ಹಿಡಿಯುವವರೇ ಇಲ್ಲವೆಂದವನನ್ನು, ಇಂದು ಹೊರುವವರೇ ಇಲ್ಲ…
ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ನಾನು ಯಾವಾಗಲೂ ಹೆಚ್ಚು ನೆನಪಿಸಿಕೊಳ್ಳುವುದು, ಭಾಷಣಗಳಲ್ಲಿ ಹೇಳುವುದು, ಮತ್ತೆ ಮತ್ತೆ ನನಗೆ ಖಾತ್ರಿಯಾದ ಮಾತು ಗಳೆಂದರೆ ಭೈರಪ್ಪನವರು ಬರೆದ ‘ಪಾಪವು ಸಶಕ್ತವಾದಾಗ ಪ್ರಾಕೃತಿಕ ವಿಕೋಪಗಳಿಂದ ಜಗತ್ತನ್ನು ಶಿಕ್ಷಿಸುತ್ತದೆ’.
ಎರಡು ವರ್ಷಗಳಿಂದ ಕಾಡುತ್ತಿರುವ ಈ ಕರೋನಾ ರೋಗವನ್ನು ನೋಡುತ್ತಿದ್ದರೆ ಈ ಮಾತು ಅಕ್ಷರಶಃ ನಿಜವೆನಿಸುತ್ತದೆ. ಅದೆಷ್ಟು ಸ್ವೇಚ್ಛಾಚಾರಿಗಳಾಗಿದ್ದೆವು ನಾವೆಲ್ಲ ಅಲ್ಲವೇ? ಎಲ್ಲರೂ ಸತ್ತು ಹೋಗುತ್ತಾರೆ, ನಾವೊಂದೇ ಜೀವಂತವಾಗಿ ಉಳಿದು ಬಿಡುತ್ತೇವೆ ಎಂಬಂತೆ ಕಂಡದ್ದು ಖರೀದಿಸಿ, ಸಿಕ್ಕಿದ್ದು ಬಾಚಿಕೊಂಡು, ಮನಬಂದಂತೆ ಎಲ್ಲವನ್ನೂ ಮೆಟ್ಟಿ ಮೆರೆದು ಬಿಟ್ಟೆವು ಅಲ್ಲವೇ? ಬಡವರ ಗುಡಿಸಲುಗಳನ್ನು ಗುಡಿಸಿ ಒಗೆದು, ಒಳ್ಳೆಯವರ, ಸಾತ್ವಿಕರ ವಸತಿಗಳನ್ನೆಲ್ಲ ನೆಲಸಮ ಮಾಡಿ ಅಲ್ಲಿಯೇ ತಮ್ಮ ದಂತದ ಅರಮನೆಗಳನ್ನು ಕಟ್ಟಿಕೊಂಡವರು ಆ ಬಡಪಾಯಿಗಳ ಕಣ್ಣೆದುರೇ ಸಾಯುತ್ತಿದ್ದಾರೆ.
ಹುಡಿಹುಡಿಕ್ಯಾಡಿ ನೇಮ, ವ್ರತ, ಪೂಜೆ, ಹೋಮ – ಹವನ ಮಾಡುತ್ತಿದ್ದಾರೆ. ಇವೆಲ್ಲ ಈಗ ಯುದ್ಧಕಾಲೇ ಶಸ್ತ್ರಾಭ್ಯಾಸವಾಗುತ್ತಿದೆ ವಿನಃ ಬೇರಿಲ್ಲ. ಅನಾದಿ ಕಾಲದ ವ್ರತ, ನೇಮ, ಆಚರಣೆಗಳನ್ನು ಮಾರಾಟಕ್ಕಿಟ್ಟ ಪ್ರಶಸ್ತಿಗಳನ್ನು ಖರೀದಿಸಿದ ಲಜ್ಜೆಗೇಡಿ ಬುದ್ಧಿ ಜೀವಿಗಳ ಮಾತು ಕೇಳಿ ಲೇವಡಿ ಮಾಡಿ ನಕ್ಕು, ಈಗ ಮತ್ತೆ ಧರ್ಮ, ಶಾಸ್ತ್ರ, ಆಯುರ್ವೇದ, ಋಷಿಮುನಿಗಳು ಎಂದು ಬಾಯಿ ಬಾಯಿ ಬಿಡುತ್ತಿರುವ ನಮ್ಮ ಜನರನ್ನು ನೋಡುತ್ತಿದ್ದರೆ ಕನಿಕರ ಪಡಬೇಕೋ, ಮಾರಿ ಹಾಕಬೇಕೋ ತಿಳಿಯದಾಗಿದೆ.
