಸಂಖ್ಯೆಯ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಈಗೀಗ ಹೆಚ್ಚಿನ ಸಂಖ್ಯೆಯಲ್ಲಿ ಕರೋನಾ ವಾರಿಯರ್‌ಗಳು ಕೋವಿಡ್ ಸೋಂಕಿಗೆ ಒಳಗಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈ ಸಂದರ್ಭದಲ್ಲಿ ಲಭ್ಯವಿರುವ ಕರೋನಾ ವಾರಿಯರ್‌ಗಳು ಕೂಡಾ ಈ ಸೋಂಕಿಗೆ ಒಳಗಾಗಿ ಸೇವೆಗೆ ಅಲಭ್ಯವಾದರೆ ಪರಿಸ್ಥಿತಿ ಇನ್ನೂ ಹದಗೆಡಲಿದೆ. ಇದನ್ನೂ ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿ ಈ ಸೋಂಕು ಹರಡದಂತೆ ತಡೆಯಲು ಶ್ರಮ ವಹಿಸಬೇಕು.
ರೋಗ ಬಂದ ನಂತರ ತೊಳಲಾಡುವುದಕ್ಕಿಂತ ರೋಗ ಬರದಂತೆ ಎಚ್ಚರ ವಹಿಸುವುದು ತುರ್ತಾಗಿ ಮಾಡಬೇಕಾದ ಕೆಲಸವಾಗಿದೆ.ನಮ್ಮ ಮುಂದಿರುವುದು ಈಗ ಸಾಮೂಹಿಕ ಜವಾಬ್ದಾರಿಯ ಪ್ರದರ್ಶನ. ಒಬ್ಬ ಪ್ರಜೆ ತನ್ನ ನಾಗರಿಕ ಕರ್ತವ್ಯವನ್ನು ಹೇಗೆ ನಿಭಾಯಿಸಬಹುದೋ ಅದನ್ನಷ್ಟೇ ಮಾಡಿದರೆ ಸಾಕು. ಆರೋಪ, ಪ್ರತ್ಯಾರೋಪ, ಅಪಪ್ರಚಾರದಲ್ಲಿ ತೊಡಗಿಕೊಂಡು ಆದ್ಯತಾ ವಿಷಯವನ್ನು ವಿಷಯಾಂತರ ಮಾಡುವುದರಲ್ಲಿ ಪಾಲುದಾರರಾಗುವುದಲ್ಲ. ಸರಳವಾಗಿ ಹೇಳುವುದಾದರೆ ಈ ಪ್ರಕ್ಷುಬ್ಧಸನ್ನಿವೇಶದ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉಂಟಾದ ಏರುಪೇರು ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಂಬಂಧಪಟ್ಟ ಮೂಲಸೌಕರ್ಯಗಳ ಕೊರತೆಯ ವಿಚಾರಗಳನ್ನು ಮುಂದಿಟ್ಟುಕೊಂಡು ವಾಸ್ತವಕ್ಕಿಂತ ಹೆಚ್ಚಾಗಿ ವೈಭವೀಕರಣ ಮಾಡಿ ತಪ್ಪು ಮಾಹಿತಿ ನೀಡಿ ನಾಗರಿಕರಲ್ಲಿ ಆತಂಕ, ಭಯದ ವಾತಾವರಣ ಸೃಷ್ಟಿ ಮಾಡುವಲ್ಲಿ ಆಸಕ್ತಿವಹಿಸಬಾರದಷ್ಟೇ.
ಕರೋನಾ ಸೋಂಕಿಗೆ ಒಳಗಾಗಿ ಪ್ರಾಣ ಕಳೆದುಕೊಂಡವರ ಜೊತೆಗೆ ಈ ಸಾಂಕ್ರಾಮಿಕದ ಭಯದಿಂದ ಉಸಿರು ನಿಲ್ಲಿಸಿದವರೂ ಇzರೆ. ನಾವು ಈ ಸಂದರ್ಭದಲ್ಲಿ ಇಡೀ ಸಮಾಜದಲ್ಲಿ ಆದಷ್ಟು ಧೈರ್ಯ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರೆ ಅದುವೇಶ್ರೇಷ್ಟ ಕಾರ್ಯ ಎನಿಸಲಿದೆ.