ಜೀವನವೆಂಬುದು ಸಾವಿಗೆ ಭಯಾನಕ ಪರ್ಯಾಯ ಎನ್ನುತ್ತಾನೆ ಹರ್ಮನ್‌ ಹೆಸ್‌
ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ಸಾವು ಹಲವು ಬಾರಿ ಹತ್ತಿರ ಬಂದು ಭುಜ ತಟ್ಟಿ ಹೋಗಿದೆ. ಸಮಾರಂಭಕ್ಕೆ ಮುಂಚೆಯೇ ಮುಖ್ಯ ಅತಿಥಿ ಬಂದು, ಆಯೋಜಕರೇಆಗಮಿಸಲಿಲ್ಲವಾಗಿ ಹೊರಗೆ ಹೋಗುತ್ತಾರಲ್ಲ, ಹಾಗೇನಾದರೂ ಯಮಭಟರು ಇಲ್ಲೇ ಎಲ್ಲಾದರೂ ಟೀ – ಕಾಫಿ ಕುಡಿದುಬರಲು ಹೋಗಿದ್ದೆರೇನೊ ಗೊತ್ತಿಲ್ಲ.
ಶಾಲೆಯ ದಿನಗಳಲ್ಲಿ, ಮೂಟೆಗಳನ್ನು ತುಂಬಿದ್ದ ಕುದುರೆ ಗಾಡಿಯ ಒಂದು ಚಕ್ರ ಕತ್ತಿನವರೆಗೂ ಹರಿದಿತ್ತು. ಸತ್ತಿದ್ದರೆ, ಅದೇನು ತುಂಬಲಾರದ ನಷ್ಟ ಆಗುತ್ತಿರಲಿಲ್ಲ. ಅಂದಿನಿಂದ ಇಂದಿನವರೆಗಿನ ಸಾವಿರಗಟ್ಟಲೆ ದಿನಗಳನ್ನು ಕಳೆದ ಬಗೆಯತ್ತ ನೋಟ ಬೀರಿದರೆ, ಅದಾವ ಘನಂದಾರಿ ಸಾಧನೆ ಮಾಡಿದ್ದೇನೆ ಎಂದನಿಸದು. ನನಗಿದು ಆಗಾಗ ಅನ್ನಿಸುತ್ತದೆ. ಪತ್ರಿಕಾರಂಗದ ಒಳಗೂ, ಹೊರಗೂ ದಂಡಿಯಾಗೇ ಬರೆದಿದ್ದೇನೆ. ಲೆಕ್ಕವಿಡದಷ್ಟು ಅನ್ನಲಿಕ್ಕೆ ಅಡ್ಡಿಯಿಲ್ಲ. ಆದರೆ ನನಗೆ ಸಮಾಧಾನ ಕೊಟ್ಟದ್ದು ಬೆರಳೆಣಿಕೆಯಷ್ಟು.
ಅಷ್ಟನ್ನು ಬರೆಯಲು ಬೇಕಾದ ಅನುಭವ ಗಳಿಸಲು ಸ್ವಲ್ಪ ಸಮಯ, ಬರೆಯಲು ಮತ್ತೊಂದಿಷ್ಟು ಸಮಯ. ಅದನ್ನು ಕಳೆದರೆ, ಜೀವನದ ಸುದೀರ್ಘ ಜೀವನದ ಉಳಿದ ಭಾಗ ನಿರರ್ಥಕ. ಮೂರು ವರ್ಷಗಳ ಹಿಂದೆ ತೀರಿಕೊಂಡ ಕವಿ ಮಿತ್ರ ಎಸ್. ಮಂಜು ನಾಥ್ ಒಮ್ಮೆ ಹೇಳಿದ್ದರು. ಸತ್ತವರು ಇನ್ನೊಂದು ಸ್ವಲ್ಪ ದಿನ ಬದುಕಿದ್ದರೆ, ಅವರ ನಿತ್ಯ ದಿನಚರಿಯನ್ನು ಮತ್ತೊಂದಷ್ಟು ದಿನ ಮುಂದುವರೆಸು ತ್ತಿದ್ದರು. ಅದನ್ನು ಬಿಟ್ಟು ಬೇರೇನು ಸಾಧನೆ ಸಾಧ್ಯ? ನನ್ನನ್ನೂ ಸೇರಿದಂತೆ, ಬಹಳಷ್ಟು ಜನರ ದಿನಚರಿಯನ್ನು ನೋಡಿದಾಗ ಆ ಮಾತು ನಿಜವೆನ್ನಿಸುತ್ತದೆ. ಬಹಳಷ್ಟು ದಿನಚರಿಗಳು ಶುಷ್ಕ, ನಿರರ್ಥಕ.