ಎಲ್ಲದಕ್ಕೂ ಸೈನ್ಸ್, ವಿಜ್ಞಾನ, ಇನ್ವೆನ್ಷನ್ ಎಂದು ಒದರುತ್ತಾ, ಆಳಿದ ಬ್ರಿಟೀಷರಂತೆ ಆಗಲು ಹೋಗಿ ಬಿಕ್ಷುಕರಾಗಿಬಿಟ್ಟೆವು.ನಿಜವಾದ ಜ್ಞಾನ ಯಾವುದೆಂದು ತಿಳಿಯದೇ ಅಜ್ಞಾನಿಗಳಾಗಿ ಹೋದೆವು. ಭಾಗವತದ ಆರನೆಯ ಸ್ಕಂದದಲ್ಲಿ ಹರ್ಯಶ್ವರರಿಗೆ ನಾರದರು ಕೆಲವು ಪ್ರಶ್ನೆಗಳನ್ನು ಹಾಕಿ ಉತ್ತರ ಹೇಳುತ್ತಾರೆ, ಎಂಥ ಪ್ರಶ್ನೋತ್ತರ ಮಾಲಿಕೆ ಅದು, ತ್ರಿಕಾಲ ಸತ್ಯವಾದ ನಿಜವಾದ ಜ್ಞಾನ. ನಮ್ಮನ್ನು ಭವರೋಗ, ಭವಬಂಧನಗಳಿಂದ ಬಿಡಿಸುವ ಔಷಧಿಯಂಥ ಜ್ಞಾನ.
ಓದುತ್ತಾ ಮನನ ಮಾಡಬೇಕು, ಬರೀ ಮಾರ್ಕ್ಸ್, ರ‍್ಯಾಂಕ್ ಗಾಗಿ ಓದುವ ಓದಲ್ಲ ಇದು. ಇಂಥ ಓದು ನಮ್ಮನ್ನು ಇನ್ನೊಬ್ಬರ ಬಳಿ ನೌಕರಿ ಕೊಡಿಸುವಂಥದ್ದಲ್ಲ, ಜಗತ್ತೇ ನಿನ್ನ ಕಾಲಡಿ ನಿಲ್ಲುವಂಥದ್ದು.
ಪ್ರಶ್ನೆ-೧:ಭೂಮಿಯ ಕೊನೆ ಯಾವುದು?ಉತ್ತರ:-ಅನಾದಿ ಕಾಲದಿಂದ ಜೀವನಿಗೆ ಅಂಟಿಕೊಂಡ ಲಿಂಗ ಶರೀರ. ತತ್ತಿ ಒಡೆದು ಹಾಕಿ ಹಾರುವಂತೆ ಈ ಲಿಂಗ ಶರೀರ ಒಡೆಯಬೇಕು, ಜೀವಾತ್ಮನೆಂಬ ಪಕ್ಷಿ ಹೊರಹಾಕಬೇಕು, ಅದೇ ಕೊನೆ.
