ಪ್ರಕೃತಿ ರಕ್ಷಣೆಯ ಬಹುಗುಣ ಸುಂದರಲಾಲ್
ಸ್ಮರಣೆ
ಸುರೇಶ್ ಗುದಗನವರ
ಕರೋನಾ ಕಾಲದಲ್ಲಿ ನಾವೆಲ್ಲರೂ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡುತ್ತೇವೆ. ಏಕೆಂದರೆ ಆಮ್ಲಜನಕ ಮಹತ್ವ ಏನೆಂದು ನಮಗೆ ಈಗ ಅರಿವಾಗಿದೆ. ಪರಿಸರವನ್ನು ಉಳಿಸದೇ ಹೋದರೆ ನಮಗೆ ಉಳಿಗಾಲವಿಲ್ಲ ಎಂಬುದನ್ನು ಅನೇಕ ದಶಕಗಳ ಹಿಂದೆಯೇ ಮನಗಂಡು, ಅದನ್ನು ಉಳಿಸುವ ಪ್ರಯತ್ನದಲ್ಲಿ ತಮ್ಮ ಸರ್ವಸ್ವವನ್ನೆಲ್ಲ ಮೀಸಲಿಟ್ಟು ಯಶಸ್ವಿಯಾದವರು ಸುಂದರಲಾಲ್ ಬಹುಗುಣ ಅವರು.
ಚಿಪ್ಕೊ ಚಳುವಳಿಯ ರೂವಾರಿ ಮತ್ತು ಪರಿಸರವಾದಿ ಸುಂದರಲಾಲ್ ಬಹುಗುಣ ಅವರ ಅಗಲಿಕೆ ಭಾರತದಲ್ಲಿ ಮಾತ್ರವಲ್ಲದೇವಿಶ್ವದಾದ್ಯಂತ ಪರಿಸರ ಪ್ರಿಯರಿಗೆ ಅತೀ ನೋವುನ್ನುಂಟು ಮಾಡಿದೆ. ವಿಪರ್ಯಾಸವೆಂದರೆ ಪ್ರಕೃತಿಗಾಗಿ ತನ್ನ ಇಡೀ ಜೀವನ ವನ್ನೇ ಕಳೆದ ವ್ಯಕ್ತಿ ಕರೋನಾ ವೈರಸ್‌ನೊಂದಿಗೆ ಅಗಲಿರುವುದು ವಿಚಿತ್ರವಾದರೂ ಸತ್ಯ.
ಸುಂದರಲಾಲ್ ಬಹುಗುಣ ಅವರು 1927ರ ಜನವರಿ9ರಂದು ಉತ್ತರಾಖಂಡದ ತೆಹ್ರಿ ಬಳಿಯ ಮರೋಡಾ ಎಂಬ ಹಳ್ಳಿಯಲ್ಲಿ ಜನಿಸಿದರು. ಅಂದಾಜು 800 ವರ್ಷಗಳ ಹಿಂದೆ ಬಂಗಾಳದಿಂದ ಅವರ ಪೂರ್ವಜರು ತೆಹ್ರಿಗೆ ವಲಸೆ ಬಂದರು. ಅವರ ತಂದೆ ಅಂಬದತ್ತ ಬಹುಗುಣ, ತಾಯಿ ಪೂರ್ಣದೇವಿ. ಸುಂದರಲಾಲ್ ಅವರು ಪ್ರಾಥಮಿಕ ಶಿಕ್ಷಣದ ನಂತರ ಲಾಹೋರ್‌ಗೆ ತೆರಳಿದರು. ಅಲ್ಲಿಂದ ಅವರು ಬಿ.ಎ. ಪದವಿ ಪಡೆದರು. ಆರಂಭದಲ್ಲಿ ಅವರು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದರು.
ಅವರು 1947ಕ್ಕಿಂತ ಮೊದಲು ಜನರನ್ನು ವಸಾಹತುಶಾಹಿ ಆಡಳಿತದ ವಿರುದ್ಧ ಅಣಿಗೊಳಿಸಿದರು. ನಂತರ 1965ರಿಂದ 1970ರ ವರೆಗೆ ಮದ್ಯ ವಿರೋಧಿ ಹೋರಾಟದಲ್ಲಿ ಬುಡಕಟ್ಟು ಮಹಿಳೆಯರನ್ನು ಸಂಘಟಿಸಿದರು. ಮಹಾತ್ಮಾ ಗಾಂಧೀಜಿಯವರ ಪ್ರೇರಣೆ ಯಿಂದ ಹದಿಮೂರನೆಯ ವಯಸ್ಸಿನಲ್ಲಿಯೇ ಶ್ರೀದೇವ ಸುಮನ್ ಅವರ ಮಾರ್ಗದರ್ಶನದಲ್ಲಿ ಬಹುಗುಣ ಅವರು ಮುನ್ನಡೆದು, ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡರು.