ಒಂದೈದು ವರ್ಷಗಳ ಹಿಂದೆ, ಮನೆಗೆ ಬಣ್ಣ ಬಳಿಯುವವರು, ವಿಜಯ ಧನಸ್ಸಿನಷ್ಟು ಭಾರದ ಬೀರುವನ್ನು ಮೇಲೆತ್ತಿ ಅದರ ಭಾರವನ್ನು ತಡೆಯಲಾರದೆ ಕೈಬಿಟ್ಟು ನನ್ನ ಮೇಲೆ ಕೆಡವಿದ್ದರು. ತಲೆ ಗಟ್ಟಿಯಿದ್ದುದರಿಂದ ಬದುಕಿದೆ. ಕಳೆದೈದು ವರ್ಷಗಳ ಸಾಧನೆಯನ್ನು ನೋಡಿದರೆ, ಅಂದು ಬುರುಡೆ ಒಡೆದಿದ್ದರೆ ಯಾರಿಗೂ ಹೇಳಿಕೊಳ್ಳುವ ನಷ್ಟ ಆಗುತ್ತಿರಲಿಲ್ಲ ಅನಿಸುತ್ತದೆ.
ಒಮ್ಮೆ ಸ್ನೇಹಿತರೊಡಗೂಡಿ ಕಾಕನ ಕೋಟೆ ಅರಣ್ಯ ಪ್ರದೇಶಕ್ಕೆ ಎರಡು ದಿನದ ಪ್ರವಾಸ ಮಾಡಿ. ಮೊದಲನೆಯ ದಿನ, ಕೈಮರ ದಲ್ಲಿರುವ ಅತಿಥಿ ಗೃಹಕ್ಕೆ ನಡಿಗೆ. ಕೋರ್ ಏರಿಯಾ ಎಂದು ಕರೆಯಲಾಗುವ ದಟ್ಟ ಕಾಡಿನಲ್ಲಿ ಬಿಡುಬೀಸಾಗಿ ನಡೆಯುತ್ತಿದ್ದೆವು. ಮೈಯೆ ಕಣ್ಣಾಗಿತ್ತು. ಕೈಯಂದು ಮರದ ಮುರಿದ ರೆಂಬೆ – ಕುರಿಕಾಯಲಿಕ್ಕೆ ಯೋಗ್ಯವಾದದ್ದು. ಯಾವುದೇ ಪ್ರಾಣಿಗಳ ಸುಳಿವಿಲ್ಲ. ಹಾಗಾಗಿ, ಜಾಗ್ರತೆ ಜಾರಿತ್ತು. ಧುತ್ತನೆ, ಪ್ರತ್ಯಕ್ಷವಾಗಿದ್ದು ಒಂದು ಕಾಡು ಹಂದಿ, ಒಂದು ಕಾಡುಕೋಣ. ಇದ್ದ ನಾಲ್ಕು ಜನ ದಿಕ್ಕಾ ಪಾಲಾಗಿ ಓಡಿದೆವು. ನಮ್ಮನ್ನು ಕಂಡು ಅವುಗಳಿಗೂ ದಿಗಿಲಾಗಿರಬೇಕು. ವಿರುದ್ಧ ದಿಕ್ಕಿನಲ್ಲಿ ಓಡಿ ಮರೆಯಾದವು.
