ಸರ್ವರೋಗಕ್ಕೂ ಉದಾಸೀನವೇ ಮದ್ದು !
ದಾಸ್ ಕ್ಯಾಪಿಟಲ್‌
ಟಿ.ದೇವಿದಾಸ್, ಬರಹಗಾರ, ಶಿಕ್ಷಕ
ಹೀಗೊಂದು ದಾರಿದೀಪೋಕ್ತಿ: ನೀವು ಎಷ್ಟೇ ಒಳ್ಳೆಯವರಾಗಿರಿ, ಒಳ್ಳೆಯ ಕೆಲಸ ಮಾಡುತ್ತಿರಿ, ನಿಮಗೆ ಒಂದಿಷ್ಟು ಟೀಕಾಕಾರರು ಇದ್ದೇ ಇರುತ್ತಾರೆ. ನಿಮ್ಮದು ತಪ್ಪಿಲ್ಲದಿರಬಹುದು. ಆದರೂ ಟೀಕೆ ಮಾಡುವುದು ಅವರ ಸ್ವಭಾವ. ಇಂಥವರ ಬಗ್ಗೆ ಉದಾಸೀನಮಾಡುವುದನ್ನು ರೂಢಿಸಿಕೊಳ್ಳಬೇಕು. ಈ ಮಾತಿನಲ್ಲಿ ತಥ್ಯವಿಲ್ಲ ಎಂದು ಯಾರೂ ಹೇಳಲೂ ಸಾಧ್ಯವಿಲ್ಲ. ಇದನ್ನು ಓದಿದಾಗ ನನಗೆ ತಕ್ಷಣ ನೆನಪಾದದ್ದು ವಿಶ್ವವಾಣಿಯಲ್ಲಿ ಜಯವೀರರು ವರುಷದ ಹಿಂದೆ ಬರೆದಂಥ ಎರಡು ಲೇಖನಗಳು.
ಒಂದು:ಜನಿವಾರದ ಗಂಟನ್ನು ಸರಿಪಡಿಸಿಕೊಳ್ಳಿ ಅಂದ್ರೆ ಬ್ರಾಹ್ಮಣ್ಯವನ್ನು ಟೀಕಿಸಿದಂತಲ್ಲ.
ಇನ್ನೊಂದು:ಪ್ರಶ್ನೆ ಮಾಡದಿರಲು ಬ್ರಾಹ್ಮಣರೇನು ಮೇಲಿಂದ ಇಳಿದು ಬಂದವರಾ? ಇವೆರಡೂ ಲೇಖನಗಳು ಸ್ವತಃ ಬ್ರಾಹ್ಮಣರಾಗಿದ್ದು, ಪುರೋಹಿತರು ಹೇಗೆ ಮುಗ್ಧ ಜನರನ್ನು ಶಾಸ್ತ್ರದ ನೆಪದಲ್ಲಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಸ್ವಾನುಭವದ ಹಿನ್ನೆಲೆ ಯಲ್ಲಿ ರಘುನಾಥ ಗುರೂಜಿ ಎಂಬವರ ಲೇಖನಕ್ಕೆ ಬರೆದ ಪೂರಕ ಪ್ರತಿಕ್ರಿಯೆಯ ರೂಪದಲ್ಲಿ ಬರೆದುದಾಗಿತ್ತು. ಆ ಚರ್ಚೆಈಗ ಮತ್ತೆ ಇಲ್ಲಿ ಅನಗತ್ಯ ಬಿಡಿ. ಅದೀಗ ಮುಗಿದ ಹೋದ ವಿಚಾರ. ಆದರೂ, ರಘುನಾಥ ಗುರೂಜಿ ಲೇಖನದ ಕುರಿತಾಗಿ ಎದ್ದ ರಾದ್ಧಾಂತಕ್ಕೆ ಉದಾಸೀನವೇ ಮದ್ದು ಎಂದು ವಿಶ್ವವಾಣಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಸುಮ್ಮನಾಗಬಹುದಿತ್ತು.
ಯಾಕೆಂದರೆ ಮೇಲೆ ಹೇಳಿದ ದಾರಿದೀಪೋಕ್ತಿಯನ್ನು ಹೇಳಿದವರು ಭಟ್ಟರೇ! ಆದರೂ ಈ ವಿಚಾರದಲ್ಲಿ ಭಟ್ಟರು ಯಾಕೆಉದಾಸೀನ ಮಾಡಲಿಲ್ಲ ಅಂತ ನನಗೆ ಆ ಸಂದರ್ಭದಲ್ಲಿ ಅಚ್ಚರಿಯಾಗಿತ್ತು! ಪ್ರಾಯಶಃ ಟೀಕೆಗೆ ಹುಟ್ಟಿಕೊಂಡ ವಿರೋಧಗಳನೆಲೆಗಳ ಪ್ರಜ್ಞೆಗಳು ಮುಖಾಮುಖಿ ಯಾದ ರೀತಿ ಭಟ್ಟರಿಗೆ ಇರಿಸುಮುರಿಸನ್ನು ಉಂಟುಮಾಡಿತ್ತೇನೋ! ರಘುನಾಥ ಗುರೂಜಿ ಬ್ರಾಹ್ಮಣರಾಗಿದ್ದು ಕೆಲವು ಬ್ರಾಹ್ಮಣರ ದಾರಿತಪ್ಪಿಸುವ ಕಾಯಕದ ಬಗ್ಗೆ ವಿರುದ್ಧವಾಗಿ ಬರೆದಾರೇ? ನೋ ಛಾನ್ಸ್.
