ಬಾಂಬ್ ಹಾರಿದ್ದು ಇಲ್ಲಿ, ನಡುಕ ಅಲ್ಲಿ
ನೆನಪು
ಶಿವಾನಂದ ಸೈದಾಪುರ
ವೈಸರಾಯನ ಮೆರವಣಿಗೆಯ ದಿನ ಸ್ಥಳೀಯ ರಾಜರ ಜಯಕಾರ ಗುಲಾಮಗಿರಿಯ ವಿಧೇಯತೆ ಎದ್ದುಕಾಣುತ್ತಿತ್ತು. ಆ ಅವಿಧೇಯತೆಯನ್ನು ಮುರಿದು ಹಾಕಲು ರಾಸ್ ಬಿಹಾರಿ ಬೋಸ್ ಬಾಂಬ್ ಎಸೆಯುವ ಸಾಹಸಕ್ಕೆ ಕೈ ಹಾಕಿದ್ದರು. ದೆಹಲಿಯ ಚಾಂದನಿ ಚೌಕದಲ್ಲಿ ಹಾರಿದ ಬಾಂಬ್ ಇಂಗ್ಲೆಂಡಿನಲ್ಲಿ ನಡುಕ ಹುಟ್ಟಿಸಿತು. ಬ್ರಿಟಿಷರು ಭಾರತದಲ್ಲಿ ಅನು ಭವಿಸುತ್ತಿದ್ದ ಮುಖಭಂಗವನ್ನು ಜಗತ್ತಿನಾದ್ಯಂತ ಪತ್ರಿಕೆಗಳು ಸುದ್ದಿ ಮಾಡಿ ಪೇಚಿಗೆ ಸಿಲುಕಿಸಿದವು. ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಬೀಗುತ್ತಿದ್ದ ಇಂಗ್ಲೆಂಡಿಗೆ ಬಿಸಿ ಮೂಡಿಸಿದೆ ಭಾರತ! ಒಂದು ವೇಳೆ ಲಾರ್ಡ್ ಹಾರ್ಡಿಂಜ್ ಬಾಂಬೆ ಎಸೆತದಿಂದ ಸತ್ತಿದ್ದರೆ ಎಷ್ಟು ಸುದ್ದಿಯಾಗುತ್ತಿತ್ತೋ ಅದರ ಹತ್ತು ಪಟ್ಟು ಸುದ್ದಿ ಯಾಯಿತು. ಮುಂದೆ ಬ್ರಿಟಿಷರು ನಡಗುವಂತಹ ಸೈನ್ಯ ಕಟ್ಟಿ ಸುಭಾಷ್ ಚಂದ್ರಬೋಸರ ಕೈಗಿಟ್ಟರು.
1912ರ ಡಿಸೆಂಬರ್23ರಂದು ದೆಹಲಿ ಹಿಂದೆಂದೂ ಇಲ್ಲದ ಸಂಭ್ರಮದೊಡನೆ ಶೃಂಗಾರಗೊಂಡಿತ್ತು. ರಂಗೋಲಿ ತಳಿರು-ತೋರಣಗಳಿಂದ ಅಲಂಕೃತಗೊಂಡು ಹಾದಿಬೀದಿಗಳೆ ಮದುವೆಯ ಸಡಗರದ ಕಳೆ ಎದ್ದು ಕಾಣುತ್ತಿತ್ತು. ಅಪಾರ ಜನಸ್ತೋಮದ ಓಡಾಟ ವಿಜೃಂಭಣೆ, ಉತ್ಸಾಹ ಅತ್ಯಧಿಕ ಸಂಖ್ಯೆಯ ರಕ್ಷಕದಳದೊಂದಿಗೆ ಮೆರವಣಿಗೆಯೊಂದು ದೆಹಲಿ ಕೆಂಪುಕೋಟೆ ದಿವಾನ್-ಎ-ಖಾಸಾ ಕಡೆಗೆ ಸಾಗುತ್ತಿತ್ತು.