1956ರಲ್ಲಿ ಸುಂದರಲಾಲ್ ಬಹುಗುಣ ಅವರು ವಿಮಲಾ ಅವರನ್ನು ಷರತ್ತಿನೊಂದಿಗೆ ಮದುವೆಯಾದರು. ಗ್ರಾಮೀಣ ಪ್ರದೇಶ ದಲ್ಲಿ ವಾಸಿಸುವುದು ಆಶ್ರಮವನ್ನು ಪ್ರಾರಂಭಿಸುವುದು ಷರತ್ತಿನ ನಿಬಂಧನೆಯಾಗಿತ್ತು. ಹಾಗೆಯೇ ಜೀವನದಲ್ಲಿ ಗಾಂಧಿವಾದಿ ತತ್ತ್ವಗಳನ್ನು ಅಳವಡಿಸಿಕೊಂಡ ಅವರು 1974ರ ಮಾರ್ಚ್26ರಂದು ಉತ್ತರ ಪ್ರದೇಶದಲ್ಲಿ ಚಿಪ್ಕೊ ಚಳವಳಿಯನ್ನು ಪ್ರಾರಂಭಿಸಿ ದರು. ಹಿಂದಿಯಲ್ಲಿ ‘ಚಿಪ್ಕೊ’ ಎಂದರೆ ‘ತಬ್ಬಿಕೊಳ್ಳುವುದು’ ಎಂದರ್ಥ.
ಮರಗಳು ಮತ್ತು ಕಾಡುಗಳ ಪ್ರದೇಶಗಳನ್ನು ಅರಣ್ಯ ಗುತ್ತಿಗೆದಾರರಿಂದ ಕತ್ತರಿಸದಂತೆ ಉಳಿಸುವ ಪ್ರಯತ್ನವಾಗಿ, ಗಿಡಗಳನ್ನು ಕತ್ತರಿಸುವಾಗ ಜನರು ಸ್ವಯಂಪ್ರೇರಿತರಾಗಿ ಮರಗಳನ್ನು ತಬ್ಬಿಕೊಂಡು ಹಿಡಿಯಲು ಪ್ರಾರಂಭಿಸಿದರು. ಉತ್ತರಾಖಂಡದದಟ್ಟಡವಿಯಲ್ಲಿ ಮಹಿಳೆಯರಿಂದ ಚಾಲನೆ ಪಡೆದ ಪರಿಸರ ರಕ್ಷಣಾ ಹೋರಾಟದ ಸಂದೇಶವನ್ನು ಬೇರೆ ರಾಜ್ಯಗಳಿಗಷ್ಟೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ಬಿತ್ತರಿಸುತ್ತ ಸುತ್ತಿದವರು ಸುಂದರಲಾಲ್ ಬಹುಗುಣರವರು.
ಅವರು ನೆರೆಯ ಚಾವೋಲಿ ಜಿಲ್ಲೆಯಲ್ಲಿಯೇ ಮಹಿಳೆಯರು ಮರಗಳನ್ನು ಅಪ್ಪಿಕೊಂಡು ಅರಣ್ಯ ಗುತ್ತಿಗೆದಾರರನ್ನು ಹಿಮ್ಮೆಟ್ಟಿಸಿ ದರು. ಪತ್ರಿಕೆಗಳಿಗೆ ಆಗಾಗ ಲೇಖನಗಳನ್ನು ಬರೆಯುತ್ತಿದ್ದ ಅವರು ಚಿಪ್ಕೊ ಚಳವಳಿಯ ಮೂಲಕ ಪರಿಸರ ಸಂರಕ್ಷಣೆಯ ವಕ್ತಾರರಾದರು. 1980ರ ಆರಂಭದಲ್ಲಿ ಕಾಶ್ಮೀರದಿಂದ ನಾಗಾಲ್ಯಾಂಡಿನ ಕೊಮಾದವರೆಗೆ ಬಹುಗುಣ ಅವರು ಹಿಮಾಲಯದ ಪರಿಸರ ಅಭಿವೃದ್ಧಿಯ ದಾಳಿಗೆ ನಲುಗುತ್ತಿರುವುದನ್ನು ಮನಗಂಡು ಗ್ರಾಮಗಳಿಗೆ ತಿಳಿಸಲು ಎರಡು ವರ್ಷಗಳವರೆಗೆ ಪಾದಯಾತ್ರೆ ನಡೆಸಿದರು. ಈ ರೀತಿಯ ಪರಿಸರ ಸಂರಕ್ಷಣೆಯ ಮಹತ್ವದ ಅರಿವು ವಿಶ್ವದಲ್ಲೆಡೆ ಹಬ್ಬಿತು.
