ಇಸ್ರೇಲಿನ ಯಹೂದಿಯರನ್ನು ಎಲ್ಲರೂ ಯಾಕೆ ದ್ವೇಷಿಸುತ್ತಾರೆ ?
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್‌
ಕೆಲವು ದಿನಗಳ ಹಿಂದೆ, ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಬೆಂಗಳೂರು, ಪುಣೆ, ಅಹಮದಾಬಾದ್‌, ಹೈದರಾಬಾದ, ಮುಂಬೈ, ದಿಲ್ಲಿ, ಚೆನ್ನೈ, ಕೋಲ್ಕೊತಾ ನಗರಗಳಲ್ಲಿ ವಾಸಿಸುವವರಲ್ಲಿ ಬೋರು ( – ವಿಚಿತ್ರ ಬೇಸರ) ಜಾಸ್ತಿಯಂತೆ. ಇದೇ ರೀತಿ, ಲಂಡನ್ ಮತ್ತು ನ್ಯೂ ಯಾರ್ಕ್ ನಗರವಾಸಿಗಳು.
ಅವರು ಇನ್ನೂ ಹೆಚ್ಚಿನ ಬೋರನ್ನು ಅನುಭವಿಸುತ್ತಾರಂತೆ. ಯಾರು ಹೆಚ್ಚು ಹೆಚ್ಚು ಯೋಚಿಸುತ್ತಾರೋ, ಅವರಲ್ಲಿ ಹೆಚ್ಚು ಹೆಚ್ಚು ಬೋರಂತೆ ! ಇದು ಆ ವರದಿಯ ಪ್ರಮುಖಾಂಶಗಳು. ಅದೇ ಹಳ್ಳಿಗಳಲ್ಲಿ ವಾಸಿಸುವವರಲ್ಲಿ ಈ ಬೋರುತನ ಕಮ್ಮಿಯಂತೆ. ಇದು ನಿಜವೂ ಹೌದು. ದಿನಾ ಮೈಮುರಿದು ಕೆಲಸ ಮಾಡುವ ಹಳ್ಳಿಗರಾರೂ, ’ಯಾಕೋ ಇಂದು ಬಹಳ ಬೋರಾಗ್ತಿದೆ ’ ಎಂದು ಹೇಳುವುದಿಲ್ಲ. ನಮ್ಮ ತಂದೆ-ತಾಯಿ ಅವರ ಜೀವನದಲ್ಲಿ ಒಮ್ಮೆಯೂ ಈ ಪದ ಬಳಸಿದ್ದನ್ನು ನಾವು ಕೇಳಿಲ್ಲ. ಈಗಲೂ ಹಳ್ಳಿ ಗಳಲ್ಲಿ ಬೋರಾಗ್ತಿದೆ ಎಂದು ಹೇಳುವವರನ್ನು ನೋಡಲು ಸಿಗುವುದಿಲ್ಲ.
ಅವರಿಗೆ ಏನೂ ಇಲ್ಲ ಅಂದ್ರೂ ಮಾಡಲು ಏನಾದರೂ ಕೆಲಸ ಇದ್ದೇ ಇರುತ್ತದೆ. ಹೀಗಾಗಿ ಅವರಿಗೆ ಬೋರಾಗುವುದಿಲ್ಲ. ಅಷ್ಟೇ ಅಲ್ಲ, ಅವರಿಗೆ ಯಾವತ್ತೂ, ’ಯಾಕೋ ಇಂದು ವಿಪರೀತ ಬೋರು’ ಎಂದು ಗೊಣಗುವ ಪರಿಸ್ಥಿತಿಯೇ ಬರುವುದಿಲ್ಲ. ಈ ವಿಷಯದ ಬಗ್ಗೆ ಅಧ್ಯಯನ ಮಾಡಿದವರು ಕೊಟ್ಟ ವಿವರಣೆ ಅಂದ್ರೆ, ಹೆಚ್ಚು ಯೋಚಿಸುವವರು, ಚಿಂತಿಸುವವರು, ಈ ಬೋರು ತನವನ್ನು ಅನುಭವಿಸುತ್ತಾರೆ. ಹೆಚ್ಚು ಯೋಚಿಸುವವರು ಸಮಯವನ್ನು ನಿನ್ನೆ, ಈಗ ಮತ್ತು ನಾಳೆ ಎಂದು ಹೋಲಿಸುತ್ತಾರೆ, ತಾಳೆ ಹಾಕುತ್ತಾರೆ. ಹೆಚ್ಚು ಯೋಚಿಸುವವರು ಹೆಚ್ಚು ಬಯಸುತ್ತಾರೆ, ಆಶಿಸುತ್ತಾರೆ, ನಿರೀಕ್ಷಿಸುತ್ತಾರೆ, ಪ್ರತಿಯೊಂದರ ಅರ್ಥ ಹುಡುಕುತ್ತಾರೆ.
