ಕರ್ನಾಟಕದಲ್ಲಿ ಮಾರ್ಗ ತಪ್ಪಿದ ಮುಂಗಡ ಪತ್ರದ ನೀತಿ
ಅಭಿವ್ಯಕ್ತಿ
ಪ್ರೊ.ಜಿ.ವಿ.ಜೋಶಿ
ಈಗಿರುವ ಎಲ್ಲಾ ಹಣಕಾಸಿನ ಸಂಕಷ್ಟಗಳಿಗೆ ಕರೋನಾ ಒಂದೇ ಕಾರಣವೆಂದು ಹೇಳುವುದು ಖಂಡಿತ ಸರಿಯಲ್ಲ. ಕರೋನಾ ದಂತೆ ಅಪಾಯಕಾರಿಯಾದ ಆರ್ಥಿಕ ನೀತಿಯಿಂದಲೂ, ಬೇಕಾಬಿಟ್ಟಿ ಸರಕಾರಿ ವೆಚ್ಚದಿಂದಲೂ ರಾಜ್ಯ ಈಗ ತತ್ತರಿಸಿಹೋಗುತ್ತಿದೆ. ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂದು ಕವಿಯೊಬ್ಬ ಹಾರೈಸಿ ಹೆಸರು ಮಾಡಿ ದ್ದರು. ಹೇಗೋ ಕನ್ನಡ ನಾಡು ಉಳಿದುಕೊಂಡುಬಿಟ್ಟಿದೆ ಎಂದು ಸಮಾಧಾನಪಡಬೇಕೆ?. ಇಲ್ಲಿ ಕತ್ತಿಯಂತೆ(!) ಭೀತಿ ಹುಟ್ಟಿಸುತ್ತಿರುವ ಹದತಪ್ಪಿದ ಹಣಕಾಸಿನ ಸ್ಥಿತಿಯನ್ನು ನೋಡಿದರೆ ಇದು ಚೆಲುವ ಕನ್ನಡ ನಾಡು ಎಂದು ಶುದ್ಧ ಕುರೂಪಿ ಕೂಡ ಹೇಳಲು ಸಾಧ್ಯವಿಲ್ಲ.
ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದವರೇ ಹೆಚ್ಚು ಕಡಿಮೆ15ವರ್ಷಗಳಿಂದ ಹಣಕಾಸಿನ ಶಾಖೆಯನ್ನೂ ನಿರ್ವಹಿಸು ವಾಗ ತಮ್ಮ ಸುಪರ್ದಿಯ ಇರುವ ಹಣಕಾಸಿನ ವಿಭಾಗದ ತಜ್ಞ ಅಧಿಕಾರಿಗಳ ಸಲಹೆಗಳನ್ನು ನಿರ್ಲಕ್ಷಿಸುತ್ತಿರುವುದು ಅಪಾಯ ಕಾರಿ ಬೆಳವಣಿಗೆ.
ಸಾಮಾನ್ಯವಾಗಿ ರಾಜ್ಯದ ಬಜೆಟ್ ನೀತಿಗೆ ತಳಹದಿಯಾಗಬೇಕಾದ ಗರಿಷ್ಠ ಸಾಮಾಜಿಕ ಲಾಭದ ತತ್ತ್ವ ಎಲ್ಲಾ ಹೋಗಿ ಬಿಟ್ಟಿದೆ. ಈಗಿರುವ ಎಲ್ಲಾ ಹಣಕಾಸಿನ ಸಂಕಷ್ಟಗಳಿಗೆ ಕರೋನಾ ಒಂದೇ ಕಾರಣವೆಂದು ಹೇಳುವುದು ಖಂಡಿತ ಸರಿಯಲ್ಲ. ಕರೋನಾ ದಂತೆ ಅಪಾಯಕಾರಿಯಾದ ಆರ್ಥಿಕ ನೀತಿಯಿಂದಲೂ, ಬೇಕಾಬಿಟ್ಟಿ ಸರಕಾರಿ ವೆಚ್ಚದಿಂದಲೂ ರಾಜ್ಯ ಈಗ ತತ್ತರಿಸಿಹೋಗುತ್ತಿದೆ.ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂದು ಕವಿಯೊಬ್ಬ ಹಾರೈಸಿ ಹೆಸರು ಮಾಡಿದ್ದರು.