ಪ್ರಶ್ನೆ-೨:ಒಬ್ಬನೇ ಪುರುಷನ್ನುಳ್ಳ ರಾಜ್ಯ ಯಾವುದು?ಉತ್ತರ:-ಏಕಮೇವಾದ್ವಿತೀಯಂ ಬ್ರಹ್ಮಂ, ಜಗತ್ತಿನ ಜೀವರಾಶಿಗಳನ್ನೆಲ್ಲವನ್ನು ಸ್ವತಂತ್ರವಾದ ಒಂದು ಶಕ್ತಿ ರಕ್ಷಿಸುತ್ತಿದೆ. ಅದು ಮಾತ್ರ ಸ್ವತಂತ್ರ. ಉಳಿದವರೆಲ್ಲ ಅಸ್ವತಂತ್ರರು, ಈ ಜ್ಞಾನ ಬೇಕು.ಪ್ರಶ್ನೆ-೩:ಒಳ ಹೊಕ್ಕರೆ ಹೊರಬರಲಾರದ ಬಿಲ ಯಾವುದು?ಉತ್ತರ:-ಭಗವಂತನೆಂಬ ಬಿಲ, ಹೊರಬರಲಾರದ್ದು ಮೋಕ್ಷ.ಪ್ರಶ್ನೆ-೪:ವ್ಯಭಿಚಾರಿಣಿ ಸೀ ಯಾರು?ಉತ್ತರ:-ನಮ್ಮ ಬುದ್ಧಿ. ದಿನಕ್ಕೊಂದು ಕಡೆ ಚಲಿಸುವ ನಮ್ಮ ಬುದ್ಧಿಯೇ ವೇಶ್ಯಾಸ್ತ್ರೀ. ಆತ್ಮಹಿತಕ್ಕೆ ಬೇಕಾಗುವುದನ್ನುಎಂದೂ ಯೋಚಿಸದೇ ಉಳಿದ ಬೇರೆಲ್ಲದಕ್ಕೂ ತಲೆ ಕೆಡಿಸಿಕೊಳ್ಳುವ ಬುದ್ಧಿಯನ್ನೇ ಇಲ್ಲಿ ವೇಶ್ಯಾಸ್ತ್ರೀಗೆ ಹೋಲಿಸಲಾಗಿದೆ.
ಪ್ರಶ್ನೆ-೫:ಈ ವ್ಯಭಿಚಾರಿಣಿಯ ಗಂಡನಾರು?ಉತ್ತರ:-ಬುದ್ಧಿ ಎಂಬ ಈ ಹೆಣ್ಣಿನ ಗಂಡಂದಿರು ನಾವೇ. ಕಂಡ ಕಡೆ ಸುತ್ತುವ ಬುದ್ಧಿ ಎಂಬ ವೇಶ್ಯಾಸೀ ಕೈ ಹಿಡಿದು ತಿರುಗಿದರೆ ಭಗವಂತನೆಂಬ ಸುಪುತ್ರ ನಮ್ಮ ಹೃದಯದಲ್ಲಿ ಹುಟ್ಟುವುದಿಲ್ಲ.
ಪ್ರಶ್ನೆ-೬:ಎರಡೂ ಕಡೆ ಹರಿಯುವ ನದಿ ಯಾವುದು?
ಉತ್ತರ:-ನಮ್ಮ ಸಂಸಾರ. ಹುಟ್ಟು ಸಾವುಗಳೆಂಬ ತೆರೆಗಳು ನಮ್ಮನ್ನು ಎರಡೂ ಕಡೆ ಅಪ್ಪಳಿಸುತ್ತಾ ಜರ್ಜರಿತ ಮಾಡುತ್ತವೆ.ಯಾವ ನದಿಯಲ್ಲಿ ಹಾರಿದರೂ ನಾವು ಮತ್ತೆ ತಿರುಗಿ ಬರುವುದಿಲ್ಲ. ಆದರೆ, ಈ ಸಂಸಾರವೆಂಬ ನದಿಯು ನಮ್ಮನ್ನು ಇಲ್ಲೇ ತಿರುಗಿಸುತ್ತಲೇ ಇರುತ್ತದೆ.
ಪ್ರಶ್ನೆ-೭:ತೀಕ್ಷ್ಣವಾಗಿ ತಿರುಗುತ್ತಿರುವ ಚಕ್ರ ಯಾವುದು?ಉತ್ತರ:ಕಾಲಚಕ್ರ. ಇದರಲ್ಲಿ ತಿರುಗದೇ ಇರಬೇಕೆಂದರೆ ನಾವು ಪಾರಾಗಲು ಕಲಿಯಬೇಕು. ಧ್ಯಾನ, ಏಕಾಂತ, ಜನಸಂದಣಿ ಯಿಂದ ದೂರವಿದ್ದರೆ ಪಾರಾಗಲು ಸಾಧ್ಯ.