ಜೀವನವನ್ನು ನಮ್ಮ ಪಾಡಿಗೆ ಬದುಕಬೇಕು. ಅದರ ಬದಲು, ಜೀವನದ ಅರ್ಥವೇನು ಎಂದು ಯೋಚಿಸಿದರೆ, ನಿಧಾನವಾಗಿಬೋರು ಕವಿಯಲಾರಂಭಿಸುತ್ತದೆ. ಯಾವುದಕ್ಕೂ ವಿಶೇಷ ಅರ್ಥವಿರುವುದಿಲ್ಲ. ಅದರ ಅರ್ಥವೇನು ಎಂದು ಯೋಚಿಸುವವರಿಗೆ ಅರ್ಥ ಸಿಗುವುದಿಲ್ಲ. ಅರ್ಥವಿದ್ದರೆ ತಾನೇ ಅದು ಸಿಗಲು? ಈ ಅರ್ಥಹೀನತೆ ಕವಿದರೆ ಬೋರು ತನ್ನಷ್ಟಕ್ಕೆ ಆವರಿಸಲಾ ರಂಭಿಸುತ್ತದೆ.
ಪಶು, ಪಕ್ಷಿ, ಮರ, ಗಿಡ, ಕಲ್ಲು, ನದಿಗಳಿಗೆ ಎಂದೂ ಬೋರಾಗುವುದಿಲ್ಲ. ಮರ-ಗಿಡಗಳು, ಪಶು-ಪಕ್ಷಿಗಳು ಈ ಜೀವನದ ಅರ್ಥ ವೇನು ಎಂದು ಯೋಚಿಸುವುದಿಲ್ಲ. ಹೀಗಾಗಿ ಈ ಜೀವನ ಅರ್ಥಹೀನ ಎಂದು ಅವುಗಳಿಗೆ ಅನಿಸಿಲ್ಲ. ಜೀವನದ ಉದ್ದೇಶ ವೇನು ಎಂಬ ಪ್ರಶ್ನೆ ಪ್ರಾಣಿಗಳಿಗೆ ಎಂದೂ ಕಾಡುವುದಿಲ್ಲ. ಬೋರು ಎಂದು ಗೊಣಗುವವನು ಮನುಷ್ಯ ಮಾತ್ರ! ಅದರಲ್ಲೂ ಹೆಚ್ಚಾಗಿ ನಗರಗಳಲ್ಲಿರುವವರಿಗೆ ಮಾತ್ರ!
ಬೋರುತನಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಓಶೋ ಸಹ ಹೇಳಿದ್ದಾರೆ. ‘ಬೋರು ಎನ್ನುವುದು ನಗರವಾಸಿಗಳ ಕ್ಷಣಿಕಮಾನಸಿಕ ಕಾಯಿಲೆ’ ಎಂದು ಅವರೂ ಕರೆದಿದ್ದಾರೆ. ಕೈತುಂಬಾ ಕೆಲಸವಿದ್ದವನು ಹಾಗೆ ಹೇಳಲು ಸಾಧ್ಯವೇ ಇಲ್ಲ. ಹೀಗಾಗಿ ಇದುಹೆಚ್ಚಾಗಿ ಆಲಸ್ಯ ಮನದ ಪ್ರತೀಕ ಎಂದೂ ಓಶೋ ಹೇಳಿದ್ದಾರೆ  -ಈ ಬೋರುತನಕ್ಕೆ ಪರಿಹಾರ ಅಂದರೆ ಕೆಲಸ, ನಗು, ಹಾಸ್ಯ.ಒಂದು ಸಾವಿರ ವರ್ಷಗಳ ಹಿಂದೆ, ಯಾವುದೇ ಕುಗಳಿರಲಿಲ್ಲ. ಅವರಿಗೆ ಅದರ ಅಗತ್ಯವಿರಲಿಲ್ಲ.
ಅವರು ಸಹ ಬೋರುತನವನ್ನು ಅನುಭವಿಸುತ್ತಿರಲಿಲ್ಲ. ಕಾರಣ ಅವರು ಇಡೀ ಜಗತ್ತು ತನ್ನ ಮೇಲೆ ನಿಂತಿದೆ ಎಂದು ಯೋಚಿಸಿರ ಲಿಲ್ಲ. ನಾಳಿನ ಚಿಂತೆ ಇರಲಿಲ್ಲ. ಜೀವನದ ಅರ್ಥವೇನು ಎಂದು ಎಂದೂ ಗಾಢವಾಗಿ ಯೋಚಿಸಲಿಲ್ಲ. ನಾನು ಇಸ್ರೇಲಿಗೆ ಹೋದಾಗ ನನಗೊಬ್ಬರು ಹೇಳಿದ್ದರು. ಜಗತ್ತಿನಲ್ಲಿ ಅತಿ ಹೆಚ್ಚು ಜೋಕುಗಳಿರುವುದು ಇಸ್ರೇಲಿನಲ್ಲಂತೆ. ಯಹೂದಿಯರ ಬಗ್ಗೆ ಇರುವಷ್ಟು ಜೋಕು ಬೇರೆ ಯಾರ ಬಗ್ಗೆ ಸಹ ಇಲ್ಲವಂತೆ. ಒಂದು ಕಾಲಕ್ಕೆ ಈ ವಿಷಯದಲ್ಲಿ ನಮ್ಮ ಸರ್ದಾರಜೀಗಳು ಯಹೂದಿ ಯರನ್ನು ಹಿಂದಕ್ಕೆ ಹಾಕಿದ್ದರು.
