ನೆನಪಿಡಲು ನೆರವಾಗುವ ನೆನೆಗುಬ್ಬಿಗಳ ನೆನಪು
ತಿಳಿರುತೋರಣ
ಶ್ರೀವತ್ಸ ಜೋಶಿ
‘ಅಸ್ತಿ ಕಶ್ಚಿತ್ ವಾಗ್ವಿಶೇಷಃ’ ಎಂದು ಸಂಸ್ಕೃತದ್ದೊಂದು ವಾಕ್ಯ. ಯಾರಾದರೂ ಬಂಧುಗಳು ಅಥವಾ ಸ್ನೇಹಿತರು ಭೇಟಿಯಾದಾಗ ನಾವು ಅವರನ್ನು ‘ಏನ್ಸಮಾಚಾರ?’ ಅಂತಲೋ, ‘ಏನು ವಿಶೇಷ?’ ಅಂತಲೋ ಮಾತಿಗೆಳೆಯುತ್ತೇವಲ್ವಾ ಅದನ್ನೇ ಈ ಸಂಸ್ಕೃತ ವಾಕ್ಯವೂ ಮಾಡುತ್ತಿರುವುದು. ಆದರೆ ಮೇಲ್ನೋಟಕ್ಕಷ್ಟೇ ಹಾಗೆ.
ಸೂಕ್ಷ್ಮವಾಗಿ ನೋಡಿದರೆ ಈ ಮೂರು ಪದಗಳ ಹಿಂದೆ ಸಂಸ್ಕೃತದ ಮೂರು ಮಹಾಕಾವ್ಯಗಳೇ ಅಡಗಿವೆ! ಹೇಗೆ? ಅದಕ್ಕೊಂದು ಸ್ವಾರಸ್ಯಕರ ಕಥೆಯಿದೆ. ಕಾಳಿ ದೇವಿಯಿಂದ ಅನುಗ್ರಹಿಸಲ್ಪಟ್ಟ ಕಾಳಿದಾಸನು ತನ್ನ ಮನೆಗೆ ಹಿಂದಿರುಗಿದಾಗ ಬಾಗಿಲಲ್ಲೇ ಅವನ ಹೆಂಡತಿ ಕೇಳುತ್ತಾಳೆ: ‘ಅಸ್ತಿ ಕಶ್ಚಿತ್ ವಾಗ್ವಿಶೇಷಃ?’ ಅಂದರೆ, ಏನಾದರೂ ಹೊಸತು ವಿಶೇಷವಾದದ್ದು ಇದೆಯೇ? (ಅಥವಾ ಈಗಲೂ ಪರಮದಡ್ಡನಾಗಿಯೇ ಇದ್ದೀಯಾ?) ಎಂದು.
ಆಕೆ ಮುಖ ಸೊಟ್ಟ ಮಾಡಿಕೊಂಡು ಮೂದಲಿಕೆಯ ರೀತಿಯಲ್ಲೇ ಕೇಳಿದ್ದು. ಕಾಳಿದಾಸ ಅದನ್ನೇ ಒಂದು ಸವಾಲಾಗಿ ಸ್ವೀಕರಿಸು ತ್ತಾನೆ. ಮುಂದಿನ ದಿನಗಳಲ್ಲಿ ಪಟ್ಟಾಗಿ ಕುಳಿತು ಮೂರು ಅಮೋಘ ಕಾವ್ಯಗಳನ್ನು ಬರೆಯುತ್ತಾನೆ. ಮೊದಲನೆಯದು ಕುಮಾರ ಸಂಭವ. ಅದು ಆರಂಭವಾಗುವುದು ‘ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ…’ ಎಂಬ ಶ್ಲೋಕದಿಂದ.
ಅಂದರೆ ಹೆಂಡತಿಯ ಪ್ರಶ್ನೆಯಲ್ಲಿದ್ದ ಮೊದಲ ಪದ ‘ಅಸ್ತಿ’ಯಿಂದ. ಎರಡನೆಯದು ಮೇಘದೂತ. ಅದು ಆರಂಭವಾಗುವುದು ‘ಕಶ್ಚಿತ್ ಕಾಂತಾವಿರಹಗುರುಣಾ…’ ಎಂಬ ಶ್ಲೋಕದಿಂದ. ಹೆಂಡತಿಯ ಪ್ರಶ್ನೆಯಲ್ಲಿದ್ದ ಎರಡನೆಯ ಪದ ‘ಕಶ್ಚಿತ್’ನಿಂದ. ಮೂರನೆಯದು ರಘುವಂಶ. ಅದರ ಆರಂಭದ ಶ್ಲೋಕ ‘ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ…’, ಹೆಂಡತಿಯ ಪ್ರಶ್ನೆಯ ಮೂರನೆಯ ಪದ ‘ವಾಕ್’ನಿಂದ. ನೋಡಿದಿರಾ!
ಅಸ್ತಿ ಕಶ್ಚಿತ್ ವಾಗ್ವಿಶೇಷಃ ಎಂದು ಹೆಂಡತಿಯು ಮೂದಲಿಸುವುದಲ್ಲದಿದ್ದರೆ ಇವೆಲ್ಲ ಅನರ್ಘ್ಯ ರತ್ನಗಳು ಸಂಸ್ಕೃತ ಸಾಹಿತ್ಯ ಭಂಡಾರಕ್ಕೆ ಸೇರುತ್ತಿರಲಿಲ್ಲವೇನೋ! ಹಾಗಾಗಿ, ಯಶಸ್ವಿ ಪುರುಷನ ಹಿಂದೆ… ಹೆಂಡತಿಯ ಮೂದಲಿಕೆಯಾದರೂ ಇದ್ದೇ ಇರುತ್ತದೆ ಎಂಬುದಕ್ಕೆ ಕಾಳಿದಾಸನೇ ಸಾಕ್ಷಿ. ವಾಸ್ತವದಲ್ಲಿ ಹೆಂಡತಿ ಪ್ರಶ್ನಿಸಿದ್ದಳೋ ಇಲ್ಲವೋ, ಕಾಳಿದಾಸ ಕಾವ್ಯಗಳನ್ನು ರಚಿಸಿದ್ದಂತೂ ಹೌದು. ಆತನೂ ಈ ಮೂರು ಕಾವ್ಯಗಳ ಮೊದಲ ಶ್ಲೋಕಗಳು ಅನುಕ್ರಮವಾಗಿ ಈ ಮೂರು ಪದಗಳಿಂದ ಆರಂಭವಾಗಬೇಕು ಅಂತೆಲ್ಲ ಮುದ್ದಾಂ ಯೋಚಿಸಿ ಬರೆದದ್ದಲ್ಲ.