ಪ್ರಶ್ನೆ-೮:ಇಪ್ಪತ್ತೈದು ಅದ್ಭುತಗಳಿರುವ ಮನೆ ಯಾವುದು?ಉತ್ತರ:ಈ ಪ್ರಪಂಚವೇ ಆ ಮನೆ. ಮಹತತ್ವ, ಅಹಂಕಾರ ತತ್ವ, ಬುದ್ಧಿ, ಮನಸ್ಸು, ಪಂಚೇಂದ್ರಿಯಗಳು, ಪಂಚ ಕರ್ಮೇಂದ್ರೀಯ, ಪಂಚ ಜ್ಞಾನೆಂದ್ರೀಯ, ಪಂಚಭೂತಗಳು ಹಾಗೂ ಆ ಭಗವಂತ.
ಪ್ರಶ್ನೆ-೯:ವಿಚಿತ್ರ ಕಥೆ ಹೇಳುವ ಹಂಸಗಳು ಯಾವುವು?ಉತ್ತರ:ಭಾರತ, ಭಾಗವತ ಮುಂತಾದವುಗಳು ಭಗವಂತನ ಚರಿತ್ರೆ ಹೇಳುವ ಎಲ್ಲ ಗ್ರಂಥಗಳೂ ಹಂಸಗಳೇ. ಹಾಲು – ನೀರಿನ ವ್ಯತ್ಯಾಸ ತಿಳಿಸುವ ಇವು ಪರಮಾತ್ಮ – ಜೀವದ ಭೇದ ಜ್ಞಾನವನ್ನು ತಿಳಿಸುತ್ತಲೇ ಇವೆ.
ಪ್ರಶ್ನೆ-೧೦:ತಂದೆ ಎಂದರೆ ಯಾರು, ಆತನ ಆದೇಶವೇನು?ಉತ್ತರ:ತಂದೆ ಎಂದರೆ ಭಗವಂತ, ಆತನ ಆದೇಶಗಳೆಂದರೆ ಶಾಸ್ತ್ರಗಳು.
ಇಂಥವನ್ನೆಲ್ಲ ಶಾಲೆಗಳಲ್ಲೂ ಕಲಿಸದೇ, ಪಾಲಕರೂ ಹೇಳದೇ, ಬುದ್ಧಿ ಬಂದ ಮೇಲೆ ತಾವೂ ಓದದೇ ಒಣ ವಿಷಯಗಳನ್ನೇ ಓದಿ, ಪ್ರಕೃತಿಯನ್ನು ನಾಶ ಮಾಡಿ, ತಮ್ಮ ಕುತ್ತಿಗೆಗೆ ಈಗ ವಿಪತ್ತು ತಂದುಕೊಂಡಿರುವ ನಾವುಗಳು ಯಾವ ದೇವರಿಗೂ ಮೊರೆ ಹೋಗುವ ನೈತಿಕ ಶಕ್ತಿ ಕಳೆದುಕೊಂಡಿದ್ದೇವೆ. ಅಸಲಿಗೆ ನಮಗೆ ದೇವರ ಕಲ್ಪನೆಯೇ ಇಲ್ಲ. ಕಾಯಿ, ಕರ್ಪೂರ, ಹರಕೆ, ತಲೆಗೂದಲು ಕೊಟ್ಟರೆಒಲಿಯುವ ದೇವರುಗಳಾವವೂ ಇಲ್ಲ.
