ಕೇಂದ್ರ ವಿಸ್ತಾ ಯೋಜನೆಯ ಮೇಲೆ ಮತ್ತೆ ಕೆಂಗಣ್ಣು
ಅವಲೋಕನ
ಪ್ರಕಾಶ್ ಶೇಷರಾಘವಾಚಾರ್‌
ದೇಶವು ಕರೋನಾ ಸಂಕಟವನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ವಿಸ್ತಾ ಯೋಜನೆಗೆ20ಸಾವಿರ ಕೋಟಿ ವೆಚ್ಚ ಮಾಡುವುದು ಅಪರಾಧ. ಈ ಹಣದಲ್ಲಿ ಜನರಿಗೆ ಉಚಿತ ಲಸಿಕೆ ನೀಡಬೇಕು ಎಂದುಕಾಂಗ್ರೆಸ್ ಮತ್ತು ಮೋದಿ ವಿರೋಽಗಳು ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.
ರಾಹುಲ್ ಗಾಂಧಿಯವರ ಪ್ರಕಾರ 13450ಕೋಟಿ ಅಂದಾಜು ವೆಚ್ಚದ ಈ ಯೋಜನೆಯ ಹಣದಿಂದ45ಕೋಟಿ ಜನರಿಗೆ ಉಚಿತವಾಗಿ ಲಸಿಕೆ ಹಾಕಿಸ ಬಹುದು, ಒಂದು ಕೋಟಿ ಆಕ್ಸಿಜನ್ ಸಿಲಿಂಡರ್ ಖರೀದಿಸಬಹುದು ಮತ್ತು2ಕೋಟಿ ಜನರಿಗೆ 6000ರು. ಕೊಡಬಹುದು ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಇವರ ಹತ್ತು ವರ್ಷಗಳ ಅವಧಿಯಲ್ಲಿ ತಿಂದು ತೇಗಿದ ಹಣದ ಲೆಕ್ಕ ವನ್ನು ಹಿಡಿದಿದ್ದರೆ ಅದರಿಂದ ದೇಶದ ಆರೋಗ್ಯ ವ್ಯವಸ್ಥೆಯನ್ನು ಎಷ್ಟು ಸುಧಾರಿಸಬಹುದಿತ್ತು ಎಂಬುದನ್ನು ತಿಳಿಸಲು ಮರೆತಿದ್ದಾರೆ.
ದೇಶದ12ವಿರೋಧ ಪಕ್ಷಗಳ ನಾಯಕರು ಪ್ರಧಾನಮಂತ್ರಿಯವರಿಗೆ ಪತ್ರ ಮುಖೇನ ಈ ಯೋಜನೆಯನ್ನು ಸ್ಥಗಿತಗೊಳಿಸಿ ಆ ಹಣವನ್ನು ಕರೋನಾ ಹೋರಾಟಕ್ಕೆ ಬಳಸಿ ಎಂದು ಆಗ್ರಹಿಸಿದ್ದಾರೆ. 117 ನಿವೃತ್ತ ಸರಕಾರಿ ಅಧಿಕಾರಿ ಗಳು ಬಹಿರಂಗ ಪತ್ರ ಬರೆಯುವ ಮೂಲಕ ಯೋಜನೆ ಸ್ಥಗಿತಗೊಳಿಸಿ ಆ ಹಣವನ್ನು ಉಚಿತ ಲಸಿಕೆ ನೀಡಲು ಬಳಸಬೇಕು ಎಂದು ಸಲಹೆ ನೀಡಿದ್ದಾರೆ. ಸೆಂಟ್ರಲ್ ವಿಸ್ತಾ ಯೋಜನೆಯನ್ನು ಜಾರಿ ಮಾಡುವ ಬಗ್ಗೆ 2019ರಲ್ಲಿ ಕೇಂದ್ರ ಸರಕಾರ ಘೋಷಿಸಿತು. ಇದರನ್ವಯ ಹೊಸ ಪಾರ್ಲಿಮೆಂಟ್ ಭವನ ರಾಜ್‌ಪಥ್ ಪುನರ್ ಅಭಿವೃದ್ಧಿ, ನೂತನ ಪ್ರಧಾನಿ ನಿವಾಸ, ಉಪರಾಷ್ಟ್ರಪತಿಗಳ ನಿವಾಸ ಮತ್ತು ಒಂದೇ ಕಡೆ ನೂತನ ಸಚಿವಾಲಯ ಕಟ್ಟಡ ನಿರ್ಮಾಣ ಈ ಯೋಜನೆಯ ಭಾಗವಾಗಿದೆ.