ಅಷ್ಟೆ ಗೌರವ-ಮರ್ಯಾದೆಯ ಮೆರವಣಿಗೆಗೆ ವ್ಯವಸ್ಥೆ ಮಾಡಿದವರೆಲ್ಲರೂ ಭಾರತೀಯ ರಾಜರುಗಳೇ! ಕಲ್ಕತ್ತೆಯಿಂದ ದೆಹಲಿಗೆ ರಾಜಧಾನಿ ಸ್ಥಳಾಂತರಗೊಂಡಿದ್ದು, ಒಂದೆಡೆಯಾದರೆ ಸಾಕ್ಷಾತ್ ದೇವರ ಸ್ವರೂಪಿ(ರಕ್ತ ಹೀರುವ ಜಿಗಣೆ)ಯಾದ ಲಾರ್ಡ್ ಹಾರ್ಡಿಂಜ್, ವೈಸರಾಯ ಪಟ್ಟ ಹೊತ್ತಮೇಲೆ ದೆಹಲಿಯ ಮೊಟ್ಟ ಮೊದಲ ಪ್ರವೇಶ ಅದಾಗಿತ್ತು. ದೆಹಲಿಯ ಹಾದಿ ಬೀದಿಗಳಲ್ಲಿ ಅಪಾರ ಜನಸ್ತೋಮ ಕಿಕ್ಕಿರಿದು ನೋಡುತ್ತಿತ್ತು. ವಿಜೃಂಭಣೆಗೆ ಅಪಾರ ಶ್ರಮ ವಹಿಸಿದ್ದರು. ಅದರ ಹಿಂದಿನ ಸಿದ್ಧತೆಯೂಬೃಹತ್ ಪ್ರಮಾಣದು!
ಆ ಮೆರವಣಿಗೆಗೆ ಅಬ್ಬರದ ಪ್ರಚಾರವನ್ನು ನೀಡಲಾಗಿತ್ತು. ಈ ಸಂಭ್ರಮಕ್ಕೆ ಭಾರತೀಯ ರಾಜರುಗಳೆಲ್ಲ ಜಿದ್ದಿಗೆ ಬಿದ್ದು ಖರ್ಚು ಮಾಡಿದ್ದರು. ಸ್ವತಃ ಲಾರ್ಡ್ ಹಾರ್ಡಿಂಜ್‌ನ ಮೆರವಣಿಗೆಯಲ್ಲಿ ಜತೆಗೆ ರಾಜರುಗಳೆಲ್ಲ ನಡೆಯುತ್ತಿದ್ದರು. ಮೆರವಣಿಗೆ ನೋಡಲುಕಚ್ಚೆ ಪಂಚೆ ಮೇಲೆ ಕೋಟು ಧರಿಸಿದ ವ್ಯಕ್ತಿಯೊಬ್ಬ ಜಗಮಗಿಸುವ ಬನಾರಸ್ ಸೀರೆಯುಟ್ಟುಕೊಂಡ ಲಕ್ಷಣವಾದ ರೂಪವತಿ ಯೊಬ್ಬಳನ್ನು ಮದುಮಗಳ ರೀತಿ ಅಲಂಕಾರ ಮಾಡಿಸಿಕೊಂಡು ಚಾಂದಿನಿ ಚೌಕ್ ಬಳಿ ಕರೆದುಕೊಂಡು ಬಂದಿದ್ದ.
ಆ ಜೋಡಿ, ನೂಕುನುಗ್ಗಲು ಜನಸಂದಣಿಯ ಮಧ್ಯೆ ತೂರಿಕೊಂಡು ಮೆರವಣಿಗೆ ನೋಡಲು ಹವಣಿಸುತ್ತಿದ್ದರು. ಪಕ್ಕದಲ್ಲಿಯೇ ಮನೆಯ ಉಪ್ಪರಿಗೆಯ ಮೇಲೆ ನಿಂತಿರುವ ಮಹಿಳೆಯರ ದಂಡು ನೋಡಿ ಆ ರೂಪವತಿ ಅವರ ಜತೆ ಸೇರಿಕೊಂಡಳು. ಕಚ್ಚೆ ಪಂಚೆ ವ್ಯಕ್ತಿಗೆ ಉಪ್ಪರಿಗೆ ಮೇಲೆ ಅವಕಾಶ ಸಿಗದೆ ದಟ್ಟ ಜನಸಂದಣಿಯಲ್ಲಿ ನಿಂತು ನೋಡತೊಡಗಿದ. ಮೆರವಣಿಗೆ ಚಾಂದನಿ ಚೌಕ್ಹತ್ತಿರ ಬರುವ ಹೊತ್ತಿಗೆ ಜನಸ್ತೋಮದಿಂದ ಅವಡುಗಚ್ಚುವಂತೆ ಕರತಾಡನ ಮುಗಿಲು ಮುಟ್ಟುತ್ತಿತ್ತು.
ಮೆರವಣಿಗೆಯಲ್ಲಿದ್ದ ಲಾರ್ಡ್ ಹಾರ್ಡಿಂಜ್ ಎದೆಯುಬ್ಬಿಸಿ ಅಧಿಕಾರಶಾಹಿ ಠೀವಿಯಿಂದ ಕೈಯೆತ್ತಿ ಜನರ ಬೀಸುತ್ತಿದ್ದ. ವೈಸರಾಯನ ಹೊತ್ತ ಆನೆ ನಿಧಾನವಾಗಿ ಚಾಂದನಿ ಚೌಕ ಸಮೀಪಿಸುತ್ತಿತ್ತು. ಮನೆಯ ಉಪ್ಪರಿಗೆಗಳ ಮೇಲೆ ನಿಂತಿರುವ ಜನ ವೈಸರಾಯನ ಮೇಲೆ ಹೂಮಳೆ ಗರೆಯುತ್ತ ತಮ್ಮ ಸಂತೋಷ ವ್ಯಕ್ತಪಡಿಸುತ್ತಿದ್ದರು. ಸುರಿಯುತ್ತಿದ್ದ ಹೂ ಮಳೆಯ ಮಧ್ಯ ಒಂದು ಬಾಂಬವೊಂದು ಸ್ಫೋಟಗೊಂಡು ಎದೆ ಜಲ್ ಅನಿಸಿತು. ಆ ಬಾಂಬ್ ಸೋಟಿಸಿದ್ದು ಲಕ್ಷ್ಮಿಬಾಯಿ ಎಂಬ ರೂಪವತಿ!
ಹಾಗೇ ಕ್ಷಣಮಾತ್ರದಲ್ಲಿ ಕೆಲಸ ಮುಗಿಸಿದ ಲಕ್ಷ್ಮೀಬಾಯಿ, ಬಸವಂತ್ ಕುಮಾರ್ ವಿಶ್ವಾಸ್ ಆಗಿ ಮಾರ್ಪಟ್ಟಿದ್ದನು. ಜತೆಗೆ ಬಂದ ಕಚ್ಚೆಪಂಚೆಯ ವ್ಯಕ್ತಿ ರಾಸ್ ಬಿಹಾರಿ ಬೋಸ್! ಬೋಸ್ ಅದ್ಭುತ ಯೋಜನೆಗಾರ! ಕಣ್ಣು ಮಿಟುಕಿಸುವುದರೊಳಗೆ ಇಬ್ಬರು ಅಲ್ಲಿಂದ ಪರಾರಿಯಾದರು.
ಬಂಗಾಳದ ಬರ್ದ್ವಾನ್ ಜಿಯ ಸುಬಲ್ ದಾಹಾ ಹಳ್ಳಿಯಲ್ಲಿ 25 ಮೇ 1886ರಂದು ರಾಸ್ ಬಿಹಾರಿ ಬೋಸ್ ಜನನವಾಯಿತು.ಕಾಯಸ್ಥ ಕುಟುಂಬದಲ್ಲಿ ಜನಿಸಿದ ಬೋಸ್ ತಂದೆ-ತಾಯಿಯ ಅಚ್ಚುಮೆಚ್ಚಿನ ಮಗನಾಗಿದ್ದ. ಚಿಕ್ಕಂದಿನಿಂದಲೇ ತುಂಬಾಹಠಮಾರಿ ರಾಸ್ ಬಿಹಾರಿ ಬೋಸ್ ಅಷ್ಟೇ ತುಂಟತನ ಸ್ವಭಾವದ ಬಾಲಕನಾಗಿದ್ದ.