ಹಾಗೂ ಹೀಗೂ ಕತ್ತಲಾಗುವ ವೇಳೆಗೆ ಕೈಮರ ತಲುಪಿದೆವು. ವಿಶ್ರಾಂತಿ ಗೃಹದ ಸಂದರ್ಶಕರ ಪುಸ್ತಕದಲ್ಲಿ, ಬೇರೆ ಬೇರೆ ಸಂದರ್ಭ ಗಳಲ್ಲಿ ಅಲ್ಲಿ ತಂಗಿದ್ದ ಮುಖ್ಯ ಚುನಾವಣಾ ಆಯುಕ್ತರಾದ ಟಿ.ಎನ್.ಶೇಷನ್ ಮತ್ತು ಕೇಂದ್ರ ಮಂತ್ರಿ ಮನೇಕಾ ಗಾಂಧಿ ಅವರಿಬ್ಬರ ಸಹಿ ಕಂಡೆವು. ಮಾರನೇ ದಿನ ಕಬಿನಿ ಹಿನ್ನೀರಿಗೆ ಹೋದೆವು. ಸೂರ್ಯ ಮುಳುಗುವ ಹೊತ್ತಾದರೂ ದೂರದ ಹಿನ್ನೀರಿನ ಬಳಿ ಆನೆಗಳ ಬೃಹತ್ ಸಮಾವೇಶ ಕಣ್ಣಿಗೆ ಬಿತ್ತು. ಅವಿದ್ದದ್ದು ಸುಮಾರು 200ಮೀಟರ್‌ಗೂ ಹೆಚ್ಚು ದೂರದಲ್ಲಿ. ಕಡಿಮೆಯೆಂದರೆ, ಒಂದು ನೂರಾದರೂ ಆನೆಗಳು ಜಮಾಯಿಸಿದ್ದವೇನೊ. ನೀರು ಕುಡಿಯುವ ಹೊತ್ತು.
ಅವನ್ನು ನೋಡಿ ಮೈ ಮರೆತಿದ್ದ ನಮಗೆ ಹಿಂದಿನಿಂದ ತಾಯಿ ಆನೆ, ತನ್ನ ಒಂದೆರಡು ವರ್ಷದ ಮರಿಯೊಂದಿಗೆ ಹಿಂದೆ ಬಂದದ್ದು ತಕ್ಷಣಕ್ಕೆ ಅರಿವಾಗಲಿಲ್ಲ. ನಮ್ಮಿಂದ ಕೇವಲ ೨೦ ಅಡಿ ದೂರ. ಕಮಾನಿನಾಕಾರದಲ್ಲಿದ್ದ ಕಾಲುವೆಯ ನೀರಿನ ಒಂದು ಕಡೆ ನಾವು, ಆ ಕಡೆ ತಾಯಿ, ಮರಿ. ನಾವು ವಾಪಸ್ ಆಗಬೇಕೆಂದರೆ, ಅವುಗಳನ್ನು ಅವುಗಳ ಹಿಂಬದಿಯಲ್ಲಿದ್ದ ಬಿದಿರಿನ ಮೆಳೆಯತ್ತ ಹಿಮ್ಮೆಟ್ಟಿಸಿಯೇ ಬರಬೇಕು.
ಅದಿಲ್ಲ, ಕಾಲುವೆಯನ್ನು ದಾಟಿ ಆಚೆ ದಡದ ಕಡೆಯಿಂದ ವಾಪಸ್ ಆಗಬೇಕು. ದಾಟಬೇಕೆಂದರೆ ಕಾಲುವೆಯಲ್ಲಿ ಈಜಬೇಕು. ಈಜು ಬರುತ್ತಿದ್ದುದು ನಾಲ್ವರಲ್ಲಿ ಮಾತ್ರ. ಏನು ಮಾಡಬೇಕೆಂದು ತೋಚುತ್ತಿಲ್ಲ. ಸಾಯುವುದು ಖಚಿತ, ತಾಯಿ ಆನೆಯ ಕಾಲಿನಡಿಗೆ ಸಿಕ್ಕಿ, ಗುಮ್ಮಿಸಿಕೊಂಡು ಸಾಯುವುದೋ, ಈಜಲಾರದೆ, ಕೆಸರಿನ ನೀರಿನಲ್ಲಿ ಮುಳುಗಿ ಸಾಯುವುದೋ ಎಂಬುದರ ಲೆಕ್ಕಾಚಾರ. ಕೆಸರಿನಲ್ಲಿ ಮುಳುಗುವುದೇ ಅನಾಯಾಸ ಮರಣ ಎಂದೆನಿಸಿತು. ಒಂದು ವೇಳೆ ಕಾಲುವೆ ಹೆಚ್ಚು ಆಳವಿಲ್ಲದಿದ್ದರೆ, ಎಂಬ ಆಲೋಚನೆ ಬರುವಷ್ಟಿಗೆ ಅತ್ತ ಕಡೆಯ ದಡದಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಯಿತು. ನಮ್ಮ ನಾಲಗೆಯ ಪಸೆ ಒಣಗುತ್ತಿದೆ,ಇವಕ್ಕೋ ಒಂದೇ ಬಾರಿಗೆ ಒಟ್ಟಿಗೆ ನೀರಿನ ದಾಹ!
