ಮಂಗೋಲಿಯಾ: ಕರೋನಾ ನಿರ್ವಹಣೆಯ ಗೋಲು, ಗೋಳು
ನಾಡಿಮಿಡಿತ
ವಸಂತ ನಾಡಿಗೇರ
ಈ ಕೋವಿಡ್-19ಎಂಬ ಮಹಾಮಾರಿ ವಕ್ಕರಿಸಿ ಕಳೆದ ವರ್ಷ, ಅಂದರೆ 2020ರಲ್ಲಿ ಜಗತ್ತಿನಾದ್ಯಂತ ಜನರ ಜೀವ ಮತ್ತು ಜೀವನವನ್ನು ನಲುಗಿಸಿಬಿಟ್ಟಿತು. ಅಂತೂ ಏನೇನೋ ಮಾಡಿ ಒಂದು ಹಂತಕ್ಕೆ ಹತೋಟಿಗೆ ತಂದಾಗ 2021ನೇ ವರ್ಷವಾದರೂ ಚೆನ್ನಾಗಿರಬಹುದು ಎಂಬ ಆಶಾಭಾವ ಮತ್ತು ನಿರೀಕ್ಷೆ ಎಲ್ಲರದಾಗಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಮತ್ತೆ ಕೈಮೀರಿ ಈಗ ಎರಡನೇ ಅಲೆಯಲ್ಲಿ ಸಿಲುಕಿದ್ದೇವೆ.
ಮುಂದೆ ಮೂರನೇ ಅಲೆಯೂ ಬರಬಹುದೆಂಬ ಶಂಕೆಯನ್ನು ವೈದ್ಯರು ಮತ್ತು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮತ್ತೆಲಾಕ್‌ಡೌನ್, ವರ್ಕ್ ಫ್ರಂ ಹೋಮ್ ಮೊದಲಾದ ಬಂಧನದ ಬದುಕನ್ನು ಕಳೆಯುವಂತಾಗಿದೆ. ಇದರ ನಡುವೆ ಕರೋನಾ ಸೋಂಕನ್ನು ತಡೆಗಟ್ಟಲು ನಾನಾ ದೇಶಗಳು ನಾನಾ ಉಪಾಯಗಳನ್ನು ಮಾಡಿವೆ.
ಮೊದಲ ಅಲೆಯ ಸಂದರ್ಭದಲ್ಲಿ ಇಟಲಿ, ಸ್ಪೇನ್, ಫ್ರಾನ್ಸ್ ಅಮೆರಿಕ ಮೊದಲಾದ ದೇಶಗಳು ವಿಪರೀತ ಸಮಸ್ಯೆಯನ್ನು ಎದುರಿಸಿ ದವು. ಆಗ ಸಾಕಷ್ಟು ನಿಯಂತ್ರಣ ಸಾಧಿಸಿದ್ದೇವೆಂಬ ಹೆಗ್ಗಳಿಕೆ ಭಾರತದ್ದಾಗಿತ್ತು. ಆದರೆ ಎರಡನೇ ಅಲೆಯನ್ನು ನಿಗ್ರಹಿಸಲು ಸಾಧ್ಯವಾಗದೆ ನಾವು ಪರದಾಡುತ್ತಿದ್ದೇವೆ. ವಿಶ್ವದಲ್ಲೇ ಅತಿಹೆಚ್ಚು ಕೋವಿಡ್ ಕೇಸ್‌ಗಳಿರುವ ದೇಶ ಈಗ ನಮ್ಮದಾಗಿದೆ. ಹೀಗೆ ಹಲವಾರು ದೇಶಗಳ ಕೋವಿಡ್ ನಿಯಂತ್ರಣ ಕ್ರಮಗಳತ್ತ ನೋಟ ಹರಿಸಿದಾಗ ಕೆಲವು ಕುತೂಹಲಕಾರಿ ಅಂಶಗಳು ಬೆಳಕಿಗೆಬರುವುದುಂಟು. ಆಗೆಲ್ಲ ಗಮನಕ್ಕೆ ಬರುವ ಬಹುಮುಖ್ಯ ವಿಷಯವೆಂದರೆ ದೇಶದ ಗಾತ್ರ ಮತ್ತು ಜನಸಂಖ್ಯೆ. ದೇಶ ಮತ್ತು ಜನಸಂಖ್ಯೆ ದೊಡ್ಡದಾದಂತೆ ನಿಯಂತ್ರಣ ಕಷ್ಟ ಎಂಬುದು ಸಹಜ ತಿಳಿವಳಿಕೆ.
