…ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ !
ಬೇಟೆ
ಜಯವೀರ ವಿಕ್ರಮ ಸಂಪತ್‌ ಗೌಡ
ಈ ಅಂಕಣದ ಬಗ್ಗೆ ನಮ್ಮ ಸಂಪಾದಕರು ಏನು ಹೇಳುತ್ತಾರೋ ಗೊತ್ತಿಲ್ಲ. ಇದನ್ನು ಅವರು ಪ್ರಕಟಿಸದೇ ಇರಲೂಬಹುದು.ಆದರೆ ಕತ್ತರಿ (ಎಡಿಟ್) ಹಾಕಲಾರರು ಎಂದು ಭಾವಿಸಿದ್ದೇನೆ. ಕಾರಣ ಇಂದು ನಾನು ಬರೆಯುತ್ತಿರುವ ಅಂಕಣದಲ್ಲಿ ಬಂದು ಹೋಗುವ ಪಾತ್ರಧಾರಿಗಳಲ್ಲಿ ಕೆಲವರು ಅವರಿಗೆ ಆಪ್ತರಿದ್ದಾರೆ. ಇದರಿಂದ ಸಂಪಾದಕರಿಗೆ ಮುಜುಗರವಾಗಲೂಬಹುದು. ಆದರೆ ಅವರೆಲ್ಲ ಸಂಪಾದಕರಿಗೆ ಆಪ್ತರು ಎಂಬ ಕಾರಣಕ್ಕೆ ನನ್ನ ಅಭಿಪ್ರಾಯ ಬದಲಿಸಿಕೊಳ್ಳಲಾರೆ.
ಬೇಕಾದರೆ ಅವರು ಈ ಅಂಕಣವನ್ನು ಕಸದಬುಟ್ಟಿಗೆ ಹಾಕಲಿ, ನನಗೆ ಬೇಸರವಿಲ್ಲ. ಬರೆಯುವುದು ನನ್ನ ಧರ್ಮ, ಪ್ರಕಟಿಸುವುದು ಸಂಪಾದಕರ ಕರ್ಮ. ನಾನು ಯಾಕೆ ಈ ಮಾತನ್ನು ಹೇಳಿದೆನೆಂದರೆ, ಬಾಬಾ ರಾಮದೇವ ಅವರು ಭಟ್ಟರಿಗೆ ಆಪ್ತರು. ನಾನು ಅವರ ಜತೆಯಲ್ಲಿದ್ದಾಗ ಒಮ್ಮೆ ಯೋಗ ಗುರು ಅವರಿಂದ ಫೋನ್ ಬಂದಿತ್ತು. ಅಲ್ಲದೇ ‘ವಿಶ್ವವಾಣಿ’ಯ ಅವರ ಕ್ಯಾಬಿನ್‌ನಲ್ಲಿಬಾಬಾ ರಾಮದೇವ ಅವರು ತಮ್ಮನ್ನು ಬಿಗಿದಪ್ಪುತ್ತಿರುವ ಫೋಟೋವನ್ನು ಭಟ್ ಅವರು ಇಟ್ಟುಕೊಂಡಿದ್ದಾರೆ.
ಅಲ್ಲದೇ ಮೂರು ವರ್ಷಗಳ ಹಿಂದೆ, ಭಟ್ ಅವರು ತಮ್ಮ ಅಂಕಣದಲ್ಲಿ, ಯೋಗ ಗುರುವಿನ ಬೃಹತ್ ಸಾಮ್ರಾಜ್ಯದ ಸಮಗ್ರ ಪರಿಚಯ ಮಾಡಿಕೊಟ್ಟಿದ್ದರು. ಹೀಗಾಗಿ ನಾನು ಅವರ ಬಗ್ಗೆ ಮುಂದೆ ಬರೆಯುವ ಕೆಲ ಸಾಲುಗಳಿಂದ ಸಂಪಾದಕರಿಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಇವನ್ನೆ ಹೇಳಿದೆ.