ಸಾವು ಮೂರೂ ಕಡೆಯಿಂದ ಆವಾರಿಸಿಕೊಂಡಿತ್ತು. ಕೊನೆಯ ಆಯ್ಕೆ ಒಂದಿತ್ತು. ಕಾಲುವೆಯ ಎದುರಿನ ಪುಟ್ಟ ದಿಬ್ಬವನ್ನೇರಿ, ತಾಯಿ ಆನೆಯ ಹಿಂಬದಿಯ ಬಿದಿರು ಮೆಳೆಯನ್ನು ಬಳಸಿಕೊಂಡು ದಿಬ್ಬವನ್ನಿಳಿದು ವಾಪಸ್ ಆಗುವುದು. ತಾಯಿ ಆನೆ ತನ್ನ ಮರಿಯೊಂದಿಗೆ ಹಿಂದಿರುಗುವವರೆಗೂ ಕಾಯುತ್ತಾನಿಂತರೆ ಕತ್ತಲಾಗಿ ಬಿಡುತ್ತದೆಂದು, ದಿಬ್ಬವನ್ನೇರಿದೆವು. ದಿಬ್ಬದ ಆ ಬದಿಯಲ್ಲಿಮೇಯುತ್ತಿದ್ದ ಕಾಡುಹಂದಿಯ ಸಣ್ಣ ಮುಂದೆ ನಮ್ಮನ್ನು ನೋಡಿ ಓಡಿಹೋದವು. ಆದರೆ, ಅದಕ್ಕಿಂತ ದೊಡ್ಡ ಗಂಡಾಂತರ ವೆಂಬಂತೆ ಸಲಗವೊಂದರ ಮುಂದಾಳತ್ವದಲ್ಲಿ ಆನೆಗಳ ಹಿಂಡೊಂದು ನಮ್ಮತ್ತ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದವು.
ನಮ್ಮ ಇರುವನ್ನು ಸಲಗವೂ ಗ್ರಹಿಸಿತ್ತು, ಆದರೆ ನಡಿಗೆಯನ್ನು ಮುಂದುವರಿಸಿದ್ದವು. ಉಳಿವಿಗೆ ನಮಗೆ ಕಂಡ ಉಪಾಯ ಗಂಟಲು ಕಿತ್ತುಹೋಗುವಂತೆ ಕೂಗುವುದು. ಒಕ್ಕೊರಲಿನಿಂದ ವಿಕಾರವಾಗಿ ಕೂಗಿದೆವು. ಮುಂದಾಳತ್ವ ವಹಿಸಿದ್ದ ಆನೆ ಒಂದು ಕ್ಷಣ ನಿಲ್ಲಿತು. ನಮ್ಮ ಭರವಸೆ ಹೆಚ್ಚಿ, ಕೂಗಾಟವನ್ನು ಮುಂದುವರಿಸಿದೆವು. ಸುಮಾರು ಐವತ್ತು ಮೀಟರ್ ದೂರದಲ್ಲಿದ್ದ ಆ ಹಿಂಡು ಹಿಂದೆ ಸರಿದವು. ಅವೆಷ್ಟು ಆನೆಗಳಿದ್ದವೋ ತಿಳಿಯದು, ಮರಗಳ ಮರೆ ಇತ್ತು. ದಿಬ್ಬದ ಗುಂಟ ಎಷ್ಟು ದೂರ ಕಾಡಿನಲ್ಲಿ ನಡೆಯಬೇಕೊತಿಳಿಯಾದಾಗಿತ್ತು. ಕತ್ತಲಾವರಿಸಿ ದಾರಿಕಾಣದಾದರೆ? ಆ ಆಲೋಚನೆ ಬಂದು, ತಾಯಿಯಾನೆಯನ್ನೂ ಹಿಮ್ಮೆಟ್ಟಿಸಬಹುದೆಂಬ ವಿಶ್ವಾಸದಲ್ಲಿ 20 ಅಡಿ ದೂರದಲ್ಲಿ ನಿಂತು ಮತ್ತೆ ಸಾಮೂಹಿಕವಾಗಿ ಕೂಗಲಾರಂಭಿಸಿದೆವು.