ಯಾವ ಗುರುವೂ, ಶಾಸ್ತ್ರವೂ, ಪುರಾಣಗಳೂ ದೇವರನ್ನು ತೋರಲಾರವು. ಅಂದರೆ ಪಾಮರರ ಗತಿಯೇನು? ಎಂಬ ಪ್ರಶ್ನೆ ಏಳುತ್ತದೆ. ಪಂಡಿತ, ಪಾಮರ ಇವೆಲ್ಲವುಗಳೂ ಜ್ಞಾನದ ಮುಂದೆ ಒಂದೇ. ಅಂದರೆ ಪ್ರತಿಯೊಬ್ಬನೂ ತನ್ನದೇ  ಪರಿಶುದ್ಧತೆಗೊಂಡ ಒಳದೃಷ್ಟಿಯಿಂದ ಭಗವಂತನನ್ನು ತನ್ನ ಅಂತರಾತ್ಮನನ್ನಾಗಿ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ನಮ್ಮ ಜ್ಞಾನಕ್ಕೆ ಇರುವ ಮೂಲ ಒಂದೇ ಒಂದು ನಮ್ಮ ಪ್ರತ್ಯಕ್ಷ ಅನುಭವ.
ಪರಮಹಂಸ ಯೋಗಾನಂದರ ಯೋಗಿಯ ಆತ್ಮಕತೆ ಪುಸ್ತಕದಲ್ಲಿ ತುಂಬಾ ಉತ್ತಮರ ಕೆಲವು ಉತ್ತಮ ಮಾತುಗಳಿವೆ. ದೇವರನ್ನು ನೀವು ನಿಮ್ಮ ಬೇಸಿಗೆಯ ಅತಿಥಿಯನ್ನಾಗಿ ಆಹ್ವಾನಿಸದಿದ್ದರೆ, ನಿಮ್ಮ ಬಾಳಿನ ಚಳಿಗಾಲದಲ್ಲಿ ಅಂದರೆ ನೀವು ನಡುಗುವಾಗ ಅವನು ಬರುವುದಿಲ್ಲ. ಸತ್ಯವಾಗಲಿ, ದೇವರ ಅಸ್ತಿತ್ವವನ್ನಾಗಲಿ ಅರಿಯಬೇಕಾದರೆ ಮೌನ, ಧ್ಯಾನದಿಂದ ಮಾತ್ರ ಸಾಧ್ಯ.
ಬೂಸ್ಟು ಹಿಡಿದ ಪುಸ್ತಕಗಳಿಂದಲ್ಲ. ಚಂದ್ರನನ್ನು ಕಾಣಬೇಕಾದರೆ ಆಕಾಶದಲ್ಲಿ ನೋಡು, ಕೆಳಗೆ ನಿಂತ ಕೊಳದ ನೀರಿನಲ್ಲಲ್ಲ. ಜಾನ್ ರಸ್ಕಿನ್ ಹೇಳುವ ಮಾತು “ಯಾರು ದೇವರಿಗೆ ಎರಡನೆಯ ಸ್ಥಾನವನ್ನು ಕೊಡುವನೋ ಅವನು ದೇವರಿಗೆ ಏನೊಂದು ಸ್ಥಾನವನ್ನೂ ಕೊಟ್ಟಂತಲ್ಲ” ಎಂಥ ಮಾತು!
ಆದರೆ, ನಾವು ಪಹಲೇ ಪೇಟೋಬಾ ನಂತರ ವಿಠೋಬಾ’ ಮೊದಲು ಹೊಟ್ಟೆಗೆ ತಿನ್ನು, ನಂತರ ದೇವರು, ಧರ್ಮ, ನೀತಿ ಇಲ್ಲ ಎಂದಲ್ಲವೇ. ಇದರ ಪರಿಣಾಮವೇ ಇಂದು ಈ ದುರ್ಗತಿ. ಜೀವಂತವಿದ್ದಾಗ ನನ್ನನ್ನು ಹಿಡಿಯುವವರೇ ಇಲ್ಲ ಎಂದು ಮೆರೆದವನು ಇಂದು ಹೆಣವಾದಾಗ ಹೊರುವವರೇ ಇಲ್ಲದವನಾಗುತ್ತಿರುವುದು ಕಣ್ಣೆದುರಿಗೇ ಕಾಣುತ್ತಿದೆ.