ಹಾಗೆಯೇ ಕರ್ನಾಟಕದಲ್ಲಿಯೂ ಅಪ್ಪಿಕೋ ಚಳವಳಿ ಆರಂಭವಾಯಿತು. ಈ ಸಂದರ್ಭದಲ್ಲಿ ಬಹುಗುಣರವರು ಕರ್ನಾಟಕಕ್ಕೆ ಬಂದು ಬೇಡ್ತಿ ಚಳವಳಿಗೆ ಕೈ ಜೋಡಿಸಿದರು. ಚಿಪ್ಕೊ ಮಹಿಳೆಯರ ಸಾಹಸವನ್ನು ಹಳ್ಳಿಯ ಜನರಿಗೆ ಬಣ್ಣಿಸಿದರು. ಬಹುಗುಣ ರವರು ‘ಪರಿಸರವು ಶಾಶ್ವತ ಆರ್ಥಿಕತೆ’ ಎಂಬ ಚಿಪ್ಕೊ ಘೋಷಣೆಯನ್ನು ಹೊರಡಿಸಿದರು.
ಅವರು ಚಳವಳಿಯನ್ನು ಇನ್ನಷ್ಟು ಪ್ರಾಮುಖ್ಯಗೊಳಿಸಲು 1981ರಿಂದ1983ರವರೆಗೆ ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಮಾಡಿ ಚಳವಳಿಗೆ ಬೆಂಬಲವನ್ನು ಪಡೆದರು. ಎಲ್ಲೆಲ್ಲಿ ನಿಸರ್ಗಕ್ಕೆ ಅಭಿವೃದ್ಧಿಯ ಕೊಡಲಿ ಏಟು ಬೀಳುತ್ತಿದ್ದಲ್ಲೆಲ್ಲ ಅಲ್ಲಿಗೆ ಬಹುಗುಣ ಅವರು ಹಾಜರಾಗತೊಡಗಿದರು. ‘ಅರಣ್ಯ ಎಂದರೆ ಬರೀ ಫರ್ನಿಚರ್ ಮಾಡುವ ದಿಮ್ಮಿಗಳಲ್ಲ, ಅರಣ್ಯಗಳೆಂದರೆಪೃಥ್ವಿಯ ಶ್ವಾಸಕೋಶ, ನದಿಗಳ ಜನ್ಮದಾಯಿನಿ, ಮಣ್ಣಿನ ರಕ್ಷಣೆಯ ಖಜಾನೆ’ ಎಂದು ಆತ್ಮವಿಶ್ವಾಸದಿಂದ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದರು.
ವಿಶೇಷವೆಂದರೆ ಅವರು ಸೇಬು ಹಣ್ಣುಗಳ ರವಾನೆಗೆಂದು ಕಟ್ಟಿಗೆಯ ಪ್ಯಾಕಿಂಗ್ ನೋಡಿ ಸೇಬು ಹಣ್ಣನ್ನು ತ್ಯಜಿಸಿದರು. ಉರುವಲು ಸೌದೆಗೆಂದು ಗಿಡಮರಗಳ ನಾಶ ನೋಡಿ ಅವರು ಬೇಯಿಸಿದಆಹಾರವನ್ನು ತ್ಯಜಿಸಿದರು. ಬಹುಗುಣ ಅವರುಹಿಮಾಲಯದ ಕಾಡುಗಳ ಮೂಲಕ ಅಂದಾಜು 4700 ಕಿ.ಮೀ. ಚಾರಣ ಮಾಡಿ ಪ್ರಮುಖ ಯೋಜನೆಗಳಿಂದ ಉಂಟಾಗುವ ಅರಣ್ಯನಾಶ ಮತ್ತು ಮಾನವ ಜೀವನದ ಬಗ್ಗೆ ತಿಳಿದುಕೊಂಡರು. ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರನ್ನುಭೇಟಿಯಾಗಿ ಅವರಿಗೆ ಸಂಗತಿ ಮನವರಿಕೆ ಮಾಡಿಕೊಟ್ಟ ನಂತರ ಅವರು ಮರಗಳ ಕಡಿಯುವುದನ್ನು ನಿಲ್ಲಿಸಿದರು.