ಹೇಗೋ ಕನ್ನಡ ನಾಡು ಉಳಿದುಕೊಂಡುಬಿಟ್ಟಿದೆ ಎಂದು ಸಮಾಧಾನಪಡಬೇಕೆ?. ಇಲ್ಲಿ ಕತ್ತಿಯಂತೆ(!) ಭೀತಿ ಹುಟ್ಟಿಸುತ್ತಿರುವ ಹದತಪ್ಪಿದ ಹಣಕಾಸಿನ ಸ್ಥಿತಿಯನ್ನು ನೋಡಿದರೆ ಇದು ಚೆಲುವ ಕನ್ನಡ ನಾಡು ಎಂದು ಶುದ್ಧ ಕುರೂಪಿ ಕೂಡ ಹೇಳಲು ಸಾಧ್ಯವಿಲ್ಲ. ಹಣಕಾಸಿನ ವಿಭಾಗದ ಅನುಭವಿ ಅಧಿಕಾರಿಗಳ ಸಲಹೆ – ಸೂಚನೆಗಳನ್ನು ನಿರ್ಲಕ್ಷಿಸುವ ರೂಢಿ ಕಾಂಗ್ರೆಸ್ ಸರಕಾರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಭಾಗ್ಯ ಪಡೆದಾಗ ಜೋರಾಗಿ ಕಾಣಿಸಿಕೊಂಡಿತು.
ಹಿಂದೆ ವಿತ್ತ ಸಚಿವರಾಗಿ ಗರಿಷ್ಠ ಸಾಮಾಜಿಕ ಹಿತದ ಆಧಾರದಲ್ಲಿ ಕಾರ್ಯ ನಿರ್ವಹಿಸಿ ಕ್ಷಮತೆ ತೋರಿದ್ದ ಸಿದ್ದು ಮುಖ್ಯಮಂತ್ರಿ ಯಾದ ಮೇಲೆ ಬದಲಾಗಿ ಬಿಟ್ಟರು. ಹೈಕಮಾಂಡ್ ದುರ್ಬಲವಾಗಿದ್ದೇ ಅವರ ಪಾಲಿಗೆ ಆಗ ವರವಾಗಿ ಹೋಗಿತ್ತು. ವಿತ್ತ ಖಾತೆ ಯನ್ನೂ ನಿರ್ವಹಿಸುತ್ತಿದ್ದ ಅವರು 2013ರಿಂದಲೇ ತಮ್ಮ ಬಜೆಟ್ ಗಿಂಡಿಯಿಂದ ಭಾಗ್ಯಗಳನ್ನು (ಅನ್ನ ಭಾಗ್ಯ, ಕ್ಷೀರ ಭಾಗ್ಯ ಇತ್ಯಾದಿ, ಇತ್ಯಾದಿ ) ಹರಿಸುವಾಗ ವಿತ್ತೀಯ ಶಿಸ್ತಿನತ್ತ ದೃಷ್ಟಿ ಕೂಡ ಹಾಯಿಸಲಿಲ್ಲ. ಭಾಗ್ಯಗಳು ತಲುಪಬೇಕಾದವರನ್ನು ತಲುಪಿದೆ ಯೋ, ಇಲ್ಲವೋ ಎನ್ನುವದನ್ನು ನೋಡುವ ಗೋಜಿಗೂ ಹೋಗಲಿಲ್ಲ.
ತಾವು ಸಾರಿದ ಭಾಗ್ಯ, ಸೌಭಾಗ್ಯಗಳ ಪ್ರಶಂಸೆಯನ್ನು ತಾವೇ ಮಾಡಿಕೊಳ್ಳುತ್ತ ಬೀಗುತ್ತಿದ್ದ ಸಿದ್ದರಾಮಯ್ಯನವರಿಗೆ 2018ರ ವಿಧಾನ ಸಭಾ ಚುನಾವಣೆಯಲ್ಲಿ ಆರಿಸಿ ಬಂದು ಮತ್ತೆ ವಿಧಾನ ಸಭೆಗೆ ಹೋಗುವುದೇ ದೊಡ್ಡ ಸವಾಲಾಗಿ ಹೋಯಿತಲ್ಲ! ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯ ಸೋಲು, ಬಾದಾಮಿ ಕ್ಷೇತ್ರದಲ್ಲಿ ಸೋಲಿನ ಸಮೀಪದ ಗೆಲುವು ಅವರ ಪಾಲಿಗೆ ಒದಗಿ ಬಂದ ಮಹಾ ಭಾಗ್ಯ!
