ಕರೋನಾ ಸಂಕಷ್ಟದಲ್ಲಿ ನಾಯಕತ್ವ ಹೇಗಿರಬೇಕು ?
ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
‘ನಗುವಿನಲ್ಲಿ ಜತೆಯಾಗಿರದಿದ್ದರೂ, ಅಳುವಿನಲ್ಲಿ ಒಂದಾಗಿರಿ’ ಎನ್ನುವ ಮಾತೊಂದಿದೆ. ಈ ಮಾತನ್ನು ಸ್ನೇಹ, ಸಂಬಂಧಗಳನ್ನುಪ್ರಾರಂಭಿಸಿ, ಬೆಳೆಸಿಕೊಳ್ಳಬೇಕಾದ ಸಮಯದಲ್ಲಿ ಹೇಳುತ್ತಾರೆ.
ಸ್ನೇಹಿತನ ಮದುವೆ ಮನೆಗೆ ಹೋಗದಿದ್ದರೂ ಪರವಾಗಿಲ್ಲ, ವೈರಿಯ ಸಾವಿನ ಮನೆಯನ್ನು ಹೊಕ್ಕು ಸಂತೈಸಿ, ಸಹಾಯ ಮಾಡಬೇಕು ಎನ್ನುವ ಮಾತಿದೆ. ಈ ಎಲ್ಲ ಮಾತುಗಳನ್ನು ಈಗೇಕೆ ನೆನಪಿಸಿಕೊಳ್ಳಬೇಕು? ಇಂದಿನ ಪರಿಸ್ಥಿತಿಯಲ್ಲಿ ಒಬ್ಬರ ಮನೆಗೆ ಒಬ್ಬರು ಹೋಗಲು ಸಾಧ್ಯವಾಗದ ಸ್ಥಿತಿಯಲ್ಲಿರುವಾಗ ಎಲ್ಲಿಯ ಸ್ನೇಹಿತ, ಎಲ್ಲಿಯ ವೈರಿ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡ ಬಹುದು.
ಆದರೆ ಈ ಎಲ್ಲ ಮಾತುಗಳನ್ನು ಕೇವಲ ಸಂಬಂಧಗಳಿಗೆ ಸೀಮಿತಗೊಳಿಸುವ ಬದಲು, ರಾಜಕೀಯ ವಿಷಯದಲ್ಲಿಯೂ ತೆಗೆದುಕೊಳ್ಳಬೇಕಿದೆ. ಕರೋನಾ ಸಂಕಷ್ಟ ಕಾಲದಲ್ಲಿ ನಾಯಕನೊಂದಿಗೆ ಎಲ್ಲರೂ ಒಂದಾಗಿ ಇರಬೇಕಿದೆ. ಆದರೆ ಭಾರತ ಅಥವಾ ಕರ್ನಾಟಕದ ಮಟ್ಟಿಗೆ ಕಳೆದೊಂದು ವರ್ಷದಲ್ಲಿ ನೋಡಿದರೆ, ಈ ರೀತಿಯ ಪ್ರಯತ್ನ ಎಂದಿಗೂ ನಡೆದಿಲ್ಲ. ಆಡಳಿತ ಮತ್ತು ಪ್ರತಿಪಕ್ಷಗಳು ಎಂದ ಮಾತ್ರಕ್ಕೆ ಜಗಳವಾಡಿಕೊಂಡೇ ಇರಬೇಕು ಎನ್ನುವುದಲ್ಲ.