ಡೊಸ್ಟೋಯೆ ವಸ್ಕಿ ಹೇಳುವ ಈ ಮಾತು ಓದಿ “ಯಾವುದಕ್ಕೂ ತಲೆಬಾಗದೇ ಇರುವವನು ತನ್ನ ಭಾರವನ್ನೇ ತಾನು ಎಂದೂಹೊರಲಾರನು” ಎಷ್ಟು ನಿಜವಲ್ಲವೇ? ಸೂರ್ಯನಂಥವನೇ ಆಗಸದಲ್ಲಿ ತಾನೊಬ್ಬನೇ ಇರಬೇಕೆಂಬ ಹೋರಾಟ ನಡೆಸದೇ ಗೊತ್ತಾದ ಸಂಜೆಯ ವೇಳೆಗೆ ಮರೆಯಾಗಿ ಚಿಕ್ಕ ಚಿಕ್ಕ ನಕ್ಷತ್ರಗಳ ವೈಭವಕ್ಕೆ ಆಸ್ಪದ ಮಾಡಿಕೊಡುತ್ತಾನೆ ಅಲ್ಲವೇ? ಆದರೆ, ಹುಲು ಮಾನವರಾದ ನಾವು ಸದಾ ನಾವೇ ಮೆರೆಯಬೇಕೆಂದು (ಚೀನಾ, ಪಾಕಿಸ್ತಾನ) ಇತರರ ಮೇಲೆ ಮುಷ್ಟಿಕಟ್ಟಿ ನಿಲ್ಲುವುದರಿಂದೇನುಉಪಯೋಗ. ಶಾಂತಿ ಉದಯಿಸುವುದು ಕ್ರೌರ್ಯದಿಂದಲ್ಲ, ಸಹೃದಯವೇ ವಿಶ್ವದ ಶಕ್ತಿಯನ್ನು ಬಲಪಡಿಸುವುದು.
ಮನುಕುಲದ ಶಾಂತಿ ಅನಂತ ಸ್ವಾದ ಫಲ ಕೊಡುತ್ತದೆ. ರಕ್ತ ಸಿಕ್ತ ನೆಲದ ಫಲಗಳು ವಿಷವಾಗುತ್ತವೆ. ನಾವು ಎತ್ತರವಾಗಿ ಕಾಣಲು ಇತರರ ತಲೆ ಕಡಿದರೆ, ನಿನ್ನ ಎತ್ತರವನ್ನು ನೋಡುವರಾರು? ಈಗ ಭಾರತದಲ್ಲಿ ನಡೆದಿರುವುದು ಇದೇ ಆಗಿದೆ.
ಕರೋನಾದ ಹೆಸರಿನಲ್ಲಿ ಪ್ರಪಂಚಕ್ಕೂ ಹಬ್ಬಿದೆ. ತಾನೊಂದೇ, ತನ್ನ ದೇಶದ ಜನರೊಂದೇ ಉಳಿಯಬೇಕು. ತಾನೇ ವೈಜ್ಞಾನಿಕಪ್ರಗತಿ ಕಂಡವ ಎಂದೆಲ್ಲ ತೋರಿಸಿಕೊಳ್ಳಲು ಹೋಗಿರುವ ಅನೇಕರು ಇಡೀ ಮನುಕುಲಕ್ಕೆ ಮಾರಕವಾಗಿ ಬಿಟ್ಟರು. ಹಚ್ಚಿದ ಬೆಂಕಿ ಮೊದಲು ಸುಡುವುದು ತಾನಿರುವ ನೆಲವನ್ನೇ ಅಲ್ಲವೇ? ಆಳುವವರು ರಾಜಿನಾಮೆ ಕೊಟ್ಟರೆ ಎಲ್ಲ ಸರಿಯಾಗುತ್ತದೆ ಎಂಬ ಕೆಲವರ ಕೂಗು, ಕೇವಲ ತೋರಿಕೆಗೆ ಇಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಯಾರೂ ಏನೂ ಮಾಡುವಂತಿಲ್ಲ.
