ಕನಸು ಇಲ್ಲದ ಬದುಕೊಂದು ಬದುಕೇ ?
ಅಭಿಮತ
ಡಾ.ಕೆ.ಪಿ.ಪುತ್ತೂರಾಯ
ಬದುಕು, ಭಗವಂತ ನಮಗಿತ್ತ ಬಹುದೊಡ್ಡ ಬಳುವಳಿ. ದೇವರು ನಮಗೆ ಏನೆಲ್ಲ ಕೊಟ್ಟ ಅನ್ನೋದಕ್ಕಿಂತಲೂ ಕೊಟ್ಟದ್ದನ್ನು ನಾವು ಹೇಗೆ ಬಳಸಿಕೊಂಡೆವು ಅನ್ನೋದು ಮುಖ್ಯ. ಈ ಹಿನ್ನೆಲೆಯಲ್ಲಿ ನಮ್ಮ ಪಾಲಿಗೆ ಪ್ರಾಪ್ತವಾಗುವ ಬದುಕನ್ನು ವ್ಯರ್ಥ ಗೊಳಿಸದೇ ಸಾಧನೆಗಳೊಂದಿಗೆ ಸಾರ್ಥಕಗೊಳಿಸಿ ತೆರಳೋದೇ ನಾವು ಭಗವಂತನಿಗೆ ಪ್ರತಿಯಾಗಿ ನೀಡುವ ಬಳುವಳಿ.
‘ನಡೆದಷ್ಟು ದಾರಿ ಇದೆ, ಪಡೆದಷ್ಟು ಭಾಗ್ಯ ಇದೆ’ ಎಂಬುದೇ ಈ ಜಗತ್ತು ನಮಗೆ ನೀಡುವ ಸಂದೇಶ. ಆದುದರಿಂದ ಸಮಯಕ್ಕೆರಜೆ ಇಲ್ಲ; ಕನಸುಗಳಿಗೆ ಕೊನೆ ಇಲ್ಲ! ಬರೇ ಜೀವಂತವಾಗಿದ್ದು ಕಾಲ ಕಳೆಯೋದಕ್ಕೂ, ಸಂತಸದ, ಸಕ್ರಿಯ, ಸಾರ್ಥಕ ಜೀವನ ವನ್ನು ನಡೆಸುವುದಕ್ಕೂ ವ್ಯತ್ಯಾಸವಿದೆ. ‘ತೇಏವ ಜೀವಂತೀ ಮನಸೈವ ಜೀವಂತೀ’  ಎಂಬ ಸಂಸ್ಕೃತದ ಉಕ್ತಿಯಂತೆ, ನಾವು ಬದುಕಬೇಕು; ಆದರೆ ಚೆನ್ನಾಗಿ ಬದುಕಬೇಕು; ಮನಸಾರೆ ಬದುಕಬೇಕು.
ಈ ಹಿನ್ನೆಲೆಯಲ್ಲಿ ಬದುಕು ಇರೋದು ಬಾಳಲು-ಬಳಲಲು ಅಲ್ಲ; ಸವಿಯಲು-ಸವೆದು ಹೋಗಲು ಅಲ್ಲ; ಏನನ್ನಾದರೂ ಸಾಧಿಸಲು- ರೋಧಿಸಲು ಅಲ್ಲ; ಸಂತಸಪಡಲು-ಸಂಕಟಪಡಲು ಅಲ್ಲ ಎಂಬ ಧೋರಣೆ ನಮ್ಮದಾಗಬೇಕು. ಒಟ್ಟಿನಲ್ಲಿಗೌರವಿಸು ಜೀವನವ-ಗೌರವಿಸು ಚೇತನವ ಎಂಬ ಸಿದ್ಧಾಂತದಡಿ, ಬದುಕು ಒಂದು ಸಂಭ್ರಮವಾಗಬೇಕು; ಸಂಗ್ರಾಮವಾಗ ಬಾರದು. (    -  ).