ಅದರಲ್ಲಿಯೂ ಸಂಕಷ್ಟ ಕಾಲದಲ್ಲಿ ಒಂದಾಗಿರಬೇಕು. ಆದರೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಇದಾಗುತ್ತಿಲ್ಲ. ಪ್ರತಿಪಕ್ಷ ಎಂದ ಮಾತ್ರಕ್ಕೆ, ಆಡಳಿತ ಪಕ್ಷದ ಪ್ರತಿ ಹೆಜ್ಜೆಯಲ್ಲಿಯೂ ತಪ್ಪು ಹುಡುಕುವುದು ಎನ್ನುವುದಾಗಿದೆ. ಆದರೆ ಈ ಸಮಯದಲ್ಲಿ ಪ್ರತಿಪಕ್ಷ ಗಳು ಕೇವಲ ತಪ್ಪು ಹುಡುಕುವ ಬದಲು, ಸರಕಾರದಿಂದ ಆಗಬೇಕಿರುವ ಕೆಲಸ ಹಾಗೂ ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡಬೇಕಿದೆ. ಈ ವಿಷಯದಲ್ಲಿ ಕೇವಲ ಪ್ರತಿಪಕ್ಷಗಳನ್ನು ದೂರುವುದಷ್ಟೇ ಅಲ್ಲ. ಆಡಳಿತ ಪಕ್ಷದ ತಪ್ಪು ಇದೆ ಎನ್ನುವುದನ್ನು ಮರೆಯಬಾರದು.
ಅಧಿಕಾರದ ಚುಕ್ಕಾಣಿ ಹಿಡಿದ ಮಾತ್ರಕ್ಕೆ, ಪ್ರತಿಪಕ್ಷಗಳಿಂದ ಏನೂ ಕೇಳದೇ ನಾ ನಡೆದದ್ದೆ ದಾರಿ ಎನ್ನುವ ರೀತಿಯಲ್ಲಿರಬಾರದು.ಕರ್ನಾಟಕದ ವಿಷಯದಲ್ಲಿಯೇ ಹೇಳುವುದಾದರೆ, ಕರೋನಾ ಎರಡನೇ ಅಲೆ ಶುರುವಾದಾಗಿನಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು 12ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದಾರೆ. ಇದರೊಂದಿಗೆ ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಹಲವು ಸಚಿವರಿಗೆ ಪತ್ರ ಬರೆದರೂ ಅದಕ್ಕೆ ಪ್ರತಿಕ್ರಿಯೆ ಸಿಗುತ್ತಿಲ್ಲ ಎನ್ನುವ ಆರೋಪ ವಿದೆ. ಅಂದರೆ ಸಿದ್ದರಾಮಯ್ಯ ಅವರು ಉತ್ತಮ ಸಲಹೆ ನೀಡಿದರೂ ಅದನ್ನು ಪರಿಗಣಿಸಬಾರದು ಎನ್ನುವ ಕಾನೂನು ಏನಾದರೂ ಇದೆಯೇ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಾಗಲಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ ಇಂಥ ಸಂಕಷ್ಟ ಕಾಲದಲ್ಲಿ ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ. ಪ್ರತಿಪಕ್ಷಗಳನ್ನೂ ವಿಶ್ವಾಸಕ್ಕೆ ತಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕೇವಲ ಸಚಿವ ಸಂಪುಟದಲ್ಲಿರುವವರನ್ನೇ ಬಳಸಿಕೊಂಡು ಕರೋನಾ ನಿರ್ವಹಣೆಗೆ ಸಮಿತಿಗಳನ್ನು ರಚಿಸುವ ಬದಲು, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.