ಆದರೆ ತಮ್ಮ ಮೇಲೆ ಯಾರೂ ಜೋಕು ಕಟ್ಟಿ ನಗಬಾರದು ಎಂದು ಅವರೂ ಕೋರ್ಟಿಗೆ ಹೋಗಿ, ತಮ್ಮ ಪರವಾಗಿ ತೀರ್ಪುಪಡೆದಂದಿನಿಂದ ಸರ್ದಾರ್ಜಿಗಳ ಬಗ್ಗೆಯೂ ಜೋಕು ಕಮ್ಮಿಯಾಗಿದೆ. ಕುತೂಹಲದ ಸಂಗತಿಯೆಂದರೆ, ಈ  ಗೆ ಬಹಳ ಬೇಗ ತುತ್ತಾಗುವವರೆಂದರೆ ಯಹೂದಿಗಳೇ ಅಂತೆ. ಕಾರಣ ಅವರು ಉಳಿದವರಿಗಿಂತ ಹೆಚ್ಚು ಯೋಚಿಸುತ್ತಾರಂತೆ. ನೊಬೆಲ್ ಪ್ರಶಸ್ತಿಗೆ ಪಾತ್ರರಾದವರ ಪಟ್ಟಿಯನ್ನೊಮ್ಮೆ ನೋಡಿ. ಅದರಲ್ಲಿ ಶೇ.ನಲವತ್ತರಷ್ಟು ಪುರಸ್ಕೃತರು ಯಹೂದಿಯರೇ. ಬುದ್ಧಿವಂತ ರನ್ನು ಜನ ಪ್ರೀತಿಸುತ್ತಾರೆ. ಆದರೆ ಅವರ ಬಗ್ಗೆ ಒಳಗೊಳಗೇ ಸಣ್ಣ ದ್ವೇಷವೂ ಇರುತ್ತದೆ.
ಹೀಗಾಗಿ ಯಹೂದಿಯರು ಹೆಚ್ಚು ದ್ವೇಷಕ್ಕೊಳಗಾದವರೂ ಹೌದು. ನಿಮಗೆ ಯಾರನ್ನು ಪೈಪೋಟಿಯಲ್ಲಿ ಗೆಲ್ಲಲು ಸಾಧ್ಯ ವಾಗುವುದಿಲ್ಲವೋ, ಅವರನ್ನು ದ್ವೇಷಿಸಲು ಆರಂಭಿಸುತ್ತೀರಿ. ಈ ಮಾತು ಯಹೂದಿಯರ ಪಾಲಿಗಂತೂ ಪರಮ ಸತ್ಯ.ಯಹೂದಿಗಳಿಗೆ ಬಹಳ ಬೇಗ ಬೋರಾಗುತ್ತದಂತೆ. ಅದಕ್ಕಾಗಿ ಅವರು ತಮ್ಮ ಬಗ್ಗೆಯೇ ಅಷ್ಟೊಂದು ಜೋಕುಗಳನ್ನು ಸೃಷ್ಟಿಸಿ ಕೊಂಡಿದ್ದಾರೆ.
ಸತತ ಬೋರುತನ ಅನುಭವಿಸುವವರು ಹುಚ್ಚರಾಗುತ್ತಾರೆ, ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಯಾರು ತಮ್ಮನ್ನು ನೋಡಿ ನಗುತ್ತಾರೋ, ಅಂಥವರು ಎಂಥಾ ಪರಿಸರದದರೂ ಬೋರು ಎನ್ನದೇ ಖುಷಿಯಿಂದ ಬದುಕುತ್ತಾರೆ. ಯಹೂದಿಯರ ಬದುಕಿನ ಯಶಸ್ಸಿನ ರಹಸ್ಯವೂ ಹೌದು. ಅವರು ಬೇರೆಯವರನ್ನು ನೋಡಿ ನಗುವುದಕ್ಕಿಂತ ತಮ್ಮನ್ನು ನೋಡಿ ನಗುತ್ತಾರೆ. ನಕ್ಕು ಹಗುರಾಗುತ್ತಾರೆ. ಬೋರುತನ ಹೋಗಿಸಲು ಸತತ ತುಡಿಯುತ್ತಾರೆ. ಹೀಗಾಗಿ ಯಹೂದಿಯರು ತಮ್ಮ ಬಗ್ಗೆಯೇ ಜೋಕು ಸಿಡಿಸುವುದರಲ್ಲಿ ನಿಸ್ಸೀಮರು. ಇಸ್ರೇಲ್ ಮತ್ತು ಪ್ಯಾಲಸ್ತೀನಿಯರ ಬಗ್ಗೆ ಕದನ ನಡೆಯುತ್ತಿದ್ದಾಗ, ಅಲ್ಲಿನ ಪತ್ರಿಕೆಯೊಂದರಲ್ಲಿ ಓದಿದ ಮೂರು ಪ್ರಸಂಗಗಳನ್ನೂ ನಿಮಗೆ ಹೇಳುತ್ತೇನೆ.