ಕಳೆದ ವಾರ ಬಾಬಾ ರಾಮದೇವ್ ಏನು ಮಾತಾಡಿದರು ಎಂಬುದನ್ನು ನೀವೆ ಕೇಳಿರುತ್ತೀರಿ. ಅವರ ಹೇಳಿಕೆಗೆ ದೇಶದಲ್ಲಿರುವ ವೈದ್ಯರು ಆಶ್ಚರ್ಯ ಮತ್ತು ಕಳವಳ ವ್ಯಕ್ತಪಡಿಸಿದ ಬಳಿಕ, ಸ್ವತಃ ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್ ಮಧ್ಯಪ್ರವೇಶಿಸಿ ದರು. ನಂತರ ಬಾಬಾ ತಮ್ಮ ಹೇಳಿಕೆಗಳನ್ನು ವಾಪಸ್ ಪಡೆದರು. ಅಷ್ಟಕ್ಕೂ ಯೋಗ ಗುರು ಹೇಳಿದ್ದೇನು? ‘ಕರೋನಾ ಸೋಂಕು ಕಾಯಿಲೆಗೆ ಅಲೋಪಥಿ ಚಿಕಿತ್ಸೆ- ಔಷಧ ಪಡೆದು, ದೇಶದಲ್ಲಿರುವ ಲಕ್ಷಾಂತರ ಜನ ಸಾಯುವಂತಾಯಿತು.
ಕರೋನಾ ಸೋಂಕಿಗೆ ಅಲೋಪತಿ ಚಿಕಿತ್ಸೆ ಫಲಕಾರಿಯಲ್ಲ. ಈಗ ನೀಡಲಾಗುತ್ತಿರುವ ಕೆಲವು ಔಷಧಗಳು ಪ್ರಯೋಜನವಿಲ್ಲ’ ಎಂದುಬಿಟ್ಟರು ಯೋಗ ಗುರು. ತಮ್ಮ ಈ ಹೇಳಿಕೆಯಿಂದ ಏನಾಗಬಹುದು ಎಂಬ ಸಣ್ಣ ಯೋಚನೆ ಯೋಗ ಗುರುವಿನ ತಲೆ ಯೊಳಗೆ ಹೋಗಲಿಲ್ಲವಾ, ಗೊತ್ತಿಲ್ಲ. ನಮಗೆ ಗೊತ್ತಿದೆ, ಬಾಬಾ ರಾಮದೇವ ಅವರಿಗೆ ದೇಶ-ವಿದೇಶಗಳಲ್ಲಿ ಕೋಟ್ಯಂತರ ಭಕ್ತರು, ಹಿಂಬಾಲಕರು, ಅಭಿಮಾನಿಗಳು ಇದ್ದಾರೆ.
ಲಕ್ಷಾಂತರ ಮನೆಗಳಲ್ಲಿ ಅವರ ಫೋಟೋಗಳಿವೆ. ಅವರು ಹೇಳುವುದನ್ನು ಜನ ಗಂಭೀರವಾಗಿ ಸ್ವೀಕರಿಸುತ್ತಾರೆ. ಇಂಥ ಸಂಕಷ್ಟದ ಸಮಯದಲ್ಲಿ, ಮಾತಾಡುವಾಗ ಎಚ್ಚರ ಇರಬೇಕು. ಏನೇ ಮಾತಾಡಿದರೂ ಅದು ವಿವಾದವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಭಾರತ ಕೋವಿಡ್ ವಿರುದ್ಧ ಹೋರಾಡುತ್ತಿದೆ. ಜನ ಆಮ್ಲಜನಕವಿಲ್ಲದೇ, ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ಸಾಯು ತ್ತಿದ್ದಾರೆ.
ದೇಶದಲ್ಲಿರುವ ಎ ಸರಕಾರಗಳೂ ಲಸಿಕೆ ನೀಡುವ ಅತ್ಯಂತ ಪ್ರಮುಖ ಕೈಂಕರ್ಯದಲ್ಲಿ ತೊಡಗಿವೆ. ಇಂಥ ಸಂದರ್ಭದಲ್ಲಿ ಈ ಔಷಧಗಳಿಂದ ಪ್ರಯೋಜನವಿಲ್ಲ, ಅಲೋಪಥಿಕ್ ಔಷಧಗಳಿಂದಲೇ ಜನ ಸಾಯುತ್ತಿದ್ದಾರೆ ಎಂದು ಹೇಳಿದರೆ, ಏನಾಗಬೇಡ?ಈ ವೇಳೆ ಹಾಸಿಗೆ ಬೇಕೆಂದು ತಲೆ ಕೆಳಗಾಗಿ ನಿಂತು ಯೋಗಾಸನ ಮಾಡಿದರೆ, ಆಮ್ಲಜನಕಕ್ಕಾಗಿ ಪ್ರಾಣಾಯಾಮ ಮಾಡಿದರೆ, ಪ್ರಯೋಜನವಾಗುವುದೇ? ಅಷ್ಟಕ್ಕೂ ಯಾವ ವೈದ್ಯಕೀಯ ವಿಧಾನ ಪರಿಣಾಮಕಾರಿ ಮತ್ತು ಪರಿಣಾಮಕಾರಿ ಅಲ್ಲ ಎಂದು ಚರ್ಚೆ ಮಾಡುವ ಸಂದರ್ಭವೇ ಇದು? ಲಸಿಕೆ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಲು ಆರು ತಿಂಗಳುಗಳು ಹಿಡಿದವು.