ಪ್ರತಿಪಕ್ಷದಲ್ಲಿರುವ ತಜ್ಞರು ಹಾಗೂ ವೈದ್ಯಕೀಯ ಹಿನ್ನೆಲೆಯಿರುವ ಅಥವಾ ಈ ಹಿಂದೆ ಆರೋಗ್ಯ ಇಲಾಖೆಯನ್ನು ನಿರ್ವಹಿಸಿ ರುವ ನಾಯಕರಿದ್ದರೆ ಅವರನ್ನು ತಂಡದಲ್ಲಿ ಸೇರಿಸಿಕೊಂಡು ಸರಾಗವಾಗಿ ಕಾರ್ಯನಿರ್ವಹಿಸುವುದಕ್ಕೆ ಬೇಕಿರುವ ಅಗತ್ಯ ಸಲಹೆಗಳನ್ನು ಬಳಸಿಕೊಳ್ಳಿ. ಇಡೀ ದೇಶಕ್ಕೆ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿರುವ ಈ ಸಮಯದಲ್ಲಿ ಈ ರೀತಿಯಬದಲಾವಣೆಗಳು ಅಗತ್ಯ. ಕರೋನಾ ಮೊದಲ ಅಲೆಯ ವೇಳೆ ಇಂದಿನ ಭಾರತದ ಸ್ಥಿತಿ, ಇಟಲಿಯಲ್ಲಿ ನಿರ್ಮಾಣವಾಗಿತ್ತು. ಆ ಸಮಯದಲ್ಲಿ ಅಲ್ಲಿನ ಆಡಳಿತ ಪಕ್ಷದವರು, ಕೇವಲ ನಮ್ಮಿಂದಲೇ ಎಲ್ಲವೂ ಆಗಬೇಕು ಎನ್ನುತ್ತಾ ಕೂರುವ ಬದಲು, ಪ್ರತಿಪಕ್ಷ  ದಲ್ಲಿರುವ ನಾಯಕರನ್ನು ಬಳಸಿಕೊಂಡು ಆರೋಗ್ಯ ಖಾತೆಯ ನಿರ್ವಹಣೆ ಮಾಡಬೇಕು. ಈ ರೀತಿಯ ತೀರ್ಮಾನಗಳು ಭಾರತ ದಂಥ ದೊಡ್ಡ ರಾಷ್ಟ್ರಗಳಲ್ಲಿ ಅನಿವಾರ್ಯವಾಗುತ್ತದೆ.
ಆದರೆ ಆಡಳಿತ ನಡೆಸುವ ಪಕ್ಷಗಳು, ಪ್ರತಿಪಕ್ಷಗಳು ನಮಗಿಂತ ಚೆನ್ನಾಗಿ ಕೆಲಸ ಮಾಡಿದರೆ ಎಲ್ಲಿ ತಮ್ಮ ಘನತೆಗೆ ಧಕ್ಕೆಯಾಗು ವುದೋ ಎನ್ನುವ ರೀತಿಯಲ್ಲಿ ವರ್ತಿಸಲು ಶುರು ಮಾಡಿದರು. ಇದಕ್ಕೆ ಎರಡು ಉದಾಹರಣೆ ನೀಡಲು ಬಯಸುತ್ತೇನೆ. ಮೊದಲನೆಯದ್ದಾಗಿ ದೆಹಲಿಯಲ್ಲಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ತಮ್ಮ ಸಂಘಟನೆಯ ಕಾರ್ಯಕರ್ತರನ್ನು ಬಳಸಿಕೊಂಡು ಇಡೀ ದೇಶದಲ್ಲಿ ಕೋವಿಡ್ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದರು. ಆದರೆ ಇದಕ್ಕೆ ಕೊಂಕು ಎತ್ತಿದ ದೆಹಲಿಯ ಬಿಜೆಪಿ ಹಾಗೂ ಆಮ್ ಆದ್ಮಿ ಸದಸ್ಯರು ಶ್ರೀನಿವಾಸ್ ವಿರುದ್ಧ ದೂರು ನೀಡಿದರು!
ದೂರಿನ ಸಾರಾಂಶವಿಷ್ಟೇ ‘ಸರಕಾರದಿಂದ ಔಷಧಿ ಒದಗಿಸುವ ಕೆಲಸ ಆಗದಿದ್ದರೂ ಇವರು ಹೇಗೆ ಮಾಡುತ್ತಿದ್ದಾರೆ’ ಎನ್ನುವು ದಾಗಿದೆ. ಈ ಸಂಕಷ್ಟ ಸಮಯದಲ್ಲಿ ಸರಕಾರದ ಮೇಲಿನ ಒತ್ತಡವನ್ನು ಇಳಿಸುವ ಕೆಲಸವನ್ನು ಶ್ರೀನಿವಾಸ್ ಆಂಡ್ ಟೀಂ ಮಾಡುತ್ತಿರುವುದನ್ನು ಸ್ವಾಗತಿಸುವ ಬದಲು ಈ ರೀತಿ ದೂರು ನೀಡುವುದು ಎಷ್ಟು ಸರಿ ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇದೇ ರೀತಿ ಕರ್ನಾಟಕದಲ್ಲಿಯೂ ನಡೆಯಿತು.