ಒಂದನೇ ಪ್ರಸಂಗ.ಒಬ್ಬ ಯಹೂದಿ – ಹತ್ತಾರು ಸಾವಿರ ಜನ ಸೇರಿದ ನಮ್ಮ ಪ್ರಾರ್ಥನಾ ಸಭೆಯಲ್ಲಿ, ಬೇರೆ ಧರ್ಮದಿಂದ ನಮ್ಮ ಧರ್ಮವನ್ನುಸೇರಿದ ವ್ಯಕ್ತಿಯನ್ನು ಗುರುತಿಸುವುದು ಹೇಗೆ? ಮತ್ತೊಬ್ಬ ಯಹೂದಿ – ಅದು ಸುಲಭ. ಯಾರು ಸಹಜವಾಗಿ (ನಾರ್ಮಲ್‌) ವರ್ತಿಸುತ್ತಾರೋ, ಅವರೇ ಬೇರೆ ಧರ್ಮದಿಂದ ಬಂದವರು.
ಎರಡನೇ ಪ್ರಸಂಗ.ಒಂದು ಮಧ್ಯಮ ವರ್ಗದ ಯಹೂದಿಯ ಮನೆ. ಮಗ ಶಾಲೆಯಿಂದ ಓಡಿ ಬರುತ್ತಾನೆ. ತಾಯಿ ಅವನನ್ನು ಅಪ್ಪಿಕೊಳ್ಳುತ್ತಾಳೆ. ಮಗ ಮತ್ತು ತಾಯಿ ಮಧ್ಯೆ ಮಾತುಕತೆ. ಮಗ – ಅಮ್ಮಾ, ನನ್ನನ್ನು ಶಾಲಾ ನಾಟಕೋತ್ಸವಕ್ಕೆ ಆಯ್ಕೆ ಮಾಡಿದ್ದಾರೆ.
ತಾಯಿ – ತುಂಬಾ ಸಂತೋಷದ ಸುದ್ದಿ ಹೇಳಿದೆ ಮಗು. ಅಂದ ಹಾಗೆ ನಿನ್ನದು ಯಾವ ಪಾತ್ರ?ಮಗ – ಮಧ್ಯಮ ವರ್ಗದ ಒಬ್ಬ ಯಹೂದಿ ಗಂಡನ ಪಾತ್ರ.ತಾಯಿ – ಅದ್ಸರಿ, ನಿನಗೆ ಹೇಳಲು ಡೈಲಾಗ್ ಇದೆ ತಾನೇ?
ಮೂರನೇ ಪ್ರಸಂಗ.
ಆಸ್ಪತ್ರೆಯಲ್ಲಿದ್ದ ಯಹೂದಿ ರೋಗಿಯೊಬ್ಬ ತನ್ನನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಿ ಎಂದು ವೈದ್ಯರನ್ನು ಗೋಗರೆದ. ಅವರಿಬ್ಬರ ನಡುವಿನ ಸಂಭಾಷಣೆ.ವೈದ್ಯ – ಇಲ್ಲಿ ನಿನಗೇನು ಸಮಸ್ಯೆ? ಊಟ-ತಿಂಡಿ ಸರಿ ಇಲ್ಲವೇ?ಯಹೂದಿ – ಊಟ, ತಿಂಡಿ ಚೆನ್ನಾಗಿದೆ ಡಾಕ್ಟ್ರೇ.. ಆದರೆ  ’ kvetchವೈದ್ಯ – ರೂಮು ಚೆನ್ನಾಗಿಲ್ವಾ ?ಯಹೂದಿ – ರೂಮು ಸಹ ಚೆನ್ನಾಗಿದೆ… ಆದರೆ  ’ kvetchವೈದ್ಯ – ಆಸ್ಪತ್ರೆ ಸಿಬ್ಬಂದಿ ಸರಿಯಿಲ್ಲವಾ?ಯಹೂದಿ – ಹಾಗೇನಿಲ್ಲ, ಅವರೆಲ್ಲ ಒಳ್ಳೆಯವರು.. ಆದರೆ  ’ kvetchವೈದ್ಯ – ಇಲ್ಲಿ ನಿನ್ನ ಕಾಯಿಲೆ ಗುಣ ಆಗುತ್ತದೆ ಎಂಬ ಭರವಸೆ ಇದೆಯಾ?ಯಹೂದಿ – ಇದೆ ಡಾಕ್ಟ್ರೇ… ಆದರೆ…ಆದರೆ..  ’ kvetchವೈದ್ಯ – ಹಾಗಾದರೆ ನಿನ್ನನ್ನು ಬೇರೆ ಆಸ್ಪೆತ್ರೆಗೆ ಯಾಕೆ ವರ್ಗಾಯಿಸಬೇಕು?ಯಹೂದಿ – ಯಾಕಂದ್ರೆ  ’ 
ಅಂದ ಹಾಗೆ, ಕ್ವೆಚ್ ಅಂದರೆ ಸದಾ ಗೊಣಗುವುದು, ಹುಳುಕು ಹುಡುಕುವುದು, ಎಲ್ಲದರಲ್ಲೂ ತಪ್ಪು ಕಂಡುಹಿಡಿಯುವುದು.