ಬರೆದಿದ್ದಾರೆಂದರೆ ಏನಾದರೂ ಅಂಥ ಅನುಭವಗಳು ಅವರಿಗೆ ಆಗಿರಲೇಬೇಕಲ್ಲವೆ? ಹಾಗಂತ ಎಲ್ಲ ಬ್ರಾಹ್ಮಣರೂ ಹಾಗೆಯೇಮಾಡುತ್ತಾರೆಂದು ಅಥವಾ ಹಾಗೆಯೇ ಇzರೆಂದು ಅವರೇನು ತಮ್ಮ ಲೇಖನದಲ್ಲಿ -ರ್ಮಾನು ಹೊರಡಿಸಲಿಲ್ಲವಾಗಿತ್ತು. ಮೇಲಾಗಿ ಅವರ ಲೇಖನವನ್ನು ಪ್ರಕಟಿಸಿದ ಪತ್ರಿಕೆಯ ಪ್ರಧಾನ ಸಂಪಾದಕರೂ ಬ್ರಾಹ್ಮಣರೇ! ಬರೆದವರೂ ಬ್ರಾಹ್ಮಣರೇ!
ಪ್ರಕಟಿಸಿದವರೂ ಬ್ರಾಹ್ಮಣರೇ! ಇದೇ ನನಗೆ ಬಲು ರೋಚಕವೆನಿಸುವಂಥದ್ದು! ಈ ಪ್ರಕರಣದಲ್ಲಿ ಭಟ್ಟರು ತಾವೇ ಹೇಳಿದದಾರಿದೀಪೋಕ್ತಿಯ ಮಾತನ್ನು ಅನುಸರಿಸಿ ಉದಾಸೀನ ಮಾಡಬಹುದಿತ್ತು! ಆದರೆ ಹಾಗಾಗಲಿಲ್ಲ. ಅವರು ಹಾಗೆ ಮಾಡಲಿಲ್ಲ. ಒಟ್ಟಾರೆಯಾಗಿ ಈ ಘಟನೆ ಇದ್ದುದ್ದನ್ನು ಇದ್ದ ಹಾಗೆ ಹೇಳುವುದು ತಪ್ಪು ಅಂತ ಪ್ರೂವ್ ಮಾಡಿಬಿಟ್ಟಿತು. ಜಯವೀರರಾಗಲೀ, ಗುರೂಜಿಯಾಗಲೀ ಬ್ರಾಹ್ಮಣ ಸಮುದಾಯವನ್ನು, ಬ್ರಾಹ್ಮಣ್ಯವನ್ನು ಟೀಕಿಸಿರಲಿಲ್ಲ ಎಂಬುದು ಓದುಗರಿಗೆ ಸ್ಪಷ್ಟವಾಯಿತು. ಇರಲಿ ಬಿಡಿ.
ನೋಡಿ:ಪತ್ರಿಕೋದ್ಯಮ ಉದ್ಯಮವಾಗಿದೆಯೆಂದು ಆಕ್ಷೇಪಿಸಿದ ಬಿ.ಎಲ. ಶಂಕರರ ಮಾತಿಗೆ ವಿಶ್ವವಾಣಿಯಲ್ಲಿ ಜಯವೀರರ ಲೇಖನವನ್ನು (19-05-2021) ಪ್ರಕಟಿಸುವ ಆಸಕ್ತಿಯಾಗಲೀ ಅಗತ್ಯವಾಗಲೀ, ಅನಿವಾರ್ಯವಾಗಲೀ ಖಂಡಿತವಾಗಿಯೂ ಭಟ್ಟರಿಗಿರಲಿಲ್ಲ. ಆದರೂ ಶಂಕರರಂಥ ಹಿರಿಯ ರಾಜಕಾರಣಿಯೊಬ್ಬರ ಮಾತಿಗೆ ಸ್ಪಂದಿಸಬೇಕು ಎಂದೆನ್ನಿಸಿ ಅಗತ್ಯ, ಅನಿವಾರ್ಯತೆ, ಸಾಂದರ್ಭಿಕತೆ ಸೃಷ್ಟಿಸುವ ವಿಚಾರಗಳಿಗೆ ಪತ್ರಿಕೋದ್ಯಮದಲ್ಲಿ ಬಹುಕಾಲ ದುಡಿಯುತ್ತಿರುವ ಭಟ್ಟರುಉದಾಸೀನ ಮಾಡದೆ ಪ್ರತಿಕ್ರಿಯೆಯೆ ರೂಪದಲ್ಲಿ ಪ್ರಕಟಿಸಿರಬಹುದು.