ರಕ್ಷಾ ರಾಮಯ್ಯ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ವಾರ್ ರೂಂ ಸ್ಥಾಪಿಸಿ ತಮ್ಮ ಕೈಯಲ್ಲಿ ಆದ ಕೆಲಸವನ್ನುಮಾಡುತ್ತಿದ್ದರು. ಇದರೊಂದಿಗೆ ಬೆಂಗಳೂರಿನ ಸುತ್ತಮುತ್ತ 10ಸಾವಿರ ಐಸೋಲೇಷನ್ ಮೆಡಿಕಲ್ ಕಿಟ್‌ಗಳನ್ನು ಸಹ ವಿತರಿಸಿ ದ್ದರು. ಇದಕ್ಕೂ ಕೊಂಕು ತೆಗೆದ ಕೆಲ ಬಿಜೆಪಿಗರು ರಕ್ಷಾ ರಾಮಯ್ಯ ಸ್ಟಿರಾಯಿಡ್ ಹಂಚುತ್ತಿದ್ದಾರೆ ಎಂದು ಬೊಬ್ಬೆ ಹಾಕಿದರು. ಆದರೆ ಇದೇ ಔಷಽಯನ್ನು ಬಿಬಿಎಂಪಿ ವಿತರಿಸುತ್ತಿತ್ತು ಎನ್ನುವುದನ್ನು ಮರೆತರು.
ಇನ್ನು ಇಲ್ಲಿ ನಾಯಕತ್ವದ ಬಗ್ಗೆ ಮಾತನಾಡುವುದಾದರೆ, ಎರಡನೇ ಅಲೆಯ ಸಮಯದಲ್ಲಿ ಕರ್ನಾಟಕ ಸರಕಾರ ದಿಟ್ಟನಿರ್ಧಾರ ತಗೆದುಕೊಳ್ಳುವಲ್ಲಿ ವಿಫಲವಾಯಿತು ಎನ್ನುವುದು ಸ್ಪಷ್ಟ. ಮೊದಲ ಅಲೆಯನ್ನು ಯಶಸ್ವಿ ನಿಭಾಯಿಸಿದ್ದ ಕರ್ನಾಟಕ ಎರಡನೇ ಅಲೆಯಲ್ಲಿ ವಿಫಲವಾಗಲು ಕೆಲ ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ಈ ಹಿಂದೆ ಕರೋನಾ ಕಾಣಿಸಿಕೊಳ್ಳು ತ್ತಿದ್ದಂತೆ, ಕರ್ನಾಟಕದಲ್ಲಿ ಲಾಕ್ ಡೌನ್ ಘೋಷಿಸಲಾಯಿತು.
ಕೇಂದ್ರ ಸರಕಾರ ಘೋಷಿಸುವ ಮೊದಲೇ, ಕರ್ನಾಟಕ ಸರಕಾರ ಈ ನಿರ್ಧಾರ ತಗೆದುಕೊಂಡಿದ್ದರಿಂದ, ಸೋಂಕು ಹಬ್ಬಲುಸಾಧ್ಯವಾಗಲಿಲ್ಲ. ಆದರೆ ಈ ಬಾರಿ ತದ್ವಿರುದ್ಧದ ರೀತಿ ನಡೆದುಕೊಂಡಿತ್ತು. ಈಗ ಲಾಕ್‌ಡೌನ್ ಹೇರುವ ಬದಲು, 15 ದಿನಗಳ ಹಿಂದೆ ಈ ಲಾಕ್‌ಡೌನ್ ಹೇರಿದ್ದರೆ, ಸೋಂಕು ಈ ಮಟ್ಟಿಗೆ ಹಬ್ಬುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ದಿಟ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕಿದ್ದು, ಏಕೆ ಎನ್ನುವ ಪ್ರಶ್ನೆಗೆ ಅವರ ಸಂಪುಟದಲ್ಲಿರುವ ಬಹುತೇಕ ಸಚಿವರ ಬಳಿ ಉತ್ತರವಿಲ್ಲ.