ರಾಷ್ಟ್ರವೊಂದು ಚಿಕ್ಕದಾಗಿದ್ದು ಅದರ ಜನಸಂಖ್ಯೆಯೂ ಕಡಿಮೆಯಾಗಿದ್ದರೆ ನಿಯಂತ್ರಣ ಸುಲಭ ಎಂಬ ನಂಬಿಕೆ. ಆದರೆ ಇದೇ ನಿಯಮವೇನಲ್ಲ. ಅಪವಾದಗಳು ಇದ್ದೇ ಇರುತ್ತವೆ. ಅನೇಕ ದೊಡ್ಡ ರಾಷ್ಟ್ರಗಳು ಕೋವಿಡ್ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿವೆ. ಆದರೆ ಸಾಕಷ್ಟು ಚಿಕ್ಕ ರಾಷ್ಟ್ರಗಳು ಇದನ್ನು ನಿಯಂತ್ರಿಸುವಲ್ಲಿ ಸೋತಿವೆ. ಇದಕ್ಕೆ ಅಲ್ಲಿನ ರಾಜಕೀಯ ಪರಿಸ್ಥಿತಿ, ಜನರ ಮನಸ್ಥಿತಿ, ಆರೋಗ್ಯ ವ್ಯವಸ್ಥೆಯ ಪರಿಸ್ಥಿತಿ, ಆರ್ಥಿಕಸ್ಥಿತಿ ಮೊದಲಾದ ಹಲವಾರು ಅಂಶಗಳು ಕಾರಣವಾಗುತ್ತವೆ.
ಈ ವಿಷಯದಲ್ಲಿ ನನ್ನ ಗಮನವನ್ನು ಮೊದಲು ಸೆಳೆದಿದ್ದು ಭೂತಾನ್. ಈ ಪುಟ್ಟ ಹಿಮಾಲಯದ ರಾಷ್ಟ್ರ ಚಿಕ್ಕ ಮತ್ತು ಚೊಕ್ಕದಾಗಿದೆ. ಇಂಗಾಲದ ಡೈ ಆಕ್ಸೆ ಡ್ ಹೊರಸೂಸುವಿಕೆಯ ಪ್ರಮಾಣ ಋಣಾತ್ಮಕವಾಗಿರುವ ದೇಶ, ಸಂತಸ ಸೂಚ್ಯಂಕದಲ್ಲಿ ಮೇಲಿನ ಸ್ಥಾನದಲ್ಲಿ ಇರುವಂಥದ್ದು ಎಂಬೆಲ್ಲ ಖ್ಯಾತಿ ಪಡೆದಿದೆ. ಇನ್ನು ಕರೋನಾ ನಿಯಂತ್ರಣದಲ್ಲೂ ಆ ದೇಶ ಮುಂಚೂಣಿ ಯಲ್ಲಿದೆ. ಅಲ್ಲಿನ ಬಹುಪಾಲು ಜನರಿಗೆ ಲಸಿಕೆ ಹಾಕಲಾಗಿದೆ. ಸೋಂಕು ನಿಯಂತ್ರಣದಲ್ಲಿದೆ ಎಂಬಿತ್ಯಾದಿ ಸುದ್ದಿಗಳು ಆಗಾಗ ಬಿತ್ತರವಾಗುತ್ತಿರುತ್ತವೆ.
ಇಂಥದ್ದೇ ಮತ್ತೊಂದು ರಾಷ್ಟ್ರವೆಂದರೆ ಮಂಗೋಲಿಯಾ. ಅಚ್ಚರಿ ಎನಿಸಬಹುದು. ಬಹುಶಃ ಈ ದೇಶದ ಬಗ್ಗೆ ಯಾರೂ ಅಷ್ಟಾಗಿ ಕೇಳಿರಲಾರರು. ಅದು ಎಲ್ಲಿದೆ ಎಂಬುದೂ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಹಾಗಾದರೆ ಏನದರ ವಿಶೇಷ ಎಂದಿರಾ? ವಿಶೇಷ ಏನೆಂದರೆ ಆ ದೇಶ ಕೋವಿಡ್ ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿ. ಅದರಲ್ಲಿ ಸಾಧಿಸಿದ ಯಶಸ್ಸು ಒಂದು ಕಥೆಯಾದರೆ, ಆಯಶಸ್ಸನ್ನು ಉಳಿಸಿಕೊಳ್ಳಾಗದ್ದು ಇನ್ನೊಂದು ವ್ಯಥೆ. ಆದರೆ ಇವೆರಡೂ ಕಥೆಗಳ ನಡುವೆ ಮತ್ತೊಂದಷ್ಟು ಕುತೂಹಲಕರ ಸಂಗತಿಗಳು ಇರುವುದು ವಿಶೇಷ.