ಈ ಅವಧಿಯಲ್ಲಿ ಸ್ವಲ್ಪವೂ ಸಮಯ ವ್ಯರ್ಥ ಮಾಡದೇ ಲಸಿಕೆ ಹಾಕಿಸುವ ಅಭಿಯಾನ ಪರಿಣಾಮಕಾರಿಯಾಗಿ ಆರಂಭವಾಗಿದ್ದೇ ಆಗಿದ್ದಲ್ಲಿ, ಕರೋನಾ ಈ ಪ್ರಮಾಣದಲ್ಲಿ ಅಟಕಾಯಿಸಿಕೊಳ್ಳುತ್ತಿರಲಿಲ್ಲ. ಈಗ ಜನರಲ್ಲಿ ಅದರ ಬಗ್ಗೆ ವಿಶ್ವಾಸ ಮೂಡಿದೆ. ದೇಶಾದ್ಯಂತ ಜನ ಸಾಲುಗಟ್ಟಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿzರೆ. ಹೀಗಿರುವಾಗ, ಅದರಿಂದ ಏನೂ ಪ್ರಯೋಜನವಿಲ್ಲ, ಜನರ ಸಾವಿಗೆ ಅಲೋಪಥಿಕ್ ಔಷಧಗಳೇ ಕಾರಣ ಎಂದು ಸರ್ವಮಾನ್ಯ ಯೋಗ ಗುರುಗಳೇ ಹೇಳಿದರೆ, ಜನಸಾಮಾನ್ಯನ ಪಾಡೇನಾಗ ಬೇಕು? ನಮ್ಮ ದೇಶದಲ್ಲಿ ಈ ಖಾವಿಧಾರಿಗಳು, ಸ್ವಾಮೀಜಿಗಳು, ಧರ್ಮಗುರುಗಳು, ಗುರುಗಳು, ಪೀಠಾಧಿಪತಿಗಳು…
ಹೀಗೆ ಬಹುವಿಶೇಷಣ ನಾಮಾಂಕಣಗಳಿಂದ ಕರೆಯಿಸಿಕೊಳ್ಳುವವರು ತಮ್ಮ ಉಳಿದೆ ಅಂಗ, ಲಿಂಗಗಳ ಮೇಲೆ ನಿಯಂತ್ರಣ ಸಾಧಿಸಿರಬಹುದು, ಆದರೆ ನಾಲಗೆ ಎಂಬ ಅಂಗದ ಮೇಲೆ ಮಾತ್ರ ಹಿಡಿತ ಸಾಧಿಸಿಲ್ಲ. ಅಷ್ಟಕ್ಕೂ ಅದೊಂದು ಅಂಗ ಎಂದು ಭಾವಿಸಿzರಾ, ಇಲ್ಲವಾ ಗೊತ್ತಿಲ್ಲ. ಆಗಾಗ ತಮ್ಮ ನಾಲಗೆಯನ್ನು ಹರಿಬಿಡುತ್ತಾರೆ. ಇದರಿಂದ ಆಗುವ ಅವಾಂತರಗಳು ಅಷ್ಟಿಷ್ಟಲ್ಲ. ಅದರಿಂದ ಏನಾದರೂ ಪ್ರಯೋಜನವಿದೆಯಾ, ಅದೂ ಇಲ್ಲ.