ಕಲ್ಕತ್ತೆಯಲ್ಲಿ ತನ್ನ ಶಿಕ್ಷಣವನ್ನು ಪೂರೈಸಿದ. ಸೈನ್ಯಕ್ಕೆ ಸೇರುವ ಗೀಳು ಬಹಳಷ್ಟು ಆವರಿಸಿತ್ತು. ಅದರಂತೆ ಬ್ರಿಟಿಷ್ ಸೈನ್ಯಕ್ಕೆಸೇರುವ ಪ್ರಯತ್ನವನ್ನು ಕೂಡ ಮಾಡಿದರು. ಆದರೆ, ಅವತ್ತಿನ ಬ್ರಿಟಿಷರ ಮನಸ್ಥಿತಿಯೇ ಬೇರೆ ಇತ್ತು. ಬಂಗಾಳಿಗಳು ಶುದ್ಧಮೈಗಳ್ಳರೆಂದು, ಸೈನ್ಯದ ದಾರಿ ತಪ್ಪಿಸುತ್ತಿರುವವರೆಂದು ಜರಿಯುತ್ತಿದ್ದರು. ಸೈನ್ಯಕ್ಕೆ ಸೇರಲು ಹೋದಾಗ ಅದೇ ಅನುಭವ ರಾಸ್ ಬಿಹಾರಿ ಬೋಸ್‌ಗೂ ಆಯಿತು. ಸೈನ್ಯಾಧಿಕಾರಿಗಳಿಂದ ತಿರಸ್ಕೃತರಾದ ಬೋಸ್ ಬಹುಶಃ ಅವತ್ತೆ ಪ್ರತಿಜ್ಞೆ ಮಾಡಿದರೇನೋ ಗೊತ್ತಿಲ್ಲ!
ವೈಸರಾಯನ ಮೆರವಣಿಗೆಯ ದಿನ ಸ್ಥಳೀಯ ರಾಜರ ಜಯಕಾರ ಗುಲಾಮಗಿರಿಯ ವಿಧೇಯತೆ ಎದ್ದು ಕಾಣುತ್ತಿತ್ತು. ಆ ಅವಿಧೇಯತೆಯನ್ನು ಮುರಿದು ಹಾಕಲು ರಾಸ್ ಬಿಹಾರಿ ಬೋಸ್ ಬಾಂಬ್ ಎಸೆಯುವ ಸಾಹಸಕ್ಕೆ ಕೈ ಹಾಕಿದ್ದರು. ದೆಹಲಿಯಚಾಂದನಿ ಚೌಕದಲ್ಲಿ ಹಾರಿದ ಬಾಂಬ್ ಇಂಗ್ಲೆಂಡಿನಲ್ಲಿ ನಡುಕ ಹುಟ್ಟಿಸಿತು. ಬ್ರಿಟಿಷರು ಭಾರತದಲ್ಲಿ ಅನುಭವಿಸುತ್ತಿದ್ದ ಮುಖಭಂಗವನ್ನು ಜಗತ್ತಿನಾದ್ಯಂತ ಪತ್ರಿಕೆಗಳು ಸುದ್ದಿ ಮಾಡಿ ಪೇಚಿಗೆ ಸಿಲುಕಿಸಿದವು.
ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಬೀಗುತ್ತಿದ್ದ ಇಂಗ್ಲೆಂಡಿಗೆ ಬಿಸಿ ಮೂಡಿಸಿದೆ ಭಾರತ! ಒಂದು ವೇಳೆ ಲಾರ್ಡ್ ಹಾರ್ಡಿಂಜ್ ಬಾಂಬೆ ಎಸೆತದಿಂದ ಸತ್ತಿದ್ದರೆ ಎಷ್ಟು ಸುದ್ದಿಯಾಗುತ್ತಿತ್ತೋ ಅದರ ಹತ್ತು ಪಟ್ಟು ಸುದ್ದಿಯಾಯಿತು. ಮುಂದೆ ಬ್ರಿಟಿಷರು ನಡಗುವಂತಹ ಸೈನ್ಯ ಕಟ್ಟಿ ಸುಭಾಷ್ ಚಂದ್ರ ಬೋಸರ ಕೈಗಿಟ್ಟರು.