ನಿರ್ಧಾರ ಪಡೆಯಲು ಯಡಿಯೂರಪ್ಪ ಅವರು ಹಿಂದೇಟು ಹಾಕುವುದಕ್ಕೆ ಪ್ರಮುಖವಾಗಿ ಎರಡು ಕಾರಣ, ಒಂದು ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಕರೋನಾ ಸಮಸ್ಯೆಯಿಂದಾಗಿ ಎದುರಾಗಿರುವ ಆರ್ಥಿಕ ಸಮಸ್ಯೆ. ಇದನ್ನು ಹೇಗೋ ನಿಭಾಯಿಸಬಹು ದಾದರೂ, ಲಾಕ್‌ಡೌನ್ ಎನ್ನುವ ಘೋಷಣೆಯನ್ನು ಸರಕಾರ ಮಾಡುತ್ತಿದ್ದಂತೆ, ಆ ಕಡೆ ಪ್ರತಿಪಕ್ಷದಿಂದ ‘ಲಾಕ್‌ಡೌನ್ ಪರಿಹಾರ ಘೋಷಿಸಿ’ ಎನ್ನುವ ಒತ್ತಾಯಗಳು ಶುರುವಾಗುತ್ತದೆ ಎನ್ನುವ ಆತಂಕ.
ಆದರೆ ಹಲವು ಒತ್ತಡಕ್ಕೆ ಮಣಿದು, ಲಾಕ್‌ಡೌನ್ ಘೋಷಿಸಲು ಸಿದ್ಧತೆ ಮಾಡಿಕೊಂಡ ಬೆನ್ನಲ್ಲೇ ಯಡಿಯೂರಪ್ಪ ಅವರು ನಿರೀಕ್ಷೆಮಾಡಿದಂತೆ ಪ್ರತಿಪಕ್ಷಗಳಿಂದ ಪ್ಯಾಕೇಜ್ ಘೋಷಿಸಿ ಎನ್ನುವ ಮಾತು, ಲಾಕ್‌ಡೌನ್ ಘೋಷಿಸುವ ಮೊದಲೇ ಕೇಳಿಬಂದಿತ್ತು. ಪ್ರತಿ ಪಕ್ಷಗಳ ಈ ನಡೆಯೇ ದೇಶದಲ್ಲಿ ಕರೋನಾ ನಿಯಂತ್ರಣ ಮಾಡುವುದಕ್ಕೆ ಯಾವುದೇ ಕಠಿಣ ಕ್ರಮ ಕೈಗೊಳ್ಳುವ ಮೊದಲು ಹತ್ತಾರು ಬಾರಿ ಯೋಚಿಸಬೇಕು ಎನ್ನುವ ರೀತಿಯಾಗಿದೆ.
ಪ್ರತಿಪಕ್ಷಗಳು ಸಂಕಷ್ಟ ಸಮಯದಲ್ಲಿ ಸರಕಾರಕ್ಕೆ ಸಹಕಾರ ನೀಡಬೇಕು ಎನ್ನುವುದು  ಸರಿಯಾಗಿದ್ದರೂ, ವಾಸ್ತವಿಕ ವಾಗಿ ಸಂಪೂರ್ಣ ಸಹಕಾರ ನೀಡುವುದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಸಹಕಾರ ಮಾಡದಿದ್ದರೂ ಪರವಾಗಿಲ್ಲ, ವ್ಯವಸ್ಥೆ ಬಗ್ಗೆ ಅನುಮಾನ ಹುಟ್ಟಿಸುವ ರೀತಿ ಹೇಳಿಕೆ ನೀಡುವುದು, ಪ್ರಶ್ನಿಸುವುದರಿಂದ ಯಾವ ಸಾಧನೆಯೂ ಆಗುವುದಿಲ್ಲ.ಕರೋನಾ ವಿಷಯದಲ್ಲಿ ಕೇಂದ್ರ ಸರಕಾರದ ಬಗ್ಗೆ ಕಾಂಗ್ರೆಸ್ ನ ಒಂದೊಂದು ಹೇಳಿಕೆಯನ್ನು ಗಮನಿಸಿದರೆ, ಅಲ್ಲಿ ನಮಗೆ ಕಾಣಿಸುವುದು ಕರೋನಾದ ಕಾಳಜಿಗಿಂತ ಹೆಚ್ಚಾಗಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕರೋನಾವನ್ನು ಬಳಸಿಕೊಂಡ ಹಾಗಿತ್ತು.
