ಪುಸ್ತಕವನ್ನೇ ಉಸಿರಾಗಿಸಿಕೊಂಡ ಆ ಇಬ್ಬರ ಕುರಿತು…
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್‌
ಅದೇನು ಪೊಗರಲ್ಲ, ನಾನು ಸುಮಾರು ಎಂಬತ್ತೈದು ದೇಶಗಳಿಗೆ ಹೋಗಿರಬಹುದು. ಈ ಪೈಕಿ ಯಾವ ದೇಶ ಇಷ್ಟ ಅಂದರೆ ಹೇಳು ವುದು ಕಷ್ಟ. ಪ್ರತಿ ದೇಶವೂ ಚೆಂದವೇ, ವೈಶಿಷ್ಟ್ಯವೇ.
ಒಂದು ದೇಶವನ್ನು  ಮತ್ತೊಂದರ ಜತೆಗೆ ಹೋಲಿಕೆ ಮಾಡಬಾರದು. ಆದರೂ ನನಗೆ ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಅಂದ್ರೆ ಬಹಳ ಇಷ್ಟ. ಈ ನಗರವನ್ನು ಪೆಟ್ರೋಗ್ರಾಡ್ ಮತ್ತು ಲೆನಿನ್ ಗ್ರಾಡ್ ಎಂದೂ ಕರೆಯುತ್ತಿದ್ದರು. ಈಗ ಅದು ಸೇಂಟ್ ಪೀಟರ್ಸ್ ಬರ್ಗ್. ನಾನು ಈ ನಗರಕ್ಕೆ ಮೂರು ಸಲ ಹೋಗಿದ್ದೆ. ಇದು ರಷ್ಯಾದ ಸೊಬಗು ಮತ್ತು ಯೂರೋಪಿನ ಸೊಗಡನ್ನು ಮೈತುಂಬಿಸಿ ಕೊಂಡ ಜಗತ್ತಿನಲ್ಲಿಯೇ ಅತಿ ವಿಶಿಷ್ಟ ನಗರ.
ಬಹುತೇಕರಿಗೆ ಈ ನಗರ ಇಷ್ಟವಾಗಲು ಅಲ್ಲಿರುವ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯಗಳೇ ಕಾರಣ. ಒಂದೊಂದು ಮ್ಯೂಸಿಯಂ ನೋಡಲು ವರ್ಷಗಳೇ ಬೇಕು. ಅದರಲ್ಲೂ ಹರ್ಮಿಟಾಜ್ ಮ್ಯೂಸಿಯಂ ನೋಡಲು ಅವರವರ ಖಾಯಷ್ ಪ್ರಕಾರ, ಕನಿಷ್ಠ ಐವತ್ತು, ನೂರು, ನೂರೈವತ್ತು, ನೂರೆಂಬತ್ತು ವರ್ಷಗಳು ಬೇಕಂತೆ. ಪ್ರತಿ ಬೀದಿಯಲ್ಲಿ ಒಂದು ಮ್ಯೂಸಿಯಂ ಮತ್ತು ಒಂದು ಗ್ರಂಥಾಲಯ ನೋಡಬೇಕೆಂದರೆ ಆ ಊರಿಗೆ ಹೋಗಬೇಕು.
ಅಲ್ಲಿರುವಷ್ಟು ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಗಳನ್ನು ಬೇರೆಲ್ಲೂ ನೋಡಿಲ್ಲ. ಆ ನಗರವನ್ನು ಕಟ್ಟಿದವರ ಮನಸ್ಸು ಅದೆಷ್ಟು ಸುಂದರವಾಗಿರಬಹುದು ಎಂದು ನನಗೆ ಯಾವತ್ತೂ ಸೋಜಿಗವಾಗುತ್ತದೆ. ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಒಂದು ಗ್ರಂಥಾ ಲಯ ಇಟ್ಟುಕೊಂಡು ನಾವು ಡೌಲು ಹೊಡೆಯುತ್ತೇವೆ. ಆದರೆ ಆ ನಗರದಲ್ಲಿ ಅಂಥ ಕನಿಷ್ಠ ಐನೂರು ಗ್ರಂಥಾಲಯ ಗಳಿವೆ. ಒಂದೊಂದು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದಿ ಮುಗಿಸಲು ಕನಿಷ್ಠ ಹತ್ತು ಜನ್ಮವೆತ್ತಿ ಬರಬೇಕು. ಹೀಗಿರುವಾಗ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿರುವ ಎಲ್ಲಾ ಗ್ರಂಥಾಲಯಗಳ ಪುಸ್ತಕಗಳೆಲ್ಲವನ್ನೂ ಒಂದು ಸಲ ಮುಟ್ಟಿ ಬರಲು ಅದೆಷ್ಟು ಜನ್ಮ ಎತ್ತಿ ಬರಬೇಕೋ, ಕಾಣೆ.