ಬಂದಂತೆ ಬದುಕೋದು ಬದುಕಲ್ಲ; ನಾವೆಂದುಕೊಂಡಂತೆ ಬದುಕೋದೇ ನಿಜವಾದ ಬದುಕು. ಭಗವಂತ ನಮಗೆ ಹಣೆಯನ್ನಷ್ಟೆ ಕೊಟ್ಟ; ನಮ್ಮ ಹಣೆಬರಹವನ್ನು ಬರೆಯುವ ಕೆಲಸವನ್ನು ನಮಗೇ ಬಿಟ್ಟು ಬಿಟ್ಟ. ಜಾತಕದಿ ಹಣೆಬರಹ ತಿದ್ದುವನೇ ಜೋಯಿಸನು-ಎಂಬ ಡಿವಿಜಿಯವರ ಮಾತಿನಂತೆ ನಮ್ಮ ಹಣೆಬರಹವನ್ನು ಇನ್ಯಾರಿಂದಲೋ ಬದಲಿಸಲಾಗದು. ದೇವರು ನಮಗೆ ಜೀವವನ್ನಷ್ಟೆ ಕೊಟ್ಟ; ಜೀವಿಸುವ ಬಗೆಯನ್ನು ನಮಗೇ ಬಿಟ್ಟುಬಿಟ್ಟ.
ಜೀವನವೆಂದರೆ ಒಂದು ಪುಸ್ತಕವಿದ್ದಂತೆ; ಮೊದಲನೇ ಪುಟ ಜನನವಾದರೆ, ಕೊನೆಯ ಪುಟ ಮರಣ. ನಡುವಿನ ಹಾಳೆಗಳನ್ನು ನಾವೇ ತುಂಬಿಕೊಳ್ಳಬೇಕು. ಜೀವನವೆಂದರೆ ಎಲ್ಲರ ಪಾಲಿಗೂ ಒಂದು ಪರೀಕ್ಷೆ ಇದ್ದಂತೆ; ಆದರೆ ಪ್ರತಿಯೊಬ್ಬರ ಪ್ರಶ್ನಾ ಪತ್ರಿಕೆ ಯೂ ಬೇರೆ ಬೇರೆ ಆಗಿರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಪ್ರಶ್ನೆಗಳು. ಅವರವರ ಪ್ರಶ್ನೆಗಳಿಗೆ ಅವರವರೇ ಉತ್ತರಿಸಬೇಕು. ಇತರರ ಉತ್ತರಗಳನ್ನು ನಕಲು ಹೊಡೆದರೆ, ಫೇಲಾಗೋದು ಖಂಡಿತ.
ಆದರೆ, ಬದುಕು ಸಂಕೀರ್ಣವಾದುದು. ಅದು ಕೆಲವೊಮ್ಮೆ ಉತ್ತರವೇ ಇಲ್ಲದ ಪ್ರಶ್ನೆಗಳನ್ನು, ಪರಿಹಾರವೇ ಇಲ್ಲದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಆದ್ದರಿಂದ ಪ್ರತಿಯೊಂದು ಪ್ರಶ್ನೆಗೂ ಉತ್ತರ ಪಡೆದೇ ತೀರುತ್ತೇನೆಂದು ಹಠ ಹಿಡಿಯಬಾರದು. ಕಾರಣ,ಕೆಲವೊಮ್ಮೆ ಉತ್ತರ ಸಿಗುವ ಹೊತ್ತಿಗೆ ಪ್ರಶ್ನೆಯೇ ಬದಲಾಗಿರುತ್ತದೆ. ಹೀಗೆ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ರೂವಾರಿಗಳು ನಾವೇ ಆಗಿದ್ದರೂ, ಎಲ್ಲದಕ್ಕೂ ವಿಧಿಯಾಟ ಎಂಬ ಹಣೆಪಟ್ಟಿಯನ್ನು ಕಟ್ಟಿ ಜಾರಿಕೊಳ್ಳುತ್ತೇವೆ.