ಆಮೇಲಿನವರು ಯಾರೋ ಇಂಥದೊಂದು ಸ್ವಾರಸ್ಯವನ್ನು ಗುರುತಿಸಿ ‘ಅಸ್ತಿ ಕಶ್ಚಿತ್ ವಾಗ್ವಿಶೇಷಃ’ ಎಂಬ ಪದಪುಂಜ ಕಟ್ಟಿದ್ದಿರ ಬಹುದು. ಅದೇನೇ ಇರಲಿ, ಕಾಳಿದಾಸನ ಮೂರು ಮಹಾಕಾವ್ಯಗಳ ಮೊದಲ ಶ್ಲೋಕಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಇದೊಂದು ಭಲೇ ಸೂತ್ರ ಆಯ್ತಲ್ಲ!
ಹೀಗೆ, ‘ನೆನಪಿಟ್ಟುಕೊಳ್ಳುವುದಕ್ಕೆ ಸೂತ್ರ’ ಅನ್ನೋದೊಂದು ವೆರಿ ವೆರಿ ಇಂಟರೆಸ್ಟಿಂಗ್ ವಿಷಯ. ಇಂಗ್ಲಿಷ್‌ನಲ್ಲಿ  ಎನ್ನುತ್ತಾರೆ (ನೆಮೊನಿಕ್ ಎಂದು ಉಚ್ಚಾರ. ಸ್ಪೆಲ್ಲಿಂಗ್‌ನ ಮೊದಲ ಅಕ್ಷರ ಸೈಲೆಂಟ್). ಹಿಂದೊಮ್ಮೆ ವಿಜಯಕರ್ನಾಟಕ ಪತ್ರಿಕೆ ಯಲ್ಲಿ ಅಂಕಣ ಬರೆಯುತ್ತಿದ್ದಾಗ ನೆಮೊನಿಕ್‌ಗಳ ಬಗ್ಗೆ ಬರೆದಿದ್ದೆ. ‘ಮನುಷ್ಯನ ಮಿದುಳು ಒಂದು ಅದ್ಭುತ ವಿಸ್ಮಯ. ಸೂಪರ್‌ ಕಂಪ್ಯೂಟರ್‌ಗಿಂತಲೂ ಸಂಕೀರ್ಣ, ಸುವ್ಯವಸ್ಥಿತ, ಸರ್ವಸಮರ್ಥ ಎಂಬ ಹೆಗ್ಗಳಿಕೆಯದು.
ಆದರೆ, ನೆನಪಿಟ್ಟುಕೊಳ್ಳುವ ವಿಚಾರದಲ್ಲಿ, ನೆನಪಲ್ಲಿರುವುದನ್ನು ಹೊರಗೆಳೆಯಬೇಕಾದ ಸಂದರ್ಭದಲ್ಲಿ, ಅದು ಕೆಲವೊಮ್ಮೆಕೈಕೊಡುತ್ತದೆ. ಪರಶುರಾಮನಿಂದ ಶಾಪಕ್ಕೊಳಗಾದ ಕರ್ಣನ ಪರಿಸ್ಥಿತಿಯಂತೆ ಆಗುತ್ತದೆ. ಕ್ರಮವಿಲ್ಲದ ಸರಣಿ (()ಗಳನ್ನು ನೆನಪಿಟ್ಟುಕೊಳ್ಳುವುದು ಮಿದುಳಿಗೆ ಕಷ್ಟ. ಅದೇ ಕ್ರಮರಹಿತ ಸರಣಿಯನ್ನು ಯಾವುದಾದರೂ ಸಂಜ್ಞೆಯ ರೂಪದಲ್ಲೋ, ಸ್ವಾರಸ್ಯಕರ ಪದಪುಂಜ/ವಾಕ್ಯದ ರೂಪದಲ್ಲೋ ಉಣಿಸಿದರೆ ಮಿದುಳು ಅದನ್ನು ನಿರಾಯಾಸವಾಗಿ ಸ್ವೀಕರಿಸು ತ್ತದೆ, ಸಂಗ್ರಹಿಸಿಟ್ಟುಕೊಳ್ಳುತ್ತದೆ.
ಬೇಕೆಂದಾಗ ಸರಿಯಾದ ಕ್ರಮದಲ್ಲಿ ಹೊರಹಾಕುತ್ತದೆ. ಈ ರೀತಿಯ ಸಂಜ್ಞೆ/ಸೂತ್ರ ಅಥವಾ ಸ್ವಾರಸ್ಯಕರ ಪದಪುಂಜಕ್ಕೆ ನೆಮೊನಿಕ್ ಎನ್ನುತ್ತಾರೆ’ ಎಂಬ ಪೀಠಿಕೆಯಿಂದ ಆರಂಭಿಸಿ, ಒಂದಿಷ್ಟು ಪ್ರಖ್ಯಾತ ನೆಮೊನಿಕ್‌ಗಳನ್ನು ಉದಾಹರಿಸಿದ್ದೆ. ಓದುಗರಿಗೆ ಗೊತ್ತಿರುವ ನೆಮೊನಿಕ್ಸ್ ಬರೆದುತಿಳಿಸುವಂತೆಯೂ ಹೇಳಿದ್ದೆ. ಒಬ್ಬ ಓದುಗರು ಇನ್ನೂ ಒಂದು ಉಪಕಾರ ಮಾಡಿದರು.