ಒಮ್ಮೆ ನಾನು ಸೇಂಟ್ ಪೀಟರ್ಸ್ ಬರ್ಗ್‌ನಲ್ಲಿದ್ದಾಗ, ಇಡೀ ನಗರವನ್ನು ಅರ್ಧ ದಿನದ ಮಟ್ಟಿಗೆ ಬಂದ್ ಮಾಡಲಾಗಿತ್ತು. ಎಲ್ಲಾ ಅಂಗಡಿ-ಮುಂಗಟ್ಟುಗಳು, ಮಳಿಗೆಗಳು ಬಾಗಿಲು ಹಾಕಿದ್ದವು. ಸಾರ್ವಜನಿಕ ವಾಹನ ಮತ್ತು ನಗರ ರೈಲು ಸಂಚಾರ ಸ್ಥಗಿತ ವಾಗಿತ್ತು. ಆ ಅರ್ಧ ದಿನ ಹೋಟೆಲಿನ ಇರಬೇಕಾಗಿ ಬಂದಿತ್ತು. ಆಗ ನನಗೆ ಗೊತ್ತಾಗಿದ್ದೇನೆಂದರೆ, ಆ ನಗರದ ಪ್ರಸಿದ್ಧ ಪುಸ್ತಕ ವ್ಯಾಪಾರಿ ಮತ್ತು ಪ್ರಕಾಶಕರೊಬ್ಬರು ನಿಧನರಾಗಿದ್ದಾರೆಂದು. ಅವರ ಗೌರವಾರ್ಥ ಅರ್ಧ ದಿನ ನಗರ ಬಂದ್ ಆಗಿತ್ತು. ಹಾಗೆಂದುಬಂದ್ ಮಾಡುವಂತೆ ಅಲ್ಲಿನ ಸ್ಥಳೀಯ ಆಡಳಿತ ಆದೇಶ ಹೊರಡಿಸಿರಲಿಲ್ಲ.
ಜನ ಸಹಜವಾಗಿ ಸ್ವಯಂ ಸ್ಫೂರ್ತಿಯಿಂದ ಬಂದ್ ಆಚರಿಸಿದ್ದರು. ಲೇಖಕರು, ಪ್ರಕಾಶಕರು, ಕಲಾವಿದರು ತೀರಿಕೊಂಡರೆ, ಜನ ಅವರಾಗಿಯೇ ತಾವಿರುವ ಜಾಗದ ಶ್ರದ್ಧಾಂಜಲಿ ಸಲ್ಲಿಸುವ ಒಂದು ಅಪರೂಪದ ಸಂಸ್ಕಾರ, ಸಂಪ್ರದಾಯ ಆ ನಗರದಲ್ಲಿದೆ. ಆ ನಗರದಲ್ಲಿ ಬೇರೆ ಯಾರಾದರೂ ನಿಧನರಾದರೆ, ಈ ಗೌರವ ಸಿಗಲಿಕ್ಕಿಲ್ಲ. ಆದರೆ ಪ್ರಕಾಶಕ, ಲೇಖಕ ಮತ್ತು ಕಲಾವಿದರಿಗಂತೂ ಅದು ಇದ್ದೇ ಇದೆ. ಒಂದು ನಗರ, ಸಮಾಜ ಮೈದಾಳಲು ಇವರೆ ಇರಲೇಬೇಕು ಎಂದು ನಂಬಿದ ಊರು ಅದು.