ಇದು ತರವಲ್ಲ, ಬದುಕು ಎಂದರೆ, ಒಂದು ಹಾರಾಟವೂ ಅಲ್ಲ; ಹೋರಾಟವೂ ಅಲ್ಲ; ವಿಧಿಯಾಟವೂ ಅಲ್ಲ; ಒಂದು ರೀತಿಯಲ್ಲಿನೋಡಿದರೆ ಅದು ಒಂದು ಚದುರಂಗದ ಪಗಡೆ ಆಟವಿದ್ದಂತೆ. ಆಟವನ್ನು ಗೆಲ್ಲಬೇಕಾದರೆ ಕಾಯಿಗಳನ್ನು ಬರೇ ಮುಂದಕ್ಕೆ-ಹಿಂದಕ್ಕೆ ಮಾತ್ರವಲ್ಲ, ಆ ಕಡೆ- ಈ ಕಡೆ ಎಲ್ಲಾ ಕಡೆ ಚಲಾಯಿಸಬೇಕಾಗುತ್ತದೆ.
ಬದುಕು ಎಂದರೆ ಒಂದು ಜೋಕಾಲಿ ಇದ್ದಂತೆ- ಅದು ಮುಂದಕ್ಕೆ ಹೋಗಬೇಕಾದರೆ ಹಿಂದಕ್ಕೂ ಹೋಗಬೇಕು. ಜೀವನದಲ್ಲಿ ಮುನ್ನಡೆ-ಹಿನ್ನಡೆ, ಏಳು-ಬೀಳುಗಳು ಸರ್ವೇ ಸಾಮಾನ್ಯ. ಹಾಗೆಂದು ಕೈ ಕಟ್ಟಿ ಕುಳಿತಿರಲು ಸಾಧ್ಯವೇ? ಬಾಡಿ ಹೋಗಲಿದ್ದೇನೆ-ಬಿದ್ದು ಹೋಗಲಿದ್ದೇನೆ ಎಂದು ತಿಳಿದಿದ್ದರೂ ಅರಳದೇ ಹೂ? ಸತ್ತು ಹೋಗಲಿದ್ದೇನೆ-ಸುಟ್ಟು ಹೋಗಲಿದ್ದೇನೆ ಎಂಬ ಅರಿವು ಇದ್ದರೂ ಬದುಕಿ ಬಾಳದೇ ಈ ಜೀವ? ಆದ್ದರಿಂದ ಸಾಯುವವರೆಗೆ ಬದುಕಲೇಬೇಕು; ಬದುಕಿ ಬಾಳಲೇ ಬೇಕು.
ನಮ್ಮ ಜೀವನ ಸಾರ್ಥಕವಾಗೋದು, ಸಾಯೋದಕ್ಕೂ ಮೊದಲು ನಾನು ಈ ಪ್ರಪಂಚಕ್ಕೆ ಏನಾದರೂ ಒಳ್ಳೇದನ್ನು ಕೊಟ್ಟು ಹೋಗಬೇಕು; ಒಳ್ಳೇದನ್ನು ಮಾಡಿ ಹೋಗಬೇಕು ಎಂಬ ಕನಸನ್ನು ಕಂಡು, ಅದನ್ನು ನನಸು ಮಾಡಿಕೊಳ್ಳಲು ನಾವು ಕಾರ್ಯ ಪ್ರವೃತ್ತ ರಾದಾಗ ಮಾತ್ರ! ಈ ಹಿನ್ನೆಲೆಯಲ್ಲಿ, ಮೊದಲಿಗೆ ನಾವು ಜೀವನದಲ್ಲಿ ಏನಾಗಬೇಕೆಂದಿದ್ದೇವೆ; ಏನನ್ನು ಸಾಧಿಸ ಬೇಕೆಂದಿದ್ದೇವೆ ಎಂಬುದರ ಬಗ್ಗೆ ಒಂದು ಕನಸಿರಬೇಕು.