ಸುಂದರಲಾಲ್ ಬಹುಗುಣ ಅವರ ಸತ್ಯಾಗ್ರಹ ಕೇವಲ ಉತ್ತರಾಖಂಡಕ್ಕೆ ಸೀಮಿತವಾಗಿರಲಿಲ್ಲ. ಅವರು ದೊಡ್ಡ ಅಣೆಕಟ್ಟು ಗಳನ್ನು ವಿರೋಧಿಸುತ್ತ, ದೇಶದ ನಾನಾ ಭಾಗಗಳಲ್ಲಿ ದೊಡ್ಡ ಅಣೆಕಟ್ಟುಗಳ ವಿರುದ್ಧ ಚಳವಳಿಗಳಲ್ಲಿ ಭಾಗವಹಿಸಿದರು.1980ರ ದಶಕದ ಮಧ್ಯಭಾಗದಲ್ಲಿ ಛತ್ತಿಸ್‌ಗಡದ ಬಸ್ತಾರನ ಭೋಪಾಲಪಟ್ನಂನಲ್ಲಿ ಬುಡಕಟ್ಟು ಜನಾಂಗದವರು ದೊಡ್ಡ ಆಂದೋಲನ ನಡೆಸಿದರು. ಅದರ ಪಕ್ಕದಲ್ಲಿರುವ ಗಡ್ಡಿರೋಲಿಯ ಇಚಂಪಲ್ಲಿಯಲ್ಲಿ ಎರಡು ದೊಡ್ಡ ಅಣೆಕಟ್ಟುಗಳನ್ನುವಿರೋಧಿಸಿ, 1984ರ ಏಪ್ರಿಲ್9ರಂದು ಮಾನವ ಬಚಾವೋ ಜಂಗಲ್ ಬಜಾವೋ ಆಂದೋಲನದಲ್ಲಿ ಸಾವಿರಾರು ಬುಡಕಟ್ಟು ಜನಾಂಗದವರು ಕಾಲ್ನಡಿಗೆಯಲ್ಲಿ ನಡೆದು ಗಡ್ಡಿರೋಲಿ ಕೇಂದ್ರಕಚೇರಿಯನ್ನು ತಲುಪಿದರು.
ಈ ಚಳವಳಿಯನ್ನು ಮುನ್ನಡೆಸಲು ಬುಡಕಟ್ಟು ಮುಖಂಡ ಲಾಲ್ ಶ್ಯಾಮ್ ಷಾ, ಸಾಮಾಜಿಕ ಕಾರ್ಯಕರ್ತ ಬಾಬಾಅಮ್ಟೆ ಮತ್ತು ಚಿಪ್ಕೊ ಚಳವಳಿಯ ರೂವಾರಿ ಸುಂದರಲಾಲ್ ಬಹುಗುಣ ಪ್ರಮುಖ ಪಾತ್ರ ವಹಿಸಿದರು. ತೆಹ್ರಿ ಅಣೆಕಟ್ಟಿನ ನಿರ್ಮಾಣದ ವಿರುದ್ಧವೂ ನಿರಂತರ ಹೋರಾಟ ನಡೆಸಿದರು. ಅಣೆಕಟ್ಟು 2004ರಲ್ಲಿ ಅದರ ನಿರ್ಮಾಣ ತಪ್ಪಿಸಲಾಗದಿದ್ದರೂ ಅಣ್ಣೆಕಟ್ಟಿನ ನಿರ್ಮಾಣ ಸಮಯದಲ್ಲಿ ಹಾಗೂ ನಂತರದಲ್ಲಿ ಪರಿಸರ ಪ್ರಜ್ಞೆಯ ಕುರಿತಾದ ಜವಾಬ್ದಾರಿಗಳ ಕುರಿತು ಸಮಾಜದ ಸಾಕ್ಷಿಪ್ರಜ್ಞೆ ಯನ್ನು ಉಳಿಸುವಲ್ಲಿ ಅವರ ಹೋರಾಟ ಪ್ರೇರಣೆಯನ್ನು ನೀಡಿತು.