ಆಗ ತಾನೇ ಕಂಡಿದ್ದ ಯಶಸ್ಸು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಒಮ್ಮೆ ಬಾಲವನ್ನು ನಿಗುರಿಸಿ ಅಡಿಸಿದ ತಾಯಿಯಾನೆ ಕಿವಿಗಳನ್ನು ಅಗಲಿಸಿತು. ಆಕ್ರಮಣಕ್ಕೆ ಸಿದ್ಧವಾಗುತ್ತಿರುವ ನಿರ್ದಿಷ್ಟ ಸೂಚನೆ ಅದು. ನಮ್ಮ ಕೂಗನ್ನು ನಿಲ್ಲಿಸಲಿಲ್ಲ. ಕೊನೆಗೂ, ಆಶ್ಚರ್ಯಕರವಾಗಿ ಮರಿಯೊಡನೆ ಬಿದಿರಿನ ಮೆಳೆಯೊಳಗೆ ಸರಿಯಿತು. ಸಾವಿನ ದವಡೆಯಿಂದ ಪಾರಾದ ಸಮಾಧಾನದಲ್ಲಿ ಮೆಳೆಯನ್ನು ದಾಟುತ್ತಿರುವಾಗ, ಕಣ್ತಪ್ಪಿಸಿದ್ದ ತಾಯಿ ಘೀಳಿಡುತ್ತಾ ನಮ್ಮತ್ತ ನೆಗೆಯುವಂತೆ ಮಾಡಿತು.
(ದಿಗ್ಗನೆ, ಬೂಟಿನತ್ತ ಬಿದ್ದ ಬಾಲನ್ನು ಕೀಳುವಲ್ಲಿ ಬ್ಯಾಟ್ಸ್‌ಮನ್ ಪ್ರತಿಸ್ಪಂದಿಸುವಂತೆ). ಅಂದು ನಾವು ಫೇರಿ ಕಿತ್ತಷ್ಟು ವೇಗದಲ್ಲಿಜೀವಮಾನದಲ್ಲಿ ಇನ್ನೆಂದೂ ಓಡಿರಲಾರೆವು. ಈ ಪ್ರಸಂಗದ ಒಂದೆರಡು ವರ್ಷಗಳ ನಂತರ, ಸಾವು ಎದುರಾದದ್ದು ಮತ್ತೊಂದು ದೈತ್ಯ ಒಂಟಿ ಸಲಗದ ರೂಪದಲ್ಲಿ. ಇದು ನಡೆದದ್ದು ಬಂಡೀಪುರ ಅಭಯಾರಣ್ಯದಲ್ಲಿ, ರಾತ್ರಿ ಹತ್ತೂವರೆ ಹೊತ್ತಿನಲ್ಲಿ. ಒಂದು ಅತಿಥಿ ಗೃಹದಿಂದ ಸುಮಾರು ನೂರು ಮೀಟರ್ ದೂರವಿದ್ದ ಮತ್ತೊಂದು ಅತಿಥಿ ಗೃಹಕ್ಕೆ ಸ್ಥಳಾಂತರಿಸುತ್ತಿದ್ದೆವು. ಮಾರನೇ ದಿನ ಬೆಳಗ್ಗೆ ಮಾಡಿದರೂ ನಡೆಯುತ್ತಿತ್ತು. ಪ್ರತ್ಯೇಕ ಟಾಯ್ಲೆಟ್ ಇರುತ್ತದೆಂಬ ಕಾರಣದಿಂದ ಶಿಫ್ಟ್ ಮಾಡುತ್ತಿದ್ದೆವು.