ಕನಸಿಲ್ಲದ ಜೀವನ ಗುರಿ ಇಲ್ಲದ ಪಯಣದಂತೆ. ತಾವೆಲ್ಲಿಗೆ ಹೋಗಬೇಕೆಂದು ತಿಳಿಯದವರು ಎಲ್ಲಿಗೆ ಹೊದರೇನು ಪ್ರಯೋಜನ?ಗುರಿ ತಲುಪದಿರೋದು ದುಃಖದ ವಿಷಯವಲ್ಲ; ಜೀವನದಲ್ಲಿ ಗುರಿಯೇ ಇಲ್ಲದಿರೋದು ದುರಂತದ ವಿಷಯ. ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು; ಆದರೆ ಕನಸಿಲ್ಲದ ಬದುಕನ್ನು ಬದುಕಬಹುದೇ? ಎಂಬ ಕವಿಯ ಮಾತುಗಳಲ್ಲಿ ಕನಸಿಲ್ಲದವರ ಬಗ್ಗೆ ಕಳಕಳಿ ಇದೆ. ಜೀವನದಲ್ಲಿ ಏನೂ ಕನಸಿಲ್ಲದವರು, ಕನಸಿರುವ ಇತರರಿಗಾಗಿ ದುಡಿಯುತ್ತಿರುತ್ತಾರೆ ಎಂಬುದು ಸತ್ಯ ಸಂಗತಿ.
ಹಣವಿಲ್ಲದವ ಬಡವನಲ್ಲ; ಕನಸಿಲ್ಲದವನೇ ನಿಜವಾದ ಬಡವ ಎನ್ನಲಾಗಿದೆ. ಎಲ್ಲ ಯಶಸ್ವಿ ಪಯಣಗಳು ಎರಡು ನಂಬಿಕೆ ಗಳಿಂದ ಮುಂದುವರಿಯುತ್ತದೆ. 1. ಇಂದಿಗಿಂತ ನಾಳೆ ಉತ್ತಮವಾಗಿರುತ್ತದೆ.2ಅದನ್ನು ಹೌದುಗೊಳಿಸುವ ಸಾಮರ್ಥ್ಯ ನನ್ನ ಲಿದೆ. ಕನಸುಗಾರರಲ್ಲದವರು, ಮಹತ್ತರವಾದುದನ್ನು ಸಾಧಿಸಿದ ಉದಾಹರಣೆಗಳಿಲ್ಲ! ಹಾಗೆ ನೋಡಿದರೆ, ಮಹಾನ್ ವ್ಯಕ್ತಿಗಳ ಮಹತ್ಕಾರ್ಯಗಳ, ಸಾಧಕರ ಸಾಧನೆಗಳ ಹಿಂದೆ ಅವರದೇ ಆದ ಒಂದು ಸುಂದರ ಕನಸು ಕೆಲಸ ಮಾಡಿದೆ. ಆದರೆ ಕನಸುಗಳು ತೀರ ವೈಯಕ್ತಿಕ ವಿಚಾರಗಳು. ಇದರಲ್ಲಿ ಅನುಕರಣೆ ಸಲ್ಲ.
ನಮ್ಮ ಕನಸು ನಮ್ಮ ನಮ್ಮ ಆಸಕ್ತಿ-ಅಭಿರುಚಿ ಮತ್ತು ನಮ್ಮ ನಮ್ಮ ಶಕ್ತಿ-ಸಾಮರ್ಥ್ಯಗಳಿಗನುಸಾರವಾಗಿರಲಿ; ಹಾಗೂ ನನಸು ಮಾಡಿಕೊಳ್ಳಲು ಸಾಧ್ಯವಾಗುವಂತಹ ಕನಸುಗಳಾಗಿರಲಿ ಹಾಗೂ ಅವು ನಮ್ಮ ನಿದ್ದೆಯಲ್ಲಿ ಬರುವ ಕನಸುಗಳಲ್ಲ; ನಮ್ಮನ್ನು ನಿದ್ದೆ ಮಾಡಲು ಬಿಡದ ಕನಸುಗಳಾಗಿರಲಿ. ಕನಸು ಕಾಣೋದು ಮೊದಲನೇ ಹೆಜ್ಜೆ; ಮತ್ತು ಕಾಡುವ ಕನಸನ್ನು ಬೆನ್ನಟ್ಟುವುದು ಸಾಧನೆಯತ್ತ ಸಾಗುವ ಕೊನೆಯ ಹೆಜ್ಜೆ.