ಆದ್ದರಿಂದ ಆಡಳಿತ ಪಕ್ಷದ ತಪ್ಪುಗಳನ್ನು ಹೇಳುವುದರೊಂದಿಗೆ ಇಲ್ಲಿ ಪ್ರತಿಪಕ್ಷಗಳು ಆರಂಭದಿಂದ ಮಾಡುತ್ತಿರುವ ತಪ್ಪುಗಳನ್ನು ಉಲ್ಲೇಖಿಸಲೇಬೇಕು. ‘ಅನಿಷ್ಟಕ್ಕೆಲ್ಲ ಶನೇಶ್ವರ ಕಾರಣ’ ಎನ್ನುವ ರೀತಿ ವರ್ತಿಸುತ್ತಿದೆ. ಕರೋನಾ ಆರಂಭಗೊಂಡ ಕೆಲ ದಿನಗಳನ್ನು ಬಿಟ್ಟರೆ ಬಹುತೇಕ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಗೊಂಡ ಎಲ್ಲ ನಿರ್ಣಯಗಳನ್ನು ಪ್ರತಿಪಕ್ಷಗಳುವಿರೋಧಿಸುತ್ತಲೇ ಬಂದಿದೆ. (ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿ ಕೂತಿರುವ ರಾಜ್ಯ ಸರಕಾರಗಳ ವಿರುದ್ಧವೂ ಬಿಜೆಪಿ ಇದೇ ಕೆಲಸವನ್ನು ಮಾಡುತ್ತಿದೆ.)
ಕರೋನಾ ಕಾಣಿಸಿಕೊಂಡ ದಿನದಿಂದಲೂ, ಈ ಸೋಂಕಿನಿಂದ ಶಾಶ್ವತ ಪರಿಹಾರವೆಂದರೆ ಲಸಿಕೆ ಪಡೆಯುವುದು ಎನ್ನುವುದು ಎಲ್ಲರಿಗೂ ತಿಳಿದಿತ್ತು. ಇದೇ ವಾದವನ್ನು ಬಹುತೇಕ ದೇಶಗಳು ಹೇಳಿದ್ದವು. ಭಾರತ ಸರಕಾರ ಕರೋನಾ ಲಸಿಕೆಯನ್ನು ನೀಡಲುಶುರುಮಾಡುತ್ತಿದ್ದಂತೆ, ಕಾಂಗ್ರೆಸ್‌ನ ರಾಹುಲ್ ಗಾಂಧಿಯಿಂದ ಹಿಡಿದು ಎಲ್ಲ ನಾಯಕರು ‘ಇದೊಂದು ಬೋಗಸ್ ಲಸಿಕೆ’ ಎಂದು ಜರಿದರು. ಇದೇ ರೀತಿ ಜನರಲ್ಲಿ ಭಾವನೆ ವ್ಯಕ್ತವಾಗುವಂತೆ ನೋಡಿಕೊಂಡರು. ಇದರಿಂದಾಗಿ ಲಸಿಕೆ ಪಡೆಯಬೇಕು ಎಂದು ಕೊಂಡವರು ಈಗ ಬೇಡ ಎಂದು ಮುಂದಕ್ಕೆ ಹಾಕಲು ಶುರು ಮಾಡಿದರು.