ಆದರೆ ಒಂದು ಮಾತು ಸತ್ಯ:ವರ್ತಮಾನದಲ್ಲಿ ರಾಜಕಾರಣಿಯೊಬ್ಬನ ಸಂಕಷ್ಟಗಳು ಎಂಬ ವಿಷಯದ ಬಗ್ಗೆ ಶಂಕರರಂಥ ಸಾತ್ವಿಕ ರಾಜಕಾರಣಿಗಳು ಮಾತಾಡಬಹುದು, ಅಲ್ಲ ಮಾತಾಡಬೇಕು. ಗಂಗೆಯಲ್ಲಿ ಮಿಂದು ಪಾವನಗೊಂಡ ರಾಜಕಾರಣದಲ್ಲಿ ಮಾತ್ರ ಶಂಕರರಂಥ ಶುದ್ಧ ರಾಜಕಾರಣಿಗಳು ಈಸಬಹುದೇ ಹೊರತು ಸರಿಹೊತ್ತಿನ ರಾಜಕೀಯಕ್ಕೆ ಸರಿಯಾಗಲಾರರು. ನಾನಿಲ್ಲಿ ಉದಾಸೀನತೆಯ ಬಗ್ಗೆ ಬರೆಯಲು ಹೊರಟಾಗ ಈ ಸಂಗತಿಗಳು ನೆನಪಾಗಿ ಹಂಚಿಕೊಂಡೆಯಷ್ಟೇ.
ತಪ್ಪಾದರೆ ಕ್ಷಮಿಸಿಬಿಡಿ. ಈಗ ವಿಚಾರಕ್ಕೆ ಬರೋಣ. ಒಂದು ಮನೆಯಲ್ಲಿ ಅಪ್ಪ, ಅಮ್ಮ, ಮಗ, ಮಗಳು ಇದ್ದಾರೆ. ಮಗಳು ಈ ಕಾಲದವಳು. ಮಗ ಈ ಕಾಲದವನಾದರೂ ಶುದ್ಧಾತಿಶುದ್ಧ ಹುಂಬ, ಒರಟ. ಮೊಂಡ. ಹೇಳಿದ್ದನ್ನು ಬಿಟ್ಟು ಉಳಿದೆಲ್ಲವನ್ನೂ ಮಾಡುವವ. ಹಠಮಾರಿ. ಶೋಕಿಗೆ ಬೇಕಾಗಿ ಹಣಕ್ಕೆ ಅಪ್ಪ – ಅಮ್ಮನನ್ನು ಪೀಡಿಸುವವ. ದಿನವೂ ಅಕ್ಕನನ್ನು ಗೋಳಾಡಿಸುವವ. ಮೋಜು ಮಸ್ತಿಗೆ ಹಣಕ್ಕಾಗಿ ಅಪ್ಪ ಅಮ್ಮನನ್ನು ಸತಾಯಿಸುತ್ತಲೇ ಇರುವವ. ಆದರೆ, ಓದುದರಲ್ಲಿ ಮಾತ್ರ ಯಾವಾಗಲೂ ಹಿಂದೆ. ಪರೀಕ್ಷೆಯಲ್ಲಿ ಯಾವತ್ತೂ ಫಲ!
ಒಬ್ಬ ಹೇಳವನನ್ನು, ರೋಗಿಷ್ಠನನ್ನು, ದಡ್ಡನನ್ನು, ಅಂಗವಿಕಲನನ್ನು ತಂದೆ ತಾಯಂದಿರು ಸಹಿಸಿಕೊಳ್ಳಬಹುದು. ಆದರೆ ಒಬ್ಬ ಮೂರ್ಖ ಮಗನನ್ನು ಸಹಿಸಿಕೊಳ್ಳೋದು ಯಾವ ತಂದೆ ತಾಯಂದಿರಿಗೆ ಸಾಧ್ಯವಾದೀತು ಹೇಳಿ? ಓದಲ್ಲ, ಬರೆಯಲ್ಲ. ಒಳ್ಳೆಯ ನಡತೆಯಿಲ್ಲ. ಗುಣಸ್ವಭಾವವಿಲ್ಲ. ಬಂದವರ ಮುಂದೆ ಅಸಂಬದ್ಧ ಪ್ರಲಾಪಿತನ. ಪ್ರತಿ ಮಾತಿಗೂ ವಾದಿಸುವವ. ಮನೆತನದ ಮಾನ ಮರ್ಯಾದೆಯನ್ನು ಸಮುದಾಯದೆದುರು ಕೆಳಮಟ್ಟಕ್ಕೆ ತಂದು ನಿಲ್ಲಿಸುವ ಮಗನ ಹೊಲಸು ಗುಣ, ದುರಭ್ಯಾಸವನ್ನು ಯಾವ ಹಂತಕ್ಕೂ ಸಹಿಸಿಕೊಂಡಿರುವುದು ಒಂದು ಹಂತದವರೆಗಾದೀತು!
ಎಷ್ಟೇ ಬುದ್ಧಿಮಾತು ಹೇಳಿದರೂ ಸರಿದಾರಿಗೆ ಬರದ ಮಗನ ಆಟಾಟೋಪವನ್ನು ಸಹಿಸಲು ಸಾಧ್ಯವಾಗದೆ ಅಪ್ಪ ಅಮ್ಮಂದಿರು ಕೊನೆಗೆ ನಿನ್ನ ಹಣೆಬರಹ ನಾವೇನು ಮಾಡೋದು ಅಂತ ಅವನ ಬಗೆಗೆ ಉದಾಸೀನ ಭಾವವನ್ನು ಹೊಂದುತ್ತಾರೆ. ಹೆತ್ತವರ ಉದಾಸೀನತೆ ಆ ಮಗನನ್ನು ಪೇಚಿಗೀಡು ಮಾಡುತ್ತದೆ, ಕಸಿವಿಸಿಗೆ ಒಯ್ಯುತ್ತದೆ. ಒಂದು ಮಟ್ಟದ ಚಿಂತೆಗೆ ದೂಡುತ್ತದೆ. ಹೀಗೆ ಮಾಡುವುದು, ಮಾಡಬೇಕಾದುದು ಹೆತ್ತವರ ತಪ್ಪಲ್ಲ, ಅವರು ಹೀಗೆ ಮಾಡದೇ ಹೋದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದೇ ಇಲ್ಲ. ಹೀಗೆ ನಿಧಾನವಾಗಿ ಮಗನೆಡೆಗೆ ತೋರುವ ಉದಾಸೀನತೆಯ ಶಿಕ್ಷೆಯಲ್ಲೂ ಪ್ರಮಾಣವಿರಬೇಕು.