ಇಂತಹವರನ್ನು ಯಶಸ್ಸು ಒಂದಲ್ಲ ಒಂದು ದಿನ ಬಾಚಿ ತಬ್ಬಿಕೊಳ್ಳುತ್ತದೆ. ಈ ದೃಷ್ಟಿಯಲ್ಲಿ ನಮ್ಮ ನೆಚ್ಚಿನ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದ  ‘, .       ’ ಎಂಬ ಮಾತುಗಳಲ್ಲಿ ಒಂದು ಅದ್ಭುತವಾದ ಸಂದೇಶವಿದೆ. ಒಂದು ಕನಸು, ಸನಸಾಗುವ ಭರವಸೆಯ ಬಲದಿಂದಲೇ ಜೀವಿಸುತ್ತಿರುತ್ತದೆ. ಕಂಡ ಕನಸುಗಳೆಲ್ಲ ನನಸಾದೀತು ಎಂಬ ಗ್ಯಾರಂಟಿ ಇಲ್ಲ.
ಆದರೆ, ಕನಸು ಕಾಣದೇನೇ ನಾವು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಎಂದು ನಾವು ಕನಸು ಕಾಣೋದನ್ನು ನಿಲ್ಲಿಸುತ್ತೇವೆಯೋ ಅಂದಿಗೆ ನಮ್ಮ ಸಾಧನೆಗಳೂ ನಿಂತು ಹೋಗುತ್ತವೆ. ಸಮಾಜದಲ್ಲಿ3ವರ್ಗದ ಜನರಿರುತ್ತಾರೆ-ಕನಸನ್ನೇಕಾಣದವರು, ಬರೇ ಕನಸನ್ನು ಕಾಣುವವರು ಹಾಗೂ ಕಂಡ ಕನಸನ್ನು ನನಸುಮಾಡಿಕೊಳ್ಳುವವರು. ಎಲ್ಲರಿಗೂ ಜೀವನದಲ್ಲಿ ಮೊದಲು ಒಂದು ಕನಸಿರಲಿ; ತದನಂತರ ಅದನ್ನು ಕಾರ್ಯಗತಗೊಳಿಸಲು  “      ’ ’ ಎಂಬ ಜಪಾನಿ ನುಡಿಯಂತೆ, ಅದನ್ನು ಕಾರ್ಯಗತಗೊಳಿಸುವ ಕಾರ್ಯಸೂಚಿ ಮತ್ತು ಕಾರ್ಯತಂತ್ರ ಸಿದ್ಧವಾಗಲಿ.
ಆದರೆ ಜೀವನದಲ್ಲಿ ಕನಸು ಎಷ್ಟು ಮುಖ್ಯವೋ, ಕಂಡ ಕನಸನ್ನು ಸಾಕಾರಗೊಳಿಸುವ ಮಾರ್ಗ ಕೂಡ ಅಷ್ಟೇ ಮುಖ್ಯ. ಅದು ಸನ್ಮಾರ್ಗವಾಗಿರಬೇಕು. ನಾವು ಕ್ರಮಿಸುತ್ತಿರುವ ಮಾರ್ಗ ಸರಿ ಇಲ್ಲವೆಂದಾದರೆ, ನಾವು ಎಷ್ಟೇ ದೂರ ಕ್ರಮಿಸಿದ್ದರೂ, ತಕ್ಷಣ ಮಾರ್ಗ ಬದಲಾಯಿಸಿಕೊಳ್ಳಬೇಕು. ಕಾರಣ ವಾಮಮಾರ್ಗದಿಂದ ಸಾಽಸಿದ ಸಾಧನೆ, ಸಾಧನೆಯೇ ಅಲ್ಲ!
ಕಂಡ ಕನಸುಗಳನ್ನು ನನಸಾಗಿಸಲು ಅವಶ್ಯವಾದ ವಿಷಯಗಳೆಂದರೆ, ಆತ್ಮ ವಿಶ್ವಾಸ, ಬದ್ಧತೆ, ದೃಢ ನಿರ್ಧಾರ ಹಾಗೂ ಪ್ರಾಮಾಣಿಕ ಪರಿಶ್ರಮ. ಈ ಜಗತ್ತಿನ ಮಹಾನ್ ಸಾಧಕರೆಲ್ಲರೂ ಜಗತ್ತು ನಿದ್ರಿಸುತ್ತಿರಲು ತಾವು ಎಚ್ಚರವಾಗಿದ್ದು, ತಮ್ಮ ಪ್ರಯತ್ನ ಗಳನ್ನು ಮುಂದುವರಿಸಿದವರು. ಇವರೆಲ್ಲ ಅದೃಷ್ಟದ ಕ್ಷಣಗಳಿಗಾಗಿ ಕಾದವರಲ್ಲ; ಕಠಿಣ ಪರಿಶ್ರಮದಲ್ಲಿ ಮಾತ್ರವೇ ನಂಬಿದವರು. ಪರಿಶ್ರಮವೆಂದರೆ ಮೆಟ್ಟಿಲುಗಳಿದ್ದಂತೆ; ಅದೃಷ್ಟವೆಂದರೆ ಲಿಫ್ಟ್ ಇದ್ದಂತೆ.