ಒಂದು ವೇಳೆ, ಕರೋನಾಗೆ ಅಲೋಪಥಿ ಸರಿಯಾದ ಚಿಕಿತ್ಸಾ ಕ್ರಮ ಅಲ್ಲ ಎನ್ನಲು ನಿಮ್ಮಲ್ಲಿ ಏನು ಸಂಶೋಧನೆಯಿದೆ? ಅಷ್ಟಕ್ಕೂ ನೀವೇನು  ವಿಜ್ಞಾನಿಯಾ, ವೈದ್ಯರಾ, ಯಾರು? ಅಲ್ಲದೇ ಸಂದರ್ಭವಾದರೂ ಯಾವುದು? ಇದರ ಪರಿವೆ ಯಿಲ್ಲದೇ ಏನೇನೋ ಹೇಳಿಬಿಟ್ಟರೆ ಅದರ ಸಾಧಕ-ಬಾಧಕಗಳೇನು? ಗೊತ್ತಿರಬೇಕಲ್ಲ? ಅಲೋಪಥಿಕ್ ಚಿಕಿತ್ಸೆ ಸರಿಯಾದ ಕ್ರಮವಲ್ಲ ಎಂದರೆ, ಈ ದೇಶದಲ್ಲಿರುವ ವೈದ್ಯರ ಕತೆಯೇನಾಗಬೇಕು? ಈಗ ಕಂಡುಹಿಡಿದ ಲಸಿಕೆಗಳನ್ನೆ ಏನು ಮಾಡಬೇಕು? ಚರಂಡಿಗೆ ಎಸೆಯಬೇಕಾ? ಇದು ಇಂಥ ಚರ್ಚೆಗಳಿಗೆ ಕಾರಣವಾಗುವ ಸಮಯವಲ್ಲ.
ವಿವಾದಗಳನ್ನು ಸೃಷ್ಟಿಸುವ ಕಾಲವಲ್ಲ. ಒಂದು ವೇಳೆ, ಅಲೋಪಥಿಕ್ ವಿಧಾನದ ಬಗ್ಗೆ ರಿಸರ್ವೇಶನ್ ಇದ್ದರೆ, ಅದನ್ನು ಹೇಳಲು ಕ್ರಮಗಳಿವೆ. ಅದು ಯಾವುದು ಎಂದು ಅಂಥ ಸ್ಥಾನಗಳಲ್ಲಿರುವವರಿಗೆ ಗೊತ್ತಿರುತ್ತದೆ. ಅದನ್ನು ಯಾರ ಮುಂದೆ ಹೇಳಿದರೆ, ಪ್ರಯೋಜನವಾಗುತ್ತದೆ ಎಂಬುದೂ ಗೊತ್ತಿರುತ್ತದೆ. ಅದನ್ನು ಸಾರ್ವಜನಿಕವಾಗಿ, ಎಮ್ಮೆ ಉಚ್ಚೆ ಹುಯ್ದಂತೆ ಧಾರಾಕಾರವಾಗಿ ಸುರಿದುಬಿಡಬಾರದು. ಅದರಿಂದ ಯಾರಿಗೂ ಉಪಯೋಗವಿಲ್ಲ. ಅದರ ಬದಲು ಸಾರ್ವಜನಿಕರಲ್ಲಿ ಮತ್ತಷ್ಟು ಭೀತಿ, ಭಯ, ಆತಂಕ ಮತ್ತು ಅನಿಶ್ಚಿತತೆಯನ್ನು ಬಿತ್ತಿದಂತಾಗುತ್ತದೆ.
ಯೋಗ ಗುರುಗಳೇನೋ, ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದರು. ಅದಾಗಿ ಎರಡು ದಿನಗಳ ಬಳಿಕ, ಮತ್ತೆ ಅಲೋಪಥಿಕ್ವೈದ್ಯರಿಗೆ ಇಪ್ಪತ್ತೈದು ಪ್ರಶ್ನೆಗಳನ್ನು ಕೇಳಿದರು. ಇವು ಒಂಥರಾ ಸವಾಲಿನ ರೀತಿಯಲ್ಲಿದ್ದವು. ’ನಿಮ್ಮ ಅಲೋಪಥಿ ಕೇವಲ ಇನ್ನೂರು ವರ್ಷಗಳ ಹಳೆಯ ವೈದ್ಯ ಪದ್ಧತಿ. ಟಿಬಿ ಮತ್ತು ಚಿಕನ್‌ಪಾಕ್ಸ್’ಗೆ ಚಿಕಿತ್ಸೆ ಕಂಡು ಹಿಡಿದವರಿಗೇಕೆ ಜಠರ ಸಮಸ್ಯೆಗಳಿಗೆ ಔಷಧ ಕಂಡು ಹಿಡಿಯಲು ಆಗಿಲ್ಲ? ಕೊಲೆಸ್ಟರಾಲ್‌ಗೆ ಯಾಕೆ ಇನ್ನೂ ಔಷಧ ಕಂಡು ಹಿಡಿದಿಲ್ಲ? ಮೈಗ್ರೇನ್ (ಅರೆತಲೆಶೂಲೆ)ಗೇಕೆ ಇಲ್ಲಿ ತನಕ ಅಲೋಪಥಿ ಯಲ್ಲಿ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ, ಏಕೆ? ಪಾರ್ಕಿನ್ಸನ್ ಕಾಯಿಲೆಗೆ ಯಾವ ಚಿಕಿತ್ಸೆ ಯಿದೆ? ಅಲೋಪಥಿ ಪ್ರಾಕ್ಟೀಸ್ ಮಾಡುವ ವೈದ್ಯರೇಕೆ ಕೋವಿಡ್‌ನಿಂದ ಸಾಯುತ್ತಿದ್ದಾರೆ? ಅವರಿಗೆ ಕಾಯಿಲೆಯೇ ಬರಬಾರ ದಾಗಿತ್ತಲ್ಲವೇ?’ ಎಂದು ಕೇಳಿದರು.