ಹಾಗಂತ ಮಗ ಏನೇ ಮಾಡಿದರೂ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿ ಬಿಡುವುದಲ್ಲ. ಆ ಉದಾಸೀನತೆಯನ್ನು ತೋರುವ ಹಂತದಲ್ಲೂ ಮಗನಿಗೆ ಒಂದು ಪರೋಕ್ಷ ಅರಿವು ಮೂಡಿಸುವಲ್ಲಿ ಪೋಷಕರು ಸದಾ ಪ್ರಯತ್ನಿಸುತ್ತಲೇ ಇರಬೇಕು. ಮಗನ ನಡತೆಯಲ್ಲಿ ಅದು ಆಗಿದೆಯೇ ಎಂದು ಅವಲೋಕಿಸುತ್ತಲೇ ಇರಬೇಕು. ಆದರೆ ಮಗನಿಗೆ ಅದು ಗೊತ್ತಾಗಬಾರದು. ಅಂದಾಗ ಮಾತ್ರ ಕಾಲಕ್ರಮೇಣ ಎಂಥಾ ಮಗನಾದರೂ ಸರಿದಾರಿಗೆ ಬಂದಾನು, ಬರುತ್ತಾನೆ.
ಕೆಲವು ರಾಜಕಾರಣಿಗಳನ್ನು ನೋಡಿ:ಎಂತೆಂಥಾ ಹಗರಣಗಳು, ಪ್ರಕರಣಗಳು ಅವರ ಮೈತುಂಬ ಹಾಸಿ ಹೊದ್ದುಕೊಂಡಿ ದ್ದರೂ, ಅಥವಾ ಅವರು ಅದನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿದ್ದರೂ ಯಾವುದಕ್ಕೂ ಹೆದರದೆ, ಅಂಜದೆ ಉದಾಸೀನ ಮಾಡುತ್ತಾ ರಾಜಕೀಯ ಮಾಡುವುದರ ಮುಳುಗಿರುತ್ತಾರೆ. ಅಷ್ಟೇ ಮತ್ತೊಬ್ಬರ ಕಾಲೆಳೆಯುವುದರ ತಲ್ಲೀನರಾಗಿರುತ್ತಾರೆ. ತಾನು ಕಳ್ಳ ಪರರ ನಂಬ ಎಂಬ ಮಾತು ಇಂಥವರಿಗೆ ಚೆನ್ನಾಗಿ ಒಪ್ಪುತ್ತದೆ. ಸರಕಾರದಲ್ಲಿದ್ದರೂ ವಿರೋಧ ಪಕ್ಷದಲ್ಲಿದ್ದರೂ ಮೈತುಂಬಾ ಅದ್ವಾನಗಳಿದ್ದರೂ, ಹೋದ ಕಡೆಯಲ್ಲ ಜನರು ಟೀಕಿಸಿದರೂ ಯಾವುದಕ್ಕೂ ಹೆದರದೆ ಎಲ್ಲವನ್ನೂ ಉದಾಸೀನ ಭಾವದ ಖುಷಿಯಿಂದ ಸ್ವೀಕರಿಸುವುದು ಇಂಥವರಿಗೆ ಕರತಲಾಮಲಕವಾಗಿರುತ್ತದೆ.
ಮುಖ್ಯವಾಗಿ ನಾವಿಲ್ಲಿ ಗಮನಿಸಬೇಕಾದುದು ಏನೆಂದರೆ, ಸಾರ್ವಜನಿಕ ಬದುಕಿನಲ್ಲಿ ಏನೇ ಮಾಡಿದರೂ ಲೋಪದೋಷವನ್ನು ಎತ್ತಿ ಹಿಡಿಯುವವರು ಇದ್ದೇ ಇರುತ್ತಾರೆ. ಮೊಸರಲ್ಲಿ ಕಲ್ಲು ಹುಡುಕುವುದು ಅಂತಾರಲ್ಲ ಹಾಗೆ. ಅದರಲ್ಲೂ ಮೀಡಿಯಾಗಳಂತೂ ಪದೇ ಪದೆ ಅದನ್ನೇ ಎತ್ತಿ ತೋರಿಸುವುದು ಈಗೀಗ ಸಹಜವಾಗೇ ಇದೆಯಲ್ಲ!