ನಾನು ಮಂಗೋಲಿಯಾದ ಕರೋನಾ ಕಥೆಯ ಬಗ್ಗೆ ಆಸ್ಥೆ ಬೆಳೆಸಿಕೊಳ್ಳಲು ಕಾರಣವಾಗಿದ್ದು ಒಂದು ವಿಡಿಯೊ. ಅದನ್ನು ಯಾರು ಮಾಡಿದ್ದೋ ಗೊತ್ತಿಲ್ಲ. ಆದರೆ ಅದನ್ನು ನೋಡುತ್ತಿದ್ದಂತೆ ಪರವಾಗಿಲ್ವೆ, ಆ ದೇಶದಲ್ಲಿ ಕರೋನಾ ನಿಯಂತ್ರಣ ಇಷ್ಟು ಪರಿಣಾಮ ಕಾರಿಯಾಗಿದೆಯೇ ಎಂದು ಅಚ್ಚರಿಯಾಯಿತು. ಅದರಲ್ಲಿರುವ ವಿಷಯಗಳು ಅಷ್ಟೊಂದು ಬೆರಗು ಹುಟ್ಟಿಸುವಂತಿದ್ದವು. ಹಾಗಾದರೆ ಅದರಲ್ಲಿ ಅಂಥಾದ್ದೇನಿತ್ತು ಎಂಬುದನ್ನು ವಿವರಿಸುವ ಮೊದಲು ಆ ದೇಶದ ಬಗ್ಗೆ ಒಂದಷ್ಟು ಸಂಕ್ಷಿಪ್ತ ಮಾಹಿತಿಅರಿತುಕೊಳ್ಳೋಣ. ನಾವು ಶಾಲಾದಿನಗಳಲ್ಲಿ ಇತಿಹಾಸ ಪಾಠಗಳಲ್ಲಿ ಮಂಗೋಲಿಯಾದ ಬಗ್ಗೆ ಓದುತ್ತಿದ್ದೆವು.
ಚೆಂಗೇಸ್‌ಖಾನ್ ಎಂಬ ರಾಜನ ಬಗ್ಗೆ ಕೇಳಿದ್ದೆವು. 13ನೇ ಶತಮಾನದಲ್ಲಿ ಆತ ಮಂಗೋಲ್ ಸಾಮ್ರಾಜ್ಯವನ್ನು ಸ್ಥಾಪಿಸಿದ. ಆಗಿನ ಕಾಲದಲ್ಲಿ ಅದು ಅತಿ ದೊಡ್ಡ ಸಾಮ್ರಾಜ್ಯವೆನಿಸಿತ್ತು. ಅಲ್ಲಿನ ಜನರು ಈಗಲೂ ತಮ್ಮನ್ನು ಚೆಮಗೇಸ್‌ಖಾನ್‌ನ ವಂಶಜರು ಎಂದೇಭಾವಿಸುತ್ತಾರೆ. ಸೋವಿಯತ್ ರಷ್ಯಾದ ವಿಭಜನೆಯ ಬಳಿಕ 199ರಲ್ಲಿ ಮಂಗೋಲಿಯಾದಲ್ಲೂ ಬದಲಾವಣೆಯ ಗಾಳಿ ಬೀಸಿ ಅದು ಬಹುಪಕ್ಷೀಯ ಪ್ರಭುತ್ವದತ್ತ ಹೊರಳಿತು.