ಸದ್ಯ21ಸಚಿವಾಲಯಗಳು ಒಂದೇ ಕಡೆ ಇದ್ದು41ಸಾವಿರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಸಚಿವಾಲಯದಲ್ಲಿ51ಸಚಿವಾಲಯಗಳ53ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡಲಿದ್ದಾರೆ ಮತ್ತು ಹತ್ತಾರು ಕಡೆ ಬಾಡಿಗೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಚಿವಾಲಯಗಳಿಗೆ ಸ್ವಂತ ಸೂರು ದೊರೆಯಲಿದೆ. 2026ರಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡನೆ ನಡೆಯಲಿದೆ. ಅದರನ್ವಯ ಲೋಕಸಭೆ ಮತ್ತು ರಾಜ್ಯಸಭೆಯ ಸ್ಥಾನ ಗಳಲ್ಲಿ ಹೆಚ್ಚಳವಾಗಲಿದೆ.
ಹಾಲಿ ಇರುವ ಕಟ್ಟಡವು ನೂರು ವರ್ಷ ಸವೆಸಿದೆ ಮತ್ತು ಕ್ಷೇತ್ರ ಪುನರ್ ವಿಂಗಡನೆಯಾದ ತರುವಾಯ ಅಲ್ಲಿ ಸ್ಥಳಾವಕಾಶ ಸಾಕಾಗುವುದಿಲ್ಲ. 2012ರಲ್ಲಿಯೇ ಅಂದಿನ ಲೋಕಸಭಾಧ್ಯಕ್ಷೆಯಾಗಿದ್ದ ಮೀರಾಕುಮಾರಿಯವರು ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಹೊಸದಾದ ಸಂಸದ್ ಭವನ ನಿರ್ಮಿಸಲು ಯೋಜನೆ ರೂಪಿಸಬೇಕು ಎಂದು ಕೋರಿದ್ದರು. ಅಂದಿನಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಜೈರಾಂ ರಮೇಶರವರು ಸಂಸತ್ ಭವನ ಹಳೆಯದಾಗಿದೆ.
ಹೊಸ ಕಟ್ಟಡದ ಅವಶ್ಯಕತೆ ಇರುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭವಿಷ್ಯದ ಅಗತ್ಯಕ್ಕನುಗುಣವಾಗಿ ಸುಸಜ್ಜಿತ ಮತ್ತು ಅತ್ಯಾಧುನಿಕ ಸೌಲಭ್ಯನ್ನೊಳಗೊಂಡ ನೂತನ ಸಂಸತ್ ಭವನ ನಿರ್ಮಾಣ ಮಾಡಲು ಸರಕಾರವು ತೀರ್ಮಾನಕೈಗೊಂಡಿತು. ಲೋಕಸಭೆಯಲ್ಲಿ 888 ಮತ್ತು ರಾಜ್ಯಸಭೆಯಲ್ಲಿ 384 ಆಸನಗಳು ಮತ್ತು ಜಂಟಿ ಅಧಿವೇಶನಕ್ಕಾಗಿ 1272 ಆಸನ ಸಾಮರ್ಥ್ಯದ ವಿಶಾಲವಾದ ಹಾಲ್ ಒಳಗೊಂಡ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ದೇಶದ ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭದಲ್ಲಿ ನೂತನ ಪಾರ್ಲಿಮೆಂಟ್ ಭವನ ಲೋಕಾರ್ಪಣೆ ಮಾಡಲು ಕೇಂದ್ರ ಸರಕಾರ ನಿಶ್ಚಿಯಿಸಿದೆ. 1921ರಲ್ಲಿ ಎಡ್ವಿನ್ ಲ್ಯೂಟಿಯನ್ಸ್ ಮತ್ತು ಬರ್ಕಲಿ ರ್ಹರ್ಬಟ್ ಈ ಕಟ್ಟಡಗಳ ನಿರ್ಮಾಣವನ್ನು ಕೈಗೊಂಡರು. 1927ರಲ್ಲಿ ಇವುಗಳ ಉದ್ಘಾಟನೆಯಾಗುತ್ತದೆ. ಕಾಂಗ್ರೆಸ್ಸಿನವರು ಸ್ವಾತಂತ್ರ್ಯ ಬಂದ ತರುವಾಯವು ಬ್ರಿಟಿಷರ ಈ ಪಳೆಯುಳಿಕೆ ಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು.