ಒಳ್ಳೆಯದನ್ನು ರಾಜಕಾರಣಿಗಳು ಮಾಡಿದರೂ ತಪ್ಪನ್ನು ಹುಡುಕಿ ಹೇಳುವವರು ಕೆಟ್ಟದ್ದು ಸಂಭವಿಸಿದಾಗ ಬಿಡುತ್ತಾರೆಯೇ? ಆದ್ದರಿಂದ ರಾಜಕಾರಣಿಗಳದ್ದೇ ಸಂಪೂರ್ಣವಾಗಿ ತಪ್ಪು ಅಂತ ಹೇಳುವುದಕ್ಕಾಗುವುದಿಲ್ಲ! ಮಜಾ ಏನೆಂದರೆ, ಚುನಾವಣೆಯ ಸಂದರ್ಭದಲ್ಲಿ ಭ್ರಷ್ಟ ರಾಜಕಾರಣಿಗಳ ಹಿಂದೆ ಅವರನ್ನು ಟೀಕಿಸಿದವರು, ಬೈದುಕೊಂಡವರೇ ಇರುತ್ತಾರೆ. ಸಾತ್ವಿಕ ರಾಜಕಾರಣಿ ಯನ್ನು ಹೀಗಳೆದವರೂ ಇರುತ್ತಾರೆ. ಕಾರ್ಯವಾಸಿ ಕತ್ತೆಗಾಲು ಎಂಬುದು ಜನರಿಗೆ ಗೊತ್ತಿರುತ್ತದೆ.
ರಾಜಕಾರಣಿಗಳು ಎಂಥಾ ಪರಿಯ ಅನಾಗರಿಕ, ಸಂಸ್ಕೃತಿಹೀನ ಕಾರ್ಯ ಮಾಡಿದರೂ ಅವರನ್ನು ಆ ಸಂದರ್ಭದಲ್ಲಿ ಬೈದುಭಂಗಿಸಿ, ಹೀಗಳೆದು ಅವಮಾನಿಸಿ ನಕ್ಕವರೂ ತಮಗೆ ಬೇಕಾದ ಸಮಯದಲ್ಲಿ ಅವರಿಗೇ ಸೆಲ್ಯೂಟ್ ಕೊಟ್ಟು ಲಂಚವನ್ನೂ ಕೊಟ್ಟು ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವ ಜನರಿಲ್ಲವೆ? ಇಂಥದ್ದೆಲ್ಲ ಜನಸಾಮಾನ್ಯರಿಗೆ ಹೇಗೆ ಮಾಮೂಲಿ ಅನಿಸುತ್ತದೆಯೋ, ಹಾಗೆ ರಾಜಕಾರಣಿಗಳಿಗೂ ಇದು ಮಾಮೂಲಿ ಅನಿಸುತ್ತದೆ.
ಸಂದರ್ಭ, ಸನ್ನಿವೇಶಗಳಲ್ಲಿ ತಮ್ಮನ್ನು ನಿಂದಿಸಿದವರನ್ನೂ ರಾಜಕಾರಣಿಗಳು ಉದಾಸೀನ ಮಾಡುವುದರಿಂದ ರಾಜಕಾರಣಿಗಳಿಗೆ ಹೀಗೆಲ್ಲ ಇರಲು ಸಾಧ್ಯವಾಗುತ್ತದೆ. ಯಾಕೆಂದರೆ, ಶಾಲೆ – ಕಾಲೇಜಿನ ಸಂದರ್ಭದಲ್ಲಿ ಅಭ್ಯಾಸದ ಬಗ್ಗೆ ತೀರಾ ಹುಚ್ಚಿರದ, ಅಂಕಗಳಿಗಾಗಿ ತೀರಾ ಹಪಹಪಿಸದ, ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳದ, ಶಿಕ್ಷಕರು ಕೊಟ್ಟ ಮನೆಗೆಲಸಗಳನ್ನು ನೆಟ್ಟಗೆ ಮಾಡದ, ಮಾಡಿದರೂ ಯಾರದ್ದನ್ನೋ ಕದ್ದು ಬರೆಯುವ, ಅಥವಾ ಅದನ್ನೇ ತನ್ನದೆಂದು ಹೇಳುವ ಅತೀ ಜಾಣ್ಮೆಯಿರುವ ವಿದ್ಯಾರ್ಥಿಗಳು ಕೊನೆಗೆ ಶಿಕ್ಷಕರ ಕೈಯಲ್ಲಿ ಸಿಕ್ಕಿಬಿದ್ದು ಶಿಕ್ಷೆ ಅನುಭವಿಸಿಯೂ ಏನೂ ಆಗಲೇ ಇಲ್ಲವೆಂಬಂತೆ ಪೋಸು ಕೊಡುತ್ತ ಯಾವುದಕ್ಕೂ ಹೆದರದೆ ಎಲ್ಲವನ್ನೂ ತಾತ್ಸಾರವೋ, ಉದಾಸೀನವೋ, ನಿರ್ಲಕ್ಷ್ಯವೋ ಮಾಡುತ್ತ ಶಾಲೆ ಮುಗಿಸುವ ವಿದ್ಯಾರ್ಥಿಗಳಂತೆ ಈ ಕೆಲವು ರಾಜಕಾರಣಿಗಳ ವರ್ತನೆ ಸಾಮಾಜಿಕವಾಗಿ ಇರುತ್ತದೆ.