ಇದು ಇತಿಹಾಸವಾಯಿತು. ಭುಗೋಲದ ಬಗ್ಗೆ ಹೇಳಬೇಕೆಂದರೆ, ಎಲ್ಲ ಕಡೆ ಭೂಮಿಯಿಂದ ಸುತ್ತುವರಿದ, ವಿಶ್ವದ ಅತಿ ದೊಡ್ಡ ದೇಶ. ಆದರೆ ಅತಿ ಕಡಿಮೆ ಜನಸಂಖ್ಯೆ. ಅಂದರೆ ಸುಮಾರು 35 ಲಕ್ಷ. ಬಹುತೇಕ ಬರಡು ಭೂಮಿ. ಮರುಭೂಮಿಯನ್ನುಹೊಂದಿರುವಂಥ ಅತಿ ಉಷ್ಣ, ಹಾಗೆಯೇ ಅತಿ ಚಳಿ ವಾತಾವರಣ. ಒಮ್ಮೊಮ್ಮೆ ತಾಪಮಾನ ಮೈನಸ್ 30ಡಿಗ್ರಿವರೆಗೂ ಇರುತ್ತದೆ. ಹೀಗಿರುವ ಮಂಗೋಲಿಯವು ಉತ್ತರಕ್ಕೆ ರಷ್ಯ ಹಾಗೂ ದಕ್ಷಿಣಕ್ಕೆ ಚೀನ ಗಡಿಯನ್ನು ಹೊಂದಿದೆ.
ಹೀಗಾಗಿ ಎರಡು ದೇಶಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದೆ. 1919ರ ಡಿಸೆಂಬರ್‌ನಲ್ಲಿ ಚೀನದ ವುಹಾನ್ ಪ್ರಾಂತದಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಾಗ ಅದರ ಮೊದಲ ಪರಿಣಾಮ ಮಂಗೋಲಿಯಾಗೆ ಆಗಬೇಕಿತ್ತು. ಆದರೆ ಆಗಲಿಲ್ಲ. ಏಕೆಂದರೆ ಆ ದೇಶ ಕೈಗೊಂಡ ತ್ವರಿತ ಮತ್ತು ದೃಢ ನಿರ್ಧಾರದಿಂದ. ಅದು ಚೀನದೊಂದಿಗಿನ ತನ್ನ ಗಡಿಯನ್ನು ಮುಚ್ಚಿಬಿಟ್ಟಿತು.
ಹೊರದೇಶಗಳಿಂದ ಯಾರೂ ಬರುವಂತಿರಲಿಲ್ಲ. ತನ್ನ ದೇಶದ ನಾಗರಿಕರಿಗೆ ಮಾಸ್ಕ್ ಕಡ್ಡಾಯಗೊಳಿಸಿತು. ಶಾಲೆಗಳನ್ನು ಬಂದು ಮಾಡಿತು. ಎಲ್ಲ ಸಭೆ ಸಮಾರಂಭಗಳು, ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿತು. ಹೊಸ ವರ್ಷಾಚರಣೆಗೂ ಅವಕಾಶನೀಡಲಿಲ್ಲ. ಈ ಕಠಿಣ ಲಾಕ್‌ಡೌನ್‌ನಿಂದಾಗಿ ಆ ದೇಶದಲ್ಲಿ ಸುಮಾರು ಒಂಬತ್ತು ತಿಂಗಳವರೆಗೆ ಒಂದೂ ಕರೋನಾ ಕೇಸ್‌ಗಳು ವರದಿಯಾಗಿರಲಿಲ್ಲ.
ಪ್ರಕರಣಗಳೇ ಇಲ್ಲ ಎಂದ ಮೇಲೆ ಸಾವಿನ ಪ್ರಶ್ನೆಯು ಇಲ್ಲಬಿಡಿ. ಹಾಗಾದರೆ ಅಷ್ಟುಕಟ್ಟುನಿಟ್ಟಿನ ಕ್ರಮಗಳೇ ಕರೋನಾವನ್ನು ದೂರ ಇಡಲು ಕಾರಣವಾಯಿತೇ ಎಂಬ ಪ್ರಶ್ನೆ ಸಹಜ. ಇದ್ದಿತು. ಆದರೆ ಶತಶತಮಾನಗಳಿಂದ ಅಲ್ಲಿನ ಜನರು ಅಳವಡಿಸಿ ಕೊಂಡಿರುವ ಜೀವನಶೈಲಿಯೂ ಕಾರಣ ಎಂದು ಹೇಳಲಾಗುತ್ತದೆ. ಅಲ್ಲಿ ತುಂಬ ವಿಪರೀತ ಹವಾಮಾನ ಇರುವುದರಿಂದ ಅವರು ಅದರೊಂದಿಗೆ ಬದುಕುವುದನ್ನು ಕಲಿತಿದ್ದಾರೆ.
