ಯಡಿಯೂರಪ್ಪನವರೇ, ಬಾರು-ಬಾಡು-ಬಿರಿಯಾನಿಗೆ ಅವಕಾಶ ನೀಡಿ, ಪುಸ್ತಕಪ್ರೇಮಿಗಳನ್ನು ಮದ್ಯಪ್ರಿಯರಿಗಿಂತ ಕೀಳಾಗಿ ಕಾಣಬೇಡಿ, ಪ್ಲೀಸ್‌ !
ಜಯವೀರ ವಿಕ್ರಮ ಸಂಪತ್‌ ಗೌಡ
ಕಾಲಂ:ಅಕ್ಷರಜೀವಿಯ ಆರ್ತನಾದ
ಸನ್ಮಾನ್ಯ ಶ್ರೀ ಯಡಿಯೂರಪ್ಪನವರೇ,
ಈ ವಿಷಯದ ಬಗ್ಗೆ ನಿಮಗೆ ಯಾರೂ ನೆನಪಿಸುವ ಪರಿಸ್ಥಿತಿ ಬರಬಾರದಿತ್ತು. ನೀವು ಈ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದರಿಂದ ಇದನ್ನು ಬರೆಯಬೇಕಾಗಿದೆ. ಅದೇನೆಂದರೆ, ಈ ಕರೋನಾ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸೇವೆಗಳೆಂದು ಕೆಲವುವ್ಯಾಪಾರ-ವಹಿವಾಟನ್ನು ಮುಕ್ತವಾಗಿ ಇಟ್ಟಿದ್ದೀರಿ.
ಅದಕ್ಕೆ ಸಂಬಂಧಿಸಿದ ಅಂಗಡಿ-ಮುಂಗಟ್ಟುಗಳು ತೆರೆದಿರಲು ಅನುಮತಿ ನೀಡಿದ್ದೀರಿ. ತಕರಾರಿಲ್ಲ. ಆದರೆ ಪುಸ್ತಕದ ಅಂಗಡಿ  ಗಳನ್ನೇಕೆ ಮುಚ್ಚಿದ್ದೀರಿ? ಇದು ನನ್ನ ಮೂಲಭೂತ ಪ್ರಶ್ನೆ. ಪುಸ್ತಕಗಳೆಂದರೆ ಹೊರ ಜಗತ್ತಿಗೆ ನಮ್ಮನ್ನು ತೆರೆದಿಡುವ ಕಿಟಕಿಗಳು ಎಂಬುದನ್ನು ನಿಮಗೆ ವಿವರಿಸಬೇಕಿಲ್ಲ. ಇಡೀ ರಾಜ್ಯದ ಜನ, ಲಾಕ್‌ಡೌನ್‌ನಿಂದ ತಮ್ಮ ತಮ್ಮ ಮನೆಗಳಲ್ಲಿ, ಬಾಗಿಲು ಹಾಕಿ ಕೊಂಡು ಸುಮ್ಮನೆ ಕುಳಿತಿದ್ದಾರೆ. ಅವರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕಗಳೆಂದರೆ ಟಿವಿ, ಮೊಬೈಲ್, ಪತ್ರಿಕೆಗಳು ಮಾತ್ರ. ಕೆಲವರು ಪಕ್ಕದ ಮನೆಯವರ ಜತೆ ಸಹ ಮಾತಾಡುತ್ತಿಲ್ಲ.
ಇನ್ನು ಜಿಲ್ಲೆ, ತಾಲೂಕುಗಳಲ್ಲಿ ಜನ ತಮ್ಮ ಊರುಗಳ ದಾರಿಗಳನ್ನು ಬಂದ್ ಮಾಡಿ ಕಂಗೆಟ್ಟು ದಿನ ದೂಡುತ್ತಿದ್ದಾರೆ. ದಿನದಲ್ಲಿ ಎಷ್ಟು ಹೊತ್ತು ಅಂತ ಜನ ಟಿವಿ ನೋಡಲು ಸಾಧ್ಯ? ಒಂದು ತಾಸಿಗಿಂತ ಜಸ್ತಿ ನೋಡಿದರೆ ತಲೆ ಧಿಮ್ ಎನ್ನುತ್ತದೆ. ಹೀಗಿರುವಾಗ, ಅವರನ್ನು ಪತ್ರಿಕೆ, ಪುಸ್ತಕಗಳೆಡೆ ಸೆಳೆಯುವುದು ಅತ್ಯಂತ ವಿಹಿತ.  ಪತ್ರಿಕೆಗಳನ್ನಂತೂ ಅಗತ್ಯ ಸೇವೆ ಎಂದು ಘೋಷಿಸಿರುವು ದರಿಂದ, ಜನರಿಗೆ ಪತ್ರಿಕೆಗಳು ಸಿಗುತ್ತಿವೆ.