ಲಿಫ್ಟ್ ಒಮ್ಮೊಮ್ಮೆ ಕೈಕೊಡಬಹುದು. ಆದರೆ ಮೆಟ್ಟಿಲುಗಳು ಹಾಗಲ್ಲ; ನಾವು ಏರುತ್ತ ಹೋದಷ್ಟು ನಮ್ಮನ್ನು ಮೇಲಕ್ಕೆ ಕೊಂಡೊ ಯ್ಯುತ್ತವೆ. ಮಾತ್ರವೇ ಅಲ್ಲ; ಒಂದು ವೇಳೆ ಬಿದ್ದರೂ, ಕೆಳಗಿನ ಮೆಟ್ಟಿಲಿನ ಮೇಲೆಯಷ್ಟೇ ಬೀಳುತ್ತೇವೆಯೇ ಹೊರತು, ಲಿಫ್ಟ್ ನಿಂದ ಬಿದ್ದಂತೆ ಪಾತಾಳಕ್ಕಲ್ಲ! ಮೇಲಾಗಿ ಒಂದೊಂದು ಮೆಟ್ಟಿಲನ್ನು ಏರುತ್ತ, ಇತರರ ಸಹಾಯವಿಲ್ಲದೇನೇ ನಾವಾಗಿಯೇ ನಮ್ಮ ಪರಿಶ್ರಮ-ಪ್ರತಿಭೆಯಿಂದ ಎತ್ತರಕ್ಕೆ ಏರೋದರಲ್ಲಿ ಸಂತಸವಿದೆ! ಸಂತೃಪ್ತಿ ಇದೆ; ಸಮಾಧಾನವಿದೆ.
ಆದ್ದರಿಂದ ಜೀವನದಲ್ಲಿ ಮೇಲಕ್ಕೆ ಏರುವ ಸಾಧಿಸುವ ಕನಸಿರಲಿ; ಆ ಕನಸನ್ನು ನನಸಾಗಿಸುವ ಛಲವೂ ನಮ್ಮದಾಗಿರಲಿ. ನಾವು ಈ ಜಗತ್ತಿಗೆ ಹೇಗೆ ಬಂದೆವು ಅನ್ನೋದಕ್ಕಿಂತಲೂ, ಬಂದವರು ಹೇಗೆ ಹೋದೆವು ಅನ್ನೋದು ಮುಖ್ಯವಲ್ಲವೇ? ಒಬ್ಬ ವ್ಯಕ್ತಿ ಈ ಜಗತ್ತನ್ನು ಹೇಗೆ ಬಿಟ್ಟ ಅನ್ನೋದಕ್ಕಿಂತಲೂ, ಬಿಡುವ ಮುನ್ನ ಏನನ್ನು ಕೊಟ್ಟ ಅನ್ನೋದು ಮುಖ್ಯ. ಈ ಜಗತ್ತಿಗೆ ಬರುವಾಗನಮಗಿದ್ದುದು ಬರೇ ಉಸಿರು ಮಾತ್ರ; ಹೆಸರಲ್ಲ; ಈ ಜಗತ್ತನ್ನು ಬಿಟ್ಟು ಹೋಗುವಾಗ ಉಸಿರು ಇರೋದಿಲ್ಲ; ಒಳ್ಳೆಯ ಹೆಸರಿರಲಿ; ಹೀಗಾಗಲು, ಎಲ್ಲರಿಗೂ ಒಂದು ಸುಂದರ ಕನಸಿರಲಿ!