ಇದರಿಂದಾಗಿ ಲಸಿಕೆ ಉತ್ಪಾದನಾ ಕಂಪನಿಗಳು ಲಸಿಕೆಯನ್ನು ಬೇರೆ ರಾಷ್ಟ್ರಕ್ಕೆ ಮಾರಲು ಮುಂದಾದವು. ಆದರೆ ಲಸಿಕೆ ಅಭಾವ ದೇಶದಲ್ಲಿ ಆರಂಭವಾಗುತ್ತಿದ್ದಂತೆ, ‘ಲಸಿಕೆ ಕೊಡಲು ಮೋದಿ ಸರಕಾರ ವಿಫಲವಾಗಿದೆ. ಸರಕಾರ ಸತ್ತು ಹೋಗಿದೆ’ ಎಂದೆಲ್ಲ ಮಾತನಾಡಿದರು. ಇದೇ ರೀತಿ ಲಾಕ್‌ಡೌನ್ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಬಹುತೇಕರು ಮೊದಲಿಗೆ ಒಂದು ಮಾತು. ಆನಂತರ ಇನ್ನೊಂದು ಮಾತನ್ನು ಆಡಿದರು. ಈ ರೀತಿ ದ್ವಿಮುಖ ನೀತಿಯನ್ನು ಹೊಂದಲು ಕಾಂಗ್ರೆಸ್ ಮುಂದೆ ಇದ್ದದ್ದು ಏಕೈಕ ಕಾರಣ ಎಂದರೆ ಅದು ‘ರಾಜಕಾರಣ’. ಇಡೀ ದೇಶಸಂಕಷ್ಟದಲ್ಲಿರುವ ಸಮಯದಲ್ಲಿ ಈ ರೀತಿಯ ರಾಜಕೀಯದಿಂದ ‘ಸಾಽಸುವುದಕ್ಕಿಂತ’ ಕಳೆದುಕೊಳ್ಳುವುದೇ ಹೆಚ್ಚು ಎನ್ನುವು ದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಕರೋನಾ ಸೋಂಕು ಕಾಣಿಸಿಕೊಂಡ ದಿನದಿಂದ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರು ‘ಕೋವಿಡ್ ಸಂಕಷ್ಟದಲ್ಲಿ ಸರಕಾರಕ್ಕೆ ಅಗತ್ಯ ಸರಕಾರ ನೀಡುತ್ತೇವೆ. ಸರಕಾರದ ಎಲ್ಲ ನೀತಿ – ನಿಯಮಗಳಿಗೂ ನಮ್ಮ ಬೆಂಬಲವಿದೆ’ ಎಂದು ಹೇಳಿಕೆಯನ್ನು ನಿತ್ಯ ನೀಡುತ್ತಿದ್ದಾರೆ. ಆದರೆ ಇದು ಹೇಳಿಕೆಗೆ ಮಾತ್ರ ಸೀಮಿತವಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ನೆರವನ್ನು ನೀಡುತ್ತೇವೆ ಎನ್ನುವ ಹೊತ್ತಲ್ಲೇ, ಸರಕಾರದ ಪ್ರತಿಹೆಜ್ಜೆಯನ್ನು ಟೀಕಿಸುತ್ತಾ ಸಾಗಿದರೆ ಇದಕ್ಕೆ ಅಂತ್ಯವೆನ್ನು ವುದು ಇರುವುದಿಲ್ಲ.
ರಾಜಕೀಯ ವಿಷಯದಲ್ಲಿ ರಾಜಕೀಯ ಮಾಡುವುದು ಅದು ಅವರವರ ರಾಜಕೀಯ ಧರ್ಮ. ಒಂದೊಂದು ವೃತ್ತಿಗೂ ಒಂದೊಂದು ಧರ್ಮವಿದ್ದಂತೆ, ರಾಜಕಾರಣಿಗಳಿಗೂ ರಾಜಕೀಯ ಮಾಡುವುದು ಧರ್ಮ. ಆದರೆ ಜನಪ್ರತಿನಿಧಿಗಳು ತಮ್ಮ ಧರ್ಮಕ್ಕಿಂತ ಮುಖ್ಯವಾಗಿ, ಇಂದಿನ ಅಗತ್ಯವೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ‘ಸಮಾಜಸೇವೆಯೇ ನಮ್ಮ ಉಸಿರು’ ಎನ್ನುವ ಮಾತನ್ನು ಹೇಳಿ ರಾಜಕೀಯಕ್ಕೆ ಪ್ರವೇಶ ಮಾಡುವವರು, ರಾಜಕೀಯ ದ್ವೇಷ, ಅಸೂಯೆ, ಸ್ವಹಿತಾಸಕ್ತಿಯನ್ನು ಬದಿಗಿಟ್ಟು ಒಂದಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ.