ಪದವಿಗಳಲ್ಲಿ ಆರೋಗ್ಯದ ಅಧ್ಯಯನವಾಗಲಿ
ಅಭಿಪ್ರಾಯ
ಪ್ರಿಯದರ್ಶಿನಿ, ಹಲಸಿನಹಳ್ಳಿ
‘ಎರಡು ಲಕ್ಷದ ಒಂಭತ್ತು ಸಾವಿರದ ಒಂಭೈನೂರ ಮೂವತ್ತೆರಡು’ ಹಾಗೂ ‘ಒಂದು ಲಕ್ಷದ ಅರವತ್ತೈದು ಸಾವಿರದ ನಾಲ್ಕುನೂರ ಹದಿನೆಂಟು’.. ಖಂಡಿತವಾಗಿಯೂ ಇವ್ಯಾವುದೂ ಕರೋನಾ ಲೆಕ್ಕಾಚಾರವಲ್ಲ.
2019ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಆ ವರ್ಷ ಪದವೀಧರರಾದ ಹುಡುಗಿಯರು ಹಾಗೂ ಹುಡುಗರ ಸಂಖ್ಯೆ.ಅಂದರೆ ಅದೊಂದೇ ವರ್ಷ ಒಟ್ಟೂ ಮೂರು ಮುಕ್ಕಾಲು ಲಕ್ಷದಷ್ಟು ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ವಿಶ್ವವಿದ್ಯಾಲಯ ಗಳಿಂದ ಬಿಎ, ಬಿಎಸ್ಸಿ ಮುಂತಾದ ಪದವಿ ಪಡೆದಿದ್ದಾರೆ.
ಅವರೆಲ್ಲರೂ ತಾವು ಆಯ್ಕೆ ಮಾಡಿಕೊಂಡ ಪದವಿಯ ಹೊರತಾಗಿ ಭಾರತದ ಸಂವಿಧಾನ( ), ಪರಿಸರ ಅಧ್ಯಯನ ( ), ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕೌಶಲ್ಯ (    ) ಹಾಗೂ ಗಣಕಯಂತ್ರ ಮಾಹಿತಿ( ) ಎಂಬ ನಾಲ್ಕು ವಿಷಯಗಳನ್ನು ಕಡ್ಡಾಯ ವಾಗಿ ಅಧ್ಯಯನ ಮಾಡಿದ್ದಾರೆ. ಈ ನಾಲ್ಕೂ ವಿಷಯಗಳು ನಮ್ಮ ಪದವಿ ಪಠ್ಯಕ್ರಮದಲ್ಲಿ ಜೋಡಣೆಗೊಂಡು ಹದಿನೈದಕ್ಕೂ ಹೆಚ್ಚು ವರ್ಷಗಳಾಗಿವೆ.
ಅಂದರೆ ವರ್ಷವೊಂದಕ್ಕೆ ಸರಾಸರಿ ಎರಡು ಲಕ್ಷಗಳೆಂದು ಲೆಕ್ಕ ಹಾಕಿದರೂ ಈ ಹದಿನೈದು ವರ್ಷಗಳಲ್ಲಿ ಕಡಿಮೆಯೆಂದರೂ 25 ಲಕ್ಷದಷ್ಟು ವಿದ್ಯಾರ್ಥಿಗಳು ಈ ಕಡ್ಡಾಯ ವಿಷಯಗಳನ್ನು ಅಭ್ಯಸಿಸಿದ್ದಾರೆ. ಅದೇ ರೀತಿ ವರ್ಷವೊಂದಕ್ಕೆ ಕರ್ನಾಟಕದಲ್ಲಿಒಂದು ಲಕ್ಷಕ್ಕೂ ಮೇಲ್ಪಟ್ಟು ಎಂಜನಿಯರಿಂಗ್ ಪದವೀಧರರು ತಯಾರಾಗುತ್ತಾರೆ. ಅವರೆಲ್ಲ ಕಳೆದ ಹತ್ತು ವರ್ಷಗಳಿಂದ ಭಾರತೀಯ ಸಂಧಾವಿನವನ್ನೊಳಗೊಂಡ ಒಂದು ವಿಷಯ ( ,     ) ಹಾಗೂ ಪರಿಸರ ಅಧ್ಯಯನ (  ) ವನ್ನು ಕಡ್ಡಾಯವಾಗಿ ಓದಿದ್ದಾರೆ. ಅಂದರೆ ಸರಿಸುಮಾರು ಹತ್ತು ಲಕ್ಷದಷ್ಟು ವಿದ್ಯಾರ್ಥಿಗಳು ಈ ವಿಷಯಗಳನ್ನು ಕಲಿತವರೆಂದಾಯಿತು.
ಒಟ್ಟಿನಲ್ಲಿ ರಾಜ್ಯಾದ್ಯಂತ ಕಡಿಮೆಯೆಂದರೂ ಮೂವತ್ತೈದು ಲಕ್ಷ ಜನರಿಗೆ ನಮ್ಮ ಸಂವಿಧಾನ ಹಾಗೂ ಪರಿಸರದ ಕುರಿತಾದ ಕನಿಷ್ಠ ಜ್ಞಾನ ಇದೆ. ತಮ್ಮ ಆಸಕ್ತಿಯ ಕಲೆ, ಜ್ಞಾನ, ಕಾಮರ್ಸ್ ಮುಂತಾದವುಗಳೊಂದಿಗೆ ಜೀವನಕ್ಕೆ ಅನಿವಾರ್ಯವೆನಿಸಿರುವ ಈ ವಿಷಯಗಳ ಪ್ರಾಥಮಿಕ ಮಾಹಿತಿ ಅವಶ್ಯವೆಂಬುದು ಪ್ರಶ್ನಾತೀತ. ಆದರೆ, ಇವುಗಳಷ್ಟೇ ಮಹತ್ವವಾದ ಹಾಗೂ ಬದುಕಿಗೆಅನಿವಾರ್ಯವಾದ ವಿಷಯವೊಂದಿದೆ. ಅದುವೇ ಆರೋಗ್ಯ ಮತ್ತು ನೈರ್ಮಲ್ಯ. ಅದರಲ್ಲಿಯೂ ನಾವಿರುವ ಈ ಕರೋನಾಕಾಲಘಟ್ಟದಲ್ಲಿ ಇದನ್ನು ಮೊದಲೇ ಅಳವಡಿಸಬೇಕಿತ್ತೆಂದು ಅನಿಸುತ್ತದೆಯಲ್ಲವೇ? ನಿಜ, ನಮ್ಮ ಆರೋಗ್ಯವನ್ನೇ ಗುರಿಯಾ ಗಿಟ್ಟು ದಾಳಿ ನಡೆಸುತ್ತಿರುವ, ಕಣ್ಣಿಗೆ ಕಾಣದ ವೈರಿಯ ಕಾಲದಲ್ಲಿ ನಾವಿಂದು ಬದುಕುತ್ತಿದ್ದೇವೆ, ಹೋರಾಡುತ್ತಿದ್ದೇವೆ.
ಊರೂರಿಗೂ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ವೈದ್ಯಕೀಯ ಜ್ಞಾನವುಳ್ಳ ಪ್ರತಿ ವ್ಯಕ್ತಿಯೂ ಅಮೂಲ್ಯವಾಗಿದ್ದಾನೆ.ಈಗಿರುವ ವೈದ್ಯಕೀಯ ಸಿಬ್ಬಂದಿ ಕಳೆದೊಂದು ವರ್ಷದಿಂದ ಹಗಲೂ ರಾತ್ರಿ ಅವಿಶ್ರಾಂತವಾಗಿ ಕರೋನಾ ರೋಗಿಗಳ ಚಿಕಿತ್ಸೆ ಯಲ್ಲಿ ದುಡಿದು ದಣಿದಿದ್ದಾರೆ. ಹಾಗಿರುವಾಗ ಈ ಮೂವತ್ತೈದು ಲಕ್ಷ ಪದವೀಧರರು ಉಳಿದೆಲ್ಲ ವಿಷಯಗಳ ಜತೆಗೆ ಆರೋಗ್ಯ ಮತ್ತು ನೈರ್ಮಲ್ಯವೆಂಬುದನ್ನು ಕಲಿತಿದ್ದರೆ ನಮ್ಮ ಆರೋಗ್ಯ ಕಾರ್ಯಕರ್ತರ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಬಹು ದಿತ್ತಲ್ಲವೇ? ಅದರರ್ಥ ತೀವ್ರ ಸೋಂಕಿನಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಬೇಕಿರಲಿಲ್ಲ.
ಬದಲಾಗಿ ತಮ್ಮ ಸುತ್ತಮುತ್ತಲಿನವರಿಗೆ ಸೋಂಕು ಕಂಡ ಮೊದಮೊದಲಿನ ದಿನಗಳಲ್ಲಿಯೇ ಎಚ್ಚರಿಸುವುದರ ಜತೆಗೆ ಧೈರ್ಯ ತುಂಬಿ ಅನಗತ್ಯವಾಗಿ ಮನೆಯವರೆಲ್ಲ ಗಾಬರಿಯಾಗದಂತೆ ನೋಡಿಕೊಳ್ಳಬಹುದಿತ್ತು, ಟೆಸ್ಟ್ ಮಾಡಿಸುವಂತೆ ನೋಡಿಕೊಂಡು ಸಕಾಲಕ್ಕೆ ಆಸ್ಪತ್ರೆಗೆ ಕಳಿಸಿ, ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಲು ನೆರವಾಗಬಹುದಿತ್ತು. ಅಗತ್ಯ ಬಿದ್ದಾಗ ಆರೋಗ್ಯ ಇಲಾಖೆಗೆ ಬೇಕಾದ ಮಾಹಿತಿಗಳನ್ನು ನೀಡಬಹುದಿತ್ತು, ಕರೋನಾ ರೋಗಲಕ್ಷಣಗಳ ಬಗ್ಗೆ ತಮ್ಮ ಹತ್ತಿರದವರಲ್ಲಿ ಜಾಗೃತಿ ಮೂಡಿಸಬಹುದಿತ್ತು.