ನೆಮೊನಿಕ್‌ಗೆ ಸಮಾನಾರ್ಥಕವಾಗಿ ಕನ್ನಡದಲ್ಲಿ ‘ನೆನೆಗುಬ್ಬಿ’ ಅಂತೊಂದು ಪದವನ್ನು ಸೂಚಿಸಿದರು. ನನಗದು ತುಂಬಇಷ್ಟವಾಯ್ತು. ಬಹುಶಃ ನಿಮಗೂ ಇಷ್ಟವಾದೀತೆಂದು ಇಂದಿನ ಈ ಲೇಖನದ ತಲೆಬರಹದಲ್ಲೂ ಇನ್ನು ಮುಂದೆ ಲೇಖನ ದುದ್ದಕ್ಕೂ ಅದನ್ನೇ ಬಳಸುವವನಿದ್ದೇನೆ. ನೆನೆಗುಬ್ಬಿ ಎಂಬ ಪದ ನಿಮಗೆ ಹೊಸತಿರಬಹುದೇ ವಿನಾ ಈ ಕಾನ್ಸೆಪ್ಟ್ ಗೊತ್ತಿರು ವಂಥದ್ದೇ. ಉತ್ತರ ಅಮೆರಿಕ ಖಂಡದಲ್ಲಿರುವ ಪಂಚಮಹಾಸರೋವರಗಳು – ಹ್ಯೂರನ್, ಒಂಟಾರಿಯೊ, ಮಿಷಿಗನ್, ಈರಿ, ಸುಪೀರಿಯರ್- ಇವುಗಳನ್ನು  ಎಂದು, ಮನಬಿಲ್ಲಿನಲ್ಲಿರುವ ಬಣ್ಣಗಳನ್ನು  ಎಂದು, ಟ್ರಿಗ್ನೊಮೆಟ್ರಿಯ ವ್ಯಾಖ್ಯೆಗಳನ್ನು  ಎಂದು, ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್, ಬಿಪಿನ್‌ಚಂದ್ರ ಪಾಲ್– ಈ ಮೂವರು ಸ್ವಾತಂತ್ರ್ಯಯೋಧರನ್ನು ‘ಲಾಲ್ ಬಾಲ್ ಪಾಲ್’ ಎಂದು, ನೆನಪಿಟ್ಟುಕೊಂಡವರಾದರೆ ನೀವು ನೆನೆಗುಬ್ಬಿಗಳನ್ನುಬಳಸಿದವರೇ.
ಹಳಗನ್ನಡದ ಪದ್ಯಗಳಿಗೆ ಗುರು-ಲಘು ಪ್ರಸ್ತಾರ ಹಾಕಿ ಛಂದಸ್ಸು ಗುರುತಿಸುವಾಗ ‘ಯಮಾತಾರಾಜಭಾನಸಲಗಂ’ ಬಳಸಿದವ ರಾದರೆ ಈ ಒಂದು ನೆನೆಗುಬ್ಬಿ ನಿಮ್ಮ ಬತ್ತಳಿಕೆಯಲ್ಲೂ ಇರುವುದೇ. ಅಥವಾ, ಜನವರಿಯಿಂದ ಡಿಸೆಂಬರ್‌ವರೆಗಿನ 12 ತಿಂಗಳು ಗಳಲ್ಲಿ ಪ್ರತಿಯೊಂದರಲ್ಲೂ ಎಷ್ಟು ದಿನ ಎಂದು ನೆನಪಿಡುವುದಕ್ಕೆ ಎರಡೂ ಕೈಗಳನ್ನು ಮುಷ್ಟಿಗಳಾಗಿ ಹಿಡಿದು, ಮಣಿಗಂಟುಗಳ ಉಬ್ಬನ್ನು 31 ಎಂದೂ, ತಗ್ಗನ್ನು30(ಫೆಬ್ರವರಿಗೆ28ಅಥವಾ29) ಎಂದೂ ಎಣಿಸುವುದು ನಿಮಗೆ ಗೊತ್ತಿದೆಯಾದರೆ ಅಲ್ಲಿನೀವು ಉಪಯೋಗಿಸಿದ್ದೂ ಒಂದು ನೆನೆಗುಬ್ಬಿಯೇ!
ಇತ್ತೀಚೆಗೆ ವಾಟ್ಸಪ್‌ನಲ್ಲಿ ಹರಿದಾಡಿದ್ದ ಒಂದು ಮೆಸೇಜಿನಲ್ಲಿ, ತುಲಸೀದಾಸರದ್ದೆನ್ನಲಾದ ಒಂದು ‘ದೋಹಾ’ ಪದ್ಯದ ಅಕ್ಷರಗಳುಭಾರತದ ಈಗಿನ29ರಾಜ್ಯಗಳ ಹೆಸರುಗಳನ್ನು ಸೂಚಿಸುತ್ತವೆ ಎಂದಿತ್ತು. ‘ರಾಮ ನಾಮ ಜಪತೆ ಅತ್ರಿ ಮತ ಗುಸಿಆಉ| ಪಂಕ ಮೇ ಉಗೋಹಮಿ ಅಹಿ ಕೇ ಛಬಿ ಝಾಉ|’ ಎಂಬ ಆ ದೋಹಾ, ತುಲಸೀದಾಸರ ರಚನೆಯೇನಲ್ಲ, ದೋಹಾಗಳ ಛಂದಸ್ಸನ್ನುಪಾಲಿಸುವುದೂ ಇಲ್ಲ. ಯಾರೋ ಈಗಿನ ಮೇಧಾವಿಗಳು ರಚಿಸಿ ತುಲಸೀದಾಸರ ಹೆಸರಿನಲ್ಲಿ ಲೋಕಾರ್ಪಣೆ ಮಾಡಿರುವುದು ಅಷ್ಟೇ.