ಪ್ರಕೃತಿಯ ಮಧ್ಯೆ ಜೀವಿಸುತ್ತಾರೆ. ಅಲ್ಲಿನ ಜಾನುವಾರುಗಳು ಆಗಾಗ ರೋಗಕ್ಕೆ ತುತ್ತಾಗುವುದರಿಂದ ಅದರಿಂದ ತಾವು ಬಚಾ ವಾಗುವುದನ್ನು ಕಲಿತುಕೊಂಡಿದ್ದಾರೆ. ಪೌಷ್ಟಿಕ ಆಹಾರವನ್ನು ಸೇವಿಸುತ್ತಾರೆ. ಕಷ್ಟ ಸಹಿಷ್ಣುಗಳು. ಫ್ಲೂನಂಥರೋಗಗಳು ಸಾಮಾನ್ಯವಾಗಿರುವುದರಿಂದ ಅದಕ್ಕೆ ಒಗ್ಗಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಎನ್ನುತ್ತಾರೆ.
ಇಂಟರ್‌ವಲ್…ಇಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ನಮ್ಮಲ್ಲಿ ಒಂದೂ ಕರೋನಾ ಕೇಸ್ ಇಲ್ಲ, ನಾವು ಚೆಂಗೇಸ್ ಖಾನ್ ವಂಶಜರು ಎಂಬ ಬಡಾಯಿ ಇಲ್ಲಿಂದ ಮುಂದೆ ಸಾಗಲಿಲ್ಲ. ಬಹುತೇಕ ಒಂದು ವರ್ಷದವರೆಗೆ ಕರೋನಾಮುಕ್ತ ಎಂಬ ಅತಿಯಾದಆತ್ಮವಿಶ್ವಾಸದಿಂದಲೋ ಏನೊ ಅಲ್ಲಿ ಎಲ್ಲವನ್ನು ಮುಕ್ತಗೊಳಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವನ್ನು ರದ್ದುಪಡಿಸಲಾಯಿತು.
ಮನರಂಜನೆ, ಆಟೋಟ ಚಟುವಟಿಕೆಗಳನ್ನು ಆರಂಭಿಸಲಾಯಿತು. ಶಾಲೆಗಳನ್ನು ಮತ್ತೆ ತೆರೆಯಲಾಯಿತು. ಹಾಗೆಯೇ ವ್ಯಾಪಾರ, ವಹಿವಾಟು. ಯಾವಾಗ ಹೊರದೇಶದಿಂದ ಬರುವ ತನ್ನ ನಾಗರಿಕರಿಗೆ ದೇಶ ಪ್ರವೇಶಿಸಲು ಅವಕಾಶ ನೀಡಲಾಯಿತೊ ಆಗ ಸಮಸ್ಯೆ ಶುರುವಾಯಿತು. ಮಂಗೋಲಿಯದಲ್ಲೂ ಕರೋನಾ ಪ್ರಕರಣಗಳು ಕಾಣಿಸಿಕೊಂಡವು.
ನೋಡನೋಡುತ್ತಿದ್ದಂತೆ ಹೆಚ್ಚಾಗತೊಡಗಿದವು. ಇಂದಿನ ಲೆಕ್ಕದಲ್ಲಿ ಅಲ್ಲಿ ಸುಮಾರು 52 ಸಾವಿರ ಕರೋನಾ ಪ್ರಕರಣಗಳಿವೆ. 250 ಮಂದಿ ಮೃತಪಟ್ಟಿದ್ದಾರೆ. ಆದರೆ 45 ಸಾವಿರದಷ್ಟು ಜನರು ಗುಣಮುಖರಾಗಿದಗ್ದಾರೆ. ಹೀಗಾಗಿ ಸಕ್ರಿಯ ಪ್ರಕರಣಗಳು 10 ಸಾವಿರದ ಆಸುಪಾಸಿನಲ್ಲಿದೆ. ಅಲ್ಲಿನ ರಾಜಕೀಯ ಸ್ಥಿತ್ಯಂತರಗಳು ಇದಕ್ಕೆ ಕಾರಣವಾಗಿರಬಹುದು. ಏಕೆಂದರೆ ಕೆಲವು ತಿಂಗಳ ಹಿಂದೆ ಆ ದೇಶದಲ್ಲಿ ನಡೆದ ಪ್ರಕರಣವೊಂದು ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ರಾಜಧಾನಿ ಉಲಾನ್ ಬಾಟೋರ್‌ನ ಆಸ್ಪತ್ರೆ ಯೊಂದಕ್ಕೆ ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಯನ್ನು ಉಟ್ಟಬಟ್ಟೆಯಲ್ಲೇ ಆಸ್ಪತ್ರೆಯಿಂದ ಹೊರಹಾಕಲಾದ ವಿಡಿಯೊವೈರಲ್ ಆಯಿತು. ಆಕೆ ಕರೋನಾ ಪಾಸಿಟಿವ್ ಆಗಿದ್ದರಿಂದ ಅಲ್ಲಿನ ಅಧಿಕಾರಿಗಳು ಆಕೆಯನ್ನು ಹೊರಹಾಕಿದ್ದರು ಎಂದು ಹೇಳಲಾಗಿತ್ತು.