ಬಾಬಾ ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಕೆಲವರು ವಾದಿಸಬಹುದು. ವಾದಿಸಲಿ. ಆದರೆ ಇದು ಇಂಥ ವಾದ-ಸಂವಾದ ಮಾಡುವ ಕಾಲವಾ? ಕೆಲವು ಖಾವಿಧಾರಿಗಳಿಗೆ ತಮ್ಮನ್ನು ಹೇಗೆ ಪ್ರಸೆಂಟ್ ಮಾಡಿಕೊಳ್ಳಬೇಕೆಂಬುದೇ ಗೊತ್ತಿಲ್ಲ. ಬೇಕೆಂದೇ ಹೊತ್ತಲ್ಲದಹೊತ್ತಲ್ಲಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸಾರ್ವಜನಿಕರ ಕಣ್ಣಲ್ಲಿ ಸಣ್ಣವರಾಗುತ್ತಾರೆ. ಬಿಡದಿಯ ನಿತ್ಯಾನಂದ ನಂತೂ ಯಾವ ಸಿನಿಮಾದ ಜೋಕರುಗಿಂತ ಕಡೆ ಯಾಗಿ, ಕೊನೆಗೆ ಅದ್ಯಾವುದೋ ’ಕೈಲಾಸ’ ಸೇರಿಬಿಟ್ಟ!
ಆತ ಏನೇ ಹೇಳಿದರೂ ಪುಂಗುತ್ತಾನೆ ಅಂತಾನೆ ಜನರಿಗೆ ಅನಿಸುವಂತಾಗಿದೆ. ಯಾರೂ ಅವನ ಮಾತುಗಳನ್ನು ಗಂಭೀರವಾಗಿಪರಿಗಣಿಸುವುದಿಲ್ಲ. ಮಹಾeನಿಯಂತೆ ಮಾತಾಡುವ ಆತನಿಗೆ, ತನ್ನ ಮಾತುಗಳು ಜನರಿಗೆ ಅಪಥ್ಯವಾಗುತ್ತಿದೆ ಎಂಬುದು ಗೊತ್ತಾಗುವುದಿಲ್ಲವಾ? ನಿತ್ಯಾನಂದ ಮಾತಾಡಿ ಮಾತಾಡಿಯೇ, ’ವರ್ಬಲ್ ಡಯೇರಿಯಾ’ದಿಂದ ಬಳಲಿ ಊರುಬಿಟ್ಟ! ಅವನ ಪಾಡಿಗೆ ಧ್ಯಾನ ಮಾಡಿಕೊಂಡಿದ್ದರೆ ಬಿಡದಿಯ ಬೀಡುಬಿಟ್ಟುಕೊಂಡಿರಬಹುದಿತ್ತು. ಆತನ ಮಾತೇ ಅವನಿಗೆ ಮುಳುವಾಯಿತು. ಆತ ಒಂಥರಾ ಗಂಡು ಮಾತೆ ಮಹಾದೇವ !
ಈ ಮಾತುಗಳನ್ನು ಹೇಳುವಾಗ ನನಗೆ ‘ಕಾಳಿ ಸ್ವಾಮಿ’ ಎಂದೇ ಖ್ಯಾತನಾದ ಕಾಳಿಕಾಮಠದ ಶಿವಕುಮಾರ ಸ್ವಾಮಿ ನೆನಪಾಗುತ್ತಾನೆ. ಆರೇಳು ವರ್ಷಗಳ ಹಿಂದೆ, ಈತ ಉಪವಾಸ ಸತ್ಯಾಗ್ರಹಕ್ಕೆ ಕುಳಿತಾಗ, ಮುಖ್ಯಮಂತ್ರಿ ಹೋಗಿ, ಉಪವಾಸ ನಿಲ್ಲಿಸಿ ಎಂದು ಬೇಡಿಕೊಂಡಿದ್ದರು. ತನ್ನ ಪ್ರಖರ, ಸ್ಪಷ್ಟ ಮತ್ತು ನೇರ ಮಾತುಗಳಿಂದ ಟಿವಿ ಚಾನೆಲ್ಲುಗಳ ಸ್ಟುಡಿಯೊಗಳಿಗೆ ಆಶ್ರಮ  ವರ್ಗಾಯಿಸುವುದೊಂದು ಬಾಕಿಯಿತ್ತು. ಅಷ್ಟು ಬೇಡಿಕೆಯಲ್ಲಿದ್ದ ಸ್ವಾಮೀಜಿಯಾಗಿದ್ದ.