ಆದರೂ ಅದೊಂದು ಅತ್ಯುತ್ತಮ ನೆನೆಗುಬ್ಬಿ ಎನ್ನುವುದರಲ್ಲಿ ಎರಡು ಮಾತಿಲ್ಲ. ವೇದವ್ಯಾಸ ಮಹರ್ಷಿಗಳಿಂದ ಬರೆಯಲ್ಪಟ್ಟ ಹದಿನೆಂಟು ಪುರಾಣಗಳ ಹೆಸರನ್ನು ಹೇಳಬಲ್ಲಿರಾ? ಅದಕ್ಕೆ ಒಂದು ಸಂಸ್ಕೃತ ಶ್ಲೋಕರೂಪದ ನೆನೆಗುಬ್ಬಿ ಇದೆ, ಹೀಗೆ: ‘ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್| ಅ ನಾ ಪ ಲಿಂ ಗ ಕೂ ಸ್ಕಾನಿ ಪುರಾಣಾನಿ ಪ್ರಚಕ್ಷತೇ||’. ಇದೇನು ಹೇಳುತ್ತಿದೆಯೆಂದರೆ ಹದಿನೆಂಟು ಪುರಾಣಗಳ ಹೆಸರುಗಳಲ್ಲಿ ಮ ಕಾರದಿಂದ ಆರಂಭವಾಗುವವು ಎರಡು: ಮತ್ಸ್ಯಪುರಾಣ, ಮಾರ್ಕಂಡೇಯ ಪುರಾಣ.
ಭ ಕಾರದಿಂದ ಆರಂಭವಾಗುವವು ಎರಡು: ಭವಿಷ್ಯೋತ್ತರಪುರಾಣ, ಭಾಗವತಪುರಾಣ. ಬ್ರ ಅಕ್ಷರದಿಂದ ಆರಂಭವಾಗುವವು ಮೂರು: ಬ್ರಹ್ಮಾಂಡಪುರಾಣ, ಬ್ರಹ್ಮಪುರಾಣ, ಬ್ರಹ್ಮವೈ ವರ್ತಪುರಾಣ. ವ ಕಾರದಿಂದ ಆರಂಭವಾಗುವವು ನಾಲ್ಕು: ವರಾಹ ಪುರಾಣ, ವಾಯುಪುರಾಣ, ವಾಮನಪುರಾಣ, ವಿಷ್ಣುಪುರಾಣ. ಅನಾಪಲಿಂಗಕೂಸ್ಕಾನಿ ಅಂದರೆ ಅಗ್ನಿಪುರಾಣ, ನಾರದಪುರಾಣ,ಪದ್ಮಪುರಾಣ, ಲಿಂಗಪುರಾಣ, ಗರುಡಪುರಾಣ, ಕೂರ್ಮಪುರಾಣ ಮತ್ತು ಸ್ಕಾಂದಪುರಾಣ.
ನೆನೆಗುಬ್ಬಿ ಇಲ್ಲದೆ ಕಷ್ಟ ಇದೆ ಅಲ್ಲವೇ? ಈಗ, ನೆನೆಗುಬ್ಬಿ ಬಳಸಿ ಇಸ್ಪೀಟ್ ಎಲೆಗಳದೊಂದು ಮ್ಯಾಜಿಕ್ ವಿಚಾರ ಹೇಳುತ್ತೇನೆ. ಕೋವಿಡ್‌ನಿಂದಾದ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಮನೆಮಂದಿಗೆ, ವಿಶೇಷವಾಗಿ ಮಕ್ಕಳಿಗೆ ಇದೊಂದು ಒಳ್ಳೆಯ ಮನೋರಂಜನೆ ಕೂಡ. ಇದಕ್ಕೆ ಪೂರ್ವಭಾವಿಯಾಗಿ ಒಂದು ರೋಚಕ ಕಥೆಯನ್ನೂ ಹೇಳಬೇಕು. ಏನೆಂದರೆ, ಶಿವಾಜಿಯ ಸೈನಿಕರಿಗೂ ಮೊಘಲರ ಸೈನಿಕರಿಗೂ ಯುದ್ಧ ನಡೆಯುತ್ತಿದೆ.
ಎರಡೂ ಕಡೆ ಅಪಾರ ಸಾವುನೋವುಗಳಾಗಿವೆ. ಕೊನೆಯಲ್ಲಿ ಎರಡೂ ಕಡೆ ತಲಾ 15ರಷ್ಟೇ ಸೈನಿಕರು ಉಳಿದುಕೊಂಡಿದ್ದಾರೆ. ಆಗ ಅವರು ಒಂದು ಒಪ್ಪಂದಕ್ಕೆ ಬರುತ್ತಾರೆ. ಏನೆಂದರೆ ಎಲ್ಲ 30 ಸೈನಿಕರೂ ಸೇರಿ ಒಂದು ವೃತ್ತಾಕಾರದ ಪರಿಧಿಯಲ್ಲಿ ಕುಳಿತು ಕೊಳ್ಳುವುದು. ಹಾಗೆ ಕುಳಿತುಕೊಂಡ ಮೇಲೆ ಒಂದುಕಡೆಯಿಂದ ಆರಂಭಿಸಿ ಪ್ರದಕ್ಷಿಣಾಕಾರವಾಗಿ ಎಣಿಸುತ್ತ ಒಂಬತ್ತನೆಯ ಸೈನಿಕನನ್ನು ಕೊಂದುಬಿಡುವುದು. ಮತ್ತೆ ಅಲ್ಲಿಂದ ಪ್ರದಕ್ಷಿಣಾಕಾರ ಎಣಿಕೆ ಆರಂಭಿಸಿ ಒಂಬತ್ತನೆಯವನನ್ನು ಮುಗಿಸುವುದು. ಹೀಗೇ ಮುಂದುವರಿಯುತ್ತ ಯಾವ ಪಕ್ಷದ ಸೈನಿಕರೆಲ್ಲ ಮೊದಲು ಸತ್ತುಹೋಗುತ್ತಾರೋ ಆ ಪಕ್ಷ ಸೋತಂತೆ ಎಂದು.