ಇದು ಭಾರಿ ಪ್ರತಿಭಟನೆಗೆ ಕಾರಣವಾಯಿತು. ಇದು ಎಲ್ಲಿಯವರೆಗೆ ಹೋಯಿತು ಎಂದರೆ ಆ ದೇಶದ ಪ್ರಧಾನಿ ರಾಜೀನಾಮೆನೀಡಬೇಕಾಯಿತು. ಇದು ರಾಜಕೀಯ ಅಸ್ಥಿರತೆಗೂ ಕಾರಣವಾಯಿತು. ಹೊಸ ಪ್ರಧಾನಿ ಬಂದ ಬಳಿಕ ಹಳೆಯ ಸರಕಾರದ ಅವಧಿಯಲ್ಲಿ ಕರೋನಾ ನಿಯಂತ್ರಣ ವಿಚಾರವಾಗಿ ಪ್ರಮುಖ ಹುದ್ದೆಯಲ್ಲಿದ್ದ ವರನ್ನು ಬದಲಾಯಿಸಲಾಯಿತು. ಅಲ್ಲಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿತು ಎನ್ನಲಾಗುತ್ತಿದೆ. ಅಂತೂ ಇಂತೂ ಯಾವುದೇ ಪ್ರಕರಣಗಳಿಲ್ಲದ ಮಂಗೋಲಿಯಾದಲ್ಲಿ ಒಂದಷ್ಟು ಅತಿಯಾದ ಆತ್ಮವಿಶ್ವಾಸ, ಒಂದಷ್ಟು ನಿರ್ಲಕ್ಷ್ಯ ಹಾಗೂ ರಾಜಕೀಯ ಅಸ್ಥಿರತೆಯು ದುಬಾರಿಯಾಗಿ ಪರಿಣಮಿಸಿತು.  ಅಲ್ಲಿ ಆರೋಗ್ಯ ಸೇವೆಯಲ್ಲಿ ಬದಲಾವಣೆ ತರುವ ಅಗತ್ಯ ಇರಲಿಲ್ಲ ಎಂಬ ಟೀಕೆಗಳು ಕೇಳಿಬಂದವು.
ಕರೋನಾಮುಕ್ತವಾಗಿ ಉಳಿಯುವ ಮಂಗೋಲಿಯಾದ ಗೋಲು (ಅಂದರೆ ಗುರಿ) ಒಂದಷ್ಟು ಗೋಜಲಿನ ಪರಿಣಾಮವಾಗಿ ಗೋಳಾಗಿ ಪರಿಣಮಿಸಿದ್ದೇನೊ ನಿಜ. ಆದರೆ ಅದು ಇದರಿಂದ ಧೃತಿಗೆಡದೆ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಎದ್ದುಬರಲು ಪ್ರಯತ್ನಿಸು ತ್ತಿದೆ. ಇದಕ್ಕಾಗಿ ಅದು ಬೇರೆಯದೇ ಆದ ತಂತ್ರ ಅನುಸರಿಸುತ್ತಿದೆ. ಏನದು ತಂತ್ರ ಎಂಬುದು ಮೂರನೇ ಕಥೆ. ಕೋವಿಡ್ ಪರಿಸ್ಥಿತಿ ಜಗತ್ತಿನಾದ್ಯಂತ ಉಲ್ಬಣಗೊಂಡಂತೆ ಎಲ್ಲೆಡೆ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಬೇಡಿಕೆಗೆ ಅನುಗುಣವಾಗಿ ಅದರ ಉತ್ಪಾದನೆ ಆಗುತ್ತಿಲ್ಲವಾದ್ದರಿಂದ ಎಲ್ಲರಿಗೂ ಸಮಸ್ಯೆಯಾಗಿದೆ. ಶ್ರೀಮಂತ ದೇಶಗಳು ಹೇಗೋ ಬಚಾವಾಗುತ್ತವೆ. ಆದರೆ ಬಡರಾಷ್ಟ್ರಗಳ ಗತಿ ಏನು ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಆದರೆ ಮಂಗೋಲಿಯಾ ದೇಶವು ಈ ಸಮಸ್ಯೆಯನ್ನು ಜಾಣ್ಮೆಯಿಂದ ನಿಭಾ ಯಿಸಿದೆ. ಹೇಗೆಂದಿರಾ? ಇಲ್ಲಿದೆ ಆ ರೋಚಕ ಕಥೆ. ಮಂಗೋಲಿಯ ದೇಶವು ಅತ್ತ ರಷ್ಯ ಹಾಗೂ ಇತ್ತ ಚೀನದೊಂದಿಗೆ ಗಡಿ ಹೊಂದಿರುವುದನ್ನು ಆಗಲೇ ಪ್ರಸ್ತಾಪಿಸಿದ್ದೇನೆ.