ಹಿಮಾಲಯ ದಲ್ಲಿ ಹೋಟೆಲ್ ಮತ್ತು ಐಷಾರಾಮಿ ಪ್ರವಾಸೋದ್ಯಮದ ನಿರ್ಮಾಣಕ್ಕೂ ಅವರು ಪ್ರಬಲ ವಿರೋಧಿಯಾಗಿದ್ದರು.ಬಹುಗುಣರವರು ಪತ್ನಿ ಮಲಾ ನೌತಿಯಲ್ ಅವರ ಸಹಾಯದಿಂದ ಸಿಲೈರಾದಲ್ಲಿ ‘ಹಿಲ್ ನವಾಜೀವನ್ ಮಂಡಲ್’ನ್ನು ಸ್ಥಾಪಿಸಿ ದರು. ಅಲ್ಲದೇ ಮೀರಾಬೆನ್ ಮತ್ತು ಠಕ್ಕರಬಪ್ಪಾ ಅವರೊಂದಿಗೆ ಸುಂದರಲಾಲ್ ಅವರು ದಲಿತ ವಿದ್ಯಾರ್ಥಿಗಳನ್ನು ಉನ್ನತಿ ಗೇರಿಸಲು ಶ್ರಮಿಸಿದರು ಹಾಗೂ ಅವರಿಗೆ ಹಿತ್ರೆಯಲ್ಲಿ ಠಕ್ಕರ್ ಬಪ್ಪಾ ಹಾಸ್ಟೆಲ್ ಆರಂಭಿಸಿದರು.
ಬಹುಗುಣ ಅವರು ದಲಿತರಿಗೆ ದೇವಾಲಯವನ್ನು ಪ್ರವೇಶಿಸುವ ಸಲುವಾಗಿ ಆಂದೋಲನವನ್ನು ಪ್ರಾರಂಭಿಸಿದರು. ಅವರು ಹದಿನಾರು ದಿನಗಳ ಕಾಲ ಉಪವಾಸ ಕೈಗೊಂಡರು. ಚಿಪ್ಕೊ ಚಳವಳಿಯಿಂದಾಗಿ ಅವರು ‘ವೃಕ್ಷಮಿತ್ರ’ ಎಂದು ವಿಶ್ವದಾದ್ಯಂತ ಪ್ರಸಿದ್ಧರಾದರು. ಸುಂದರಲಾಲ್ ಅವರು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಧಾರ್ತಿ ಕಿ ಪ್ರಕರ್, ಪರಿಸರ ಜ್ಞಾನ ಶಾಶ್ವತ ಆರ್ಥಿಕತೆ, ಭೂ ಪ್ರಯೋಗ ಮೇ ಬುನಿಯಾದಿ ಪರಿವರ್ತನೆ ಕಿ ಆರ್ ಹಾಗೂ ಭಾರತದ ಪರಿಸರ ಪುರಾಣ ಮತ್ತು ವಾಸ್ತವಕೃತಿಗಳನ್ನು ನೀಡಿದ್ದಾರೆ.
ಸುಂದರಲಾಲ್ ಬಹುಗುಣ ಅವರ ಪರಿಸರ ಮತ್ತು ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಸರಕಾರ, ಸಂಘ – ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಅಮೆರಿಕದ ನೇಚರ್ ಸ್ನೇಹದ ಪ್ರಶಸ್ತಿ, ಸ್ಟಾಕ್‌ಹೋಮ್‌ನ ‘ಪರಿಸರ ಗಾಂಧಿ’ ಪ್ರಶಸ್ತಿ, ಜಮ್ನಾಲಾಲ್ ಬಜಾಜ್ ಪ್ರಶಸ್ತಿ, ಶೇರ್ – ಎ – ಕಾಶ್ಮೀರ್ ಪ್ರಶಸ್ತಿ, ಸರಸ್ವತಿ ಸಮ್ಮಾನ ಪ್ರಶಸ್ತಿ, ಐ.ಐ.ಟಿ. ರೂರ್ಕಿ ನೀಡಿದ ಡಾಕ್ಟರ್ ಆ-ಸೋಶಿಯಲ್ ಸೈನ್ಸ್ ಗೌರವ ಪದವಿ, ಗಾಂಧಿ ಸೇವಾ ಸಮ್ಮಾನ, ಸತ್ಯಪಾಲ್ ಮಿತ್ತಲ್ ಪ್ರಶಸ್ತಿ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.