ದೇಶಕ್ಕೆ ಸ್ವಾತಂತ್ರ್ಯಬಂದು52ವರ್ಷದವರೆಗೆ ಬ್ರಿಟಿಷ್ ರಾಣಿಯು ಇಂಗ್ಲೆಂಡಿನಲ್ಲಿ ನಿದ್ದೆಯಿಂದ ಎದ್ದ ಮೇಲೆ ಭಾರತದಲ್ಲಿ ಸಂಜೆ 5-30ಕ್ಕೆ ಮುಂಗಡ ಪತ್ರ ಮಂಡಿಸುತ್ತಿದ್ದ ಕಾಂಗ್ರೆಸ್ಸಿನವರಿಗೆ ಅದೇನು ವಿದೇಶದ ಮೇಲೆ ಅತಿಯಾದ ಮಮಕಾರವೋ ಅರ್ಥವೇಆಗುವುದಿಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ನೂತನ ಸಂಸತ್ ಭವನದ ಅವಶ್ಯಕತೆಯನ್ನು ಮನಗಂಡಿದ್ದ ಕಾಂಗ್ರೆಸ್ ಪಾರ್ಟಿಗೆ 2020ರಲ್ಲಿ ಬೇಡವಾಗುತ್ತದೆ.
ಪ್ರಾಯಶಃ ಮೋದಿಯವರ ಅಧಿಕಾರಾವಾಧಿಯಲ್ಲಿ ನೂತನ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವ ಬೆನ್ನಲ್ಲೇ ನೂತನ ಪಾರ್ಲಿಮೆಂಟ್ ಭವನ ನಿರ್ಮಾಣವಾಗಿ ಇತಿಹಾಸದಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿಯುತ್ತದೆ ಎಂಬ ಸಂಕಟವೇ ಬಹುಮುಖ್ಯ ಕಾರಣ. ಹಾಲಿ ರಾಜಪಥದ ಪುನರ್ ಅಭಿವೃದ್ಧಿ ಕಾಮಗಾರಿಯನ್ನು477ಕೋಟಿ ರು. ವೆಚ್ಚದಲ್ಲಿ ಶಾಪೂರ್ ಜೀ ಪಾಲೊಂಜೀ ಸಂಸ್ಥೆಯು ಕೈಗೊಂಡಿದೆ.