ಮೊಘಲ್ ಸೈನಿಕರು ಶಕ್ತಿಯಲ್ಲೇನೋ ಮುಂದು, ಆದರೆ ಯುಕ್ತಿಯಲ್ಲಿ ಮರಾಠಾ ಸೈನಿಕರದೇ ಮೇಲುಗೈ. ಸರಿ, ವೃತ್ತಾಕಾರದಲ್ಲಿ ಯಾವ ಕ್ರಮದಂತೆ ಕುಳಿತುಕೊಳ್ಳುವುದು? ಒಬ್ಬ ಮೊಘಲ್ ಒಬ್ಬ ಮರಾಠಾ ಮತ್ತೊಬ್ಬ ಮೊಘಲ್… ಈ ರೀತಿ ಪರ್ಯಾಯ ಕ್ರಮದಲ್ಲೇ? ಬೇಡ, ಯಾವುದೇ ನಿರ್ದಿಷ್ಟ ಕ್ರಮ ಇಲ್ಲದೆ, ಯಾದೃಚ್ಛಿಕ ಆಗಿರಲಿ ಎಂದು ತೀರ್ಮಾನವಾಯಿತು.
ನಮ್ಮಲ್ಲೊಂದು ಶ್ಲೋಕ ಇದೆ. ಅದರಂತೆ ಕುಳಿತುಕೊಳ್ಳೋಣ ಎಂದು ಮರಾಠರೆಂದಿದ್ದಕ್ಕೆ ಮೊಘಲರು ಒಪ್ಪಿಕೊಂಡರು. ‘ವೇದಃ ಪಂಚ ದ್ವಯೇ ಏಕ ತ್ರೀಣಿ ಚಂದ್ರ ನಿಶಾಪತಿ| ದ್ವಯೇ ದ್ವಯೇ ತ್ರಿರೇಕಂಚ ದ್ವಯೇ ದ್ವಯೇತಿ ಚಂದ್ರಮಃ||’ ಎಂಬುದೇ ಆ ಶ್ಲೋಕ.ಇದರಲ್ಲಿ ವೇದ ಅಂದರೆ 4 (ನಾಲ್ಕು ವೇದಗಳೆಂಬ ಅರ್ಥದಲ್ಲಿ). ಪಂಚ, ದ್ವಯ, ಏಕಂ, ತ್ರೀಣಿ ಮುಂತಾದುವು ಸಂಸ್ಕೃತ ಅಂಕೆಗಳು.
ಲೋಕಕ್ಕೆ ಚಂದ್ರ ಒಬ್ಬನೇ ಇರುವುದಾದ್ದರಿಂದ ಚಂದ್ರ ಅಂದರೂ 1. ನಿಶಾಪತಿ ಅಂದರೂ ಚಂದ್ರನೇ. ಹಾಗಾಗಿ ನಿಶಾಪತಿ ಅಂದರೂ1. ಈ ಶ್ಲೋಕದ ಪ್ರಕಾರ ಮೊದಲು ನಾಲ್ಕು ಜನ ಮರಾಠರು, ಆಮೇಲೆ ಐವರು ಮೊಘಲರು, ಇಬ್ಬರು ಮರಾಠರು, ಒಬ್ಬ ಮೊಘಲ, ಮೂವರು ಮರಾಠರು, ಒಬ್ಬ ಮೊಘಲ, ಒಬ್ಬ ಮರಾಠ, ಇಬ್ಬರು ಮೊಘಲರು, ಇಬ್ಬರು ಮರಾಠರು, ಮೂವರು ಮೊಘಲರು, ಒಬ್ಬ ಮರಾಠ, ಇಬ್ಬರು ಮೊಘಲರು, ಇಬ್ಬರು ಮರಾಠರು, ಒಬ್ಬ ಮೊಘಲ. ಅಲ್ಲಿಗೆ ಮೂವತ್ತೂ ಜನರು ವೃತ್ತಾ ಕಾರದ ಪರಿಧಿಯಲ್ಲಿ ಕುಳಿತಂತೆ ಆಗುತ್ತದೆ. ಆರಂಭದ ನಾಲ್ಕು ಮರಾಠರಿದ್ದಾರಲ್ಲ ಅವರಲ್ಲಿ ಮೊದಲನೆಯವನಿಂದ ಎಣಿಕೆ ಶುರು. ಪ್ರತಿ ಒಂಬತ್ತನೆಯ ಸೈನಿಕನನ್ನು ಮುಲಾಜಿಲ್ಲದೆ ಕೊಲ್ಲುವುದು. ಏನು ಚಮತ್ಕಾರ ಅಂತೀರಿ!
ಪ್ರದಕ್ಷಿಣಾಕಾರದಲ್ಲಿ ಕೆಲವು ಸುತ್ತುಗಳಾಗುವಷ್ಟರಲ್ಲಿ ಎಲ್ಲ15ಮೊಘಲ್ ಸೈನಿಕರೂ ಮಟಾಷ್! ಎಲ್ಲ15ಮರಾಠರೂಬದುಕುಳಿದರು! ಇದನ್ನು ನೀವು ಕಪ್ಪು ಬಣ್ಣದ15(ಮರಾಠರು) ಮತ್ತು ಕೆಂಪು ಬಣ್ಣದ15(ಮೊಘಲರು) ಹೀಗೆ ಒಟ್ಟು30ಎಲೆಗಳನ್ನು ಇಸ್ಪೀಟ್ ಪ್ಯಾಕ್‌ನಿಂದ ತೆಗೆದುಕೊಂಡು ಮಾಡಿ ನೋಡಬಹುದು.