ಅವರಿಗೆ ಯಥೋಚಿತ ಮರ್ಯಾದೆ, ಗೌರವ, ಅಭಿಮಾನ, ಪ್ರೀತಿ ತೋರಿದ ಊರದು. ಅದಕ್ಕಾಗಿ ಅಲ್ಲಿ ಅಷ್ಟೊಂದು ವಸ್ತು ಸಂಗ್ರಹಾಲಯಗಳಿವೆ, ಗ್ರಂಥಾಲಯ ಗಳಿವೆ. ಜಗತ್ತಿನ ಬೇರೆಲ್ಲೂ ಸಿಗದ ಪುಸ್ತಕ, ಸೇಂಟ್ ಪೀಟರ್ಸ್ ಬರ್ಗ್‌ನಲ್ಲಿ ಸಿಗುತ್ತದೆ.ಅಷ್ಟೊಂದು ಸಂಖ್ಯೆಯಲ್ಲಿ ಸಾಹಿತಿಗಳು, ಕಲಾವಿದರು ಜಗತ್ತಿನ ಬೇರೆ ಬೇರೆ ದೇಶಗಳಿಂದ ಬಂದು ಅಲ್ಲಿ ನೆಲೆಸಿದರು.
ಪ್ರವಾಸಿಗರಾಗಿ ಅಲ್ಲಿ ಬಂದವರು, ವಾಪಸ್ ಹೋಗಲು ಮನಸ್ಸಾಗದೇ ಅಲ್ಲಿಯೇ ಉಳಿದರು. ಆರಂಭದಲ್ಲಿ ಸೇಂಟ್ ಪೀಟರ್ಸ್ ಬರ್ಗ್ ಪ್ರಿಂಟಿಂಗ್ ಉದ್ಯಮದ ತವರು ಮನೆಯಾಗಿತ್ತು. ಅಲ್ಲಿ ಹೆಚ್ಚಾಗಿ ಮುದ್ರಕರು ಮತ್ತು ಪ್ರಕಾಶಕರಿದ್ದರು. ಅವರನ್ನು ಹುಡುಕಿ ಕೊಂಡು ಸಾಹಿತಿಗಳು ಬಂದರು. ಸಾಹಿತಿಗಳ ಜತೆಗೆ ಕಲಾವಿದರು, ಸಂಗೀತಗಾರರು ಕೂಡ ಬಂದರು. ಕಳೆದ ಇನ್ನೂರು ವರ್ಷ ಗಳಲ್ಲಿ ಆ ನಗರ ಒಂದು ಸಾಂಸ್ಕೃತಿಕ ನಗರವಾಗಿ ಮೈದಾಳಿ ನಿಂತ ಕತೆ ರೋಚಕ.
ಮರುದಿನ ನನಗೆ ಒಂದು ಪುಟ್ಟ ಆಶ್ಚರ್ಯ ಕಾದಿತ್ತು. ‘ಇಜ್ವೇಸ್ತಿಯಾ’ ಮತ್ತು ‘ಮಾಸ್ಕೊಸ್ಕಾಯಾ ಪ್ರಾವ್ದ’ ಸೇರಿದಂತೆ, ಪ್ರಮುಖ ಪತ್ರಿಕೆಗಳಲ್ಲಿ ಆ ಪುಸ್ತಕ ಪ್ರಕಾಶಕರ ನಿಧನ ಸುದ್ದಿ ಮತ್ತು ಅವರ ಕುರಿತ ಲೇಖನಗಳು ಎರಡು ಪೂರ್ತಿ ಪುಟಗಳಲ್ಲಿ ಪ್ರಕಟ ವಾಗಿದ್ದವು. ‘ಒಬ್ಬ ಪುಸ್ತಕ ವ್ಯಾಪಾರಿ ನಿಧನರಾದರೆ, ಈ ನಗರವೇಕೆ ಇಷ್ಟೊಂದು ದುಃಖತಪ್ತವಾಗುತ್ತದೆ?’ ಎಂಬ ಪ್ರಶ್ನೆ ಬಲವಾಗಿಕಾಡಲಾರಂಭಿಸಿತ್ತು. ತುಸು ಯೋಚಿಸಿ, ಆ ಮಣ್ಣಿನ ಸಂಸ್ಕಾರ ಅದೆಷ್ಟು ಉದಾತ್ತವಾಗಿರಬಹುದು, ಉತ್ಕೃಷ್ಟವಾಗಿರಬಹುದು? ಇಂದಿಗೂ ಕೂಡ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಸಾಹಿತಿ, ಪ್ರಕಾಶಕ, ಸಂಗೀತಗಾರ ಮತ್ತು ಕಲಾವಿದ ಎಂದು ಹೇಳಿಕೊಂಡರೆ, ಅವರಿಗೆ ಸಿಗುವ ಕಿಮ್ಮತ್ತೇ ಬೇರೆ.