2008-13ರ ಅವಧಿಯಲ್ಲಿ ಬಿಜೆಪಿ ಸರಕಾರವಿದ್ದಾಗ ನಾಡನ್ನು ಅದು ಸಾಲದ ಕೂಪಕ್ಕೆ ತಳ್ಳುತ್ತಿದೆ ಎಂದು ವಿರೋಧ ಪಕ್ಷದ ನಾಯಕರಾಗಿ ಅಬ್ಬರಿಸುತ್ತಿದ್ದರು ಸಿದ್ದು. ಮುಖ್ಯಮಂತ್ರಿಯಾಗಿ 2016ರ ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ ಮೇಲೆ ಒಟ್ಟು 1.80,815 ಕೋಟಿ ಸಾಲ ಇರುತ್ತದೆಂದು ವಿಧಾನ ಸಭೆಯ ತಿಳಿಸಿದಾಗ ಅವರೇ ಸೃಷ್ಟಿಸಿದ ಭಾಗ್ಯಗಳ ಭಾರದ ಪರಿಚಯವಾಗಿತ್ತು.
ಎಚ್.ಡಿ. ಕುಮಾರಸ್ವಾಮಿ ಅಚಾನಕ್ ಆಗಿ 2018ರಲ್ಲಿ ಮುಖ್ಯಮಂತ್ರಿ ಗದ್ದುಗೆ ಏರಿ ಚಡಪಡಿಸುತ್ತ, ಒಟ್ಟು34ಸಾವಿರ ಕೋಟಿ ರು.ಗಳ ರೈತರ ಸಾಲ ಮನ್ನಾ ಮಾಡಿ ಮನ್ನಾಭಾಯ’ ಆಗಿದ್ದೇನೋ ನಿಜ. ಅದರಿಂದ ತಲೆದೋರಿದ ಕೊರತೆ ನೀಗಲು ಎಚ್‌ಡಿಕೆ ಪೆಟ್ರೋಲ, ಡಿಸೇಲ್ ಮತ್ತು ವಿದ್ಯುತ್ ದರಗಳನ್ನು ಏರಿಸಿದ್ದರಿಂದ, ವಾಹನ ತೆರಿಗೆಯನ್ನು ಹೆಚ್ಚಿಸಿದ್ದರಿಂದ ಸಾಲ ಮನ್ನಾಪ್ರಯೋಗ ಪ್ರೇರಿತ ಬಜೆಟ್ ಒಂದು ಸಾಧನೆಯಾಗುವ ಬದಲು ಜನಸಾಮಾನ್ಯರ ಪಾಲಿಗೆ ವೇದನೆಯಾಗಿ ಹೋಯಿತು.
ತಮ್ಮ 2019-20ನೇ ಸಾಲಿನ ಬಜೆಟ್‌ನಲ್ಲಿ ಎಚ್‌ಡಿಕೆ ಸುಮಾರು18ಜಾತಿ ಆಧಾರಿತ ಪೀಠ, ಮಠಗಳಿಗೆ ಪ್ರಸಾದವನ್ನುಹೋಲುವ ತಲಾ ಒಂದು ಕೋಟಿ ರು.ಗಳ ಅನುದಾನ ಕರುಣಿಸಿ ಅಸಾಮಾನ್ಯ ರೀತಿಯಲ್ಲಿ ಸಮಾನತೆಯ ಧೋರಣೆ ಪ್ರದರ್ಶಿಸಿ ಬಿಟ್ಟರು. ಅವರೇ ಟೀಕಿಸುತ್ತಿದ್ದ ಮಠ – ಮಾನ್ಯರಿಗೆ ಅನುದಾನ ನೀಡಿದ 2008-13ರ ಅವಧಿಯ ಬಿಜೆಪಿ ಸರಕಾರದ ಕಾರ್ಯ ವೈಖರಿಯನ್ನೇ ಮನ್ನಿಸಿಬಿಟ್ಟರು. ಯಾವ ಕಾರಣಕ್ಕೋ ಏನೋ ಇಸ್ರೇಲ್ ದೇಶದ ಕೃಷಿ ಕರ್ನಾಟಕಕ್ಕೆ ಮಾದರಿ ಎಂದು ಬಜೆಟ್‌ನ ಸಾರಿ ಬಿಟ್ಟರು. ಮಿತಿ ಮೀರಿದ ಸಾಲದ ಭಾರ ಅವರ ಬಜೆಟ್ ನೀತಿ ನೀಡಿದ ದೊಡ್ಡ ಬಳವಳಿಯಾಗಿದ್ದಂತೂಹೌದು. ರಾಜ್ಯಕ್ಕೆ ಬೇಕಾದ ಗರಿಷ್ಠ ಸಾಮಾಜಿಕ ಲಾಭದ ತತ್ತ್ವ ಮಣ್ಣಿನ ಮಗನ ಮಗನಾದ ಎಚ್‌ಡಿಕೆಯ ಬಳಿ ಸುಳಿಯದೆ ಹೆದರಿ ಓಡಿ ಹೋಗಿತ್ತು!