  ಇಂಥ ವಿದ್ಯಾರ್ಥಿಗಳೇ ಕೊನೆಗೆ ರಾಜಕಾರಣಿಗಳಾಗುತ್ತಾರೆ ಎಂಬ ವಿಚಿತ್ರವಾದ ಮಾತೂ ಇದೆ. ಈಗ ನೋಡಿ, ಕೆಲಸಕ್ಕೆ ಬಾರದ ಒಂದು ಪ್ರತಿಭಟನೆ, ಹೋರಾಟ, ದೊಂಬಿ ದೆಹಲಿಯಲ್ಲಿ ನಡೀತಿದೆ. ದೇಶದೆಡೆ ಹಲವು ಭಾಗಗಳಲ್ಲಿಯೂ ನಡೀತಿದೆ ಯೆನ್ನಿ. ಅದು ಮುಟ್ಟಬಾರದ ಹಂತವನ್ನೂ ತಲುಪಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನವನ್ನು ಹರಾಜು ಮಾಡಿತು. ಏನೇ ಆದರೂ ಕೇಂದ್ರ ಸರಕಾರ ಜಗ್ಗಲಿಲ್ಲ, ಎದೆಗುಂದಲಿಲ್ಲ. ಕೆಲವು ಸುತ್ತಿನ ಸಮಾಲೋಚನೆಯನ್ನು ಮಾಡಿ ಸರಿದಾರಿಗೆ ಬಂದು ಅವೆಲ್ಲ ನಿಂತೀತು ಎಂದು ಪ್ರಯತ್ನಿಸಿತು. ಆದರೆ ಏನೂ ಪರಿಣಾಮ ಆಗದಿದ್ದಾಗ ಉದಾಸೀನತೆಯನ್ನು ಭಾವ ತೋರುತ್ತಿದೆಯೇನೋ ಎಂದು ಅನ್ನಿಸತೊಡಗಿದ್ದು ಗೊತ್ತೇ ಇದೆ!
ಉದಾಸೀನವೂ ಒಂದು ದೃಷ್ಟಿಯಲ್ಲಿ ಮಾನಸಿಕವಾಗಿ ಆರೋಗ್ಯಯುತವೂ ಎಂದೆನಿಸಲು ಕಾರಣವಿದೆ. ಸುಖಾಸುಮ್ಮನೆ ನಮ್ಮ ಮೇಲೆ ಎಗರಾಡುವವರನ್ನು, ಆರೋಪಿಸುವವರನ್ನು, ಬ್ಲೇಮ್ ಮಾಡುವವರನ್ನು ಉದಾಸೀನ ಭಾವದಿಂದ ಕಾಣಲು ಶುರುಮಾಡಿದರೆ ಅವರೂ ತೆಪ್ಪಗಾಗುತ್ತಾರೆ. ಅಷ್ಟರಮಟ್ಟಿಗೆ ಅವರಿಂದ ಆಗಬಹುದಾದ ಮಾನಸಿಕ ತೊಂದರೆಯನ್ನು ನಿವಾರಿಸಿ ಕೊಂಡಂತೆ. ಈಗ ಮೋದಿಯವರನ್ನೇ ನೋಡಿ. ಅವರನ್ನು ನಿತ್ಯವೂ ಬೈಯ್ಯುವವರು, ಆರೋಪಿಸುವವರು, ಆಕ್ಷೇಪಿಸುವವರು,ವಿರೋಽಸುವವರು, ನಿಂದಿಸುವವರು, ಹಂಗಿಸುವವರು, ಅಣಕಿಸುವವರೇನೂ ಕಡಿಮೆ ಇದ್ದಾರೆಯೇ? ಆದರೆ ಯಾವುದಕ್ಕೂಮೋದಿ ಪ್ರತಿಕ್ರಿಯಿಸುವುದಿಲ್ಲ.
ಸ್ಪಂದಿಸುವುದಿಲ್ಲ. ಅಂಥವರೆಡೆಗೆ ಒಂದು ಉದಾಸೀನ ಭಾವವನ್ನು ಹೊಂದಿರುವುದರಿಂದ ಅವರ ಕಾರ್ಯದಲ್ಲಿ ಅವರು ಮುಂದುವರಿಯಲು ಅನುಕೂಲವಾಗುವಂತೆ ಅವರ ನಡೆಗಳಿರುತ್ತವೆ. ದೇಶವನ್ನಾಳುವವನಿಗೆ ಈ ಉದಾಸೀನ ಭಾವ ಒಂದು ಪ್ರಮಾಣದಲ್ಲಿ ಇರಲೇಬೇಕು. ಇಲ್ಲದಿದ್ದರೆ ದೇಶವನ್ನಾಳೋದು ಕಷ್ಟ!