ನನ್ನ ಕೈಲಿದ್ದ ಪುಟಾಣಿ ಟಾರ್ಚ್ ಅತಿ ಮಂದ ಬೆಳಕು ಆ ಸಲಗವನ್ನು ಕೆಣಕಿತ್ತು. ನಾನು ಅದನ್ನು ನೋಡಿದ ಕೂಡಲೇ ಪಕ್ಕದಲ್ಲಿ ಹೆಜ್ಜೆ ಹಾಕುತ್ತಿದ್ದ ಶ್ರೀಮತಿಯ ತೋಳನ್ನು ಹಿಡಿದು ಓಡು ಎಂದೆ. ನಾನೇನೊ ತಮಾಷೆ ಮಾಡುತ್ತಿದ್ದೇನೆಂದು ಬಗೆದ ಆಕೆ ಅ ನಿಂತಳು. ಅರೆಕ್ಷಣದಲ್ಲಿ ಧಾವಿಸಿದ ಆನೆ ಸೊಂಡಿಲೆತ್ತಿ ಘೀಳಿಟ್ಟಿತು. ಭೂತಾಕಾರದ ಆನೆಯ ಸೊಂಡಿಲಿನ ಕೆಳಗಿದ್ದ ಹೆಂಡತಿ ಕಿಟಾರನೆ ಕಿರುಚಿದಳು. ಅದೇಕೆ ಆನೆ ಆಕೆಯ ಮೇಲೆ ಆಕ್ರಮಣ ಮಾಡಲಿಲ್ಲ, ದೇವರೇ ಬಲ್ಲ. ನನ್ನ ಜೀನ್ಸ್‌ನ ತೂಬು ನೀಳವಾಗಿ ದ್ದುದರಿಂದ ಓಡಲು ಪ್ರಯತ್ನ ಪಟ್ಟ ನಾನು ಎಡವಿ ಬಿದ್ದೆ.
ಮಡದಿಗೆ ಏನಾಯಿತು ಎಂದು ಹಿಂತಿರುಗಿ ನೋಡಿದಾಗ ಕಂಡು ಬಂದಿದ್ದು ಈ ಮೇಲ್ಕಂಡ ದೃಶ್ಯ. ಬಿದ್ದಿದ್ದ ನಾನು ಸಲಗದಕಾಲ್ತುಳಿತಕ್ಕೆ ಒಳಗಾಗ ದಿದ್ದುದೂ ಪವಾಡವೇ. ಕೊಡವಿಕೊಂಡು ಎದ್ದು, ಪತ್ನಿಯೊಂದಿಗೆ ಪಕ್ಕದ ಇದ್ದ ಅತಿಥಿ ಗೃಹದವರಾಂಡಾಗೆ ನುಗ್ಗಿದೆವು. ಮರುದಿನ ಬಂಡೀಪುರದಲ್ಲ ನಮ್ಮದೇ ಸುದ್ದಿ. ಅದನ್ನು ಕೇಳಿದ ಆಸ್ಟ್ರೇಲಿಯಾದ ಒಬ್ಬಳು ಪ್ರವಾಸಿಗಳು ಅದರನಿದೆ ಎಂದು ನಮ್ಮ ಪ್ರಾಣ ಸಂಕಟವನ್ನು ಲಘುವಾಗಿ ಪರಿಗಣಿಸಿದ್ದಳು. ಸಂಜೆ, ವನ್ಯಜೀವಿ ಕುರಿತಾದ ಸಾಕ್ಷಚಿತ್ರವೊಂದನ್ನು ನೋಡಲು ಹೋಗಿ ಹಿಂತಿರುವಾಗ ಸಂಜೆ ಏಳರ ಮೇಲಾಗಿತ್ತು. ಆನೆ ಬರಬಹುದೆಂಬ ಎಚ್ಚರದ ಹೆಜ್ಜೆ ಹಾಕುತ್ತಿದ್ದೆವು.
ನಮಗೆ ಧೈರ್ಯ ತುಂಬುವಂತೆ ಆಕೆಯ ನಮಗೆ ಬೆಂಗಾವಲಿನಂತೆ ಮುನ್ನಡೆಯುತ್ತಿದ್ದಳು. ಅದರ ಮರುದಿನ ನಮಗೆ ಎಚ್ಚರ ವಾಗಿದ್ದು ಅದೇ ಆಸ್ಟ್ರೇಲಿಯಾ ಪ್ರಜೆಯ ಚೀರಾಟದಿಂದ. ಏನಾಯಿತೆಂದು ಹೊರಗೆ ಧಾವಿಸಿದಾಗ ತಿಳಿದದ್ದು ಅದೇ ಸಲಗ ತನ್ನ ಚಿತ್ರವನ್ನು ತೆಗೆಯುತ್ತಿದ್ದ ಮತ್ತೊಬ್ಬ ವಿದೇಶೀಯನನ್ನು ಅಟ್ಟಿಸಿಕೊಂಡು ಹೋದದ್ದನ್ನು ದೂರದಿಂದ ನೋಡಿ ನಮಗೆ ರಕ್ಷಣೆ ನೀಡಲು ಮುಂದಾಗಿದ್ದ ಹೆಂಗಸು ಚೀರಿದ್ದಳು. ಆ ದೈತ್ಯ ಆನೆಯ ಸೊಂಡಿಲಿನಡಿ ನೀವಿದ್ದ ಕ್ಷಣವನ್ನು ಊಹಿಸಿಯೇ ಮೈ ನಡುಗು ತ್ತಿದೆ ಎಂದಳು.