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವಾಗಲೇ ಎನ್.ಕೆ.ಸಿಂಗ್ ನೇತೃತ್ವದ15ನೇ ಹಣಕಾಸಿನ ಆಯೋಗ ರಾಜ್ಯಕ್ಕೆ ಭೇಟಿ ನೀಡಿ 2019ರ ಜೂನ್25ರಂದು ಭಾರತದ ನಕಾಶೆಯಲ್ಲಿ ಒಂದೇ ರಾಜ್ಯವಾದ ಕರ್ನಾಟಕದಲ್ಲಿ ಎರಡು ರಾಜ್ಯಗಳಿವೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದು ದಾಖಲೆಗೆ ಸೇರಿದೆ. ಒಂದು ಸಮೃದ್ಧಿಯಿಂದ ಕೂಡಿರುವಂತಹದ್ದಾದರೆ, ಇನ್ನೊಂದು ಬಡತನದಿಂದ ಬಳಲು ವಂಥದ್ದು. ಈ ಅಸಮಾನತೆಯನ್ನು ನಿವಾರಿಸಬೇಕೆಂದು ಆಯೋಗ ತಿಳಿಸಿದ್ದನ್ನು ಯಾವುದೇ ಪಕ್ಷಅಽಕಾರದಲ್ಲಿರಲಿ ಅಲಕ್ಷಿಸುವಂತಿಲ್ಲ.
ತಲಾ ಆದಾಯದ ಪ್ರಮಾಣ ಭಾರತದ ಸರಾಸರಿಗಿಂತ ಹೆಚ್ಚು ಇರುವ ರಾಜ್ಯದ ಶೇ.21ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿರಲು ಹೇಗೆ ಸಾಧ್ಯ ಎಂದು ಅದು ಕೇಳಿದ ಪ್ರಶ್ನೆಗೆ ಹಿಂದೆ ಸಮಾಜವಾದಿಯಾಗಿದ್ದ ಸಿದ್ದರಾಮಯ್ಯನವರಾಗಲಿ, ಹಿಂದೊಮ್ಮೆ ಸಮಾಜವಾದದ ಜಾಗಟೆ ಬಾರಿಸಿದ್ದ ಕಾಂಗ್ರೆಸ್ ಪಕ್ಷದ ಧುರೀಣ ಡಿಕೆಶಿಯಾಗಲಿ, ಜಾತ್ಯಾತೀತ ಜನತಾದಳದ ಮಹಾನಾಯಕ ಬಡವರ ಬಂಧು ಎಚ್ ಡಿಕೆಯಾಗಲಿ, ವಿರೋಧ ಪಕ್ಷದ ನಾಯಕರಾಗಿ ಮಿಂಚಿದರೂ ಮುಖ್ಯಮಂತ್ರಿಯಾಗಿ ಕೊಂಚವೂಶಾಂತಿಯಿಲ್ಲದ ಯಡಿಯೂರಪ್ಪನವರಾಗಲಿ ಈ ತನಕ ಉತ್ತರ ಕೊಡುವ ಗೋಜಿಗೇ ಹೋಗಿಲ್ಲ.
ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ನಿರೀಕ್ಷಿತ ಪ್ರಗತಿ ಸಾಧನೆ ಮಾಡದಿರುವುದು, ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಗಣನೀಯ ಪ್ರಮಾಣ ದಲ್ಲಿರುವುದು, ಬರಗಾಲದ ಸಮಸ್ಯೆ ಆಗಾಗ ತೀವ್ರವಾಗುತ್ತಿದ್ದರೂ ಅನೇಕ ನೀರಾವರಿ ಯೋಜನೆಗಳನ್ನು ಪೂರ್ತಿ ಗೊಳಿಸಲು ರಾಜ್ಯ ಸರಕಾರ ಆಸಕ್ತಿ ವಹಿಸದಿರುವುದು – ಹೀಗೆ ಬಿಗಿಯಾದ ಸಮಸ್ಯೆ ಗಳತ್ತ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರದ ಲಕ್ಷ್ಯ ಸೆಳೆಯುವ ಪ್ರಯತ್ನವನ್ನು15ನೇ ಹಣಕಾಸಿನ ಆಯೋಗ ಮಾಡಿತ್ತು. ಅದನ್ನೆಲ್ಲ ಕುಮಾರಸ್ವಾಮಿ ಅಧ್ಯಯನ ಮಾಡುವ ಗೋಜಿಗೇ ಹೋಗಲಿಲ್ಲ.
ಮುಖ್ಯಮಂತ್ರಿಯೇ ಹಣಕಾಸಿನ ಮಂತ್ರಿಯಾದರೆ ತಲೆದೋರುವ, ಮುಂಗಡ ಪತ್ರದ ಬಿಕ್ಕಟ್ಟುಗಳಿಗೆ, ಬೇಡವಾದ ಆರ್ಥಿಕ ಏರು – ಪೇರುಗಳಿಗೆ ಕರ್ನಾಟಕ ಸಾಕ್ಷಿಯಾಗಿ ನಿಂತುಕೊಂಡಿದೆ. ರಾಜ್ಯದಲ್ಲಿ ಪ್ರಶಂಸನೀಯ ಕೆಲಸ ಮಾಡಿದ ಉನ್ನತ ಮಟ್ಟದ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿಯ ಅಧ್ಯಕ್ಷರಾಗಿದ್ದ ಆರ್ಥಿಕ ತಜ್ಞ (ಈ ಲೇಖಕನ ಗುರು) ಡಿ.ಎಂ. ನಂಜುಡಪ್ಪ2018ರಲ್ಲಿ ಪ್ರಕಟವಾದ ಪ್ರಧಾನ ಲೇಖನದಲ್ಲಿ ಕಡಿಮೆ ಪ್ರಮಾಣದ ಪ್ರಾದೇಶಿಕ ಅಸಮತೋಲನವುಳ್ಳ, ಕಡಿಮೆ ಪ್ರಮಾಣದ ಆದಾಯದ ಅಸಮಾನತೆಯುಳ್ಳ ಸಮೃದ್ಧ ಕರ್ನಾಟಕದ ಕನಸು ಕಂಡಿದ್ದರು.
ಆ ಕನಸು ಈಡೇರುವ ಯಾವ ಲಕ್ಷಣವೂ ಈಗಲೂ ಗೋಚರಿಸುತ್ತಿಲ್ಲವೆನ್ನುದಕ್ಕೆ15ನೇ ಹಣಕಾಸಿನ ಸಮಿತಿ ನೀಡಿದ ಗಟ್ಟಿಯಾದ ಹೇಳಿಕೆಗಳೇ ಆಧಾರ. ಈಗಲೂ ತಮಗೆ ಅವಕಾಶ ಸಿಕ್ಕಾಗೆಲ್ಲ ಉತ್ತರ ಕರ್ನಾಟಕದ ಆರ್ಥಿಕ ಹಿಂದುಳಿದಿರು ವಿಕೆಯನ್ನೇ ಬಂಡವಾಳ ವಾಗಿಟ್ಟುಕೊಂಡು ಆಟ ಆಡುವ ರಾಜಕೀಯ ಧುರೀಣರು ಸುಲಭದಲ್ಲಿ ಕಾಣುತ್ತಾರೆ. ಅನೇಕ ಕಾರಣಗಳಿಂದ ಅನಪೇಕ್ಷಿತ ಬದಲಾವಣೆ ಗಳಾಗಿರುವಾಗ2002ರ ಪ್ರಕಟವಾದ ನಂಜುಂಡಪ್ಪ ವರದಿ ರಾಜ್ಯದ ಬಜೆಟ್ ನೀತಿಗೆ ಈಗೇಷ್ಟು ಪ್ರಸ್ತುತ ಎಂದು ಕೂಡ ಕೇಳಬೇಕಾದ ದುರ್ಧರ ಪ್ರಸಂಗ ಬಂದುಬಿಟ್ಟಿದೆ.