ಇವೆಲ್ಲ ರೋಗ ಬಂದ ಮೇಲೆ ಮಾಡುವ ಕ್ರಮಗಳಾದವು, ಇದಲ್ಲದೇ ಅವರೆಲ್ಲ ರೋಗ ಬರದಂತೆ ಅನಗತ್ಯವಾಗಿ ಹೊರಗಡೆ ಅಡ್ಡಾಡದಂತೆ ತಮ್ಮವರಿಗೆ ತಿಳಿವಳಿಕೆ ಕೊಡಬಹುದಿತ್ತು, ಅನಿವಾರ್ಯವಾಗಿ ಹೋಗುವ ಪ್ರಸಂಗ ಬಂದರೆ ಹೊರಗೆ ಹೋದಾಗ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳ ಕಡ್ಡಾಯ ಬಳಕೆ, ಸಾಮಾಜಿಕ ಅಂತರ ಕಾಪಾಡುವಿಕೆಗಳ ಮಹತ್ವದ ಅರಿವು ಮೂಡಿಸ ಬಹುದಿತ್ತು. ಸುಳ್ಳು ವದಂತಿಗಳನ್ನು ಹಬ್ಬಿಸುವ ಹಾಗೂ ಕಿವಿಗೊಡುವ ಮೂರ್ಖರಿಗೆ ಬುದ್ಧಿ ಹೇಳಬಹುದಿತ್ತು, ಇಂಜಕ್ಷನ್ ತೆಗೆದುಕೊಳ್ಳುವಂತೆ ಜನರ ಮನವೊಲಿಸಬಹುದಿತ್ತು. ಒಟ್ಟಿನಲ್ಲಿ ಸರಕಾರದ ಅರ್ಧದಷ್ಟು ಕೆಲಸವನ್ನು ಹಗುರ ಮಾಡುವ ಮೂಲಕ ಈ ಮಹಾಮಾರಿಯನ್ನು ನಿಯಂತ್ರಣದಲ್ಲಿಡಬಹುದಿತ್ತು, ಆಮೂಲಕ ಇಷ್ಟೊಂದು ಕಠಿಣ ದಿನಗಳನ್ನು ಕಾಣುವ ಅಗತ್ಯವಿಲ್ಲವಾಗಿತ್ತು.
ಹಾಗೆಂದು ಆ ವಿಷಯವನ್ನು ಕಲಿತವರೆಲ್ಲ ಇವೆಲ್ಲ ಕಾರ್ಯಗಳನ್ನು ಮಾಡುತ್ತಿದ್ದರೇ? ಮಾಡಬೇಕಿತ್ತೇ? ಎಂದರೆ ಖಂಡಿತ ವಾಗಿಯೂ ಮಾಡುತ್ತಿರಲಿಲ್ಲ. ಆದರೆ, ಕನಿಷ್ಠ ಅರ್ಧದಷ್ಟು ಜನರಾದರೂ ಮಾಡಿದ್ದಲ್ಲಿ ಪರಿಸ್ಥಿತಿಯನ್ನು ಇನ್ನೊಂದು ಸ್ವಲ್ಪಸುಧಾರಿಸಬಹುದಿತ್ತು ಎಂಬುದಂತೂ ಸತ್ಯ. ಅಷ್ಟಕ್ಕೂ ಆ ವಿಷಯದ ಕಲಿಕೆಯೇ ಯಾಕೆ? ವಿದ್ಯಾವಂತರೆನ್ನಿಸಿಕೊಂಡವರೆಲ್ಲ ಮಾಡಬಹುದಿತ್ತಲ್ಲವೇ? ಎನ್ನಬಹುದು. ಆದರೆ, ನಮ್ಮಲ್ಲಿಂದು ವಿದ್ಯಾವಂತರಲ್ಲಿ ಹೆಚ್ಚಿನವರು ಕೇವಲ ಕೆಲವಷ್ಟು ವಿಷಯಗಳಲ್ಲಿ ಮಾತ್ರ ಪರಿಣತಿಯನ್ನು ಹೊಂದಿದವರು ಹಾಗೂ ಉಳಿದೆಲ್ಲ ವಿಷಯಗಳಲ್ಲಿ ಸಂಪೂರ್ಣ ಅಜ್ಞಾನಿಗಳು. ಹಾಗಿದ್ದೂ ಇಂಥವರಲ್ಲಿ ತಮಗೆಲ್ಲ ತಿಳಿದಿದೆಯೆಂಬ ಅಹಂಕಾರಿಗಳ ಸಂಖ್ಯೆಯೂ ಕಡಿಮೆಯಿಲ್ಲ.