ಬಾಯಿಂದ ಬರುವುದು ಮಾತಾ ಅಥವಾ ಮತ್ತೊಂದಾ ಎಂಬುದು ಅವನಿಗೆ ತಿಳಿಯದಾಯಿತು. ಓತಪ್ರೋತವಾಗಿ ಮಾತಾಡಲಾ ರಂಭಿಸಿದ. ಈ ಜನಪ್ರಿಯತೆಯಿಂದ ’ಬಿಗ್ ಬಾಸ್’ ಕಾರ್ಯಕ್ರಮಕ್ಕೂ ಹೋದ. ಅಲ್ಲಿ ಖಾವಿ ಧರಿಸಿ ಡಾನ್ಸ್‌ ಮಾಡಿ ನಗೆಪಾಟಲಿ ಗೀಡಾದ. ನಿತ್ಯಾನಂದನ ವಿರುದ್ಧ ಹೋರಾಡಲು ಹೋಗಿ ತಾನೇ ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿಬಿದ್ದ. ಆತನ ಮಾತುಗಳೇ ಅವನನ್ನು ಮುಗಿಸಿ ಹಾಕಿದವು.
ಈಗ ಆತ ಎಲ್ಲಿದ್ದಾನೋ?ನಮ್ಮಲ್ಲಿ ಕೆಲವು ಟಿವಿ ಜ್ಯೋತಿಷಿಗಳಿದ್ದಾರೆ. ಅವರೂ ಹೀಗೆ, ಲಂಗು-ಲಗಾಮಿಲ್ಲದೇ ಮಾತಾಡುತ್ತಾರೆ. ಅದರಲ್ಲಿ ಬ್ರಹ್ಮಾಂಡ ಗುರೂಜಿ ಅರ್ಥಾತ್ ನರೇಂದ್ರ ಬಾಬು ಶರ್ಮ ಗುರೂಜಿ, ಆರ್ಯವರ್ಧನ್ ಗುರೂಜಿ, ಜಯ ಶ್ರೀನಿವಾಸನ್ ಗುರೂಜಿ, ಆದಿತ್ಯ ನಾರಾಯಣ ಗುರೂಜಿ, ಆನಂದ ಗುರೂಜಿ, ಅಭಿಗ್ಯಾ ಆನಂದ, ರವಿಶಂಕರ ಗುರೂಜಿ, (ಶ್ರೀ ಶ್ರೀ ಅಲ್ಲ), ಮಹರ್ಷಿ ಗುರೂಜಿ, ಸಂತೋಷ ಗುರೂಜಿ, ಓಂಕಾರ ದೇವಿಶ್ರೀ ಗುರೂಜಿ, ರಾಮಮೂರ್ತಿ ಆಚಾರ್ಯ… ಹೀಗೆ ಒಂದಷ್ಟು ಟಿವಿ ಜ್ಯೋತಿಷಿಗಳಿದ್ದಾರೆ. ಇವರೆ ಅಪದ್ಧ ನುಡಿಯುವುದರಲ್ಲಿ ನಿಸ್ಸೀಮರು. ಕನ್ನಡಿಗರು ನಿಜಕ್ಕೂ ಸಹನಶೀಲರು. ಕಾರಣ ಇವರೆಲ್ಲರನ್ನೂ ಇಲ್ಲಿ ತನಕಸಹಿಸಿಕೊಂಡಿzರೆ ಮತ್ತು ಇವರಾರಿಗೂ ನಾಲ್ಕು ಬಾರಿಸಿಲ್ಲ.