ಹೆಂಡತಿಗಿಂತ ಚೆನ್ನಾಗಿ ಬೇರೆ ಯಾರು?
ನಮ್ಮ ‘ಒಳ್ಳೆಯ ಗಂಡಂದಿರು’ ವಾಟ್ಸಾಪ್ ಗ್ರುಪ್‌ಗೆ ತಮ್ಮನ್ನು ಸೇರಿಸುವಂತೆ, ಪ್ರತಿದಿನ ಕನಿಷ್ಠ ಹತ್ತು ಮಂದಿಯಾದರೂ ಮನವಿ ಮಾಡುತ್ತಾರೆ. ಈಗಾಗಲೇ ಗ್ರೂಪ್‌ನ ಸದಸ್ಯರ ಮಿತಿ ಭರ್ತಿಯಾಗಿದೆ.
ಆದ್ಯತೆ ಮೇರೆಗೆ ಸೇರಿಸೋಣ ಅಂದ್ರೆ ಯಾರೂ ಈ ಗ್ರುಪ್ ನ್ನು ತೊರೆಯುತ್ತಿಲ್ಲ. ಎಲ್ಲರೂ ಒಳ್ಳೆಯ ಗಂಡಂದಿರೇ ಆಗಿರುವುದರಿಂದ ನಾನು ಅವರನ್ನು  ಮಾಡುವ ಪ್ರಸಂಗವೇ ಬಂದಿಲ್ಲ. ಇನ್ನು ಎರಡನೇ ಗುಂಪು ಮಾಡಲು ನನಗೆ ಮನಸ್ಸಿಲ್ಲ. ಜಗತ್ತಿನಲ್ಲಿ ಅಷ್ಟೆ ಒಳ್ಳೆಯ ಗಂಡಂದಿರು ಇದ್ದಿರಬಹುದಾ ಎಂಬ ಸಂದೇಹ ಬೇರೆ. ಅದಕ್ಕಿಂತ ಹೆಚ್ಚಾಗಿ, ಆ ಎರಡನೆಯ ಗುಂಪಿಗೆ, ‘ಎರಡನೇ ಒಳ್ಳೆಯ ಗಂಡಂದಿರು’ ಎಂಬ ಹೆಸರಿಡಬೇಕಾಗುತ್ತದೆ.
ಅದರಿಂದ ಸದಸ್ಯರಿಗೆ ಮುಜುಗರ ವಾಗಬಹುದು. ಕಾರಣ ‘ಎರಡನೆಯ ಗಂಡ’ ಎಂದು ಕರೆಯಿಸಿಕೊಳ್ಳುವುದರಂಥ ಹಿಂಸೆಇನ್ನೊಂದಿಲ್ಲ. ಇದು ಒಂದು ರೀತಿಯಲ್ಲಿ ಕೇಳಲು ಹಿತವೆನಿಸುವುದಿಲ್ಲ. ಹೀಗಾಗಿ ಬಹಳ ಬೇಡಿಕೆಯಿದ್ದರೂ, ಎರಡನೇ ಗ್ರುಪ್ ಓಪನ್ ಮಾಡಿಲ್ಲ. ಎರಡನೇ ಗ್ರುಪ್ ಕ್ರಿಯೇಟ್ ಮಾಡುವುದಾದರೆ, ಸದಸ್ಯರಾಗುವವರ ಸಂಖ್ಯೆಗೆ ನಿಯಂತ್ರಣ ಹೇರಲು ಮತ್ತು ಸ್ಕ್ರೀನಿಂಗ್ ಪ್ರಕ್ರಿಯೆ ಬಿಗಿಗೊಳಿಸಲು, ಅವರವರ ಪತ್ನಿಯರಿಂದ ಶಿಫಾರಸು ಪತ್ರ ನೀಡುವುದು ಅಗತ್ಯ ಎಂಬ ಹೊಸ ನಿಬಂಧನೆ ಹಾಕುವುದು ಅನಿವಾರ್ಯ ಆದೀತು.