ನಾನು ಈ ಮಾತನ್ನು ಹೇಳಲು ಕಾರಣಗಳಿವೆ. ನಾವು ಕಳೆದ ಒಂದು ತಿಂಗಳ ಅವಽಯಲ್ಲಿ ಬೆಂಗಳೂರಿನ ಒಬ್ಬರು ಪುಸ್ತಕ ವ್ಯಾಪಾರಿ ಮತ್ತು ಇನ್ನೊಬ್ಬ ಪುಸ್ತಕ ಪ್ರಕಾಶಕ ಮತ್ತು ವ್ಯಾಪಾರಿಯನ್ನು ಕಳೆದುಕೊಂಡೆವು. ಒಬ್ಬರು ಟಿ.ಎಸ್.ಶಾನಭಾಗ ಮತ್ತು ಮತ್ತೊಬ್ಬರು ಸುರೇಶ ಷಾ. ಇವರಿಬ್ಬರು ನಿಧನರಾದಾಗ, ಬಹುತೇಕ ಪತ್ರಿಕೆಗಳಲ್ಲಿ ಒಂದು ಕಾಲಂ ಸುದ್ದಿಯಾಯಿತು ಅಥವಾ ಅದೂ ಇಲ್ಲ.
ಟಿವಿ ಚಾನೆಲ್ಲುಗಳು ಓಡುವ ಸಾಲುಗಳಲ್ಲಿ ( ) ಸುದ್ದಿ ನೀಡಿ ಸುಮ್ಮನಾದರು. ಸುದ್ದಿಮನೆಗಳಲ್ಲಿರುವ ಎಷ್ಟು ಜನಪತ್ರಕರ್ತರು ಇವರಿಬ್ಬರ ಹೆಸರು ಕೇಳಿzರೋ ಗೊತ್ತಿಲ್ಲ, ಇರಲಿ ಬಿಡಿ. ಇಬ್ಬರೂ ನನಗೆ ಆತ್ಮೀಯರಾಗಿದ್ದರು. ಇವರಿಬ್ಬರೂಪುಸ್ತಕಕ್ಕಾಗಿಯೇ ಜನ್ಮ ತಳೆದವರು. ಅದರಲ್ಲಿಯೇ ಉಸಿರಾಡಿ, ಜೀವ ತೇದವರು. ಅವರಿಗೆ ಪುಸ್ತಕಗಳ ಹೊರತಾಗಿ ಮತ್ತೇನೂ ಗೊತ್ತಿರಲಿಲ್ಲ. ಶಾನಭಾಗರಂತೂ ಸುಮಾರು ಅರ್ಧ ಶತಮಾನ ಕಾಲ ಬೆಂಗಳೂರಿಗರಿಗೆ ಇಂಗ್ಲಿಷ್ ಪುಸ್ತಕಗಳನ್ನು ಓದಿಸಿದವರು. ಅವರ ಪ್ರೀಮಿಯರ್ ಪುಸ್ತಕದಂಗಡಿಗೆ ಹೋಗದ ಪುಸ್ತಕ ಪ್ರೇಮಿಗಳೇ ಇರಲಿಕ್ಕಿಲ್ಲ.
ಬೆಂಗಳೂರಿಗೆ ಬರುವ ಸಾಹಿತಿಗಳು ಅವರ ಅಂಗಡಿಯನ್ನು ಹುಡುಕಿಕೊಂಡು ಹೋಗುತ್ತಿದ್ದರು. ಅವರು ಬೆಂಗಳೂರಿನ ಅಕ್ಷರ ಲೋಕ ಸಂಪನ್ನಗೊಳ್ಳಲು ಕಾರಣರಾದವರಲ್ಲಿ ಒಬ್ಬರು. ಚರ್ಚ್ ಸ್ಟ್ರೀಟ್‌ನಲ್ಲಿದ್ದ ಅವರ ಪುಸ್ತಕದಂಗಡಿಯಲ್ಲಿ ನಾನು ಅದೆಷ್ಟು ದಿನಗಳನ್ನು ಕಳೆದಿದ್ದೇನೋ? ಕೆಳಗಿನ ಒಂದು ಪುಸ್ತಕ ತೆಗೆದರೆ ಮೇಲಿನವೆ ಬಿದ್ದು ಹೋಗುತ್ತಿತ್ತು.  ರಾಶಿ ರಾಶಿ ಪುಸ್ತಕಗಳ ಮಧ್ಯೆ ತೀರಾ ಸಂಕೋಚ ಸ್ವಭಾವದ ಶಾನಭಾಗರ ಜತೆ ಹರಟೆ ಹೊಡೆಯುವುದು ಒಂದು ದಿವ್ಯ ಅನುಭೂತಿ ಯಾಗಿತ್ತು. ಯಾವುದೇ ಹೊಸ ಪುಸ್ತಕ ಬಂದರೂ ಫೋನ್ ಮಾಡಿ ಹೇಳುತ್ತಿದ್ದರು.