ಆದರೆ ಎರಡೂ ದೇಶಗಳು ಪ್ರಜಾಪ್ರಭುತ್ವಕ್ಕೆ ಸ್ವಲ್ಪ ದೂರವೇ. ಮಂಗೋಲಿಯಾಗೆ ಇದು ಒಂದು ರೀತಿಯಲ್ಲಿ ಇಕ್ಕಟ್ಟು. ಏಕೆಂದರೆ ಎರಡೂ ದೇಶಗಳು ವ್ಯಾಪಾರಕ್ಕೆ ಬೇಕೇ ಬೇಕು. ಆದರೆ ಯಾವುದಾದರೊಂದು ದೇಶದ ತಾಳಕ್ಕೆ ತಕ್ಕಂತೆ ಕುಣಿಯುವುದು ಕಷ್ಟವೇ. ಹೀಗಾಗಿ ರಗಳೆಯೇ ಬೇಡ. ಇಬ್ಬರ ಜತೆಗೂ ಸ್ನೇಹದಿಂದ ಇದ್ದುಬಿಟ್ಟರೆ ಈ ಯಾವ ಸಮಸ್ಯೆಯೂ ಇಲ್ಲ. ಈ ನೀತಿ ಮಂಗೋಲಿ ಯಾಗೆ ಲಾಭಕರವಾಗಿದೆ. ಈ ಕಡೆ ರಷ್ಯದಿಂದ ಲಸಿಕೆ ಸಿಗುತ್ತದೆ.
ಆ ಕಡೆ ಚೀನದ ಲಸಿಕೆಯೂ ದೊರೆತಿದೆ. ಇದರ ಜತೆಗೆ ಅಂತಾರಾಷ್ಟ್ರೀಯ ಸಂಸ್ಥೆಗಳಿಂದಲೂ ಲಸಿಕೆ ಲಭ್ಯವಾಗುತ್ತಿದೆ. ತ್ರಿವಿಧ ಲಾಭ. ಇದೇ ಕಾರಣದಿಂದಾಗಿ ಮಂಗೋಲಿಯಾದಲ್ಲಿ ಈಗಾಗಲೇ ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಗೆ ಲಸಿಕೆ ನೀಡಲಾಗಿದೆ. ಕರೋನಾ ನಿಯಂತ್ರಣಕ್ಕೆ ಲಸಿಕೆಯೇ ಮದ್ದು ಎಂಬ ಈಗಿನ ಪರಿಸ್ಥಿತಿಯಲ್ಲಿ ಇದು ಒಳ್ಳೆಯ ಬೆಳವಣಿಗೆ. ಹೀಗೆ ಕರೋನಾ ನಿಭಾ ಯಿಸುವ ವಿಷಯದಲ್ಲಿ ಮಂಗೋಲಿಯಾ ಅನುಸರಿಸಿದ ನಡೆ ನಮಗೆಲ್ಲ ಅನೇಕ ರೀತಿಯಲ್ಲಿ ಪಾಠ ಆಗಬಲ್ಲದು. ಕರೋನಾಉಗಮಸ್ಥಾನವಾದ ಚೀನದ ಪಕ್ಕದಲ್ಲೇ ಇದ್ದು ಸುದೀರ್ಘ ಗಡಿ ಹೊಂದಿದ್ದರೂ ಸುಮಾರು 9ತಿಂಗಳ ಕಾಲ ಕೋವಿಡ್ ಅನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿತು.