ಆದರೆ ಪುಸ್ತಕೋದ್ಯಮ ಏಕಾಏಕಿ ಸ್ಥಗಿತವಾಗಿದೆ. ಲಾಕ್‌ಡೌನ್ ಕಾಲದಲ್ಲಿ ಜನರನ್ನು ನೆಮ್ಮದಿಯಾಗಿಡಲು, ಒಳ್ಳೆಯ ಪುಸ್ತಕ ಗಳನ್ನು ಓದಿ ಎಂದು ನೀವು ರಾಜ್ಯದ ಜನರಿಗೆ ಹೇಳಬೇಕು.
ನೀವು ಕರೋನಾ ಸೋಂಕು ತಗುಲಿಸಿಕೊಂಡು, ಹಿಂದಿನ ಸಲ ಮತ್ತು ಈ ಸಲ, ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಕೈಯಲ್ಲಿ ಪುಸ್ತಕಗಳನ್ನು ಹಿಡಿದುಕೊಂಡು ಹೋಗಿದ್ದಿರಿ. ಆಗ ನಿಮ್ಮ ಕೋಣೆಯಲ್ಲಿ ನೀವು ಪುಸ್ತಕ ಓದುತ್ತಿದ್ದ ಆ ಫೋಟೋ ಗಳನ್ನು ಪತ್ರಿಕೆಗಳಲ್ಲಿ ನೋಡಿ. ಈಗ ಜನ ಅವರ ಪಾಡಿಗೆ ಅವರವರ ಮನೆಗಳಲ್ಲಿ ಇದ್ದಾರೆ. ದಿನದಲ್ಲಿ ಎರಡು-ಮೂರು ಗಂಟೆ ಜನರಿಗೆ ಪುಸ್ತಕದ ಅಂಗಡಿಗಳಿಗೆ ಹೋಗಲು ಅನುವು ಮಾಡಿಕೊಡಿ.
ಒಂದು ವೇಳೆ ಅದರಿಂದ ಸಂಚಾರ ದಟ್ಟಣೆಯಾಗಬಹುದು, ಮಾರ್ಗದರ್ಶಿ ಸೂತ್ರ ದುರುಪಯೋಗವಾಗಬಹುದು ಎಂದೆನಿಸಿದರೆ,ಸಂಚಾರಿ ಪುಸ್ತಕ ಮಾರಾಟ ಮಳಿಗೆಗಳನ್ನು ನಗರದ ಎಲ್ಲ ಪ್ರದೇಶ ಮತ್ತು ಬಡಾವಣೆಗಳಲ್ಲಿ ಕಲ್ಪಿಸುವ ವ್ಯವಸ್ಥೆ ಮಾಡಿ. ದೆಹಲಿ ಮತ್ತು ಕೇರಳ ಸರಕಾರಗಳು ಅಗತ್ಯ ಸೇವೆಯಲ್ಲಿ ಪುಸ್ತಕದಂಗಡಿಗಳನ್ನು ಸೇರಿಸಿವೆ.
ದಿನದಲ್ಲಿ ನಾಲ್ಕು ಗಂಟೆಗಳ ಕಾಲ ಪುಸ್ತಕದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿವೆ. ಲಾಕ್‌ಡೌನ್ ಬೇಸರವನ್ನು ತೊಡೆದು ಹಾಕಲು ಜನರನ್ನು ಪುಸ್ತಕ ಓದಿಸಲು ಹಚ್ಚುವುದು ಒಳ್ಳೆಯ ಕ್ರಮವೇ.