ನೆಲದ ಮೇಲೆ ಅಥವಾ ಟೇಬಲ್ ಮೇಲೆ ವೃತ್ತಾಕಾರವಾಗಿ ಎಲೆಗಳನ್ನಿಡಬೇಕು. ‘ವೇದಃ ಪಂಚ ದ್ವಯೇ ಏಕ ತ್ರೀಣಿ ಚಂದ್ರನಿಶಾಪತಿ| ದ್ವಯೇ ದ್ವಯೇ ತ್ರಿರೇಕಂಚ ದ್ವಯೇ ದ್ವಯೇತಿ ಚಂದ್ರಮಃ||’ ಎಂಬ ಶ್ಲೋಕದಲ್ಲಿ ವೇದ ಅಂದರೆ4ಕಪ್ಪು ಎಲೆ(ಮರಾಠರು) ಎಂದು ನೆನಪಿದ್ದರಾಯಿತು. ಈ ಲೇಖನದ ತಯಾರಿಯ ವೇಳೆ, ಶ್ಲೋಕವನ್ನು ಮತ್ತು ಮರಾಠರ ಕಥೆಯನ್ನುಮತ್ತೊಮ್ಮೆ ಸರಿಯಾಗಿ ಕೇಳಿಸಿಕೊಳ್ಳುತ್ತೇನೆಂದು ಮೊನ್ನೆ ಊರಿಗೆ ನನ್ನ ಅಣ್ಣನಿಗೆ ಕರೆ ಮಾಡಿದ್ದೆ.
ಪಾಪ, ಅವರು ನನಗೋಸ್ಕರ ಮೇಜಿನ ಮೇಲೆ ಇಸ್ಪೀಟ್ ಎಲೆಗಳ ವೃತ್ತ ರಚಿಸಿ ಫೋನ್‌ನಲ್ಲಿ ಚಿತ್ರ ಸಹ ಕ್ಲಿಕ್ಕಿಸಿ ಕಳುಹಿಸಿದರು. ಮರಾಠರು ಮತ್ತು ಮೊಘಲರ ಕಥೆಯೇ ಇದಕ್ಕೆ ಬೆಸ್ಟ್ ಆದರೂ, ಪ್ರಸ್ತುತ ಸಂದರ್ಭದಲ್ಲಿ ಕೆಂಪು ಎಲೆಗಳನ್ನು ಕೋವಿಡ್ಅಂತಲೂ, ಕಪ್ಪು ಎಲೆಗಳನ್ನು ವ್ಯಾಕ್ಸೀನ್ ಅಂತಲೂ ಪರಿಗಣಿಸಿ ಆಡಬಹುದು!
ಇನ್ನೊಂದಿಷ್ಟು ನೆನೆಗುಬ್ಬಿಗಳನ್ನು ನೋಡುವುದಾದರೆ – ಇದೊಂದು ರಾಹುಕಾಲ ಗೊತ್ತುಮಾಡಿಕೊಳ್ಳುವುದಕ್ಕೆ ಬಳಕೆಯಾಗು ವಂಥದ್ದು: ‘ಸೋಮಾರಿ ಶರಣಪ್ಪನ ಶುದ್ಧ ಬುದ್ಧಿಗೇಡಿತನ ಗುಂಡಣ್ಣನ ಮನಸ್ಸನ್ನು ರಂಜಿಸಿತು’ ಎಂಬ ನೆನೆಗುಬ್ಬಿ. ರಾಹು ಕಾಲದ ಬಗ್ಗೆ ನಿಮಗೆ ನಂಬಿಕೆ ಇಲ್ಲದಿದ್ದರೂ ಪರವಾಗಿಲ್ಲ (ಏಕೆಂದರೆ ನನಗೂ ಇಲ್ಲ) ಈ ನೆನೆಗುಬ್ಬಿಯು ರಾಹುಕಾಲ ನಿರ್ಣಯ ಮಾಡಬಲ್ಲದು ಎನ್ನುವುದನ್ನಾದರೂ ನೀವು ನಂಬಲೇಬೇಕಾಗುತ್ತದೆ. ಹೇಗೆಂದು ವಿವರಿಸುತ್ತೇನೆ.
ಒಂದೂವರೆ ಗಂಟೆ ಅವಧಿಯ ರಾಹುಕಾಲವು ವಾರದ ಏಳು ದಿವಸಗಳಲ್ಲೂ ದಿನದ ಬೇರೆಬೇರೆ ಸಮಯದಲ್ಲಿ ಆರಂಭ ವಾಗುತ್ತದೆ. ಸೋಮವಾರ ಬೆಳಗ್ಗೆ ಏಳೂವರೆಗೆ, ಶನಿವಾರ ಬೆಳಗ್ಗೆ ಒಂಬತ್ತಕ್ಕೆ, ಶುಕ್ರವಾರ ಹತ್ತೂವರೆಗೆ, ಬುಧವಾರ ಮಧ್ಯಾಹ್ನಹನ್ನೆರಡಕ್ಕೆ, ಗುರುವಾರ ಒಂದೂವರೆಗೆ, ಮಂಗಳವಾರ ಮೂರಕ್ಕೆ ಹಾಗೂ ರವಿವಾರ ಸಂಜೆ ನಾಲ್ಕೂವರೆಗೆ. ವಾರದ ದಿನಗಳಅನುಕ್ರಮಣಿಕೆ ಮತ್ತು ರಾಹುಕಾಲದ ಅನುಕ್ರಮಣಿಕೆ ಒಂದಕ್ಕೊಂದು ತಾಳೆ ಯಾಗುವುದಿಲ್ಲ; ನೆನಪಿಡುವುದು ಸುಲಭವಿಲ್ಲ. ಅದಕ್ಕೆಂದೇ ಈ ನೆನೆಗುಬ್ಬಿ. ‘ಸೋಮಾರಿ ಶರಣಪ್ಪನ ಶುದ್ಧ ಬುದ್ಧಿಗೇಡಿತನ ಗುಂಡಣ್ಣನ ಮನಸ್ಸನ್ನು ರಂಜಿಸಿತು’ ವಾಕ್ಯದ ಪ್ರತಿಯೊಂದು ಪದದ ಮೊದಲಕ್ಷರ ತೆಗೆದುಕೊಂಡರಾಯ್ತು, ಅದರಿಂದ ಆರಂಭವಾಗುವ ದಿನದಂದು ರಾಹುಕಾಲ ಎಷ್ಟು ಹೊತ್ತಿಗೆ ಶುರು ಎಂದು ಕಂಡುಕೊಳ್ಳಬಹುದು!