ಒಬ್ಬ ಲೇಖಕನೋ ಕಾದಂಬರಿಕಾರನೋ ಬರಹಗಾರನೋ ಉದಾಸೀನ ಭಾವವನ್ನು ಹೊಂದಿರುತ್ತಾನೆ. ಅಥವಾ ಹೊಂದಿರಲೇ ಬೇಕು. ಅವನ ಕೃತಿಗಳನ್ನು ಅನೇಕರು ಓದುತ್ತಾರೆ. ಕೆಲವರು ಸುಮ್ಮನೆ ಓದುತ್ತಾರೆ. ಕೆಲವರು ಓದಿದ ಮೇಲೆ ಅವರವರ ಪ್ರಶ್ನೆ ಗಳನ್ನು ಕೇಳಿಕೊಳ್ಳುತ್ತಾರೆ. ತಟಸ್ಥರಾಗುತ್ತಾರೆ. ಇನ್ನೂ ಕೆಲವರು ಅದರಲ್ಲಿ ಹುಳುಕುಗಳನ್ನು ಪಟ್ಟಿ ಮಾಡುತ್ತಾರೆ. ಮತ್ತಷ್ಟು ಮಂದಿ ವಿರೋಧಿಸುತ್ತಾರೆ. ವಿಮರ್ಶೆ ಮಾಡಿ ಬೈಗುಳಗಳ ಮಳೆಗರೆಯುತ್ತಾರೆ. ಅಂಥದ್ದಕ್ಕೆಲ್ಲ ಪ್ರತಿಕ್ರಿಯಿಸ ಬಾರದು ಎಂಬಎಚ್ಚರ ಬರಹಗಾರನಿಗಿರಬೇಕು.
ಭೈರಪ್ಪನವರು ಆವರಣ ಬರೆದಾಗ ಎಂಥೆಂಥಾ ಕಟು ವಿಮರ್ಶೆಗಳು ಬೈಗುಳದ ರೂಪದಲ್ಲಿ, ವಿರೋಧದ ರೂಪದಲ್ಲಿ, ಬೆದರಿಕೆಯ ರೂಪದಲ್ಲಿ ಬಂತು. ಆದರೆ ಯಾವುದಕ್ಕೂ ಅವರು ತಲೆಬಿಸಿ ಮಾಡಿಕೊಳ್ಳದೆ ಉದಾಸೀನ ಭಾವದಿಂದ ಸ್ವೀಕರಿಸಿದರು.ಅನಂತಮೂರ್ತಿಯವರ ಸಂಸ್ಕಾರಕ್ಕೂ ಹೀಗೇ ಆಯಿತು. ಅವರೂ ಹಾಗೇ ಸ್ವೀಕರಿಸಿದರು. ಇನ್ನು ಕೆಲವರು ಕೃತಿಯನ್ನೇ ಮುಟ್ಟುಗೋಲು ಹಾಕುವ ಸಂಚು ಮಾಡಿದ್ದಿದೆ. ಆಗ ಲೇಖಕ ತನ್ನ ಬರಹವನ್ನು ತಾನು ಪ್ರೂವ್ ಮಾಡಿಕೊಳ್ಳಲು ಕೋರ್ಟ್ ಮೆಟ್ಟಿಲೇರಬೇಕಾಗಿ ಬರುತ್ತದೆ.
ಪ್ರೊ.ಕೆ.ಎಸ್. ನಾರಾಯಣ ಆಚಾರ್ಯರ ವಾಲ್ಮೀಕಿ ಯಾರು ಎನ್ನುವ ಕೃತಿ ಮುಟ್ಟುಗೋಲಿಗೆ ಒಳಪಟ್ಟಿತು. ಅವರು ಕೋರ್ಟಲ್ಲಿವಾದಿಸಿ ಗೆದ್ದರು. ಮುಟ್ಟುಗೋಲು ಬಿಚ್ವುಗೋಲಾಯಿತು. ಎಲ್ಲರಿಗೂ ಸತ್ಯ ದರ್ಶನವಾಯಿತು. ನೀವು ಪತ್ರಿಕಾ ಸಂಪಾದಕರಾಗಿ ದ್ದರೆ ಉದಾಸೀನ ಭಾವವನ್ನು ಬೆಳೆಸಿಕೊಳ್ಳಲೇಬೇಕು. ಇಲ್ಲ ಅಂದರೆ ನಿಮ್ಮ ಪತ್ರಿಕೆ ಹೆಚ್ಚುಕಾಲ ನಿಲ್ಲಲ್ಲ. ಪ್ರತಿಯೊಂದೂ ಸಂಚಿಕೆಗೂ ಅಪಸ್ವರ ಎತ್ತುವವರು ಇದ್ದೇ ಇರ್ತಾರೆ. ಅದಕ್ಕೆಲ್ಲ ಮಂಡೆಬಿಸಿ ಮಾಡಿಕೊಂಡರೆ ಪತ್ರಿಕೆ ನಡೆಸೋದು ಹೇಗೆ? ಹಾಗಂತ ಉದಾಸೀನ ಭಾವವನ್ನು ಹೊಂದಿರುವವರನ್ನು ಮಾನಮರ್ಯಾದೆ ಬಿಟ್ಟವರು ಎಂದು ಭಾವಿಸುವ ಅಗತ್ಯವಿಲ್ಲ.