ಅದೇನೇ ಇರಲಿ, ಈ ಗ್ರುಪಿನಲ್ಲಿ ಹೆಂಡತಿಯರಿಗೆ ಸಂಬಂಧಿಸಿದ ಸ್ವಾರಸ್ಯಕರ ಪ್ರಸಂಗಗಳು, ಜೋಕುಗಳು ಹರಿದಾಡುತ್ತವೆ. ಈಗ್ರುಪಿನ ಕೆಲವು ಸದಸ್ಯರು, ತಮಗೆ ಸಿಗುವ ಅತ್ಯಂತ ಸ್ವಾರಸ್ಯಕರ ಪ್ರಸಂಗಗಳನ್ನು ಹುಡುಕಿ, ಹುಡುಕಿ ಇಲ್ಲಿ ಹಂಚಿಕೊಳ್ಳುತ್ತಾರೆ.ಅಂಥ ಒಂದು ಪ್ರಸಂಗ.
ಬೆಳಗ್ಗೆ ಗಂಡ – ಹೆಂಡತಿ ವಾಕಿಂಗ್ ಹೊರಟಿದ್ದರು. ಹಠಾತ್ತನೆ ನಾಯಿಯೊಂದು ಅವರ ಕಡೆಗೆ ಓಡಿ ಬಂತು. ಇಬ್ಬರಿಗೂಗೊತ್ತಾಯಿತು ನಾಟಿ ತಮಗೆ ಕಚ್ಚುತ್ತದೆಂದು. ಆಗ ಗಂಡನಿಗೆ ಅನಿಸಿತು, ನಾಯಿ ಕಡಿಯುವುದಾದರೆ ತನಗೇ ಕಡಿಯಲಿ. ಹಾಗೆಯೋಚಿಸಿದವನೇ ತಟ್ಟನೆ ಹೆಂಡತಿಯನ್ನು ಅನಾಮತ್ತಾಗಿ ಎತ್ತಿಬಿಟ್ಟ.
ಗಂಡ ಹೆಂಡತಿಯನ್ನು ಎತ್ತಿದ ರಭಸಕ್ಕೆ ನಾಯಿಗೆ ಏನು ಮಾಡಬೇಕು ತಿಳಿಯಲಿಲ್ಲ. ಹಿಂದಕ್ಕೆ ಸರಿದು ಎರಡು ಸಲ ಬೊಗಳಿ, ಅಲ್ಲಿಂದ ಹೊರಟು ಹೋಯಿತು. ನಾಯಿ ಅಲ್ಲಿಂದ ಹೋಗಿದ್ದನ್ನು ಖಾತ್ರಿಪಡಿಸಿಕೊಂಡ ಗಂಡ, ಹೆಂಡತಿಯನ್ನು ನೆಲಕ್ಕೆ ಇಳಿಸಿದ. ತನ್ನ ‘ಸಾಹಸ’ಕ್ಕೆ ಹೆಂಡತಿ ಪ್ರಶಂಸಿಸಬಹುದು ಎಂದು ಆಶಿಸಿದ.
ಆದರೆ ಹೆಂಡತಿ, ‘ಏನ್ರೀ ಇದು? ನಾನೂ ನೋಡಿದ್ದೇನೆ, ನಾಯಿ ಅಟ್ಟಿಸಿಕೊಂಡು ಕಚ್ಚಲು ಬಂದಾಗ, ಜನ ಕಲ್ಲು, ಕೋಲು ಬಿಸಾಡುವುದನ್ನು ನೋಡಿದ್ದೇನೆ. ಆದರೆ ನನ್ನ ಜೀವನದಲ್ಲಿ ಮೊದಲ ಬಾರಿಗೆ, ಕಚ್ಚಲು ಬಂದ ನಾಯಿ ಕಡೆಗೆ ಹೆಂಡತಿಯನ್ನೇಬಿಸಾಡಲು ಮುಂದಾಗಿದ್ದನ್ನು ನೋಡಿಲ್ಲ. ಛೇ !’ ಈ ಘಟನೆಯ ನೀತಿ – ಗಂಡನ ಬಗ್ಗೆ ಹೆಂಡತಿಯಷ್ಟು ಚೆನ್ನಾಗಿ ಬೇರೆ ಯಾರೂ ತಪ್ಪು ತಿಳಿದುಕೊಳ್ಳಲು ಸಾಧ್ಯವೇ ಇಲ್ಲ.
ಮೊಬೈಲ್, ವೈಫೈ ಇಲ್ಲದ ಬದುಕು
ಎಚ್ಚರವಾಗಿದ್ದಾಗ ಎರಡು ತಾಸು ಮೊಬೈಲ್ ಬಿಟ್ಟಿದ್ದರೆ, ಕೆಲವರು ವಿಚಿತ್ರವಾಗಿ ಚಡಪಡಿಸಲಾರಂಭಿಸುತ್ತಾರೆ. ಒಂದು ತಾಸು ವಾಟ್ಸಾಪ್ ನೋಡದೇ ಇದ್ದರೆ, ಶುದ್ಧ ತಿಕ್ಕಲರಂತೆ ವರ್ತಿಸಲಾರಂಭಿಸುತ್ತೀರಿ. ಏನೋ ಜಗತ್ತು ಅಲಕಲ ಆದವರಂತೆ ಆಡುತ್ತಾರೆ.