ನಾನು ಬೆಂಗಳೂರಿಗೆ ಬಂದ ಆರಂಭದಲ್ಲಿ, ನನ್ನಲ್ಲಿ ಆಗ ಹೆಚ್ಚು ಹಣವಿರುತ್ತಿರಲಿಲ್ಲ. ಆದರೆ ಶಾನಭಾಗರ ಅಂಗಡಿಗೆ ಹೋದರೆ ಕನಿಷ್ಠ ಒಂದೆರಡು ಸಾವಿರ ರುಪಾಯಿ ಪುಸ್ತಕ ಖರೀದಿಸಿದರೆ, ಅವರು ‘ಈಗ ಪುಸ್ತಕ ತೆಗೆದುಕೊಂಡು ಹೋಗಿ, ಕೈಲಾದಾಗ ಕೊಡಿ’ ಎನ್ನುತ್ತಿದ್ದರು. ‘ಶಾನಭಾಗರೇ, ನಿಮಗೆ ನನ್ನ ಪರಿಚಯವಿಲ್ಲ. ನಾನು ವಾಪಸ್ ಬಂದು ನಿಮಗೆ ಹಣ ಕೊಡದಿದ್ದರೆ?’ ಎಂದು ಹೇಳಿದಾಗ, ‘ನಿಮ್ಮನ್ನು ನೋಡಿದರೆ ಗೊತ್ತಾಗುತ್ತದೆ, ನೀವು ನಿಜವಾದ ಓದುಗರು ಹೌದೋ, ಅಲ್ಲವೋ ಎಂದು. ನೀವು ಖಂಡಿತಾ ಹಣ ಕೊಟ್ಟೇ ಕೊಡುತ್ತೀರಿ ಎಂಬ ವಿಶ್ವಾಸವಿದೆ.
ಒಂದು ವೇಳೆ ಕೊಡದಿದ್ದರೆ, ನಿಮಗೆ ಪುಸ್ತಕ ಓದಿಸಿದ ಖುಷಿ ನನ್ನದಾಗುತ್ತದೆ’ ಎಂದು ಹೇಳಿದ್ದರು. ನಂತರ ನಾನು ‘ವಿಜಯ ಕರ್ನಾಟಕ’ ಸಂಪಾದಕನಾದಾಗ, ನನ್ನನ್ನು ನೋಡಲೆಂದೇ ನಾಲ್ಕೆ ದು ಸಲ ಪತ್ರಿಕಾ ಕಾರ್ಯಾಲಯಕ್ಕೆ ಬಂದಿದ್ದರು. ಅವರಿಗೆ ಪುಸ್ತಕದ ಹೊರತಾಗಿ ಬೇರೇನೂ ಗೊತ್ತಿರಲಿಲ್ಲ.
ಶಾನಭಾಗರು ನಿಧನರಾದಾಗ, ‘ಡೆಕ್ಕನ್ ಹೆರಾಲ್ಡ್ ’ನಲ್ಲಿ ಹಿರಿಯ ಪತ್ರಕರ್ತೆ ವತ್ಸಲಾ ವೇದಾಂತಂ ಒಂದು ಪ್ರಸಂಗವನ್ನು ನೆನಪು ಮಾಡಿಕೊಂಡಿದ್ದರು. ಸುಮಾರು ಇಪ್ಪತ್ತೊಂದು ವರ್ಷಗಳ ಹಿಂದಿನ ಘಟನೆ. ಆಗ ತಾನೇ ಆರ್.ಕೆ.ನಾರಾಯಣ್ ಅವರ     ಕೃತಿ ಬಿಡುಗಡೆಯಾಗಿತ್ತು. ಪ್ರೀಮಿಯರ್ ಪುಸ್ತಕ ಅಂಗಡಿಗೆ ಹೋಗಿ ವಿಚಾರಿಸಿದರೆ ಎಲ್ಲಾ ಪ್ರತಿಗಳು ಖಾಲಿಯಾಗಿ ದ್ದವು. ‘ಒಂದೇ ಒಂದು ಪ್ರತಿ ಕೊಡಿ’ ಎಂದು ವತ್ಸಲಾ ಗೋಗರೆದರು.