ಇನ್ನು ಎಷ್ಟು ದಿನ ಹೀಗೆ ಸಹಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಈ ಜ್ಯೋತಿಷಿಗಳು ಮಾಡಿದ, ಮಾಡುತ್ತಿರುವ ಅವಾಂತರ ಒಂದೆರ ಡಲ್ಲ. ಈ ಕೋವಿಡ್ ಕಾಲದಲ್ಲಿ ಇವರಾರೂ ಯಾಕೆ ಟಿವಿ ಮುಂದೆ ಬರುತ್ತಿಲ್ಲ? ಕೋವಿಡ್ ಬರುತ್ತದೆ ಎಂದು ಇವರಾರೂ ಏಕೆ ಹೇಳಲಿಲ್ಲ? ಮೊನ್ನೆ ಆರ್ಯವರ್ಧನ್ ಎಂಬ ಶುದ್ಧ ಅವಿವೇಕಿ, ತನಗೆ ಫೋನ್ ಮಾಡಿದ ವೀಕ್ಷಕನಿಗೆ (ಅವರು ರೇಷ್ಮೆ ಕೈಮಗ್ಗ ಇಟ್ಟುಕೊಂಡವರು) ‘ದೇವಿಗೆ ರೇಷ್ಮೆ ಸೀರೆ ಕಳಿಸು, ನಿನ್ನ ಸಮಸ್ಯೆ ಪರಿಹಾರವಾಗುತ್ತದೆ’ ಎಂದು ಹೇಳುವುದನ್ನು ಕೇಳಿಸಿ ಕೊಂಡಿರಬಹುದು. ಟಿವಿಯ ಹೀಗೆ ಹೇಳುವ ಈ ಮನುಷ್ಯ, ಅವನನ್ನು ಭೇಟಿ ಮಾಡಿದರೆ, ಹೇಗೆ ಮುಂಡಾಮೋಚ ಬಹುದು? ಶ್ರೀರಾಮಪುರದ ಗರಡಿ ಮನೆಯಿಂದ ನಿದ್ದೆಗಣ್ಣಿನಲ್ಲಿ ಎದ್ದು ಬಂದವನಂತೆ ಕಾಣುವ ಈ ಆರ್ಯವರ್ಧನ, ಜ್ಯೋತಿಷ್ಯದ ಹೆಸರಿನಲ್ಲಿ ನೇರಾ ನೇರ ಅಮಾಯಕರನ್ನು ಸುಲಿಯುತ್ತಾನೆ.
ಹೋಗಲಿ, ಇವನಿಗಿಂತ ಸ್ವಲ್ಪ ಪ್ರಬುದ್ಧನಂತೆ ಕಾಣುವ ಅದ್ಯಾರೋ ಅಹೋರಾತ್ರ, ಈ ಆರ್ಯವರ್ಧನನ ಜತೆ ಗುದ್ದಾಟಕ್ಕೆ ಬಿದ್ದಿದ್ದಾನೆ. ಈ ಅಹೋರಾತ್ರ ಆಧ್ಯಾತ್ಮ ಬೋಧಿಸುತ್ತಾ, ಪುಸ್ತಕ ಬರೆಯುತ್ತಾ, ತನಗೆ ತಿಳಿದ ಜ್ಯೋತಿಷ್ಯ, ವಾಸ್ತು ಹೇಳುತ್ತಾ , ಮರ ತಬ್ಬಿಕೋ ಚಳವಳಿಯಲ್ಲಿ ಮುಂದುವರಿದಿದ್ದರೆ, ಮರ್ಯಾದೆ ಇತ್ತು ಅಲ್ಲವೇ? ಅದನ್ನು ಬಿಟ್ಟು, ’ಕಿಚ್ಚ’ನನ್ನು ದಿನನಿತ್ಯ ಕಿಚಾಯಿಸಿ, ಅವನ ಅಭಿಮಾನಿಗಳನ್ನು ಮೈಮೇಲೆ ಎಳೆದುಕೊಂಡು, ಠಾಣೆ ಮುಂದೆ ಧರಣಿ ಕೂರುವ ದೈನೇಸಿ ಸ್ಥಿತಿ ತಂದು ಕೊಂಡಿದ್ದಾನೆ, ಏನಾಗಿದೆ ಇವರಿಗೆಲ್ಲ? ಈ ಟಿವಿ ಜ್ಯೋತಿಷಿಗಳೆಲ್ಲ ಒಂದು ರೀತಿಯಲ್ಲಿ ವಂಚಕರೇ.