ಮುಂದಿನ ಜನವರಿ26ರ ಗಣರಾಜ್ಯೋತ್ಸವಕ್ಕೆ ಮುನ್ನ ಇದರ ಕಾಮಗಾರಿಯು ಪೂರ್ಣಗೊಳಿಸಲು ಗಡುವು ನೀಡಲಾಗಿದೆ.  ಹಾಗೆಯೇ ಟಾಟಾ ನಿರ್ಮಾಣ ಸಂಸ್ಥೆಯವರು ನೂತನ ಪಾರ್ಲಿಮೆಂಟ್ ಕಟ್ಟಡವನ್ನು 862 ಕೋಟಿ ರು. ವೆಚ್ಚದಲ್ಲಿ ನಿರ್ಮಾಣದ ಗುತ್ತಿಗೆಯನ್ನು ಪಡೆದು ಕಾಮಗಾರಿ ಆರಂಭಿಸಿದ್ದಾರೆ. ಈ ಯೋಜನೆಯಿಂದ ವಿಚಲಿತರಾಗಿರುವ ಮೋದಿ ವಿರೋಧಿ ಗಳು ಶತಾಯ ಗತಾಯ ಇದು ಕೈಗೂಡದಂತೆ ಮಾಡಲು ಹಲವಾರು ಅಡ್ಡಿ ಆತಂಕಗಳನ್ನು ಒಡ್ಡುತ್ತಲೇ ಇದ್ದಾರೆ. ಕಾಂಗ್ರೆಸ್ ಮತ್ತು ಅವರ ಕೃಪಾಪೋಷಿತ ಪಟಾಲಂಗಳು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹೂಡಿದರು.
ವೃತ್ತಿಪರ ಮಾಹಿತಿ ಹಕ್ಕು ಕಾರ್ಯಕರ್ತರು ದಿನಬೆಳಗಾದರೆ ಒಂದಲ್ಲಾ ಒಂದು ನೆಪವಿಟ್ಟುಕೊಂಡು ಅರ್ಜಿ ಸಲ್ಲಿಸಿ ಸರಕಾರವನ್ನುಇಕ್ಕಟ್ಟಿಗೆ ಸಿಲುಕಿಸಲು ನಾನಾ ಪ್ರಯತ್ನಗಳನ್ನು ಮಾಡಿ ಸೋತರು. ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ  ಈ ಯೋಜನೆಯ ಅನುಷ್ಠಾನಕ್ಕೆ ಹಸಿರು ನಿಶಾನೆ ದೊರೆತು ವಿಘ್ನ ಸಂತೋಷಿಗಳಿಗೆ ದೊಡ್ಡ ಆಘಾತ ಮತ್ತು ನಿರಾಶೆಯಾಗಿದೆ. ಈ ಯೋಜನೆಯನ್ನು ವಿರೋಧಿಸುತ್ತಲೇ ಬಂದಿರುವ ಶಕ್ತಿಗಳು ಈಗ ಹೊಸದಾದ ವರಸೆಯನ್ನು ತೆಗೆದಿದ್ದಾರೆ. ಕರೋನಾ ಮಹಾ ಮಾರಿಯು ದೇಶವ್ಯಾಪಿ ಹರಡಿ ಸಾವಿರಾರು ಜನ ಮೃತಪಟ್ಟಿದ್ದಾರೆ.
ಜನರು ಸಂಕಷ್ಟದಲ್ಲಿರುವ ಕಾರಣ ಕೇಂದ್ರ ವಿಸ್ತಾ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಮತ್ತೆ ಅಡ್ಡಗಾಲು ಹಾಕಲು ಕರೋನಾ ಸೋಂಕಿಗೆ ಮೊರೆ ಹೋಗಿದ್ದಾರೆ. ತಥಾಕಥಿತ ಇತಿಹಾಸ ತಜ್ಞೆ ರೋಮಿಲಾ ಥಾಪರ್ ರವರ ನೇತೃತ್ವದಲ್ಲಿ ದೇಶ ವಿದೇಶದ75ಜನ ಬುದ್ಧಿಜೀವಿಗಳು ಈ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಬಹಿರಂಗ ಪತ್ರವನ್ನು ಬರೆಯುತ್ತಾರೆ. ವಿದೇಶಗಳ ಆರ್ಟ್ ಮ್ಯೂಸಿಯಂ ಮುಖ್ಯಸ್ಥರುಗಳ ಸಹಿಯೂ ಪತ್ರದಲ್ಲಿರುವುದು. ನಮ್ಮ ದೇಶದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸಲು ಇವರಿಗೆ ಯಾವ ಅಧಿಕಾರವಿದೆ? ಇವರಿಗ್ಯಾಕೆ ಬೇಕು ನಮ್ಮ ದೇಶದ ಉಸಾಬರಿ? ಅದೇನೊಪ್ಪಾ ಕಾಂಗ್ರೆಸ್‌ ನವರಿಗೆ ವಿದೇಶಿಯರು ಎಂದರೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಎಲ್ಲದಕ್ಕೂ ಅವರ ಮೇಲೆ ಅವಲಂಭಿತರಾಗುತ್ತಾರೆ.