‘ಈಗ ಎಲ್ಲ ಖಾಲಿಯಾಗಿವೆ, ಮುಂದಿನ ವಾರ ಬರುತ್ತೆ, ತೆಗೆದಿಡುವೆ’ ಎಂದರು ಶಾನಭಾಗರು. ‘ಇಲ್ಲ, ನನ್ನ ಮಗ ಇಂದು ರಾತ್ರಿಯೇ ಅಮೆರಿಕಕ್ಕೆ ಹೋಗುತ್ತಾನೆ. ಅವನಿಗೆ ಕೊಡಬೇಕಿದೆ’ ಎಂದರು. ಶಾನಭಾಗರು ಏನೂ ತಿಕ್ರಿಯೆ ಕೊಡಲಿಲ್ಲ. ವತ್ಸಲಾ ಬೇಸರದಿಂದ ಅಲ್ಲಿಂದ ನಿರ್ಗಮಿಸಿದರು. ಆ ದಿನ ರಾತ್ರಿ ವತ್ಸಲಾ ತಮ್ಮ ಕುಟುಂಬದವರ ಜತೆ ಊಟ ಮಾಡುವಾಗ, ಬಾಗಿಲ ಬೆಲ್ ಸದ್ದಾಯಿತು. ನೋಡಿದರೆ, ಶಾನಭಾಗರು! ಕೈಯಲ್ಲಿ ಆ ಪುಸ್ತಕ ಹಿಡಿದಿದ್ದರು!
ಮರುದಿನ ವತ್ಸಲಾ ಅವರು, ಶಾನಭಾಗರ ಅಂಗಡಿಗೆ ಹೋದರು. ಆ ರಾತ್ರಿ ಹೇಗೆ ಪುಸ್ತಕದ ಒಂದು ಪ್ರತಿಯನ್ನು ಗಿಟ್ಟಿಸಿದಿರಿ ಎಂದು ಕೇಳಿದರು. ಅದಕ್ಕೆ ಶಾನಭಾಗರು, ‘ನಮ್ಮ ಅಂಗಡಿಗೆ ಬರುವ ಕಾಯಂ ಗ್ರಾಹಕರೊಬ್ಬರು ಮೂರು ಪ್ರತಿಗಳನ್ನು ಖರೀದಿಸಿ ದ್ದರು. ಅವರಿಗೆ ಒಂದು ಪ್ರತಿ ಕೊಡಿ, ಮುಂದಿನ ವಾರ ಕೊಡ್ತೇನೆ ಎಂದು ನಿನ್ನೆ ಹೇಳಿದೆ. ಅದಕ್ಕೆ ಅವರು ಸಮ್ಮತಿಸಿದರು’ ಎಂದರು. ಶಾನಭಾಗರು ಆ ಸಾಯಂಕಾಲ ತಮ್ಮ ಅಂಗಡಿಯಿಂದ ಹೊರಟು, ಬಸವನಗುಡಿಯಲ್ಲಿರುವ ಆ ಗ್ರಾಹಕರ ಮನೆಗೆ ಹೋಗಿ,ಪುಸ್ತಕವನ್ನು ತೆಗೆದುಕೊಂಡು, ನಗರದ ಇನ್ನೊಂದು ದಿಕ್ಕಿಗಿರುವ ವತ್ಸಲಾ ಅವರ ಮನೆಗೆ ಬಂದು, ಆ ಪುಸ್ತಕವನ್ನು ಕೊಟ್ಟು ಹೋಗಿದ್ದರು.
ಇವರನ್ನು ಬರೀ ಪುಸ್ತಕ ವ್ಯಾಪಾರಿ ಎನ್ನಲು ಸಾಧ್ಯವೇ? ಇವರು ನಾಲ್ಕೈದು ತಲೆಮಾರುಗಳ ಜನರಲ್ಲಿ ಪುಸ್ತಕ ಪ್ರೀತಿ ಹುಟ್ಟಿ ಸಿದವರು, ಓದಿನ ಗೀಳು ಹತ್ತಿಸಿದವರು. ಬೆಂಗಳೂರನ್ನು ಒಂದು ಸಂಸ್ಕಾರವಂತರ ನಗರವನ್ನಾಗಿ ಮಾಡಲು ತಮ್ಮ ಯೋಗದಾನ ನೀಡಿದವರು. ಇದೇ ಮಾತನ್ನು ಇನ್ನೂ ಗಟ್ಟಿಯಾಗಿ ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ ಸಿ.ಷಾ ಅವರಿಗೂ ಹೇಳಬಹುದು.ಶಾನಭಾಗರು ಬರೀ ಪುಸ್ತಕ ವ್ಯಾಪಾರಿಯಾದರೆ, ಷಾ ಪುಸ್ತಕ ಪ್ರಕಾಶಕರೂ ಹೌದು.
