ವೈಭವದ ಸಂಘಟನೆಯೇ ಯಕ್ಷಗಾನದ ನೆಲೆ ಅಲ್ಲ
ಅನಿಸಿಕೆ
ಡಾ.ಶಂಕರ ಶಾಸ್ತ್ರಿ
ಪಶ್ಚಿಮಘಟ್ಟ ನದಿ ಕಂದರದ ಇಕ್ಕೆಲ ಗ್ರಾಮಗಳ ಬದುಕಿನ ಸ್ಥಿತ್ಯಂತರ ಕಾಲದಲ್ಲಿ ಬದುಕನ್ನು ರೂಪಿಸುವ ಕಲಾ ಪರಂಪರೆಗಳ ಸ್ಥಿತ್ಯಂತರಗಳನ್ನು ವಿವೇಚಿಸುವ ಪ್ರಜ್ಞೆ ಸಕಾಲಿಕ ಎನಿಸುತ್ತದೆ.
ಯಕ್ಷಗಾನ ವಿಶ್ವಗಾನದ ಬಗ್ಗೆ ಆಗಾಗ ಹುಟ್ಟುವ ಚರ್ಚೆ ವ್ಯಾಖ್ಯಾನ ಧೋರಣೆಗಳು, ಕಲೆಯ ವೈಭವಕ್ಕೆ ಸೀಮಿತವಾಗಿದೆ ಹೊರತು ಕಲೆಯ ವಾಸ್ತವ ನೆಲೆಗಳ ಮತ್ತು ಭವಿಷ್ಯದ ನಿರಂತರತೆಯ ವಿಮರ್ಶೆಯಾಗದು. ಇದನ್ನು ನೋಡಿದಾಗ ಯಕ್ಷಗಾನದ ಭವಿತವ್ಯಅಡಗಿರುವುದೆಲ್ಲಿ..? ಎನ್ನುವ ವಿಚಾರದ ಪ್ರಾಮಾಣಿಕ ಜಿಜ್ಞಾಸೆ ಅಗತ್ಯವಾಗಿದೆ. ಪಶ್ಚಿಮಘಟ್ಟಗಳ ಇಕ್ಕೆಲದ ಗ್ರಾಮಗಳಲ್ಲಿ ಒಡಮೂಡಿದ ಈ ಕಲೆ ಅಲ್ಲಿನ ಜನ ಸಂಸ್ಕೃತಿಯ ಪುರಾಣ ಪ್ರಜ್ಞೆ, ಕಲಾಭಿವ್ಯಕ್ತಿ ಮಾಧ್ಯಮವಾಗಿ ವಿಕಾಸಗೊಂಡಿರುವುದನ್ನು ನೋಡಿದಾಗ ತನ್ನ ವಿಕಾಸದ ಹಂತ ಉಪಕ್ರಮಿಸಿ ಬಹು ಜನರ ಬೆಂಬಲಗಳಿಂದ ಸಮಷ್ಟಿ ಪ್ರಜ್ಞೆಯಾಗಿ ಕಲೆ ವಿಜೃಂಭಿಸಿದೆ.
ಪ್ರದರ್ಶನ ವಿಜೃಂಭಣೆ ತತ್ ಕಾಲಿನ ಪ್ರೇರಣೆಯಾಗಿ ಅನುಷಂಗಿಕ ಆರಾಧನೆಗೆ ಕಾರಣವಾದರೆ, ಕಲೆಯನ್ನು ಪೋಷಿಸುವ, ಪ್ರೋತ್ಸಾಹಿಸುವ ಮನಸ್ಸು ಕಲೆಯ ವಾಸ್ತವಿಕ ವಿಕಾಸದ ಸಾಧ್ಯತೆಯಾಗಿ ಯಕ್ಷಗಾನ ಕಲೆಯನ್ನು ಆರಾಧನೆಯಾಗಿ ರೂಢಿಸಿ ಕೊಂಡು ಬಂದಿತು. ಗ್ರಾಮೀಣ ಪರಿಸರದ ಜಾತ್ರೆ, ಹಬ್ಬಗಳ ಅಂಗವಾಗಿ ಸ್ಥಳೀಯರು ವೇಷ ಧರಿಸಿ ಅರ್ಥಗಾರಿಕೆ ಮೆರೆದು ಕಲಾವಿದರೆನಿಸಿಕೊಳ್ಳುತ್ತಿದ್ದರು. ಊರಿಗೆ ಊರು ತನು ಮನ ಧನಗಳನ್ನು ಮುಡಿಪಿಟ್ಟು ಕಲೆಯ ಆರಾಧನೆಯ ಅಂಗವಾಗು ತ್ತಿದ್ದರು.
ಇದನ್ನು ಯಕ್ಷಗಾನದ ವೈಭವ ಎನ್ನೋಣವೇ? ಕಾಲ ಬದಲಾದಂತೆ ಬೆಳೆದ ವ್ಯಾಪಾರಿ ಧೋರಣೆಯ ಕಲಾ ಪ್ರದರ್ಶನಗಳನ್ನು ವೈಭವ ಎನ್ನೋಣವೇ? ಇಂದು ನಾವು ನೋಡುವ ಸಾಂಸ್ತಿಕ ಯಕ್ಷಗಾನ, ಕಲಾ ಚಲನೆಯ ತೃತೀಯ ಸ್ತರವಾಗಿದೆ. ವಾಸ್ತವಿಕವಾಗಿ ಈ ಸ್ತರ ಕಲೆಯ ಸಂಸ್ಕೃತಿ ಕರಣ ಸ್ವರೂಪದ್ದಾಗಿದೆ. ಇದನ್ನೇ ಯಕ್ಷಗಾನದ ಸ್ವರೂಪ ಎಂದು ವ್ಯಾಖ್ಯಾನಿಸಲಾಗದು. ಈ ಸ್ತರ ವಿವಿಧ ಯಕ್ಷಗಾನ ಕಲಾ ಪ್ರಪಂಚದ ಕೆನೆ ಪದರ ಸ್ವರೂಪವಾಗಿದೆ.