ಇಂತಿರುವಾಗ ಆರೋಗ್ಯದ ಕುರಿತು ಸ್ವಲ್ಪವಾದರೂ ವ್ಯವಸ್ಥಿತ ಅಧ್ಯಯನ ನಡೆಸಿರುವವರೇ ಇದ್ದರೆ ಹೆಚ್ಚು ಉತ್ತಮವಲ್ಲವೇ? ಇಷ್ಟು ಕರೋನಾ ಕಾಲದ ಅನುಕೂಲಗಳಾದವು, ಇದನ್ನು ಹೊರತುಪಡಿಸಿದರೂ, ಹೆಚ್ಚು ಕಡಿಮೆ ಮನೆಗೊಬ್ಬರಾದರೂ ಪದವೀಧರರಿರುವ ಸಮಯವಿದು. ಕಡೆಪಕ್ಷ ಊರಿಗೊಬ್ಬರಂತೆ ಇದ್ದರೂ ಅಲ್ಲಾಗುವ ಹೃದಯಾಘಾತದಿಂದ ಹಿಡಿದು, ಚಿಕ್ಕಪುಟ್ಟಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಬಹುದಾದಂಥವರು ಇದ್ದರೆ, ವೈದ್ಯಕೀಯ ಸೌಲಭ್ಯಗಳ ಕೊರತೆ ಇರುವ ಗ್ರಾಮೀಣ ಭಾಗಕ್ಕೆ ತುಂಬ ಉಪಯುಕ್ತವಲ್ಲವೇ? ಹಾಗೆಂದ ಮಾತ್ರಕ್ಕೆ ಪದಗಳಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಅಧ್ಯಯನಗಳಾವವೂ ಇಲ್ಲವೇ ಇಲ್ಲ ಎನ್ನುವಂತಿಲ್ಲ, ರೆಡ್ ಕ್ರಾಸ್, ರೋವರ್ಸ್-ರೇಂಜರ್ಸ್, ಎನ್‌ಸಿಸಿ- ಎನ್‌ಎಸ್ಎಸ್ ಮುಂತಾದ ಪ್ರಾತ್ಯಕ್ಷಿಕೆ ಆಧಾರಿತ ಕಾರ್ಯಕ್ರಮಗಳಲ್ಲಿ ಕೆಲಮಟ್ಟಗಿನ ಆರೋಗ್ಯದ ಮಾಹಿತಿಗಳು ಲಭ್ಯವಾಗುತ್ತವೆಯಾದರೂ ಇವುಗಳಾವವೂ ಕಡ್ಡಾಯವಲ್ಲ.
ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಇವುಗಳು ಹಲವು ಕಾಲೇಜುಗಳಲ್ಲಿ ಸಕ್ರಿಯವಾಗಿಯೂ ಇಲ್ಲವೆಂಬುದು ಕೂಡ ನಿಜ. ಹಾಗಾಗಿ ಆರೋಗ್ಯದ ಅಧ್ಯಯನವನ್ನು ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯ ವಿಷಯವನ್ನಾಗಿಸಬೇಕಿದೆ. ಕಡೆಯದಾಗಿ, ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ತಮ್ಮ ಐಚ್ಛಿಕ ವಿಷಯಗಳನ್ನೂ ಹೊರತುಪಡಿಸಿ ತುಂಬ ಆಸಕ್ತಿ ಇರುವ ಅದಾವುದೇ ವಿಷಯವನ್ನು ಅಭ್ಯಸಿಸುವ ಸ್ವಾತಂತ್ರ್ಯ ನೀಡುವ ವ್ಯವಸ್ಥೆಯಂತಹ ಪರಿಣಾಮಕಾರಿ/ಕ್ರಾಂತಿಕಾರಿ ಪದ್ಧತಿಯನ್ನು ಪದವಿಯಲ್ಲಿ ಯೋಜಿಸಿರುವ ನಮ್ಮ ಶಿಕ್ಷಣ ತಜ್ಞರು ಆರೋಗ್ಯದ ಪ್ರಾಮುಖ್ಯತೆಯನ್ನು ಅರಿತಿರುತ್ತಾರೆಂಬ ನಂಬಿಕೆ ನನ್ನದು.