ಅನ್ಯಾ ಮಲ್ಹೋತ್ರ ಮತ್ತು ಸೋಹೈಲ್ ಹಶ್ಮಿ ಎಂಬುವರು ಕ್ಷುಲ್ಲಕ ಕಾರಣ ನೀಡಿ ಸೆಂಟ್ರಲ್ ವಿಸ್ತಾ ಕಾಮಗಾರಿಗೆ ತಡೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಸದ್ಯ ನ್ಯಾಯಾಲಯ ತನ್ನ ತೀರ್ಮಾನವನ್ನು ಕಾದಿರಿಸಿದೆ. ತಮ್ಮ ದುಷ್ಟಕಾರ್ಯಸೂಚಿಯನ್ನು ಸಫಲಗೊಳಿಸಲು ಈ ವಿಘ್ನ ಸಂತೋಷಿಗಳು ಜನರ ದಾರಿತಪ್ಪಿಸುವ ಸಲುವಾಗಿ ಸುಳ್ಳಿನ ಆಸರೆ ಪಡೆದು ಮತ್ತೊಬ್ಬರ ನೋವನ್ನು ಬಂಡವಾಳ ಮಾಡಿಕೊಂಡಿದ್ದಾರೆ.
ಕೋವಿಡ್‌ನಿಂದ ಜರ್ಜರಿತರಾಗಿರುವ ಜನರ ಸೂಕ್ಷ್ಮ ಮನಸ್ಸಿನ ದುರ್ಬಳಕೆ ಮಾಡಿಕೊಂಡು ಕೇಂದ್ರ ವಿಸ್ತಾ ಯೋಜನೆಯ ವಿರುದ್ಧ ತಪ್ಪು ಮಾಹಿತಿಯ ಮೂಲಕ ತೀರಾ ಕೆಳ ಮಟ್ಟದ ರಾಜಕೀಯ ಮಾಡಲೂ ಹಿಂಜರಿಯುತ್ತಿಲ್ಲ. ಸದ್ಯ ಆರಂಭವಾಗಿರುವುದು ಎರಡು ಕಾಮಗಾರಿಗಳು ಮಾತ್ರ. ಅದರ ಒಟ್ಟು ವೆಚ್ಚ 1400ಕೋಟಿ ರು. ಮಾತ್ರ. ಇನ್ನುಳಿದ ಯೋಜನೆಗಳ ಕಾಮಗಾರಿಯು ಆರಂಭವೇ ಆಗಿಲ್ಲ.
ಹೀಗಿರುವಾಗ20ಸಾವಿರ ಕೋಟಿ ಹಣ ಕೇಂದ್ರ ಸರಕಾರ ಎಲ್ಲಿ ಖರ್ಚು ಮಾಡುತ್ತಿದೆ ಎಂಬುದನ್ನು ಕಾಂಗ್ರೆಸ್ ಮತ್ತು ಬಹಿರಂಗಪತ್ರ ಬರೆದಿರುವ ನಿವೃತ್ತ ಅಧಿಕಾರಿಗಳೇ ಸ್ಪಷ್ಟನೆ ನೀಡಬೇಕು. 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ತರುವಾಯ ದೇಶದಲ್ಲಿ15ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದೆ.