ಮಾನ ಮರ್ಯಾದೆ ಬಿಟ್ಟು ಇಲ್ಲಸಲ್ಲದ್ದನ್ನು ಯಾರ್ಯಾರದ್ದೇ ಮೇಲೆ ಬರೆದು ಪತ್ರಿಕೆಯನ್ನು ಬೆಳೆಸಿದವರನ್ನೂ ನೋಡಿಲ್ಲವೆ? ಉದಾಸೀನ ಭಾವದ ವ್ಯವಹಾರಕ್ಕೂ, ಮಾನ – ಮರ್ಯಾದೆಯನ್ನು ಬಿಟ್ಟ ವ್ಯವಹಾರಕ್ಕೂ ವ್ಯತ್ಯಾಸವಿದೆ. ಇವೆರಡರ ಮಧ್ಯೆ ಒಂದು ತೆಳುವಾದ ದಪ್ಪನೆಯ ಗೆರೆಯಿದೆ. ಸೂಕ್ಷ ವಾಗಿದ್ದರೆ ಅದು ಅರಿವಾಗುತ್ತದೆ. ಮಾನ-ಮರ್ಯಾದೆಯನ್ನು ಬಿಟ್ಟವರಿಗೆ ಈಅಂತರ ಗೊತ್ತಾಗಲಾರದು. ಉದಾಸೀನ ಭಾವವನ್ನು ವ್ಯಕ್ತಪಡಿಸುವವರಿಗೆ ಈ ಅಂತರ ಅರ್ಥವಾಗದೇ ಇರಲಾರದು.
ಏನ್ರೀ ಇದು, ಎಷ್ಟು ಸಲ ಹೇಳಿದರೂ ಅರ್ಥವಾಗಲ್ವಾ ನಿಮಗೆ? ಮಾನ-ಮರ್ಯಾದೆ ಇಲ್ವೇನ್ರೀ ನಿಮಗೆ ಈ ರೀತಿ ಬರೆಯುವುದಕ್ಕೆಎನ್ನುವುದಕ್ಕೂ, ಏನ್ರೀ ಇದು, ಎಷ್ಟು ಸಲ ಹೇಳಿದರೂ ಉದಾಸೀನ ಮಾಡ್ತೀರಲ್ಲ, ಏನಾದರೂ ಪ್ರತಿಕ್ರಿಯೆ ನೀಡಿ ಅಂತ ಹೇಳುವು ದಕ್ಕೂ ವ್ಯತ್ಯಾಸವಿದೆ ತಾನೆ? ಮಾನ-ಮರ್ಯಾದೆ ಬಿಡುವುದಕ್ಕೂ ಮತ್ತು ಉದಾಸೀನ ಭಾವವನ್ನು ವ್ಯಕ್ತಪಡಿಸು ವುದಕ್ಕೂ ಇರುವುದು ಇದೇ ಅಂತರ!
ಈಗ ಎಡೆ ಕೋರೋನಾ ಸೋಂಕಿನ ಭಯ! ಸೋಂಕು ತಗುಲಿಬಿಟ್ಟರೆ ಅಂತ ಭಯ! ಇಲ್ಲಿ ಗಮನಿಸಬೇಕಾದ ಸಂಗತಿಯೇನೆಂದರೆ, ಕೋವಿಡ್ ಅಂತಲ್ಲ, ಯಾವುದೇ ರೋಗಕ್ಕೂ ಭಯಪಡುವ ಅಗತ್ಯವಂತೂ ಖಂಡಿತವಾಗಿಯೂ ಇಲ್ಲ. ಒಂದು ರೀತಿಯ ಉದಾಸೀನತೆಯೂ ದೇಹಕ್ಕಂಟಿದ ರೋಗವನ್ನು ಗುಣಪಡಿಸಿಕೊಳ್ಳಬಹುದು. ಮನಸ್ಸಿನೊಳಗೆ ರೋಗದ ಕುರಿತಾಗಿ ಅತೀಯಾಗಿ ಚಿಂತಿಸಿದರೆ ರೋಗ ಇಲ್ಲದಿದ್ದರೂ ರೋಗ ಬರಬಹುದು. ಮನಸು ರೋಗವನ್ನು ಸೃಷ್ಟಿಸಬಲ್ಲುದು, ಗುಣಪಡಿಸಬಲ್ಲುದು ಎನ್ನುತ್ತಾರೆ ಸ್ವಾಮಿ ಜಗದಾತ್ಮಾನಂದರು.
ರೋಗದ ಕುರಿತಾಗಿ ಸಾಕಷ್ಟು ಎಚ್ಚರವಿದ್ದೂ ಅದರ ಪರಿಣಾಮಗಳನ್ನು ಎದುರಿಸುವ ಧೈರ್ಯ – ಸ್ಥೆ ರ್ಯವಿದ್ದೂ ಉದಾಸೀನತೆಮಾಡಿದರೆ ರೋಗವನ್ನು ಗೆಲ್ಲಬಹುದು. ದೇಹಕ್ಕಂಟಿದ ರೋಗ ವನ್ನು ವಾಸಿಮಾಡಬಹುದು, ಆದರೆ ಮನಸಿಗಂಟಿದ ರೋಗವನ್ನುವಾಸಿಮಾಡುವುದು ಬಹುಕಷ್ಟ. ಧೈರ್ಯಬೇಕು, ಎಲ್ಲವನ್ನೂ ಎದುರಿಸುವ ಸ್ಥೈರ್ಯಬೇಕು. ಅದು ನಮ್ಮೊಳಗೇ ಇದೆ. ಆ ಕುರಿತು ಉದಾಸೀನ ಮಾಡಬಾರದು. ಉದಾಸೀನ ಮಾಡುವುದನ್ನೇ ಉದಾಸೀನ ಮಾಡಬಾರದು. ಯಾಕೆಂದರೆ ಸರ್ವರೋಗಕ್ಕೂ ಉದಾಸೀನವೇ ಮದ್ದು ಎಂಬ ಹಿರಿಯರ ಮಾತಂತೂ ಸತ್ಯ!