ಇನ್ನೊಂದಿದೆ ‘ಕಾಶಿ ಸೋಪು ಅಪಕೃಪೆ’ ಎಂಬ ನೆನೆಗುಬ್ಬಿ. ಯಾವುದಕ್ಕೆ ಗೊತ್ತೇ? ಉಡುಪಿಯ ಅಷ್ಟಮಠಗಳನ್ನು (ಕಾಣಿಯೂರು, ಶಿರೂರು, ಸೋದೆ, ಪುತ್ತಿಗೆ, ಅದಮಾರು, ಪಲಿಮಾರು, ಕೃಷ್ಣಾಪುರ ಮತ್ತು ಪೇಜಾವರ) ನೆನಪಿಡಲಿಕ್ಕೆ! ‘ಆಶಾ ರವಿ ಮದ್ವೆ’ ಅಂತ ಮತ್ತೊಂದಿದೆ. ಇದು ಯಾವುದಕ್ಕಿರಬಹುದು ಊಹಿಸಬಲ್ಲಿರಾ? ತತ್ತ್ವಸಿದ್ಧಾಂತಗಳು ಮತ್ತು ಅವುಗಳ ಪ್ರತಿಪಾದಕರನ್ನು ನೆನೆಯ ಲಿಕ್ಕೆ. ಅದ್ವೈತ – ಶಂಕರಾಚಾರ್ಯ; ವಿಶಿಷ್ಟಾದ್ವೈತ – ರಾಮಾನುಜಾಚಾರ್ಯ; ದ್ವೈತ – ಮಧ್ವಾಚಾರ್ಯ!
ನೆನೆಗುಬ್ಬಿಗಳ ಗರಿಷ್ಠ ಬಳಕೆ ಆಗುವುದು ಬಹುಶಃ ಶಾಲಾಕಾಲೇಜುಗಳಲ್ಲೇ. ಅಲ್ಲಿ ಗೋಡೆಗಳಿಗೂ ಅವು ಬಾಯಿಪಾಠವಾಗಿರುತ್ತವೆ. ಪ್ಯಾರಬೊಲ, ಎಲ್ಲಿಪ್ಸ್, ಮತ್ತು ಹೈಪರ್ ಬೊಲಗಳ ಆಕಾರ ನೆನಪಿಟ್ಟುಕೊಳ್ಳಲಿಕ್ಕೆ ಹೊಟ್ಟೆ – ಮೊಟ್ಟೆ – ಚಿಟ್ಟೆ ಎಂಬ ನೆನೆಗುಬ್ಬಿ ನಿಮಗೆ ಗೊತ್ತಿತ್ತೇ? (   ) ಅಂತ ಇನ್ನೊಂದು. ಆಮ್ಲವು ನೀಲಿ ಲಿಟ್ಮಸ್ಸನ್ನು ಕೆಂಪಾಗಿಸುತ್ತದೆ ಎಂದುನೆನಪಿಡುವುದಕ್ಕೆ. ಅಷ್ಟು ನೆನಪಿದ್ದರೆ ಕ್ಷಾರವು ಕೆಂಪು ಲಿಟ್ಮಸ್ಸನ್ನು ನೀಲಿಯಾಗಿಸುತ್ತದೆಂದು ಗೊತ್ತಿದ್ದದ್ದೇ. ಬ್ರೆಜಿಲ್ ದೇಶ ಕಾಫಿ ಬೆಳೆಗೆ ಪ್ರಖ್ಯಾತ ಎಂಬುದನ್ನು ನಾವು ದಕ್ಷಿಣಕನ್ನಡದವರು ‘ಕಾಫಿ-ಬಜಿಲ್’ ಅಂತ ನೆನಪಿಟ್ಟುಕೊಳ್ಳುತ್ತಿದ್ದೆವು.
ಬಜಿಲ್ ಎಂದರೆ ತುಳು ಭಾಷೆಯಲ್ಲಿ ಅವಲಕ್ಕಿ. ಪೈ ಸ್ಥಿರಾಂಕದ ಬೆಲೆ 3.141592… ಆರು ದಶಾಂಶ ಸ್ಥಾನಗಳಷ್ಟು ನೆನಪಿಡಲಿಕ್ಕೆ        ಎಂಬ ನೆನೆಗುಬ್ಬಿ. ಪ್ರತಿ ಪದದಲ್ಲಿ ಅಕ್ಷರಗಳೆಷ್ಟೆಂದು ಅಂಕಿಗಳಲ್ಲಿ ಬರೆಯುತ್ತ ಹೋದರೆ ಪೈ ಬೆಲೆ ಸಿಗುತ್ತದೆ. ಸೌರವ್ಯೂಹದ ಒಂಬತ್ತು ಗ್ರಹಗಳನ್ನು- ಮರ್ಕ್ಯೂರಿ, ವೀನಸ್, ಅರ್ತ್, ಮಾರ್ಸ್, ಜುಪಿಟರ್, ಸ್ಯಾಟರ್ನ್, ಯುರೇನಸ್, ನೆಪ್ಚೂನ್ ಮತ್ತು ಪ್ಲುಟೊ(ಈಗ ಪಟ್ಟಿಯಲ್ಲಿಲ್ಲ)- ಸೂರ್ಯನಿಂದ ದೂರದ ಅನುಕ್ರಮದಲ್ಲಿ ನೆನಪಿಡುವುದಕ್ಕೆ:         !ಹಾಗೆಯೇ, ..        ಎಂಬ ನೆನೆ ಗುಬ್ಬಿ ಎಲೆಕ್ಟ್ರಿಕಲ್ ಲ್ಯಾಬ್‌ನಲ್ಲಿ ರೆಸಿಸ್ಟರ್‌ಗಳ ಕಲರ್ ಬಾರ್ ಸ್ಕೀಂ (ಬ್ಲ್ಯಾಕ್, ಬ್ರೌನ್, ರೆಡ್, ಆರೆಂಜ್… ಹೀಗೆ ಬಣ್ಣಗಳ ಪಟ್ಟಿ) ಗುರುತಿಸಲಿಕ್ಕೆ.