ಅವರು 1981ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದರು. ಮರಗಳನ್ನು ಕಡಿಯುವುದು ಮುಂದುವರಿಯುವರೆಗೂ ಈ ವಿಶೇಷ ಗೌರವಕ್ಕೆ ಅರ್ಹನೆಂದು ಪರಿಗಣಿಸುವುದಿಲ್ಲ ಎಂದು ಹೇಳಿದರು. ಅವರ ಸ್ಫೂರ್ತಿದಾಯಕ ನಾಯಕತ್ವದಿಂದ ಭಾರತದ ಕಾಡು ಗಳು ಬಲಿಯಾಗದೆ ಉಳಿದುಕೊಂಡವು. ಚಿಪ್ಕೋ ಚಳವಳಿ ನಡೆದು4ದಶಕಗಳೇ ಉರುಳಿದವು. ಪರಿಸರದ ಮೇಲಿನ ಹಾನಿಯನ್ನು ಅಂದಿಗಿಂತಲೂ ಹೆಚ್ಚಾಗಿಯೇ ಇಂದು ಅನುಭವಿಸುತ್ತಿರುವ ಮನುಷ್ಯ ಇನ್ನೂ ಎಚ್ಚೆತ್ತುಕೊಳ್ಳದಿರುವುದು ದೌರ್ಭಾಗ್ಯ. ತಾನೇ ಸೃಷ್ಟಿಸಿಕೊಂಡ ವಿಷ ವರ್ತುಲದೊಳಗೆ ಸಿಲುಕಿಕೊಂಡು ಒದ್ದಾಡುತ್ತಿದ್ದರೂ ಇನ್ನೂ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧನಾಗದ ಮಾನವ ತಾನು ಪರಿಸರದ ಮೇಲೆ ಮಾಡಿದ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾನೆ.
ಜಲ – ಅರಣ್ಯ – ಗಾಳಿಗಳೆಲ್ಲ ಮನುಷ್ಯನ ಜೀವನಾಡಿಗಳು. ಮಾನವನ ಕೃತ್ಯಗಳಿಂದ ಇವು ಕಲುಷಿತಗೊಂಡ ಪರಿಣಾಮ ಜನಜೀವನ ವಿನಾಶದಂಚಿನಲ್ಲಿದೆ. ಇರುವುದೊಂದೇ ಭೂಮಿ, ಇದು ಉಳಿದರಷ್ಟೇ ಜೀವನ. ಶೋಕಿಗಾಗಿಯೋ ಅಥವಾ ನೈಜ ಕಳಕಳಿಯಿಂದಲೋ ಆಚರಿಸಲ್ಪಡುವ ಪರಿಸರ ದಿನಾಚರಣೆಗಳು ನಿಜ ಉದ್ದೇಶವನ್ನು ಅರಿತರೆ ಮಾತ್ರ ಭವಿಷ್ಯ ಆಶಾದಾಯಕ ವಾದೀತು. ಇಂದು ಅವರು ನಮ್ಮ ಜತೆಗಿಲ್ಲ. ಆದರೆ ಅವರ ಆಲೋಚನೆಗಳು, ಕೃತಿಗಳು ನಮ್ಮೊಂದಿಗೆ ಇವೆ.
ಅವರು ಸೂಚಿಸಿದ ಮಾರ್ಗಗಳನ್ನು ಅನುಸರಿಸಿ, ಪ್ರಕೃತಿ ಮತ್ತು ಪರಿಸರದ ಬಗ್ಗೆ ಪ್ರಜ್ಞಾಪೂರ್ವಕ ಮನೋಭಾವವನ್ನು ಇಟ್ಟು ಕೊಳ್ಳುವರ ಮೂಲಕ ಮಾತ್ರ ನಾವು ಸುಂದರಲಾಲ ಬಹುಗುಣ ಅವರಿಗೆ ನಿಜವಾದ ಗೌರವವನ್ನು ಸಲ್ಲಿಸೋಣ.