ಗಡಿ ಬಂದ್ ಮಾಡಿ ದೇಶದಲ್ಲಿ ಕಠಿಣ ನಿಯಮಗಳ ಜಾರಿಗೆ ತಂದಿತು. ಆದರೆ ಕರೋನಾ ಯಶಸ್ವಿ ನಿರ್ವಹಣೆಯ ಬಳಿಕ ಒಂದುಹಂತದಲ್ಲಿ ಅತಿಯಾದ ಆತ್ಮವಿಶ್ವಾಸ, ಅಥವಾ ಸಡಿಲಿಕೆಯಿಂದ ಇದರಿಂದ ಕರೋನಾಮುಕ್ತ ರಾಷ್ಟ್ರ ಎಂಬ ಅದರ ಹೆಗ್ಗಳಿಕೆ ಮುಕ್ಕಾಯಿತು. ಮತ್ತೊಂದು ಪ್ರಮುಖ ಘಟನೆ ಎಂದರೆ ಸೋಂಕಿತ ಮಹಿಳೆಯನ್ನು ಆಸ್ಪತ್ರೆಯಿಂದ ಹೊರಕಳಿಸಿದ್ದು ದೊಡ್ಡ ಪ್ರತಿಭಟನೆಗೆ ಕಾರಣವಾಯಿತು. ಕೊನೆಗೆ ಪ್ರಧಾನಿಯೇ ರಾಜೀನಾಮೆ ನೀಡಬೇಕಾಯಿತು. ಆದರೆ ಪ್ರಧಾನಿ ಬದಲಾವಣೆಯ ಬಳಿಕ ಇಡೀ ವ್ಯವಸ್ಥೆ ಅಲುಗಾಡಿ ಅದು ಕರೋನಾ ಸೋಂಕು ಉಲ್ಬಣಕ್ಕೆ ಕಾರಣವಾಯಿತು.
ನಮ್ಮಲ್ಲೂ ಕೂಡ ಕರೋನಾ ಸ್ಥಿತಿಯ ನಿರ್ವಹಣೆ ಕುರಿತು ಪ್ರಧಾನಿ, ಮುಖ್ಯಮಂತ್ರಿ ರಾಜಿನಾಮೆ ನೀಡಬೇಕು ಎಂಬ ಕೂಗು ಆಗಾಗ ಕೇಳಿಬರುತ್ತದೆ. ಟೀಕೆ ವ್ಯಕ್ತವಾಗುತ್ತದೆ. ಆದರೆ ರಾಜೀನಾಮೆ ಕೊಟ್ಟರೆ ಸಮಸ್ಯೆ ಬಗೆಹರಿಯುವುದೇ ಎಂದು ಮರುಪ್ರಶ್ನೆ ಹಾಕುವ ರಾಜಕಾರಣಿಗಳ ಸಂಖ್ಯೆಯೇ ನಮ್ಮ ದೇಶದಲ್ಲಿ ಹೆಚ್ಚು. ರಾಜೀನಾಮೆಯೇ ಸಮಸ್ಯೆಗೆ ಪರಿಹಾರವಲ್ಲ ಎಂಬುದುಮಂಗೋಲಿಯಾ ಪ್ರಕರಣದಲ್ಲೂ ಸಾಬೀತಾಗಿದೆ.
ನಮ್ಮ ಜನರೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ಕೊನೆಯದಾಗಿ ಲಸಿಕೆ ಪಡೆಯುವಲ್ಲಿ ಆ ದೇಶ ಅನುಸರಿಸಿದ ಜಾಣ ರಾಜತಾಂತ್ರಿಕ ನಡೆಯೂ ಶ್ಲಾಘನೀಯ.
ನಾಡಿಶಾಸ್ತ್ರವಿಶ್ವಾಸದಿಂದ ಕಾರ್ಯನಿರ್ವಹಣೆ ಮಾಡುವುದು ಸೂಕ್ತಅತಿಯಾದ ವಿಶ್ವಾಸದಿಂದ ಆದೀತು ಪರಿಣಾಮ ವ್ಯತಿರಿಕ್ತತಪ್ಪು ಮಾಡುವುದು ಮಾನವ ಸಹಜಗುಣತಪ್ಪು ತಿದ್ದಿ ನಡೆಯುವವನೇ ನಿಜವಾದ ಜಾಣ