ಕನಿಷ್ಠ ಗಂಟೆಗೊಮ್ಮೆಯಾದರೂ ಫೇಸ್ ಬುಕ್ ನೋಡಬೇಕು. ಎರಡು ಗಂಟೆಗೊಮ್ಮೆ ಟ್ವಿಟರ್ ನೋಡಬೇಕು. ಇಲ್ಲದಿದ್ದರೆ ಅವರುಮನುಷ್ಯರಾಗಿರುವುದಿಲ್ಲ. ಇನ್ನು ಕೆಲವರಿಗೆ ಮೊಬೈಲ್ ನೋಡದೇ ಮಾತಾಡಲು ಬರುವುದೇ ಇಲ್ಲ. ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ, ಆದರೆ ಮೊಬೈಲನ್ನು ನೋಡುತ್ತಿರುತ್ತಾರೆ. ಮೊಬೈಲ್ ಆಫ್ ಮಾಡಿ ಮಾತಾಡಿ ಅಂದ್ರೆ, ಅರ್ಧ ಗಂಟೆ ಹೇಗೋತಡೆದುಕೊಳ್ಳುತ್ತಾರೆ. ನಂತರ ವರ್ತನೆ ಅಡ್ಡಾದಿಡ್ಡಿ, ವಕ್ರ ವಕ್ರ.
ಇನ್ನು ಇಂಟರ್ನೆಟ್ ಅಥವಾ ವೈಫೈ ಇಲ್ಲದಿದ್ದರೆ ನೋಡಬೇಕು, ಥೇಟು ಅಂಡು ಸುಟ್ಟುಕೊಂಡ ಬೆಕ್ಕು! ಬೋರ್ಡ್ ರೂಮ್ ಮೀಟಿಂಗ್‌ಗಳಲ್ಲಿ ಪ್ರತಿ ಒಂದು ಗಂಟೆಗೆ ‘ಕಾಫಿ ಬ್ರೇಕ್’ ತೆಗೆದುಕೊಳ್ಳುವುದು ಸಾಮಾನ್ಯ. ಈಗ ಅಂಥ ವಿರಾಮಕ್ಕೆ ವಾಟ್ಸಾಪ್ ಬ್ರೇಕ್, ಮೊಬೈಲ್ ಬ್ರೇಕ್ ಎಂದು ಕರೆಯುತ್ತಾರೆ. ಸಿನಿಮಾ ಥಿಯೇಟರುಗಳಲ್ಲಿನ ಇಂಟರ್ವೆಲ್ ಸಹ ಈಗ ‘ವಾಟ್ಸಾಪ್ ವಿರಾಮ’ ವಾಗಿದೆ. ಕಾಫಿ – ತಿಂಡಿಗಿಂತ ಮೊದಲು ವಾಟ್ಸಾಪ್ ನೋಡಬೇಕು. ಇಲ್ಲದಿದ್ದರೆ ಏನೋ ಚಡಪಡಿಕೆ.
ಕೆಲವು ದಿನಗಳ ಹಿಂದೆ, ಸುಮಾರು ಒಂದು ತಾಸಿನ ಕಾಲ, ವಾಟ್ಸಾಪ್ ಸರ್ವರ್ ಡೌನ್ ಆಗಿತ್ತು. ಎಲ್ಲೂ ವಾಟ್ಸಾಪ್ ಸೇವೆಇರಲಿಲ್ಲ. ಆಗ ಕೆಲವರು ವರ್ತಿಸಿದ ರೀತಿ ನೋಡಿದರೆ ಆಶ್ಚರ್ಯ, ದಿಗಿಲು. ನಿದ್ದೆ ಮಾಡಿದಷ್ಟು ಹೊತ್ತು ಮಾತ್ರ ಇವೆಲ್ಲವುಗಳಿಂದಮುಕ್ತಿ. ಎಚ್ಚರವಾದಾಗ ಬೆಡ್ ಕಾಫಿ ಇಲ್ಲದಿದ್ದರೂ ಆದೀತು, ವಾಟ್ಸಾಪ್ ಇರಲೇಬೇಕು.
ಬೇಕಾದರೆ ನೋಡಿ, ಜೈಲಿನಲ್ಲಿ ವೈಫೈ ಸೌಲಭ್ಯವಿರುವ ಮೊಬೈಲ್‌ನ್ನು ಕೊಟ್ಟರೆ, ಜೀವಾವಧಿ ಶಿಕ್ಷೆಯನ್ನು ಇಪ್ಪತ್ತೈದು ವರ್ಷ ಗಳಿಗೆ ಏರಿಸಿದರೂ, ಯಾವ ಕೈದಿಯೂ ಬೇಸರಿಸಿಕೊಳ್ಳುವುದಿಲ್ಲ. ಸಿನಿಮಾ ನೋಡುತ್ತಾ, ಮೆಸೇಜ್ ಮಾಡುತ್ತಾ, ವಿಡಿಯೋ ಕಾಲ್ ಮಾಡುತ್ತಾ ಹಾಯಾಗಿ ಕಳೆದುಬಿಡುತ್ತಾರೆ. ಕೆಲವರು ಜೈಲಿನ ಹೊರಗಿದ್ದೂ ಕಳೆಯುವುದೂ ಹಾಗೆ ಅಲ್ಲವೇ? ಆಗ ಜೈಲು ವಾಸವನ್ನೇ ಎಲ್ಲರೂ ಇಷ್ಟಪಡಬಹುದು.