ಇಲ್ಲಿ ವ್ಯಕ್ತಿಗತ ಪ್ರತಿಭೆ, ಹೆಚ್ಚು ಪ್ರಭಾವ ಬೀರುತ್ತದೆ. ಈ ಸ್ತರ ವೃತ್ತಿ ಪ್ರವೃತ್ತಿಗಳ ಸಂಕೇತವಾಗಿದೆ. ವಾಣಿಜ್ಯಿಕ ಆಸಕ್ತಿಗಳು, ಸಾಧನೆಯ ತುಡಿತಗಳು, ಅಭಿಮಾನಿಗಳ ಒತ್ತಾಸೆಗಳು ಇಲ್ಲಿವೆ. ನಿಜವಾಗಿ ತೃತೀಯ ಸ್ತರವಾದ ವಿಜೃಂಭಣೆಯ ರಂಗ ಅಥವಾಸಾಂಸ್ಥಿಕ ಪ್ರಯೋಗ ವಿಮರ್ಶೆಗೆ ಮೀರಿದ್ದು. ವಾಸ್ತವಿಕವಾಗಿ ಯಕ್ಷಗಾನ ಸ್ವರೂಪ ಭವಿತವ್ಯ ಅಡಗಿರುವದು ಪ್ರಾಥಮಿಕಚಲನೆಯಲ್ಲಿ. ಯಕ್ಷಗಾನ ತನ್ನ ಪ್ರಾಥಮಿಕ ಚಲನಶೀಲತೆ ಕಳೆದುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿ.
ಪ್ರಸಿದ್ಧರಲ್ಲದ ಹಿಂಮೇಳ, ವರ್ಷಕೊಂಡು ಆಟ ಕಲಿತು ಕುಣಿವ ಕಲಾವಿದರು ಅವರನ್ನ ಪ್ರೋತ್ಸಾಹಿಸುವ ಗುರು, ಅವರದ್ದೇ ಆದ ಪ್ರೇಕ್ಷಕವರ್ಗ ಆರ್ಥಿಕ ಹಿತಾಸಕ್ತಿ ಇಲ್ಲದ ಕಲಾ ಸಂಘಟನೆ. ಇದು ಮಾಯವಾಗುತ್ತಿದೆ. ನಾವಿಂದು ಕಲಾವಿದರ ಹಿಂದಿದ್ದೇವೆ. ಕಲೆಯ ಹಿಂದಿಲ್ಲ. ಜಗತ್ತು ಇಷ್ಟು ಬೆಳೆದು ಕಲ್ಯಾಣ ಮಂಟಪ ಹೆಚ್ಚಾಗಿದೆ. ಕಲ್ಯಾಣ ಪ್ರಸಂಗ ಆಡಲು ರಂಗ ಭೂಮಿಯಿಲ್ಲ. ಊರಿನಲ್ಲಿ ವರ್ಷಕ್ಕೊಂದು ಆಟಕ್ಕೆ ಬೆಂಬಲವಿಲ್ಲ.
ವೈಭವದ ಸಂಘಟನೆ ಮಾತ್ರ ಯಕ್ಷಗಾನ ಎಂಬ ಧೋರಣೆ ಹೆಚ್ಚಾಗಿದೆ.ದ್ವಿತೀಯ ವಲಯ, ಇದು ಹೊಸ ತಲೆಮಾರನ್ನು ಸೃಷ್ಟಿ ಸುವ ವಲಯ. ಆದರೆ ಈ ವಲಯಕ್ಕೆ ಯಕ್ಷಗಾನ ಆಯ್ಕೆಯಲ್ಲ, ಸಾಧ್ಯತೆ ಮಾತ್ರ. ಎಷ್ಟೋ ಮಕ್ಕಳು ಕಲಿತು, ಶಿಕ್ಷಣ ಮುಂದು ವರಿಸದೆ ಕೊನೆಗೂ ಪ್ರೇಕ್ಷಕನು ಆಗದನ್ನು ಕಂಡಿದ್ದೇನೆ. ಯಾಕೆಂದರೆ ಅವರ ಕಲಿಕೆ ಪ್ರದರ್ಶನಕ್ಕೆ ಸೀಮಿತ. ಹೀಗೆಲ್ಲ ಇರುವಾಗಯಕ್ಷಗಾನದ ಪ್ರಥಮ ವಲಯ ಎನಿಸಿಕೊಂಡ ಊರಿನ ಆಟಗಳಿಗೆ ಶಕ್ತಿ ತುಂಬುವ ಅನಿವಾರ‍್ಯತೆ ಇಂದು ಹೆಚ್ಚಿದೆ. ಅದುವಿಜೃಂಭಿಸಿದಾಗ ಮಾತ್ರ ನಾಳಿನ ಕಲೆಯ ಬೆಳವಣಿಗೆಗೆ ಭವಿತವ್ಯವಿದೆ. ಇಲ್ಲವಾದರೆ ಯಕ್ಷಗಾನ ಕಲೆ ನಾಳೆ ನೆಲೆ ಕಳೆದುಕೊಂಡರೆ ಅದಕ್ಕೆ ಪ್ರಾಥಮಿಕ ವಲಯಕ್ಕೆ ಶಕ್ತಿ ತುಂಬದ ನಾವೆಲ್ಲ ಕಾರಣರಾಗುತ್ತೇವೆ.