ಈ ಹಳೆಯ ಪ್ರಸಂಗಗಳನ್ನು ಪ್ರಸ್ತಾಪಿಸುವ ಮನಸ್ಸು ನನಗಿರಲಿಲ್ಲ. ಮಾದಕ ವಸ್ತುಗಳ ಅಂತಾರಾಷ್ಟ್ರೀಯ ಜಾಲವನ್ನು ಕುರಿತು ಲೇಖನ ಸಿದ್ಧ ಪಡಿಸುತ್ತಿದ್ದೆ. ಊಟದ ವಿರಾಮದ ನಂತರ ಲೇಖನವನ್ನು ಪೂರ್ಣಗೊಳಿಸೋಣವೆಂದರೆ ಲೇಖನವೇ ನಾಪತ್ತೆ. ಒಂದು ಗಂಟೆ ಜಾಲಾಡಿದೆ. ಎಲ್ಲಿ ಮಂಗಮಾಯವಾಯಿತೋ? ಅದನ್ನೇ ಮತ್ತೆ ಬರೆದರೆ ಮುಂಚಿನ ಲಹರಿ ಸಿಗುವುದಿಲ್ಲ ಎಂದು ಮನಗಂಡು ಇದನ್ನು ಬರೆದೆ. ನಾವೆಲ್ಲರೂ ಜತೆಯಾಗಿ ಪಯಣಿಸುತ್ತಿದ್ದೇವೆ. ಎಲ್ಲರ ಪರಿಸ್ಥಿತಿ, ಸನ್ನಿವೇಶವೂ ಒಂದೇ. ಎಲ್ಲರ ಮನದಲ್ಲೂ ನೋವಿದೆ, ಭೀತಿ ಇದೆ, ಸಾವಿನ ಛಾಯೆ ಇದೆ.
ಒಂದು ಯಃಕಶ್ಚಿತ್ ವೈರಾಣು ಮನುಕುಲದ ಜಂಘಾಬಲವನ್ನು ಉಡುಗಿಸಿದೆ. ಅನಿಶ್ಚಿತತೆಯಿಲ್ಲದ ಬದುಕಿಲ್ಲ, ಅದು ಬದುಕೂ ಅಲ್ಲ. ಜೀವನದ ಸೌಂದರ್ಯವೇ ಅದು ತರುವ ಅನಿರೀಕ್ಷಿತ ಕ್ಷಣಗಳಲ್ಲಿದೆ. ಯಾವ ಕೊಂಡಿ ಯಾವಾಗ ಕಳಚುತ್ತದೆ ಎಂಬಅರಿವು ಯಾರಿಗೂ ಇಲ್ಲ, ಆದರೂ ಸಂಬಂಧಗಳ ಕೊಂಡಿಯನ್ನು ಗಟ್ಟಿಗೊಳಿಸಬೇಕು. ಕರೋನಾವನ್ನು ಮೆಟ್ಟಿ ನಿಲ್ಲಬೇಕು. ಜೀವನದ ಸದ್ಯದ ಉದ್ದೇಶ ಅದೇ ಆಗಿರಬೇಕು.
ಬದುಕು ಎಷ್ಟೇ ನೀರಸ ಎನಿಸಿದರೂ, ಆ ನೀರವತೆ ಸಾಂಕ್ರಾಮಿಕವಾಗದಂತೆ ನಿಗಾ ವಹಿಸಬೇಕು. ಹರ್ಮನ್ ಹೆಸ್ ನ ಮೇಲಿನ ಮಾತು ಎಷ್ಟೇ ಅರ್ಥಗರ್ಭಿತವಾದರೂ, ಪರಮ ವೇದನೆಯಲ್ಲೂ ಇರುವ ಅರ್ಥವನ್ನು ಹುಡುಕಬೇಕು. ಅರ್ಥ ಸಿಗದಿದ್ದರೂ ಹುಡುಕಾಟ ನಿಲ್ಲಬಾರದು. ಆ ಹುಡುಕಾಟವೇ ಜೀವನದ ಮುಖ್ಯ ಉದ್ದೇಶ.