ಅವರ ಪೈಕಿ ಬ್ರಹ್ಮಾಂಡ ಗುರೂಜಿಯನ್ನು ಮೀರಿಸುವವರಿಲ್ಲ. ಆತ ಹೇಳುವುದೆಲ್ಲ ಶುದ್ಧ ಸುಳ್ಳು. ಈಗ ಬಂದಿರುವ ಕರೋನಾದ ಮೂಲ ಹೆಸರು ಕೋಣಮಾರಮ್ಮನಂತೆ. ಅವಳ ಎಡಗೈಯಲ್ಲಿ ಬರೀ ಹುಳುಗಳು ಇರುತ್ತೆ, ಬಲಗೈಯಲ್ಲಿ ಹಾವುಗಳಿರುತ್ತವೆ. ಮತ್ತೊಂದು ಕೈಯಲ್ಲಿ ಪಾಶಾಂಕುಶ ಮತ್ತು ಇನ್ನೊಂದು ಕೈಯಲ್ಲಿ ಡಮರುಗ ಹಿಡಿದಿರುತ್ತಾಳಂತೆ, ತಲೆಯಲ್ಲಿ ಬುರುಡೆ ಯನ್ನಿಟ್ಟುಕೊಂಡಿರುತ್ತಾಳಂತೆ, ಅದರ ಹಾರವನ್ನು ಕುತ್ತಿಗೆಗೆ ಹಾಕಿಕೊಂಡಿರುತ್ತಾಳಂತೆ, ಇಂಥ ವಿಗ್ರಹವನ್ನು ಜೇಡಿಮಣ್ಣಿನಲ್ಲಿ ಮಾಡಿ ಪೂಜಿಸಿದರೆ ಕರೋನಾ ನಮ್ಮ ರಾಜ್ಯವೊಂದೇ ಅಲ್ಲ, ದೇಶದಿಂದಲೇ ಓಡಿ ಹೋಗುತ್ತದೆ ಎಂದು ಹೇಳುತ್ತಾನಲ್ಲ, ಈ ಬ್ರಹ್ಮಾಂಡ ಗುರೂಜೀ ?! ಇವನೆಂಥ ಪಾಕಡಾ ಇರಬಹುದು?!
ಖಾವಿ ತೊಟ್ಟವರು ಹೇಗಿರಬೇಕು ಎಂಬುದಕ್ಕೆ ನಮ್ಮ ಮಧ್ಯದ ಇರುವ ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು ಅತ್ಯುತ್ತಮ ನಿದರ್ಶನ. ಇವರೆಂದೂ ಅನಗತ್ಯವಾಗಿ ಒಂದೇ ಒಂದು ಮಾತು ಆಡಿದವರಲ್ಲ. ಏನೋ ಹೇಳಿ ಅದು ವಿವಾದವಾಗಿ, ತಾವು ಹಾಗೆ ಹೇಳಿಲ್ಲ, ತಮ್ಮ ಮಾತನ್ನು ತಿರುಚಲಾಗಿದೆ ಎಂದು ಸ್ಪಷ್ಟೀಕರಣ ಕೊಟ್ಟವರೂ ಅಲ್ಲ.
ಇವರ ಸಾರ್ವಜನಿಕ ನಡೆ-ನುಡಿ ವಿವಾದಾತೀತ, ಅಪ್ಪಟ ಶುದ್ಧ. ತಮ್ಮ ಮೇಲಿನ ಖಾವಿ ಪೋಷಾಕನ್ನು ಇವರು ’ಬೆಂಕಿ’ಯೆಂದು ಭಾವಿಸಿದವರು. ಸಲ್ಲುವ ದಿರಿಸು ಸುಡಬಲ್ಲದು ಎಂಬುದನ್ನು ಅರಿತವರು. ಇವರು ತಾವು ಧರಿಸಿದ ಖಾವಿಗೆ ಮರ್ಯಾದೆ ತಂದುಕೊಟ್ಟವರು. ಬಾಬಾ ರಾಮದೇವರ ಉಳಿದೆಲ್ಲ ಕಾರ್ಯಗಳ ಬಗ್ಗೆ ಗೌರವ ಇಟ್ಟುಕೊಂಡ ನನಗೆ, ಈ ಸಮಯದಲ್ಲಿ ಬೇಕಾಗಿರದ ಉಸಾಬರಿಯನ್ನು ಮೈಮೇಲೆ ಎಳೆದುಕೊಂಡಿದ್ದನ್ನು ನೋಡಿ ಸುಮ್ಮನಿರಲಾರದೇ, ಯಾಕೋ ಇವನ್ನೆಲ್ಲ ಈ ಸಮಯದಲ್ಲಿ ಹೇಳಬೇಕು ಎನಿಸಿತು.