ಮೊದಲನೆಯ ಸುತ್ತಿನ ಕರೋನಾ ಸೃಷ್ಟಿಸಿದ ಆರ್ಥಿಕ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುವ 2020-21ರ ರಾಜ್ಯ ಆರ್ಥಿಕ ಸಮೀಕ್ಷೆ ಕಳೆದ ಹತ್ತಾರು ವರ್ಷಗಳಿಂದ ಹದ ತಪ್ಪಿದ ಸರಕಾರದ ಹಣಕಾಸಿನ ಸ್ಥಿತಿಗತಿಯನ್ನೂ ಸ್ಪಷ್ಟವಾಗಿ ಪರಿಚಯಿಸುತ್ತದೆ, ರಾಜ್ಯದ ಜನತೆಯ ಮೇಲೆ ಬೀಳುವ ಸಾಲದ ಭಾರ3.68ಲಕ್ಷ ಕೋಟಿ ಇದೆಯೆಂದು ಅದು ಎಚ್ಚರಿಸಿತ್ತು. ಸಮೀಕ್ಷೆ ತಿಳಿಸಿದಂತೆ ರಾಜ್ಯದ ಒಟ್ಟು ವರಮಾನದ ಶೇ.7ರಷ್ಟು ಮಾತ್ರ ಅಭಿವೃದ್ಧಿಗೆ ಲಭ್ಯವಾಗುತ್ತದೆ. ಮಿಕ್ಕ ಆದಾಯವೆಲ್ಲ ಸಂಬಳ, ಗೌರವ ಧನ, ಪಿಂಚಣಿ, ಬಡ್ಡಿ ಪಾವತಿಯ ಬದ್ಧತಾ ವೆಚ್ಚಗಳಿಗೇ ಖರ್ಚಾಗುವಂತಾಗಲು ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಕಾರ್ಯ ವೈಭವವೂ ಕಾರಣ.
‘ಜನಪ್ರಿಯ ಯೋಜನೆಗಳಿಗೆ ಹಣ ಹೊಂದಿಸಲು ಇನ್ನೂ ಹೆಚ್ಚಿನ ಸಾಲ ಮಾಡುವುದು ಅನಿವಾರ್ಯವಾಗಲಿದೆ ಎಂದು ಸಮೀಕ್ಷೆ ತಿಳಿಸಿದ್ದು ಎಚ್ಚರಿಕೆಯೇ..ಆಗಿದೆ.’ 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ವೇಳೆಗೆ 2022ರ ಮಾರ್ಚ್ ಅಂತ್ಯಕ್ಕೆ ಕರ್ನಾಟಕದ ಒಟ್ಟು ಸಾಲದ ಮೊತ್ತ 4,57,899 ಕೋಟಿ ರು.ಗಳಾಗಬಹುದೆಂಬ ಕಳವಳಕಾರಿ ಮಾಹಿತಿ ಹೊರಬಂದಿತ್ತು. ಈಗ ಜೂ.7ರ ವರೆಗೆ ಕನ್ನಡ ನಾಡು ಲಾಕ್ ಡೌನ್ ರಾಜ್ಯವಾಗಿ ಮುಂದುವರಿಯುವ ನಿರ್ಧಾರ ಘೋಷಣೆಯಾಗಿದೆ.
ಹಸ್ತಿನಾವತಿ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಹತಾಶರಾಗಿದ್ದಲ್ಲದೆ ಆರ್ಥಿಕವಾಗಿ ಸೋತುಹೋದ ನಾಡಿನ ಮುಖ್ಯಮಂತ್ರಿ ಯಾದ ಯಡಿಯೂರಪ್ಪ ನವರನ್ನು ಕಂಡು ಪಾಪ’ ಎಂದು ಕನಿಕರ ಪಡುವವರು ಅವರೇ ಪಕ್ಷದ ಇಲ್ಲ! ಇದು ಸತ್ಯವೆನ್ನುವು ದನ್ನು ಅತೃಪ್ತ ಸಚಿವ ಮಾಧುಸ್ವಾಮಿಯಂತೂ ಆಗಾಗ ಸಾಬೀತು ಪಡಿಸುತ್ತಿದ್ದಾರೆ. ಬೇಗನೆ ಸಿಡಿಮಿಡಿಗೊಳ್ಳುವ ಸ್ವಭಾವ ದವರಾದ, ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಇದೆಲ್ಲವನ್ನೂ ಈಗ ಸಹಿಸಿಕೊಳ್ಳಬೇಕಾಗಿದೆ.