ಭಾರತದಲ್ಲಿ ಪುಸ್ತಕಗಳಿಗಾಗಿ ಬಹುಮಹಡಿ ಮಾಲ್ ಕಟ್ಟಿದವರಾದರೂ ಇದ್ದರೆ ಅದು ಷಾ. ಇವರಷ್ಟು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ ಮತ್ತೊಬ್ಬ ಪ್ರಕಾಶಕರಿಲ್ಲ. ಇಲ್ಲಿ ತನಕ ಸಪ್ನಾ ಬುಕ್ ಹೌಸ್ ನಿಂದ ಆರುಸಾವಿರಕ್ಕೂ ಹೆಚ್ಚು ಪುಸ್ತಕಗಳು ಪ್ರಕಟ ವಾಗಿವೆ. ಒಂದು ವಿಶ್ವವಿದ್ಯಾಲಯ ಅಥವಾ ಸರಕಾರದ ಪ್ರಾಧಿಕಾರ ಮಾಡುವುದಕ್ಕಿಂತ ದೊಡ್ಡ ಕೆಲಸವನ್ನು ಸಪ್ನಾ ಮಾಡಿದೆ.ಗುಜರಾತಿನಿಂದ ಬಂದ ಒಬ್ಬ ಸಾಮಾನ್ಯ ರೈಲ್ವೆ ಕೂಲಿ, ಭಾಷೆ ಗೊತ್ತಿಲ್ಲದಿದ್ದರೂ, ತಾನು ನೆಲೆಸಿದ ಮಣ್ಣಿನ ಭಾಷೆಯ ಮೇಲಿನ ಪ್ರೀತಿ ಮತ್ತು ಗೌರವದಿಂದ ಅಕ್ಷರ ಹಂಚುವ ಕಾಯಕದಲ್ಲಿ ನಿರತರಾಗಿ, ಇಡೀ ಬದುಕನ್ನೇ ಪುಸ್ತಕಕ್ಕಾಗಿ ಸಮರ್ಪಿಸಿದ್ದು ಒಂದು ಸಾಹಸಗಾಥೆ.
ಒಂದು ಸಣ್ಣ ಗೂಡಂಗಡಿಯಿಂದ ಆರಂಭವಾದ ಸಪ್ನಾ ಸಂಸ್ಥೆ, ನಮ್ಮ ದೇಶದ ಪುಸ್ತಕ ಪ್ರಕಾಶನ ಮತ್ತು ಮಾರಾಟದಲ್ಲಿಅಗ್ರಪಂಕ್ತಿಯಲ್ಲಿದೆ. ಬೆಂಗಳೂರಲ್ಲದೇ, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗ, ಮಂಗಳೂರು, ಈರೋಡ್, ಕೊಯಮತ್ತೂರು ಸೇರಿದಂತೆ ಒಟ್ಟೂ ಹತ್ತೊಂಬತ್ತು ಮಾರಾಟ ಮಳಿಗೆಗಳನ್ನು ಹೊಂದಿದೆ. ಒಂದು ಸಾವಿರದ ಇನ್ನೂರಕ್ಕೂ ಹೆಚ್ಚು ಜನ ಸಿಬ್ಬಂದಿ ಯಿರುವ ಸಪ್ನಾ, ಇಂದು ಅಕ್ಷರ ಲೋಕದಲ್ಲಿ ಕ್ರಾಂತಿಯನ್ನೇ ಮಾಡಿದೆ.