150ವೈದ್ಯಕೀಯ ಕಾಲೇಜುಗಳು ಆರಂಭಿಸಲಾಗಿದೆ. ಸ್ನಾತಕೋತ್ತರ ವೈದ್ಯಕೀಯ ಪದವಿ ಸೀಟುಗಳಲ್ಲಿ ಶೇಕಡಾ65ರಷ್ಟುಹೆಚ್ಚಳ ಮಾಡಿದೆ.50ಕೋಟಿ ಜನರಿಗೆ ಆಯುಷ್ಮಾನ್ ಭಾರತ ಯೋಜನೆಯಲ್ಲಿ5ಲಕ್ಷದ ವರೆಗೆ ವಿಮಾ ಸೌಲಭ್ಯವನ್ನು ಕಲ್ಪಿಸಿದೆ. ವಿಶ್ವದಲ್ಲಿ ಕೇವಲ 5 ದೇಶಗಳು ಮಾತ್ರ ಕೋವಿಡ್-19ಲಸಿಕೆಯನ್ನು ಕಂಡು ಹಿಡಿದಿರುವುದು. ಅದರಲ್ಲಿ ಭಾರತವು ಒಂದು. ಭಾರತದಲ್ಲಿಯೇ ಮೂರು ಲಸಿಕೆಗಳು ಉತ್ಪಾದನೆ ಆಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.
ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಪತ್ರಿಕೆಯೊಂದಿಕ್ಕೆ ಸಂದರ್ಶನ ನೀಡಿ ಮುಂಬರುವ ಸರಕಾರ ಕೇಂದ್ರ ವಿಸ್ತಾ ಯೋಜನೆಯುಜನರ ಪ್ರಾಣ ನಿರ್ಮಿಸಲು ಬೇಕಿದ್ದ ಹಣದಿಂದ ನಿರ್ಮಿಸಲಾಗಿದೆ ಎಂದು ಬೋರ್ಡ್ ಹಾಕಬೇಕು ಎಂದು ಯೋಜನೆಯ ಕುರಿತು ತಮಗಿರುವ ಅಸೂಯೆಯನ್ನು ಬಹಿರಂಗವಾಗಿ ಪ್ರಕಟ ಮಾಡುತ್ತಾರೆ. ಕಳೆದ ವಾರ ಕೇಂದ್ರ ಸರಕಾರ ಕಿಸಾನ್ ಸಮ್ಮಾನ್ಯೋಜನೆ ಯಡಿಯಲ್ಲಿ ರೈತರ ಖಾತೆಗೆ19ಸಾವಿರ ಕೋಟಿ ರು. ಹಣವನ್ನು ನೇರವಾಗಿ ವರ್ಗಾವಣೆ ಮಾಡಿದೆ. ರಸಗೊಬ್ಬರ ಸಬ್ಸಿಡಿಗಾಗಿ 14500 ಕೋಟಿ ರು. ಹಣವನ್ನು ನೀಡಿದೆ.