ಹಾಗೆ ನೋಡಿದರೆ, ವೈಫೈ ಇಲ್ಲದ, ಮೊಬೈಲ್ ಇಲ್ಲದ ಜೀವನವೇ ಅನೇಕರಿಗೆ ಜೈಲು ವಾಸ. ಅಷ್ಟರಮಟ್ಟಿಗೆ ಮನುಷ್ಯ ಮೊಬೈಲ್ ಒಳಗೆ ಬಂದಿ. ಮೊಬೈಲ್ ಇಲ್ಲದ, ವೈಫೈ ಇಲ್ಲದ, ಇಂಟರ್ನೆಟ್ ಇಲ್ಲದ ಮನೆಯೇ ಸೆರೆಮನೆ. ನಾನು ಕೆಲವು ದಿನಗಳ ಹಿಂದೆ, ಶಿರಸಿಯ ನನ್ನ ಸ್ನೇಹಿತನ ಮನೆಯಲ್ಲಿ ನಾಲ್ಕು ದಿನ ಇದ್ದೆ. ಆ ಸಂದರ್ಭದಲ್ಲಿ ಬೇಕೆಂದೇ ದಿನದ ಭಾಳ ಹೊತ್ತು ನನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದೆ.
ಅಲ್ಲದೇ ಅಲ್ಲಿ ನೆಟ್ ವರ್ಕ್ ಸಂಪರ್ಕವೂ ಸರಿಯಾಗಿರಲಿಲ್ಲ. ಹೀಗಾಗಿ ಫೇಸ್ ಬುಕ್‌ನಲ್ಲಿ ಯಾವ ಪೋಸ್ಟ್ ಮಾಡಿರಲಿಲ್ಲ.ಅಲ್ಲದೇ ಟ್ವೀಟ್ ಕೂಡ ಮಾಡಿರಲಿಲ್ಲ. ಅಷ್ಟಕ್ಕೇ ನನ್ನ ಆತ್ಮೀಯರೊಬ್ಬರು ಆಶ್ಚರ್ಯದಿಂದ, ‘ನೀವು ಮೂರ್ನಾಲ್ಕು ದಿನ ಫೇಸ್ ಬುಕ್ ನೋಡದೇ, ಟ್ವೀಟ್ ಮಾಡದೇ, ವಾಟ್ಸಾಪ್ ಮೆಸೇಜ್ ನೋಡದೇ ಹೇಗೆ ಹಾಯಾಗಿ ಇರುತ್ತೀರಿ?’ ಎಂದು ಕೇಳಿದ್ದರು. ಅದಕ್ಕೆ ನಾನು ‘ಅವು ಇಲ್ಲದಿರುವುದರಿಂದಲೇ ಹಾಯಾಗಿ ಇರಬಹುದು’ ಎಂದಿದ್ದೆ.
ಇತ್ತೀಚಿಗೆ ಇಂಥದೇ ಇನ್ನೊಂದು ಸಂದರ್ಭ ಒದಗಿ ಬಂದಿತು. ಒಂದು ದಿನ ಇವೆಲ್ಲವುಗಳಿಂದ ದೂರವಾಗಿದ್ದೆ. ಮರುದಿನ ಅದೇ ನನ್ನ ಆತ್ಮೀಯರಿಗೆ (ಅವರ ಸಮಾಧಾನಕ್ಕೆ) ಹೀಗೆ ಬರೆದೆ – ‘ಇಂದು ಇಡೀ ದಿನ ನದಿ, ಬೆಟ್ಟ, ಕಾಡು, ತೋಟದಲ್ಲಿ ಕಳೆದೆ. ಆದರೆ ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್‌ದಲ್ಲಿ ಹಾಕಲು ಒಂದೇ ಒಂದು ಫೋಟೋ ತೆಗೆಯಲಿಲ್ಲ. ಇಡೀ ದಿನ ಕಳೆದಿದ್ದು ಯಾಕೋ ವ್ಯರ್ಥ ಎನಿಸಿತು.’
ಇದನ್ನು ಓದಿದ ಅವರು, ‘ಈ ವಾಕ್ಯದ ಸಾಲುಗಳನ್ನು ಅಲ್ಲಲ್ಲಿ ತುಂಡರಿಸಿ ಬರೆದಿದ್ದರೆ, ಒಳ್ಳೆಯ ಕವನ ಆಗುತ್ತಿತ್ತಲ್ಲ ಸಾರ್’ ಎಂದರು.