ಕನ್ನಡ ಪುಸ್ತಕ ಪ್ರಿಯರಿಗೆ ಸಪ್ನಾ ಬುಕ್ ಹೌಸ್ ಅಚ್ಚುಮೆಚ್ಚಿನ ತಾಣ. ಬೆಂಗಳೂರಿನಲ್ಲಿ ನಿರುದ್ಯೋಗಿಯಾಗಿ ಅಲೆಯುತ್ತಿದ್ದದಿನಗಳಲ್ಲಿ ನನಗೆ ಓದಿನ ಆಶ್ರಯ ನೀಡಿದ್ದೂ ಸಪ್ನಾವೇ! ಲೇಖಕನಾಗಬೇಕೆಂಬ ನನ್ನ ಸಪ್ನವನ್ನು ನನಸು ಮಾಡಿದ್ದೂ ಈ ಸಂಸ್ಥೆಯೇ! ಇಪ್ಪತ್ನಾಲ್ಕು ವರ್ಷಗಳ ಹಿಂದೆಯೇ, ಲೇಖಕನಾಗಿ ಚೊಚ್ಚಲ ಪ್ರಯತ್ನದ, ಲಕ್ಷಕ್ಕಿಂತ ಅಧಿಕ ಗೌರವಧನ ಕೊಟ್ಟು, ಬರೆದು ಬದುಕಬಹುದೆಂಬ ಅದಮ್ಯ ವಿಶ್ವಾಸ ಮೂಡಿಸಿದ್ದೂ ಸಪ್ನಾವೇ !
ನನ್ನ ಹಾಗೆ ಅವೆಷ್ಟೋ ಅಕ್ಷರಗಳನ್ನು ನಂಬಿದವರ ಪಾಲಿಗೆ ಷಾ ಕಟ್ಟಿದ ಸಪ್ನಾ ಬುಕ್ ಹೌಸ್, ನಮ್ಮ ನಮ್ಮ ಬರಹದ ಬದುಕನ್ನು ಕಟ್ಟಿದ ಮನೆ (ಹೌಸ್) ಕೂಡ ಹೌದು. ಇಂದು ಸಪ್ನಾ ಬೆಂಗಳೂರಿನ ಒಂದು ಪ್ರಮುಖ ಹೆಗ್ಗುರುತು. ರಾಜ್ಯದ ಬೇರೆ ಬೇರೆ ಊರು ಗಳಿಂದ ಬರುವ ಪುಸ್ತಕ ಪ್ರೇಮಿಗಳು ಅಲ್ಲಿಗೆ ಹೋಗಲು ಮರೆಯುವುದಿಲ್ಲ. ಅದು ‘ಪುಸ್ತಕಹುಳು’ಗಳ ಕೂಡುತಾಣವೂ ಹೌದು. ಅಂದು ಸುರೇಶ ಷಾ ನೆಟ್ಟ ಬೀಜ, ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರವಾಗಿ ಇಡೀ ರಾಜ್ಯವನ್ನೇ ಆವರಿಸಿದೆ. ಅವರ ಮೂವರು ಗಂಡು ಮಕ್ಕಳಾದ ನಿತಿನ್, ದೀಪಕ್ ಮತ್ತು ಪರೇಶ್, ತಂದೆಯಿಂದ ಪ್ರೇರಿತರಾಗಿ, ಈ ಪುಸ್ತಕ ಕಾಯಕದ ತಮ್ಮನ್ನುತೊಡಗಿಸಿಕೊಂಡಿದ್ದಾರೆ.
ಸುರೇಶ ಷಾ ಕೊನೆಯ ತನಕವೂ ತಮ್ಮ ಮೂವರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳ ಜತೆಗೆ ಒಂದೇ ಮನೆಯಲ್ಲಿ ಕೂಡು, ತುಂಬು ಸಂಸಾರ ಮಾಡಿ, ಸಂತೃಪ್ತ ಮತ್ತು ಆದರ್ಶಮಯ ಜೀವನ ಸಾಗಿಸಿದವರು. ಮೊನ್ನೆ ಅವರು ನಿಧನರಾದಾಗ, ಅವರು ಕಟ್ಟಿದ ಪುಸ್ತಕ ಸೌಧ ಕಣ್ಮುಂದೆ ಬಂದು ನಿಂತಿತು. ಯಾರು ಸ್ಮರಿಸಲಿ, ಬಿಡಲಿ, ಇವರ ನೆನಪುಗಳನ್ನು ಅಕ್ಷರ (ಕ್ಷರ ಇಲ್ಲದ್ದು– ನಾಶಪಡಿಸಲು ಆಗದ್ದು) ಗಳಂತೆ ಯಾರೂ ನಾಶ ಮಾಡಲಾರರು.
ಓಂ ಶಾಂತಿ!