ಕಂಪ್ಯೂಟರ್ ನೆಟ್‌ವರ್ಕ್ ನ ಏಳು ಸ್ತರಗಳಾದ , , , , ,  &   ಗಳನ್ನು ನೆನಪಿಡಲಿಕ್ಕೆ      ’  ಎಂಬ ನೆನೆಗುಬ್ಬಿ. ಮೆಡಿಕಲ್ ಕಾಲೇಜಿ ನವರು ಸಿಕ್ಕಾಪಟ್ಟೆ ನೆನೆಗುಬ್ಬಿಗಳನ್ನು ಬಳಸುತ್ತಾರಂತೆ. ಕೆಲವೊಂದು ಸ್ವಲ್ಪ ಪೋಲಿ ಸಹ ಆಗಿರುತ್ತವಂತೆ. ಹಾಗೆ ನೋಡಿದರೆ ನಾವು ಎಂಜಿನಿಯರ್‌ಗಳೇ ಸಾಧು ಸುಭಗರು. ಹೆಚ್ಚೆಂದರೆ ಟ್ರಿಗ್ನೊಮೆಟ್ರಿಯ ಸೈನ್ – ಕೊಸೈನ್ ಗಳ  ನೆನೆಗುಬ್ಬಿ ಯನ್ನೇ        ’   ಎಂದೇವು!
ಅದು ಕಾಲೇಜಿನ ಕಾರಿಡಾರ್‌ನಲ್ಲಿ ಪ್ರಿನ್ಸಿಪಾಲರು ಠಳಾಯಿಸಿದಾಗ ಕ್ಲಾಸಿನೊಳಗೆ ವಿದ್ಯಾರ್ಥಿಗಳೆಲ್ಲ ಗಪ್‌ಚುಪ್ ಆಗುವುದರ ಸೈನ್ ಕೂಡ! ಕೆಲವೊಮ್ಮೆ ನೆನೆಗುಬ್ಬಿಯೇ ನೆನಪಿಗೆ ಬಾರದೆ ಸತಾಯಿಸುವುದೂ ಇದೆ. ವಿದ್ಯುಚ್ಛಕ್ತಿಯನ್ನು ಕುರಿತ ‘ಪಿ ಇಕ್ವಲ್ಸ್ ಐ ಸ್ಕ್ವೇರ್ ಆರ್’ ಸೂತ್ರವನ್ನು ಗುರುಗಳು ಮಕ್ಕಳಿಗೆ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್, ಪಿ ಇಕ್ವಲ್ಸ್ ಐ ಸ್ಕ್ವೇರ್ ಆರ್’ ಎಂದು ಪ್ರಾಸಬದ್ಧ ವಾಗಿ ನೆನಪಿಡಲು ಹೇಳಿಕೊಟ್ಟರು. ಸೂತ್ರ ಸುಲಭವಿದೆಯೆಂದು ಮಕ್ಕಳಿಗೂ ಖುಷಿ.
ಪರೀಕ್ಷೆಯಲ್ಲಿ ಅದೇ ಸೂತ್ರದ ಪ್ರಶ್ನೆ ಬರಬೇಕೇ! ಒಬ್ಬ ಹುಡುಗ ಗತ್ತಿನಿಂದ ನೆನಪಿಸಿಕೊಂಡ. ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ಎಂದು ಅಲ್ಲಿಗೇ ನಿಲ್ಲಿಸಿ ‘ಪಿ ಇಕ್ವಲ್ಸ್ ಐ ಸ್ಕ್ವೇರ್ ಆರ್’ ಎನ್ನಬೇಕಿತ್ತು ಆತ. ಆದರೆ ಹಾಗೆಮಾಡದೆ ಪದ್ಯವನ್ನು ಮುಂದುವರಿಸಿದ. ‘ಹೌ ಐ ವಂಡರ್ ವ್ಹಾಟ್ ಯೂ ಆರ್… ಅಪ್ ಎಬೊವ್ ದ ವರ್ಲ್ಡ್ ಸೋ ಹೈ’ ವರೆಗೂ ಮುಂದುವರಿಸಿದ. ಅಲ್ಲಿ ಪ್ರಾಸಬದ್ಧ ವಾಗುವಂತೆ ‘ಪಿ ಇಕ್ವಲ್ಸ್ ಆರ್ ಸ್ಕ್ವೇರ್ ಐ’ ಎಂದುಬಿಟ್ಟ. ಸೂತ್ರ ಉಲ್ಟಾಪಲ್ಟಾ ಆಯ್ತು!
ನಿಮ್ಮ ನೆಚ್ಚಿನ ನೆನೆಗುಬ್ಬಿಗಳು, ಅವುಗಳೊಂದಿಗಿನ ಸ್ವಾರಸ್ಯಕರ ನೆನಪುಗಳು ಇದ್ದರೆ ಬರೆದು ತಿಳಿಸಿ.