ಯೋಗಿಯ ಆತ್ಮಕಥೆಯಲ್ಲಿ ಬರುವ ಈ ಮಾತುಗಳು ಮನನೀಯ, ವಿಚಾರ ಪ್ರಚೋದಕ. “ಕಪ್ಪೆ ನೀರ ಮೇಲೆ ತೇಲುತ್ತದೆ, ಕಾಗೆ, ಹದ್ದುಗಳು ಮೇಲೆ ಹಾರಾಡುತ್ತವೆ, ದೆವ್ವ ಏಕಕಾಲದಲ್ಲಿ ಎರಡು ಮೂರು ಕಡೆ ಕಾಣಿಸಿಕೊಳ್ಳುತ್ತದೆ. ಇವು ಯಾವು ಪವಾಡಗಳಲ್ಲ. ತನ್ನ ಸಹಚರರೊಡನೆ ಧರ್ಮನಿರತನಾಗಿರುವವನೇ ನಿಜವಾದ ಮನುಷ್ಯ. ಅವನು ಕೊಳ್ಳುವ, ಮಾರುವ ಕೆಲಸದಲ್ಲಿತೊಡಗಿದ್ದರೂ ದೇವರನ್ನು ಮರೆಯುವುದಿಲ್ಲ. ಅಗಾಧ ವಾದದ್ದನ್ನು ಋಷಿಗಳು ಒಂದೇ ವಾಕ್ಯದಲ್ಲಿ ಬರೆದರೆ ಅದರ ಮೇಲೆ ಭಾಷ್ಯ, ಟೀಕೆ, ಟಿಪ್ಪಣಿ ಬರೆಯುವ ಪಂಡಿತರು ತಲೆತಲಾಂತರದವರೆಗೂ ನಿರತರಾಗಿರುತ್ತಾರೆ.
ಅಂತ್ಯವಿಲ್ಲದ ಸಾಹಿತ್ಯಿಕ ವಿವಾದ, ಮೈಗಳ್ಳ ಮನಸ್ಸಿನವರಿಗಷ್ಟೇ. ಪ್ರಜ್ಞಾ ಪ್ರಾಧಾನ್ಯವಾದಿಗೆ ವಿದ್ವತ್ತಿನ ಆಡಂಬರವಿಲ್ಲದೇ ‘ದೇವರು ಅಪರೂಪನೇ, ಏಕೆಂದರೆ ಇಂಥ ವಿದ್ವತನ್ನು ಪಡೆದವನು ತಾನು ಎಂಬ ಅಹಂಕಾರಕ್ಕೆ ತೃಪ್ತಿಪಟ್ಟುಕೊಳ್ಳುವ ಅವನು ದೇವರನ್ನು  ಕಾಣುವುದೇ ಇಲ್ಲ.’ ಒಂದು ಕೊನೆಯ ಮಾತು. ‘ನಿನ್ನ ತಲೆಯಲ್ಲಿರುವ ಸ್ವಾರ್ಥದ ಬಯಕೆಗಳನ್ನು ತೆಗೆದುಪಕ್ಕಕ್ಕಿಡುವುದು, ನಿನ್ನ ಕೈಯಲ್ಲಿರುವುದನ್ನು ಸ್ವೇಚ್ಛೆಯಾಗಿ ದಾನ ಮಾಡುವುದು ಮತ್ತು ಕಷ್ಟಗಳ ಹೊಡೆತಕ್ಕೆ ಎಂದೂಅಳುಕದಿರುವುದು.’
ಬಾಳಿನ ನಿಜವಾದ ಅರ್ಥವೇನೆಂದು ತಿಳಿದುಕೊಳ್ಳುವಂತೆ ಮಾಡಲು ದೇವರ ಅಥವಾ ಕರ್ಮದ ಕೈಯಲ್ಲಿರುವ ದೂಡುಕೋಲು ಅಥವಾ ಚಾವಟಿಯೇ ಈ ದುಃಖ, ಈ ಹಸಿವು, ಇಂಥ ರೋಗಗಳು, ಸಹಿಸದಲ್ಲದೇ ಮುಗಿಯದಾವ ದೆಸೆ ಬಂದೊಡಂ|ಸಹನೆ ವಜ್ರದ ಕವಚ ಮಂಕುತಿಮ್ಮ|| ಎಂಬ ಡಿ.ವಿ.ಜಿಯವರ ನುಡಿ, ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಎಂಬನುಡಿಗಳೇ ಸಾಕ್ಷಿ.