ಕೋವಿಡ್ ಹೋರಾಟಕ್ಕೆ ಹಣವಿಲ್ಲ ಎಂದು ಸುಳ್ಳು ಮಾಹಿತಿ ಹರಡುತ್ತಿರುವವರ ಗಮನಕ್ಕೆ ಈ ಸತ್ಯ ಕಾಣುವುದೇ ಇಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಬಜೆಟ್ ಗಾತ್ರ34.5ಲಕ್ಷ ಕೋಟಿ. ಅದರಲ್ಲಿ ಆರೋಗ್ಯ ಕ್ಷೇತ್ರಕ್ಕೆ 2.3ಲಕ್ಷ ಕೋಟಿಯು ಮತ್ತು ಉಚಿತ ಲಸಿಕೆ ನೀಡಲು35ಸಾವಿರ ಕೋಟಿ ಹಣವನ್ನು ಕೇಂದ್ರ ಸರಕಾರ ವೆಚ್ಚ ಮಾಡುತ್ತಿದೆ. ಸೆಂಟ್ರಲ್ ವಿಸ್ತಾ ಯೋಜನೆಯನ್ನು ವಿರೋಧಿಸುತ್ತಿರುವವರು ಜನವರಿಯಲ್ಲಿ ಲಸಿಕಾ ಅಭಿಯಾನ ಆರಂಭವಾದ ಸಮಯದಲ್ಲಿ ದೇಶಿಯವಾಗಿ ಅಭಿವೃದ್ಧಿಪಡಿಸಿದ ಲಸಿಕೆಯ ವಿರುದ್ಧ ಅತ್ಯಂತ ಕೆಳಮಟ್ಟದ ಪ್ರಚಾರ ಕೈಗೊಂಡು ಲಸಿಕೆಯ ವಿರುದ್ಧ ಜನರಲ್ಲಿ ಭಯವನ್ನು ಹುಟ್ಟಿಸಿದರು. ಈ ಮೂಲಕ ಲಸಿಕಾ ಅಭಿಯಾನಕ್ಕೆ ಹಿನ್ನಡೆ ತಂದು ಕೋವಿಡ್ ವಿರುದ್ಧ ಹೋರಾಟಕ್ಕೆ ಕಂಟಕವಾದರು.
ಮೊದಲನೆಯ ಅಲೆಯಲ್ಲಿ ಮುಖಭಂಗಿತರಾಗಿದ್ದ ವಿಘ್ನ ಸಂತೋಷಿಗಳು ಎರಡನೆಯ ಅಲೆಯು ಅಪ್ಪಳಿಸಿದಾಗ ಮೋದಿಯ ವರನ್ನು ದೂಷಿಸಲು ವಿಧಾನಸಭಾ ಚುನಾವಣಾ ಪ್ರಚಾರವನ್ನು ಅಸ್ತ್ರವಾಗಿ ಬಳಕೆ ಮಾಡುತ್ತಾರೆ. ನೆನ್ನೆ ಮೊನ್ನೆಯವರೆಗೆ ಲಸಿಕೆಯ ಬಗ್ಗೆ ತಮ್ಮ ತಿರಸ್ಕಾರ ತೋರಿಸುತ್ತಿದ್ದವರು ಈಗ ಲಸಿಕೆ ಎಲ್ಲಿ? ಸರಕಾರ ಲಸಿಕೆ ನೀಡಲು ವಿಫಲವಾಗಿದೆ ಎಂದು ಪ್ರಶ್ನಿಸಿ ಮತ್ತೊಮ್ಮೆ ಜನರ ಭಾವನೆಯೊಂದಿಗೆ ಚಲ್ಲಾಟಕ್ಕೆ ಮುಂದಾಗಿದ್ದಾರೆ.
ಜನರಲ್ಲಿ ಆವರಿಸಿರುವ ಭೀತಿಯನ್ನು ಬಂಡವಾಳ ಮಾಡಿಕೊಂಡು ಸತ್ಯವನ್ನು ಮರೆಮಾಚಿ ಕೇಂದ್ರ ವಿಸ್ತಾ ಯೋಜನೆಯ ವಿರುದ್ಧ ಜನಾಭಿಪ್ರಾಯ ರೂಪಿಸಲು ವಿರೋಧ ಪಕ್ಷಗಳು ಹೆಣಗಾಡುತ್ತಿವೆ. ಸೆಂಟ್ರಲ್ ವಿಸ್ತಾ ಯೋಜನೆ ಇವರ ದುರದ್ದೇಶಪೂರಿತ ಕಾರ್ಯಸೂಚಿಯ ಭಾಗವಾಗವೇ ಹೊರತು ಜನರ ಆರೋಗ್ಯ ಕಾಪಾಡುವ ಕಾಳಜಿ ಖಂಡಿತವಲ್ಲ